ಮೋಡ ಚುಂಬನ..ಗಾಢಾಲಿಂಗನ..

0

ಈ ದಿನಗಳಲ್ಲಿ ಮಳೆಯ ಭಾವೋತ್ಕರ್ಷ ಉಕ್ಕೇರಿ, ಹೊಳೆ ನದಿಗಳೆಲ್ಲೆ ಮೀರಿ ಹರಿಸುತ್ತ ತುಂಬಿ ತುಳುಕುತ್ತಾ ಸಾಗಿವೆ. ಪ್ರಳಯವಾಗದ ಪ್ರಣಯ , ಎಂದೂ ರುದ್ರ ಮನೋಹರ. ಆ ಮೋಡ ಪ್ರಣಯವನ್ನು  ಕಟ್ಟಿಡುವ ಯತ್ನ ಈ ಜೋಡಿ ಕವನಗಳಲ್ಲಿ.

ಮೋಡಗಳು ಗಗನದಲಿ ಕಟ್ಟುವ ಶಿಲ್ಪಕಲಾ ವೈಭವವೆ ಅಸಾಧಾರಣ. ಅಂತಿಲ್ಲಿ ಒಂದಕ್ಕಿಂತ ಹೆಚ್ಚು ಮೋಡ ಸಮೂಹ ಪರಸ್ಪರ ಹಾದು, ಸಂಧಿಸಿ, ಮಾತನಾಡಿ, ಅಪ್ಪಿಕೊಂಡು, ಕೆಳೆಯಾಗಿ ಸರಸವಾಡುವ ಚುಂಬನದಾಟದಲಿ ಪ್ರಣಯ ಕೇಳಿಯಾಡುವ ಮೊದಲ ಭಾಗ ' ಮೋಡ ಚುಂಬನ'

ಆದರೆ ಈ ಪ್ರಣಯದಾವೇಗ ಮಳೆ ಪ್ರಳಯದಾವೇಗವಾಗಲಿಕ್ಕೆ ಎಷ್ಟು ಹೊತ್ತು ಬೇಕು? ಮೋಡತಾಡನ ಪ್ರಣಯೋತ್ಕರ್ಷಕೆ ಕಾವೇರಿಸಿ ಬಿಸಿಯಪ್ಪುಗೆಯ ವಿದ್ಯುತ್ಕಾಂತ ಸಮ್ಮಿಲನದ ಸೊಗಡುಡಿಸಿ, ಪರಸ್ಪರರಲ್ಲಿ ಸಂಗಮಿಸಿ ಕರಗಿಹೋಗುವಾಗ ಮಳೆಯಾಗದಿರಲು ಸಾಧ್ಯವೆ? ಆಕರ್ಷಣೆಯ ಘರ್ಷಣೆ ಮಿಂಚಾಗಿ ಹೊರಳದಿರಲು , ಗುಡುಗು - ಸಿಡಿಲಾಗಿ ಸುಳಿಯದಿರಲು ಆದೀತೆ? ಆ ಸಂಕ್ರಮಣವನ್ನೆಲ್ಲ ಒಟ್ಟುಗೂಡಿಸಿ ಬೆಸೆದ ಭಾವ ಎರಡನೆ ಭಾಗವಾದ ' ಗಾಢಾಲಿಂಗನ'ದಲ್ಲಿ ಮೂಡಿದೆ

' 1. ಮೋಡ ಚುಂಬನ.....'
________________

ಚುಕ್ಕೆ ಮೂಡದಲೆ ಇರುಳ 
ಮುಗಿಲರೆ ಸಂಜೆಗೆ ಕೊರಳ 
ಅಪ್ಪಿದ ಆಗಸದಲಿ ಸರಳ 
ಮೇಘದಲೆ ಮುತ್ತಿನ್ಹರಳಾ!

ಗುಡಿ ಗೋಪುರ ಕಟ್ಟಿದಂತೆ 
ಮೋಡಗಳೆ ಚಿತ್ತಾರವಂತೆ 
ಸುಯ್ಗಾಳಿಗೆದ್ದ ತರಗಲೆಗೆ 
ಧೂಳೆಬ್ಬಿಸಿ ನರ್ತಿಸೊಬಗೆ!

ದೂರದಲೆಲ್ಲೊ ಚಂದ್ರಮನ 
ಬೆಳ್ಬೆಳದಿಂಗಳ್ಹಾಲ್ದೊರೆತನ
ಚೆಲ್ಲಾಡಿದ ಬೆಳಕಿನ ಹುತ್ತ 
ಕಣೆ ಕಟ್ಟಿದೆ ಮೋಡ ಸುತ್ತ!

