ವಾರದ ಕೊನೆ...

0

ನಮ್ಮ ಈಗಿನ ನವ ನಾಗರೀಕ ಕಾಲಧರ್ಮದಲ್ಲಿ ಎಲ್ಲರದು ಬಿಡುವಿಲ್ಲದ ಓಟ. 'ಬಾಲ್ಯ'ದಿಂದ 'ಬುಡಾಪನ್'ವರೆಗು ಬಿಡುವಿಲ್ಲದ ಹಾಗೆ ಏನಾದರು ಹಚ್ಚಿಕೊಂಡೆ ನಡೆವ ದಾಂಧಲೆ. ಅದರಲ್ಲು ಕೆಲಸಕ್ಕೆ ಹೋಗುವ ವರ್ಗದವರಿಗಂತು ವಾರವೆಲ್ಲ ದುಡಿತಕ್ಕೆ ಜೋತುಬಿದ್ದು, ವಾರದ ಕೊನೆ ಬಂದರೆ ಸಾಕು 'ಉಸ್ಸಪ್ಪ' ಎಂದು ಕೂರುವ ಹವಣಿಕೆ (ಅವರದೆ ಬಿಜಿನೆಸ್, ಕೆಲಸ ಮಾಡುವವರ ಕಥೆ ಇನ್ನೂ ಅಧ್ವಾನ ಬಿಡಿ, ವಾರದ ಕೊನೆಯಲ್ಲೂ ಪುರುಸೊತ್ತಿರುವುದಿಲ್ಲ). 

ನಾನೂ ಹೊಸದಾಗಿ ಕೆಲಸಕ್ಕೆ ಸೇರಿದ ಬಿರುಸಿನಲ್ಲಿ ಬ್ರಹ್ಮಚರ್ಯಾಶ್ರಮದ ದೆಸೆಯಿಂದ ಮತ್ತು ಊರು ಬಿಟ್ಟೂರು ಸೇರಿದ ಒಬ್ಬಂಟಿತನದ ಅನುಕೂಲದಿಂದ, ವಾರವೆಲ್ಲ ಅಗತ್ಯಕ್ಕಿಂತಲು ಹೆಚ್ಚು ಸಮಯ ದುಡಿಯಬೇಕಾಗಿ ಬರುತ್ತಿತ್ತು. ಹೀಗಾಗಿ ಸೂರ್ಯ ಹುಟ್ಟುವ ಮೊದಲೆ ಮನೆ ಬಿಟ್ಟು, ಮುಳುಗಿದ ಮೇಲಷ್ಟೆ ವಾಪಸಾಗುವ ದಿನಚರಿ. ಆ ಹೊತ್ತಿನ ಮನಸ್ಥಿತಿ ಹೇಗಿರುತ್ತಿತ್ತೆಂದರೆ - ಸೋಮವಾರದ ಬೆಳಗೆ, ಶುಕ್ರವಾರ ಯಾವಾಗ ಬರುವುದೊ ಎಂದು ಕಾಯುವ ಹಾಗೆ! (ಶನಿವಾರವೂ ಕೆಲಸ ಮಾಡಬೇಕಾದವರ ಕಥೆ ಬೇರೆ - ಅವರು ಮಿಂಚಿನಂತೆ ಬಂದು ಮಾಯವಾಗುವ ಭಾನುವಾರದತ್ತ ಮೊಗ ಮಾಡಿ ಕೂತಿರಬೇಕು). ವಾರದ ದಿನಗಳಲ್ಲಿ ಬರುವ ಎಲ್ಲ ವೈಯಕ್ತಿಕ ಕೆಲಸಗಳಿಗು ' ಈ ವಾರದ ಕೊನೆಯಲ್ಲಿ ಮಾಡಿಬಿಡಬೇಕು' ಎಂದು ಟ್ಯಾಗು ಹಾಕುತ್ತ ದೂಡಿಕೊಂಡು ಬಂದು ಹೇಗೊ ಶುಕ್ರವಾರದ ಕೊನೆ ತಲುಪಿದಾಗ, ಸೋತು ಸುಣ್ಣವಾಗಿ ಏನು ಮಾಡಲು ಉತ್ಸಾಹವೆ ಇರದ ದಿನಗಳಿಗೇನು ಬರವಿರುತ್ತಿರಲಿಲ್ಲ.

