ಮುದ್ದಣ್ಣ  ಮನೋರಮೆ ಕಲಿತ ಚೀನಿ ಭಾಷೆ! (ಲಘು ಹಾಸ್ಯ)

4.75

ಪೀಠಿಕೆ /ಟಿಪ್ಪಣಿ:

ಈ ಲಘು ಹಾಸ್ಯದ ಬರಹ ಓದುವ ಮೊದಲು ಈ ಕೆಲವು ನಿವೇದನೆ, ತಪ್ಪೊಪ್ಪಿಗೆಗಳು :-)
 
1. ನಾನು ಮುದ್ದಣ್ಣನನ್ನು ಚೆನ್ನಾಗಿ ಓದಿ ತಿಳಿದುಕೊಂಡವನಲ್ಲ. ಶಾಲಾ ದಿನಗಳಲ್ಲಿ ಎಂದೊ ಓದಿದ್ದ "ಮುದ್ದಣ್ಣ ಮನೋರಮೆಯ ಸರಸ ಸಲ್ಲಾಪ" ಎಂಬ ಪಾಠ ಓದಿದ ನೆನಪಷ್ಟೆ ಇದರ ಮೂಲ ಬಂಡವಾಳ. ಹೀಗಾಗಿ ಅವರಿಬ್ಬರ ಸಂಭಾಷಣೆಯ ಎಳೆಯನ್ನೆ ಈ ಬರಹದ ಹಂದರವನ್ನಾಗಿ ಬಳಸಿದ್ದೇನೆ.
2. ಮೇಲ್ನೋಟಕ್ಕೆ ತಿಳಿಯುವಂತೆ ಇದೊಂದು ಲಘು ಹಾಸ್ಯದ ಬರಹ. ಖಂಡಿತ ಮುದ್ದಣ ಮನೋರಮೆಯ ಅಗೌರವವಾಗಲಿ, ಛೇಡನೆಯಾಗಲಿ ಅಲ್ಲ. ಬದಲಿಗೆ ಆ ಹಾಸ್ಯ ದ್ರವವನ್ನು ಈಗಿನ ಅಧುನಿಕ ಜಗಕ್ಕೆ ಹೊಂದಾಣಿಸುವ ಕಿರು ಪ್ರಯತ್ನವಷ್ಟೆ ಹೊರತು ಅವಹೇಳನವಲ್ಲ. 
3. ಕಲಿಯಲು ತುಸು ಕಬ್ಬಿಣದ ಕಡಲೆ ಎಂದೆ ಹೆಸರಾದ 'ಚೀಣಿ' ಭಾಷೆಯ ಕೆಲ ತುಣುಕುಗಳನ್ನು ಪರಿಚಯ ಮಾಡಿಕೊಡುವುದಷ್ಟೆ ಇಲ್ಲಿನ ಉದ್ದೇಶ. ಹಾಗೆಂದು ನಾನೇನೂ ಚೀನಿ ಭಾಷಾ ಪಂಡಿತನಲ್ಲ, ಮತ್ತು ಇಲ್ಲಿರುವುದೆಲ್ಲಾ ಪಕ್ಕಾ ಸರಿಯಾದ ಶಾಸ್ತ್ರೀಯ ಚೀಣಿ ಭಾಷೆಯೆ ಎಂದು ಹೇಳುವ ಧಾರ್ಷ್ಟ್ಯವಾಗಲಿ, ಜ್ಞಾನವಾಗಲಿ ನನ್ನಲ್ಲಿಲ್ಲ. ಕೇವಲ ಕೆಲಸದ ನಿಮಿತ್ತದ ಒಡನಾಟದಲ್ಲಿ, ಸಾಮಾನ್ಯನೊಬ್ಬನಾಗಿ ನಾ ಕಂಡ, ನಾನರಿತುಕೊಂಡ ಬಗೆಯ ದಾಖಲೆಯಷ್ಟೆ; ಗ್ರಹಿಕೆಯಲ್ಲಿ ತಪ್ಪಿದ್ದರೆ ಕ್ಷಮೆಯಿರಲಿ, ಹಾಗೆಯೆ ತಿಳಿದವರು ಯಾರಾದರೂ ಇದ್ದರೆ ತಿದ್ದಲಿ. ಮೆಲು ಹಾಸ್ಯದೊಂದಿಗೆ ಕೇವಲ ಮೇಲ್ನೋಟದ ಸರಳತೆ, ಸಂಕೀರ್ಣತೆಗಳ ಪರಿಚಯವಷ್ಟೆ ಈ ಬರಹ ಉದ್ದೇಶ.
4.  ಸಾಧಾರಣ ಪರಭಾಷೆ, ಅದರಲ್ಲೂ ವಿದೇಶಿ ಭಾಷೆ ಕಲಿಯುವುದು ತುಸು ತ್ರಾಸದಾಯಕ ಕೆಲಸ. ಈ ಮುದ್ದಣ್ಣ ಮನೋರಮೆಯ ಹಾಸ್ಯ ಸಂವಾದದ ರೂಪದಲ್ಲಿ ಹೇಳಿದರೆ ತುಸು ಸುಲಭವಾಗಿ ಗ್ರಾಹ್ಯವೂ, ಜೀರ್ಣವೂ ಆಗುವುದೆಂಬ ಅನಿಸಿಕೆಯೊಂದಿಗೆ ಬರೆಯುತ್ತಿದ್ದೇನೆ. ಒಂದು ವೇಳೆ ಈ ವಿಧಾನ ಹಿಡಿಸಿದರೆ, ಮತ್ತಷ್ಟು ಚೀನಿ ಪದಗಳ ಕಲಿಕೆಗೆ ಇದೆ ತರಹದ ಬರಹಗಳ ಮೂಲಕ ಯತ್ನಿಸುತ್ತೇನೆ. ಕೊನೆಗೆ ಕನಿಷ್ಠ ಮುದ್ದಣ್ಣ ಮನೋರಮೆಯ ಹಾಸ್ಯವಾದರೂ ಹಿಡಿಸೀತೆಂಬ ಆಶಯ.
5. ತುಸು ಹಳತು ಹೊಸತಿನ ಮಿಶ್ರಣದ ಹೊದಿಕೆ ಕೊಡಲು ಭಾಷಾಪ್ರಯೋಗದಲ್ಲಿ ಹಳೆ ಮತ್ತು ಹೊಸತಿನ ಶೈಲಿಗಳ ಮಿಶ್ರಣವನ್ನು ಯಾವುದೆ ನಿಯಮಗಳ ಬಂಧವಿಲ್ಲದೆ, ಧಾರಾಳವಾಗಿ ಬಳಸಿದ್ದೇನೆ - ಓದುವಾಗ ಆಭಾಸವಾಗದೆಂದುಕೊಂಡಿದ್ದೇನೆ, ನೋಡೋಣ!
 
ಇನ್ನು ಪೀಠಿಕೆಯಿಂದ ಹೊರಡೋಣ , ಲೇಖನದತ್ತ - "ಮುದ್ದಣ್ಣ  ಮನೋರಮೆ ಕಲಿತ ಚೀನಿ ಭಾಷೆ!"
 
- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
 
------------------------------------------------------------------------------------------------------------------------------------
 ....ಮುದ್ದಣ್ಣ ಮನೋರಮೆ ಸಂವಾದವೂ, ಚೈನೀಸು ಕಲಿಕೆಯೂ....!
------------------------------------------------------------------------------------------------------------------------------------
 
ಅಂದೊಂದು ದಿನ ಸೊಗಸಾದ, ಪೂರ್ಣ ಚಂದ್ರಮನಾವರಿಸಿದ ತುಂಬು ಹುಣ್ಣಿಮೆಯ ಇರುಳು. ಎಂದಿನಂತೆ ಮಡದಿ ಮನೋರಮೆಯೊಡನೆ ಊಟ ಮುಗಿಸಿದ ಮುದ್ದಣ್ಣ, ಚಂದ್ರಿಕೆಯ ತಂಬೆಲರನ್ನು ಮೆಲ್ಲಲು ಮನೋರಮೆಯ ಜತೆ ಮಹಡಿಯನ್ಹತ್ತಿದ್ದಾನೆ. ನಿಷೆಗೆ ತೆರೆದುಕೊಂಡಿದ್ದ ಛಾವಣಿಯಿರದ ಬಯಲ ಸಜ್ಜೆಯ ತೂಗುಯ್ಯಾಲೆಯ ಮೇಲ್ಕುಳಿತವನ ಪಕ್ಕ ಚಂದ್ರಮನ ಜತೆಗೆ ಚಕೋರಿಯಂತೆ ಮನೋರಮೆ ಕುಳಿತಿದ್ದಾಳೆ, ತನ್ನ ಚಿಗುರು ಬೆರಳುಗಳಿಂದ ಎಳೆ ಚಿಗುರೆಲೆಗಳನ್ನು ಮಡಿಸಿ ತಾಂಬೂಲವಾಗಿಸುತ್ತ. ಮೆಲುವಾಗಿ ಉಯ್ಯಾಲೆಯನ್ನು ಜೀಕುತ್ತಲೆ ಪ್ರಿಯೆಯ ತೊಡೆಯ ಮೇಲೆ ಒರಗಿ ಹಾಗೆ ಕಣ್ಮುಚ್ಚಿದ ಮುದ್ದಣ್ಣನ ಕೊರಳ ಸುತ್ತ ಎಡತೋಳಿನಾಧಾರವಿರಿಸಿ, ತುದಿಯುಗುರಿನಿಂದ ಅವನ ಮುಂದಲೆಯನ್ನು ನೇವರಿಸುತ್ತ, ಬಲದ ಕೈಯಿಂದ ಅವನ ತೆರೆದ ಬಾಯಿಗೆ ಮಡಿಚಿಟ್ಟ ತಾಂಬೂಲದ ಕಿರುಪಿಂಡಿಯ ನೀಡುತ, ಮೆಲುದನಿಯಲಿ ರಾಗವಾಗಿ ಹಾಡುತ್ತಿದ್ದಾಳೆ ಪ್ರಿಯಸತಿ. ಕೇಳುತ ಕೇಳುತಲೆ ತನ್ಮಯನಾಗಿ ತಲೆದೂಗುತ್ತ ಹಾಗೆಯೆ ನಿದ್ದೆಯ ಮಂಪರಿಗಿಳಿಯುತಿದ್ದವನನ್ನು ಮೆಲುವಾಗಿ ಬೀಸುವ ತಂಗಾಳಿಯೂ ಮೃದುವಾಗಿ ಸ್ಪರ್ಶಿಸಿ ತಟ್ಟಿ ತಟ್ಟಿ ಮಲಗಿಸುತ್ತಿದೆ. ಆ ಗಳಿಗೆಯೆ ಅಖಂಡವಾಗಿರಲಿ, ನಿರಂತರವಾಗಿರಲಿ ಎಂದು ಆಶಿಸುತ್ತಾ ನಿದಿರಾದೇವಿಯ ಮಡಿಲಿಗೆ ಜಾರುತ್ತಿದ್ದಾನೆ ಕವಿವರ್ಯ ಮುದ್ದಣ್ಣ...
 
ಅಂತಿರುವ ಸೊಗಸಾದ ಇರುಳಿನ ರಾತ್ರಿ ಇನ್ನೇನು ಮಂಪರು ಕವಿದು ಗಾಢನಿದ್ರೆಗೆ ಜಾರಿದನೇನೊ ಎನುವಷ್ಟರಲ್ಲಿ ತಟ್ಟನೆ ಅದೆಲ್ಲಿತ್ತೊ ಕಾಣೆ - ಶುರುವಾಯ್ತೆ ಮಳೆರಾಯನ ಆರ್ಭಟ.... ಕಡುಕಪ್ಪಿನ ಕಾರ್ಮೋಡಗಳ ಪುಂಡರ ಗುಂಪು ಶಶಾಂಕನ ಸುತ್ತಲಾವರಿಸಿ, ಅವನನ್ನೆ ಕಬಳಿಸಿ ನುಂಗಿ ಕತ್ತಲಾಗಿಸಿದ್ದೆ ಅಲ್ಲದೆ, ಅವನ ಮೃದುಲ, ಶೀತಲ, ಸ್ಪಟಿಕದ ಮೈ ಸೋಕಿ ಬೆವರಿತೇನೊ ಎಂಬಂತೆ ದಪ್ಪ ಹನಿಹನಿಗಳಾಗಿ ಕರಗಿ ಒಂದೊಂದೆ ಕಳಚಿ ಉದುರಲು ಆರಂಭವಾಯ್ತು. ಗಗನ ಕಳೆದು ಭುವಿ ಮುಟ್ಟುವ ಹೊತ್ತಿಗೆ ಆ ಮೊದಲ ಹನಿ, ಚಂದ್ರ-ಚಕೋರಿಯರಂತಿದ್ದ ಮುದ್ದಣ್ಣ ಮನೋಹರ ಜೋಡಿ ಕುಳಿತಿದ್ದ ಜಾಗೆಯನ್ನು ನೋಡಿ ಆಕರ್ಷಿತವಾದಂತೆ, ತಟ್ಟನೆ ಮುದ್ದಣನ ಹಣೆಯ ಮೇಲೆ ಹೆಜ್ಜೆಯೂರಿ ಮುಗ್ದೆ ಮನೋರಮೆಯ ಸೌಂದರ್ಯವನ್ನೆ ದಿಟ್ಟಿಸಿನೋಡತೊಡಗಿತು. ಆಯಾಚಿತವಾಗಿ ಮದನನತ್ತಲೆ ದೃಷ್ಟಿ ನೆಟ್ಟಿದ್ದ ಮಡದಿ, ಹಣೆಯ ಮೇಲೆ ಬೆವರಿಳಿಯಿತೇನೋ ಎಂದೆ ಭ್ರಮಿಸಿ, ತಂಗಾಳಿಯಲಿದೆಂತ ಬೆವರೆಂದು ಬೆರಗಾಗುತ್ತಲೆ ಸೆರಗ ತುದಿಯಿಡಿದು ಬೆರಳಿಂದ ಆ ಬೆವರ ಹನಿಯನ್ನು ಸವರಿದಳು. ಸೆರಗ ತುದಿವಸ್ತ್ರಕ್ಕಂಟಿದ ಹನಿ ಆ ಮುಗುದೆಯ ಮೊಗ ನೋಡಲಾಗದಲ್ಲ ಎಂಬ ಕೊರಗಲೆ ಬೇಸತ್ತು ಹೀರಿದ ವಸ್ತ್ರದುಡಿಗೆ ಸೇರಿತು. ಅದನ್ನೆ ಕಾಯುತ್ತಿದ್ದಂತೆ ಮತ್ತುರುಳಿತು ಮತ್ತೊಂದು ಹನಿ; ಮಗದೊಂದು, ತದ ನಂತರ ಇನ್ನೊಂದು. ಮೊದಮೊದಲಂದುಕೊಂಡ ಹಾಗಿದು ಬೆವರ ಹನಿಯಲ್ಲ; ಬದಲು ಮಳೆ ನೀರು ಜೋರಾಗುವ ಮುನ್ನಡಿಯೆಂದರಿತಾಗ ದಿಗ್ಬ್ರಮೆಯಿಂದ ಪತಿಯನ್ನು ಮೆಲುವಾಗಿ ತಟ್ಟೆಬ್ಬಿಸಿ ಒಳ ಕರೆತಂದಳು. ಇನ್ನು ಬಾಗಿಲನು ಹಾಕಿ ಒಳಗೆ ಸ್ವಸ್ತವಾಗಿ ಕೂರುವುದಕ್ಕಿಲ್ಲ, ಭೋರೆಂದು ಶುರುವಾಯ್ತು ಮಳೆ. 
 
ಜೋರಾದ ಸದ್ದಿನಿಂದಾಗಿ ಪೂರ್ತಿ ಎಚ್ಚರನಾಗಿದ್ದ ಮುದ್ದಣ್ಣ, ನಲ್ಲೆಯತ್ತ ತಿರುಗಿ, "ಮನೋಹರಿ, ಇದೇನಿದು ಇದ್ದಕ್ಕಿದ್ದ ಹಾಗಿಂತಹ ಮಳೆ? ನನ್ನ ಸೊಗಸಾದ ಪಲ್ಲಂಗ-ತೂಗಾಟದ ನಿದ್ರೆಯೆಲ್ಲಾ ಹಾಳಾಗಿ ಹೋಯ್ತೆ.." ಎಂದು ವಿಲಪಿಸಿದ. 
 
