ಶ್ರಾವಣ ಮಾಸ ಬಂದಾಗ....

3.5

ಶ್ರಾವಣ ಮಾಸ ಬಂದಾಗ....

ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸ ಹೊಸ ಭರವಸೆಯ ಮೂಡಿಸುವ ಮಾಸ. ಪಂಚಮಿ, ಷಷ್ಟಿ, ಅಮಾವಾಸ್ಯೆ, ಪೌರ್ಣಿಮೆ ಎಂದು ಮನೆಯಲ್ಲಿ ಎರಡು ದಿನಕ್ಕೊಮ್ಮೆ ಹಬ್ಬ. ಭೋಜನ ಪ್ರಿಯರಿಗಂತೂ ನಿತ್ಯವೂ ಔತಣದೂಟ.

ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸ ಹೊಸ ಭರವಸೆಯ ಮೂಡಿಸುವ ಮಾಸ. ಪಂಚಮಿ, ಷಷ್ಟಿ, ಅಮಾವಾಸ್ಯೆ, ಪೌರ್ಣಿಮೆ ಎಂದು ಮನೆಯಲ್ಲಿ ಎರಡು ದಿನಕ್ಕೊಮ್ಮೆ ಹಬ್ಬ. ಭೋಜನ ಪ್ರಿಯರಿಗಂತೂ ನಿತ್ಯವೂ ಔತಣದೂಟ.ಶ್ರಾವಣ ಬಂತು ನಾಡಿಗೆ, ಬಂತು ಬೀಡಿಗೆ ಎಂದು ಪ್ರಕೃತಿ ಮಾತೆ ನಲಿವಿನ ಸಂಭ್ರಮದ ಸಿರಿಯನ್ನು ಹೊತ್ತು ಬಡವ ಬಲ್ಲಿದನೆಂಬ ಭೇದವಿಲ್ಲದೆ ಮನೆ ಮನೆಗೆ ಬಂದು ಕದವ ತಟ್ಟಿ ಸಂತೋಷವನ್ನು ನೀಡುವ ಸುಂದರ ಸಮಯ ಇದು ಶ್ರಾವಣ ಮಯ; ಆನಂದಮಯವೂ ಹೌದು.

ಶ್ರಾವಣದಲ್ಲಿ ಮಧುಮೇಹ ಜೀವಿಗಳ ಪಾಡು ಯಾವ ಶತ್ರುವಿಗೂ ಬೇಡ. ಹಲವರ ಮನೆಗಳಲ್ಲಿ ಈ ಮಾಸದಲ್ಲಿ ಮಾಂಸಾಹಾರ ನಿಷಿದ್ಧ. ಇಚ್ಛಿಸಿದಲ್ಲಿ ಮಾವನ(ಹೋಟೆಲ್‌) ಮನೆಯೇ ಗತಿ.

ಹೆಂಗಸರಿಗಂತೂ ಬಿಡುವಿಲ್ಲದ ಕೆಲಸ. ಆಷಾಡದ ಮಳೆಗೆ ಹೆದರಿ ಬೀರುವಿನಲ್ಲಿ ಭದ್ರವಾಗಿ ಇಟ್ಟಿದ್ದ ಸೀರೆಗಳು, ಒಡವೆಗಳು ಶ್ರಾವಣ ಶುರುವಾದ ಕೂಡಲೇ ಒಂದೊಂದಾಗಿ ಹೊರ ಬಂದು ಹಬ್ಬ-ಹರಿದಿನ, ಶುಭಕಾರ್ಯ, ಸಮಾರಂಭಗಳಲ್ಲಿ ತಮ್ಮ ಅಸ್ತಿತ್ವವನ್ನು ಮೆರೆಸುತ್ತವೆ. ಇನ್ನು ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು. ಮಾರುಕಟ್ಟೆಗಳಲ್ಲಿ ತಾಜಾ-ತಾಜಾ ಹಣ್ಣು ಹಂಪಲುಗಳು, ತರಕಾರಿಗಳು, ವಿಧ ವಿಧ ಹೂಗಳ ರಾಶಿ. ಎಲ್ಲೆಲ್ಲೂ ಹಬ್ಬದ ಉತ್ಸಾಹ. ಖರೀದಿ ಭರಾಟೆ.

