ಸುದ್ದಿ ಮುಟ್ಟಿ ಮನ ಸೂತಕ...

4.5

ಏನೊ ಸಾಮಾನು ತರಲು ಹೊರ ಹೊರಟವನಿಗೆ ಪೋನಿನಿಂದ ಬಂತು ಸುದ್ದಿ ಒಡೆಯರು ಕಾಲವಶರಾದರೆಂದು. ರಾಜ ಮನೆತನದ ಪರಂಪರೆಯ ಜತೆ ನಮ್ಮ ಜನತೆಗಿದ್ದ ಕೊಂಡಿಯೆಂಬ ಗೌರವದ ಜತೆಗೆ, ಮೈಸೂರಿನವರಿಗೆ ಪರಂಪರೆಯ ಒಂದು ಭಾಗವಾಗಿಹ ಈ ಮನೆತನದ ಕುರಿತು ಪೂಜ್ಯತೆ ಬೆರೆತ ಭಕ್ತಿಭಾವ. ಆ ವಾತಾವರಣದಲ್ಲೆ ಬೆಳೆದ ನಮಗೆ ಮೈಸೂರು ಅರಮನೆ ಚಾಮುಂಡಿ ಬೆಟ್ಟದಷ್ಟೆ ಮಹತ್ವದ್ದು. ಬೆಟ್ಟವಾದರೊ ನೈಸರ್ಗಿಕ ನಿರ್ಮಿತ; ಅದರಷ್ಟೆ ಮಹತ್ವ, ನಂಟು, ಗೌರವ ಈ ಮಾನವ ನಿರ್ಮಿತ ಅರಮನೆಯ ಹಿನ್ನಲೆಗೆ. ಹೆಬ್ಬಾಗಿಲ ಮುಂದಿನಿಂದ ದಾಟಿ ಅರಮನೆಯ ಮುಂದಿನಿಂದಲೆ ದರ್ಬಾರಿನ ವೇದಿಕೆಯತ್ತ ಕಣ್ಣು ಹಾಯಿಸಿ, ದೇಗುಲಗಳನ್ನು ದಾಟಿ ಮತ್ತೊಂದು ಹೆಬ್ಬಾಗಿಲ ಮೂಲಕ ಹೊರಬರುತ್ತಿದ್ದ ದಿನ ನಿತ್ಯದ ಕಾರ್ಯ ನಮ್ಮ ಬಾಲ್ಯದ ಹಸಿರು ನೆನಪುಗಳಲ್ಲೊಂದು. ಆಗೆಲ್ಲ ಅಲ್ಲಿ ಇಣುಕುತ್ತಿದ್ದ ಭಾವ ಒಳಗೇನಿದೆಯೆಂಬ ವಿಸ್ಮಯ, ನಾವೂ ರಾಜರ ಕಾಲದಲ್ಲಿದ್ದೇವೆಂಬ ಹೆಮ್ಮೆ. ಆಧುನಿಕತೆಯ ಹೊನಲಿನಲ್ಲಿ ಸಾರಾಸಗಟಾಗಿ ಕೊಚ್ಚಿ ಹೋಗದಂತೆ ಹಳತಿನ ನಂಟಿಗೆ ಗಂಟು ಹಾಕಿದ್ದು ಬಹುಶಃ ಈ ಪರಂಪರೆಯ ತುಣುಕುಗಳ ಪ್ರಭಾವದಿಂದಲೆ ಇರಬೇಕು. 
.
