ಸಂಪದ ಶ್ರಾವ್ಯ, ೧೪ನೇ ಸಂಚಿಕೆ: ವೈದೇಹಿಯವರೊಂದಿಗೆ...

ವೈದೇಹಿಯವರ ಕ್ರೌಂಚ ಪಕ್ಷಿಗಳು ಕಥಾಸಂಕಲನಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಸಂಪದ ತಂಡ ಅವರನ್ನು ಸಂದರ್ಶಿಸಿತ್ತು. ಅದಾಗಿ ಈಗಾಗಲೇ ಎರಡು ವರ್ಷಗಳು ಸಂದಿವೆ. ಕಾರಣಾಂತರಗಳಿಂದ ಪಾಡ್ ಕಾಸ್ಟ್ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿನ ವೈದೇಹಿಯವರ 'ಇರುವಂತಿಗೆ' ಮನೆಯಲ್ಲಿ ನಡೆಸಿದ ಆಪ್ತ ಮಾತುಕತೆ ಈಗ ನಿಮ್ಮ ಮುಂದಿದೆ.

ರಳ ವ್ಯಕ್ತಿತ್ವದ ವೈದೇಹಿಯವರು ತಮ್ಮ ಸಾಹಿತ್ಯ ಜೀವನ ರೂಪುಗೊಂಡ ಬಗೆ, ತಮ್ಮ ಬಾಲ್ಯ, ಯೌವನದ ದಿನಗಳ ನೆನಪುಗಳನ್ನು ಸಂಪದದೊಂದಿಗೆ ಹಂಚಿಕೊಂಡಿದ್ದಾರೆ. ಸಂಪದದ ಪರವಾಗಿ ಹರಿಪ್ರಸಾದ್ ನಾಡಿಗ್, ಸುಮಾ ನಾಡಿಗ್, ಉದಯವಾಣಿಯ ಉಪಸಂಪಾದಕ ಚಂದ್ರಶೇಖರ ಮಂಡೆಕೋಲು, ಉಡುಪಿಯ ಕನ್ನಡ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಪ್ರತಾಪಚಂದ್ರಶೆಟ್ಟಿ ಹಳ್ನಾಡು ಮತ್ತು ಸಾತ್ವಿಕ್ ಎನ್ ವಿ ವೈದೇಹಿಯವರ ಮನೆಗೆ ಭೇಟಿ ನೀಡಿದ್ದರು. ಎಲ್ಲರನ್ನು ಆತ್ಮೀಯತೆಯಿಂದ ಸ್ವಾಗತಿಸಿದ ವೈದೇಹಿಯವರೊಂದಿಗೆ ಅವರ ಪತಿ ಶ್ರೀನಿವಾಸಮೂರ್ತಿ ಕೂಡ ಇದ್ದರು. ಅಂದು ಭೇಟಿ ಕೊಟ್ಟ ಎಲ್ಲರಿಗೂ ವೈದೇಹಿಯವರೇ ಖುದ್ದಾಗಿ ಒತ್ತು ಶಾವಿಗೆ ಸಿದ್ಧ ಪಡಿಸಿದ್ದು ವಿಶೇಷವಾಗಿತ್ತು. 

ಅವಿನಾಶ್ ಕಾಮತ್, ರಂಗ ಕಲಾವಿದರು, ಮುಂಬೈ.

ಳಲಿದವನೊಬ್ಬ ಆಲದ ಮರದ ನೆರಳಿನಲ್ಲಿ ಕುಳಿತಿರುತ್ತಾನೆ. ಅಲ್ಲಿಯೇ ಅವನ ಕಣ್ಣೆಳೆಯಲಾರಂಭಿಸುತ್ತವೆ. ಒಮ್ಮೆಲೇ ಆತ ಅಲ್ಲಿಂದ ಹಾರಲಾರಂಭಿಸುತ್ತಾನೆ. ಮುಗಿಲಿನೆತ್ತರಕ್ಕೆ ಹಾರಿದವನ ಕಣ್ಣುಗಳಿಗೆ ಅಂದು ಹಬ್ಬ. ಕೆಳಗಿನ ಸುಂದರ ಗುಡ್ಡ-ಬೆಟ್ಟಗಳು, ಮೈ ನವಿರೇಳಿಸುವ ಕಣಿವೆಗಳು, ಒಂದು ಶೀತಲ ನದಿ, ನದಿಯ ದಂಡೆಯಲ್ಲಿ ಕುಳಿತು ಮೊಮ್ಮಗನಿಗೆ ಕತೆಯೊಂದನ್ನು ಹೇಳುತ್ತಿರುವ ಅಜ್ಜಿ, ಈ ಕತೆ ನನಗೋಸ್ಕರವಾಗಿಯೇ ಇದೆ ಎಂದುಕೊಳ್ಳುತ್ತ ಕುಳಿತ ಒಂದು ಪುಟ್ಟ ಜಿರಳೆ, ಪಕ್ಕದಲ್ಲೊಂದು ಅರಮನೆ, ಸಡಗರ, ಸಂಭ್ರಮ. ಮಲಗಿದ್ದ ಆ ವ್ಯಕ್ತಿ ಮುಗುಳ್ನಗುತ್ತ ಎದ್ದೇಳುತ್ತಾನೆ.
ವೈದೇಹಿಯವರ (ಜಾನಕಿ ಶ್ರೀನಿವಾಸ ಮೂರ್ತಿ, ಫೆಬ್ರುವರಿ 12, 1945) ಸಾಹಿತ್ಯ ನೀಡುವ ಅನುಭವವೇ ಇಂಥದ್ದು. ಆಪ್ತವಾಗಿಸುವ ಸಾಹಿತ್ಯವದು. ಅಮೂರ್ತ ಅನುಭೂತಿಗಳಿಗೊಂದು ಮೂರ್ತ ರೂಪ ನೀಡಿ “ಅರೆ ಇದು ನಾನೇ! ಇದು ನನ್ನದೇ ಕತೆ!” ಎನ್ನುವಂತಹ ಭಾವನೆಯನ್ನು ಪ್ರತಿಯೊಬ್ಬ ಓದುಗನಲ್ಲೂ ಮೂಡಿಸುವ ಅನನ್ಯ ಶಕ್ತಿ ವೈದೇಹಿಯವರ ಬರವಣಿಗೆಯ ಅಮೂಲ್ಯ ಸೊತ್ತು. ಬಹುಶಃ ಇದೇ ಕಾರಣದಿಂದಾಗಿ ವೈದೇಹಿಯವರು ಕನ್ನಡದ ಮಹತ್ವಪೂರ್ಣ ಸಾಹಿತಿಯೂ ಹೌದು. ವೈದೇಹಿಯವರ ಬರವಣಿಗೆಯಲ್ಲಿ ವೈಚಾರಿಕತೆಗೆ ಇದ್ದಷ್ಟೇ ಮೌಲ್ಯ ಅವರ ಸರಳ, ನೇರವಂತಿಕೆಯ, ಪ್ರಾಮಾಣಿಕತೆಯ ಹಾಗೂ ಆತ್ಮೀಯತೆಯ ನೇಯ್ಗೆಯುಳ್ಳ (ಕುಂದ)ಕನ್ನಡಕ್ಕೂ ಇದೆ. ಅವರ ಪಾತ್ರಗಳಲ್ಲಿ ಜೀವಂತಿಕೆ ಇದೆ. ಎಲ್ಲೂ ಕೃತ್ರಿಮತೆ ಇಲ್ಲ. ಇವರ ಕತೆಗಳಲ್ಲಿ ಕ್ರೌರ್ಯ ಹಾಗೂ ಕ್ಷುದ್ರತೆಯ ಪ್ರತಿರೂಪವಾಗಿರುವ ಪಾತ್ರಗಳೂ ಕೂಡ ಅಸಹ್ಯ ಹುಟ್ಟಿಸುವುದಿಲ್ಲ, ಓಹ್, ಇದೂ ಮಾನವನ ಒಂದು ಮುಖವಲ್ಲವೇ ಎನಿಸುತ್ತದೆ. ಪಾತ್ರಗಳ ಹೆಣಗಾಟಗಳೂ ನಮ್ಮವೇ ಅನಿಸುತ್ತದೆ. ವೈದೇಹಿಯವರ ಸಾಹಿತ್ಯದ ಇನ್ನೊಂದು ಬಹುಮುಖ್ಯ ಅಂಶವೆಂದರೆ ವಿಶಾಲ ಸ್ತ್ರೀಲೋಕದ ಸೂಕ್ಷ್ಮತೆಗಳು ಅನಾವರಣಗೊಳ್ಳುವುದು. ಅವರ ಮೊದಮೊದಲ ಕೃತಿಗಳಲ್ಲಿ ಸ್ತ್ರೀಯ ಕ್ರಾಂತಿಕಾರೀ ಮನೋಭಾವದ ಎಳೆಗಳಿದ್ದರೂ, ವೈದೇಹಿಯವರನ್ನು ಸಾರಾಸಗಟಾಗಿ ’ಸ್ತ್ರೀವಾದಿ’ ಲೇಖಕಿ ಎಂದು ಬ್ರಾಂಡ್ ಮಾಡಲಾಗದು. ಅವರ ಮೊದಮೊದಲ ಕೃತಿಗಳಲ್ಲಿ ಅವರು ಬೆಳೆದು ಬಂದ ಪರಿಸರದಲ್ಲಿ ಅವರಿಗೆ ಕಂಡುಬಂದ ಅಸಮಾತೆಯನ್ನು ಅವರು ಚಿತ್ರಿಸಿದ್ದಾರೆಂಬುದು ನಿಜವಾದರೂ, ಸಾಹಿತ್ಯ ಲೋಕದಲ್ಲಿ ಹೆಜ್ಜೆಯನ್ನು ಮುಂದಿಡುತ್ತ ಮುಂದಿಡುತ್ತ, ಇವಾಲ್ವ್ ಆಗುತ್ತ ಅವರು ಓರ್ವ ಮಾನವವಾದಿ ಲೇಖಕಿಯಾಗಿದ್ದೂ ಅಷ್ಟೇ ನಿಜ ಹಾಗೂ ವಿಸ್ಮಯಕರ. ವೈದೇಹಿಯವರ ಸಾಹಿತ್ಯ ಇವಾಲ್ವ್ ಆದ ಪರಿಯೇ ಬೆರಗು ಹುಟ್ಟಿಸುವಂಥದ್ದು.
ವೈದೇಹಿಯವರ ಕಾವ್ಯದಲ್ಲಿ ಅಮ್ಮನ ಹಳೆಯ ಸೀರೆಯ ಸುಗಂಧವಿದೆ. ಕತೆಗಳಲ್ಲಿ ಮಣ್ಣಿನ ಸುವಾಸನೆ, ತಾವೇ ತಯಾರಿಸುವ ತಂಬುಳ್ಳಿ ಸಾರಿನ ರುಚಿಯಿದೆ. ಆದರೆ ವೈಯಕ್ತಿಕವಾಗಿ ನನಗೆ ವೈದೇಹಿಯವರ ಮಕ್ಕಳ ನಾಟಕಗಳು ಹಾಗೂ ಆತ್ಮಕಥಾ ನಿರೂಪಣೆಗಳು ಕನ್ನಡ ಸಾರಸ್ವತ ಲೋಕಕ್ಕೆ ವೈದೇಹಿಯವರ ಬಹುದೊಡ್ಡ ಕೊಡುಗೆಗಳು ಎಂದೆನಿಸುತ್ತದೆ. ಅದರಲ್ಲೂ ಬಿ. ವಿ. ಕಾರಂತರ ಆತ್ಮಕಥಾನಕ ’ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಅತ್ಯಂತ ಮಹತ್ವಪೂರ್ಣ ಕೃತಿ. 
ಕನ್ನಡ ಸಾಹಿತ್ಯ ಲೋಕಕ್ಕೆ ವೈದೇಹಿಯವರ ಕೊಡುಗೆ ಅಮೂಲ್ಯವಾದದ್ದು, ಅನನ್ಯವಾದದ್ದು.