ಶ್ರಾವಣದಲ್ಲಿ ಬರುವ ಚತುರ್ಥಿಯಂದು ಗೋ ಪೂಜೆ, ಪಂಚಮಿ ನಾಗರಾಜನಿಗೆ, ಗರುಡನಿಗೆ ಷಷ್ಟಿ, ಸಿತಾಳ(ಶೀತಲ್‌)ದೇವಿಗೆ ಸಪ್ತಮಿ, ಬಾಲಕೃಷ್ಣನ ಅಷ್ಟಮಿ. ರಕ್ಷಾಬಂಧನ ಸೋದರನಿಗಾದರೆ, ಮಂಗಳಗೌರಿ, ವರಮಹಾಲಕ್ಷ್ಮೀ ಹಾಗೂ ಚೂಡಿ, ಹೆಂಗೆಳೆಯರಿಗಾಗಿ, ಅಮಾವಾಸ್ಯೆಯಂದು ಪತಿಗಾಗಿ, ಏಕಾದಶಿ ಸಂತಾನ ಪ್ರಾಪ್ತಿಗಾಗಿ, ಋಷಿಪಂಚಮಿ ಸಪ್ತರ್ಷಿಗಳಿಗೆ, ಸಂಪತ್‌-ಶನಿವಾರ ಧನವೃದ್ಧಿಗಾಗಿ, ವರುಣ-ಸಮುದ್ರ ಪೂಜೆ ಪ್ರಕೃತಿಗೆ. ಸಕಲರಿಗೂ ಸುಖ ತರುವ ಶ್ರಾವಣದಲ್ಲಿ ಹಬ್ಬಗಳ ಸುಗ್ಗಿ ಎಂದು ಹಿಗ್ಗಿದರೂ ಜೇಬಿಗಂತೂ ಸದಾ ಖರ್ಚು. ಹಾಗಾಗಿ ಹಬ್ಬಗಳ ಸುಗ್ಗಿಯ ಹೊತ್ತು ಖರ್ಚಿನ ಮಗ್ಗಿಯನ್ನು ಮರೆಯುವುದೇ ಒಳ್ಳೆಯದು.

ಮೂರು ತಿಂಗಳ ಮಳೆಗಾಲದಲ್ಲಿ ಉಗ್ರಗೊಂಡು ಭೋರ್ಗರೆವ ಶರಧಿ ಶ್ರಾವಣ ಹುಣ್ಣಿಮೆಯ ದಿನ ಶಾಂತವಾಗುತ್ತದೆ. ಕರಾವಳಿಯಲ್ಲಿ ಜಾತಿ ಭೇದವಿಲ್ಲದೆ ಮೊಗವೀರರು ಅರಿಶಿನ ಕುಂಕುಮ, ಹೂವು ಹಣ್ಣುಗಳನ್ನು ಕಡಲಿಗೆ ಸಮರ್ಪಿಸಿ, ಕಡಲಿಗೆ ಹಾಲೆರದು ಸಮುದ್ರ ದೇವತೆಯನ್ನು ಪೂಜೆ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ ಕೋಳಿ(ಮೀನು)ಗಾರರು ಅಂದು ನಾರಲ್‌ (ತೆಂಗಿನಕಾಯಿ-ಮೂರು ಕಣ್ಣುಗಳುಳ್ಳ) ಗಂಗೆಯನ್ನೇ ಶಿರದಲ್ಲಿ ಧರಿಸಿದ ಮುಕ್ಕಣ್ಣನನ್ನು ಪೂಜಿಸಿ, ಸಮುದ್ರ ದೇವತೆಗೆ ಕಾಯಿ ಒಡೆದು ಅರಿಶಿನ ಕುಂಕುಮ ಫಲ-ಪುಷ್ಪಗಳನ್ನು ಸಮುದ್ರ ದೇವತೆಗೆ ಅರ್ಪಿಸಿ ಪ್ರಾರ್ಥನೆಗೈಯುತ್ತಾರೆ. ನಾರಿಯಲ್‌ ಅಂದು ತೆಂಗಿನಕಾಯಿಯನ್ನು ಕಡಲಿಗೆ ಒಪ್ಪಿಸುವುದರಿಂದ ನಾರಳ್‌ ಪೂರ್ಣಿಮಾ ಎನ್ನುತ್ತಾರೆ. ಮುಖ್ಯವಾಗಿ ಇದು ಕಡಲ ಪೂಜೆ ಆದರೂ ಕಡಲ ತೀರದಲ್ಲಿ ನೆಲೆಸದವರು ಕೆರೆ, ಬಾವಿ, ನದಿ, ಹೊಳ್ಳಗಳಿಗೂ ಪೂಜೆ ಮಾಡುತ್ತಾರೆ. ಪೂಜೆಯ ನಂತರ ಮೀನುಗಾರರು ಮೀನು ಹಿಡಿಯಲು ಕಡಲಿಗೆ ಇಳಿಯುತ್ತಾರೆ. ಕಡಲ ತೀರದಲ್ಲಿ ಮಳೆಗಾಲದ ಮೂರು ತಿಂಗಳು ಮೀನು ಹಿಡಿಯುವುದು ನಿಷಿದ್ಧ . ಏಕೆಂದರೆ ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಸಮಯ. ಈ ಸಮಯಗಳಲ್ಲಿ ಮೀನು ಹಿಡಿದಲ್ಲಿ ಆರೋಗ್ಯಕ್ಕೆ ಒಳ್ಳೆಯದಲ್ಲ, ಕಡಲ ದೇವತೆ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆ.

ಉತ್ತರಭಾರತ, ಮಹಾರಾಷ್ಟ್ರ, ಗುಜರಾತಿನಲ್ಲಿ ಹುಣ್ಣಿಮೆಯಂದು ರಕ್ಷಾಬಂಧನ. ರಾಖೀ ರಕ್ಷಣೆಯ ಸಂಕೇತ. ಈ ಬಂಧನ ಸೋದರ ಸೋದರಿಯರ ಭಾವನಾತ್ಮಕ ಸ್ಪಂದನ. ತಂಗಿ ಸೋದರನ ಕೈಗೆ ದಾರವನ್ನು ಕಟ್ಟಿ ಆರತಿ ಬೆಳಗಿ, ಸಿಹಿ ತಿನ್ನಿಸಿ ಎಂದೆಂದೂ ಪ್ರೀತಿಯ ರಕ್ಷೆಯ ಆಶಿಸುವ ರಕ್ಷಾಬಂಧನ ಒಂದು ಮಹತ್ವದ ಹಬ್ಬ. ದಾರ ಕಟ್ಟಿಸಿಕೊಂಡ ಸೋದರ ಉಡುಗೊರೆ ನೀಡುತ್ತಾನೆ. ಇದು ಒಡ ಹುಟ್ಟಿದವರು ಒಟ್ಟಾಗಿ ಸೇರಿ ನಲಿವ ದಿನ.

ನಮಗೇನು ಇಲ್ಲವೇ ಎಂದು ಗೊಣಗುಟ್ಟುವ ಗಂಡಸರಿಗೆ ಉಪಾಕರ್ಮ ಅಥವಾ ನೂಲು ಹುಣ್ಣಿಮೆ. ಋಗ್‌, ಯಜುರ್ವೇದಿ ಬ್ರಾಹ್ಮಣರಿಗೆ ಹಳೆ ಜನಿವಾರವನ್ನು ಬಿಚ್ಚಿ ಹೊಸ ಜನಿವಾರವನ್ನು ಧಾರಣೆ ಮಾಡುವ ದಿನ. ನವ ವರನಿಗೆ, ನವ ವಟುವಿಗೆ ಮೊದಲ ಉಪಾಕರ್ಮ ಹಬ್ಬ ಬಹಳ ಜೋರು.

