ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೨

ಚಾಪೆ, ರಂಗೋಲೆಗಳ ನಡುವಣ ಅವಕಾಶವನ್ನು ಮೈದಾನವನ್ನಾಗಿಸಿಕೊಂಡವರು--ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೨

(೯೮)


     ಪ್ರಶ್ನಾಮೂರ್ತಿ ನಟಿಸಿದ, ಎಂದೂ ಸೆಟ್ಟೇರದ, ಪ್ರಶ್ನೆ ಮಾತ್ರ ಮರವೇರಿದ "ಗಾಜಿನ್ಮನೇಲಿ ಟೋಪಿ" ಕಥೆ ಶಾಂತಿನಿಕೇತನದ ಕಲಾಭವನದಲ್ಲಿಯೇ ಜಗತ್ಪ್ರಸಿದ್ಧವಾಗಿತ್ತು, ನಾನಲ್ಲಿ ಇನ್ನೂ ತರಗತಿಯನ್ನು ಸೇರುವ ಮುನ್ನವೇ. ಆದರೆ ಅದರ ಕಾರಣಕರ್ತರು ಯಾರೆಂಬುದು ಇನ್ನೂ ಪ್ರಸಿದ್ಧವಾಗದ್ದರಿಂದ ನನಗಲ್ಲಿ ಸೀಟು ಸಿಕ್ಕಿತೆಂದೇ ನಾನಂದುಕೊಂಡಿದ್ದೆ. ಆದರೆ ಕಲಾಭವನದಲ್ಲಿಯೇ raggingನ ಕಥೆ ನೋಡಿದ ಮೇಲೆ ನಾವೆಲ್ಲ ಎಂಥಹ ಬಚ್ಚಾಗಳು ಎಂದು ತಿಳಿಯಿತು. ಅಲ್ಲಿ ಮ್ಯೂರಲ್ ವಿಭಾಗದ ಉಪನ್ಯಾಸಕರಾಗಿದ್ದ ನಂದುದ (ನಂದುಲಾಲ್ ಮುಖರ್ಜಿ) ಹಾಸ್ಟೆಲಿನ ವಾರ್ಡನ್ ಸಹ ಆಗಿದ್ದರು.


 


     ಒಂದು ಇತಿಮಿತಿ ಮೀರದಂತೆ ರೇಗಿಂಗ್ ಅನ್ನು ವೀಕ್ಷಿಸುತ್ತ ಕುಳಿತುಬಿಡುತ್ತಿದ್ದರು. ಹೊಸದಾಗಿ ಸೇರಿದ ಹುಡುಗರನ್ನು ಹಿರಿಯರು ಒಂದು ನಿರ್ದಿಷ್ಟ ದಿನಾಂಕದ ತನಕ ಗೋಳಲ್ಲಿ ಗೋಳು ಹುಯ್ದುಕೊಳ್ಳುತ್ತಿದ್ದರು. ಎತ್ತರದ, ದುಂಡನೆಯ ಮರದ ಮೇಲಕ್ಕೆ ಕೋಲೊಂದನ್ನು ಎಸೆದು "ಅದನ್ನು ತೆಗೆದುಕೊಂಡು ಬಾ" ಎಂದು ಒಬ್ಬನನ್ನು ಓಡಿಸುತ್ತಿದ್ದರು, "ನನಗೆ ಮರ ಹತ್ತಲು ಬರುವುದಿಲ್ಲ" ಎಂದು ಆತ ಬೇಡಿಕೊಂಡರೂ ಬಿಡದೆ. ಆತನ ಕೈಲಿ ಅಥವ ಕಾಲಿನಲ್ಲಿ ಅಥವ ಕೈಕಾಲುಗಳಲ್ಲಿ ಮರ ಹತ್ತಲು ಆಗದಿದ್ದಲ್ಲಿ ತುಂಬ ಸಣ್ಣದಾದ (HB)ಪೆನ್ಸಿಲ್ ಅನ್ನು ಆತನ ಕೈಗಿತ್ತು ಇನ್ನೂರು ಅಡಿ ಇದ್ದ ಹುಡುಗಿಯರ ಹಾಸ್ಟೆಲ್ಲಿನ ಕಾಂಪೌಂಡಿನಾದ್ಯಂತ, ಮನುಷ್ಯನನ್ನು ಹೊರತುಪಡಿಸಿದ ಪ್ರಾಣಿಯ ’ಭಾವಚಿತ್ರ’ರಚಿಸುವಂತೆ ಪೀಡಿಸುತ್ತಿದ್ದರು! ಇಡೀ ಒಂದು ದಿನ ಕಾಲಾವಕಾಶವನ್ನು ನೀಡುತ್ತಿದ್ದರು. ಊಟದ ಮೆಸ್ಸಿನಿಂದ ಊಟದ ತಟ್ಟೆ ತುಂಬ ಊಟವನ್ನೂ ಆತನಿಗೆ ತಂದು ನೀಡುತ್ತಿದ್ದರು! 


  ಮತ್ತೂ ವಿಶೇಷವೆಂದರೆ ಒಬ್ಬ ಹುಡುಗನಿಗೆ ಸೀನಿಯರ್‍ ಒಬ್ಬ ಏನನ್ನೋ ಹೇಳಿಕೊಟ್ಟು, ಪ್ರಿನ್ಸಿಪಾಲರ ಬಳಿ ಆತನೇ ಕಳುಹಿಸಿದ್ದಃ


"ಕೀ ಹೋಲೋ?" (ಏನ್ಸಮಾಚಾರ?) ಪ್ರಿನ್ಸಿಪಾಲರು ಕೇಳಿದ್ದರು.


"ತುಮಿ ಬೊಕ ಸಾರ್" (ನಾಲಾಯಕ್ ನೀನು) ಎಂದ ಬೆಂಗಾಲಿ ಒಂಚೂರೂ ಬರದ ಬಡ ಮೊದಲ ವರ್ಷದ ವಿದ್ಯಾರ್ಥಿ.


ಸಿಟ್ಟಿಗೆದ್ದರು ಪ್ರಾಂಶುಪಾಲರು...

field_vote: 
Average: 5 (5 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೨