ವೈದ್ಯಕೀಯ ವಿದ್ಯಾಲಯಗಳಲ್ಲಿ ಕಲಿಸದ ವಿಷಯವೇನೆಂದರೆ……!

4.8

ಅಸಲಿಗೆ ನಾನೇಕೆ ವೈದ್ಯನಾಗಬೇಕೆಂದುಕೊಂಡಿದ್ದೆ ಎನ್ನುವುದು ನನಗೆ ನೆನಪೇ ಇಲ್ಲ. ಆದರೆ ವೈದ್ಯನಾದ ಮೇಲೆ ನನ್ನ ವರ್ತನೆ ಉಳಿದೆಲ್ಲ ವೈದ್ಯರಿಗಿಂತ ತೀರ ಭಿನ್ನವೇನಾಗಿರಲಿಲ್ಲ. ನನ್ನಲ್ಲೊಂದು ಹೆಮ್ಮೆಯಿತ್ತು. ನಾನೊಬ್ಬ ವೈದ್ಯನೆನ್ನುವ ಗರ್ವ ಮೀರಿದ ಅಹಂಕಾರವಿತ್ತು. ನನ್ನಲ್ಲಿದ್ದ ಅಹಮಿಕೆಗೆ ಮೊದಲ ಪೆಟ್ಟು ಬಿದ್ದಿದ್ದು ಸರಿಸುಮಾರು ಮೂವತ್ತು ವರ್ಷಗಳ ಹಿಂದೆ. ಅದೊಂದು ನಸುಕಿನ ಜಾವಕ್ಕೆ ಮಹಿಳೆಯೊಬ್ಬಳು ಮೂವತ್ತರ ಹರೆಯದ ತನ್ನ ಪತಿಯ ಶವವನ್ನು ನಮ್ಮ ಆಸ್ಪತ್ರೆಗೆ ತಂದಿದ್ದಳು. ತನ್ನ ಗಂಡ ತೀರಿಕೊಂಡಿದ್ದಾನೆಂಬ ಸತ್ಯವನ್ನು ಅರಗಿಸಿಕೊಳ್ಳಲಾಗದ ಆಕೆ, ನನ್ನ ಮೊಣಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು ಬಿಕ್ಕುತ್ತ, “ಡಾಕ್ಟರ್, ನನ್ನ ಗಂಡ ಏಕೆ ಸತ್ತ.’? ಎಂದು ಪ್ರಶ್ನಿಸಿದಳು. ಅದೊಂದು ಪ್ರಶ್ನೆ ನಾನೊಬ್ಬ ದೊಡ್ಡ ವೈದ್ಯನೆನ್ನುವ ಗರ್ವವನ್ನು ಒಂದೇ ಪೆಟ್ಟಿಗೆ ಮುರಿದುಹಾಕಿತ್ತು. ಆಕೆ ತನ್ನ ಪತಿ’ಹೇಗೆ’ಸತ್ತ ಎಂದು ಪ್ರಶ್ನಿಸಿದ್ದರೆ ನಾನು ಆಕೆಗೆ ಹತ್ತಾರು ಕಾರಣಗಳನ್ನು ಕೊಡಬಹುದಿತ್ತು. ಅವನಿಗೆ ಹೃದಯಾಘಾತವಾಗಿದೆಯೆಂದೋ ಅಥವಾ ಅವನ ರಕ್ತದೊತ್ತಡ ಕುಸಿದಿದ್ದರಿಂದ ಸತ್ತನೆಂದೋ ಸುಳ್ಳುಹೇಳಿಬಿಡಬಹುದಾಗಿತ್ತು. ಆದರೆ ಆಕೆ ಕೇಳಿದ್ದು ತನ್ನ ಗಂಡ ‘ಏಕೆ’ ಸತ್ತ ಎನ್ನುವ ಪ್ರಶ್ನೆ. ನಿಜಕ್ಕೂ ಬಲು ಕ್ಲಿಷ್ಟ ಪ್ರಶ್ನೆಯದು. ಆತನಿಗೆ ಕೇವಲ ಮೂವತ್ತು ಚಿಲ್ಲರೆ ವರ್ಷಗಳಷ್ಟು ವಯಸ್ಸು. ಆತನ ರಕ್ತದೊತ್ತಡ, ಸಕ್ಕರೆಯ ಮಟ್ಟ ತೀರ ಸಾಮಾನ್ಯವಾಗಿದ್ದವು. ಹೃದಯವೂ ಗಟ್ಟಿಮುಟ್ಟಾಗಿಯೇ ಇತ್ತು. ಆದರೂ ಆತ ಏಕೆ ಸತ್ತ ಎನ್ನುವ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ. ನಿಜ ಹೇಳಬೇಕೆಂದರೆ ಅಂಥದ್ದೊಂದು ಪ್ರಶ್ನೆಗೆ ಉತ್ತರ ವೈದ್ಯಕೀಯ ಲೋಕಕ್ಕೂ ಇದುವರೆಗೆ ಸಿಕ್ಕಿಲ್ಲ. ಅದೊಂದು