ಅದನ್ನು ಕೇಳಿ ನಸುನಕ್ಕ ಮಡದಿ ಮನೋರಮೆ ಛೇಡನೆಯ ದನಿಯಲ್ಲಿ, " ನಿಮಗೆ ಪಲ್ಲಂಗದ ನಿದ್ರೆ, ನನಗೆ 'ಜೋಮು' ಹಿಡಿದರೂ ಅಲುಗಾಡದೆ ನಿಮ್ಮ ನಿದ್ದೆ ಕೆಡದಂತೆ ಕೂರುವ ಶಿಕ್ಷೆ...ಸದ್ಯ, ಮಳೆ ಬಂತಾಗಿ, ನಾನು ಬದುಕಿದೆ.."
 
ಮಳೆಯ ಹೆಸರನ್ನು ಮತ್ತೆ ಕೇಳುತ್ತಿದ್ದಂತೆ ಮುದ್ದಣ್ಣನ ಕವಿ ಹೃದಯ ಜಾಗೃತವಾಗಿ, "ಆಹಾ! ರಮಣಿ, ಈ ಮಳೆಯೆಂತಾ ಮನೋಹರವಾಗಿದೆ..ನನಗಿದರ ಸದ್ದು ಕೇಳುತ್ತಿದ್ದಂತೆ, ಲೇಖನಿ ಹಿಡಿದು ಕೂತು ಕಾವ್ಯ ಬರೆವ ಹಂಬಲವುಟ್ಟುತ್ತಿದೆ...ಈ ಸೊಗಸಾದ ಮಳೆಯೆಬ್ಬಿಸಿದ ಮಣ್ವಾಸನೆ, ವಿಕಸಿತ ಸುಮದ ಸುವಾಸನೆಯ ಜತೆ ಆಘ್ರಾಣಿತವಾಗಿ ಮನದಲಿ ಹುರುಪು ಹುಟ್ಟಿಸುತ್ತಿದೆ...ನಾನು ಬರೆಯುವ ಪರಿಕರಗಳನ್ನು ತಂದಿಡುವೆಯ ರಮಣಿ..?" ಎಂದ.
 
ಬರಹದ ಸಲಕರಣೆಗಳ ಸುದ್ಧಿಯೆತ್ತುತ್ತಲೆ ತಟ್ಟನೆ ಬೆಚ್ಚಿ ಬಿದ್ದ ಮನೋರಮೆಯು, "ಅಯ್ಯಯ್ಯೊ, ಪ್ರಾಣನಾಥ! ದಯವಿಟ್ಟು ಹಾಗೆ ಮಾಡಬೇಡಿ..ನೀವು ಬರೆಯ ಕೂತರೆ ಪಕ್ಕದಲ್ಲೊಂದು ಕಟ್ಟಿಕೊಂಡ ಹೆಣ್ಣು ಪುತ್ಥಳಿ ಬಂದು ನಿಂತರೂ ಗಮನಿಸದ ವೈರಾಗ್ಯ ನಿಮ್ಮದು..ಅದೂ ಅಲ್ಲದೆ, ಇಂದು ನಮ್ಮ ವಿವಾಹದ ವಾರ್ಷಿಕ ದಿನಾಚರಣೆ. ಬರಿ ನಾವಿಬ್ಬರೆ ಆರಾಮವಾಗಿ, ಖುಷಿಯಿಂದ ಕಾಲ ಕಳೆಯುವ ಉದ್ದೇಶದಿಂದಲ್ಲವೆ ಹೊರ ಹೋಗಿ ಕೂತಿದ್ದು?  ಹಾಳು ಮಳೆಯಿಂದಾಗಿ ಎಲ್ಲವೂ ಹಾಳಾಯ್ತು.." ಎನ್ನುತ್ತ ಮಳೆಯನ್ನು ಶಪಿಸಿದಳು.
 
"ಅದೂ ನಿಜವೆನ್ನು....ಈ ದಿನ ವನ-ವಿಹಂಗಮ ವಿಹಾರ ನಡೆಸುತ್ತ, ಜೋಡಿ ಹಕ್ಕಿಗಳ ಹಾಗೆ ಆಡಿಕೊಂಡಿರಬೇಕಾದ ದಿನ...ಆದರೀ ಮಳೆಯೇಕೊ ಹೊರಗ್ಹೋಗಬಿಡದೆ ಕಟ್ಟಿಹಾಕುತ್ತಿದೆಯಲ್ಲ...ಸರಿ ಪ್ರಿಯೆ, ನೀನೆ ಹೇಳು ಏನು ಮಾಡುವುದೀಗ? ನಮ್ಮೀ ವಿಶೇಷ ದಿನದ ಸಲುವಾಗಿ ಏನಾದರೂ ವಿಶೇಷ ಆಲೋಚನೆಯಿದ್ದರೆ ಅದನ್ನೆ ಅನುಸರಿಸೋಣ..."
 
"ಪ್ರಿಯಾ, ಹೇಗೂ ಹೊರಗಂತೂ ಹೋಗುವಂತಿಲ್ಲಾ...ಇಲ್ಲೆ ಏನಾದರೂ ರಸವತ್ತಾದ, ಆಸಕ್ತಿಯುಟ್ಟಿಸುವುದೇನಾದರೂ ಇದ್ದಲ್ಲಿ ಹೇಳಲಾರೆಯಾ?" ಎಂದ ಮಡದಿಯತ್ತ ಮೆಚ್ಚುಗೆಯಿಂದ ನೋಡುತ್ತ, "ಪ್ರಿಯೆ, ಕವಿಯಾಗಿ ಹೇಳೆಂದರೆ ನನ್ನ ಹೊಸ ಕವನವನ್ನು ಓದಬೇಕಷ್ಟೆ.. ಅದಂತೂ ನೀನು ಹೇಗೂ ಕೇಳಿಯೆ ಇರುತ್ತಿ....ಬೇಕಿದ್ದರೆ ಮತ್ತೊಮ್ಮೆ...."
 
"ಅಯ್ಯೊ..ಅದು ದಿನವೂ ನಡೆಯುವ ಪ್ರಸಂಗ ತಾನೆ? ಅದು ಬೇಡ..ಮತ್ತೇನಾದರೂ ಹೊಸತಿದ್ದರೆ ಹೇಳು...ಅಲ್ಲದೆ ನೀ ಬರಿ ಹೇಳುವುದು ಮತ್ತು ನಾನು ಬರಿ ಕೇಳುವುದು - ಅಂತಹ ವಿಷಯವೂ ಬೇಡ..."
 
"ಮತ್ತೆಂತಿರಬೇಕು ರಮಣಿ...?"
 
"ನನಗೂ ಆಸಕ್ತಿ ಹುಟ್ಟಿಸುವಂತಿರಬೇಕು, ಕೊನೆತನಕ ಕುಂದದಂತಿರಬೇಕು, ಜತೆಗೆ ನಾನೂ ಸಕ್ರೀಯವಾಗಿ ಪಾಲುಗೊಳ್ಳುವಂತಿರಬೇಕು!"
 
" ಹಾಗಾದರೆ ನಾವಿಬ್ಬರೂ ಜುಗಲಬಂದಿಯ ಹಾಗೆ ಒಂದು ಹೊಸ ಕವನ ಬರೆದರೆ ಹೇಗೆ? ನಾನೊಂದು ಪ್ರಶ್ನೆಯ ಕಾವ್ಯ ಹಾಕುವೆ, ನೀನೊಂದು ಉತ್ತರದ ಕಾವ್ಯ ಹೇಳು..ಆಗ ಇಬ್ಬರೂ ಉತ್ಸಾಹದಿಂದ ಪಾಲ್ಗೊಳ್ಳಬಹುದು..."
 
ಮುದ್ದಣನ ರಣೋತ್ಸಾಹದ ಮಾತುಗಳನ್ನಲ್ಲೆ ತುಂಡಿರಿಸುತ್ತಾ, "ಅಯ್ಯೊ ..ಕಾವ್ಯ, ಕವನವೆಲ್ಲ ಬರೆಯುವುದು ನಿಮ್ಮಂತಹ ಕವಿಗಳದು... ನಾನೋ ಕೇಳಿ ಹರ್ಷಿಸುವ ರಸಿಕೆಯೆ ಹೊರತು  ಕವಿಯತ್ರಿಯಲ್ಲ...ಅದು ಬಿಟ್ಟು ಬೇರೇನಾದರೂ ಹೇಳಬಾರದೆ? ಅಲ್ಲದೆ ಕಾವ್ಯವನ್ನು ನಾವು ದಿನವೂ ನೋಡುತ್ತಲೆ, ಕೇಳುತ್ತಲೆ ಇರುತ್ತೇವಲ್ಲ..."
 
ಚಣಕಾಲ ಚಿಂತನೆಯಲ್ಲಿ ತಲ್ಲೀನನಾದ ಮುದ್ದಣ್ಣ... ಪ್ರಿಯಸತಿಯ ಬೇಡಿಕೆ ಸಾಧುವಾದದ್ದೆ; ಅದರಲ್ಲೂ ವಿವಾಹೋತ್ಸವ ಆಚರಿಸುತ್ತಿರುವ ಈ ದಿನ ಏನು ಮಾಡಿದರೆ ಅವಳು ಮುದಗೊಂಡು ಪ್ರಸನ್ನಳಾದಾಳು ಅನ್ನುವ ಪ್ರಶ್ನೆ ಕೊಂಚ ಒಳಗೆಲ್ಲ ತಡಕಾಡಿಸುತ್ತಿತ್ತು. ಕಣ್ಣು ಮುಚ್ಚಿ ಆಲೋಚನಾ ಪ್ರಸವವನ್ನನುಭವಿಸುತ್ತಿದ್ದ ಮುದ್ದಣ್ಣ ತಟ್ಟನೆ ಸಮಾಧಿಯಿಂದೆಚ್ಚರಗೊಂಡಂತೆ ಕಣ್ಣು ಬಿಟ್ಟು, "ಪ್ರಿಯೆ, ಈ ದಿನವನ್ನು ವಿನೋದಮಯವಾಗಿಸಲು ನಾವ್ಹೀಗೆ ಮಾಡಿದರೆ ಹೇಗೆ?"
 
ಹುಬ್ಬುಗಂಟಿಕ್ಕಿ ಪತಿದೇವನನ್ನೆ ನೋಡುತ್ತಾ ಕುಳಿತಿದ್ದ ಮನೋರಮೆ ಚಕ್ಕನೆ, "ಸರಿ ಹಾಗೆಯೆ ಮಾಡುವ" ಎಂದಳು!
 
ಬಿಲ್ಲಿನಿಂದ ಚಿಮ್ಮಿದ ಬಾಣದಂತೆ ಬಿರುಸಾಗಿ ಬಂದ ಅವಳ ಮಾತಿನ ಹಿಂದಿನ ಅಸಹನೆ ಅರಿತವನಂತೆ ನಸುನಗೆ ನಕ್ಕ ಮುದ್ದಣ್ಣ, "ಮುನಿಯದಿರು, ಹೃದಯೇಶ್ವರಿ.. ಸಮಾಧಾನದಲಿ ನಾ ಹೇಳಲಿರುವುದು ಕೇಳು..ಅದು ನಿನಗೂ ಉಚಿತವೆನಿಸಿದರೆ, ಹಿತವೆನಿಸಿದರೆ ಅದರ ಕುರಿತು ಸಂವಾದಿಸಬಹುದು...ಇಲ್ಲವಾದರೆ ಬೇರೆ ವಿಷಯ ಹುಡುಕಿಕೊಳ್ಳಬಹುದು..."
 
"ಅಂದ ಮೇಲೆ ಮನದಾಲೋಚನೆಯೇನಿದೆಯೆಂದು ಪಟ್ಟನೆ ಹೇಳಿಬಿಡುವುದು ತಾನೆ? ನಿಮ್ಮ ಮನದಲ್ಲೆ ಎಲ್ಲ ಚಿಂತನೆ ನಡೆಸಿ,'ಹೀಗೆ ಮಾಡಿದರೆ ಹೇಗೆ?' ಅಂತ ಪ್ರಶ್ನಿಸಿದರೆ ಅದು ನನಗರಿವಾಗಲಾದರೂ ಹೇಗೆ, ರಮಣ?"
 
"ಅರ್ಥವಾಯಿತು ಸುಂದರಿ...ಇಗೋ, ಇದೋ ಇನ್ನು ತಡವಿಲ್ಲದೆ ಹೇಳಿಬಿಡುತ್ತೇನೆ...ನಿನಗೆ ತಿಳಿದಿರುವಂತೆ ನಾನು ಈಚೇಗೆ ಹಲವಾರು ಭಾಷೆಗಳನ್ನು ಕಲಿಯುತ್ತಿರುವುದು ಸರಿಯಷ್ಟೆ?"
 
"ಹೌದು ನಲ್ಲಾ, ನೆನಪಿದೆ.....ನೀನಿತ್ತೀಚಿನ ದಿನಗಳಲ್ಲಿ ಕನ್ನಡವಲ್ಲದೆ ಹಿಂದಿ, ಆಂಗ್ಲ, ಜರ್ಮನ್, ಚೀಣಿ ಮತ್ತು ಸ್ಪಾನಿಷ್ ಭಾಷೆಗಳನ್ನು ಕಲಿಯಲು ಹೆಣಗುತ್ತಿರುವುದು...ಅದರಿಂದಾಗಿ ತಾನೆ ನನಗವುಗಳ ಮೇಲೆ ಕೋಪ! ನನ್ನ ಸವತಿಯ ಹಾಗೆ ಬಂದು, ನಿನ್ನ ಸಮಯವನ್ನೆಲ್ಲಾ ಹಿಂಡಿ ಹಾಕಿ ನನಗೆ ನಿನ್ನ ಜತೆ ಒಡನಾಡಲೂ ಸಮಯವಿರದ ಹಾಗೆ ಮಾಡಿಬಿಟ್ಟಿವೆ...ಅವನ್ನು ಹೇಗೆ ತಾನೆ ಮರೆಯಲು ಸಾಧ್ಯ?"
 
"ನಲ್ಲೆ, ನಿನ್ನ ಮಾತು ನಿಜವೆ....ನಮ್ಮ ಕನ್ನಡ ನಾಡು ನುಡಿಯ ಪರಿಮಳ ಬರಿ ಕನ್ನಡದಲ್ಲೆ ಇದ್ದರೆ, ಹೊರಗಿನ ಮಂದಿ ಅದನ್ನು ಅರಿಯುವುದಾದರೂ ಹೇಗೆ? ಸಂಸ್ಕೃತಿ, ಸಾಹಿತ್ಯದ ಮೂಲಕವೆ ತಾನೆ ಪಸರಿಸಬೇಕು? ಆದರೆ ನಮ್ಮಲ್ಲೆ ಎಷ್ಟೊ ಶ್ರೇಷ್ಟ ಸಾಹಿತ್ಯ, ಹೇರಳವಾದ ಸಾಂಸ್ಖೃತಿಕ ಹಿನ್ನಲೆ ಇದ್ದರು ಇದು ಬರಿ ನಮಗಷ್ಟೆ ತಿಳಿದು ನಮ್ಮಲ್ಲೆ ಉಳಿದುಕೊಂಡುಬಿಟ್ಟಿದೆ. ಹೀಗಾಗಿ, ಇದನ್ನೆಲ್ಲ ಬೇರೆಯವರಿಗೂ ಮುಟ್ಟಿಸುವ ಕೆಲಸ ಆಗಬೇಕಿದೆ...ನಾನೀ ಕೆಲವು ಭಾಷೆಗಳನ್ನು ಕಲಿತರೆ ನಮ್ಮ ಶ್ರೀಮಂತ ಕನ್ನಡದ ಸೊಗಡನ್ನು ಬೇರೆಯವರಿಗೂ ಕಾಣಿಸಬಹುದು ಮತ್ತು ಹಾಗೆಯೆ ಆ ಭಾಷೆಯನ್ನು ಅರಿತು, ಆ ಸಾಹಿತ್ಯವನ್ನು ಕನ್ನಡಕ್ಕೂ ತರಬಹುದೆಂಬ ಆಶಯವಷ್ಟೆ.."
 
" ನಾನೆಲ್ಲಿ ಅದನ್ನು ತಪ್ಪೆಂದೆ ಮನೋಹರ? ಇಷ್ಟೆಲ್ಲಾ ಭಾಷೆಗಳ ಕಲಿಕೆ, ಒಡನಾಟ, ಸಹವಾಸ -  ಇದರ ನಡುವೆ ನಿಮಗೆ ನನಗೆಂದು ಸಮಯವೆಲ್ಲಿರುತ್ತದೆನೆಂದು ಹೇಳಿದೆನಷ್ಟೆ..."
 
