ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೧

"ಕಪಿ ಅವ್ತಾರ್ದಲ್ಲಿ ಇರೋಕಿಂತ್ಲೂ ಬೋ ಸಂದಾಕ್ ಕಾಣ್ತಿದೀಯ ಮಗ" -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೧

 

(೯೪)

     ವಾಸ್ತು, ಫೆಂಗ್ ಶೂಯಿ ಪ್ರಕಾರ, ಖಗೋಳವಿಜ್ಞಾನ-ಭವಿಷ್ಯವಾದದ ಪ್ರಕಾರ, ಸಮಸ್ತ ಭೂಮಂಡಲದ ಚರಾಚರಗಳೆಲ್ಲವೂ ಒಟ್ಟಾಗಿ ಸೇರಿ, ಅಂತೂ ಪ್ರಶ್ನಾಮೂರ್ತಿಗೊಂದು ಮೋಕ್ಷ ದೊರಕಿಸಿಕೊಡುವ ದಿನವನ್ನು ದಯಮಾಡಿಸಿತ್ತು. ಎಷ್ಟೋ ದಿನಗಳ ರಿಹರ್ಸಲ್ಲಿನ ನಂತರ ಅಂದು ಮೊದಲ ಧಾರವಾಹಿಯ ನೈಜ ಕ್ಯಾಮರದಲ್ಲಿ, ನೈಜ ಶೂಟಿಂಗ್ ಇಟ್ಟುಕೊಂಡೆವು ಕಬ್ಬನ್ ಪಾರ್ಕಿನಲ್ಲಿ! ಮೊದಲ ಸೀನ್, ಅದೇ, "ಅಕ್ಕಡಾ ಎನ್ನಡಾ ಬೀಚ್ ಮೆ ಲಿಟಲ್ ಕನ್ನಡ"ವನ್ನು ಸಾವಿರ ಸಲ ಬಾಯಿಪಾಠ ಮಾಡಿಕೊಂಡೇ ಪ್ರಶ್ನೆಯು ಬೆಳಗ್ಗಿನಿಂದ ಎಲ್ಲರಿಗೂ ಕಾಲೇಜಿನಲ್ಲಿ ಸಿಹಿ ಹಂಚುತ್ತಿದ್ದ. ತಾಪತ್ರಯವೇ ಬೇಡವೆಂದು ತನ್ನ ಮನೆಯಿಂದಲೇ ತಾಯಿ, ನೆಂಟರಿಸ್ಟರ ಕೈಲಿ ಚೌಚೌಬಾತ್ ಮಾಡಿಸಿಕೊಂಡು ಬಂದಿದ್ದ. ಹತ್ತಿರದ ಊರುಗಳಿಂದ ನೆಂಟರುಗಳೂ ಒಂದಿಬ್ಬರು ಬಂದಿದ್ದರು. ಅವರು ಬಂದುದರ ಪ್ರಯೋಜನ ಪಡೆದುಕೊಳ್ಳುವಂತೆ ಅವರಿಂದಲೇ ಅಡುಗೆ ಮಾಡಿಸಿದ್ದನೀತ! ಎರಡು ಲಾಭವಿತ್ತು ಅದರಲ್ಲಿ. ಸ್ವಂತ ಪಾಕೆಟ್ ಮನಿಯನ್ನು ಮನೆಯಿಂದ ಅಡುಗೆ ಮಾಡಿಸಿಕೊಂಡು ಬರಲು ಖರ್ಚು ಮಾಡಬೇಕಿರಲಿಲ್ಲ.

