ಲ್ಯಾಪ್‌ಟಾಪ್-ಟ್ಯಾಬ್ಲೆಟ್ ಜುಗಲ್‌ಬಂದಿ ಕಷ್ಟಸಾಧ್ಯ

2

ಸರ್ಫೇಸ್ ಆರ್‌ಟಿ ಎನ್ನುವ ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಮೈಕ್ರೋಸಾಫ್ಟ್,ಮುಂದಿನ ತಿಂಗಳು ಸರ್ಫೇಸ್ ಪ್ರೋ ಎನ್ನುವ ಸಾಧನವನ್ನು ಬಿಡುಗಡೆ ಮಾಡಲಿದೆ.ಇದು ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಎರಡರ ಅನುಭವವನ್ನೂ ನೀಡುವಂತಾಗ ಬೇಕೆಂದು ಮೈಕ್ರೋಸಾಫ್ಟ್ ಹೆಬ್ಬಯಕೆ. ಡೆಸ್ಕ್‍ಟಾಪ್ ಕಂಪ್ಯೂಟರಿನಿಂದ ತೊಡಗಿ,ಎಲ್ಲಾ ಸಾಧನಗಳಿಗೂ ಒಂದೇ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸುವಂತಾಗಬೇಕೆಂದು ಅಭಿವೃದ್ಧಿ ಪಡಿಸಿದ ವಿಂಡೋಸ್8 ಇವುಗಳಲ್ಲೂ ಬಳಕೆಯಾಗಲಿದೆ. ಟ್ಯಾಬ್ಲೆಟ್‌ಗಳು ಸ್ಪರ್ಶಸಂವೇದಿಯಾದರೂ,ಲ್ಯಾಪ್‌ಟಾಪ್ ಮಟ್ಟಿಗೆ ಇಂತಹ ಲ್ಯಾಪ್ಟಾಪುಗಳೂ,ಡೆಸ್ಕ್‌ಟಾಪುಗಳು ಅಪರೂಪ ಮತ್ತು ದುಬಾರಿ. ಹಾಗಾಗಿ ಸರ್ಫೇಸ್ ಪ್ರೋದಲ್ಲಿ ಟ್ಯಾಬ್ಲೆಟ್‌ಗಿಂತ ದೊಡ್ಡ ತೆರೆ ಇದೆ. ಇದರ ಪರಿಣಾಮವೆಂದರೆ,ಅದರ ತೂಕ ತುಸು ಹೆಚ್ಚೇ ಇದೆ.ಇನ್ನು ಶಕ್ತಿಯ ಬಳಕೆಯೂ ತುಸು ಜಾಸ್ತಿ. ಆದರೂ ಇದು ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ನ ಎಡಬಿಡಂಗಿ ರೂಪವಾಗಬಲ್ಲುದೇ ಹೊರತು,ಮತ್ತೇನೂ ಸಾಧಿಸದು ಎನ್ನುವುದು ಅದರ ಬಳಕೆ ಮಾಡಿದವರ ಪ್ರತಿಕ್ರಿಯೆ.
ಅದೇನೆ ಇರಲಿ ಮೈಕ್ರೋಸಾಫ್ಟ್ ತನ್ನ ತ್ರೈಮಾಸಿಕ ಲಾಭಾಂಶವನ್ನು ಹಿಗ್ಗಿಸಿಕೊಂಡಿದೆ. ಅದರ ಹೊಸ ಆಪರೇಟಿಂಗ್ ವ್ಯವಸ್ಥೆಯಾದ ವಿಂಡೋಸ್ 8 ಈಗಾಗಲೇ ಆರು ಕೋಟಿ ಪ್ರತಿ ಮಾರಾಟವಾಗಿದೆ.ಆದರೆ ಸರ್ಫೇಸ್ ಟ್ಯಾಬ್ಲೆಟ್ ಬಗ್ಗೆ ಪ್ರತಿಕ್ರಿಯೆ ಹೇಗಿದೆ ಎನ್ನುವುದರ ಬಗ್ಗೆ ಫಲಿತಾಂಶದಲ್ಲಿ ಏನೂ ಮಾಹಿತಿ ಇಲ್ಲ.<--break->