"ನಾನೀಗೇನು ಐದನ್ನು ಒಟ್ಟಾಗಿ ಕಲಿಯುತ್ತಿಲ್ಲವಲ್ಲ? ಸದ್ಯಕ್ಕೆ ಅತಿ ಹೆಚ್ಚು ಜನರು ಮಾತಾಡುವ ಸರಳ ಚೀಣಿ ಭಾಷೆಯಾದ 'ಮ್ಯಾಂಡರಿನ್' ಅನ್ನು ಮಾತ್ರವೆ ಕಲಿಯುತ್ತಿದ್ದೇನೆ. ಅದು ಕರಗತವಾದ ಮೇಲೆ ಮತ್ತೊಂದು, ಹಾಗೆ ಮಗದೊಂದು...ಅಂದ ಹಾಗೆ, ನಾನು ಹೇಳ ಹೊರಟಿದ್ದು ಈ ಭಾಷೆಯ ಕುರಿತಾಗೆ...."
 
ಈಗ ಮನೋರಮೆಯ ಮುಖದಲ್ಲಿ ಇನ್ನು ದೊಡ್ಡ ಪ್ರಶ್ನಾರ್ಥಕವೆದ್ದು ಗಂಟಿಕ್ಕಿದ ಹುಬ್ಬಿನ ಜತೆಗೆ ಕಣ್ಣುಗಳು ಅಗಲವಾದವು...
 
"ತಾಳು, ತಾಳು....ನಾ ಹೇಳಬೇಕಿರುವುದನ್ನು ಪೂರ್ತಿ ಕೇಳು...ಇನ್ನು ಕೆಲವು ದಿನಗಳಲ್ಲೆ, ನಮ್ಮ ನೆಚ್ಚಿನ ಕನ್ನಡದ ರಾಯಭಾರಿಯಾಗಿ ನಾನು ಕೆಲ ತಿಂಗಳುಗಳ ಮಟ್ಟಿಗೆ ಚೀನಾಕ್ಕೆ ಹೋಗಬೇಕಾಗುತ್ತದೆ.....ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದನ್ವಯ..."
 
"ಹಾಂ....? ಇದೇನಿದು ಹೊಸ ಧೂಮಕೇತು? ನನಗೆ ಇದರ ಬಗ್ಗೆ ಮೊದಲೆ ಏನೂ ಹೇಳಿರಲ್ಲೆ ಇಲ್ಲಾ...." ಗಾಬರಿಯ ದನಿಯಲ್ಲಿ ಬಂತು ಮಡದಿಯ ಮಾರುತ್ತರ...
 
" ಗಾಬರಿಯಾಗದಿರು ಭಾಮಾಮಣೀ...ಇದು ನನಗೂ ಈಗಲೆ ಗೊತ್ತಾಗಿದ್ದು. ನಮ್ಮ ವಿವಾಹೋತ್ಸವದ ಈ ದಿನವೆ ನಿನಗೀ ಅಚ್ಚರಿ ಸುದ್ದಿ ಹೇಳಲೆಂದೆ ನಾನೂ ಕಾತುರತೆಯಿಂದ ಕಾಯುತ್ತಿದ್ದೆನಷ್ಟೆ...."
 
" ಇದರಲ್ಲಿ ಅಚ್ಚರಿಯೆಲ್ಲಿ ಬಂತು ಪ್ರಾಣಕಾಂತ? ನೀನು ತಿಂಗಳುಗಟ್ಟಲೆ ನನ್ನನ್ನಿಲ್ಲಿ ಬಿಟ್ಟು ಅಲ್ಲೆಲ್ಲೊ ಕಾಣದ ದೇಶದಲ್ಲಿ ಹೋಗಿಬಿಟ್ಟರೆ, ನಾನಿಲ್ಲಿ ಏಕಾಕಿಯಾಗಿ ಪಡುವ ವಿರಹ ವೇದನೆಯನ್ನು ಮುಚ್ಚಿಟ್ಟು ಆನಂದವಾಗಿರಬೇಕೆಂದೆ?"
 
ದನಿಯಲಿದ್ದ ತುಸು ಕೋಪ, ವ್ಯಂಗ್ಯ, ಅಸಹನೆಯನ್ನು ಗಮನಿಸದೆ ಮುಂದುವರೆಸಿದ ಮುದ್ದಣ್ಣ, " ಅಲ್ಲೆ ಅಚ್ಚರಿಯ ವಿಷಯವಿರುವುದು..ನಾನು ಅಚ್ಚರಿಯೆಂದದ್ದು ನಾನು ಹೋಗುವ ವಿಷಯದ ಕುರಿತಲ್ಲಾ..."
 
"ಮತ್ತೆ...?"
 
"ಮತ್ತಿನ್ನೇನು....?  ಹೀಗೆ ಹೋಗುವ ಕಾಲಾವಧಿ ಸಾಕಷ್ಟು ದೊಡ್ಡದಿರುವುದರಿಂದ, ಬೇಕಿದ್ದರೆ ಜತೆಯಲ್ಲಿ  ಜೋಡಿಯಾಗೊಬ್ಬರನ್ನೂ ಕರೆದುಕೊಂಡು ಹೋಗಬಹುದು!"
 
" ನಿಜವೆ ಪ್ರಾಣನಾಥ.....?" ನಿಜಕ್ಕೂ ಅಚ್ಚರಿ, ಉದ್ವೇಗಗಳಿಂದೊಡಗೂಡಿದ ದೊಡ್ಡ ದನಿಯಲ್ಲಿ ಹೆಚ್ಚು ಕಡಿಮೆ ಕಿರುಚಿದಂತೆ ಕೇಳಿದಳು ಮನೋರಮೆ.
 
ತುಟಿಯಂಚಿನಲ್ಲೆ ನಗುತ್ತ ಮುದ್ದಣ್ಣ, "ಹೌದು ಕಮಲವದನೆ... ಆರು ತಿಂಗಳಿಂದೊಂದು ವರ್ಷದ ತನಕ ಅಲ್ಲಿರಬೇಕಾದ ಪ್ರಮೇಯವಿರುವುದರಿಂದ, 'ಯಾರ ಜೋಡಿಯಾದರು' ಸರಿ ಜತೆಗೊಬ್ಬರು ಬರಲು ಅವಕಾಶವಿದೆಯಂತೆ...ಇದು ಒಂದು ವಿಧದ ಸಾಂಸ್ಕೃತಿಕ ವಿನಿಮಯ ತಾನೆ....?"
 
"ಓಹೊಹೊ....ನಿಮಗೆ ಬೇರೆ ಯಾರೂ ಸರಿಯಾದ ಜೋಡಿ ಸಿಗಲಿಲ್ಲವೆಂದು ನನಗೆ ಕೇಳುತ್ತಿದ್ದೀರಾ...ನನಗೇನೂ ಹಾಗೆಲ್ಲಾ ಅಲ್ಲೆಲ್ಲ ಸುತ್ತಾಡಬೇಕೆಂಬ ಹಂಬಲವೇನೂ ಇಲ್ಲಾ...ಯಾವಳಾದರೂ ಬರುವವಳಿದ್ದರೆ ಧಾರಾಳವಾಗಿ ಕರೆದುಕೊಂಡು ಹೋಗಿ..." 
 
ಈರ್ಷೆ ಮುನಿಸಿನ ಮಡದಿಯ ದನಿಗೆ ಮತ್ತಷ್ಟು ಉಪ್ಪೆರಚಲು ಯತ್ನಿಸದೆ ಮುದ್ದಣ್ಣ ಇಂತೆಂದ, "ಈ ಹಾಳು ಮುನಿಸು, ವಾಗ್ವಾದವನ್ನು ಕೈಬಿಡು ಪ್ರಿಯೆ...ಹುಬ್ಬುಗಂಟಿಕ್ಕಿದ ನಿನ್ನ ಕೋಪದ ಮೊಗ ನೋಡಲು ಸುಂದರವಾದರೂ, ಈ ದಿನ ನಿನ್ನನ್ನು ನಗು ಮೊಗದಲ್ಲಿರಿಸಿ ನೋಡಲೆ ನನಗೆ ಹೆಚ್ಚು ಪ್ರಿಯ....ನಾನು ಯಾರಾದರೂ ಜೋಡಿಯೆಂದದ್ದು ಯಾರೋ ಹೆಣ್ಣೆಂಬರ್ಥದಲ್ಲಲ್ಲ..."
 
ಪತಿಯ ಮುದನೀಡುವ ಹೊಗಳಿಕೆಯ ನುಡಿಗಳಿಗೊಳಗೆ ಖುಷಿಯಾದರೂ, ಹೊರಗೆ ಬಿಗುಮಾನ ಬಿಡದ ಮುಖದಲ್ಲೆ,"ಮತ್ತಿನ್ನಾವ ಅರ್ಥದಲ್ಲೊ....?" ಎಂದು ಕೊಂಕು ನುಡಿದಳು.
 
" ರಮಣಿ, ನಾವು ಹೋಗುವ ಗುಂಪಿನಲ್ಲಿ ಮದುವೆಯಾದ ನನ್ನಂತಹವರು, ಇನ್ನು ಮದುವೆಯಾಗದ ಬ್ರಹ್ಮಚಾರಿಗಳು, ವಯಸ್ಸಾದ ವೃದ್ಧರು - ಹೀಗೆ ಎಲ್ಲಾ ವಯಸಿನವರೂ ಇರುತ್ತಾರೆ; ಹೀಗಾಗಿ, ಅವರವರಿಗೆ ಅನುಕೂಲವಾದ ಜೋಡಿ ಜತೆಗೆ ಬರಬೇಕಾಗುತ್ತದೆ.... ವಯಸ್ಸಾದವರಿಗೆ ನೋಡಿಕೊಳ್ಳಲೆ ಒಬ್ಬರ ಜೋಡಿಯಿರಬೇಕಲ್ಲವೆ? ಹಾಗೆ.."
 
" ಹೌದಲ್ಲವೆ ಮತ್ತೆ?" ಎಂದವಳ ಮುಖ ಕಮಲವೆ ಅರಳಿದ ನೈಜ್ಯ ತಾವರೆಯಂತಾಗಿ, ಮೊಗದ ಬಿಗಿ ಸಡಿಲಾಗಿ ಪೂರ್ಣ ಚಂದ್ರಿಕೆಯಂತರಳಿದ ಪ್ರಪುಲ್ಲತೆಯು ಇಡಿ ವದನದಲ್ಲಿ ಪಸರಿಸಿದಾಗ, ನೆಮ್ಮದಿಯ ನಿಟ್ಟುಸಿರುಬಿಟ್ಟ ಮುದ್ದಣ್ಣ.
 
" ನಾನೀದಿನ ನಿನಗೆ ಹೇಳ ಹೊರಟ ಮೊದಲ ಸಿಹಿ ಸುದ್ಧಿ ಇದೇನೆ....ಹೇಗೂ ನಾನು ಹೊರಟರೆ ಅಲ್ಲಿ ಏಕಾಕಿ. ಅಲ್ಲೊ ಚಿಟ್ಟೆ ಪಟ್ಟೆಗಳಿಂದಿಡಿದು ಹಾವು, ಹಂದಿ, ಕೋತಿಗಳೆಲ್ಲರನ್ನು ತಿಂದುಹಾಕುವ ಪದ್ದತಿಯೆಂದು ಕೇಳಿದ್ದೇನೆ....ನಿನ್ನ ಕೈಯಲ್ಲಿ ದಿನದಿನವೂ ಸೊಗಸಾದ ಅಡುಗೆ ಮಾಡಿ ಬಡಿಸುಣಿಸುತ್ತ, ಜತೆ ಜತೆಗೆ ನಂಚಿಕೊಳ್ಳುವ ನಿನ್ನ ಹಿತವಾದ ಮಾತುಗಳನ್ನು ಕೇಳುತ್ತ ಉಣ್ಣುತ ಆನಂದವಾಗಿರುವ ನಾನು, ಅಲ್ಲಿ ಹೇಗೆ ತಾನೆ ಒಬ್ಬನೆ ಸಂಭಾಳಿಸಬಲ್ಲೆ, ನಳಪಾಕಿಣಿ? ಜತೆಗೆ ನೀನಿಲ್ಲದೆ ನನಗಲ್ಲಿ ಸ್ಪೂರ್ತಿಯಾದರೂ ಯಾರು? ಆ ಕಾರಣಕ್ಕೆ ನಾನಾಗಲೆ ನೀನು ನನ್ನ ಜತೆ ಬರಲಿರುವೆಯೆಂದು ಹೇಳಿ, ಸುಳಿವು ಕೊಟ್ಟುಬಿಟ್ಟಿರುವೆ...!"
 
"ಆಗಲೆ ಹೇಳಿಯೂ ಬಿಟ್ಟಿರುವಿರಾ...." ರಾಗದಲ್ಲಿ ಮನೋರಮೆ ಎಳೆದಾಗ ಅದನ್ನಲ್ಲೆ ತಡೆಯುತ್ತ, "ಇನ್ನು ಖಚಿತವಾಗಿ ಹೇಳಿಲ್ಲ...ಮೊದಲು ನಿನ್ನೊಡನೆ ಚರ್ಚಿಸಿ ಅನುಮತಿ ಪಡೆದ ಮೇಲೆ ತಿಳಿಸುತ್ತೇನೆಂದು ಹೇಳಿ ಬಂದೆ...."
 
"ಆರು ತಿಂಗಳೊಂದು ವರ್ಷವೆಂದರೆ ಸ್ವಲ್ಪ ಹೆಚ್ಚಾಗಲಿಲ್ಲವೆ ದೊರೆ?"
 
" ನಮ್ಮ ಮದುವೆಯಾಗಿ ಸಾಕಷ್ಟು ಕಾಲ ಕಳೆದು ನಾವಿಬ್ಬರು ಒಟ್ಟಾಗಿದ್ದರು, ಈ ಕಾವ್ಯ, ಕಥನಗಳ ನಡುವಲ್ಲಿ ನಿನ್ನ ಜತೆ ಏಕಾಂತವಾಗಿ ಹೊರಗೆ ಸುತ್ತಾಡಲೆ ಆಗಲಿಲ್ಲ...ಆದರೆ ಈಗ ಆ ಸದಾವಕಾಶ ತಾನಾಗೆ ಬಂದಿದೆ - ಸ್ವಾಮಿಕಾರ್ಯದ ಜತೆಗೆ ಸ್ವಕಾರ್ಯದ ಹಾಗೆ... ನೀನು 'ಹೂಂ' ಅಂದರೆ ಸಾಕು ನೋಡು, ಒಂದು ಕೈ ನೋಡೆಬಿಡೋಣ, ಒಟ್ಟಾಗಿ.."
 
"ಅಂತೂ ಹೇಗಾದರೂ ಮಾಡಿ ನನ್ನ ಬಾಯಿಂದ 'ಹೂಂ' ಅನಿಸುವುದರಲ್ಲಿ ನೀವು ಚತುರರು.....'
 
"ಇದರರ್ಥ ಒಪ್ಪಿದೆಯೆಂದೆ ತಾನೆ ಪ್ರಿಯೆ?"
 
"ಒಪ್ಪಲಿ ಬಿಡಲಿ ಅಷ್ಟುಕಾಲ ನಿಮ್ಮನ್ನಗಲಿ ದೂರವಿರುವುದು ಆಗದ ಮಾತು.... ಅಲ್ಲೇನೇನೊ ತಿಂದು ನಿಮ್ಮ ಆರೋಗ್ಯದ ಗತಿಯೇನಾದರು ಆದರೆ ನೋಡುವವರಿರಬೇಕಲ್ಲವೆ? ಮೊದಲೆ ಅದು ಮಾಯಾಂಗನೆಯರ ನಾಡೆಂದು ಕೇಳಿದ್ದೇನೆ... ಹೀಗಾಗಿ ಇಷ್ಟವೊ ಕಷ್ಟವೊ, ನಾನಂತೂ ಹೊರಡುವೆ.."
 
ಮಡದಿಯ ಮಾತಿಗೆ ಮತ್ತೊಮ್ಮೆ ನಕ್ಕ ಮುದ್ದಣ್ಣ,"ಈ ಹೆಂಗಳೆಯರು ಭಾಷಾಚತುರರು. ತಮಗೆ ಬೇಕಾದ ರೀತಿಯಲ್ಲಿ ಮಾತಿನ ಓಘವನ್ನೆ ತಿರುಗಿಸಬಲ್ಲ ಚಾಣಾಕ್ಷೆಯರು....ಅದೇನೆ ಇರಲಿ, ನೀನು ಬರಲೊಪ್ಪಿದೆಯಲ್ಲ ಸಾಕು ಬಿಡು...."
 
