ಸಾವಿರದ ವಿವೇಕಾನಂದ

5

#ಸಾವಿರದ ವಿವೇಕಾನಂದ

ನಮ್ಮ ನಡುವೆ ಇಷ್ಟೊಂದು ಸಂಖ್ಯೆಯ ಸಾಧು,ಸನ್ಯಾಸಿ,ಸ್ವಾಮೀಜಿಗಳು ಇಂದಿಗೂ ಜೀವಂತವಾಗಿ ಇದ್ದಾಗ್ಯೂ ಕೂಡ,ಹಿಂದೂಧರ್ಮ ಅಂದಕೂಡಲೆ ಶತಮಾನದ ಹಿಂದೆ ಗತಿಸಿ ಹೋಗಿರುವ ಸ್ವಾಮಿ ವಿವೇಕಾನಂದರು ಮಾತ್ರ ಯಾಕೆ ನೆನಪಾಗುತ್ತಿದ್ದಾರೆ..?

ಉತ್ತರ ಸರಳ...

ವಿವೇಕಾನಂದರು ಇವತ್ತಿನ ಕೆಲವು ಸ್ವಾಮೀಜಿಗಳ ಹಾಗೆ ಕೇವಲ ಹಣ್ಣುಹಂಪಲು,ಶಾಲು-ಸನ್ಮಾನ,ಕಾವಿಯೊಳಗಿನ ಆಡಂಬರದ ಬದುಕಿಗಾಗಿ ಧಾರ್ಮಿಕ-ಸಾಮಾಜಿಕ ವಾಹಿನಿಗೆ ಬಂದವರಲ್ಲ.ಯಾರಿಗೋ ನೋವು ಆಗುತ್ತದೆಯೆಂದು ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡವರಲ್ಲ.ಸೋಗಲಾಡಿತನಕ್ಕೆ ಅವರ ಸನ್ಯಾಸ ಜೀವನದಲ್ಲಿ ಜಾಗವಿರಲಿಲ್ಲ.ಕಾವಿ ತೊಟ್ಟಮೇಲೆ ಧರ್ಮವನ್ನು ಅರ್ಥಮಾಡಿಕೊಂಡವರಲ್ಲ,ಧರ್ಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಮೇಲೆ ಕಾವಿ ತೊಟ್ಟವರು.ಸನಾತನ ಧರ್ಮದ ಎಲ್ಲಾ ಗ್ರಂಥಗಳು,ಅಲ್ಲದೇ ಇತರೇ ಸಮಕಾಲೀನ ಧರ್ಮಗ್ರಂಥಗಳ ಸರಿಯಾದ ಜ್ಞಾನವನ್ನು ಪಡೆದ ಮೇಲೆ ಸರ್ವಧರ್ಮ ಸಮಭಾವ ಎಂದು ಸಾರಿದವರು.ತಾವು ಇದ್ದ ಬಳಿ ಜನರನ್ನು ಕರೆಯದೆ ಸ್ವತಃ ತಾವಾಗಿಯೇ ಜನರ ಬಳಿ ಹೋದವರು.ಧರ್ಮಜಾಗೃತಿಗಾಗಿ ಪರಿವ್ರಾಜಕನಾಗಿ ದೇಶಾದ್ಯಂತ ಸಂಚರಿಸಿದವರು.ಜಾತೀಯತೆಯನ್ನು ಹೋಗಲಾಡಿಸಲು ಕೆಳವರ್ಗದವರ ಕೈಯಲ್ಲಿ ರೊಟ್ಟಿಯನ್ನು ತರಿಸಿಕೊಂಡು ತಿಂದವರು.ಬ್ರಾಹ್ಮಣ ಜ್ಞಾನ,ಕ್ಷತ್ರಿಯ ಸಂಸ್ಕೃತಿ,ವೈಶ್ಯ ದಕ್ಷತೆ ಮತ್ತು ಶೂದ್ರ ಸಮಾನತೆ ಮೇಲೆ ನಿಂತಿರುವ ಆದರ್ಶ ಸಮಾಜ ನಿರ್ಮಾಣವಾಗಬೇಕೆಂದು ಹೇಳಿ ವರ್ಣವ್ಯವಸ್ಥೆಗೆ ಹೊಸ ವ್ಯಾಖ್ಯಾನ ಕೊಟ್ಟವರು.ನೂರಕ್ಕೂ ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆ ಹರಿಸಿದವರು.ಭಾರತದ ತತ್ವಜ್ಞಾನ,ಯೋಗ,ವೇದಾಂತವನ್ನು ಪಶ್ಚಿಮ ಮತ್ತು ಪೂರ್ವ ರಾಷ್ಟ್ರಗಳಲ್ಲಿ ಹರಡಿದವರು.ಮಾನವ ಸೇವೆಯೇ ದೇವರ ಸೇವೆ,ಹಸಿದವನಿಗೆ ಅನ್ನ ಕೊಡದ ಧರ್ಮ ಧರ್ಮವೇ ಅಲ್ಲ,ದರಿದ್ರನಾರಾಯಣನೇ ದೇವರು ಎಂದು ಹೇಳಿದವರು.ಧರ್ಮವನ್ನು ಟೀಕಿಸದೆ ಅದರಲ್ಲಿನ ಕಂದಾಚಾರಗಳನ್ನು ಯಾವುದೇ ಮುಲಾಜಿಲ್ಲದೆ ಟೀಕಿಸಿದವರು.ಟೀಕಿಸುವ ಜೊತೆಜೊತೆಗೆ ಅದನ್ನು ರಿಪೇರಿ ಮಾಡುವ ಕೆಲಸವನ್ನು ಮಾಡಿದವರು.ಇಷ್ಟೇ ಅಲ್ಲಾ,ಭಯದಿಂದ ಹೊರಬಂದು ತಾಯಿ ಭಾರತೀಯ ದಾಸ್ಯವನ್ನು ಅಂತ್ಯಗೊಳಿಸಲು ಕರೆ ಕೊಟ್ಟವರು.ಅನಿಬೆಸೆಂಟ್,ನಿವೇದಿತಾ,ಗಾಂಧೀಜಿ,ಜೆ.ಆರ್.ಡಿ ಟಾಟಾ, ಕುವೆಂಪು,ಡಿವಿಜಿ ಮುಂತಾದ ಮಹನೀಯರಿಗೆ ಪ್ರೇರಕ ಶಕ್ತಿಯಾದವರು.ಹೀಗಾಗಿ ಸ್ವಾಮಿ ವಿವೇಕಾನಂದರು ಸ್ವಾಮೀಜಿಗಳ ಸಾಲಿನಲ್ಲಿ ವಿಶಿಷ್ಟವಾಗಿ ನಮಗೆ ಗೋಚರಿಸುತ್ತಾರೆ.

ವಿವೇಕಾನಂದರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸುತ್ತೇನೆ.ಒಮ್ಮೆ ಸ್ವಾಮೀಜಿಗಳು ವಿದೇಶ ಪ್ರವಾಸದಲ್ಲಿದ್ದಾಗ ಒಬ್ಬ ಹೆಣ್ಣು ಮಗಳು ಬಂದು,' ನನ್ನನ್ನು ಮದುವೆಯಾಗುತ್ತೀರಾ ಸ್ವಾಮೀಜಿ?' ಎಂದು ಕೇಳುತ್ತಾಳೆ. ಸ್ವಾಮೀಜಿಗಳು ಯಾಕೆ ಎಂದು ಮರುಪ್ರಶ್ನೆ ಹಾಕುತ್ತಾರೆ.ಅದಕ್ಕವಳು,'ನನಗೆ ನಿಮ್ಮ ಹಾಗೆ ಇರುವ ಮಗು ಬೇಕು ಅದಕ್ಕೆ' ಅಂತ ಹೇಳುತ್ತಾಳೆ.
ಆಗ ಸ್ವಾಮೀಜಿ ಕೊಟ್ಟ ಉತ್ತರ ಏನಿತ್ತು ಗೊತ್ತೆ..?'ತಾಯಿ..ನನ್ನನ್ನೆ ನಿನ್ನ ಮಗ ಎಂದು ಭಾವಿಸಿ ಸ್ವೀಕರಿಸು ಎಂದುಬಿಟ್ಟರು!!

ವಿವೇಕಾನಂದರು ಬೇರೆಬೇರೆ ಸಂದರ್ಭಗಳಲ್ಲಿ ಕೆಲವೊಂದು ಮಹತ್ವದ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು.ಅವುಗಳೆಲ್ಲವು ಇಂದು ನಮಗೆ ವಿವೇಕವಾಣಿಯಾಗಿ ಓದಲು ಸಿಗುತ್ತದೆ.ಅದರಲ್ಲಿ ಕೆಲವೊಂದನ್ನು ಇಲ್ಲಿ ಬರೆದಿದ್ದೇನೆ.