ಗ್ರಾಮೀಣ ಪ್ರದೇಶಗಳಲ್ಲೂ ತ್ರೀಜಿ ಬೇಕು
"ಉದಯವಾಣಿ"ಯ ಜನತಾವಾಣಿ ಅಂಕಣದಲ್ಲಿ ಮೊನ್ನೆ ಶುಕ್ರವಾರ ಪ್ರಕಟವಾದ ಓದುಗರೋರ್ವರ ಪತ್ರ ನಿಜಕ್ಕೂ ಸಮಯೋಚಿತವಾದದ್ದು. ಆದರೆ ವಾಸ್ತವವೆಂದರೆ,ಪಟ್ಟಣ ಪ್ರದೇಶಗಳಲ್ಲೂ ತ್ರೀಜಿ ಸೇವೆ ಕೇವಲ ನಗರಗಳ ಜನಸಂದಣಿಯ ಭಾಗಗಳಿಗೆ ಮಾತ್ರಾ ಸೀಮಿತವಾಗಿದೆ. ಉಡುಪಿಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ,ಬಿಸೆ‌ಎನ್‌ಎಲ್,ಐಡಿಯಾ ಇವುಗಳ ಸಂಕೇತಗಳು ಅಂಬಲಪಾಡಿಯಂತಹ ಪ್ರದೇಶವನ್ನೂ ಮುಟ್ಟುವುದಿಲ್ಲ!ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಭಾಗಗಳಲ್ಲಿ ತ್ರೀಜಿ ಸಂಪರ್ಕದ ಕನಸು ಸದ್ಯಕ್ಕಂತೂ ನನಸಾಗದು.ಪ್ರಾಯಶ: ನಿಟ್ಟೆ ಇದಕ್ಕೊಂದು ಅಪವಾದ.ಇದಕ್ಕೆ ಕಾರಣ ಅಲ್ಲಿನ ಶೈಕ್ಷಣಿಕ ಸಂಕೀರ್ಣ.
ತ್ರೀಜಿ ಸೇವೆಗಳು ಬಲು ದುಬಾರಿ. ಸೇವಾದಾತೃಗಳು ನಿರೀಕ್ಷಿಸಿದ ಪ್ರತಿಕ್ರಿಯೆ ಜನರಿಂದ ಲಭ್ಯವಾಗುತ್ತಿಲ್ಲ.ಜತೆಗೆ ಲೈಸೆನ್ಸ್ ರದ್ಧತಿ,ಹಳೆಯ ಹಗರಣಗಳನ್ನು ತನಿಖೆ ಮಾಡುವಂತಹ ಕ್ರಮಗಳು ಟೆಲಿಕಾಂ ವಲಯದಲ್ಲಿ ಅನಿಶ್ಚಿತತೆಯನ್ನು ಹುಟ್ಟುಹಾಕಿದೆ.ಇದರಿಂದಾಗಿ ಇಂತಹ ಪರಿಸ್ಥಿತಿ ಏರ್ಪಟ್ಟಿರುವುದು ಸ್ಪಷ್ಟ. ಬಿಎಸೆನ್ನೆಲ್ ನಷ್ಟದಲ್ಲಿ ಮುಳುಗಿರುವಾಗ ಅದರಿಂದ ದೊಡ್ಡ ನಿರೀಕ್ಷೆಯನ್ನು ಇರಿಸಿಕೊಳ್ಳಲಾಗದು.ಗ್ರಾಮೀಣ ಭಾಗಗಳಲ್ಲಿ ಸೇವೆ ಒದಗಿಸಿದರೆ,ಅದು ಬಿಎಸೆನೆಲ್ ಮಾತ್ರಾ ಆಗಬಹುದೇ ವಿನ: ಖಾಸಗಿ ಕಂಪೆನಿಗಳಿಂದಲ್ಲ. ಲಾಭದ ಮೇಲೆ ಕಣ್ಣಿಟ್ಟಿರುವ ಖಾಸಗಿ ಕಂಪೆನಿಗಳು ನಗರ ಪ್ರದೇಶಗಳಲ್ಲೇ ಹೆಚ್ಚಿನ ಪ್ರತಿಕ್ರಿಯೆಗಿಟ್ಟಿಸದಿರುವಾಗ, ಗ್ರಾಮೀಣ ಭಾಗಗಳಿಗೆ ನುಗ್ಗುವ ಮಾತೆಲ್ಲಿ ಬಂತು?