"ಮಾತಿನಲ್ಲಿ ನೀನೇನು ಕಡಿಮೆಯಿರುವೆ ಪ್ರಿಯಾ...ನಾನಾಡುವ ಮಾತೆಲ್ಲ ನಿನ್ನಿಂದ ಪಡೆದ ಬಳುವಳಿಯೆ ತಾನೆ? ಅದರ ಶ್ರೇಯಸ್ಸು ನಿನಗೆ ತಾನೆ ಸೇರಬೇಕು?" ಎಂದು ಮುದ್ದಣನತ್ತ ಮುದ್ದಿನ ಕುಡಿನೋಟವೊಂದನ್ನು ಬೀರಿದಳು ಸತೀಮಣಿ. ನಾರಿಯ ಪ್ರೇಮಾದರ ತುಂಬಿದ ಕುಡಿನೋಟಕೆ ಶರಣಾಗದ ಗಂಡಾದರೂ ಯಾರು? ಅದಕೆ ಮುದ್ದಣನೇನು ಹೊರತಾಗಬಲ್ಲನೆ? ಅದರಲ್ಲು ಸತಿಯ ಕೈಯಲ್ಲಿ ಹೊಗಳಿಸಿಕೊಳ್ಳುವ ಗಂಡಿನ ಕಥೆಯೆ ಬೇರೆ!
 
ಆ ದಿವ್ಯಾನಂದದ ಹೊದರಿನಲ್ಲೆ,"ಅಯ್ಯೊ ಹಾಳು ಮರೆವೆ! ನಾನು ನಿಜಕ್ಕು ಹೇಳಹೊರಟಿದ್ದು ಇಷ್ಟು ಮಾತ್ರವಲ್ಲ..."
 
"ಮತ್ತಿನ್ನೇನು ಹೇಳಲಿತ್ತು?"
 
" ಈ ಮಳೆಯ ಏಕತಾನತೆಯ ಬೇಸರ ಕಳೆಯಲು ಆಗುವಂತೆ, ನಮಗುಪಯೋಗವೂ ಆಗುವಂತೆ ಒಂದು ಹೊಸ ಆಟದ ಆಲೋಚನೆ ಹೊಳೆದಿದೆ..."
 
"ಏನು ಆಟ ಪ್ರಿಯತಮ?"
 
"ಹೇಗೂ ನಾವಿಬ್ಬರು ಅಲ್ಲಿದ್ದಾಗ ಚೀಣಿ ಭಾಷೆಯ ಅವಶ್ಯಕತೆಯಿರುತ್ತದೆ....."
 
"ಅದಕ್ಕೆ...?"
 
"ಹೇಗೂ ನಾನೀಗಾಗಲೆ ಚೀನಿ ಭಾಷೆ ಕಲಿಯುತ್ತಿದ್ದೇನೆ........."
 
"ಸರಿ....?"
 
".....ಅದನ್ನೆ ನಿನಗು ಕಲಿಸಿದರೆ, ನೀನು ಕಲಿತಂತಾಗುತ್ತದೆ, ನನಗೂ ಅಭ್ಯಾಸಕ್ಕೆ ಜೊತೆಯಾಗುತ್ತಿದೆ....."
 
ಬೇರೆಯ ದಿನಗಳಲ್ಲಾಗಿದ್ದರೆ ಆದೇನನ್ನುತ್ತಿದ್ದಳೊ- ಆದರೆ ಇಂದು ಚೀನಾಕ್ಕೆ ಹೋಗುವ ಮಾತಿನ ಹಿನ್ನಲೆಯಲ್ಲಿ ,'ಹೌದಲ್ಲವೆ? ಅಲ್ಲಿ ಹೇಗೂ ಭಾಷೆ ಕಲಿಯಲೆ ಬೇಕು...ಈಗಲೆ ಒಂದು ಸ್ವಲ್ಪ ಹೇಗಿರುವುದೆಂಬ ರುಚಿ ನೋಡಿದರೆ, ಎಷ್ಟು ಕಷ್ಟ, ಎಷ್ಟು ಸುಲಭವೆಂಬ ಅರಿವಾಗುತ್ತದೆ' ಎಂದು ಯೋಚಿಸಿದ ಭಾಮಾಮಣಿ ತಲೆಯಾಡಿಸುತ್ತ ಒಪ್ಪಿಗೆ ಸೂಚಿಸಿದಳು.
 
"ಕಲಿಯಲಿಕ್ಕೆ ತುಂಬ ಕಷ್ಟದ ಭಾಷೆಯೆಂದು ನೀವೆ ಹೇಳುವುದನ್ನು ಕೇಳಿದ್ದೇನೆ...ನಾವಿರುವ ಕೆಲ ತಿಂಗಳಲ್ಲಿ ಅದೆಷ್ಟು ಕಲಿಯಲು ಸಾಧ್ಯ ಪ್ರಿಯಾ? ಆದರೂ ಕಲಿಯಲು ನನ್ನ ಅಭ್ಯಂತರವೇನೂ ಇಲ್ಲ...ಜತೆ ಜತೆಗೆ ಕಲಿತರೆ ತಾನೆ ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ?"
 
"ಹೌದು ನಲ್ಲೆ..ಈ ಭಾಷೆ ಕಲಿಯುವುದು ನಮ್ಮ ಕನ್ನಡದ ಹಾಗೆ 'ಸುಲಿದ ಬಾಳೆಯ ಹಣ್ಣಿನಂದದಿ..' ಅಲ್ಲವಲ್ಲ...? ಆದರೆ ನೀನೇನು ಓದಿ, ಬರೆದು ಮಾಡುವ ಅಗತ್ಯವೇನೂ ಇರುವುದಿಲ್ಲ. ತುಸು ಮಾತಾಡುವುದು ಕಲಿತರೆ ಸಾಕು; ನನಗಾದರೆ ಎಲ್ಲವನ್ನು ಕಲಿವ ಅಗತ್ಯವಿದೆ. ನಿನಗದನ್ನೆಲ್ಲ ವಿವರವಾಗಿ ಹೇಳುವೆ..ಹೇಗೂ ಎಚ್ಚರವಾಗಿಬಿಟ್ಟಿದೆ, ತುಸು ಕಾಫಿ ಮಾಡಿ ಕುಡಿಯುತ್ತ ಮಾತಾಡೋಣವೆ, ರಮೆ?"
 
"ಅಯ್ಯೊ..ಹಾಳು ಮರೆವು...ನಿಮಗಿಷ್ಟವಾದ ಪಕೋಡ ಕರಿಯಲೆಂದೆ, ಹಿಟ್ಟೆಲ್ಲಾ ಕಲಸಿಟ್ಟಿದ್ದೆ, ಮರೆತೆ ಹೋಗಿತ್ತು ನೋಡಿ! ಬನ್ನಿ ಹಾಗೆ ಅಡುಗೆ ಮನೆಯಲ್ಲೆ ಕರಿಯುತ್ತಾ ಮಾತನಾಡೋಣ... ಬಿಸಿಬಿಸಿ ಕಾಫಿಯ ಜತೆಗೆ..."
 
ಪಕೋಡ ಎನ್ನುವ ಹೆಸರಿನ ವಾಸನೆಗೆ ಮೂಗಿನ ಹೊಳ್ಳೆ ಅರಳಿಸಿದ ಮುದ್ದಣ್ಣ, " ಅದೀಗ ಸರಿಯಾದ ಮಾತು...ನಡೆ ಅಲ್ಲೆ ಹೋಗಿ ಕರಿಯುತ್ತಾ, ತಿನ್ನುತ್ತ ಮಾತಾಡೋಣ..ಕಲಿಯುವುದು ಸರಾಗವಾಗಿ ನಡೆಯುತ್ತದೆ...ಮೆದುಳಿನ ಜತೆಗೆ ಹೊಟ್ಟೆಗೂ ಮೇವು" ಎಂದು ಮೇಲೆದ್ದು ಅಡಿಗೆ ಮನೆಯತ್ತ ಹೊರಟ ಮಡದಿಯನ್ನು ಹಿಂಬಾಲಿಸಿದ.
 
ಜೋಡಿ ಹಕ್ಕಿಗಳ ಹಾಗೆ ಜತೆಜತೆಯಲ್ಲೆ ನಡೆದ ಸತಿಪತಿಯರು ಪಾಕಶಾಲೆಯೊಳಗೆ ಕಾಲಿಡುತ್ತಿದ್ದಂತೆ ಮಡದಿ ಚಕಚಕನೆ ಬೇಕಿದ್ದ ಪಾತ್ರೆ, ಬಾಣಲೆ ಇತ್ಯಾದಿ ಸಲಕರಣೆಗಳನ್ನು ಸಾವರಿಸುತ್ತಿದ್ದರೆ, ಅವಳಿಗೆ ಸಹಾಯ ಹಸ್ತ ನೀಡಲು ಬಂದ ಮುದ್ದಣ್ಣ, ಅವಳ ವೇಗದ ಚುರುಕಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಕಂಡು ಬೆರಗಾಗಿ 'ಇಂಥಹ ಸತೀಮಣಿಯನ್ನು ಪಡೆದ ನಾನೆ ಧನ್ಯ' ಅಂದುಕೊಳ್ಳುತ್ತ ಅಡುಗೆಮನೆ ಜಗುಲಿಯ ಖಾಲಿಯಿದ್ದ ಜಾಗವೊಂದಕ್ಕೆ ಒರಗಿ ಕೂತ. ಇನ್ನು ಕೂತತ್ತಿತ್ತ ತಿರುಗಲಿಕ್ಕಿಲ್ಲ, ಆಗಲೆ ಮಡದಿಯ ಕೈಯಲ್ಲಿ ಕಾಫಿಯ ಲೋಟ ಪ್ರತ್ಯಕ್ಷ..! 'ಭಲೆ, ಭಲೆ! ರಾಣಿಮಣಿ, ನಿನ್ನ ವೇಗವೇ ವೇಗ' ಎಂದು ಮನದಲ್ಲೆ ಭೇಷಿಸುತ್ತ ರುಚಿಯಾದ ಕಾಫಿಯನ್ನು ತುಸುತುಸುವೆ ಹೀರತೊಡಗಿದ, ಕಾವ್ಯಾವಿರತನಿರತ ಮುದ್ದಣ್ಣ.
 
ಬಾಣಲಿ ಎಣ್ಣೆಗೆ ಕಾಯಲಿಟ್ಟು ಪಾತ್ರೆಯಲಿ ಕಲಸಿಟ್ಟಿದ್ದ ಹಿಟ್ಟಿನ ಮುದ್ದೆಯನ್ನು ಸಣ್ಣಸಣ್ಣ ಉಂಡೆಗಳಾಗಿ ಕಟ್ಟಿಡುತ್ತಲೆ, ನಡುನಡುವೆ ಜೋತಾಡುತ್ತ ಮುನ್ನುಗ್ಗಿ ದೃಷ್ಟಿ ಮರೆಸುತ್ತಿದ್ದ ಮನೋಹರ ಮುಂಗುರುಳನ್ನು ಎಡಗೈಯಿಂದ ನೇವರಿಸಿ ಸಾಲು ಹನಿಮಣಿಯಾಗಿ ಪೋಣಿಸಿಕೊಳ್ಳಲು ಹವಣಿಸುತ್ತಿದ್ದ ಬೆವರಿನ ಜತೆ ಹಿಂದೆ ತಳ್ಳುತ್ತ, ಸಿದ್ದಪಡಿಸಿದ ಪಕೋಡಾದ ಉಂಡೆಗಳನ್ನು ಹಾಸಿದ ಒದ್ದೆ ಬಟ್ಟೆಯ ಮೇಲಿಡುತ್ತ ನುಡಿದಳು - "ಸರಿ, ಈಗ ಹೇಳಿರಲ್ಲಾ....ನಿಮ್ಮ ಚೀಣಿ ಪಾಠದ ವಿಷಯ..."
 
ಸತಿಯ ಮುಖದಲ್ಲಿ ಮೂಡುತ್ತಿದ್ದ ಸಾಲು ಬೆವರು ಹನಿಯನ್ನೆ ತದೇಕವಾಗಿ ದಿಟ್ಟಿಸುತ್ತ ಮನದಲ್ಲೆ ಕವನ ಕಟ್ಟುತ್ತಿದ್ದ ಮುದ್ದಣ್ಣ, ಕಾಫಿಯ ಜತೆಗೆ ಇಹಜಗಕ್ಕೆ ಬಂದವನಂತೆ "ಹೌದಲ್ಲವೆ..ಈಗ ಮಾತಾಟದಲ್ಲೆ ಕಲಿಯುವುದು ಒಳಿತಲ್ಲವೆ? ಸರಿ ನಲ್ಲೆ ಮೊದಲು ನೀನೇನು ಕಲಿಯಬೇಕೆಂದಿರುವೆ ಹೇಳು...ಅದರಿಂದಲೆ ಆರಂಭಿಸೋಣ..."
 
" ನಾನೇನು ಕಲಿಯಬೇಕೆಂದಿರುವೆನೆಂದು ಹೇಗೆ ಹೇಳಲಿ ಪ್ರಿಯಾ? ನನಗಾ ಭಾಷೆಯ ಗಂಧಗಾಳಿಯೂ ಇಲ್ಲ..ನಿನಗೇನು ತೋಚುವುದೊ ಅದನ್ನೆ ಕಲಿಸು..."
 
"ಸರಿ ಸರಿ...ಎಲ್ಲಕ್ಕೂ ಮೊದಲು ಯಾರದರೂ ಸಿಕ್ಕಿದರೆ 'ನಮಸ್ಕಾರ' ಹೇಳುವುದು, 'ಹೇಗಿದ್ದೀರಾ' ಎಂದು ಕೇಳುವುದು ಮೊದಲಿನ ಮಾತಾಲ್ಲವೆ? ಅದರಿಂದಲೆ ಆರಂಭಿಸೋಣವೆ?"
 
"ಓಹೋ..ಧಾರಾಳವಾಗಿ ಆರಂಭಿಸಿ....."
 
"ಸರಿ..ಅಲ್ಲೆ 'ಓಂ'ನಾಮ ಹಾಡಿಬಿಡೋಣ......ಚೀನಿ ಭಾಷೆಯಲ್ಲಿ ಯಾರೆ ಎದುರು ಸಿಕ್ಕರೂ ಮೊದಲು ಹೇಳುವ ವಾಕ್ಯ 'ನೀ ಹಾವ್ ಮಾ' ಅಂತ..ಅದರಲ್ಲಿ 'ನೀ' ಎಂದರೆ..." ಎಂದು ಮುಂದುವರೆಸುತ್ತಿದ್ದವನನ್ನು ಅಲ್ಲೆ ತಡೆದ ಮಡದಿ ಮನೋರಮೆ, " ನಮ್ಮಲ್ಲಿ  ಯಾವುದೆ ವಿದ್ಯೆ ಕಲಿಯುವ ಮೊದಲು, ಆ ವಿದ್ಯೆಗೆ ಸಂಬಂಧಿಸಿದ ದೇವರನ್ನ ಪೂಜಿಸಿ, ಪ್ರಾರ್ಥಿಸುತ್ತಾ, ಅ ಆ ಇ ಈ ಅಕ್ಷರಾಭ್ಯಾಸದೊಂದಿಗೆ ಪ್ರಾರಂಭಿಸುತ್ತೇವೆ.. ಇಲ್ಲೇನಿದು 'ದಿಢೀರ ಸಾಂಬಾರ', 'ದಿಢೀರ ಉಪ್ಪಿಟ್ಟಿ'ನ ಹಾಗೆ ನೇರ ನಮಸ್ಕಾರಕ್ಕೆ ಕರೆದುಕೊಂಡು ಹೋಗುತ್ತೀರಲ್ಲ?" ಎಂದು ಆಕ್ಷೇಪಿಸಿದಳು, ಒಂದೊಂದೆ ಪಕೋಡದ ಉಂಡೆಯನ್ನು ಎಣ್ಣೆಯ ಬಾಣಲಿಯಲ್ಲಿ ತೇಲಿಸಿ , ಈಜಲು ಬಿಡುತ್ತ.
 