1)ನಮ್ಮ ಜನಾಂಗಕ್ಕೆ ಯಾವ ಭರವಸೆಯೂ ಇಲ್ಲ. ಯಾರ ತಲೆಯಲ್ಲೂ ಒಂದು ಹೊಸ ಸ್ವತಂತ್ರ ಆಲೋಚನೆ ಸುಳಿಯುವಂತೆ ಇಲ್ಲ. ಎಲ್ಲ ಹಳೆಯ ಕಂತೆಯ ಪುರಾಣದ ಮೇಲೆಯೇ ಇನ್ನೂ ಕಾದಾಡುತ್ತಿರುವರು. ತಲೆಯಿಲ್ಲದ ಬಾಲವಿಲ್ಲದ ಕಾಗಕ್ಕ ಗುಬ್ಬಕ್ಕನ ಕತೆಗಳೇ! ಇವತ್ತು ದೇವರ ಕೋಣೆಯಲ್ಲಿ ಒಂದು ಘಂಟೆಯಿದೆ. ನಾಳೆ ಒಂದು ಕೊಂಬನ್ನು ಸೇರಿಸುತ್ತೀರಿ ಅಥವಾ ಇವತ್ತು ಮಂಚ, ನಾಳೆ ಅದರ ಕಾಲಿಗೆ ಬೆಳ್ಳಿಯ ಕಟ್ಟು, ಜನಗಳಿಗೆ ಬೇಕಾದಷ್ಟು ಪ್ರಸಾದ; ಹೀಗೆ ಮಾಡಿ ಒಂದೆರಡು ಸಾವಿರ ಕಟ್ಟು ಕತೆಗಳನ್ನು ನೇಯುತ್ತೀರಿ. ಸ್ವಲ್ಪದರಲ್ಲಿ ಹೇಳಬೇಕಾದರೆ, ನಿಮ್ಮ ಲ್ಲಿರುವುದು ಬಾಹ್ಯ ಆಚಾರವಲ್ಲದೆ ಮತ್ತೇನೂ ಅಲ್ಲ. ಇದಕ್ಕೆ ಬುದ್ಧಿ ಮಾಂದ್ಯ ಎಂದು ಹೆಸರು. ಯಾರ ಬುದ್ಧಿಗೆ ಇಂತಹ ಕೆಲಸಕ್ಕೆ ಬಾರದ ಕತೆಗಳಲ್ಲದೆ ಬೇರೆ ರುಚಿಸದೋ ಅವರನ್ನು ಕಡುಮೂರ್ಖರೆಂದು ಕರೆಯುತ್ತಾರೆ.

2)ಬನ್ನಿ, ಮನುಷ್ಯರಾಗಿ! ಪ್ರಗತಿಗೆ ಯಾವಾಗಲೂ ವಿರುದ್ಧವಾಗಿರುವ ಪುರೋಹಿತರನ್ನು ಒದ್ದೋಡಿಸಿ. ಅವರೆಂದಿಗೂ ತಿದ್ದಿಕೊಳ್ಳುವುದಿಲ್ಲ. ಅವರ ಹೃದಯ ಎಂದಿಗೂ ವಿಶಾಲ ಆಗುವುದಿಲ್ಲ. ಶತಶತಮಾನಗಳಿಂದ ಬಂದ ಮೂಢನಂಬಿಕೆ ಮತ್ತು ದಬ್ಬಾಳಿಕೆಯ ಸಂತಾನ ಅವರು! ಮೊದಲು ಪುರೋಹಿತಶಾಹಿಯನ್ನು ಬೇರುಸಹಿತ ಕಿತ್ತೊಗೆಯಿರಿ. ಬನ್ನಿ, ಮನುಷ್ಯರಾಗಿ, ಮುಂದೆ ಬನ್ನಿ, ಸಂಕುಚಿತ ಬಿಲಗಳಿಂದ ಹೊರಗೆ ಬನ್ನಿ, ಕಣ್ಣು ಬಿಟ್ಟು ಹೊರಗೆ ನೋಡಿ. ಇತರ ಜನಾಂಗಗಳು ಹೇಗೆ ಮುಂದುವರಿಯುತ್ತಿವೆ ಎಂಬುದನ್ನು ನೋಡಿ. ನೀವು ಮನುಷ್ಯರನ್ನು ಪ್ರೀತಿಸುವಿರಾ? ನಿಮ್ಮ ದೇಶವನ್ನು ಪ್ರೀತಿಸುವಿರಾ? ಹಾಗಾದರೆ ಬನ್ನಿ, ಉನ್ನತವಾದ ಕೆಲಸಗಳಿಗಾಗಿ ನಾವು ಹೋರಾಡುವ.