ಎ. ಶಿವಶಂಕರ ರಾವ್, ಹಿರಿಯ ಕೃಷಿಕರು, ಅಡ್ಡೂರು (ಮಂಗಳೂರು).

ಶ್ರೀಮತಿ ವೈದೇಹಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಲೇಖಕಿ.

ಇವರು ನನ್ನ ಆಪ್ತರಾಗಿದ್ದ ದಿವಂಗತ ಎ.ವಿ.ಎನ್. ಹೆಬ್ಬಾರರ ಮಗಳು.

ದಿವಂಗತ ಕೋ.ಲ. ಕಾರಂತರ ಬಗ್ಗೆ ಇವರು ಬರೆದಿರುವ ಪುಸ್ತಕಕ್ಕಾಗಿ ನನಗೆ ವೈದೇಹಿ ಅವರ ಬಗ್ಗೆ ಬಹಳ ಗೌರವ. ತನ್ನೂರು ಕುಂದಾಪುರದ ಏಳಿಗೆಗಾಗಿ ಶ್ರಮಿಸಿದವರು ಕೋ.ಲ. ಕಾರಂತರು. ರಸ್ತೆಯ ಬದಿಗಳಲ್ಲಿ ಮರಗಳನ್ನು ನೆಟ್ಟು ಬೆಳೆಸಿದವರು. ಅಲ್ಲಿ ಉತ್ತಮ ಪುಸ್ತಕ ಭಂಡಾರ ಆರಂಭಿಸಿದವರು. ಕೋಟದ ವಿವೇಕ ಜ್ಯೂನಿಯರ್ ಕಾಲೇಜು ಸ್ಥಾಪಿಸಲು ದುಡಿದವರು. ಇಂತಹ ಆದರ್ಶ ವ್ಯಕ್ತಿಯ  ಜೀವನ ಸಾಧನೆಗಳ ಬಗ್ಗೆ ವೈದೇಹಿಯವರು ಬರೆಯದಿದ್ದರೆ ಅದೆಲ್ಲವೂ ದಾಖಲಾಗದೆ ಹೋಗುತ್ತಿತ್ತು.  

 "ಉದಯವಾಣಿ" ಪತ್ರಿಕೆಯಲ್ಲಿ ಪ್ರಕಟವಾದ ವೈದೇಹಿಯವರ "ಮಂಜಮ್ಮ" ಎಂಬ ಸಣ್ಣ ಕತೆ ನನ್ನ ಮೇಲೆ ಬಹಳ ಪರಿಣಾಮ ಬೀರಿತ್ತು. ಈಗಿನ ಕಾಲದಲ್ಲಿ ಕೂಡುಕುಟುಂಬ ಮಾಯವಾಗುತ್ತಿದ್ದು, ಮಕ್ಕಳೆಲ್ಲ ದೂರದೂರ ಹೋಗಿ ನೆಲೆ ನಿಲ್ಲುತ್ತಿರುವಾಗ ಅವರನ್ನು ಸಾಕಿ ಸಲಹಿದ ಹೆತ್ತವರು ವಯೋವೃದ್ಧರಾಗಿ, ಒಂಟಿಯಾಗಿ ಇತರರಿಗೆ ಹೊರೆಯಾಗಿ ಬಾಳಬೇಕಾದ ಪರಿಸ್ಥಿತಿಯನ್ನು ಚಿತ್ರಿಸಿರುವ ಈ ಸಣ್ಣ ಕತೆ ನಮ್ಮ ಹೃದಯ ಕಲಕುತ್ತದೆ. ಇತರ ಭಾಷೆಗಳಲ್ಲಿ ಕೂಡ ಇಂತಹ ಸಣ್ಣ ಕತೆಗಳನ್ನು ಓದಿದ್ದೇನೆ. ಬದಲಾಗುತ್ತಿರುವ ಸಾಮಾಜಿಕ ಸ್ತಿತಿಗತಿಗಳನ್ನು ದಾಖಲಿಸುವ ಇಂತಹ ಸಣ್ಣ ಕತೆಗಳು ಚಾರಿತ್ರಿಕ ದಾಖಲೆಗಳೂ ಆಗುತ್ತವೆ.