ತ್ರೈಮಾಸಿಕ ಫಲಿತಾಂಶಗಳು ಓಕೆಯೇನೂ ಅಲ್ಲ
ಆಪಲ್,ಗೂಗಲ್,ಮೈಕ್ರೋಸಾಫ್ಟ್,ಐಬಿಎಂ,ಇಂಟೆಲ್ ಹೀಗೆ ಟೆಕ್ ಕಂಪೆನಿಗಳ ತ್ರೈಮಾಸಿಕ ಫಲಿತಾಂಶಗಳು ಪ್ರಕಟವಾಗಿವೆ. ಆಪಲ್ ಹೂಡಿಕೆದಾರರಲ್ಲಿ ನಿರಾಶೆ ಹುಟ್ಟಿಸಿದೆ. ಹಾಗೆಂದು ಅದು ನಷ್ಟ ಮಾಡಿಕೊಂಡೇನೂ ಇಲ್ಲ. ಆದರೆ ಎಂದಿನ ರೀತಿಯ ಲಾಭದ ಏರುಗತಿಯಿಲ್ಲ. ಸ್ಟೀವ್‌ಜಾಬ್ಸ್ ಬಳಿಕ ಆಪಲ್ ಪ್ರಗತಿ ಹಿಂದಿನಂತಿರದು ಎನ್ನುವ ಸಂಶಯಕ್ಕಿದು ಒತ್ತು ನೀಡಿದೆ.ಇನ್ನು ಗೂಗಲ್ ಲಾಭ ಗಳಿಕೆಯಲ್ಲಿ ಹಿಂದುಳಿದಿಲ್ಲವಾದರೂ,ಅದರ ಮೊಬೈಲ್ ಸಾಧನಗಳ ತಯಾರಕ ಮೊಟೊರೊಲಾವು ನಷ್ಟದಲ್ಲಿದೆ. ಗೂಗಲ್ ಹಾಕುವ ಜಾಹೀರಾತುಗಳ ಮೇಲೆ ಕ್ಲಿಕ್ಕಿಸುವವರ ಸಂಖೆಯಲ್ಲಿ ಏರಿಕೆಯಾದರೂ,ಪ್ರತಿ ಕ್ಲಿಕ್ಕಿಗೆ ಲಭ್ಯವಾಗುವ ತಲಾ ಆದಾಯ ಇಳಿದಿದೆ. ಮೊಬೈಲ್ ಸಾಧನಗಳಲ್ಲಿ ಕ್ಲಿಕ್ಕುಗಳು ಲ್ಯಾಪ್‌ಟಾಪು ಮತ್ತು ಡೆಸ್ಕ್‌ಟಾಪುಗಳಷ್ಟು ಫಲಪ್ರದವಲ್ಲ ಎನ್ನುವ ಕಂಪೆನಿಗಳ ಅನುಭವ ಇದಕ್ಕೆ ಕಾರಣವಾಗಿದೆ. ಆದರಿದು ಬದಲಾಗಲಿದೆ ಎನ್ನುವುದರ ಬಗ್ಗೆ ಗೂಗಲ್ ಭರವಸೆ ಹೊಂದಿದೆ. ಐಬಿಎಂ ಲಾಭದಲ್ಲಿದ್ದರೂ,ಇಂಟೆಲ್ ಡೆಸ್ಕ್‌ಟಾಪ್‌ಗಳ ಬಳಕೆಯಲ್ಲಿನ ಇಳಿಕೆಯಿಂದ ನಿರಾಸೆ ಹುಟ್ಟಿಸಿದೆ.