ಪಾರಸೀಕರಿಗೆ ಪತೇತಿ ಶ್ರಾವಣದ ಹುಣ್ಣಿಮೆಯಂದು ಹೊಸ ವರುಷದ ಸಂಭ್ರಮ.

ದಕ್ಷಿಣದಲ್ಲಿ ಅಮಾವಾಸ್ಯೆಯಂದು ಪತಿ ಸಂಜೀವಿನಿ ವ್ರತವಾದರೆ ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ನಡೆಯುವ ಪಿಥೊರಿ ಹಬ್ಬ ಏಳು ಸಪ್ತದೇವತೆಗಳಿಗೆ ಮತ್ತು ಅರವತ್ನಾಲ್ಕು ಯೋಗಿನಿಯರಿಗೆ ಮೀಸಲು. ಪೀಟ್‌ ಎಂದರೆ ಕಲೆಸಿದ ಹಿಟ್ಟಿನಿಂದ ಮಾಡಿದ ದೇವತೆಗಳ ಮೂರ್ತಿಗಳನ್ನು ಸೌಭಾಗ್ಯ ಸಂಪದಗಳಿಗಾಗಿ ಪೂಜಿಸುತ್ತಾರೆ. ರಜಪೂತರಲ್ಲಿ ಒಳ್ಳೆಯ ಪತಿಗಾಗಿ ಕನ್ಯೆಯರು ಅಕ್ಕಿಯ ಮೇಲೆ ಜೋಡಿ ದೀಪಗಳನ್ನು ಇಟ್ಟು ಅರಿಶಿನ ಕುಂಕುಮ ಹೂಗಳಿಂದ ಶಿವನನ್ನು ಆರಾಧಿಸುತ್ತಾರೆ.

ಹಿಮಾಚಲ ಪ್ರದೇಶ ಹಸಿರಿನ ವನಸಿರಿ ಒಲಿದ ನಾಡು. ಅಲ್ಲಿ ಹಸಿರಿನ ಹಬ್ಬ (ಹರಿಯಾಲಿ ತ್ಯೋಹಾರ್‌) ಬನಾರ್‌ ದೇವತೆ (ಬನದೇವಿಗೆ). ಶ್ರಾವಣದಲ್ಲಿ ವಿಶೇಷ ಪೂಜೆ, ಉತ್ಸವಗಳು. ಎತ್ತುಗಳ ಕಾಳಗ ಈ ಹಬ್ಬದ ವಿಶೇಷ. ಶ್ರಾವಣ ಮಾಸದ ಮೂರನೆಯ ಭಾನುವಾರ ಮಿಂಜಾರ (ಜೋಳ) ತ್ಯೋಹಾರ್‌ ಎಂದು (ಜೋಳದ) ಹೂವುಗಳಿಂದ ಶಕ್ತಿ ದೇವತೆ ಪಾರ್ವತಿಗೆ ವಿಶೇಷ ಪೂಜೆ. ಮನೆ ಮಂದಿಯೆಲ್ಲ ಸೇರಿ, ಸಿಹಿ ಹಂಚಿ ಈ ಹಬ್ಬ ಆಚರಿಸುತ್ತಾರೆ.

ಕೃಷ್ಣಪಕ್ಷದ ಚತುರ್ಥಿಯಂದು ಗೋಪಾಲಕರು ಗೋ ಪೂಜೆ ಮಾಡುತ್ತಾರೆ. ಅಂದು ಗೋವುಗಳನ್ನು ಅಲಂಕರಿಸಿ ಮೆರವಣಿಗೆ ಮಾಡುತ್ತಾರೆ. ಮನೆಗಳ ಮುಂದೆ ಗೋ-ಪಾದದ ರಂಗೋಲಿಗಳನ್ನು ಚಿತ್ರಿಸಿ ಕಾಮಧೇನುವಾಗಿ ಕಾಪಾಡು ಎಂದು ಬೇಡುತ್ತಾರೆ.