ಬೆಳ್ವಲದಾ ಪ್ರಜ್ವಲ ವೈಭವ 
ದಿಗ್ಭ್ರಮಿಸಿತೆ ಜ್ವಾಲಾಹಲವ
ವಿನ್ಯಾಸವೆ ಅದ್ಭುತವೆ ಸರಿ  
ಗಗನದಲೆ ಕಟ್ಟಿದಾ ನಗರಿ!

ಆ ಹೊತ್ತಿಗೆ ಆವಾಹನ ದಿನ 
ಎಲ್ಲಿತ್ತೋ ಆವೇಶದ ಸದನ
ಸರಸರ ಹತ್ತಿರಕೆ ಸರಿದಾಡಿ
ನೆಗೆದು ಮೋಡ ಕೆಳೆ ಕೂಡಿ!

'2...........ಗಾಢಾಲಿಂಗನ'
________________

ಧುತ್ತನೆ ಘನ ಗಾಡಾಲಿಂಗನ 
ಅಪ್ಪಿದಲೆ ಮೋಡ ಚುಂಬನ 
ಸುರುಳಿ ಸುತ್ತಿ ಸರ್ಪ ಸಖ್ಯ 
ವರಿಸಿದಂತೆ ಸುಮೇಘದೃಶ್ಯ!

ಆಲಿಂಗನದಲಿರಲು ರೌದ್ರತೆ 
ಸಲ್ಲೇಖನದಂತೆ ಮುದ ಕಥೆ 
ಮೈ ಮುರಿಸಿದ ಬಿಗಿಯಪ್ಪಿಗೆ 
ಮಳೆಯಾಗದಿರದೇ ತಪ್ಪಿಗೆ!

ಸಮ್ಮಿಲನದ ಶಾಖೋತ್ಕರ್ಷ 
ಸ್ಪರ್ಶಕೆರಗಿದ ಕಿಡಿ ಸಂಘರ್ಷ 
ಚುಂಬನ ತಾಡನ ಸುಹರ್ಷ 
ಸಿಡಿಲ್ಗುಡುಗು ಮಿಂಚರಿಸೀಶ!

ಹಿಡಿಯಲೆಷ್ಟೊತ್ತಾನೆ ರಸಿಕ 
ಬಿಟ್ಟು ಬಿಡದಲೇ ಒಳ ಸುಖ 
ಕಡೆ ಬಿಟ್ಟಾಗಲೆ ವರ್ಷ ವಾಕ
ಸುಖರತಿ ಫಲಿತ ಮಳೆಸಖ!

ವಿಳಂಬಿತ ವಿಜೃಂಭಿತ ರತಿ 
ಧಾರಾಕಾರದ ಮಳೆ ಗರತಿ
ಪ್ರಣಯಿಗಳಲಿ ಹಚ್ಚಿ ಪ್ರಣತಿ
ಪ್ರೇಮ ಕಾಮೋದ್ರೇಕಕೆ ಸ್ವಸ್ತಿ!

ಧನ್ಯವಾದಗಳೊಂದಿಗೆ,

ನಾಗೇಶ ಮೈಸೂರು

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತುಂಬಾ ಸುಂದರ ಕವನ. ಭಾವದ ಉತ್ಕಟತೆಯನ್ನು ಸಮರ್ಥವಾಗಿ ವರ್ಣಿಸಿದೆ ನಿಮ್ಮ ಕವನ. ಬಹಳ ಹಿಡಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಸಂತ್ ರವರೆ, ತಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು. ಆದರೆ ಈ ಉತ್ಕಟತೆ ಬರಿ ಕವನಕ್ಕೆ ಮಾತ್ರವಿರಲಿ; ನಿಜ ಮೋಡಕ್ಕೂ ಆ ಚಾಳಿ ಬಂದು ಬಿಟ್ಟು, ಅತಿವೃಷ್ಟಿಯಾಗದಿರಲೆಂದು ಹಾರೈಸೋಣ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