ಆದರು, ಈ ವಾರದ ಕೊನೆಗಳಿಗೆ ಅದೊಂದು ನಿಯಮಿತ ರೀತಿಯ ವೇಳಾಪಟ್ಟಿ, ಹೇಗೊ, ತಂತಾನೆ ಆರೋಪಿತವಾಗಿಬಿಟ್ಟಿರುತ್ತಿತು. ಗೆಳೆಯರದೊ, ಸಹೋದ್ಯೋಗಿಗಳದೊ ದಂಡಿನ ಜತೆ ಬಿದ್ದು ಶುಕ್ರವಾರದ ರಾತ್ರಿ ಡಿನ್ನರು, ಪಾರ್ಟಿ ಎಂದುಕೊಂಡು ಹೊರಟರೆ, ಮನೆ ಸೇರುವುದು ಮಧ್ಯರಾತ್ರಿ. ಇನ್ನು ಬೆಳಗಾಗೆದ್ದು ನೋಡುವ ಹೊತ್ತಿಗಾಗಲೆ ನಡು ಹಗಲಿನ ಸಮಯ. ವಾರದ ಕೊನೆಗೆಂದು ಪೇರಿಸಿಟ್ಟುಕೊಂಡ ಬಟ್ಟೆ ಒಗೆಯುವುದು, ಸಾಮಾನು ಖರೀದಿ, ಬಿಲ್ಲು ಕಟ್ಟುವ ಹಳವಂಡ, ಸಾರಿಸಿ ಗುಡಿಸುವ ಅವಸರ - ಹೀಗೆ ಒಂದಿಲ್ಲೊಂದು ಚಿಲ್ಲರೆ ಕೆಲಸದಲ್ಲಿ ಮಾಯವಾಗುವ ವಾರದ ಕೊನೆಯಲ್ಲೆ ಟೀವಿಗೊಂದಷ್ಟು ಸಮಯ. ಆಫೀಸಿಗೆ ಅವಸರವೇನಿಲ್ಲವಲ್ಲ ಎಂದುಕೊಂಡೆ ಹೊದ್ದು ಮಲಗಿ ನಿದ್ದೆ ಹೊಡೆಯುವ ಸೋಮಾರಿತನ. ಹೀಗೆ ಬಂದಿದ್ದು ಹೋಗಿದ್ದು ಎರಡೂ ಗೊತ್ತಾಗದ ಹಾಗೆ ಸೋಮವಾರ ಎದ್ದು ಕೆಲಸಕ್ಕೆ ಹೊರಡುವ ಜಂಜಾಟಕ್ಕಿಳಿದಾಗ ಮತ್ತದೆ ರಾಗ - ಯಾವಾಗಪ್ಪ ಬರುವುದು ಶುಕ್ರವಾರ ?!

ಅಂತಹದ್ದೆ ರೀತಿಯ ಅನುಭವ ಬಹುತೇಕ ಎಲ್ಲರಿಗೂ ಆಗಿರಬಹುದು, ಜೀವನದ ಒಂದಿಲ್ಲೊಂದು ಕಾಲಘಟ್ಟದಲ್ಲಿ. ಅದರ ಸಾಂಕೇತಿಕ ರೂಪವೆಂಬಂತೆ ಇದೊಂದು ಪುಟ್ಟ ಕವನ :-)

ವಾರದ ಕೊನೆ ಬಂತಾ ?
ಬಂತೆಲ್ಲಿ ? ಹೋಗಾಯ್ತ !
ಎರಡು ಹಗಲ ಮೂರಿರುಳು
ಕಳೆದದ್ದೆಲ್ಲಿ ಕಳುವಾಯ್ತೇಳು ||

ಶುಕ್ರವಾರ ರಾತ್ರಿಗೆ ಶುರು
ಆಯಾಸ ಪರಿಹಾರಕೆ ಬೀರು
ತೂರಾಡಿಕೊಂಡೆ ಬೈಕು ರಾತ್ರಿ
ಹೇಗೊ ಮಲಗಿದ್ದಷ್ಟೆ ಖಾತ್ರಿ ||

ಶನಿವಾರದ ಬೆಳಗೆಲ್ಲಿ ಪೂರ
ಏಳಲಾಗದ ಪರಿ ತಲೆಭಾರ
ಏಳು ಮಧ್ಯಾಹ್ನದ ಹೊತ್ತಲು
ಎದ್ದ ಮೇಲು ಕಣ್ಣಿಗೆ ಕತ್ತಲು ||