3)ಸತ್ಯವನ್ನು ಎಂತಹ ಪಾಮರನಿಂದಲೂ ಕಲಿತುಕೊಳ್ಳಬಹುದು. ಅವನು ಯಾವ ಜಾತಿಗೆ ಅಥವಾ ಮತಕ್ಕೆ ಸೇರಿದ್ದರೂ ಚಿಂತೆ ಇಲ್ಲ.

4)ಧರ್ಮ ಬಾಯಿ ಮಾತಲ್ಲ ; ನಂಬಿಕೆಯಲ್ಲ, ಸಿದ್ಧಾಂತವಲ್ಲ ಅಥವಾ ಅದೊಂದು ಕೋಮುವಾರು ಭಾವನೆಯೂ ಇಲ್ಲ. ಧರ್ಮ ಕೋಮುಗಳಲ್ಲೂ ಸಂಘಗಳಲ್ಲೂ ಜೀವಿಸಲಾರದು. ಆತ್ಮನಿಗೂ ದೇವರಿಗೂ ಇರುವ ಸಂಬಂಧ ಇದು. ಇದನ್ನು ಒಂದು ಸಂಘವಾಗಿ ಹೇಗೆ ಮಾಡಬಹುದು? ನಂತರ ಇದೊಂದು ವ್ಯಾಪಾರವಾಗುವುದು ಎಲ್ಲಿ ವ್ಯಾಪಾರದೃಷ್ಟಿ ಇದೆಯೋ, ಧರ್ಮದಲ್ಲಿ ವ್ಯಾಪಾರ ನಿಯಮಗಳಿವೆಯೋ ಅಲ್ಲಿ ಆಧ್ಯಾತ್ಮಿಕಕತೆ ಕೊನೆಗಾಣುವುದು. ಧರ್ಮ ದೇವಸ್ಥಾನ ಕಟ್ಟುವುದರಲ್ಲಿಲ್ಲ, ಅಥವಾ ಸಾಮಾಜಿಕ ಪೂಜೆಗೆ ಹೋಗುವುದರಲ್ಲಿಯೂ ಇಲ್ಲ; ಅದು ಗ್ರಂಥದಲ್ಲಿಲ್ಲ, ಮಾತಿನಲ್ಲಿಯೂ ಇಲ್ಲ, ಉಪವಾಸದಲ್ಲಿಯೂ ಇಲ್ಲ ಅಥವಾ ಸಂಸ್ಥೆಯಲ್ಲಿಯೂ ಇಲ್ಲ. ಧರ್ಮವೆಂದರೆ ಸಾಕ್ಷಾತ್ಕಾರ. ಒಂದು ಕಣದಷ್ಟು ಧರ್ಮಾನುಷ್ಠಾನ ಮತ್ತು ಆತ್ಮಸಾಕ್ಷಾತ್ಕಾರ ಒಂದು ಮಣ ಮಾತಿಗಿಂತ ಮತ್ತು ಒಣಹೆಮ್ಮೆಗಿಂತ ಮೇಲು.

5)ನಿಜವಾದ ವಿಜ್ಞಾನ ಜೋಪಾನವಾಗಿರಿ ಎನ್ನುವುದು. ನಾವು ಹೇಗೆ ಧಾರ್ಮಿಕ ಪುರೋಹಿತರ ಹತ್ತಿರ ಜೋಪಾನವಾಗಿರಬೇಕೋ ಹಾಗೆಯೇ ವೈಜ್ಞಾನಿಕ ಪುರೋಹಿತರ ಹತ್ತಿರವೂ ಜೋಪಾನವಾಗಿರಬೇಕು. ಅಪನಂಬಿಕೆಯಿಂದ ಹೊರಡಿ, ಪ್ರತಿಯೊಂದನ್ನು ವಿಭಜನೆ ಮಾಡಿ, ಪರೀಕ್ಷೆ ಮಾಡಿ; ಆನಂತರ ಸ್ವೀಕರಿಸಿ. ಹೆಚ್ಚು ಬಳಕೆಯಲ್ಲಿರುವ ಆಧುನಿಕ ಕಾಲದ ಹಲವು ಭಾವನೆಗಳು ಇನ್ನೂ ಪರೀಕ್ಷೆಗೆ ಗುರಿಯಾಗಿಲ್ಲ.

