ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೪

ಒಂದು ಕಾಗದದ ಕ್ರಾಂತಿ: ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೧೪

(೪೩)

"ಅಮಿ ಟಾಕಾ ಇಕಾನೆ ನೆಬೆನ" ಎಂದ ಕೌಂಟರಿನವ. "ಮತ್ತೆಲ್ಲಿ ಹಣ ಸಂದಾಯ ಮಾಡುವುದು?" ಎಂದು ಇಂಗ್ಲೀಷಿನಲ್ಲಿ ವಿಚಾರಿಸಿದೆ.

"ಯೊನಿವರ್ಸಿಟಿ ಆಫೀಸಿನಲ್ಲಿ ಸಂದಾಯ ಮಾಡಿ ಆ ರಸೀತಿಯನ್ನಿಲ್ಲಿ ಸಂದಾಯ ಮಾಡಿದರೆ ಹಪ್ಪಳದಂತಹ ಪುಸ್ತಕ ನಿಮ್ಮದು" ಎಂದನಾತ ಬೆಂಗಾಲಿಯಲ್ಲಿ.

ಹತ್ತು ರೂಪಾಯಿ ಹಣ ಪಾವತಿಸಲು ಇಪ್ಪತ್ತು ರೂಪಾಯಿ ’ಸೈಕಲ್‍ರಿಕ್ಷಾ ಇಯರ್’ ವ್ಯಯ ಮಾಡಬೇಕಾಯಿತು, ಖಗೋಳತಜ್ಞರ ’ಲೈಟ್ ಇಯರಿನಂತೆ’. ಅಂದರೆ ಶಾಂತಿನಿಕೇತನದಲ್ಲಿ ಏನನ್ನಾದರೂ ವ್ಯಾಪಾರ ಮಾಡಲು ಎಷ್ಟು ದೂರ ಹೋಗಬೇಕೆಂದರೆ, ಅದಕ್ಕೆ ಉತ್ತರ ’ಸೈಕಲ್‍ರಿಕ್ಷಾ ಇಯರ್’. ಅಲ್ಲಿ ಕಾರು, ಬಸ್ಸು, ಸ್ಕೂಟರ‍್ಗಳಿಗೆ ಕ್ಯಾಂಪಸ್ಸಿನಲ್ಲಿ ಆಗ ಪ್ರವೇಶವಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಒಂದೇ ಒಂದು ಲಡಾಸ್ ಬೈಕ್ ತರುತ್ತಿದ್ದ ಕಲಾವಿದ ಸುಹಾಸ್ ರಾಯ್‍ರ ಮಗ ಸಮಿತ್ ರಾಯ್. ಆತ ಆಗ (೧೯೯೦) ಅಲ್ಲಿನ ಪ್ರೇಮಲೋಕದ ರವಿಚಂದ್ರನ್!

ಕೊನೆಗೂ ಅಲ್ಲಿ ಹೋಗಿ, ಸಾಲಿನಲ್ಲಿ ನಿಂತು, ಬಂದು, ರಸೀತಿ ಸಂದಾಯ ಮಾಡಿ, ಕೇವಲ ಹತ್ತು ರೂಗಳ ಪುಸ್ತಕಗಳ ಹೊರೆಯನ್ನು ಸೈಕಲ್ಲಿಗೇರಿಸಿ, ಸೂಕ್ಷ್ಮವಾಗಿ ನನ್ನ ರೂಮಿಗೆ ಹೊತ್ತುತರುವಾಗ, ಬೆಂಗಳೂರಿನ ಗಣೇಶ ವಿಸರ್ಜನೆಯ ನೆನಪಾಯಿತು. ಸ್ವಲ್ಪ ಅಲುಗಿದರೂ, ನನ್ನ ತಾತನಿಗಿಂತಲೂ ಹಿರಿದಾದ ಹಪ್ಪಳವೆಂಬ ಪುಸ್ತಕಗಳು ಲಟಲಟನೆ ಮುರಿದುಬೀಳುತ್ತಿದ್ದವು. ಕೊನೆಗೆ ಮನೆಗೆ ತಂದ ಇಪ್ಪತ್ತು ವರ್ಷದ ನಂತರವೂ ಪುಸ್ತಕಗಳನ್ನು ತೆರೆಯದೆ ಹಾಗೇ ಇಟ್ಟುಕೊಂಡಿದ್ದೇನೆ--ಶೋಕೇಸಿನಲ್ಲಿ. ಅವು ನನಗೆ ಪುಸ್ತಕಗಳಲ್ಲ, ಆಂಟಿಕ್ ವಸ್ತುಗಳು!

(೪೪)

ಕಾಗದಕ್ಕೂ ಶಾಂತಿನಿಕೇತನಕ್ಕೂ ಅವಿನಾಭಾವ ಸಂಬಂಧವಿದೆ, ಎಂದೆ. ಈ ಹಿಂದೆಯೇ ಹೇಳದಿದ್ದಲ್ಲಿ, ಈಗಿನ ಈ ಹೇಳಿಕೆಯನ್ನೇ ಆಗ ಹೇಳಿದ್ದು ಎಂದುಕೊಂಡುಬಿಡಿ. ದೇವೆಂದ್ರನಾಥ್ ಮತ್ತು ಅವರ ಪುತ್ರ ರವೀಂದ್ರನಾಥ್ ಟಾಗೂರ್ ಬಿರ‍್ಭ್ಹುಮ್ ಎಂಬ ತಾಲ್ಲೂಕಿನಲ್ಲಿ ಶಾಂತಿನಿಕೇತನದ ಚೌಕಟ್ಟು ಹಾಕಿದ್ದು ಸಾವಿರಾರು ಮರಗಳನ್ನು ನೆಡುವುದರ ಮೊಲಕ. ಈಗ ನೂರು ವರ್ಷಗಳ ಆಯಸ್ಸು ತುಂಬಿರುವ, ಅಥವ ತುಂಬಿದ ಆಯಸ್ಸಿನ ಆ ಮರಗಳ ಹಾಗೆಯೇ ಎದೆ ಸೆಟೆದುಕೊಂಡು ನಿಂತಿವೆ. ಅವುಗಳಿಗಿಂತಲೂ ವಯಸ್ಸಿನಲ್ಲಿ ಕಿರಿದಾದ ಬೆಂಗಳೂರಿನ ಮರಗಳ ಬುಡಕ್ಕೆ ಅಕ್ಷರಶಃ ಕೊಡಲಿ ಏಟು ಬಿದ್ದುದ್ದರಿಂದ, ಈ ಮರಗಳು ಸೇಡು ತೀರಿಸಿಕೊಳ್ಳಲೋ ಎಂಬಂತೆ ಬಿರುಗಾಳಿಗೆ ತರಗೆಲೆಗಳಂತೆ ಉದುರುತ್ತಿವೆ. ಆದರೂ ನಿಸರ್ಗದ ಮೇಧಾವಿತನ ಮೆಚ್ಚಲೇಬೇಕು. ಬೀಳುವಾಗಲೂ ಸಹ ಗುರಿಯಿಟ್ಟು ಜನರ, ಜನರಿರುವ ವಾಹನಗಳ ಮೇಲೆ ಬೀಳುತ್ತಿರುವ ಬೆಂಗಳೂರಿನ ಮರಗಳು ಮನುಷ್ಯನ ಸ್ವಾರ್ಥಕ್ಕೆ ನಿಸರ್ಗ ಸೇಡು ತೀರಿಸಿಕೊಳ್ಳುವ ಅನಿವಾರ್ಯ ಉಪಾಯ.

field_vote: 
Average: 4.6 (5 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೪