     ಭಯಂಕರ ಜಿಪುಣನಾದ ಪ್ರಶ್ನೆ ಏನಿಲ್ಲವೆಂದರೂ ಮನೆಯಲ್ಲಿ ಇನ್ನೂರು ರೂಪಾಯಿ ಖರ್ಚು ಮಾಡಿಸಿದ್ದನೆನಿಸುತ್ತದೆ, ಚೌಚೌಬಾತಿಗೆ. ಕ್ಯಾಂಟೀನಿನಲ್ಲಿ ಸಾಲದಲ್ಲೇ ನಮಗೆಲ್ಲ ತಿಂದು ಕುಡಿಸಿದ್ದ ಪ್ರಶ್ನೆಯ ಲೆಕ್ಕವೇ ಸುಮಾರು ಎಪ್ಪತ್ತೈದು ರೂಪಾಯಿ ಆಗಿತ್ತೆನಿಸುತ್ತದೆ, ೧೯೯೦ರ ಏಪ್ರಿಲ್ಲಿನಲ್ಲಿ. ಸಾಲವನ್ನು ಕ್ಯಾಂಟೀನಿನವನಿಗೆ ಪಾವತಿ ಮಾಡುವುದನ್ನು ಪ್ರಶ್ನೆ ಮುಂದೂಡುತ್ತಲೇ ಇದ್ದುದಕ್ಕೆ ಕಾರಣ--ಹಾಗೇ ಸುಮ್ಮನೆ ಆ ಲೆಕ್ಕವು ಮಾಯವಾದೀತು ಅಥವ ಮಾಯವಾಗಲಿ ಎಂದು. ಜಿಪುಣರ ಯೋಚಿಸುವ ಕ್ರಮವಿದು. ಅಥವ ಹೀಗಿರಬಹುದೇನೋಪ್ಪ!

     ಸಂಜೆಯ ಹೊತ್ತು, ಮುಗಿದ ನಂತರ, ದಿನಕ್ಕೆ ಮೊರ್ನಾಲ್ಕು ಗಂಟೆಗಳ ಕಾಲದ ಪಾರ್ಟ್ ಟೈಮ್ ಡಿಸೈನರ್ ಆಗಿ, ತಿಂಗಳಿಗೆ ನಾಲ್ಕುನೂರು ರೂಪಾಯಿ ಸಂಬಳ ಪಡೆಯುತ್ತಿದ್ದ ಪ್ರಶ್ನೆಯು, ಕೆಲಸಕ್ಕೆ ಹೋಗಿ ಅಥವ ಹೋಗದೆ ಅಥವ ಉಂಡೆನಾಮ ತೀಡಿ ಹದಿನೈದು ದಿನವಾಗಿತ್ತು. ಹೆಚ್ಚೂಕಡಿಮೆ ಐನೂರು ರೂಪಾಯಿ ಆತನಿಗಾಗಿ ಯಾರುಯಾರೋ ಖರ್ಚು ಮಾಡಿದಂತಾಗಿತ್ತು, ಕ್ಯಾಮರಾಕ್ಕೆ ಮುಖ ತೋರಿಸುವ ಮುನ್ನವೇ.