6)ಸಮಾಜ ಎಲ್ಲಿಂದ ಬೇಕಾದರೂ ತನ್ನ ಬೆಳವಣಿಗೆಗೆ ವಸ್ತುಗಳನ್ನು ಸಂಗ್ರಹಿಸಬಹುದು. ಆದರೆ ಅದು ತನ್ನ ರೀತಿಯಲ್ಲೇ ಬೆಳೆಯಬೇಕು. ಹೊಸ ಆಚಾರಕ್ಕೆ ಅಂಜುವುದೇ ಮೌಢ್ಯತೆಗೆ ಮೂಲ. ಇದೇ ನರಕಕ್ಕೆ ಹಾದಿ. ಇದರಿಂದಲೇ ಮತಭ್ರಾಂತಿ ಹುಟ್ಟುವುದು. ಸತ್ಯವೇ ಸ್ವರ್ಗ, ಮತಭ್ರಾಂತಿಯೇ ನರಕ.

7)ಮೂರ್ಖರಾಗುವುದಕ್ಕಿಂತ ಶುದ್ಧ ನಾಸ್ತಿಕರಾಗುವುದು ಮೇಲು. ನಾಸ್ತಿಕ ಜೀವಂತನಾಗಿರುವನು. ಅವನಿಂದ ಏನಾದರೂ ಉಪಯೋಗ ಪಡೆಯಬಹುದು. ಮೂಢನಂಬಿಕೆ ಪ್ರವೇಶಿಸಿದರೆ ತಲೆ ಕೆಡುವುದು, ಹುಚ್ಚನಾಗುವನು, ಅವನತಿ ಪ್ರಾರಂಭವಾಗುವುದು. ಇವೆರಡರಿಂದಲೂ ಪಾರಾದ ನಿರ್ಭೀತ ಸಾಹಸಿಗಳು ನಮಗೆ ಬೇಕಾಗಿರುವುದು. ನಮಗೆ ಇಂದು ಬೇಕಾಗಿರುವುದು ರಕ್ತದಲ್ಲಿ ಪುಷ್ಟಿ, ನರಗಳಲ್ಲಿ ಶಕ್ತಿ, ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳೇ ವಿನಃ, ಕೆಲಸಕ್ಕೆ ಬಾರದ ಜೊಳ್ಳು ಭಾವನೆಗಳಲ್ಲ. ಇವುಗಳನ್ನು ನಿರಾಕರಿಸಿ. ಎಲ್ಲಾ ರಹಸ್ಯಗಳನ್ನು ನಿರಾಕರಿಸಿ... ರಹಸ್ಯಾಚರಣೆ ಮತ್ತು ಮೂಢನಂಬಿಕೆ ಯಾವಾಗಲೂ ದುರ್ಬಲತೆಯ ಚಿಹ್ನೆ; ಅವನತಿ ಮತ್ತು ಮೃತ್ಯು ಚಿಹ್ನೆ. ಜೋಪಾನವಾಗಿರಿ. ಧೀರರಾಗಿ, ನಿಮ್ಮ ಕಾಲ ಮೇಲೆ ನಿಲ್ಲಿ.