ಒಂದು ವರುಷದ ಮುಂಚೆ, ನಾನೊಮ್ಮೆ ಎಂಭತ್ತೆಂಟನೆಯ ವಯಸ್ಸಿನಲ್ಲಿ ಮಣಿಪಾಲಕ್ಕೆ ಹೋಗಿದ್ದಾಗ, "ಇಂತಹ ಹಿರಿಯರ ಜೊತೆ ಮಾತನಾಡಲೇ ಬೇಕು" ಎಂದು ಬಹಳ ಆಸಕ್ತಿಯಿಂದ ನನ್ನೊಡನೆ ಎರಡು ದಿನಗಳ ಕಾಲ ಮಾತನಾಡಿದ್ದರು. ಅವರ ಆ ಆಸಕ್ತಿ ನನ್ನಲ್ಲಿ ಇನ್ನಷ್ಟು ಜೀವನೋತ್ಸಾಹ ತುಂಬಿತ್ತು.

ಶ್ರೀಮತಿ ವೈದೇಹಿ ಅವರು ಇನ್ನೂ ಹಲವು ಸಣ್ಣ ಕತೆ, ಕಾದಂಬರಿಗಳನ್ನು ಬರೆಯುತ್ತಾ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಲಿ ಎಂದು ಹಾರೈಸುತ್ತೇನೆ.


ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವೈದೇಹಿಯವರೊಂದಿಗಿನ ಮಾತುಕತೆ ಬಹಳ ಚೆನ್ನಾಗಿ ಮೂಡಿಬಂದಿದೆ. ಒಂದು ಗಂಟೆ ಮಾತನಾಡಿದರೂ ಇನ್ನೂ ಮಾತನಾಡಬೇಕೆನಿಸುತ್ತಿತ್ತು. ಪ್ರತಾಪಚಂದ್ರರವರು ಮಾತನಾಡುವ ರೀತಿ ನನಗೆ ಬಹಳ ಇಷ್ಟ್ಟ. ಒಟ್ಟಿನಲ್ಲಿ ಸಂಪದ ಶ್ರಾವ್ಯ ತಂಡದವರ ಈ ಉತ್ತಮ ಕಾರ್ಯಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳು.

ಮೊದಲ ಟ್ರಾಕ್ ಸುಮಾರು 37 ನಿಮಿಷ ಕೇಳಿದ ಕೂಡಲೇ ಪ್ರತಿಕ್ರಿಯಿಸಬೇಕೆನಿಸುತ್ತಿದೆ. ನಿಜಕ್ಕೂ ಅದ್ಭುತ! ಸಂದರ್ಶನ ಮಾಡಿದವರ ಪ್ರಶ್ನೆಗಳೂ ತುಂಬಾ ಯೋಗ್ಯವಾಗಿತ್ತು. ವೈದೇಹಿಯವರ ಮಾತು ಕೇಳುತ್ತಾ ಕೇಳುತ್ತಾ ಅರ್ಧ ಗಂಟೆಗಿಂತಲೂ ಹೆಚ್ಚು ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಉದಯೋನ್ಮುಖ ಬರಹಗಾರರಿಗಂತೂ ಒಂದು ಕಾರ್ಯಾಗಾರ ಇದ್ದಂತಿದೆ. ಪುಸ್ತಕಗಳ ಅಧ್ಯಯನ ಜೊತೆಗೆ ಬದುಕಿನ ಅನುಭವ ಇದೆಯಲ್ಲಾ, ಅದಕ್ಕೆ ಅಕ್ಷರ ಕೊಡುವ ಕೆಲಸವನ್ನು ವೈದೇಹಿಯವರು ತುಂಬಾ ಚೆನ್ನಾಗಿ ಮಾಡಿದ್ದಾರೆಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತೆ. ಸಂಪದ ನಿರ್ವಹಣಾ ತಂಡಕ್ಕೆ ತುಂಬು ಹ್ಱುದಯದ ಧನ್ಯವಾದಗಳು.