" ಆಹಾಹಾ! ಮುತ್ತಿನಂತಹ ಮಾತೆ ಯಾವಾಗಲೂ ಆಡುವ ಮುತ್ತಿನ ಮಣಿ, ಮೊದಲಾಗಿ ಚೀಣಿಯರಿಗೆ ಅವರದೆ ಆದ ಸ್ವಂತ ದೇವರೆಲ್ಲಿ ಬರಬೇಕು? ಎಲ್ಲ ಆಮದು ಭಗವಾನರೆ - ನಮ್ಮ ಬುದ್ಧ ಭಗವಾನರನ್ನು ಪೂಜಿಸಿ 'ಅಮಿತಾಭ' ಅಂದ ಹಾಗೆ...! ಆದರೆ ಭೂತ, ಪಿಶಾಚಿಗಳ ಲೆಕ್ಕದಲ್ಲಿ ಬೇಕಾದಷ್ಟಿವೆ ನೋಡು...ಸತ್ತವರೆಲ್ಲ ಒಂದೊಂದು ಭೂತವೆ ಅಲ್ಲಿ....ಬೇಕಿದ್ದರೆ ನಮ್ಮ 'ಭೂತದ ಕೋಲ'ದ ಹಾಗೆ 'ಭೂತಾರಾಧನೆ'ಯೊಂದಿಗೆ ಆರಂಭಿಸಬಹುದು ನೋಡು.."
 
"ಶಿವ ಶಿವಾ!..ವಿದ್ಯೆಯಂತ ಸರಸ್ಪತಿ ವರ ಪ್ರಸಾದಕ್ಕೆ ಭೂತ, ದೈಯ್ಯ ಅಂತ ಸೇರಿಸುತ್ತೀರಲ್ಲಾ?....ರಾಮ, ರಾಮಾ....! ದೇವರ ಪ್ರಾರ್ಥನೆಯಿಲ್ಲದಿದ್ದರೆ ಅವರ ಕರ್ಮ, ಆದರೆ ಹಾಳು ದೆವ್ವದ ಹೆಸರೆತ್ತಬೇಡಿ, ನೋಡಿ....ವಿದ್ಯೆ ಯಾರು ಹೇಗೆ, ಎಲ್ಲೆ ಕಲಿತರೂ ವಿದ್ಯೆಯೆ ಅದಕ್ಕೆ ಅಪಮಾನ, ಅಪಚಾರ ಮಾಡಬಾರದು" ಎಂದು ಸಿಡಿಗುಂಡಿನಂತೆ ಉತ್ತರಿಸಿದಳು ಪತಿರಾಯನಿಗೆ.
 
ಸತಿಯತ್ತ ಕಕ್ಕುಲತೆಯಿಂದ ನೋಡಿ ನಕ್ಕು ಮೇಲೆದ್ದು ಬಂದವನೆ, ಮಡದಿ ಎಣ್ಣೆಗೆ ಹಾಕಿದ್ದ ಬೆಂದಿದ್ದ ಪಕೋಡವನ್ನು ಜಾಲರಿಯಿಂದ ಎತ್ತಿ ತಟ್ಟೆಗೆ ಹಾಕುತ್ತಾ,  "ಅಯ್ಯೊ ಪೆದ್ದೆ...ನಮ್ಮ ಸಂಸ್ಕೃತಿಯೆ ಬೇರೆ, ಅವರದೆ ಬೇರೆ...ಇದು ಸರಿ ತಪ್ಪು ಅನ್ನುವುದಕ್ಕಿಂತ ಅವರವರಿಗೆ ಬಿಟ್ಟ ವಿಚಾರಾ ಅನ್ನಬಹುದು...ನಾವು ಹೇಗೆ ನಮ್ಮ ಪದ್ದತಿ ಕಲಾಚಾರವನ್ನು ಆದರಿಸಿ ಗೌರವಿಸುತ್ತೇವೊ, ಅವರೂ ಹಾಗೆಯೆ...ನಿನಗೆ ಬೇಕಿದ್ದರೆ ಹೇಳು, ನಮ್ಮ 'ಶುಕ್ಲಾಂ, ಭರದರಂ' ನಿಂದಲೆ ಆರಂಭಿಸೋಣ....."ಎಂದ.
 
"ಅಯ್ಯೊ! ಬಿಡ್ತೂ ಅನ್ನಿ...ನಮ್ಮ ಮಡಿ ದೇವರುಗಳನ್ನೆಲ್ಲ ಹಾಗೆ ಎಲ್ಲೆಲ್ಲೊ ಸಿಕ್ಕಿದ ಹಾಗೆ ಬಳಸುತ್ತಾರೇನೂ? ನಾನೇನೊ ಅವರದೆ ಪೂಜೆ - ಗೀಜೆಯಿದೆಯೇನೊ ಎಂಬ ಭಾವದಲ್ಲಿ ಕೇಳಿದ್ದಷ್ಟೆ.....ಅದಿಲ್ಲವಾದರೆ ಹಾಳಾಗಲಿ, ಬಿಡಿ. ಕನಿಷ್ಟ ಅವರ 'ಅಕ್ಷರ'ಗಳಿಂದಾದರೂ ಆರಂಭಿಸಿ ಹೇಳಿಕೊಡಿ, ಒಂದೆ ಸಾರಿ ಪದಗಳಿಗೆ ಜಿಗಿಯುವ ಮೊದಲು..."
 
ಗರಿಗರಿಯಾಗಿ ಬೆಂದು ಗಮ್ಮನ್ನುತ್ತಿದ್ದ ಬಿಸಿ ಪಕೋಡವೊಂದನ್ನು ಬಾಯಿಗೆ ಹಾಕಿಕೊಳ್ಳುತ್ತಲೆ " ಅಲ್ಲೆ ಇರುವುದು ಕಷ್ಟ ಪ್ರಿಯೆ...ನನಗೆ ತಿಳಿದ ಮಟ್ಟಿಗೆ, ಈ ಭಾಷೆಯಲ್ಲಿ ನಮ್ಮ ಹಾಗೆ ಸ್ವರ , ವ್ಯಂಜನ, ಕಾಗುಣಿತಾಕ್ಷರದ ಪದ್ದತಿ, ನಿಯಮವೆ ಇಲ್ಲ...." ಎಂದ ಮುದ್ದಣ್ಣ, ರುಚಿಯಾದ ಪಕೋಡವನ್ನು ಮೆಲ್ಲುತ್ತಲೆ.
 
ಅದನ್ನು ಕೇಳಿಯೆ ಅಚ್ಚರಿಗೊಂಡ ಮನೋರಮೆ, "ಏನು ಹಾಗೆಂದರೆ? ನಮ್ಮ ಹಾಗೆ 'ಅ ಆ ಇ ಈ', 'ಕ ಖ ಗ ಘ' ಮತ್ತೆ 'ಕ ಕಾ ಕಿ ಕೀ..' ಹೇಳಿಕೊಡುವುದಿಲ್ಲವೆ ಅಲ್ಲಿ?  ಮತ್ತೆ ಮಕ್ಕಳು ಏನು ಕಲಿಯುತ್ತಾರೆ? ಹೇಗೆ ಕಲಿಯುತ್ತಾರೆ?" ಎಂದು ಅಚ್ಚರಿ ಕುತೂಹಲದಲಿ ಕೇಳಿದಳು.
 
"ಪ್ರಿಯೋನ್ಮಣಿ, ಅವರಲ್ಲಿರುವುದು ಸಂಕೇತಾತ್ಮಕ, ಚಿತ್ರಾತ್ಮಕ ಭಾಷಾಲಿಪಿ....ಪ್ರತಿ ಅಕ್ಷರವೂ ಒಂದು ಸಂಕೇತ ಅಥವ ಕೆಲವು ಒಂದುಗೂಡಿಸಿ ಜೋಡಿಸಿದ ಸಂಕೇತಗಳ ಸಂಗಮ.."
 
" ಒಂದೊಂದು ಹೆಸರು, ವಸ್ತು, ಭಾವ, ಶಬ್ದ - ಹೀಗೆ ಎಲ್ಲಕ್ಕೂ ಸಂಕೇತವೆ? ಹಾಗೆ ಎಲ್ಲಕ್ಕೂ ಸಂಕೇತ ಹಾಕುತ್ತಾ ಹೋದರೆ ಕಲಿಯಬೇಕಾದ ಹೊಸ ಅಕ್ಷರಗಳ ಸಂಖ್ಯೆ ಬೆಳೆಯುತ್ತಲೆ ಹೋಗುವುದಿಲ್ಲವೆ? ಅದೇಗೆ ಸಾಧ್ಯ ಪ್ರಿಯಾ?"
 
"ಜೀವನ್ಮಿತ್ರೆ, ಅಲ್ಲಿಯೆ ಈ ಭಾಷೆಯ ಸಂಕೀರ್ಣತೆ ಮತ್ತು ಸೌಂದರ್ಯವಿರುವುದು.... ಅಲ್ಲಿ ಕೆಲವೊಮ್ಮೆ ಒಂದು ಸಂಕೇತ ಅಕ್ಷರವಷ್ಟೆ ಆಗಿರಬಹುದು ಅಥವಾ ಒಂದು ಪದವೂ ಆಗಿರಬಹುದು... ಹೆಚ್ಚುಕಡಿಮೆ ಈ ಭಾಷೆಯಲ್ಲಿ ಐದು ಸಾವಿರಕ್ಕೂ ಮಿಕ್ಕಿ ಇಂತಹ ಸಂಕೇತಾಕ್ಷರಗಳಿವೆಯಂತೆ...!"
 
"ಐದು ಸಾವಿರವೆ...! ದೇವಾ....ಅದನ್ನೆಲ್ಲಾ ಯಾರಾದರು ಕಲಿತು ನೆನಪಿನಲಿಡಲು ಸಾಧ್ಯವೆ?" ಎಂದು ಸೋಜಿಗಪಟ್ಟಳಾ ಮನೋಹರಿ ಮನೋರಮೆ.
 
"ಅಷ್ಟು ಮಾತ್ರವಲ್ಲ ಚೆಲುವೆ, ಆ ಪ್ರತಿ ಸಂಕೇತ ಚಿಹ್ನೆಯ ಅರ್ಥ ಸದಾ ಒಂದೆ ಇರುವುದಿಲ್ಲ.."
 
"ಮತ್ತೇನಿರುತ್ತದಂತೆ? ಸಂಕೇತದ ಅರ್ಥವೆ ಬೇರೆಬೇರೆಯಾದರೆ ಯಾವಾಗ ಯಾವ ಅರ್ಥ ಎಂದು ಹೇಳುವುದಾದರೂ ಹೇಗೊ?" ಎಂದಳು ಆಶ್ಚರ್ಯ ತುಂಬಿದ ಮುಖಭಾವದಿಂದ. 
 
ಅಲ್ಲಿಗೆ ಅಡುಗೆಮನೆಯ ಪಕೋಡ ಕಾರ್ಯಕ್ರಮವೂ ಮುಗಿದಿದ್ದ ಕಾರಣ, ತಟ್ಟೆಗೆ ತುಂಬಿಟ್ಟ ಪಕೋಡಗಳೊಡನೆ ಮತ್ತೊಂದು ಬಟ್ಟಲಲಿ ಸೇರಿಸಿದ ಬಿಸಿಕಾಫಿಯಿಡಿದು ಮತ್ತೆ ಹಜಾರಕ್ಕೆ ಬಂದು ಸುಖಾಸೀನರಾದರು ದಂಪತಿಗಳು. ಅಷ್ಟು ಹೊತ್ತಿಗೆ, ಮಳೆಯೂ ನಿಂತು ವಾತಾವರಣ ತಂಪಾಗಿ ಹಿತವಾಗಿತ್ತು. ಆ ತಂಪಿನಲೆ ಮತ್ತಷ್ಟು ಪಕೋಡ, ಕಾಫಿ ಸೇವಿಸುತ್ತ ಮುಂದುವರೆಸಿದ ಮುದ್ದಣ್ಣನನ್ನೆ ಮಂಡಿಗೆ ಕೈಯೂರಿ, ತದೇಕಚಿತ್ತದಿಂದ ನೋಡುತ್ತ, ಆಲಿಸುತ್ತ ಕುಳಿತಳು ಮದನಾರಿ, ನಡುನಡುವೆ ತಾನೂ ಕಾಫಿಯನ್ನು ಹೀರುತ್ತ.
 
" ಮನೋರಮೆ, ಮೊದಲಿಗೆ ಐದು ಸಾವಿರಕ್ಕೂ ಹೆಚ್ಚು ಸಂಕೇತ ಲಿಪಿಗಳಿದ್ದರೂ ಬಳಕೆಯಲ್ಲಿರುವುದು ಸುಮಾರು ಎರಡು ಸಾವಿರವಷ್ಟೆಯಂತೆ..ನಮ್ಮ ಹಳೆಗನ್ನಡ, ನಡುಗನ್ನಡ ಹೊಸಗನ್ನಡದ ಹಾಗೆ ಅವರಲೂ ಇದ್ದ ಹಳತು, ಹೊಸತನೆಲ್ಲ ಪರಿಷ್ಕರಿಸಿ ಈಗ 'ಸರಳ ಚೀಣಿ' ಎಂಬ ಒಂದು ಹೊಸತು ವಿಂಗಡನೆ ಮಾಡಿ, ದೇಶಭಾಷೆಯನ್ನಾಗಿ ಮಾಡಿಕೊಂಡಿದ್ದಾರಂತೆ.."
 
"ಐದು ಸಾವಿರದಿಂದ ಎರಡು ಸಾವಿರ ದೊಡ್ಡ ಬದಲಾವಣೆಯಾದರೂ, ಆ ಎರಡು ಸಾವಿರವನ್ನು ನೆನಪಿಡಲಾದರೂ ಹೇಗೆ ಸಾಧ್ಯ ಪ್ರಿಯಕರ?"
 
"ನಿನ್ನ ಮಾತು ನಿಜವೆ ಚಿನ್ನಾ...ಅದಕ್ಕೆಂದೆ ಏನೊ ಸಾಮಾನ್ಯ ಯಾರು ಐನೂರು ಆರುನೂರಕ್ಕಿಂತ ಹೆಚ್ಚು ತಿಳಿದಿರುವ ಸಾಧ್ಯತೆಯಿಲ್ಲ..ಮಿಕ್ಕಿದ್ದೆಲ್ಲ ಪಂಡಿತರ ಪಾಲಿಗಷ್ಟೆ...ಪಾಮರರಿಗೆ ಈ ಐನೂರೆ ಸಾಕಂತೆ ದಿನಜೀವನ ದೂಡಲಿಕ್ಕೆ..!"
 
"ಸದ್ಯ ಐದು ಸಾವಿರದಿಂದ ಐನೂರರಕ್ಕೆ ಬಂತಲ್ಲಾ...ಬಡಪಾಯಿ ಮಕ್ಕಳು ಬದುಕಿಕೊಂಡವು..! ಅದರ ಮಧ್ಯೆ ಪ್ರತಿಯೊಂದು ಸಂಕೇತ ಲಿಪಿಗೂ ಬೇರೆ ಬೇರೆ ಅರ್ಥವೂ ಇರಬಹುದು ಅಂದಿರಲ್ಲಾ, ಅದೇನು?"
 
"ಅದನ್ನೆ ಈಗ ಹೇಳಹೊರಟೆ, ಸತಿ ಶಿರೋಮಣಿ..ಬರಿ ಸಂಕೇತ ಗೊತ್ತಿದ್ದರೆ ಅರ್ಥ ಗೊತ್ತಾಗುವುದಿಲ್ಲ....ಅದನ್ನು ಮಾತಾಡುವ ಸ್ವರದ ಜತೆ ಸೇರಿಸಿದಾಗ ಮಾತ್ರ ಅದರ ಸರಿಯಾದ ಅರ್ಥ ಹೊಮ್ಮುತ್ತದೆ..."
 
"ಅರ್ಥವಾಗಲಿಲ್ಲ ಮದನ..."
 
" ಅವರಲ್ಲಿ ನಾಲ್ಕೈದು ತರದ ಧ್ವನಿ / ಸ್ವರ ವೈವಿಧ್ಯಗಳಿವೆಯಂತೆ...ಒಂದೊಂದು ಒಂದೊಂದು ರೀತಿಯ ಸ್ವರ ಹೊರಡಿಸುವ ಕೆಲಸ ಮಾಡುವುದಂತೆ...ಪ್ರತಿ ಲಿಪಿಗೆ ಒಂದೊಂದು ಉಚ್ಚಾರ ಸ್ವರ / ಜತೆಗೊಂದೊಂದು ಧ್ವನಿ ವೈವಿಧ್ಯ ಸೇರಿದಾಗ ಬರುವ ಅಂತಿಮ ಉಚ್ಚಾರವೆ ಅರ್ಥವನ್ನು ಕೊಡುವ, ಬದಲಿಸುವ ಕೆಲಸ ಮಾಡುತ್ತದಂತೆ.."
 