ಪ್ರಶ್ನೆ ನನ್ನನ್ನು ತುಂಬ ಕಾಲ ಬೆನ್ನುಬಿಡದೇ ಕಾಡಿತ್ತು. ‘ಏಕೆ’ ಎನ್ನುವ ಸಂಕೀರ್ಣ ಪ್ರಶ್ನೆಯೇ ನನ್ನನ್ನು ತತ್ವಶಾಸ್ತ್ರ, ಧರ್ಮ, ವೇದಾಂತಗಳತ್ತ ಆಕರ್ಷಿಸಿತ್ತು. ಅಂತಹ ಸವಾಲಿನ ಜವಾಬು ಹುಡುಕುತ್ತ ಹೊರಟ ನನಗೆ ಆಧುನಿಕ ವೈದ್ಯ ಲೋಕದ ದೌರ್ಬಲ್ಯಗಳ ಪರಿಚಯವೂ ಆಯಿತು”
ಹೀಗೆ ಬರೆಯುತ್ತ ಸಾಗುತ್ತಾರೆ ಡಾ.ಬಿ ಎಮ್ ಹೆಗ್ದೆ ತಮ್ಮ What Doctors dont Get to Study in Medical School ಎನ್ನುವ ಕೃತಿಯಲ್ಲಿ.  ಎರಡು ವಾರಗಳ ಹಿಂದೆ ಒಂದು ಸಣ್ಣ ಕುತೂಹಲದಿಂದ ಈ ಪುಸ್ತಕವನ್ನು ಓದುತ್ತಿದ್ದೆ. ಆದರೆ ಪುಸ್ತಕವನ್ನು ಸಂಪೂರ್ಣ ಓದಿ ಮುಗಿಸುವ ಹೊತ್ತಿಗೆ ಈ ಪುಸ್ತಕದ ಬಗ್ಗೆ, ಹೊತ್ತಗೆಯಲ್ಲಿನ ಕೆಲವು ಅದ್ಭುತ ವಿಷಯಗಳ ಬಗ್ಗೆ ನಿಮಗೆ ತಿಳಿಸಲೇಬೇಕೆನ್ನುವ ಹುಕಿ ಮತ್ತೆ ನನ್ನೊಳಗೆದ್ದಿದೆ. ಸುಮಾರು ಐದೂವರೆ ನೂರು ಪುಟಗಳಷ್ಟು ಗಾತ್ರದ ಈ ಪುಸ್ತಕ ನಿಜಕ್ಕೂ ಒಂದು ಅದ್ಭುತ ಕೃತಿ. ಪುಟದಿಂದ ಪುಟಕ್ಕೆ ಓದಿಸಿಕೊಳ್ಳುತ್ತ ಸಾಗುವ ತೀರ ಸರಳ ಆಂಗ್ಲಭಾಷೆಯ ಪುಸ್ತಕವಿದು. ವೈದ್ಯಕೀಯ ಲೋಕದ ರಾಜಕೀಯಗಳು, ಕಾಸಿಗಾಗಿ ನಡೆಯುವ ವೈದ್ಯಲೋಕದ ಅನಾಚಾರಗಳು, ಲಾಭಕ್ಕಾಗಿ ಕುತಂತ್ರ ನಡೆಸುವ ಔಷಧ ಉದ್ದಿಮೆಗಳ ಸತ್ಯವನ್ನು ನೀವು ಅರಿಯುತ್ತ ಹೋದಂತೆ ಬೆಚ್ಚಿಬೀಳುವುದು ಸುಳ್ಳೇನಲ್ಲ. ಅದರಲ್ಲೂ ವೈದ್ಯಲೋಕವೇ ಕೆಲವು ಕಾಯಿಲೆಗಳಿಗೆ ಅನಗತ್ಯ ಪ್ರಚಾರ ನೀಡಿ, ಜನಮಾನಸದಲ್ಲಿ ಅವುಗಳ ಭಯ ಹುಟ್ಟಿಸುವ ಪರಿಯ ಬಗ್ಗೆ ನೀವು ಓದುತ್ತಿರುವಂತೆಯೇ ಭಯ ಬೀಳುತ್ತೀರಿ ಎಂದರೆ ಅತಿಶಯೋಕ್ತಿಯಾಗಲಾರದು. ಆಂಗ್ಲ ಔಷಧ ಪದ್ದತಿಯ (Allopathy)ಪ್ರತಿಪಾದಕರು ತಮ್ಮ ಕ್ಷೇತ್ರದ ವೈಯಕ್ತಿಕ ಹಿತಾಸಕ್ತಿಗಾಗಿ ಹೇಗೆ ವ್ಯವಸ್ಥಿತವಾಗಿ ಪರ್ಯಾಯ ಔಷಧ ಪದ್ದತಿಗಳ ವಿರುದ್ಧ ಷಡ್ಯಂತ್ರವನ್ನು ರೂಪಿಸುತ್ತಾರೆನ್ನುವುದರ ಮಾಹಿತಿಯನ್ನು ತಿಳಿದುಕೊಂಡಾಗ ವೈದ್ಯಲೋಕದ ಭೂಗತ ಮುಖದ ಅನಾವರಣವೂ ಓದುಗನೆದುರಿಗಾಗುತ್ತದೆ. ಮೂಲತಃ ಅಲೋಪತಿಯ ವೈದ್ಯರಾಗಿದ್ದರೂ ಸಹ ಭಾರತೀಯ ವೈದ್ಯಪದ್ದತಿಗಿಂತ ಶ್ರೇಷ್ಠವಾದ ಔಷಧೀಯ ಪದ್ದತಿ ಇನ್ನೊಂದಿಲ್ಲವೆನ್ನುವುದು ಹೆಗ್ಡೆಯವರ ಅಭಿಮತ. ಆಯುರ್ವೇದದ ಮಹತ್ವ ಮತ್ತು ಭಾರತೀಯ ವೈದ್ಯಲೋಕದ ಮಹತ್ವವನ್ನು ವಿವರಿಸುವ ಅನೇಕ ಘಟನೆಗಳು ಪುಸ್ತಕದಲ್ಲಿ ದಾಖಲಿಸಲ್ಪಟ್ಟಿವೆಯಾದರೂ, ಎರಡು ಘಟನೆಗಳನ್ನು ಹೇಳದೇ ಹೋದರೆ ನನ್ನ ಲೇಖನ ಅಪೂರ್ಣವಾದಂತೆನಿಸುವುದಂತೂ ಸತ್ಯ.
ನಿಮಗೆ ಭಾರತೀಯ ಜ್ಯೋತಿರ್ವಿಜ್ನಾನಿ, ಗಣಿತಶಾಸ್ತ್ರಜ್ಞ ವರಾಹಮಿಹಿರನ ಬಗ್ಗೆ ಗೊತ್ತಿರಬಹುದು. ಐದನೇಯ ಶತಮಾನದಲ್ಲಿ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಗಣಿತಜ್ಞ ಮಿಹಿರ, ತನ್ನ ನಿಖರವಾದ ಭವಿಷ್ಯವಾಣಿಯಿಂದಲೇ ಪ್ರಸಿದ್ಧನಾದವನು. ವಿಕ್ರಮಾದಿತ್ಯನ ಮಗ ಕಾಡುಹಂದಿಯ ದಾಳಿಯಿಂದ ಮೃತನಾಗುತ್ತಾನೆ ಎನ್ನುವ ಘೋರ ಭವಿಷ್ಯ ನುಡಿದಿದ್ದ ಮಿಹಿರನ ಭವಿಷ್ಯ ಸುಳ್ಳಾದರೇ ಆತನ ಶಿರಚ್ಛೇದನ ಮಾಡುವುದಾಗಿ ವಿಕ್ರಮಾದಿತ್ಯ ಆಜ್ನಾಪಿಸಿದ್ದನಂತೆ. ಆದರೆ ಎಲ್ಲ ಮುನ್ನೆಚ್ಚರಿಕೆಗಳ ಹೊರತಾಗಿಯೂ ವಿಕ್ರಮಾದಿತ್ಯನ ಪುತ್ರ ಹಂದಿ ದಾಳಿಯಿಂದಲೇ ಮೃತನಾದನಂತೆ. ಹಾಗಾಗಿ ಮಿಹಿರ, ಮುಂದೆ ‘ವರಾಹಮಿಹಿರ’ನೆನ್ನುವ ಹೆಸರಿನಿಂದ ಪ್ರಸಿದ್ಧನಾದನೆಂಬ ಪ್ರತೀತಿಯಿದೆ. ಹೀಗಿದ್ದ ವರಾಹಮಿಹಿರ ತನ್ನಿಂದ ರಚಿಸಲ್ಪಟ್ಟ ಗ್ರಂಥವೊಂದರಲ್ಲಿ ‘ಕುಜೇಂದುಹೇತು ಪ್ರತಿಮಾಸಾರ್ಥವಮ’ ಎನ್ನುವ ಸಂಸ್ಕೃತ ಶ್ಲೋಕವೊಂದನ್ನು ದಾಖಲಿಸಿದ್ದಾನೆ. ಸ್ತ್ರೀಯ ದೇಹವನ್ನು ನಿಯಂತ್ರಿಸುವ ಚಂದಿರನ ಕಾರಣದಿಂದಾಗಿಯೇ ಪ್ರತಿಯೊಬ್ಬ ಹೆಣ್ಣು ಪ್ರತಿ ಇಪ್ಪತ್ತೆಂಟು ದಿನಗಳಿಗೊಮ್ಮೆ ರಜಸ್ವಲೆಯಾಗುತ್ತಾಳೆನ್ನುವುದು ಶ್ಲೋಕದ ಭಾವಾರ್ಥ. ವರಾಹಮಿಹಿರನ ಇಂಥಹ ಶ್ಲೋಕವನ್ನು ಓದಿ ತಿಳಿದುಕೊಂಡಿದ್ದ ಅನೇಕ ಪಾಶ್ಚಿಮಾತ್ಯ ವಿಜ್ನಾನಿಗಳು ಆತನ ತತ್ವವನ್ನು ಕಪೋಲ ಕಲ್ಪಿತ ಕಟ್ಟುಕತೆಯೆಂದು ತೀರ್ಮಾನಿಸಿ ಅಣಕವಾಡಿದ್ದರು. ವರಹಾಮಿಹಿರನ ಅಪಹಾಸ್ಯ ಮಾಡಿದ ಭಾರತೀಯ ಬುದ್ದಿವಂತರ ಸಂಖ್ಯೆಯೂ ಕಡಿಮೆಯೇನಿಲ್ಲ. ಆದರೆ ನಿಮಗೆ ಗೊತ್ತೆ..? 