ಸಿಟ್ಟು ಮತ್ತು ವಿವೇಕ

5

ಸಿಟ್ಟು ಮತ್ತು ವಿವೇಕ

ಸಿಟ್ಟು ಯಾರಿಗೆ ಬರುವುದಿಲ್ಲ ಹೇಳಿ! ಸಿಟ್ಟು ಬಂದರೆ ಮುಗಿಯಿತು, ಆ ಸಮಯದಲ್ಲಿ ಏನು ಮಾಡುತ್ತಾರೆಂಬುದೇ ಕೆಲವರಿಗೆ ತಿಳಿಯುವುದಿಲ್ಲ. ಒಂದು ನಿಮಿಷದ ಸಿಟ್ಟಿಗೆ ಆಹುತಿಯಾಗಿ, ಅದರಿಂದಾಗುವ ಪರಿಣಾಮದಿಂದ ಹಲವಾರು ತೊಂದರೆಗಳಿಗೆ ಈಡಾಗುತ್ತಾರೆ, ನಂತರ ಪಶ್ಯಾತ್ತಾಪ ಪಡುತ್ತಾರೆ. ಆದರೇನು ಅಷ್ಟು ಹೊತ್ತಿಗೆ ಆಗಬಾರದ ಅನಾಹುತ ಆಗಿಹೋಗಿರುತ್ತದೆ. ಈ ಸಿಟ್ಟು ಒಳ್ಳೆಯದಲ್ಲ, ಇದರಿಂದ ಆಗುವಂತಹ ವಿಪರೀತ ಪರಿಣಾಮದ ಬಗ್ಗೆಯೂ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ತಟ್ಟನೆ ಬರುವ ಸಿಟ್ಟನ್ನು ತಡೆಯುವ ಬಗೆ ಹೇಗೆ? ಎನ್ನುವುದನ್ನು ಅರಿಯದೇ, ಒಂದು ಪಕ್ಷ ಅರಿತರೂ, ಅದನ್ನು ಆ ಸಮಯದಲ್ಲಿ ಮಾಡಲು ತಿಳಿಯದೇ ತೊಂದರೆಯನ್ನು ಮೈ ಮೇಲೆ ಹಾಕಿಕೊಳ್ಳುತ್ತಾರೆ. ಈ ಸಿಟ್ಟಿನಿಂದ ಆಗುವ ಅನಾಹುತದ ಕಾರಣ ಮತ್ತು ಪರಿಣಾಮಗಳ ಬಗ್ಗೆ ಬೇಸತ್ತು, ಒಬ್ಬ ಭಕ್ತರು, ಈ ಸಿಟ್ಟಿನಿಂದ ಮುಕ್ತಿ ಪಡೆಯುವ ಒಂದು ಪರಿಹಾರ ಮತ್ತು ಉಪಾಯವನ್ನು ಕೋರಿಕೊಂಡು ಒಬ್ಬ ಸಂತನಲ್ಲಿ ಹೋದರು. ಅವರಲ್ಲಿ ವಿಷದವಾಗಿ ತಮಗೆ ಶೀಘ್ರವಾಗಿ ಬರುತ್ತಿರುವ ಸಿಟ್ಟು, ಅದರಿಂದಾಗುವ ಪರಿಣಾಮ ಇವುಗಳ ಬಗ್ಗೆ ವಿಸ್ತಾರವಾಗಿ ತಿಳಿಸುತ್ತಾ, ತನಗೊಂದು ಪರಿಹಾರ ಸೂಚಿಸಬೇಕೆಂದು ವಿನಂತಿಸಿಕೊಂಡರು. ಸಮಾಧಾನವಾಗಿ ಆಲಿಸಿದ ನಂತರ ನಸುನಗುತ್ತಾ ಭಕ್ತರ ಕಡೆಗೆ ನೋಡುತ್ತಾ, ತಮ್ಮ ಇನ್ನೊಂದು ಕೊಣೆಯ ಕಡೆಗೆ ನಡೆದರು. ಒಂದೈದು ನಿಮಿಷಗಳು ಕಳೆದ ನಂತರ ಈಚೆಗೆ ಬಂದ ಸಂತರು, ತಮ್ಮೊಂದಿಗೆ ಬಂದು ಅಗಲವಾದ ಭಾರವಾದ ಹಲಗೆ, ಒಂದು ಸುತ್ತಿಗೆ ಮತ್ತು ಒಂದು ಚಿಕ್ಕ ಚೀಲದ ಭರ್ತಿ ಮೊಳೆಯನ್ನು ತಂದು ಆ ಭಕ್ತರ ಮುಂದೆ ಇಟ್ಟರು. ಭಕ್ತರಿಗೆ ಏನೂ ಅರ್ಥವಾಗಲಿಲ್ಲ. ಪರಿಸ್ಥಿಯನ್ನು ಅರ್ಥಮಾಡಿಕೊಂಡ ಸಂತರು ತಾವೇ ಮಾತಿಗೆ ಪ್ರಾರಂಭ ಮಾಡಿದರು. "ಸಿಟ್ಟು ಒಂದು ಸಾಧಾರಣವಾದ ಕ್ರಿಯೆ. ಇದು ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಕೆಲವರಲ್ಲಿ ಸಿಟ್ಟು ನಿಯಂತ್ರಣದಲ್ಲಿರುತ್ತದೆ, ಮತ್ತೆ ಕೆಲವರಲ್ಲಿ ಸಿಟ್ಟಿನ ನಿಯಂತ್ರಣದಲ್ಲಿ ಅವರಿರುತ್ತಾರೆ. ಯಾರಿಗೆ ನಿಯಂತ್ರಣದಲ್ಲಿ ಸಿಟ್ಟು ಇರುತ್ತದೋ, ಅವರಿಗೆ ಸಿಟ್ಟು ಹೆಚ್ಚು ತೊಂದರೆ ಕೊಡುವುದಿಲ್ಲ. ಆದರೆ, ಎರಡನೇ ವರ್ಗದವರಿಗೆ ತೊಂದರೆ ಜಾಸ್ತಿ . ಈ ವರ್ಗಕ್ಕೆ ನೀವು ಸೇರುತ್ತೀರಿ. ನಿಮಗಾಗಿ ಈ ಉಪಕರಣ. ನಿಮಗೆ, ನಿಜವಾಗಿ ಸಿಟ್ಟು ನಿಯಂತ್ರಣಕ್ಕೆ ತಂದು ಕೊಳ್ಳಬೇಕೆಂದು ಆಶಯ ಇದ್ದರೆ , ನೀವು ನಾನು ಈಗ ಹೇಳುವ ಕೆಲಸವನ್ನು ತಪ್ಪದೇ ಮಾಡಬೇಕಾಗುತ್ತದೆ. ಒಂದು ತಿಂಗಳ ನಿಮ್ಮ ಈ ಪ್ರಯತ್ನದಲ್ಲಿ ಗರಿಷ್ಟ ಪಲಿತಾಂಶ ಒಂದೇ ಬರುತ್ತದೆ. ಆದರೆ, ನಿಮ್ಮ ಪ್ರಯತ್ನ ಮಾತ್ರ ಪ್ರಾಮಾಣಿಕವಾಗಿರಬೇಕು" ಎಂದರು. "ನಿಮಗೆ ಸಿಟ್ಟು ಬಂದ ತಕ್ಷಣ, ನಿಮಗೆ ಈಗ ಕೊಟ್ಟಿರುವ ಈ ಮರದ ಹಲಗೆಯ ಮೇಲೆ ಒಂದು ಮೊಳೆಯನ್ನು ಈ ಚೀಲದಿಂದ ತೆಗೆದುಕೊಂಡು, ಈ ಸುತ್ತಿಗೆಯನ್ನು ಬಳಸಿ ಮೊಳೆಯು ಪೂರ್ಣ ಮರದ ಒಳಗೆ ಹೋಗುವತನಕ ಬಡಿಯಬೇಕು. ನಿಮಗೆ ಎಷ್ಟು ಸಲ ಸಿಟ್ಟು ಬಂದರೂ ಸರಿ, ಈ ಮೊಳೆ ಮರದ ಹಲಗೆಯನ್ನು ಸೇರಲೇ ಬೇಕು. ಸಾಧ್ಯವಾದರೆ ಒಂದು ದಿನದಲ್ಲಿ ಎಷ್ಟು, ಸಲ ಸಿಟ್ಟು ಮಾಡಿಕೊಂಡಿರಿ ಎಂಬುದನ್ನು ತಿಳಿಯುವ ಹಾಗೆ ಗಮನಮಾಡಿ. ಹೀಗೆ, ನೀವು ಒಂದು ತಿಂಗಳು ನಿಮ್ಮ ಪ್ರಯೋಗವನ್ನು ಪ್ರಾಮಾಣಿಕವಾಗಿ ಮಾಡಿ. ಮೊಳೆಗಳು ಸಾಲದೇ ಹೋದರೆ ನನ್ನಲ್ಲಿ ಬಂದು ಪುನ: ಮತ್ತೊಂದು ಚೀಲ ಪಡೆಯಿರಿ. ನಿಮಗೆನಾದರೂ ಸಂಶಯವಿದ್ದರೆ ಕೇಳಿ" ಎಂದರು. ಆ ಭಕ್ತರಿಗೆ ಎಲ್ಲವೂ ಅರ್ಥವಾದವರಂತೆ ಎದ್ದು ಈ ಸಾಮಾನುಗಳನ್ನು ಪಡೆದುಕೊಂಡು, ಸಂತರಿಗೆ ನಮಸ್ಕರಿಸಿ ಹೊರ ನಡೆದರು. ಒಂದು ತಿಂಗಳ ನಂತರ ಈ ಭಕ್ತರು ಪುನ: ಸಂತರಲ್ಲಿ ಬಂದರು. ಭಕ್ತರ ಮುಖದಲ್ಲಿ ಮುಂಚಿನ ವಿಷಾದ ಕಾಣಿಸಲಿಲ್ಲ. ಹೆಚ್ಚು ತೃಪ್ತಿ ಭಾವದ ಜೊತೆಗೆ ಸಂತಸ ಇತ್ತು. ಸಂತರು " ಈ ಒಂದು ತಿಂಗಳ ನಿಮ್ಮ ಅನುಭವ ಹೇಗಿತ್ತು? ಎಷ್ಟು ಮೊಳೆಗಳನ್ನು ಬಡಿದಿರಿ? ಎಷ್ಟು ಮೊಳೆಗಳು ಉಳಿಯಿತು?" ಎಂಬ ಬಗ್ಗೆ ವಿಚಾರಿಸಿದರು. ಆ ಭಕ್ತರು ತಮ್ಮ ಅನುಭವ ಹೇಳಿಕೊಂಡರು " ಮೊದಮೊದಲು ದಿನಕ್ಕೆ ಹತ್ತಾರು ಮೊಳೆಗಳು ಬೇಕಾಯಿತು. ನಂತರದ ದಿನಗಳಲ್ಲಿ ನಾಲ್ಕಾರಕ್ಕೆ ಇಳಿಯಿತು, ಹದಿನೈದು ದಿನಗಳ ನಂತರ ಕ್ರಮೇಣ ಒಂದು ಎರಡು ಇತ್ತು. ಆದರೆ ಈಗ ಒಂದು ವಾರದಿಂದ ಈಚೆಗೆ ಒಂದು ಮೊಳೆಯು ಖರ್ಚಾಗಿಲ್ಲ." ಸಮಸ್ಥಿತಿಯಲ್ಲಿದ್ದ ಸಂತರು " ಈ ರೀತಿ ಬದಲಾವಣೆಯಾಗಲು ಏನು ಕಾರಣವಿರಬಹುದೆಂದು ಗುರುತಿಸಿದಿರಿ?" ಎಂದು ಭಕ್ತರನ್ನು ಕೇಳಿದರು. " ನನಗೆ ಸಿಟ್ಟು ಬಂದಾಗ ಈ ಮೊಳೆಯನ್ನು ಮರದ ಹಲಗೆಗೆ ಬಡಿಯುವ ಕೆಲಸ ಹೆಚ್ಚು ಶ್ರಮವೆನಿಸುತ್ತಿತ್ತು. ಕಾರಣ ನನ್ನ ಸಿಟ್ಟಿನ ಕಾರಣದಿಂದ ಹಲಗೆಗೆ ಮೊಳೆಯನ್ನು ಸರಿಯಾಗಿ ಬಡಿಯಲಾರದೆ ಇನ್ನು ಹೆಚ್ಚು ಸಿಟ್ಟು ಬರುತ್ತಿತ್ತು. ಆಗ ಮೊಳೆಯ ಮೇಲೆ, ನಿಮ್ಮ ಮೇಲೆಯೂ ಸಿಟ್ಟು ಅಧಿಕವಾಗುತ್ತಿತ್ತು. ಮೊಳೆ ಬಡಿದು ಮುಗಿಸುವಷ್ಟರಲ್ಲಿ ನನಗೆ ಬೆವರು ಹರಿಯುತ್ತಿತ್ತು. ಸುಸ್ತಾಗಿ ಬಿಡುತ್ತಿದ್ದೆ. ಕೆಲವು ದಿನಗಳ ನಂತರ ಸಿಟ್ಟಿಗಿಂತ ಮೊಳೆ ಬಡಿಯುವ ಕೆಲಸವೇ ಹೆಚ್ಚು ಶ್ರಮವೆನಿಸತೊಡಗಿತು. ಹೇಗಾದರೂ ಮಾಡಿ ಈ ಕೆಲಸ ಬಿಡಬೇಕೆಂದು ಅನಿಸಿದರು ಸಿಟ್ಟು ಬಿಡದೆ, ಮೊಳೆ ಬಡಿಯುವುದನ್ನು ಬಿಡಲಾರೆ ಎಂದು ಗಟ್ಟಿ ಮನಸ್ಸು ಮಾಡಿದ್ದೆ. ಮೊಳೆ ಬಡಿಯುವುದರಿಂದ ತಪ್ಪಿಸಿಕೊಳ್ಳಲು ಸಿಟ್ಟು ಕಡಿಮೆ ಮಾಡಲು ತೀರ್ಮಾನಿಸಿದೆ. ಮುಂದೆಯೂ ಮೊಳೆ ಬಡಿಯುವ ಕೆಲಸ ಇರಲಿ ಇಲ್ಲದಿರಲಿ ಸಿಟ್ಟು ಬೇಡವೆಂದು ತೀರ್ಮಾನ ಮಾಡಿರುವೆ. " ಎಂದು ಸಮಾಧಾನದಿಂದ ಹೇಳಿದರು. ಸಂತರು, ಭಕ್ತರ ಪ್ರಾಮಾಣಿಕ ಪ್ರಯತ್ನವನ್ನು ಮೆಚ್ಚುತ್ತಾ " ಈಗ ನಿಮಗೊಂದು ಕೆಲಸ ಬಾಕಿ ಇದೆ, ಅದನ್ನು ಮುಗಿಸಿಬಿಡಿ " ಎಂದು ಹೇಳುತ್ತಾ ಆ ಮರದ ಹಲಗೆಯನ್ನು ಭಕ್ತರ ಮುಂದಿಟ್ಟು " ಈಗ ನೀವು ಬಡಿದಿರುವ ಈ ಮೊಳೆಗಳನ್ನು ಈಚೆ ತೆಗೆದು ಬಿಡಿ. ನೇರವಾದ ಮೊಳೆಗಳನ್ನು ಈ ಚೀಲಕ್ಕೆ ಹಾಕಿ, ಅಂಕ ಡೊಂಕ ಮೊಳೆಗಳನ್ನು ಇತ್ತ ಇಡಿ. ಇನ್ನರ್ಧ ಘಂಟೆ ಬರುತ್ತೇನೆ. " ಎಂದು ತಮ್ಮ ಕೆಲಸಕ್ಕೆ ಸಂತರು ಹೊರಟು ಹೋದರು. ಭಕ್ತರು ಶ್ರಮವಹಿಸಿ ಮೊಳೆಗಳನ್ನು ಕಿತ್ತರು. ಅದರಲ್ಲಿ ಮುಕ್ಕಾಲು ಭಾಗದಷ್ಟು ಮೊಳೆ ಅಂಕು ಡೊಂಕಾಗಿ ಕೆಲಸಕ್ಕೆ ಬಾರದಂತೆ ಆಗಿದ್ದವು. ಅಷ್ಟರಲ್ಲಿ ಸಂತರು ಬಂದು ನೇರವಾಗಿ " ಈಗ ಹೇಳಿ ನಿಮ್ಮ ಅಭಿಪ್ರಾಯವನ್ನು" ಎಂದು ಭಕ್ತರ ಮುಖ ನೋಡಿದರು. "ಇಲ್ಲಿನ ಮುಕ್ಕಾಲು ಪಾಲು ಮೊಳೆಗಳು ಕೆಲಸಕ್ಕೆ ಬಾರದಂತೆ ಆಗಿಬಿಟ್ಟಿತು, ಹಲಗೆಗೆ ತೂತುಗಳಾದವು, ಇಷ್ಟು ಬಿಟ್ಟರೆ ನನಗೇನು ತಿಳಿಯುತ್ತಿಲ್ಲ. " ಎಂದು ಬೇಸರದಿಂದ ಭಕ್ತರು ಹೇಳಿದರು. ನಸುನಗುತ್ತಾ ಸಂತರು " ಈಗ ಹೇಳಿ ಒಂದು ಘಂಟೆಯ ಶ್ರಮದಿಂದ ಮೊಳೆಯನ್ನೇನೋ ಈಚೆ ತೆಗಿದಿರಿ, ಆದರೆ ಈ ಮರದ ಹಲಗೆಯ ಮೇಲೆ ಮೂಡಿರುವ ಗುರುತು ತೆಗೆಯಲು ಸಾಧ್ಯವೇ? ಯೋಚಿಸಿ " ಎಂದರು. ಅವಕ್ಕಾದ ಭಕ್ತರು ಏನೊಂದು ಹೇಳದೆ ಸುಮ್ಮನೆ ನಿಂತರು. ಪರಿಸ್ಥಿತಿಯನ್ನು ವಿವರಿಸುತ್ತಾ ಸಂತರು " ನಮಗೆ ಸಿಟ್ಟು ಬಂದ ಪರಿಸ್ಥಿತಿಯಲ್ಲಿ ನಮ್ಮ ಸಿಟ್ಟು ಮರದ ಹಲಗೆಯ ಮೇಲೆ ಬಡಿಯುವ ಮೊಳೆಯ ಮೂಲಕ ಪ್ರಕಟಗೊಳ್ಳುತ್ತದೆ. ನಂತರದಲ್ಲಿ ಸಿಟ್ಟು ಶಾಂತವಾದ ಬಳಿಕ, ನಮ್ಮಲ್ಲಿ ಮೂಡುವ ಬೇಸರ, ಅಶಾಂತಿ , ಪಶ್ಚಾತ್ತಾಪ ಇತ್ಯಾದಿಗಳು ಮರದಿಂದ ತೆಗೆದ ಮೊಳೆಗಳ ಮೂಲಕ ಪ್ರಕಟಗೊಳ್ಳುತ್ತವೆ. ಆದರೆ, ಸಿಟ್ಟಿನಲ್ಲಿ ನಾವು ಮಾಡಿದ ಅನಾಹುತ, ವಿಕೃತಿ ಮತ್ತು ಇತರರಿಗೆ ಉಂಟುಮಾಡಿದ ನೋವು ಇವೆಲ್ಲ ಮರದ ಹಲಗೆಯ ಮೇಲೆ ಮೂಡಿದ್ದ ಅಳಿಸಲಾಗದ ತೂತುಗಳು. ಈಗ ಹೇಳಿ, ಇದನ್ನು ಏನು ಮಾಡಿದರೆ ತೆಗೆಯಬಹುದು? ನಾವು ಎಷ್ಟು ಪಶ್ಚಾತ್ತಾಪ ಪಟ್ಟರೂ, ಎಷ್ಟು ಬಾರಿ ಕ್ಷಮಿಸಿ ಎಂದು ಕೇಳಿದರೂ ಈ ಮರದ ಹಲಗೆಯ ಮೇಲೆ ಮೂಡಿರುವ ಗುರುತು ಹೋಗಲು ಸಾಧ್ಯವೇ? ಅಳಿಸಲಾಗದ ಗುರುತು ನಮ್ಮ ಕ್ಷಣ ಮಾತ್ರದ ಸಿಟ್ಟು ಮಾಡಿಬಿಟ್ಟಿತು." " ಸಿಟ್ಟು