ವರ್ತುಲ

4.666665

ಹೊರಟ ದಾರಿಯ ಮರೆತು
ಗೊಂದಲದ ಅಲೆದಾಟದಲ್ಲಿ...
ಮತ್ತೊಮ್ಮೆ ಬಂದುನಿಂತೆನು
ನಾನು ಅದೇ ತಿರುವಿನಲ್ಲಿ...

ಕಾಣದ ಕೈಯೊಂದು, ನನ್ನ
ದೂಡಿದೆ ಮತ್ತದೇ ದಾರಿಗೆ...
ತಿರುಗಿ ತಿರುವಿಗೇ ಮುಟ್ಟಿ
ಸೇರಲಾರದಾದೆ ನನ್ನೂರಿಗೆ...

ಎಷ್ಟುಬಾರೀ ನಡೆದರೇನಂತೆ
ದಾರಿಯೇನೂ ಬದಲಾಗಲಿಲ್ಲ...
ಆದರೆ ನಾನೇ ಅರಿಯದಂತೆ
ನಾ ಬದಲಾಗಿಹೋಗಿರುವೆನಲ್ಲ...

ಆಗೊಮ್ಮೆ ಭಾಸವಾಯಿತು,ನಾನು
ಪರಿತಪಿಸುತಿರುವೆ ವರ್ತುಲದಲ್ಲಿ...
ವಿಷವರ್ತುಲವೋ?ಅಮೃತದ್ದೋ?
ಇದಕೇನೂ ಇಲ್ಲ ಉತ್ತರವಿಲ್ಲಿ...

ನಡೆದು ನಿತ್ರಾಣವಾದರೇನು
ಕಾಲೇಕೋ ನಿಲ್ಲದಾಗಿತ್ತು...
ಕಲ್ಪನೆಯ ನನ್ನೂರಿನೆಡೆಗೆ
ಚಲಿಸಲು ಅಣಿಯಾಗಿತ್ತು...

ಮುಗಿಯದ ಈ ಪಯಣದಲ್ಲಿ
ಸದ್ದಿಲ್ಲದೇ ದಾರಿ ಸರಿದಿತ್ತು...
ಎಲ್ಲವ ನಾ ಮರೆತಂತೆ, ಮತ್ತೆ
ಹೊರಟಲ್ಲೇ ಬಂದು ನಿಂತಿತ್ತು...

********
ಸಂತೋಷ ಹೆಗಡೆ…

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (12 votes)
To prevent automated spam submissions leave this field empty.