ಪಂಚಮಿ, ಷಷ್ಠಿಗಳಲ್ಲಿ ನಾಗ-ಗರುಡರನ್ನು ಪೂಜಿಸಿದರೆ ಕೃಷ್ಣ ಪಕ್ಷದ ಸಪ್ತಮಿಯಂದು ಗುಜರಾತಿಗಳು ಸೀತಾಳ(ಶೀತಲ್‌) ಮಾತೆಯನ್ನು ಪೂಜಿಸುತ್ತಾರೆ. ಹೆಸರೇ ಹೇಳುವಂತೆ ಅಂದು ಬರೀ ತಂಪು ಆಹಾರವನ್ನು ಸೇವಿಸುತ್ತಾರೆ. ಕಾಫೀ, ಟೀ ಕೂಡ ನಿಷಿದ್ಧ. ಅಂದು ಪೂರ್ಣದಿನ ಒಲೆ ಹಚ್ಚುವುದಿಲ್ಲ. ಸೀತಾಳ ಮಾತೆ ಎಲ್ಲರನ್ನೂ ತಣ್ಣಗಿರಿಸಲೆಂದು ಬೇಡುತ್ತಾರೆ.

ಭಾರತದಾದ್ಯಂತ ಆಚರಿಸುವ ಕೃಷ್ಣ ಜನ್ಮಾಷ್ಟಮಿ. ಮಹಾರಾಷ್ಟ್ರದಲ್ಲಿ ಮೊಸರು ಕುಡಿಕೆ ಕಟ್ಟಿ ಗೋವಿಂದ ಆಲಾರೆ... ಆಲಾ ಎಂದು ಕೂಗಿದಲ್ಲಿ , ತೂಗಿರೇ ರಂಗನಾ ತೂಗಿರೇ ಕೃಷ್ಣನ್ನಾ ಎನ್ನುತ್ತಾ ಫಲ, ಫಲಾಹಾರಗಳ ಚಪ್ಪರ ಕಟ್ಟಿ ತೊಟ್ಟಿಲನ್ನು ತೂಗುತ್ತಾರೆ ರಾಮನುಜಾಚಾರ್ಯರ ಅನುಯಾಯಿಗಳು. ಉತ್ತರ ಭಾರತದಲ್ಲಿ ಝೂಲಾ(ಜೋಕಾಲಿ) ಕಟ್ಟಿ, ಸ್ನೇಹಿತರು, ಪರಿವಾರದವರೊಡಗೂಡಿ ಕೃಷ್ಣನ ಗುಣಗಾನ ಮಾಡುತ್ತಾ ಭಜಿಸುತ್ತಾರೆ. ಜೀವನ ಜೋಕಾಲಿಯಲ್ಲಿ ಬರುವ ಏರುಪೇರುಗಳಿಂದ ಕಾಪಾಡು ಎಂದು ಕೃಷ್ಣ-ರಾಧೆಯರನ್ನು ಬೇಡುತ್ತಾರೆ. ಗೋವುಗಳನ್ನು ಅಲಂಕರಿಸಿ ಮೆರವಣಿಗೆ ಮಾಡುವ ಪರಿಯೂ ಉಂಟು.

ಕರಾವಳಿಯ ಕೊಂಕಣಿಗರು, ಸಾರಸ್ವತರು ಚೂಡಿ ಕಟ್ಟಿಸಿ, ಶುಕ್ರವಾರ ಭಾನುವಾರಗಳಲ್ಲಿ ತುಳಸೀ ಪೂಜೆ ಮಾಡಿ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ವನವಾಸದಲ್ಲಿ ಸೀತೆ ವನದಲ್ಲಿ ಸಿಕ್ಕ ಪುಷ್ಪಗಳನ್ನು ಗರಿಕೆ ಹುಲ್ಲಿನ ಜೊತೆ ಸೇರಿಸಿ ತುಳಸಿ ಮಾತೆಗೆ ಅರ್ಪಿಸಿ ಕಷ್ಟಗಳನ್ನು ದೂರಮಾಡೆಂದು ಪ್ರಾರ್ಥನೆಗೈದಳಂತೆ. ಈ ಹೂವಿನ ಗುಚ್ಛಕ್ಕೆ ಚೂಡಿ ಎನ್ನುತ್ತಾರೆ. ನವ ವಿವಾಹಿತ ವಧುವಿಗೆ ಮೊದಲ ತುಳಸಿ-ಚೂಡಿ ಹಬ್ಬ ಮೊದಲ ಗೌರಿ ಹಬ್ಬದಂತೆ ಒಂದು ವೈಶಿಷ್ಟ್ಯ. ಹೊಸ್ತಿಲು ಪೂಜೆ ಮಾಡಿ ಮಹಾಲಕ್ಷ್ಮಿಯನ್ನು ಮನೆಗೆ ಆಹ್ವಾನಿಸುತ್ತಾರೆ.