ಬರದಿರುವ ವ್ಯಕ್ತಿ ಯಾರಿದ್ದಾರೆ, ಹೇಳಿ? ಸಿಟ್ಟು ಬರುವುದು ತಪ್ಪೆಂದು ಹೇಳಲಾಗದು. ಆದರೆ, ಈ ಸಿಟ್ಟು ಎಲ್ಲೂ ಗುರುತು ಮೂಡಿಸಬಾರದು ಅಷ್ಟೇ. ಈ ಸಿಟ್ಟು ಬೇರೆಯವರಿಗೆ ಅಳಿಸಲಾಗದ ಗುರುತು ಮೂಡಿಸದಂತೆ ವಿವೇಕ ವಹಿಸುವುದೇ ನಿಜವಾದ ಸಾಧನೆ. ಸಮಾಧಾನ ಎಂತಹ ಸಿಟ್ಟನ್ನು ಗೆಲ್ಲಬಲ್ಲದು. ಸಮಾಧಾನ ಎಂತಹ ಪರಿಸ್ಥಿತಿಯನ್ನು ಎದುರಿಸಬಲ್ಲದು. ತಾಳಿದವನೇ ಬಾಳಲು ಅರ್ಹನಾಗುತ್ತಾನೆ. ತಾಳುವಿಕೆಗಿಂತ ತಪವು ಇಲ್ಲ. ಸುಂದರ ಬಾಳಿಗೆ ಸಹನೆ ಕಳಶಪ್ರಾಯ." ಎಂದು ಆತ್ಮೀಯವಾಗಿ ಭಕ್ತರನ್ನು ಬೀಳ್ಕೊಟ್ಟರು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸುಂದರ ವಿಚಾರ ಪ್ರಸರಣಕ್ಕಾಗಿ ಧನ್ಯವಾದಗಳು, ಪ್ರಕಾಶರೇ.

ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ
ಕೋಪದಿಂದಲೆ ನಾಶ ಕೋಪದಿಂದಲೆ ಭಯವು|
ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ
ಕೋಪಿಷ್ಠರವರು ಪಾಪಿಷ್ಠರೋ ಮೂಢ||

ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ
ಮಾತಿಲ್ಲ ಕತೆಯಿಲ್ಲ ನಗುವು ಮೊದಲೇ ಇಲ್ಲ|
ಕೋಪಿಷ್ಠರ ಮನೆಯು ಸೂತಕದ ಅಂಗಣವು
ಕೋಪವದು ನರಕದ್ವಾರವೋ ಮೂಢ||

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ ನಾಗರಾಜರೇ,
ಸರಳ ಸುಂದರ ಸಾಲುಗಳಲ್ಲಿ ಪೂರಕವಾದ ವಿಚಾರವನ್ನು ಪೂರೈಸಿದ ನಿಮ್ಮ ಲೇಖನಿಗೆ ಧನ್ಯವಾದಗಳು.
ಪ್ರಕಾಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.