2001ರಲ್ಲಿ ಪ್ರಕಟವಾದ ಅಮೇರಿಕಾದ ವೈದ್ಯಕೀಯ ಗ್ರಂಥಗಳ ಬೈಬಲ್ ಎಂದೇ ಹೆಸರುವಾಸಿಯಾಗಿರುವ ಸುಸಿಲ್ ನ ವೈದ್ಯಕೀಯ ಮಹಾಗ್ರಂಥದ 2001ರ ಆವೃತ್ತಿಯ 1202ನೇಯ ಪುಟದಲ್ಲಿ ಈ ಕುರಿತು ವಿವರಿಸುತ್ತ,” ನಮ್ಮ ಪಿಟ್ಯುಟರಿ ಗ್ರಂಥದಲ್ಲಿ ಎರಡರಿಂದ, ಹತ್ತು ನಿಮಿಷಗಳಷ್ಟು ಕಾಲಾವಧಿಯ ಆವರ್ತನಗಳನ್ನುಳ್ಳ ಸಹಜವಾದ ಚಿಕ್ಕದ್ದೊಂದು ಮಿಡಿತವಿದೆ. ಈ ಮಿಡಿತವನ್ನು ಆಧ್ಯಾರೋಪಿಸುವಂತೆ ಬಿಡುಗಡೆಯಾಗುವ ಮಿಡಿತಗಳು ಹೈಪೋಫಿಸಿಯೋಟ್ರೋಪಿಕ್ ಅಂಶಗಳನ್ನು ಅವಲಂಬಿಸಿರುತ್ತವೆ. ಒಂದು ದಿನದ ಕಾಲಾವಧಿಗಿಂತ ಚಿಕ್ಕದಾಗಿರುವ ಮಿಡಿತಗಳು ಅಲ್ಟ್ರೇಡಿಯನ್ ಮಿಡಿತಗಳು ಎಂದು ಕರೆಯಲ್ಪಟ್ಟರೆ, ಸರಿಯಾಗಿ ಇಪ್ಪತ್ನಾಲ್ಕು ಗಂಟೆಗಳ ಕಾಲಾವಧಿಯಷ್ಟಿರುವ ಮಿಡಿತಗಳನ್ನು ಸಿರ್ಕೇಡಿಯನ್ ಮಿಡಿತಗಳು ಎನ್ನಲಾಗುತ್ತದೆ. ಈ ಎರಡು ಬಗೆಯ ಮಿಡಿತಗಳು ಹಲವು ಬಗೆಯ ಪ್ರಕ್ರಿಯೆಗಳಲ್ಲಿ ಭಾಗವಹಿಸಿ, ನಿಸರ್ಗದತ್ತವಾದ ವಿದ್ಯುದ್ದಾವೇಶಪೂರಿತ ಸಂಕೇತಗಳನ್ನು ಅಕ್ಷಿಪಟಲಗಳ ಮೂಲಕ ಗ್ರಹಿಸಿ ಪಯನಿಲ್ ಗ್ರಂಥಿಗೆ ರವಾನಿಸುತ್ತವೆ. ಪಯನಿಲ್ ಗ್ರಂಥಿಗಳಲ್ಲಿ ಹಾರ್ಮೋನಿನ ಸಂಕೇತಗಳಾಗಿ ಬದಲಾಗುವ ವಿದ್ಯುದ್ದಾವೇಶಪೂರಿತ ಸಿಗ್ನಲ್ಲುಗಳು ಸ್ತ್ರೀಯ ಋತುಚಕ್ರವನ್ನು ನಿಯಂತ್ರಿಸುವಲ್ಲಿ ಬಹುಮುಖ್ಯಪಾತ್ರವನ್ನು ವಹಿಸುತ್ತವೆ. ಅಲ್ಟ್ರೇಡಿಯನ್ ಮಿಡಿತಗಳು, ಸಿರ್ಕೆಡಿಯನ್ ಮಿಡಿತಗಳು ಮತ್ತು ವಿದ್ಯುದ್ದಾವೇಶಪೂರಿತ ಸಂಕೇತಗಳನ್ನು ನಿರ್ಧರಿಸುವ ಬಹುಮುಖ್ಯ ಅಂಶಗಳಲ್ಲಿ ಚಂದ್ರನ ಗುರುತ್ವಶಕ್ತಿಯೂ ಒಂದು” ಎಂದು ಬರೆಯಲಾಗಿದೆ. ಹೀಗೆ ಕ್ಲಿಷ್ಟಕರವಾದ ವೈದ್ಯಕೀಯ ಪರಿಭಾಷೆಯಲ್ಲಿ ವಿವರಿಸಲ್ಪಟ್ಟ ಋತುಚಕ್ರದ ಹಿನ್ನಲೆಯನ್ನು, ಯಾವುದೇ ಅತ್ಯಾಧುನಿಕ ತಂತ್ರಜ್ನಾನಗಳಿಲ್ಲದ ಕಾಲದಲ್ಲಿ ತೀರ ಸರಳವಾದ ಶ್ಲೋಕವೊಂದರ ಮೂಲಕವೇ ವಿವರಿಸಿದ್ದ ವರಾಹಮಿಹಿರನ ಅದ್ಭುತ ಪಾಂಡಿತ್ಯದ ಕುರಿತು ತಿಳಿದುಕೊಂಡಾಗ ರೋಮಾಂಚನವಾಗದಿರದು.