ರಾಜಸ್ಥಾನದಲ್ಲಿ ತೀಜ್‌- ಶಕ್ತಿ ಸ್ವರೂಪಿಣಿ ಪಾರ್ವತಿಗಾಗಿ ಆಚರಿಸುವ ಶ್ರಾವಣದ ಹಬ್ಬ. ಜೈಪುರದಲ್ಲಿ ಇದು ಉತ್ಸವದ ಹಬ್ಬ. ಆನೆ, ಕುದುರೆಗಳನ್ನು ಅಲಂಕರಿಸಿ ಅಂಬಾರಿಯ ಮೇಲೆ ಪಾರ್ವತಿಯನ್ನು ಇಟ್ಟು ರಥೋತ್ಸವ ಆಚರಿಸುತ್ತಾರೆ. ಈ ಹಬ್ಬದಲ್ಲಿ ಮುಖ್ಯ ಪ್ರಸಾದ ಲಾಡು.

ದೇಶದಾದ್ಯಂತ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಶ್ರಾವಣ ಮಾಸದದಲ್ಲಿ ಆಚರಿಸುವ ಹಬ್ಬಗಳಲ್ಲಿ ದೇವರ ಪ್ರಾರ್ಥನೆ ಮುಖ್ಯ ಪಾತ್ರವಾದರೂ ಪತಿ, ಒಡಹುಟ್ಟಿದವರು, ಗೋವು, ನಾಗ, ಗರುಡ, ಋಷಿಗಳು, ಗ್ರಹಗಳು, ಶಕ್ತಿ ದೇವತೆ, ಮಹಾಲಕ್ಷ್ಮೀ, ನವವಿವಾಹಿತರಿಗೆ, ನವ ವಟುವಿಗೆ ಹೀಗೆ ಎಲ್ಲರಿಗೂ ಶುಭದಾಯಕ ಆಗಿರಲಿ ಎಂದು ವಿವಿಧ ರೀತಿಯಲ್ಲಿ ಆಚರಿಸುವ ಹಬ್ಬಗಳುಂಟು; ಆದ್ದರಿಂದಲೇ ಹೇಳುವುದು ಶ್ರಾವಣ ಮಾಸಗಳ ಮಾಸ ! ಎಲ್ಲರಿಗೂ ಪ್ರಿಯವಾದ ಮಾಸ.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ವಾಣಿಯವರೇ ಶ್ರಾವಣದ ಬಗ್ಗೆ ಸಂಪೂರ್ಣ ಮಾಹಿತಿಯೋಳಗೊಂಡ ಲೇಖನ ತುಂಬಾ ಹಿಡಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+೧
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು, ...ನಿಮ್ಮ ಕವನಗಳು ಮನ ಮುಟ್ಟಿದವು. ಹೀಗೆಯೆ ನಿಮ್ಮ ಮನದಾಳದ ಭಾವನೆಗಳನ್ನು ಹೊರಸೂಸಿ. ವಾಣಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು, ವೆಂಕಟೇಶ್ ಕಾಮತ್ ಕುಂಬ್ಳೆ ಅವರಿಗೆ, ನಿಮ್ಮ ಕವನಗಳು ಮನ ಮುಟ್ಟಿದವು. ನಿಮ್ಮ ಮನದಾಳದ ಭಾವನೆಗಳನ್ನು ಹೀಗೆಯೇ ಹೊರ ಸೂಸಿ. ವಾಣಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಾರತವೆಲ್ಲ ಅಡ್ಡಾಡಿ ಬಂದಂತಾಯಿತು ಶ್ರಾವಣ ಮಾಸದಿ ... ಅಭಿನಂದನೆಗಳು ವಾಣಿಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು..ಕುಳಿತಲ್ಲಿಯೇ ಸಂಸ್ಕೃತಿ ಪರಿಚಯ ಪ್ರವಾಸ ವಾಣಿಯವರಿಂದ :).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

+1 ಗಣೇಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು, ವೈವಿಧ್ಯತೆಯಿಂದ ತುಂಬಿರುವ ಸುಂದರ ಸಂಸ್ಕೃತಿ ನಮ್ಮದು, ವಾಣಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು, ಶ್ರೀನಾಥ್, ಅದೆನಿತು ವೈವಿಧ್ಯ, ಎಲ್ಲದಕ್ಕೊ ಒಂದು ಅರ್ಥವಿದೆ, ಒಪ್ಪುತ್ತೀರಾ?. ವಾಣಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರಾವಣದ ವಿವರಗಳು ಚೆನ್ನಾಗಿ ಮೂಡಿವೆ. ಧನ್ಯವಾದಗಳು - ಅರವಿಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು ಅರವಿಂದ, ವಾಣಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಾಣಿಯವರೆ, ಸಂಪದಕ್ಕೆ ನನ್ನದು ಹೊಸ ಸೇರ್ಪಡೆ. ಸಂಪೂರ್ಣ ಮಾಹಿತಿಗಳನ್ನು ಒಳಗೊಂಡ ನಿಮ್ಮ ಲೇಖನ ' ಶ್ರಾವಣ ಮಾಸ.......' ದ ಜೊತೆಗೆ ನಿಮ್ಮ ಇತರ ಬರಹಗಳನ್ನು ಓದಲು ಕುಳಿತೆ. ಪ್ರತಿ ಬರಹ ಓದುವಾಗಲೂ ನೀವು ಆಯ್ದುಕೊಂಡ ವಿಷಯ ಹಾಗೂ ಅದರ ಬಗ್ಗೆ ವಿಶಾಲವಾದ ಮಾಹಿತಿ ಸಂಗ್ರಹ, ವಿಷಯಕ್ಕಾಗಿ ನೀವು ಅನುಸರಿಸುವ 'ಕೃಷಿ' ಮಾರ್ಗ ನಿಜವಾಗಲೂ ಅದ್ಭುತ!!.. ನಿಮ್ಮ ಪರಿಚಯದಲ್ಲಿ ಹೇಳಿಕೊಂಡಂತೆ ತೋಚಿದ್ದನ್ನು ಗೀಚುವವರು ನೀವಲ್ಲ ಬಿಡಿ...:) ಮಾಹಿತಿಪೂರ್ಣ ಲೇಖನಗಳಿಗಾಗಿ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರ ವಿದ್ಯಾ, ವಂದನೆಗಳು ನಿಮ್ಮ ಪ್ರತಿಕ್ರಿಯೆಗೆ. ಇಂತಹ ಪ್ರೋತ್ಸಾಹ ನನ್ನಂತಹ ಗೀಚುವ ಬರಹಗಾರರಿಗೆ ಇಂಬು. ವಿಶ್ವಾಸದಿಂದ, ವಾಣಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಲೇಖನ ಬಹಳ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು, , ವಾಣಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಾಣಿಯವರಿಗೆ ನಮಸ್ಕಾರ ! ಲೇಖನ ಚೆನ್ನಾಗಿದೆ, ಮಾಹಿತಿ ಪೂರ್ಣವಾಗಿದೆ. ನನಗೆ ಈ ಹಾಡು ನೆನಪಿಗೆ ಬಂತು......ಶ್ರಾವಣ ಮಾಸ ಬಂದಾಗ...ಆನಂದ ತಂದಾಗ..." ~ಮೀನಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.