ಹೀಗಾಗಿ ಸುದ್ದಿ ಕೇಳುತ್ತಲೆ ಮನಕೇನೊ ಸೂತಕ ತಟ್ಟಿದ ಭಾವನೆ. ಅದರಲ್ಲೂ ಮೈಸೂರಿನ ಹೆಸರಿಗೆ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಪರಂಪರಾನುಗತ ಹಿನ್ನಲೆಯಲಿ ತಳುಕು ಹಾಕಿಕೊಂಡ ಯದುವಂಶದ ಈ ಕೊಂಡಿ, ಕೊಟ್ಟ ಕೊನೆಯದೆಂಬ ಪಿಚ್ಚನೆಯ ಭಾವವು ಸೇರಿ ಮನವೆಲ್ಲ ಕಲಸಿದಂತೆ ಆಗಿಹೋಯ್ತು. ಬಹುಶಃ ಈ ಭಾವನೆಯ ತುಣುಕು ಇತರರಿಗಿಂತ, ಮೈಸೂರಿನವರಿಗೆ ಹೆಚ್ಚು ಭಾಧಿಸಬಹುದು - ಈ ಪರಂಪರೆಯ ಜತೆಯಿರುವ ಭಾವನಾತ್ಮಕ ಸಂಬಂಧದಿಂದಾಗಿ. 
.
ಆ ಗಳಿಗೆಯಲಿ ಮೂಡಿದ ಕೆಲ ಸಾಲುಗಳು ಕೊನೆಯ ನಮನದ ನೆನಪಾಗಿ, ಗೌರವಾರ್ಪಣೆಯ ತುಣುಕಾಗಿ, ಶ್ರದ್ದಾಂಜಲಿಯ ಕುರುಹಾಗಿ : ಈ "ಕಳಚಿದ ಕೊಂಡಿ"ಯ ರೂಪದಲ್ಲಿ.
.
ಕಳಚಿದ ಕೊಂಡಿ
__________________________
.
ಮುಗಿದು ಬಂತೇನು ಇತಿಹಾಸ
ಒಡೆಯರಾಗಿ ಮೈಸೂರ ಅರಸ
ಸಂತತಿ ಸತತ ಸಂತಾನ ರಹಿತ
ಸಾಲು ಸಾಲಾಗಿ ಆಳಿದ ಮೊತ್ತ ||
.
ಅಳಿದ ರಾಜ್ಯ ಸಾಮ್ರಾಜ್ಯ ರಾಜ 
ಚರಿತ್ರೇ ಪುರಾಣ ತುಂಬಿ ಸಹಜ 
ಉಳಿದ ಬೆರಳೆಣಿಕೆಯ ಬೊಗಸೆ
ಮಾಯವಾಗಿ ಆರಿ ನೀರಿನ ಪಸೆ ||
.
ಕಳಚೆ ಕೊಂಡಿ ಮನ ವ್ಯಾಕುಲ
ರಾಜ ಮನೆತನಗಳಿಗೆ ಅಕಾಲ
ರಾಜ್ಯವಾಳುವ ವೈಭವಕೆ ಗರ
ನೆನಪಿಸಿ ಕಾಡೊ ಹಬ್ಬ ದಸರ ||
.
ಸಂತಾನ ರಹಿತ ಮನ ಸಂತ
ಸಾಂತ್ವನ ಬಯಸಿ ಜನರಹಿತ
ಕೊಡುಗೆ ಬೆಡಗೆ ಊರಿಗೆ ಕೊಡೆ
ಅರಸತ್ವ ಗೌರವ ನಾರಿಗೆ ಜಡೆ ||
.
ಕೇಳಲಿಲ್ಲ ಅರಸೊತ್ತಿಗೆ ಗೌರವ
ರಾಜರಿಲ್ಲದ ಕಾಲದಲು ಭಾವ
ಜನ ಮನ ಪೂಜ್ಯತೆ ಕಟ್ಟಿದ ಪಟ್ಟ
ಅಸ್ತಂಗತ ಕಳುವಾಯ್ತೇನೊ ದಟ್ಟ ||
.
ಪ್ರಭುತ್ವ ಬದಲಾಗಿ ಜನ ಪ್ರಭುತ್ವ
ಪರಂಪರೆಯ ಮನಕಿಲ್ಲಾ ಮಹತ್ವ
ಮುಕುಟವಿರಲಿಬಿಡಲಿ ಸಿಂಹಾಸನ
ಅರಮನೆಯಲಿಟ್ಟೆ ಮೌನಾರಾಧನ ||
.