ಇದು ಐದನೇಯ ಶತಮಾನದಲ್ಲಿ ನಡೆದ ಕತೆಯಾದರೆ, ತೀರ ಹದಿನೇಳನೇಯ ಶತಮಾನದ ಕತೆಯೊಂದನ್ನು ಸಹ ಡಾ.ಹೆಗ್ಡೆ ಹೇಳುತ್ತಾರೆ. ವೈದ್ಯಕೀಯ ಜಗತ್ತು ಅದೆಷ್ಟೇ ಎತ್ತರಕ್ಕೆ ಬೆಳೆದಿದೆ ಎಂದುಕೊಂಡರೂ ಸಂಪೂರ್ಣವಾಗಿ ನಿರ್ಮೂಲನೆಯಾದ ಕಾಯಿಲೆಗಳ ಪಟ್ಟಿ ತೀರ ಸಣ್ಣದು ಎನ್ನುವ ಕಟುಸತ್ಯ ನಮ್ಮ ವೈದ್ಯಲೋಕದ ಕುರಿತು ಸಣ್ಣದ್ದೊಂದು ನಿರಾಶಾಭಾವ ನಮ್ಮನ್ನಾವರಿಸುವಂತೆ ಮಾಡಿಬಿಡುತ್ತದೆ. ಹಾಗೆ ಸಂಪೂರ್ಣವಾಗಿ ನಿಯಂತ್ರಿಸಲ್ಪಟ್ಟ ಪಿಡುಗುಗಳ ಪೈಕಿ ಸಿಡುಬು ರೋಗವೂ ಒಂದು. 1796ರಲ್ಲಿ ಆಂಗ್ಲ ವೈದ್ಯ ಎಡ್ವರ್ಡ್ ಜನ್ನರ ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದನೆಂಬುದನ್ನು ನಾವೆಲ್ಲರೂ ನಮ್ಮ ಪ್ರೌಢಶಾಲೆಯ ಪಠ್ಯದಲ್ಲಿ ಓದಿ ತಿಳಿದುಕೊಂಡಿದ್ದ ವಿಷಯವೇ. ತನ್ನ ತೋಟದ ಕೆಲಸಗಾರನ ಎಂಟು ವರ್ಷದ ಮಗ ಜೇಮ್ಸ್ ಫಿಫ್ಸ್ ನಿಗೆ ನಿಸ್ಸಾರಗೊಳಿಸಿದ ಸಿಡುಬಿನ ಕೀವನ್ನು ಚುಚ್ಚುಮದ್ದಿನ ಮೂಲಕ ಚುಚ್ಚಿದ ಜೆನ್ನರ್, ತನ್ನ ಪ್ರಯೋಗದಲ್ಲಿ ಯಶಸ್ವಿಯಾದ. ಇಂದಿಗೂ ಆತನ ಯಶಸ್ಸನ್ನು ವೈದ್ಯಕೀಯ ಲೋಕದ ಮಹಾನ್ ಸಾಧನೆ ಎಂದೇ ಬಿಂಬಿಸಲಾಗುತ್ತದೆ. ವೈದ್ಯಲೋಕ ಜೆನ್ನರನಿಗೆ ‘ಪ್ರತಿರೋಧಶಾಸ್ತ್ರದ ಪಿತಾಮಹ’ ಎನ್ನುವ ಬಿರುದು ನೀಡಿ ಗೌರವಿಸಿದೆ. ಹೀಗೆ ಬರೆಯುತ್ತಿರುವಾಗಲೇ ಮತ್ತೊಬ್ಬ ವೈದ್ಯ ಲಂಡನ್ನಿನ ಟಿ ಝೆಡ್ ಹಾಲ್ವೆಲ್ಲರ ಬಗ್ಗೆ ಹೇಳದಿದ್ದರೆ ಸಿಡುಬಿನ ಪ್ರತಿರೋಧಕ ಲಸಿಕಾ ಸಂಶೋಧನೆಯ ಮತ್ತೊಂದು ಮುಖದ ಪರಿಚಯವಾಗದು. ಹದಿನೆಂಟನೆಯ ಶತಮಾನದ ಉತ್ತರಾರ್ಧರಲ್ಲಿ ಸರಿಸುಮಾರು ಇಪ್ಪತ್ತು ವರ್ಷಗಳ ಕಾಲ ಹಿಂದೂಸ್ತಾನಿ ಮಣ್ಣಿನಲ್ಲಿದ್ದುಕೊಂಡು ಇಲ್ಲಿನ ಔಷಧ ಪದ್ದತಿಯನ್ನು ಅಭ್ಯಸಿಸಿದ ಹಾಲ್ವೆಲ್ಲರ ಅಭಿಪ್ರಾಯಗಳನ್ನು ‘Indian Science and Techonology in the Eighteenth Century ‘ ಎನ್ನುವ ಪುಸ್ತಕದಲ್ಲಿ ದಾಖಲಿಸಲಾಗಿದೆ.