" ಅಂದರೆ..." ಅರ್ಥವಾಗದ ಗೊಂದಲದಲ್ಲಿ ಮತ್ತೆ ಕೇಳಿದಳು ಮನೋರಮೆ. 
 
ತುಸು ಹೊತ್ತು ಗಹನವಾಗಿ ಚಿಂತಿಸಿದವನಂತೆ ಕಂಡ ಮುದ್ದಣ್ಣ ಕೊನೆಗೊಂದು ಸರಳ ವಿವರಣೆ ಹೊಳೆದಂತೆ ನುಡಿದ, " ಸಖಿ, ನಾವು ಸಂಗಿತದಲ್ಲಿ ರಾಗಗಳ ಏರಿಳಿತ ಮಾಡಿ ವೈವಿಧ್ಯಮಯವಾಗಿ ಹಾಡುವುದಿಲ್ಲವೆ? ಇದು ಒಂದು ರೀತಿ ಹಾಗೆ - ಯಾವುದೆ ರೀತಿಯ ರಾಗ, ಭಾವವಿಲ್ಲದೆ ಒಂದೆ ಸ್ತರದಲ್ಲಿ ಸಾಧಾರಣವಾಗಿ ಹೊರಟ ಧ್ವನಿಗೊಂದು ಅರ್ಥವಿರುತ್ತದೆ; ಅದೆ ದ್ವನಿಯನ್ನು ಮಂದ್ರದಿಂದ ಸ್ಥಾಯಿಗೆಳೆದೊಯ್ದರೆ ಮತ್ತೊಂದು ಅರ್ಥ; ಬರಿ ಮಂದ್ರಕ್ಕೆಳೆದರೆ ಇನ್ನೊಂದು ಅರ್ಥ; ಪೂರ್ತಿ ಸ್ಥಾಯಿಗೆಳೆದರೆ ಮಗದೊಂದು..ಹೀಗೆ ಒಂದರಲ್ಲೆ ನಾಲ್ಕೈದು ಸಾಧ್ಯತೆಗಳು ಒಟ್ಟಾಗಿಬಿಡುತ್ತವೆ...."
 
"ಓಹೋಹೋ...ಇದೊಂದು ರೀತಿ ನಮ್ಮ ವಿಭಕ್ತಿ, ಪ್ರತ್ಯಯಗಳ ರೀತಿ ಇದೆಯಲ್ಲಾ? ರಾಮ, ರಾಮನೆ, ರಾಮನಿಂದ....ತರಹ?"
 
ಅಸಂಬದ್ಧ ಹೋಲಿಕೆಯೆನಿಸಿದರೂ ಅದರ ಸಾಮ್ಯತೆಯು ಒಂದು ರೀತಿ ಹೊಂದುವುದನ್ನು ಕಂಡ ಮುದ್ದಣ್ಣನು ನಸುನಗುತ್ತ, '"ಹಾಗೆ ಅಂದುಕೊ..ಆದರೆ ಇಲ್ಲಿ ಮಾತನಾಡುವಾಗ ಅಷ್ಟೆ ವೇಗದಲ್ಲಿ ಸರಿಯಾದ ಧ್ವನಿಯನ್ನನುಸರಿಸಿ ಹೊರಡಿಸಬೇಕು...ಚೆನ್ನಾಗಿ ಕಲಿಯುವವರೆಗೆ ಅದೇನೂ ಸುಲಭವಲ್ಲ...."
 
" ಹೌದೌದು...ಮೊದಲಿಗೆ ಆ ಐನೂರರ ಕಲಿಕೆ ಮತ್ತೆ ಜತೆಗೆ ಅದರ ಧ್ವನಿ ವೈವಿಧ್ಯಗಳ ಕಲಿಕೆಗೆ ತಲುಪುವಷ್ಟರಲ್ಲಿ ಕಲಿಯುವ ಉತ್ಸಾಹವೆ ಇರುವುದಿಲ್ಲವೇನೊ...!"
 
"ಇಷ್ಟೆಲ್ಲಾ ಸಾಲದೆಂದು, ಕೆಲವಂತು ಒಂದೆ ಉಚ್ಚಾರ, ಧ್ವನಿ ವೈವಿಧ್ಯವಿದ್ದರೂ, ಸಂಧರ್ಭಾವಾಕ್ಯಾನುಸಾರ ಬೇರೆ ಅರ್ಥಗಳು ಆಗಬಹುದಂತೆ! ಇನ್ನು ಕೆಲವಂತು ಬೇರೆ ರೂಪು ಆಕಾರ ಇದ್ದರು ಉಚ್ಚಾರಣೆ ಮತ್ತೊಂದು ಪದದ ಹಾಗೆಯೆ ಇರುವುದಂತೆ. ಇಂತ ಕಡೆ ಧ್ವನಿಯಿಂದ ಅರ್ಥ ಮಾಡಿಕೊಳ್ಳಲಾಗದು - ಸಂದರ್ಭೊಚಿಯವಾಗಿ ಅಥವಾ ಬರಹದ ಲಿಪಿಯ ಮೇಲೆ ಅರ್ಥ ಬಿಡಿಸಬೇಕು!"
 
"ಪ್ರಿಯಾ....ನೀವ್ಹೇಳುವ ವರ್ಣನೆಯೆಲ್ಲಾ ನೋಡಿದರೆ ನನಗ್ಯಾಕೊ ಈ ಭಾಷೆ ಕಲಿಯಲೆ ಭಯವೆನಿಸುತ್ತಿದೆಯಲ್ಲಾ...."
 
"ಚಿಂತಿಸಬೇಡ ಹೃದಯೇಶ್ವರಿ...ಅದಕ್ಕೆಂದೆ ನಾನು ಹೇಳಿದ್ದು, ನೀನು ಬರಿ ಅಷ್ಟಿಷ್ಟು ಮಾತನಾಡಲು , ಅರ್ಥ ಮಾಡಿಕೊಳ್ಳಲು ಕಲಿತರೆ ಸಾಕೆಂದು.....ಆ ಲಿಪಿ, ಉಚ್ಚಾರಣೆಗಳ ಸಹವಾಸ ಬಿಟ್ಟು ಬರಿ ಮಾತಾಡುವತ್ತ ಗಮನ ಕೊಟ್ಟರೆ ಸಾಕು...."
 
"ಆದರೂ ನನಗರ್ಧ ಕಲಿವ ಹುಮ್ಮಸ್ಸೆ ಮಾಯವಾಗಿಹೋಗಿದೆ, ಹೃದಯೇಶ್ವರಾ..."
 
"ಆ ಹುಮ್ಮಸ್ಸನ್ನು ಹೆಚ್ಚಿಸಿ ಹುರಿದುಂಬಿಸುವ ಸುದ್ದಿ ಈಗ ಹೇಳಲೇನೂ?"
 
"ನೀವು ರಾಗ ಎಳೆಯುವ ತರ ನೋಡಿದರೆ ಇಷ್ಟು ಹೊತ್ತು ಹೇಳಿದ್ದು ಅಪದ್ದವೆಂದು ತೋರುತ್ತಿದೆ?"
 
"ಇಲ್ಲ ಪ್ರಿಯೆ, ಖಂಡಿತ ಅಪದ್ದವಲ್ಲ...ಆದರೆ ಮಾಹಿತಿ ಅಸಂಪೂರ್ಣ ಅಷ್ಟೆ...!"
 
"ಅದೇನದೊ ಹೇಳದೆ ಬಿಟ್ಟ ಹುಮ್ಮಸ್ಸಿನ ವಿಷಯ?"
 
"ಅದೆಂದರೆ, ಈಗ ಹೊಸದಾಗಿ ಬಂದಿರುವ ಕಲಿಕೆಯ ಪ್ರಕಾರ, ನೀನು ಆ ಲಿಪಿಗಳನ್ನು ಕಲಿಯದಿದ್ದರೂ ಪರವಾಗಿಲ್ಲ...ಮಾತನಾಡಲು ಸುಲಭವಾಗುವ ಮತ್ತೊಂದು ವಿಧಾನವನ್ನು ಹುಡುಕಿಟ್ಟಿದ್ದಾರೆ...."
 
"ಅದೇನು ಹೊಸ ಹಾದಿ ಪ್ರಾಣೇಶ್ವರಾ?"
 
"ಗೆಳತಿ, ಈಗಿನ ದಿನಗಳಲ್ಲಿ ಬಳಸುವ ಗಣಕ ಯಂತ್ರ, ಗ್ಯಾಡ್ಜೆಟ್ಟುಗಳಲ್ಲಿ 'ಹಾನ್ ಯು ಪಿನ್ ಯಿನ್' ಅನ್ನುವ ತತ್ರಾಂಶವನ್ನು ಉಪಯೋಗಿಸಿದರೆ ಈ ಭಾಷೆಯಾಡಲು ಕಲಿಯುವುದು ಬಲು ಸುಲಭವಂತೆ.."
 
"ನನಗೆ ಈ ಗಣಕ ಯಂತ್ರ, ಗ್ಯಾಡುಜೆಟ್ಟು ಅಂದರೇನೂ ತಿಳಿಯದು ಪ್ರಿಯಾ...ಅದರಿಂದ ನನಗರ್ಥವಾಗುವ ರೀತಿಯಲ್ಲಿ ಹೇಳು..."
 
"ಇದರಲ್ಲೇನೂ ವಿಶೇಷವಿಲ್ಲ ರಮಣಿ...ಮಾತಾಡುವ ಭಾಷೆ ಸ್ವಲ್ಪ ಅರಿವಿದ್ದರೆ ಸಾಕು, ಅದನ್ನು ನೀನು ಆಂಗ್ಲ ಭಾಷೆಯಲ್ಲೊತ್ತಿ ತೋರಿಸಿದರೆ...ಅದು ಚೀನಿ ಭಾಷೆಯಲ್ಲಿ ಪರದೆಯ ಮೇಲೆ ತೋರಿಸುತ್ತದೆ..."
 
"ಅಂದರೆ ನನಗೆ ಸರಿಯಾಗಿ ಮಾತಾಡಲು ಬರದಿದ್ದರೂ, ಧ್ವನಿ ವೈವಿದ್ಯ ಗೊತ್ತಾಗದಿದ್ದರೂ ಈ ಪರದೆಯ ಮೇಲೆ ಆಂಗ್ಲದಲ್ಲೊತ್ತಿದರೆ ಅದು ಚೀನಿಯಲ್ಲಿ , ಸೂಕ್ತ ಸ್ವರದೊಂದಿಗೆ ತೋರುತ್ತದೆಯೆ?"
 
"ನೋಡು ಎಷ್ಟು ಬೇಗ ಕರಾರುವಾಕ್ಕಾಗಿ ಹೇಳಿಬಿಟ್ಟೆ...ಬರಿ ಚೀನಿ ಮಾತ್ರವಲ್ಲ, ಆಂಗ್ಲದಲ್ಲೂ ತೋರಿಸುತ್ತದೆ, ಜತೆಗೆ ಆಂಗ್ಲ ಹಾಗೂ ಚೀನಿ ಉಚ್ಚಾರಣೆಯನ್ನು ಹೇಳಿ ತೋರಿಸಿಕೊಡುತ್ತದೆ..."
 
"ಅದೆಲ್ಲಾ ಸರಿ ಪತಿದೇವಾ..ಇಂತಹ ತಂತ್ರಾಂಶ ಇತ್ಯಾದಿಗಳನ್ನೆಲ್ಲ ಮಾಡುವವರೆಲ್ಲಾ ನಮ್ಮ ಜನರೆ ಅಲ್ಲವೆ...?"
 
"ಹೌದೌದು...ಅದೂ ನಮ್ಮ ಕರ್ನಾಟಕದಿಂದ , ಅದರಲ್ಲು ಬೆಂಗಳೂರಿಂದ ಬಂದ ಪ್ರತಿಭಾಶಾಲಿಗಳೆ ಇದನ್ನೆಲ್ಲ ಹಿನ್ನಲೆಯಲ್ಲಿ ಮಾಡುವ ಜನಗಳು..ಈಗ ಸಾಕಷ್ಟು ಚೀನೀಯರೂ ಇದ್ದಾರೆನ್ನು..ಅದು ಸರಿ, ಆ ವಿಷಯವೇಕೆ ಈಗ ಎತ್ತಿದೆ, ಮೋಹಿನಿ?"
 
"ಅಲ್ಲಾ, ಎಲ್ಲಾ ನಮ್ಮವರೆ ಅನ್ನುತ್ತಿರಾ..ಆದರೆ ಯಾಕೆ ಈ ತರದ ತಂತ್ರಾಂಶ ಬರೆದಾದಾಗ ಕನ್ನಡವನ್ನು ಜತೆಗೆ ಸೇರಿಸಲಿಲ್ಲ? ಇವರಾರಿಗೂ ಭಾಷ ಪ್ರೇಮ ಇಲ್ಲವೆ, ಅಥವ ಕನ್ನಡವನ್ನೆ ಮರೆತುಬಿಟ್ಟಿದ್ದಾರೊ ಹೇಗೆ? ಅದೇಕೆ ಆಂಗ್ಲದಿಂದ ಮಾತ್ರ ಚೀನಿಗೆ ಬದಲಾಯಿಸಲು ಮಾತ್ರ ಸಾಧ್ಯ? ಕನ್ನಡದಿಂದ ಚೀನಿಗೇಕೆ ಬದಲಿಸಲಾಗದು?"
 
ಮಡದಿಯ ಮುಗ್ದ ನುಡಿಗೆ ಗಹಿಗಹಿಸಿ ನಕ್ಕ ಮುದ್ದಣ್ಣ, "ನಲ್ಲೆ, ನೀ ಹೇಳುತ್ತಿರುವ ತಾಂತ್ರಿಕ ಸಾಧ್ಯಾಸಾಧ್ಯತೆಗಳನ್ನು ಬದಿಗಿಟ್ಟು ನೋಡಿದರೆ, ಕೇಳಲೆ ಕರ್ಣಾನಂದಕರವಾಗಿದೆ..ಅಹುದು, ಹಾಗೇನಾದರೂ ಅವರುಗಳು ಮಾಡಿದ್ದಿದ್ದರೆ, ನಮಗೀಗ ಇಷ್ಟು ಕಷ್ಟ ಪಡುವ ಪ್ರಮೇಯವಿರುತ್ತಿರಲಿಲ್ಲವೆನ್ನುವುದು ನಿಜ...ಆದರೆ, ಇವನ್ನೆಲ್ಲ ಮಾಡುವವರು ಗಿರಾಕಿಗಳ ಇಷ್ಟಕ್ಕನುಸಾರವಾಗಿ, ಅವರು ತೆರುವ ಬೆಲೆ ಮತ್ತು ವಿವರಕ್ಕನುಗುಣವಾಗಿ ನಡೆದುಕೊಳ್ಳಬೇಕು. ಹೀಗಾಗಿ ಅಲ್ಲಿ ಕನ್ನಡಕ್ಕೆ ಜಾಗ, ಸಮಯ ಇರುವುದಿಲ್ಲ...ಅಲ್ಲದೆ ಎಲ್ಲವನ್ನು ನಮ್ಮ ಜನರೆ ಮಾಡುವರೆಂದು ಹೇಳಲಾಗದು. ಈಗಂತೂ ಎಲ್ಲಾ ದೇಶಗಳವರೂ ಸೇರಿಯೆ ಮಾಡೆಲೆತ್ನಿಸುತ್ತಾರೆ.."
 
"ಆದರೂ ನಾನಿದನ್ನೊಪ್ಪಲೊಲ್ಲೆ ಮದನ... ನಮ್ಮವರು ಭಾಷಾಭಿಮಾನಕ್ಕಾದರೂ ಇದನ್ನು ಸ್ವಂತವಾಗಿಯಾದರೂ ಸರಿ- ಮಾಡಬೇಕು ಅಥವ ಪರದೇಶಿ ಪ್ರಭುತ್ವಗಳ ಹಾಗೆ ನಮ್ಮ ಪ್ರಭುತ್ವವೂ ಕನ್ನಡ ಕಡ್ಡಾಯವಾಗಿಸಬೆಕು; ಆಗ ಅದನ್ನು ಪಾಲಿಸುವ ಸಲುವಾಗಿಯಾದರೂ, ಈ ರೀತಿಯ ತಂತ್ರಾಂಶದ ಬಳಕೆ, ಉತ್ಪಾದನೆ ಇವೆಲ್ಲ ತಂತಾನೆ ಸಾಧ್ಯವಾಗುತ್ತದೆ..."
 