ಸಾವರಿಸಿಕೊಂಡೆ ಬಟ್ಟೆ ಬರೆ
ಒಗೆಯಲಟ್ಟಿ ಒಣಗಿಸೆ ಕೊರೆ
ಭಾನುವಾರ ತೀರಾ ತಡವೆ
ಇಸ್ತ್ರಿಗೆ ಸರಿ ಒಣಗಬೇಡವೆ ? ||

ಅಡ್ಡಾಡಿ ಗುಡಿಸಿ ಮಡಿಸಿ ಸ್ವಚ್ಚ
ಬಿಡುವೆಲ್ಲಿ ಅಡಿಗೆ ಮಾಡೆ ಹುಚ್ಚ ?
ದರ್ಶಿನಿ ಭವನ ಗಬಗಬ ತಿನಿಸೆ
ಕುರುಕು ಮುರುಕು ಟೀವಿ ಮನಸೆ ||

ಭಾನುವಾರವೇನು ಕಡಿಮೆಗಿತ್ತ ?
ತರಕಾರಿ ದಿನಸಿ ತರಲೆ ಸುಸ್ತಾ
ಎದ್ದಾಗಲೆ ರವಿ ಮಲಗೊ ದಾರಿ
ರಜೆಯಲೇಕೊ ವೇಗದೆ ಪರಾರಿ ||

ಹರಟಲಿಲ್ಲ ಮಾತಿಗೆ ಸಿಗಲಿಲ್ಲ
ಸಖರೆಲ್ಲಿ ಹವ್ಯಾಸಕು ಬಿಡಲಿಲ್ಲ
ಸಾಕು ಸಾಲದ ನಿದ್ದೆ ಮನೆವಾರ್ತೆ
ನಿಭಾಯಿಸುತೆ ನೀಗದೆ ಕೊರತೆ ||

ಮತ್ತೆ ಶುರು ವಾರದ ಮೊದಲು
ಊದಿದ ಕಣ್ಣು ಮಾತ ತೊದಲು
ಸೋಮವಾರ ಕಣ್ಣು ಶುಕ್ರವಾರಕೆ
ಮತ್ತದೆ ಪುರಾಣ ಪುನರಾವರ್ತಿಕೆ ! ||

ವಾರವೆಲ್ಲ ಬರಿ ವಾರದ ಕೊನೆ
ಇದ್ದರೆಂಥ ಚೆಂದ ಅನಿಸಿದ್ದನೆ
ಅಳವಡಿಸಲೆಲ್ಲಿ ಹೊಟ್ಟೆ ಬಟ್ಟೆಗೆ
ದಣಿ ವಿರಮಿಸಿ ವಾರದ ಕೊನೆಗೆ ||

------------------------------
ನಾಗೇಶ ಮೈಸೂರು
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಜ‌, ವಾರಾಂತ್ಯಕ್ಕೆ ಅಂತ‌ ಎಲ್ಲಾ ಕೆಲಸ‌ ಇಟ್ಕೊಂಡು, ಭಾನುವಾರ‌ ಭರ್ತಿ ನಿದ್ರೆ ಮಾಡಿ, ಟೈಮೇ ಸಿಗ್ಲಿಲ್ಲ‌ ಅಂತ‌ ಅಲವತ್ತುಕೊಳ್ಳೋದು ಮಾತ್ರ‌ ನಿಲ್ಲಲ್ಲ‌!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು ಶಾಸ್ತ್ರಿಗಳೆ.. ವಾರದ ಕೊನೆ ಒಂದು ದಿನವಿದ್ದರೂ ಅಷ್ಟೆ, ಎರಡು ದಿನವಿದ್ದರು ಅಷ್ಟೆ - ಕತೆ ಮಾತ್ರ ಒಂದೆ. ನಾಗಾಲೋಟದಲ್ಲಿ ಬಂದಷ್ಟೆ ವೇಗದಲ್ಲಿ ಓಡಿ ಹೋಗಿಬಿಡುವ 'ವೀಕೆಂಡು', ಬಹುತೇಕ 'ವೀಕಾಗಿಯೆ' ಎಂಡ್ ಆಗುವುದು ವಿಪರ್ಯಾಸ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಮಸ್ಕಾರಗಳು ಸರ್,

ಶುಕ್ರವಾರದ ಖುಷಿ ಶನಿವಾರ ಕಳೆದು, ಭಾನುವಾರ ಬಂದಿತೆಂದರೆ ಸಾಕು ಅದು ಯಾವಾಗ ಕಳೆದು ಸೋಮವಾರ ಬರುವುದೋ ತಿಳಿಯುವದೆ ಇಲ್ಲ, ತಿಳಿಯುವಷ್ಟರಲ್ಲಿ ಸೋಮವಾರದ ಆಗಮನವಾಗಿಬಿಡುತ್ತದೆ. ಅಲ್ಲವೇ ಸರ್????

ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಜ ರವೀಂದ್ರರೆ. ಎರಡಲ್ಲ, ಒಮ್ಮೊಮ್ಮೆ ಮೂರು ದಿನದ ವಾರದ ಕೊನೆಯಿದ್ದಾಗ ಕೂಡ ಪರಿಸ್ಥಿತಿಯೇನು ವಿಭಿನ್ನವಾಗಿರುವುದಿಲ್ಲ. ನಿಜ ಹೇಳಬೇಕೆಂದರೆ ಅದು ರಜೆಯ ದಿನಕ್ಕಿಂತ ಹೆಚ್ಚಾಗಿ ಮನಸಿನ ಸ್ಥಿತಿಗೆ ಸಂಬಂಧಿಸಿದ ವಿಷಯ. ಆ ಸ್ವಾಸ್ಥ್ಯ ಚೆನ್ನಾಗಿದ್ದರೆ ವಾರವೆಲ್ಲವು ವಾರದ ಕೊನೆಯೆ ಆಗಿರುತ್ತದೆನ್ನಬಹುದಲ್ಲವೆ ?! ಪ್ರತಿಕ್ರಿಯೆಗೆ ಧನ್ಯವಾದಗಳು :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಾರ ಬಂತಪ್ಪಾ, ಶನಿವಾರ ಬಂತಪ್ಪಾ
ಸುಸ್ತನು ಮರೆಯಪ್ಪಾ
ಸಾಕೋ ಸಾಕಪ್ಪಾ ಅನ್ನುವ ಕೆಲಸ ಬೇಡಪ್ಪಾ
ಅನ್ನುವ ಹೊತ್ತಿಗೆ ಬಂದೇ ಬಿಡ್ತಪ್ಪಾ
ಸೋಮವಾರ ಬಂದೇ ಬಿಡ್ತಪ್ಪಾ
ಮತ್ತೆ ಎದ್ದೂ ಬಿದ್ದೂ ಓಡಿಹೋಗಪ್ಪಾ!!
:)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ ಮತ್ತು ಹನಿಗವನಕ್ಕೆ ಧನ್ಯವಾದಗಳು :-) ಈ ವಾರದ ಕೊನೆಯ ತಾಪತ್ರಯ ಬರಿ ಉದ್ಯೋಗಕ್ಕೆ ಹೋಗುವವರಿಗೆ ಮಾತ್ರ ಬಿಡಿ. ಮಿಕ್ಕವರಿಗೆ ಎಲ್ಲಾ ದಿನವೂ ಒಂದೆ ತರ... ಆದರೆ 'ಭಾರಿ' ವರಮಾನದ ಸರ್ಕಾರಿ ನೌಕರಿಯಲ್ಲಿದ್ದು, ತಮ್ಮ ಕೆಲಸದ ಕುರಿತು ನಿಜವಾದ ನಿಷ್ಠೆಯ ಬದಲು, ಅದನ್ನು ಲಪಾಟಿಯಿಸಿ ನುಂಗಲಿಕ್ಕೆ ಕೊಟ್ಟ ಪರವಾನಗಿ ಎಂದು ಭಾವಿಸಿದ ಜನರಿಗೆ ವಾರದ ಕೊನೆಯೆಂದರೆ ಹಿಂಸೆಯೆ ಎನ್ನಬಹುದು. 'ಗುಳುಂ ಸ್ವಾಹಾ' ಡೀಲುಗಳೆಲ್ಲ ವಾರದ ದಿನಗಳಲ್ಲಿ ತಾನೆ ನಡೆಯಬೇಕು ? ವಾರದ ಕೊನೆಯಲ್ಲಿ ಎಲ್ಲಕ್ಕು ರಜೆಯ ತೆರೆ ಬಿದ್ದು ಅಡ್ಡಿಯಾಗಿಬಿಡುತ್ತದಲ್ಲಾ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.