     ಅಂದಿನ ವಿಶೇಷವೆಂದರೆ ಸ್ವತಃ ಗೋಪಿ ಚೌಚೌಬಾತನ್ನು ಆಲದ ಎಲೆಯ ಮೇಲೆ ಹಾಕಿ ಹಾಕಿ ಎಲ್ಲರಿಗೂ ಕೊಡುತ್ತಿದ್ದುದು. ಮತ್ತೂ ವಿಶೇಷವೆಂದರೆ ಮೊದಲು ಹುಡುಗಿಯರಿಗೆ ನಂತರ ಹುಡುಗರಿಗೆ ನೀಡುತ್ತಿದ್ದುದು. ಮತ್ತೊಂದು ವಿಶೇಷವೆಂದರೆ, ಹುಡುಗಿಯರಿಗೆ (ಹುಡುಗರಿಗಿಂತಲೂ) ಒಂದಳತೆ ಹೆಚ್ಚು ತಿಂಡಿ ಹಾಕಿಕೊಡುತ್ತಿದ್ದುದು. ಕೊನೆಯ ವಿಶೇಷವೆಂದರೆಃ ಬ್ರಹ್ಮಚಾರಿಯಾದ, ರಾಮಾಯಣ ಖ್ಯಾತಿಯ ಹನುಮಂತನ ವೇಷ ತೊಟ್ಟು ಪ್ರಶ್ನೆ ನಿಂತಿದ್ದುದು. ಆ ಅಪ-ರೂಪದಲ್ಲಿ ಪ್ರಶ್ನೆ ನೇರವಾಗಿ ಅತ್ಯಂತ ಬರಪೀಡಿತವಾದ ಸೊಮಾಲಿಯನ್ ಹನು-ಮ್ಯಾನನಂತೆ ಕಾಣುತ್ತಿದ್ದ. ರವಿವರ್ಮ, ಎಂ.ಟಿ.ವಿ.ಆಚಾರ್ಯ ಮತ್ತು ಎಸ್.ಎಂ.ಪಂಡಿತರು ರಚಿಸಿರುವ ಹನುಮಂತರ ಚಿತ್ರಗಳು ಹತ್ತಾರು ಪ್ಯಾಕ್‍ಗಳುಳ್ಳ ಬಲಭೀಮನಂತಿದ್ದರೆ, ಪ್ರಶ್ನಾಮೂರ್ತಿ ಋಷಿಮುನಿಗಳ ಆಶ್ರಮದಲ್ಲಿ, ಕಾಲಕಾಲಕ್ಕೆ ಉಟತಿಂಡಿಯಿಲ್ಲದೆ ಅಥವ ಕಾಲಾಪಾನಿ ಶಿಕ್ಷೆಗೊಳಗಾಗಿ ಆಕಸ್ಮಿಕವಾಗಿ ತಪ್ಪಿಸಿಕೊಂಡು, ಬದುಕಿಬಂದ ನರಪೇತಲ ಸ್ಟಿಕ್-ಫಿಗರ್ ಆಗಿಯೊ ಕಾಣುತ್ತಿದ್ದ. ಹೊಳೆವ ನೀಲಿ ಚಡ್ಡಿ ತೊಟ್ಟು (ಉಪೇಂದ್ರರ "H20" ಸಿನೆಮದಲ್ಲಿ "ಹೂವೆ ಹೂವೆ" ಎಂದು ಹಾಡುವ ನಾಯಕಿ ಧರಿಸಿರುತ್ತಾಳಲ್ಲ ಅಂತಹದ್ದು), ಮುಖಕ್ಕೆ ಸೋಪನ್ನು ಇಡಲು ಬಳಸುವ ಕೆಂಪನೆ ಬಣ್ಣದ ಪ್ಲಾಸ್ಟಿಕ್ ಹಿಡಿಗೆ ಅತ್ತಿತ್ತ ತೂತುಮಾಡಿ, ದಾರ ಪೋಣಿಸಿ ಉಬ್ಬಿದ ಬಾಯಿಯನ್ನಾಗಿ ಅದನ್ನು ಕಟ್ಟಿಕೊಂಡಿದ್ದ. ಅದರಲ್ಲಿನ ಸೋಪಿನ ಪುಡಿಯನ್ನು ಸರಿಯಾಗಿ ತೊಳೆದಿರಲಿಲ್ಲವೆಂದು ಕಾಣುತ್ತದೆ, ಆದ್ದರಿಂದ ಆಗಾಗ ಸೀನುತ್ತಿದ್ದ. "ಈ ಎಕ್ಸ್-ಟ್ರಾ ಫಿಟ್ಟಿಂಗ್ ಸೋಪಿನ ಬಾಕ್ಸ್ ಎಲ್ಲ ಏಕೆ ಬೇಕಿತ್ತು. ಸಹಜವಾಗಿ ನಿನ್ನ ತದ್ರೂಪವೇ ಹನುಮನಲ್ಲವೆ!" ಎಂದು ಕಾಂಪ್ಲಿಮೆಂಟ್ ಬೇರೆ ನೀಡಿಬಿಟ್ಟಿದ್ದ ಮಾಮ.

field_vote: 
Average: 4.2 (10 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೧