ಸ್ಮರಣೆಯೊಂದೇ ಸಾಲದು

5

ಮುದ್ದು ಮುಖದ ಪೆದ್ದುಗೌರಿ
ಸದ್ದಿಲ್ಲದೆ ಎದ್ದು ಹೋದ ದಿನಗಳನೆನೆಸಿ
ಸದ್ದಿಲ್ಲದೆ ಅಳುತ್ತಿತ್ತು ಹೃದಯ
ಅವಳ ಪರಿಶುದ್ಧ ನಿಷ್ಕಲ್ಮಷ ಮನಸ ನೆನೆದು ||

ಅವಳು ದಣಿದ ದಿನಗಳಿಗೆ ಲೆಕ್ಕವಿಲ್ಲ
ದುಡಿದ ಕೈಗಳಿಗೆ ಸಂಬಳವಿಲ್ಲ
ಕಟ್ಟಿದ ಕನಸುಗಳು ನನಸಾಗಲಿಲ್ಲ
ಮೂರು ದಿನದ ಸಂತೆಯ ಬದುಕೂ ದಕ್ಕಲಿಲ್ಲ ||

ಬಿಕ್ಕಳಿಕೆ ಬಾಯ್ಬಿಡಲಿಲ್ಲ
ಸೊಕ್ಕು ಸಂಪನ್ನತೆ ಮೆರೆಯಿತಲ್ಲ
ಪ್ರೀತಿ - ಮಮತೆಯ ಕಡಲು ಅವಳು
ಹೃದಯ ವೈಶಾಲ್ಯತೆ ಮೆರೆದವಳು ||

ದುಃಖದಲ್ಲೂ ನಕ್ಕವಳಾಕೆ
ಸೆಟೆಯ ಬದುಕು ಅಟ್ಟಿದಾಕೆ
ದಿಟ್ಟ ನಡೆಯನಿಟ್ಟಾಕೆ
ಮೌನದಾಭರಣ ತೊಟ್ಟಾಕೆ ||

ಪದ ಸಾಲದ ವ್ಯಕ್ತಿತ್ವದವಳು
ಚಲುವ ಖನಿಯ ಸಾಲಿನವಳು
ಪ್ರೇಮ ದಾನ ಹಂಚಿದವಳು
ಪ್ರೀತಿ ಸಾಲ ಸಂಚಿನವಳು ||

ಬರಡಾಯಿತು ಜೀವ ಅವಳ ನೆನೆದು
ಕುರುಡಾಯಿತು ಮನಸು ನೆನಪ ಕೆದಕಿ
ಮತ್ತೆ ಜೀವ ತಳೆವ ಕನಸೋಳ್
ಅಡಿಯಿಡುತಿದೆ ಜೀವ ಬೆಳಕನರಸಿ ||

ಸ್ಮರಣೆಯೊಂದೇ ಸಾಲದು ಅವಳ ಘನತೆ ಮೆರೆಯಲು
ಪದಗಳೆಷ್ಟೂ ಸಾಲವು ಅವಳ ಬದುಕ ಹೊಗಳಲು
ಯಾವ ಪೂಜೆಯೂ ಸರಿಬಾರದು ಅವಳ ನಿತ್ಯ ಜಪಿಸಲು
ಮರುಜನ್ಮವೊಂದೇ ದಾರಿಯು ಅವಳ ಮತ್ತೆ ಪಡೆಯಲು ||
– ವೀರೇಶ.ಅ.ಲಕ್ಷಾಣಿ, ಬೆಟಗೇರಿ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.