"ಪ್ರಿಯೆ, ಆ ವಿಷಯ ಹಾಗಿರಲಿ ಬಿಡು - ನಾವೀಗ ಮತ್ತೆ ಕಲಿಕೆಯ ವಿಷಯಕ್ಕೆ ಬರೋಣವೇನು, ಮನೋರಮಾದೇವಿಯವರೆ?"
 
"ಆಯಿತು ಮುದ್ದಣ್ಣನವರೆ....ಅದೇನು ಕಲಿಸಬೇಕೆಂದಿದ್ದಿರೊ, ಹೇಗೆ ಕಲಿಸಬೇಕೆಂದಿದ್ದಿರೊ ಕಲಿಸಿಬಿಡಿ...ಅದೂ ಒಂದು ಆಗಿಬಿಡಲಿ....ನನಗಂತು ನೀವು ಹೇಳಿದ್ದೆಲ್ಲಾ ಕೇಳಿಯೆ ತಲೆ ಕೆಟ್ಟಂತಾಗಿ ಹೋಗಿದೆ..."
 
"ಅದಕೆಂದೆ ನಾನು ನೇರ ಪದ ವಾಕ್ಯ ಕಲಿಕೆ ಬಳಕೆಗಿಳಿದಿದ್ದು...ಆದರೆ ಸತಿ ಶಿರೋಮಣಿಯವರು ತಾನೆ ಮೂಲದಿಂದ ಕಲಿಸಿ ಅಂತ ಅಪ್ಪಣೆ ಕೊಡಿಸಿದ್ದು..." ಛೇಡಿಕೆಯ ದನಿಯಲ್ಲಿ ನುಡಿದ ಮುದ್ದಣ್ಣನಿಗೆ, ಕೈಯಲಿದ್ದ ಬೀಸಣಿಗೆಯಿಂದ ಕೈಯೆತ್ತಿ ಹೊಡೆಯುವ ಹಾಗೆ ನಟಿಸುತ್ತ, "ಇವರ ಲಿಪಿಯೆ ಇಂಥಹ ಬ್ರಹ್ಮರಾಕ್ಷಸನೆಂದು ನನಗೇನು ಕನಸುಬಿದ್ದಿತ್ತೆ? ನಮ್ಮದರ ಹಾಗೆಯೆ ಅಂದುಕೊಂಡು ಕೇಳಿದೆನಷ್ಟೆ....ಇದರಿಂದಲಾದರೂ ಒಂದು ರೀತಿ ಅವರ ಅಕ್ಷರ ಸಂಸ್ಕೃತಿ,ಸಂಕೀರ್ಣತೆಯ ಪರಿಚಯವಾಯಿತಷ್ಟೆ..."
 
"ಅದೂ ನಿಜವೆನ್ನು...ಒಂದುಕಡೆ ಇದು ಅವರ ಸಂಕೀರ್ಣತೆಯ ಸಂಕೇತ, ಮತ್ತೊಂದೆಡೆ ಬಹುಶಃ ಆ ಸಂಕೀರ್ಣತೆಯ ಕಾರಣವಾಗಿಯೊ ಏನೊ, ಅನಿವಾರ್ಯವಾಗುವ ಸೃಜನಶೀಲತೆ, ಸೃಜನಾತ್ಮಕತೆ, ಕ್ರಿಯಾಶೀಲತೆಗಳ ಪರಿಣಾಮವಾಗಿ ತನ್ನದೆ ರೀತಿಯಲ್ಲಿ ಅರಳಿಕೊಳ್ಳುವ ಸಂಸ್ಕೃತಿ...ಇವೆರಡೂ, ಒಂದು ರೀತಿ ಪರಸ್ಪರ ತಾಕಲಾಟ, ತಿಕ್ಕಾಟದ ತುದಿಗಳು...ಅದೆ ಈ ಸಂಸ್ಕೃತಿಯ ವಿಶೇಷವೊ ಏನೊ...." ಹೀಗೆ ಸ್ವಂತಾಲೋಚನೆಯ ಆಳಕ್ಕಿಳಿದು ಕಳುವಾಗುತ್ತಿದ್ದ ಮುದ್ದಣ್ಣನನ್ನು ಪ್ರಿಯಸತಿಯ ದನಿ ಮತ್ತೆ ಐಹಿಕ ಜಗಕ್ಕೆಳೆ ತಂದಿತು...
 
"ಭಾವಪಂಡಿತರೆ, ತಮ್ಮ ಚಿಂತನಾ ಜಗದಿಂದ ಸ್ವಲ್ಪ ನಮ್ಮ ಜಗಕ್ಕಿಳಿದು ಬಂದು ನಿಮ್ಮ ಚೀಣಿ ಪಾಠವನ್ನು ಆರಂಭಿಸುವಿರಾ?"
 
" ಹೌದಲ್ಲವೆ? ನಾವು ಯಾವ ವಾಕ್ಯದೊಂದಿಗೆ ಆರಂಭಿಸಿದ್ದೆವು?"
 
"ಅದು ನಮಗೆಲ್ಲಿ ನೆನಪಿರಬೇಕು ಗುರುವರ್ಯರೆ? ನಾನು ಕೇಳಿದ್ದೆ ಕೇವಲ ಒಂದು ಬಾರಿಯೊ ಏನೊ? .... ಅದೆಂತದ್ದೊ ' ನೀವ್ ಹಾವಮ್ಮನೊ, ಹಲ್ಲಿಯಮ್ಮನೊ..' ಅನ್ನೊ ತರ ಏನೊ ಕೇಳಿದ ನೆನಪು....."
 
"ಹಹಹ್ಹ...ಅದು ಹಾವಮ್ಮ, ಹಲ್ಲಿಯಮ್ಮ ಅಲ್ಲಾ...'ನೀ ಹಾವ್ ಮಾ...'....ಹಾಗೆಂದರೆ 'ನೀವು ಚೆನ್ನಾಗಿದ್ದೀರಾ?' ಅಥವ 'ನಮಸ್ಕಾರ' ಅನ್ನೊ ಅರ್ಥದಲ್ಲಿ"
 
" ಅದೆಲ್ಲಾ ಯಾರಿಗೆ ಗೊತ್ತಾಗುತ್ತದೆ ನಲ್ಲಾ? ಹಾವು ಹಲ್ಲಿ ತಿನ್ನುವ ಜನವೆಂದು ಕೇಳಿದ್ದೇನಲ್ಲ, ಅದಕ್ಕೆ ಪದಗಳೂ ಹಾಗೆ ಇರಬಹುದೆಂದುಕೊಂಡೆ...."
 
" ಇಲ್ಲಾ ಪ್ರಿಯೆ, ಅಲ್ಲಿ ಪ್ರತಿ ಪದಕ್ಕೂ ಉದ್ದೇಶಪೂರಿತ ಅರ್ಥವಿರುತ್ತದೆ. ಈ ವಾಕ್ಯದಲ್ಲೆ ನೋಡು....'ನೀ' ಅಂದರೆ 'ನೀನು' ಅಂತ"
 
"ಅರೆರೆ...! ಇದನ್ನ ನಮ್ಮ ಕನ್ನಡದಿಂದಲೆ ನೇರ ಎತ್ತಿಕೊಂಡ ಹಾಗೆ ಕಾಣುತ್ತಲ್ಲಾ? 'ನೀ' ಅಂದರೆ 'ನೀನು' ಅಂತಲ್ಲವೆ ನಮ್ಮ ಅರ್ಥ ಕೂಡಾ?"
 
"ಹೌದು ಜಾಣೆ ...ಕನ್ನಡದಿಂದೆತ್ತಿಕೊಂಡಿರುವರೊ ಇಲ್ಲವೊ ನಾನರಿಯೆ..ಆದರೆ ಅರ್ಥ ಮತ್ತು ಉಚ್ಚಾರಣೆ ಮಾತ್ರ ಎರಡೂ ಒಂದೆ!"
 
" ಸರಿ ಸರಿ...ಹಾಗಾದರೆ ಆ ಹಾವಿಗೇನರ್ಥ?"
 
"ಹಹಹ್ಹ...ಅದು ನಮ್ಮ ಹಾವಲ್ಲ ಪ್ರಿಯೆ, 'ಹಾವ್' 'ಹಾವ್'...."
 
"ಓಹೊಹೊ! ನಮ್ಮ ದನ ಕಾಯುವವರು ಹೋರಿ, ಹಸುಗಳನ್ನೋಡಿಸುವಾಗ 'ಹಾವ್ ಮಾ, ಹಾವ್ ಮಾ' ಅನ್ನುತ್ತಾರಲ್ಲಾ.. ಹಾಗೇನು?"
 
" ಹೆಚ್ಚು ಕಡಿಮೆ ಆ ರೀತಿಯೆ ಅನ್ನು...ಇಲ್ಲಿ 'ಹಾವ್' ಅಂದರೆ 'ಚೆನ್ನಾದ, ಒಳ್ಳೆಯ' ಎಂದರ್ಥ..."
 
"ಹಾಗಾದರೆ ಈ 'ಮ' ಅನ್ನುವುದರ ಅರ್ಥವೇನು?"
 
"ಇಲ್ಲಿ 'ಮಾ' ಅನ್ನುವುದರ ಅರ್ಥ ಕೇವಲ ಪ್ರಶ್ನಾರ್ಥ ಸೂಚಕ...ವಾಕ್ಯದ ಕೊನೆಯಲ್ಲಿ ಈ 'ಮಾ' ಬಂದರೆ ಅದು ಪ್ರಶ್ನೆಯೆಂದರ್ಥ... ಆದರೆ...."
 
"ಆದರೆ...?"
 
" ಅದು ನೀನ್ಹೇಳಿದ 'ಮ' ಅಲ್ಲಾ, ಬದಲು 'ಮಾ' ಅಂತ ರಾಗವಾಗಿ ಎಳೆಯಬೇಕು....ಆಗಲೆ ದನಿ ಪುರಾಣದ ಕುರಿತು ಹೇಳಿದ್ದೇನಲ್ಲಾ, ಹಾಗೆ..."
 
"ಅದೇನು 'ಮ' ಗೂ 'ಮಾ' ಗೂ ಅಷ್ಟೊಂದು ವ್ಯತ್ಯಾಸ?"
 
"ಅಯ್ಯೊ ಚೆನ್ನೆ! ಅಗಾಧ ವ್ಯತ್ಯಾಸವಾಗಿಬಿಡುತ್ತದೆ! ನಾನು ಒಂದೆ ತರಹವಿರುವ ಪದ, ಆದರೆ ಧ್ವನಿ / ಸ್ವರದ ಮೇಲೆ ಬೇರೆ ಬೇರೆ ಅರ್ಥ ಕೊಡುವುದರ ಕುರಿತು ಹೇಳಿದ್ದೆನಲ್ಲವೆ, ನೆನಪಿದೆಯಾ?"
 
"ಹೌದು..ನೆನಪಿದೆ...."
 
"ಈ ಪದವೂ ಅದಕ್ಕೊಂದು ಉದಾಹರಣೆ...ಮಾ ಎನ್ನುವ ಪದದ ಅರ್ಥ - ಪ್ರಶ್ನಾರ್ಥಕವಾಗಬಹುದು, ಮತ್ತೊಂದು 'ಮಾ' ಎಂದರೆ 'ತಾಯಿ'ಯೆಂದೂ ಆಗಬಹುದು; ಮತ್ತೊಂದು 'ಮಾ' ದ ಅರ್ಥ 'ಕುದುರೆ' ಎಂದೂ ಇದೆ! ಧ್ವನಿ ಸ್ವರದ ಅನುಸಾರವಾಗಿ ಅರ್ಥವೂ ಬೇರೆಯಿರುತ್ತದೆ....ಇದಿಷ್ಟೂ ಸಾಲದೆಂಬಂತೆ ಕೆಲವೊಮ್ಮೆ ಪ್ರತಿ ಅರ್ಥವೂ ಸಂಧರ್ಭಾನುಸಾರವಾಗಿ ಬೇರೆಯೆ ಆಗಿರುತ್ತದೆ - ಒಂದೆ ಲಿಪಿ ಅಥವ ಒಂದೆ ಸ್ವರವಿದ್ದರೂ ಸಹ..!"
 
"ದೇವರೆ! ಹಾಗಾದರೆ ಉಚ್ಚಾರಣೆ ಸರಿಯಿಲ್ಲವೆಂದಾದಲ್ಲಿ ಅರ್ಥವೆ ಬದಲಾಗಿ ಹೋಗುವುದಲ್ಲಾ....? ...ಪರಮೇಶ!"
 
"ನಿಜ...ಇದರಲ್ಲೆ ನೋಡು - ನೀನು ಸರಿಯಾಗಿ ಹೇಳದಿದ್ದರೆ 'ನೀ ಹಾವ್ ಮಾ'ದ ಅರ್ಥ 'ನೀನು ಚೆನ್ನಾಗಿದ್ದಿಯಾ?' ಅಂತಾಗುವುದರ ಬದಲು ' ನೀನು ಒಳ್ಳೆ ಕುದುರೆ' ಎಂದಾಗಿಬಿಡುತ್ತದೆ!"
 
"ಅಥವಾ 'ನೀನು ಒಳ್ಳೆ ಅಮ್ಮ' ಅಂತಲೂ ಆಗಿಬಿಡಬಹುದು..."
 
"ಹೌದು...ಆದರೂ ಕೆಲವು ಕಡೆ, ನಡುನಡುವೆ ಕೆಲವು ಬಂಧ ಪದಗಳೊ, ಅಕ್ಷರಗಳೊ ಸೇರಿಕೊಂಡು ಗುರುತಿಸಲು ಅನುಕೂಲ ಮಾಡಿಕೊಡುತ್ತವೆ...ಉದಾಹರಣೆಗೆ, 'ನೀನು ಒಳ್ಳೆ ಅಮ್ಮ' ಅನ್ನುವುದನ್ನು ' ನೀ (ಹಾವ್ + ದ) ಮಾ = ನೀ ಹಾವ್ದ ಮಾ' ಅನ್ನಬಹುದು; ಇಲ್ಲಿ 'ದ' ಆ ಬಂಧಪದದ ಕೆಲಸ ಮಾಡುತ್ತದೆ ('ಒಳ್ಳೆ' ಹೋಗಿ 'ಒಳ್ಳೆಯ' ಆಗುತ್ತದೆ). ಅದೇ ರೀತಿ ಕುದುರೆಗೂ 'ಹಾವ್ದ' ಸೇರಿಸಬಹುದು - ಆದರೆ ಉಚ್ಚಾರಣೆಯ ಸ್ವರ ದನಿ ಮಾತ್ರ ಎರಡು 'ಮಾ'ಗಳಿಗೂ ಬೇರೆ ಬೇರೆ!"
 
"ಪತಿ ದೇವ ಹಾಗಾದರೆ ಈ ಮೂರು 'ಮಾ'ಗಳನ್ನು ಬರೆವ ಲಿಪಿಯು ಒಂದೆ ಇರುತ್ತದೇನು?"
 
"ಇಲ್ಲ ಚಕೋರಿ...ಈ ಮೂರರ ಲಿಪಿ ಬರೆವ ರೀತಿ ಬೇರೆ ಬೇರೆ...ಅದರಿಂದಾಗಿ, ಈ ಭಾಷೇ ಓದಲು, ಬರೆಯಲು ಬಲ್ಲವರಿಗೆ ಅಷ್ಟು ಕಷ್ಟವಾಗುವುದಿಲ್ಲ, ಗುರುತಿಸಲಿಕ್ಕೆ... ನಾವಾದರೊ ಬರಿ ಮಾತಾಟಕ್ಕೆ ಕಲಿಯ ಹೊರಟಿರುವ ಕಾರಣ, ನಮಗೆ ತುಸು ತ್ರಾಸದಾಯಕವಷ್ಟೆ...."
 
" ಈ ಭಾಷೆ ಕಲಿಯುವುದು ಯಾಕೆ ಕಷ್ಟಕರವೆಂದು ನನಗೀಗ ಕೊಂಚ ಕೊಂಚ ಅರ್ಥವಾಗುತ್ತಿದೆ ಪತಿದೇವ"
 
" ಹೌದು ಚೆನ್ನೆ...ಉದಾಹರಣೆಗೆ ನೀನು ಬರಿ 'ಹಾವ್ದಾ, ಹಾವ್ದಾ' ಅನ್ನೊ ಪ್ರಯೋಗವನ್ನ ಬಳಸಿದರೆ - ಅದರರ್ಥ 'ಒಳ್ಳೇದು, ಒಳ್ಳೇದು' ಅಥವಾ ' ಆಯ್ತು ನಡಿ..' ಅಂತಲೊ ಆಗಬಹುದು - ಎಲ್ಲ ಸಂಧರ್ಭ, ಸನ್ನಿವೇಶಕ್ಕೆ ತಕ್ಕ ಹಾಗೆ..."
 