ಬ್ಯಾಂಕ್ ಪರೀಕ್ಷೆಗೆ ಟ್ಯಾಬ್ಲೆಟ್ ಸಾಧನ
ಟಾಲೆಂಟ್‌ಸ್ಪ್ರಿಂಟ್ ಹೈದರಾಬಾದಿನ ಐಟಿ ಕಂಪೆನಿ. ಇದು ಬ್ಯಾಂಕ್ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಟ್ಯಾಬ್ಲೆಟನ್ನು ಬಿಡುಗಡೆ ಮಾಡಲಿದೆ. ಈ ಟ್ಯಾಬ್ಲೆಟ್‌ನಲ್ಲಿ ಬ್ಯಾಂಕ್ ಪರೀಕ್ಷೆಗಳಿಗೆ ಸಹಾಯಕವಾಗಬಲ್ಲ ಮಾಹಿತಿಯ ಸಂಪನ್ಮೂಲಗಳಿವೆ. ಬೆಲೆ ಸುಮಾರು ಏಳುಸಾವಿರ ರೂಪಾಯಿಗಳು. ಇದರಲ್ಲಿ ಇಂಟರ್ನೆಟ್ ಜಾಲಾಟವೂ ಸಾಧ್ಯ. ಕೋರ್ಸ್ ಸಾಮಗ್ರಿಗಳು ಬೇಕಿದ್ದರೆ ಮತ್ತೆ ಏಳುಸಾವಿರ ತೆರಬೇಕಾಗುತ್ತದೆ. ಇದರಲ್ಲಿ ಬ್ಯಾಂಕರುಗಳು ನಡೆಸಿದ ತರಗತಿಗಳ ವಿಡಿಯೋಗಳ ಜತೆ ಪರೀಕ್ಷೆಯ ನೂತನ ಪ್ರವೃತ್ತಿಗಳು,ಸುಲಭೋಪಾಯಗಳು,ಸಿದ್ಧಾಂತಗಳು ಇತ್ಯಾದಿ ವಿಷಯಗಳು ಅಡಕವಾಗಿವೆ.

ಕಾರ್ ಸೇವೆ:ಬಳಸಿದ ನಿಮಿಷಕ್ಕನುಗುಣವಾಗಿ ದರ
ಅಮೆರಿಕಾದಲ್ಲಿ ಕಾರನ್ನು ಬಾಡಿಗೆಗೆ ನೀಡುವ ಸೇವೆಗಳನ್ನು ಇಂಟರ್ನೆಟ್ ಮೂಲಕ ಪಡೆಯಲು ಸಾಧ್ಯವಾಗುತ್ತಿದೆ Car2go ಮತ್ತು ಸ್ಮಾರ್ಟ್‌ಫೋನ್ ಮುಖಾಂತರ
ಕಾರನ್ನು ಬಾಡಿಗೆಗೆ ಹಿಡಿಯಬಹುದು. ಈಗದು ಕಾರನ್ನು ಬಳಸಿದ್ದಕ್ಕೆ ಬಾಡಿಗೆಯನ್ನು ನಿಮಿಷಕ್ಕಿಷ್ಟು ಎಂಬ ದರದಲ್ಲಿ ಲೆಕ್ಕ ಹಾಕಿ,ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ. ಹೆಚ್ಚಿನ ಬಾಡಿಗೆ ಕಾರು ಸೇವೆಗಳು ಗಂಟೆಗಿಷ್ಟು ಎಂದು ದರ ನಿಗದಿಪಡಿಸಿವೆ.Car2goದ ಸೇವೆಯ ಇನ್ನೊಂದು ವೈಶಿಷ್ಟ್ಯವೆಂದರೆ,ಬಾಡಿಗೆಯಲ್ಲಿ ಪಾರ್ಕಿಂಗ್ ಉಚಿತವಾಗಿದೆ. ಹಾಗಾಗಿ,ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ಬಿಟ್ಟು ಹೋದರಾಯಿತು.ಯಾರಿಗಾದರೂ ವಿಮಾನನಿಲ್ದಾಣಕ್ಕೆ ಹೋಗಬೇಕಾದರೆ ಇಂಟರ್ನೆಟ್ ಮೂಲಕ ಬಾಡಿಗೆ ಕಾರನ್ನು ಬುಕ್ ಮಾಡಿ,ಅದನ್ನು ಚಲಾಯಿಸಿಕೊಂಡು ವಿಮಾನ ನಿಲ್ದಾಣ ತಲುಪಿ,ಅಲ್ಲಿನ ಅಧಿಕೃತ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ ಹೋದರಾಯಿತು.ಕಾರನ್ನು ಮರಳಿಸುವ ಅಗತ್ಯವೂ ಇಲ್ಲ. ಹೀಗಾಗಿ,ಏಕಮುಖ ಪಾವತಿ ಸವಲತ್ತು ಪಡೆದಂತಾಯಿತು. ಗ್ರಾಹಕರು ಇಂತಹ ಕಾರು ಸೇವೆಗಳನ್ನು ಪಡೆಯಲು ವಾರ್ಷಿಕ ಶುಲ್ಕ ಪಾವತಿಸಿ,ನೋಂದಾಯಿಸಿಕೊಳ್ಳಬೇಕು.