ಸಿಡುಬಿನ ಲಸಿಕೆಯ ಕುರಿತು ಬರೆಯುತ್ತ ಟಿ.ಝೆಡ್ ಹಾಲ್ವೆಲ್, “ತುಂಬ ಸಲ ವೈದ್ಯಶಾಸ್ತ್ರದ ಸಂಶೋಧನೆಗಳು ಆಕಸ್ಮಿಕವಾಗಿಯೋ, ಉದ್ದೇಶಪೂರಿತವಾಗಿಯೋ ಅದಾಗಲೇ ಅಸ್ತಿತ್ವದಲ್ಲಿರುವ ಪ್ರಕಾರವೊಂದನ್ನು ನಕಲಿಸಿ, ಹೊಸದೊಂದು ರೂಪವನ್ನು ಪಡೆದಂತೆ ಬಿಂಬಿಸಲ್ಪಡುತ್ತವೆ. ಸಿಡುಬು ರೋಗದ ಲಸಿಕೆ ಕತೆಯೂ ಹೆಚ್ಚುಕಡಿಮೆ ಹೀಗೆ ಇದೆ. ಹತ್ತೊಂಭತ್ತನೆಯ ಶತಮಾನಕ್ಕೆ ದಾಪುಗಾಲಿಡುತ್ತಿರುವ ಸಮಯದಲ್ಲಿ ಇಂಗ್ಲೀಷರ ಪ್ರಕಾರ ಸಿಡುಬು ರೋಗಕ್ಕೆ ಅತ್ಯಂತ ಕರಾರುವಕ್ಕಾದ ಔಷಧ ಪದ್ದತಿಯೆಂದು ಬಿಂಬಿಸಲ್ಪಡುತ್ತಿರುವ ಜೆನ್ನರನ ಪದ್ದತಿಯ ಮೂಲರೂಪ ಭಾರತದಲ್ಲಿ ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿತ್ತು ಎನ್ನುವುದನ್ನು ನನ್ನ ಸಂಶೋಧನೆಯಿಂದ ಕಂಡುಕೊಂಡಿದ್ದೇನೆ. ಸಾಮಾನ್ಯವಾಗಿ ಭಾರತದಲ್ಲಿ ಸಿಡುಬು ಕಾಯಿಲೆ ಹರಡಲು ಶುರುವಾಗುತ್ತಿದ್ದದ್ದು ಬೇಸಿಗೆಯ ಆರಂಭದಲ್ಲಿ. ಸೆಖೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಬಿಂದುಬೂಂದ್, ಬನಾರಸ್ಸಿನಂತಹ ಪಟ್ಟಣಗಳಲ್ಲಿನ ವಿಶ್ವವಿದ್ಯಾಲಯದ ವಿದ್ಯಾವಂತ ಬ್ರಾಹ್ಮಣರ ಗುಂಪು ತಮ್ಮ ಸಂಸ್ಥಾನದ ಹಳ್ಳಿಗಳಿಗೆ ಸಣ್ಣಸಣ್ಣ ಗುಂಪುಗಳಲ್ಲಿ ತೆರಳುತ್ತಿತ್ತು. ಹಳ್ಳಿಯ ಪ್ರತಿಯೊಂದು ಮನೆಗಳಿಗೆ ತೆರಳಿ ಅಲ್ಲಿನ ನಾಗರೀಕರಿಗೆ ಸಿಡುಬು ರೋಗಕ್ಕೆ ಪ್ರತಿಬಂಧಕವನ್ನು ಹಾಕಿಕೊಳ್ಳುವಂತೆ ತಿಳಿಸಲಾಗುತ್ತಿತ್ತು. ಪ್ರತಿಬಂಧಕವನ್ನು ಹಾಕಿಸಿಕೊಳ್ಳುವುದು ಯಾರಿಗೂ ಖಡ್ಡಾಯವಾಗಿರಲಿಲ್ಲ. ಕುಟುಂಬದ ಸದಸ್ಯರ ಒಪ್ಪಿಗೆಯ ನಂತರವಷ್ಟೇ ಪ್ರತಿಬಂಧಕವನ್ನು ಹಾಕಲಾಗುತ್ತಿತ್ತು. ಸ್ಚಚ್ಛವಾದ ಬಟ್ಟೆಯೊಂದರಿಂದ ಪ್ರತಿಬಂಧಕವನ್ನು ಚುಚ್ಚಿಸಿಕೊಳ್ಳುವ ವ್ಯಕ್ತಿಯ ತೋಳನ್ನು ಮೊದಲು ಶುಚಿಗೊಳಿಸಲಾಗುತ್ತಿತ್ತು. ಚಿಕ್ಕದ್ದೊಂದು ಕೈಶೂಲದಿಂದ ಸ್ವಚ್ಛಗೊಳಿಸಿದ ತೋಳಿನ ಭಾಗದ ಮೇಲೆ ರಕ್ತ ಸೋರದಂತೆ ಸಣ್ಣದಾಗಿ ಗೀರಲಾಗುತ್ತಿತ್ತು. ನಂತರ ವೈದ್ಯರು ತಮ್ಮಲ್ಲಿದ್ದ ಒಂದು ಸಂವತ್ಸರದಷ್ಟು ಹಳೆಯದಾದ ಸಿಡುಬಿನ ರಸಿಕೆಯನ್ನು ತರಚಿದ ಭಾಗಕ್ಕೆ ಸವರಿ ಶುದ್ದ ಹತ್ತಿಬಟ್ಟೆಯ ಪಟ್ಟಿಯಿಂದ ಗಾಯವನ್ನು ಕಟ್ಟುತ್ತಿದ್ದರು. ಗಾಯಕ್ಕೆ ಪಟ್ಟಿಕಟ್ಟುವ ಮುನ್ನ ಒಂದೆರಡು ಹನಿಗಳಷ್ಟು ಗಂಗಾಜಲವನ್ನೂ ಸಹ ಸವರಲಾಗುತ್ತಿತ್ತು. ಕೊನೆಯದಾಗಿ ಪ್ರತಿಬಂಧಕವನ್ನು ಚುಚ್ಚಿಸಿಕೊಂಡವನಿಗೆ ಕಾಯಿಲೆ ಬರದಂತೆ ಮಾರಮ್ಮನಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಮೊದಮೊದಲು ಇಂಥದ್ದೊಂದು ಪದ್ದತಿಯ ಸಾಫಲ್ಯದ ಕುರಿತು ನನಗೆ ಅನುಮಾನಗಳಿದ್ದವಾದರೂ ಜೆನ್ನರನ ಪದ್ದತಿಗಿಂತ ಭಾರತೀಯ ಪದ್ದತಿ ಹೆಚ್ಚು ಸುರಕ್ಷಿತ ಮತ್ತು ಉತ್ತಮ ಪದ್ದತಿ ಎನ್ನುವುದು ನನ್ನ ಅಭಿಪ್ರಾಯ. ಜೆನ್ನರನಂತೆ ಭಾರತೀಯ ಅರ್ಚಕರು ತಾಜಾ ರಸಿಕೆಯ ಮಾದರಿಯನ್ನು ಬಳಸುತ್ತಿರಲಿಲ್ಲ ಬದಲಿಗೆ ಒಂದು ವರ್ಷದಷ್ಟು ಹಳೆಯದಾದ ಕೀವಿನ ಮಾದರಿಯನ್ನು ಬಳಸಿಕೊಳ್ಳುತ್ತಿದ್ದರು. ಅವರ ಕೈಶೂಲವೂ ಇಂಗ್ಲೆಂಡಿನ ವೈದ್ಯಕೀಯ ಸೂಜಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬಳಸಲ್ಪಡುತ್ತಿದ್ದವು. ವಿಚಿತ್ರವೆಂದರೆ ಜೆನ್ನರನ ಪ್ರಾಯೋಗಿಕ ಪ್ರಯತ್ನಗಳು ಹಲವರ ಪ್ರಾಣಕ್ಕೆ ಕುತ್ತು ತಂದಿದ್ದರೆ, ಭಾರತೀಯ ಪದ್ದತಿ ಒಂದು ಜೀವಬಲಿಯನ್ನೂ ಸಹ ಪಡೆಯಲಿಲ್ಲ. ಬಹುಶ: ಪ್ರತಿಬಂಧಕದ ಜೊತೆಗೆ ಕೆಲವು ಆಹಾರಗಳ ಸೇವನೆಗೂ ನಿಷೇಧವನ್ನೊಡ್ಡುತ್ತಿದ್ದ ಭಾರತೀಯ ವೈದ್ಯರ ತರ್ಕವೂ ಅವರ ಯಶಸ್ಸಿಗೆ ಕಾರಣವಾಗಿರಬಹುದು” ಎಂದು ಸ್ಪಷ್ಟವಾಗಿ ವಿವರಿಸುತ್ತಾರೆ. ಇಂಥಹ ಹತ್ತು ಹಲವು ವಿವರಣೆಗಳನ್ನು ಓದುವಾಗ ನಮ್ಮ ನೆಲದ ಮಣ್ಣಿನ ಶ್ರೇಷ್ಠತೆಯ ಬಗ್ಗೆ ಓದುಗನಿಗೆ ಹೆಮ್ಮೆಯೆನ್ನಿಸುವುದಂತೂ ಖಂಡಿತ.