. . . .!!!!! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿ ನಾಗರಾಜರೆ, ಐದು ಆಶ್ಚರ್ಯಸೂಚಕ ಹಾಕಿದ್ದೀರಾ - ಹೇಗೆ ಹಂಚೋದೊ ತಿಳಿಯುತ್ತಿಲ್ಲ (ಪ್ರಾಸಕ್ಕೆಷ್ಟು, ಭಾವಕ್ಕೆಷ್ಟು..ಇತ್ಯಾದಿ). ಐದರೆ ಜತೆಗೆ ಮತ್ತೊಂದು ಸೇರಿಸಿ ಆರು ಧನ್ಯವಾದಗಳು ನನ್ನ ಕಡೆಯಿಂದ ನಿಮಗೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

"ಚುಕ್ಕೆ ಮೂಡದಲೆ ಇರುಳ ಮುಗಿಲರೆ ಸಂಜೆಗೆ ಕೊರಳ ಅಪ್ಪಿದ ಆಗಸದಲಿ ಸರಳ ಮೇಘದಲೆ ಮುತ್ತಿನ್ಹರಳಾ!" ಆಗಾಗ ಮೋಡಗಳನ್ನು ಧಿಟ್ಟಿಸಿದಾಗ ಅವು ಯಾವ್ಯಾವ್ದೋ ಆಕಾರ ಪಡೆದ ಹಾಗೆ ಅನಿಸುತ್ತೆ . ನರಿ ನಾಯಿ , ಕಾಗೆ ಗೂಬೆ ಕರಡಿ ಆನೆ ಇತ್ಯಾದಿ ....! ಆದರೆ ನಮಗೆ ಕಂಡ ಹಾಗೆ ಇನ್ನೊಬ್ಬರಿಗೆ ಅನ್ನಿಸದು ..!! ಮೋಡಕ್ಕೆ ಮೋಡ ಡ್ಹೀ ಕೊಡುವಾಗ ...!! ಹುಟ್ಟಿದ್ದು ಕವನ ಈಗ ...!! ಸೂಪರ್ ಕವನಗಳು - ಮತ್ತು ವಾಕ್ಯ ಸಂಯೋಜನೆ .. ಶುಭವಾಗಲಿ \।/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಗಳೆ, ನನಗೂ ಗೂಬೆ, ನರಿ, ಎಲ್ಲಾ ಕಾಣುತ್ತೆ ಮೋಡದಲ್ಲಿ. ಆದರೆ ಕನ್ನಡಿಯಲ್ಲಿ ಮುಖ ನೋಡಿಕೊಂಡ ತಕ್ಷಣ, ಅವೆಲ್ಲಾ ಅಪ್ಸರೆ, ಅರಮನೆ, ದೇವತೆಗಳ ಹಾಗೆ ಬದಲಾಗಿ ಹೋಗುತ್ತೆ. ಅದು ಮತ್ತೆ ನಾಯಿ, ನರಿ ದಾರಿ ಹಿಡಿಯೋಕೆ ಮೊದಲೆ ಕವನ ಬರೆದುಬಿಡಬೇಕು - ಇಲ್ಲಾಂದ್ರೆ, 'ಮೋಡ ಚುಂಬನ ಆಲಿಂಗನ' ಹೋಗಿ - 'ಭೂತ ದರ್ಶನ, ಹೃದಯ ಸ್ತಂಭನ' ಅಂತ ಬರೆಯೊ ಸ್ಥಿತಿ ಬಂದುಬಿಡುತ್ತೊ ಏನೊ.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮರದಡಿಯಲಿ ಜಡಿಮಳೆಗೆ ನೆನೆದು ನಿಂತು, ಸಿಡಿಮಿಡಿಗೊಂಡು, ಮೋಡ ಮಳೆಗೆ ಹಿಡಿಶಾಪ ಹಾಕುತ್ತಿದ್ದರೆ, ಇಲ್ಲಿ ನಾಗೇಶರು ಬೆಚ್ಚಗೆ ಕುಳಿತು ಗಾಢಾಲಿಂಗನ...ಎಂದೆಲ್ಲಾ ಕವಿತೆ ಬರೆಯುತ್ತಿದ್ದಾರೆ. :( ಕವನ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್ ಜಿ, ನೀವು ಮಳೆ ನೀರಲಿ 'ನೆನೆಯುತ್ತಾ' ಅತ್ತು ಶಪಿಸಿದರೆ, ನಾನು ಭಾವನೆಗಳಲಿ 'ನೆನೆಯುತ್ತಾ' ಅತ್ತು ತಪಿಸಿದೆ...ಒಟ್ಟಾರೆ ಎರಡೂ ಕಡೆ 'ನೆನೆಯುತ್ತಲೆ' ವದ್ದೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.