ಟ್ವಿಟರ್:ವೈನ್ ಮೂಲಕ ವಿಡಿಯೋ ತುಣುಕುಗಳು
ವೈನ್ ಎನ್ನುವ ಮೊಬೈಲ್ ಸೇವೆಯ ಮುಖಾಂತರ ಟ್ವಿಟರ್ ಇನ್ನು ಮನಮುಟ್ಟುವ ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುವ ವೇದಿಕೆಯನ್ನು ಒದಗಿಸಲಿದೆ.ಸದ್ಯಕ್ಕಿದು ಐಫೋನ್ ಮತ್ತು ಐಪೋಡ್ ಟಚ್‌ಗಳಲ್ಲಿ ಮಾತ್ರಾ ಲಭ್ಯವಿದೆ.ಇದರಲ್ಲಿ ಪ್ರದರ್ಶಿತವಾಗುತ್ತಿರುವ ವಿಡಿಯೋ ತುಣುಕುಗಳು ಹೇಗಿರಬೇಕು ಎನ್ನುವುದನ್ನರಿಯಬೇಕಿದ್ದರೆ http://vine.co/v/biTaEEwdq2n?1 ವೀಡಿಯೋವನ್ನು ನೋಡಿ.

ಹೊಸ ಜೈವಿಕ ಚಹರೆಗಳ ಬಳಕೆಗೆ ತಯಾರಿ ನಡೆದಿದೆ
ಸದ್ಯಕ್ಕೆ ವ್ಯಕ್ತಿಯನ್ನು ಗುರುತಿಸಲು ಬಳಕೆಯಾಗುವ ಜೈವಿಕ ಚಹರೆಗಳೆಂದರೆ ಬೆರಳಚ್ಚು,ಮುಖ ಪರಿಚಯ ಮತ್ತು ಕಣ್ಣಿನ ಪಾಪೆ.ಆದರಿವನ್ನು ಬಳಸುವಾಗ ಅವಕ್ಕೆ ಅವುಗಳದೇ ಆದ ಇತಿಮಿತಿಗಳಿವೆ.ಬೆರಳಚ್ಚು ಕೆಲವರಲ್ಲಿ ಏನೇನೂ ಸ್ಪಷ್ಟವಿರದು.ಅದರಲ್ಲೂ ಒಣಚರ್ಮದವರ ಬೆರಳಚ್ಚು ಚರ್ಮದ ಬಿರುಕುಗಳಿಂದಾಗಿ ವಿಫಲವಾಗುವುದು ಸಾಮಾನ್ಯ.ಮುಖ ಪರಿಚಯ ಹಿಡಿಯಲು ಮುಖವನ್ನು ಸರಿಯಾದ ಕೋನದಲ್ಲೇ ಕ್ಯಾಮರಾ ಮುಂದಿರಿಸಬೇಕು.ಬದಿಯಿಂದ ಅಥವಾ ತುಸುವೇ ತಿರುಗಿದ್ದರೂ ಮುಖ ಪರಿಚಯವನ್ನು ಹಿಡಿಯಲು ವಿಫಲಾವಾಗುವುದು,ಸದ್ಯದ ತಂತ್ರಜ್ಞಾನದ ತೊಂದರೆಯಾಗಿದೆ.ಐರಿಸ್ ಇದ್ದುದರಲ್ಲಿ ಉತ್ತಮ ಜೈವಿಕ ಚಹರೆಯಾದರೂ ಹೆಚ್ಚು ಜನಪ್ರಿಯವಾಗಿಲ್ಲ.
