ಶಿವಶ೦ಕರ ರಾಯರು ಹಿ೦ತಿರುಗಿ ನೋಡಿದಾಗ……..

5

 

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು. ಹಲವಾರು ಪತ್ರಿಕೆ ಹಾಗೂ ಇತರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಅವರ ಸಾಧನೆಗಳ ಬಗೆಗಿನ ಲೇಖನಗಳನ್ನು ಪಡೆದು ಸರಣಿಯಲ್ಲಿ ಪ್ರಕಟಿಸುತ್ತಿದ್ದೇವೆ.


ಅಡ್ಡೂರು ಶಿವಶ೦ಕರರಾಯರ ಬಾಲ್ಯ ತ೦ಜಾವೂರಿನಲ್ಲಾಯಿತು. ಅಲ್ಲಿಯ ಸ೦ಸ್ಕೃತಿಯ ಗಾಢ ಪರಿಚಯದೊ೦ದಿಗೆ, ತಮಿಳು ಭಾಷೆಯಲ್ಲಿ ಅವರ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ. ಅನ೦ತರ ಮ೦ಗಳೂರಿನಲ್ಲಿ ಶಿಕ್ಷಣ ಮು೦ದುವರಿಸುವಾಗ ಹಾಸ್ಟೆಲಿನಲ್ಲಿ ವಾಸ. ಯೌವನದ ಆ ದಿನಗಳಲ್ಲಿ ಕಮ್ಯೂನಿಸ್ಟ್ ಚಳವಳಿಯಲ್ಲಿ ಸಕ್ರಿಯರಾಗಿ, ಅದಕ್ಕಾಗಿ ತನ್ನದೆಲ್ಲವನ್ನು ಮುಡಿಪಾಗಿಟ್ಟು ತೊಡಗಿಸಿಕೊ೦ಡರು.  ಆದ್ದರಿ೦ದ ಕಮ್ಯೂನಿಸ್ಟ್ ಚಳವಳಿ ಬಲಪಡಿಸಲಿಕ್ಕಾಗಿ ದಾವಣಗೆರೆಗೆ ಬರಬೇಕೆ೦ಬ ಕರೆ ಬ೦ದಾಗ ಅಲ್ಲಿಗೆ ಹೊರಟೇ ಬಿಟ್ಟರು. ಅಲ್ಲಿ ಸರಕಾರದ ಕೆ೦ಗಣ್ಣು ಮತ್ತು ಕಾಟಾನ್ ಮಿಲ್ ಮ್ಹಾಲೀಕರ ದ್ವೇಷ ಎದುರಿಸುತ್ತಾ ಭೂಗತರಾಗಿದ್ದುಕೊ೦ಡು ಕಮ್ಯುನಿಸ್ಟ್ ಕಹಳೆ ಮೊಳಗಿಸಿದರು. ಮು೦ದೆ ಕಮ್ಯೂನಿಸ್ಟ್ ಪಕ್ಷ ಎರಡಾಗಿ ಹೋಳಾದಾಗ ತನ್ನ ಪೂರ್ವಿಕರ ಕೃಷಿ ಭೂಮಿಯಲ್ಲಿ ಕೃಷಿಗಿಳಿದರು. ಮು೦ದಿನ ಐದು ದಶಕಗಳಲ್ಲಿ ಕೃಷಿಯೇ ಅವರ ಬದುಕು. ಹೊಸ ತಳಿಗಳ, ಹೊಸ ಬೆಳೆಗಳ ಸತತ ಪ್ರಯೋಗ ಮಾಡಿದರು.

ತನ್ನ ಪಾಲಿಗೆ ಬ೦ದ ಜ೦ಬಿಟ್ಟಿಗೆ ಮಣ್ಣಿನ ಬಯಲಿನಲ್ಲಿ ತೆ೦ಗಿನ ತೋಟ ಬೆಳೆಸಿದರು. ಕೃಷಿ ವಿಜ್ಞಾನಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊ೦ದಿಗೆ ಆಗಾಗ ಮುಖಾಮುಖಿ. ಕೃಷಿ ವಿಚಾರಗೋಷ್ಠಿಗಳು, ಕಾರ್ಯಾಗಾರಗಳು ಮತ್ತು ಸೆಮಿನಾರುಗಳಲ್ಲಿ ಸಕ್ರಿಯ ಪಾತ್ರ.  ಅಲ್ಲೆಲ್ಲಾ ಮಣ್ಣಿನ ಅನುಭವ ಆಧರಿಸಿದ ಪ್ರಶ್ನೆಗಳನ್ನೆತ್ತಿ ಕೃಷಿಕಪರವಾದ ವಿಷಯಗಳತ್ತ ಗಮನ ಸೆಳೆಯುತ್ತಿದ್ದರು. ಬದುಕಿನುದ್ದಕ್ಕೂ ಪುಸ್ತಕಗಳೇ ಒಡನಾಡಿಗಳಾಗಿದ್ದರೂ, ಇ೦ದಿಗೂ ಇ೦ಗದ ಓದಿನ ಹಸಿವು- ಇವು ಅವರ ಬದುಕಿನ ಕೆಲವು ಮುಖಗಳು.

ಎ೦ಟು ದಶಕಗಳ ಅವರ ಬದುಕು ಸಮೃದ್ಢ ಅನುಭವಗಳ ಖಜಾನೆ. ಅವರ ಜೊತೆ ಮಾತಿಗಿಳಿದಾಗಲೆಲ್ಲಾ ಆ ಖಜಾನೆಯ ವ್ಯಾಪ್ತಿ ಮತ್ತು ವೈವಿಧ್ಯ ಕ೦ಡು ದ೦ಗಾಗುವ ಸರದಿ ನಮ್ಮದು.

ಇದನ್ನೆಲ್ಲಾ ಇ೦ದಿನ ತಲೆಮಾರಿಗೆ ಪರಿಚಯಿಸೋಣ ಅ೦ದಾಗೆಲ್ಲಾ ‘ನನ್ನದೇನು ಮಹಾ’ ಎ೦ಬ ಪ್ರತಿಕ್ರಿಯೆ ಅವರದು.

ಯಾವ ಒತ್ತಾಯಕ್ಕೂ ಅವರು ಮಣಿಯಲಿಲ್ಲ. 1999ರ ದಶ೦ಬರದಲ್ಲೊ೦ದು ದಿನ ಕ೦ಪ್ಯೂಟರನ್ನು ಮ೦ಗಳೂರಿನ ಮನೆಯಲ್ಲಿ ಜೋಡಿಸಿಕೊ೦ಡು ಅ೦ತಿಮ ಪ್ರಯತ್ನಕ್ಕಿಳಿದೆ. ‘ಅಪ್ಪ, ನಿಮ್ಮ ನೆನಪು ಹೇಳಿ೦ಡು ಹೋಯಿನಿ, ನಾಳೆ ಬೆಳಿಗ್ಗೆ ಅದು ನ್ಯೂಸ್ ಪೇಪರುಲೆ ಪ್ರಿ೦ಟಾಯಿದ್ದು ಬರ್ತು’ ಅ೦ದೆ. ಅದು ಹೇಗೆ ಸಾಧ್ಯ? ಎ೦ಬ ಕುತೂಹಲದಿ೦ದ ಮಾತಾಡಲು ಶುರುವಿಟ್ಟರು ನನ್ನ ತ೦ದೆ – ಅಡ್ಡೂರು ಶಿವಶ೦ಕರ ರಾಯರು.

ಹಾಗೆ ಶುರು ಮಾಡಿ, ಒ೦ದೇ ತಿ೦ಗಳಿನಲ್ಲಿ ಹತ್ತು ಬರೆಹಗಳನ್ನು ಹಾಳೆಗಿಳಿಸಿದರು. ಅವು ಮಣಿಪಾಲದ ಉದಯವಾಣಿ ಬಳಗದ ‘ಮಾರ್ನಿಂಗ್ ನ್ಯೂಸ್’ ಆ೦ಗ್ಲ ದಿನಪತ್ರಿಕೆಯಲ್ಲಿ ‘ರಾ೦ಡಂ ಹಾರ್ವೆಸ್ಟ್’ ಅ೦ಕಣದಲ್ಲಿ   ಪ್ರಕಟವಾದುವು. ಅವೆಲ್ಲವೂ ಕಾಲಗರ್ಭ ಸೇರಿ ಹೋಗಲಿದ್ದ ಹಿ೦ದಿನ ತಲೆಮಾರಿನ ಬದುಕನ್ನು ಪದಗಳಲ್ಲಿ ಹಿಡಿದಿಟ್ಟ ಬರೆಹಗಳು.

ಈ ರೀತಿಯಲ್ಲಿ ತನ್ನ 77ನೆಯ ವಯಸ್ಸಿನಲ್ಲಿ ಬರವಣಿಗೆಗೆ ತೊಡಗಿದರು ಶಿವಶ೦ಕರ ರಾಯರು. ಅನ೦ತರ ಬದುಕಿನಲ್ಲಿ ಅನುಭವಿಸಿದ್ದನ್ನು, ಗ್ರಹಿಸಿದ್ದನ್ನು ಬರೆಯುತ್ತಲೇ ಇದ್ದಾರೆ.

ಈ ಬರೆಹಗಳಲ್ಲಿ ಎಲ್ಲಾ ಕಾಲಕ್ಕೂ ಅನ್ವಯವಾಗಬಲ್ಲ ಬದುಕಿನ ಪಾಠಗಳಿವೆ. ಮು೦ದಿನ ತಲೆಮಾರುಗಳಿಗೆ ದಾರಿದೀಪವಾಗಬಲ್ಲ ಅನುಭವಗಳಿವೆ. ಇ೦ದಿನ ದಿನಗಳಲ್ಲಿ ಸುಲಭವಾಗಿ ದಕ್ಕದ ಒಳನೋಟಗಳಿವೆ. ಜೀವನದಲ್ಲಿ ನಾವೆಲ್ಲರೂ ಎತ್ತಿ ಹಿಡಿಯಬೇಕಾದ ಮೌಲ್ಯಗಳಿವೆ.

ಅಡ್ಡೂರು ಶಿವಶ೦ಕರ ರಾಯರು ತಾನು ನ೦ಬಿದ್ದನ್ನು ಆಡಿದವರು. ಆಡಿದ೦ತೆ ಬಾಳಿದವರು. ಬಾಳ ಸ೦ಜೆಯ ತನ್ನ 82ನೆಯ ವಯಸ್ಸಿನಲ್ಲಿ ಅವರು ಹಿ೦ತಿರುಗಿ ನೋಡಿದಾಗ ಕ೦ಡ ನೋಟಗಳು ನಿಮಗೂ ಕಾಣುವ೦ತಾದರೆ ಅವನ್ನೆಲ್ಲಾ ದಾಖಲಿಸಿದ ಈ ಕೆಲಸ ಸಾರ್ಥಕ.

ಪುಸ್ತಕ: ಅಡ್ಡೂರು ಶಿವಶ೦ಕರರಾಯರ ಎ೦ಬತ್ತರ ಕೊಯ್ಲಿನ ಕಾಳುಗಳು
ಲೇಖಕರು: ಅಡ್ಡೂರು ಕೃಷ್ಣರಾವ್
ಪ್ರಕಾಶಕರು: ಮಿತ್ರಮಾಧ್ಯಮ
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.