ಸಂಪದ ನಿರ್ವಹಣೆ ತಂಡದವರು ಸಂಪದ ಶ್ರಾವ್ಯದ ಮುಖೇನ ಶ್ರೀಮತಿ ವೈದೇಹಿಯವರ ಸಂದರ್ಶನದ ಭಾಗಗಳನ್ನು ನೀಡಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ. ವಂದನೆಗಳು

ಮಾನ್ಯರೆ ವೈದೇಹಿಯವರ ಸಂಪದ ಶ್ರಾವ್ಯ ಕೇಳಿದೆ, ವೈದೇಹಿ ಯವರ ಬರಹಗಳನ್ನು ' ಲಂಕೇಶ ಪತ್ರಿಕೆ ' ಯಲ್ಲಿ ಓದಿದ್ದೆ, ಅವರು ಬಳಸಿದ ಕುಂದಾಪುರ ಭಾಷೆಯ ಬನಿ, ವಿಷಯ ಮಂಡನೆ ಪ್ರಾದೇಶಿಕತೆ ಗಮನಸೆಳೆದಿದ್ದವು. ಅವರ ಶ್ರಾವ್ಯವನ್ನು ಕೇಳಿ ಸಂತಸವಾಯಿತು.ಇದೊಂದು ಅರ್ಥಪೂರ್ಣವಾದ ಶ್ರಾವ್ಯ, ನಿಮ್ಮ ತಂಡಕ್ಕೂ ವೈದೇಹಿಯವರಿಗೂ ಧನ್ಯವಾದಗಳು.

ವೈದೇಹಿಯವರು ಯಾವುದೇ "ಇಸಮ್"ನಲ್ಲಿ ಗುರುತಿಸಿಕೊಳ್ಳಲು ಇಷ್ಟ ಪಡುವುದಿಲ್ಲ ಆದರೆ ಅವರದು "ಹ್ಯೂಮನ್ ಇಸಮ್" ಎನ್ನುವುದು ಅವರ ಸಂದರ್ಶನ ವ್ಯಕ್ತಪಡಿಸುತ್ತದೆ. ಇದನ್ನು ದಾಖಲಿಸಿದ ಸಂಪದ ನಿರ್ವಹಣಾ ತಂಡಕ್ಕೆ ನನ್ನ ಹ್ರುದಯಪೂರ್ವಕ ಅಭಿನಂದನೆಗಳು.

ವೈದೇಹಿ ಅವರ ಸಂದರ್ಶನ ಬಹಳ ಚನ್ನಾಗಿ ಬಂದಿದೆ. ಅವರ ಮಾತಿನ ಓಘ, ಅವರ ಕನ್ನಡದ ಸೊಗಡು, ಮಾತನಾಡಿದ ವಿಷಯಗಳ ಬಗೆಗಿನ ಕಾಳಜಿ ಬಹಳ ಇಷ್ಟವಾಯಿತು. ಸಂದರ್ಶಕರು ಪೂರಕವಾದ ಪ್ರಶ್ನೆಗಳನ್ನು ಕೇಳಿ, ವೈದೇಹಿ ಅವರ ಮಾತಿಗೆ ಒಂದು ಒಳ್ಳೆ ವೇದಿಕೆಯನ್ನು ಒದಗಿಸಿಕೊಟ್ಟಿದ್ದಾರೆ. ಸಂಪದದ ಈ ಸಂದರ್ಶನವನ್ನು ಕೇಳುತ್ತಿರುವಾಗಲೇ ಆಕಸ್ಮಿಕವಾಗಿ ವೈದೇಹಿ ಅವರೊಂದಿಗೆ ಮಿಂಚಂಚೆ ವಿನಿಮಯ ಮಾಡಿಕೊಳ್ಳುವ ಪ್ರಸಂಗ ಒದಗಿ ಬಂದಿತ್ತು. ಅನಿರಿಕ್ಷಿತವಾಗಿ ಒದಗಿದ ಅವಕಾಶದಿಂದಾಗಿ ಸಂದರ್ಶನದ ಕೇಳಿ ಪಟ್ಟ ಖುಷಿಯನ್ನು ಅವರಿಗೆ ನೇರವಾಗಿ ತಿಳಿಸಲಾಗಿದ್ದು ಮತ್ತಷ್ಟು ಖುಷಿ ಕೊಟ್ಟಿತು. ಇಂಥ ಒಳ್ಳೆಯ ಸಂದರ್ಶನಕ್ಕಾಗಿ ಸಂಪದ ತಂಡಕ್ಕೆ ಧನ್ಯವಾದಗಳು ಮತ್ತು ಅಭಿನಂದನೆಗಳು.