ಮೋಡಕೂ ಉಂಟೆ ಗರ್ಭಪಾತ ?

4

ಹಿಂದೊಮ್ಮೆ ಮೋಡದ ಕಿತಾಪತಿಯಿಂದ ಘಟಿಸಿದ 'ಕ್ಲೌಡ್ ಬರ್ಸ್ಟ್' ದೊಡ್ಡ ರಾದ್ದಾಂತವನ್ನೆಬ್ಬಿಸಿ ಎಲ್ಲವನ್ನು ಏರುಪೇರಾಗಿಸಿ ಗಲಿಬಿಲಿಗೊಳಿಸಿದ್ದು ನೆನಪಿದೆಯೆ ? ಆ ಹೊತ್ತಲ್ಲಿ ಮೂಡಿದ ಕವನದ ಸಾಲುಗಳಿವು. ಇದರಲ್ಲಿ ಮೋಡದ ತಪ್ಪೇನು ಇರದಿದ್ದರು ಪರಿಸರದ ಸಮತೋಲನ ಏರುಪೇರಾಗಿಸುವ ನಮ್ಮ ಪಾತ್ರ ನಗಣ್ಯವೇನಲ್ಲ. ಮೇಘರಾಣಿ ಒಂದು ರೀತಿಯ ಗರ್ಭವತಿಯಿದ್ದ ಹಾಗೆ. ಸುಖ ಪ್ರಸವವಾದರೆ ಮುದ ತರುವಷ್ಟೆ ಸಹಜವಾಗಿ ಗರ್ಭಪಾತವೊ, ಗರ್ಭಸ್ರಾವವೊ ಆದರೆ ವಿನಾಶದ ಬೀಜವನ್ನು ಬಿತ್ತಿಯೆ ಹೋಗುತ್ತಾಳೆ. ಪ್ರಣಯದ ಸತ್ಯಾಚಾರದಲ್ಲಿ ಸುಖ ತರುವವಳಾದರೆ, ಅತ್ಯಾಚಾರದ ಸಂಧರ್ಭದಲ್ಲಿ ಆಕ್ರೋಶ ಕಾರುವ ವಿಧ್ವಂಸಕಿಯೂ ಆಗುತ್ತಾಳೆ. ಇದೆಲ್ಲ ತರದ ಸಮಷ್ಟಿ ಭಾವವನ್ನು ಪದಗಳಲ್ಲಿ ಸಾಧ್ಯವಾದಷ್ಟು ಹಿಡಿದಿಡುವ ಯತ್ನ ಈ ಕೆಳಗಿನ ಕವನದ್ದು..:-)

ಗರ್ಭವತಿ ಮಾನ್ಸೂನ್ ಮೋಡ
_______________________

ಗರ್ಭವತಿ ಮಳೆ ಮೋಡ
ಸರಿ ಪ್ರಸವಿಸಬೇಕು ನೋಡು
ಗರ್ಭಪಾತವಾದರೆ ಸಿಡಿತ 
ಚಂಡಿಯವತಾರದ ಭಗೀರಥ! ||

ಸರಿ ಪ್ರಸವದ ಹೊತ್ತು
ಮುನ್ಸೂಚನೆ ನೂರು ತರ
ಕಾರ್ಮೋಡಕು ಉಬ್ಬಿದುದರ
ಹೊತ್ತಿಗೆ ಮಳೆಯ ಅವತಾರ! ||

ಅವಸರವಸರದ ಮಿಲನ
ಅತ್ಯಾಚಾರದ ಪ್ರಣಯವೆ?
ನಿಂತಲ್ಲೆ ಗರ್ಭ ಧರಿಸುತ
ಅಲ್ಲೆ ಆದಂತೆ ಗರ್ಭಪಾತ...! ||

ಗರ್ಭಕು ಮುನ್ನವೆ ಸದ್ದು
ಗಡಗಡ ನಡುಗಿ ಗುಡುಗಿದ್ದು
ಚೂರು ಚೂರಾಗಿ ಮುರಿದು
ಬಿರು ಮಳೆಯಾಗಿ ಸುರಿದದ್ದು! ||

ಅತ್ಯಾಚಾರ ಸತ್ಯಾಚಾರ
ಇರಲಿ ಬಿಡಲಿ ವಿಚಾರ
ಸಿಡಿದದ್ದು ಸತ್ಯ ಮೋಡ
ಕದಡಿ ಜನಜೀವನ ಗಾಢ..! ||

ಪ್ರಳಯ ಪ್ರವಾಹ ಕೊಚ್ಚಿ
ಗುಡಿ ಗೋಪುರ ನೆಲ ಕಚ್ಚಿ
ತೊಳೆದೊಯ್ಯುವ ಮಳೆ ನೀರ
ಸಿಡಿತಕೆ ಬಚ್ಚಿಟ್ಟವರಾರು...! ||

ಒಟ್ಟಾರೆ ಹೊಸ ಸತ್ಯ ನಿಸರ್ಗ
ಗರ್ಭಸ್ರಾವ ಮೋಡಕು ಸಹಜ
ಏರುಪೇರಾಗಿಸದಿರಿ ನಿಸರ್ಗ
ಬೇಡ ಗರ್ಭ ಸಿಡಿಸುವ ಪ್ರಸಂಗ! ||
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಜ, ನಾಗೇಶರೇ. ಅಕಾಲ ಪ್ರಸವ/ಗರ್ಭಪಾತ ತರದೇ ಇದ್ದೀತೇ? 'ಮಾಡಿದ್ದುಣ್ಣೋ ಮಹರಾಯ'!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಾವುಗಳು ಚಿಲ್ಲರೆ ಚಿಲ್ಲರೆಯಾಗಿ ಮಾಡುವ ನಿಸರ್ಗ ವಿರೋಧಿ 'ಕೈಂಕರ್ಯ'ಗಳಿಗೆ ಪ್ರಕೃತಿ ತನ್ನದೇ ಆದ ರೀತಿಯಲ್ಲಿ ನಿವ್ವಳ ಮೊತ್ತದಲ್ಲಿ ಸೇಡು ತೀರಿಸಿಕೊಳ್ಳುತ್ತದೆ. ಮಾಡಿದ್ದನ್ನು ಉಣ್ಣಲು ಬಿಡದಂತೆ ಸವರಿ ಹಾಕಿಬಿಡುವ ದುರಂತಗಳೂ ಅಪರೂಪವೇನಲ್ಲ. ಆದರೂ ನಾವು ಇನ್ನು ಸುರಕ್ಷಿತವೆನ್ನುವ ಭಾವದಲ್ಲಿ ಮಿಕ್ಕವರು ತಮ್ಮ ಕಾಯಕ ಮುಂದುವರೆಸಿಯೆ ಇರುತ್ತಾರೆ - ಮಾಡಿ ಉಣ್ಣಲು ಸಿದ್ದರಾಗುವವರ ಹಾಗೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.