‘ನಮಗೆ ಬರುವ ಬಹುತೇಕ ಕಾಯಿಲೆಗಳನ್ನು ಗುಣಪಡಿಸಿಕೊಳ್ಳುವ ಸಾಮರ್ಥ್ಯ ದೇಹದಲ್ಲಿಯೇ ಅಡಕವಾಗಿರುತ್ತದೆ. ತೀರ ಮಾರಣಾಂತಿಕ ಕಾಯಿಲೆಗಳಿಗೆ ಮಾತ್ರ ವೈದ್ಯನ ನೆರವು ಅವಶ್ಯಕ’ ಎನ್ನುವುದು ಹೆಗ್ಡೆಯವರ ಪುಸ್ತಕವನ್ನು ಭಾರತೀಯ ವೈದ್ಯಲೋಕ ತೀವ್ರವಾಗಿ ವಿರೋಧಿಸಿತು. ಆದರೆ ಬ್ರಿಟಿಷ್ ಮೆಡಿಕಲ್ ಜರ್ನಲ್ಲಿನ ಮಾಜಿ ಸಂಪಾದಕ, ರಿಚರ್ಡ್ ಸ್ಮಿತ್, “ಇದು ಬರಿ ಒಂದು ಪುಸ್ತಕ ಮಾತ್ರವಲ್ಲ, ಆದರೆ ವೈದ್ಯಲೋಕದ ಪವಿತ್ರ ಗ್ರಂಥವಿದು ಎನ್ನುವುದು ನನ್ನ ಅಭಿಪ್ರಾಯ’ ಎಂದು ನುಡಿದರು. ವೈದ್ಯಲೋಕದ ಸಂಕೀರ್ಣ ಮಾಹಿತಿಗಳಿರುವ ಕೆಲವು ಅಧ್ಯಾಯಗಳನ್ನು ಹೊರತುಪಡಿಸಿ ಬಹುತೇಕ ಅಧ್ಯಾಯಗಳ ಬರಹಶೈಲಿ ತೀರ ಸರಳ. ಪದವಿಪೂರ್ವ ವಿಜ್ನಾನದ ಪಠ್ಯಪುಸ್ತಕದ ಮಾದರಿಯಲ್ಲಿರುವ ಈ ಪುಸ್ತಕವನ್ನೂಮ್ಮೆ ಓದಿ ನೋಡಿ. ಚಿಕ್ಕಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗೆ ಓಡುವ ಅಭ್ಯಾಸ ನಿಮಗಿದ್ದರೆ, ಪರ್ಯಾಯ ಔಷಧ ಪದ್ದತಿಗಳೆಡೆಗೊಂದು ನಿರ್ಲಕ್ಷ್ಯ ನಿಮಗಿದ್ದರೆ, ಮಾತುಮಾತಿಗೂ ‘ಡಾಕ್ಟರ್, ಡಾಕ್ಟರ್’ಎನ್ನುವ ಜಪಮಾಡುವವರು ನೀವಾಗಿದ್ದರೆ ನಿಮ್ಮ ದೃಷ್ಟಿಕೋನ ಬದಲಾಗಿ ನಿಮ್ಮೊಳಗೊಂದು ಆತ್ಮವಿಶ್ವಾಸ ತುಂಬುವ ಕೆಲಸವನ್ನು ಪುಸ್ತಕ ಖಂಡಿತವಾಗಿಯೂ ಮಾಡುತ್ತದೆ ಎನ್ನುವ ನಂಬಿಕೆ ನನ್ನದು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಅತ್ಯುತ್ತಮ ಮಾಹಿತಿ. ಆಯುರ್‍ವೇದೀಯ ಔಷಧ ಪದ್ಧತಿಯನ್ನು ಸುಮ್ಮನೇ ಹೀಗೆಳೆಯುವವರು ಖಂಡಿತಾ ತಿಳಿದುಕೊಳ್ಳಬೇಕಾದ ವಿಷಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಹಳ‌ ಉತ್ತಮ‌ ಮಾಹಿತಿ ನೀಡಿದ್ದೀರಿ ಸರ್, ಭಾರ್ತೀಯ ವೈದ್ಯ‌ ಪದ್ದತಿಯ‌ ಬಗ್ಗೆ ಹೆಮ್ಮೆ ಎನಿಸುತ್ತದೆ. ಹೆಗ್ಡೆಯವರ ಕೆಲಸಗಳು ಶ್ಲಾಘನೀಯ‌.

ಧನ್ಯವಾದಗಳು ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.