8)'ಇದು ಶಾಸ್ತ್ರದಲ್ಲಿ ಹೇಳಿದೆ, ಆದುದರಿಂದ ಇದನ್ನು ನಂಬಬೇಕು' ಎಂಬ ಮೂಢನಂಬಿಕೆಯಿಂದ ಪಾರಾಗಬೇಕು. ಎಲ್ಲವನ್ನೂ ಎಂದರೆ ವಿಜ್ಞಾನ, ಧರ್ಮ, ತತ್ವ ಇವನ್ನೆಲ್ಲಾ ಯಾವುದೋ ಒಂದು ಶಾಸ್ತ್ರ ಹೇಳುತ್ತದೆ ಎಂದು ಹೇಳಿ ಅದಕ್ಕೆ ಹೊಂದಿಸಿಕೊಂಡು ಹೋಗುವಂತೆ ಮಾಡಲೆತ್ನಿಸುವುದೊಂದು ಮಹಾಪರಾಧ. ಗ್ರಂಥ ಆರಾಧನೆಯೇ ವಿಗ್ರಹಾರಾಧನೆಯಲ್ಲೆಲ್ಲ ಭಯಂಕರವಾದುದು... ಶಾಸ್ತ್ರ ನಿಯಮಗಳೆಂಬ ಕಹಳೆಯ ಧ್ವನಿಯನ್ನು ಕೇಳಿದೊಡನೆಯೇ ಹಳೆಯ ಮೂಢನಂಬಿಕೆ, ಆಚಾರಗಳು ನಮ್ಮನ್ನು ಮೆಟ್ಟಿಕೊಳ್ಳುವುವು. ನಮಗೆ ಅದು ಗೊತ್ತಾಗುವುದಕ್ಕೆ ಮುಂಚೆಯೇ ಸ್ವಾತಂತ್ರ್ಯವೆಂಬ ನಮ್ಮ ನೈಜ ಸ್ವಭಾವವನ್ನು ಮರೆತು ಹಳ್ಳಿಯ ಆಚಾರಕ್ಕೆ ಮತ್ತು ಮೂಢನಂಬಿಕೆಗಳಿಗೆ ಒಳಗಾಗುವೆವು.

9)ಭರತಖಂಡದಲ್ಲಿ ಎರಡು ದೊಡ್ಡ ಕೇಡುಗಳಿವೆ. ಹೆಂಗಸರನ್ನು ಪೀಡಿಸುವುದು; ಬಡವರನ್ನು ಜಾತಿ ಬಂಧನಗಳಿಂದ ಹಿಂಸಿಸುವುದು. ಈಗಿನ ಕಾಲದಲ್ಲಿ ಪ್ರತಿಯೊಂದು ದೇಶದಲ್ಲೂ ಧಾರ್ಮಿಕ ಪವಾಡಗಳನ್ನು ವೈಜ್ಞಾನಿಕವಾಗಿ ಸಮರ್ಥಿಸುವುದೊಂದು ಚಾಳಿಯಾಗಿ ಹೋಗಿದೆ.

10)ಸಿದ್ಧಾಂತವನ್ನು ಲೆಕ್ಕಿಸಬೇಡಿ, ಮೂಢನಂಬಿಕೆಯನ್ನು ಲೆಕ್ಕಿಸಬೇಡಿ, ಕೋಮು, ಚರ್ಚು, ದೇವಸ್ಥಾನ ಇವುಗಳನ್ನು ಲೆಕ್ಕಿಸಬೇಡಿ. ಪ್ರತಿಯೊಬ್ಬ ಮಾನವನ ಜೀವನದ ಸಾರವಾದ ಅಧ್ಯಾತ್ಮದೊಂದಿಗೆ ಇದನ್ನು ಹೋಲಿಸಿದರೆ ಇವಕ್ಕೆ ಬೆಲೆ ಇಲ್ಲ. ಮನುಷ್ಯನಲ್ಲಿ ಇದು ಹೆಚ್ಚು. ವಿಷದವಾಗಿ ಸ್ಪಷ್ಟವಾಗಿ ತೋರಿದಷ್ಟು ಸತ್ಕಾರ್ಯ ಸಾಧನೆಗೆ ಅವನು ಮಹಾಶಕ್ತಿಯಾಗುವನು.

11)ಆರ್ಯಮಾತೆಯ ಅಮೃತಪುತ್ರರಿರಾ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ! ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು. ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ". ಸಹೋದರರೆ, ಹೀಗೆ ಸಾರಿ "ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ." ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, "ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು.

ಇಂದಿಗೆ ವೀರಸನ್ಯಾಸಿಯ ಜನನವಾಗಿ 152 ವರ್ಷಗಳು ಸಂದಿದೆ.ಸ್ವಾಮೀಜಿಯ ಚಿಂತನೆಗಳು ನಮ್ಮಲ್ಲಿಯೂ ಹರಿದಾಡಲಿ.ನನ್ನೆಲ್ಲಾ ಫೇಸ್ಬುಕ್ ಮಿತ್ರರಿಗೆ 'ರಾಷ್ಟ್ರೀಯ ಯುವದಿನದ' ಶುಭಾಶಯಗಳು...
#sklines

-@ಯೆಸ್ಕೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ದೀನ ದೇವೋಭವ, ದರಿದ್ರ ದೇವೋ ಭವ ಎಂದವರು ಅವರು. ಚಿರಂಜೀವಿಯವರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.