ಮುಂದಿನ ತಲೆಮಾರಿನ ಜೈವಿಕ ಚಹರೆ ಮೂಲಕ ವ್ಯಕ್ತಿಯನ್ನು ಗುರುತಿಸುವ ವ್ಯವಸ್ಥೆಗಳು ಮಾರು ದೂರದಿಂದಲೇ ಕೆಲಸ ಮಾಡಬೇಕು ಎನ್ನುವ ನಿರೀಕ್ಷೆಯಿದೆ. ಮುಖವನ್ನು ಜನಸಂದಣಿಯಿದ್ದಾಗಲೂ ಗುರುತಿಸುವುದು,ಬೆರಳಗುರುತನ್ನು ಇಪ್ಪತ್ತೈದು ಅಡಿ ದೂರದಿಂದಲೇ ಗುರುತಿಸುವುದು ಇವು ಸಾಧ್ಯವಾಗಬೇಕಿದೆ. ಕಿವಿಯ ಮೂಲಕ ವ್ಯಕ್ತಿಯ ಚಹರೆ ಪತ್ತೆ,ಮೈವಾಸನೆಯ ಮೂಲಕ,ನಡಿಗೆಯ ಶೈಲಿಯ ಮೂಲಕ,ಹೃದಯಬಡಿತದ ಮೂಲಕ,ಕಣ್ಣಿನ ಸುತ್ತದ ಕಣ್ಣುರೆಪ್ಪೆ,ಹುಬ್ಬು,ಕಣ್ಣಿನ ಕೆಳಗಿನ ವೃತ್ತಗಳವೇ ಮುಂತಾದ ರಚನೆಗಳ ಮುಖಾಂತರ,ಬೆವರಿನ ಮುಖಾಂತರ,ಕ್ಷಿಪ್ರಗತಿಯ ಡಿ ಎನ್ ಎ ಪರೀಕ್ಷೆಯ ಮೂಲಕ ವ್ಯಕ್ತಿಯನ್ನು ಗುರುತಿಸುವ ವಿಧಾನಗಳ ಬಗ್ಗೆ ಸಂಶೋಧನೆ ನಡೆದಿದೆ.

ಇಂಟ‌ರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.comನಲ್ಲಿ ಲಭ್ಯ.
Udayavani-epaper
*ಅಶೋಕ್‌ಕುಮಾರ್ ಎ

UDAYAVANI

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಗ್ರಾಮೀಣ ಪ್ರದೇಶಗಳಲ್ಲೂ ತ್ರೀಜಿ ಬೇಕು>> ಬೆಂಗಳೂರಿನಲ್ಲೇ ಸರಿಯಾಗಿ ಸಿಗುವುದಿಲ್ಲ ಇನ್ನು ಗ್ರಾಮೀಣ ಭಾಗದಲ್ಲಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.