ಅಳಿದರು ಕಾಯ ಭೌತಿಕ ಮಾಯ
ಬೆಳಗುವದೆ ಉಜ್ವಲ ಅರಮನೆಯ
ಹಗಲಿರುಳ ಪ್ರಖರ ಬೆಳಕ ಕೋಲ
ಚಾಮುಂಡಿಯ ಜತೆಗೆ ಕಾಲ ಕಾಲ ||
.
ಗತ ಇತಿಹಾಸ ಪುಟಕೆ ಸೇರಿದರು
ಇತಿಹಾಸವೆ ತಾವಾಗಿ ಹೋದರು
ಜನಸಾಮಾನ್ಯರ ಮನದಲದೆ ಶಕ್ತಿ
ಇಹಬಿಟ್ಟರು ದೇವರಾಗಿಸುವ ಭಕ್ತಿ ||
.
ಚಿತ್ರಪಟಗಳಲಿನ್ನು ರಾರಾಜಿಸಲಿದೆ
ರಾಜ ಮನೆತನದ ಕೊಂಡಿಯ ಜತೆ
ಹಳೆ ಪೀಳಿಗೆಗೆ ಹೇಳಲೊಂದು ಕಥೆ
ಹೊಸ ಪೀಳಿಗೆಗೆ ಅಚ್ಚರಿ ದಂತಕಥೆ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಾಗೇಶ ಮೈಸೂರು ರವರಿಗೆ ವಂದನೆಗಳು
' ಸುದ್ದಿ ಮುಟ್ಟಿ ಮನ ಸೂತಕ ' ಬರಹ ಮತ್ತು ಕವನ ಓದಿ ಮನ ಮುದುಡಿತು, ಯಾವಲೋ ಒಮ್ಮೆ ಮೈಸೂರು ನೋಡಿದ ನಮಗೆ ಅವರ ಸಾವು ವಿಷಾದ ಉಂಟು ಮಾಡಿದರೆ, ಅದೇ ಮೈಸೂರಲ್ಲಿ ಹುಟ್ಟಿ ಬೆಳೆದು ದಿನ ನಿತ್ಯ ಆ ವಾತಾವರಣದಲ್ಲಿ ಜೀವಿಸಿದ ನಿಮ್ಮ ಮನದ ವ್ಯಾಕುಲತೆ ಮನ ತಟ್ಟಿತು, ಆದರೆ ಏನು ಮಾಡುವುದು? ಸಾವು ಯಾವಾಗ ಯಾರಿಗೆ ಎಲ್ಲಿ ಹೇಗೆ ಬಂದೆರಗುತ್ತದೆ ಎನ್ನುವುದು ನಮ್ಮ ಊಹೆಗೆ ನಿಲುಕದ್ದು, ಗತಿಸಿದ ಒಡೆಯರರ ಕುರಿತು ನೀವು, ಪಾರ್ಥಸಾರಥಿಗಳು, ಲಕ್ಷ್ಮೀಕಾಂತ ಇಟ್ನಾಳರು ಮತ್ತು ರವೀಂದ್ರ ಎನ್ ಅಂಗಡಿಯವರು ಬರೆದ ಕವನ ಮತ್ತು ಲೇಖನಗಳು ಮನ ಮುಟ್ಟುವಂತಗಿವೆ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರಿಗೆ ನಮಸ್ಕಾರ. ತಮ್ಮ ಹಿರಿತನದ ಅನುಭವದ ಮಾತು ಸತ್ಯ. ಸಾವಿನ ಗೊನೆಗೆ ಅರಮನೆಯೂ ಒಂದೆ, ನೆರೆಮನೆಯೂ ಒಂದೆ. ಹೀಗಾಗಿ ಬಂದದ್ದನ್ನು ಸ್ವೀಕರಿಸುವ, ಎದುರಿಸುವ ಸ್ಥೈರ್ಯ ಆ ಕುಟುಂಬಕ್ಕಿರಲಿ ಎಂದು ಆಶಿಸೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.