" ನನಗೆ ಈಗ ಅರ್ಥವಾಗುತ್ತಿದೆ, ನೀವೇಕೆ ನೇರವಾಗಿ ಆಡು ಭಾಷೆಯ ಹಾಗೆ ಕಲಿಸಲ್ಹೊರಟಿರಿ ಅಂತ...ಇಲ್ಲಿ ಅ ಆ ಇ ಈ ಯ ಹಾಗೆ ಕ್ರಮಬದ್ಧವಾಗಿ ಕಲಿಯಲು ಆಗುವುದೆ ಇಲ್ಲ.. ಒಂದು ರೀತಿ ಎಲ್ಲಿ, ಹೇಗೆ ಬೇಕಾದರೂ ಆರಂಭಿಸಿ ಕಲಿತುಕೊಳ್ಳಬಹುದು..ಅಲ್ಲವೆ?"
 
"ಒಂದು ರೀತಿ ನಿನ್ನ ಮಾತು ನಿಜವೆ ಚಿನ್ನಾ... ಈ ಭಾಷೆ ಕಲಿಯ ಹೊರಟವರು, ತಾರ್ಕಿಕವಾದ ಎಡ ಮಸ್ತಿಷ್ಕದ ಆಸರೆಯಿಡಿದು ಕಲಿಯ ಹೊರಟರೆ ಬಹಳ ಕಷ್ಟಪಡಬೇಕಾಗುತ್ತದೆ ಎಂದೆ ನನ್ನ ಭಾವನೆ..ಬದಲಿಗೆ ಸೃಜನಾತ್ಮಕ ಬಲಮೆದುಳಿನ ಚಿಂತನೆಯಲ್ಲಿ ಕಲಿಯ ಹೊರಟು, ಅದರ ಪರಿಧಿಯಲ್ಲೆ ಬೇಕಾದ ಕಡೆ ಎಡಮೆದುಳಿನ ತಾರ್ಕಿಕತೆಯನ್ನು ಬೆರೆಸುತ್ತಾ ಕಲಿತರೆ, ಈ ಭಾಷೆಯನ್ನು ಅರಗಿಸಿಕೊಳ್ಳುವುದು ಸುಲಭವಾದೀತು..."
 
"ಸರಿ ಸರಿ ಸಾಕು ಮಾಡು ಪ್ರಿಯ, ನಿನ್ನ ಎಡಬಲ ಮೆದುಳಾಟ...ಅದೆಲ್ಲ ನನ್ನ ಪುಟ್ಟ ಮೆದುಳಿಗೆ ಅರ್ಥವಾಗುವಂತಾದ್ದಲ್ಲ...ಅಡ್ಡಾದಿಡ್ಡಿ ಕಲಿತರೂ ಕಲಿಯಬಹುದಾದ ಭಾಷೆ ಎಂದಷ್ಟೆ ನಾನಂದದ್ದು...ಅದನ್ನು ಬದಿಗಿಟ್ಟು ನಿನ್ನ ಪಾಠ ಮುಂದುವರೆಸು..ಅವರು 'ನೀ ಹಾವ್ ಮಾ' ಅಂದರೆ ನಾವೇನನ್ನಬೇಕು? ನಮ್ಮ ನಮಸ್ಕಾರದ ತರ ಅದನ್ನೆ ಹೇಳಬೇಕೆ?"
 
"ಚತುರ ಮತಿ...ನಿನ್ನೆಣಿಕೆ ನಿಜ....ಆದರೆ ದಿನನಿತ್ಯದ ಆಡುಭಾಷೆಯಲ್ಲಿ ಅವರು ಸಾಮಾನ್ಯವಾಗಿ 'ನೀ ಹಾವ್ ಮಾ?' ಅನ್ನುವುದಿಲ್ಲ... ಬದಲಿಗೆ ಚಿಕ್ಕದಾಗಿ ' ನೀ ಹಾವ್' ಅನ್ನುತ್ತಾರೆ, ನಾವು ಕೂಡ ಉತ್ತರವಾಗಿ 'ನೀ ಹಾವ್' ಅನ್ನಬೇಕು...."
 
"ಪಾಂಡುರಂಗಾ...ಇದು ಚೆನ್ನಾಗಿದೆ! ನಮಸ್ಕಾರ ಹೇಳುತ್ತ ಅವರಿಗೆ ' ನೀನು ಹಾವು' ಅಂದು ಬೈಯ್ಯುವುದು, ಅವರು ನಮಗೆ ತಿರುಗಿಸಿ 'ನೀನೂ ಹಾವು' ಅಂತ ಬೈಯುವುದು... ಇದೇನು ನಮಸ್ಕಾರವೊ, ಬೈದಾಟವೊ....ನಾ ಕಾಣೆ.."
 
"ಸಖಿಲೇಖಿಣಿ, ಇದು ಬೈದಾಟವಲ್ಲ ಅವರ ಭಾಷೆಯಲ್ಲಿ ವಿನಿಮಯವಾಗುವ ನಮಸ್ಕಾರ..."
 
" ಅದನ್ನು ನಾಬಲ್ಲೆ ದೊರೆ, ಆದರೆ ನಾನಾಡುವಾಗ ಅದನ್ನು ಕನ್ನಡ ಮನಸಿನಲ್ಲೆ ಹೇಳುವುದು ತಾನೆ? ಹೀಗಾಗಿ ಕನ್ನಡಾರ್ಥವೆ ಮನದಲಿ ಮೂಡುವುದು ಸಹಜ ತಾನೆ? ಹೋಗಲಿ ಬಿಡಿ...ಅದು ಹಾಳಾಯ್ತು... ಮುಂದುವರೆಸಿ ನಿಮ್ಮ ಬಲ ಮಸ್ತಿಷ್ಕ ಪುರಾಣ ಪ್ರವಚನವನ್ನ.."
 
" ಆಹಾ ನನ್ನ ಪ್ರಿಯ ಕನ್ನಡಸತಿ, ಅಚ್ಚ ಕನ್ನಡತಿ! ನಿನ್ನ ಕನ್ನಡ ಪ್ರೇಮ, ಭಾಷಾಭಿಮಾನ ನನ್ನನ್ನು ನಿಜಕ್ಕೂ ಮೂಕವಿಸ್ಮಿತನನ್ನಾಗಿಸಿ ಹೆಮ್ಮೆ ಪಡುವಂತೆ ಮಾಡುತ್ತಿದೆ...ನಿನ್ನ ಕೈ ಹಿಡಿದ ನಾನೆ ಧನ್ಯನೆನಲೆ?...ಈಗ ಮುಂದಿನ ಕಲಿಕೆ ತುಸು ಸುಲಭವಾದದ್ದು..ಯಾರಾದರೂ ದೂರವಾಣಿಯಲ್ಲಿ ಮಾತಾಡಿದರೆ ಹೇಗೆ ಆರಂಭಿಸಬೇಕು ಎಂದು...."
 
" ದೂರವಾಣಿಯೊ ..ದೂರುವಾಣಿಯೊ...ಸರಿ,ಸರಿ; ಅಂದಹಾಗೆ ದೂರವಾಣಿ ಅನ್ನಲು ಚೀಣಿ ಭಾಷೆಯಲ್ಲಿ ಏನನ್ನಬೇಕು ಪ್ರಿಯ?"
 
"ಅದು ಸರಿಯಾದ ಪ್ರಶ್ನೆ...ದೂರವಾಣಿಗೆ 'ದಿಯನ್ ಹ್ವಾ' ಅನ್ನಬೇಕು..."
 
" ಏನು 'ದಿಯನ್ವಾ'ವೆ?"
 
" ಓ ರಮಣಿ, ಹಾಗೆ ಒಟ್ಟುಗೂಡಿಸಿ ಹೇಳಿದರೆ ಅರ್ಥವೆ ಬದಲಾಗಿ ಹೋದೀತು..ಅದು 'ದಿಯನ್' + 'ಹ್ವಾ' . ಇಲ್ಲಿ ಹ್ವಾ - ಎಂದರೆ ಮಾತು, ದಿಯನ್ - ಅನ್ನುವುದು 'ದೂರದಿಂದ' ಅನ್ನುವ ಅರ್ಥ, ಹೀಗೆ ದೂರದಿಂದಾಡುವ ಮಾತಿಗೆ 'ದಿಯನ್ ಹ್ವಾ' ಅರ್ಥಾತ್ ದೂರವಾಣಿ ಅನ್ನುತ್ತಾರೆ..."
 
"ದೂರವಾಣಿ ಕರೆ ಮಾಡುತ್ತೇನೆ - ಅಂತ ಹೇಳುವುದು ಹೇಗೆ?"
 
"ದಾ ದಿಯನ್ ಹ್ವಾ...'ದಾ' ಜತೆಗೆ ಸೇರಿಸಿಕೊಂಡರೆ ಸಾಕು...'ದೂರವಾಣಿ ಕರೆ ಮಾಡುತ್ತೇನೆ' ಅಂತ ಅರ್ಥ ಬರುತ್ತದೆ. ಇನ್ನು ಸ್ಪಷ್ಟವಾಗಿ ಹೇಳಬೇಕಿದ್ದರೆ, ' ವೋ ಗೇ ನಿ ದಿಯನ್ ಹ್ವಾ' ಅನ್ನಬೇಕು...ಅಂದರೆ, ' ನಾನು ನಿನಗೆ ಕರೆ ಮಾಡುವೆ ' ಎಂದರ್ಥ"
 
ತಟ್ಟನೆ ಬಂದ ಹೊಸ ಪದಗಳ ಧಾರೆಯಿಂದ ವಿಚಲಿತಳಾದಂತೆ ಕಂಡ ಮುದ್ದಿನ ಮಡದಿಯನ್ನೆ ಗಮನಿಸುತ್ತಿದ್ದ ಮುದ್ದಣ್ಣ ಹಿಂದೆಯೆ ಸೇರಿಸಿದ - "ನೀ - ಅಂದರೆ 'ನೀನು' ಅಂತ ಗೊತ್ತೆ ಇದೆ; ಹೊಸ ಪದವೆಂದರೆ 'ವೊ' - ಅರ್ಥಾತ್ 'ನಾನು' ಎಂದರ್ಥ; 'ಗೆ' ಅಂದರೆ 'ಕೊಡು' 'ಕೊಡಮಾಡು' ಎಂದರ್ಥ...ಇದೆಲ್ಲ ಸೇರಿಸಿದರೆ 'ನಾನು ನಿನಗೆ ಕರೆ ಮಾಡುವೆ'ಎಂದಾಗುತ್ತದೆ..."
 
ಕೇಳುತ್ತ ಕುಳಿತಿದ್ದ ಮಡದಿ ಆಕಳಿಸಿದಳು. ಅದನ್ನು ಕಂಡ ಮುದ್ದಣ್ಣ , "ಪ್ರಿಯೆ, ಇದಾಗಲೆ ಬಹಳವಾಯ್ತೆಂದು ಕಾಣುತ್ತದೆ; ಇಂದಿಗೆ ಸಾಕು ಮಾಡೋಣವೆ?"ಎಂದು ಕೇಳಿದ. ಅದಕ್ಕುತ್ತರವಾಗಿ ಮನೊರಮೆಯು, "ಹೌದು ಪ್ರಿಯ ಇದು ತುಂಬ ಭಾರವಾಗುವ ಹಾಗೆ ಕಾಣಿಸುತ್ತಿದೆ...ತಾರ್ಕಿಕವಾಗಿ ತಂದು ನಿಲ್ಲಿಸಿಬಿಡು..ನಂತರ ನಾಳೆ ಮುಂದುವರಿಸೋಣ.. "
 
"ಸರಿ ಹಾಗಾದರೆ ಇನ್ನೆರಡು ಪದ ಕಲಿತು ಇವತ್ತಿಗೆ ಮುಗಿಸೋಣ..."
 
"ಸರಿ ಪ್ರಿಯ..."
 
"ಮೊದಲನೆಯದು ಫೋನಿನಲ್ಲಿ ಕರೆ ಬಂದಾಗ 'ಹಲೋ' ಎನ್ನುವುದು..."
 
"ಆಹಾ.."
 
" ಇದಕ್ಕೆ 'ವೇಯ್' ಅನ್ನುತ್ತಾರೆ... ಉದಾಹರಣೆಗೆ, ಯಾರಿಗಾದರೂ ಕರೆ ಮಾಡಿದರೆ, ' ವೇಯ್, ನೀ ಹಾವ್' ಎಂದೆ ಆರಂಭಿಸುತ್ತಾರೆ
 
' ಮತ್ತೆ ಮುಗಿಸಿ ಕೊನೆಗೊಳಿಸಬೇಕಾದರೆ ' ಜೈ ಜಿಯನ್' ಅನ್ನುತ್ತಾರೆ....'ಬೈ' ಅನ್ನುವ ಅರ್ಥದಲ್ಲಿ...."
 
ಅಷ್ಟರಲ್ಲಾಗಲೆ ತೂಗುತ್ತಿದ್ದ ಕಮಲದಾ ಕಣ್ಣುಗಳು, ಇನ್ನು ರೆಪ್ಪೆಗಳ ಭಾರವನ್ನೂ ಸಹ ತಡೆಯಲಾರೆ ಅನ್ನುವಂತೆ, ಬಲವಂತದಿಂದ ತೆರೆದಿಡಲು ಯತ್ನಿಸುತ್ತಿದ್ದ ಮನೋರಮೆಯ ಯತ್ನವನ್ನೂ ಮೀರಿ ಮುದುಡಿ ಮುಚ್ಚಿಕೊಳ್ಳಲು ಅಣುವಾಗುತ್ತಿದ್ದವು. ಹೀಗಾಗಿ ಮುದ್ದಣ್ಣನ ನುಡಿಗಳನ್ನು ನಿದ್ದೆಗಣ್ಣಲ್ಲೆ ಆಲಿಸಿದ ಮನೋರಮೆ, ತೂಕಡಿಕೆಯ ದನಿಯಲ್ಲೆ, "ಜೈ ಜಿಯನ್" ಅಂದಳು..!
 
ಅದನ್ನು ನೋಡಿದ ಮುದ್ದಣ್ಣ ಪುಸ್ತಕ ಮುಚ್ಚಿಡುತ್ತಾ, "ಆಯ್ತು ನಲ್ಲೆ, ನಾಳೆ ಮುಂದುವರಿಸೋಣ...ಈಗಾಗಲೆ ಬಹಳ ತಡವಾಗಿಹೋಗಿದೆ..ಶುಭರಾತ್ರಿ, ಪ್ರಿಯೆ" ಎಂದು ಹೇಳಿ, ಮಲಗುತ್ತಿದ್ದ ಸತಿಯ ಮೇಲೊಂದು ಚಾದರವನ್ಹೊದಿಸಿದವನೆ ತಾನೂ ಮಲಗಲಣಿಯಾಗತೊಡಗಿದ.

*******

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವೇಯ್, ನೀ ಹಾವ್, ವೋ ಗೇ ನಿ ದಿಯನ್ ಹ್ವಾ, ಜೈ ಜಿಯನ್. -ಚಾಂಯ್ ಚುಂಯ್ ಚೈನೀಸ್ ಗಣೇಶ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚೆನ್ನಾಗಿದೆ ನಾಗೇಶ್ ಅವರೆ. ಸರಳವಾಗಿ ಓದಿಸಿಕೊಂಡು ಹೋಗುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

SUPER!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಸ್ಮಿತಾಜಿ, ನೀವೆ ಅದ್ಭುತ ಹಾಸ್ಯ ಬರಹಗಾರರು. ನಿಮ್ಮ ಕೈಲಿ ಮುದ್ದಣ್ಣ ಮನೋರಮೆ "ಸೂಪರ" ಅನಿಸಿಕೊಂಡಿದ್ದು ತಮ್ಮ 'ಮಂದಹಾಸ' ದಷ್ಟೆ ಖುಷಿ ಕೊಟ್ಟಿತು. ಮೆಚ್ಚುಗೆ ಸದಾ ಹೀಗೆ ಇರಲಿ :-) ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ವಸಂತ ಕುಲಕರ್ಣಿಯವರೆ, ಸರಳವಾಗಿ ಓದಿಸಿಕೊಂಡು ಹೋಗುವಷ್ಟಿದ್ದರೆ ನನ್ನ ಶ್ರಮ ಸಾರ್ಥಕ - ಸರಳ, ಸಾಮಾನ್ಯ ಓದುಗನನ್ನು ತಲುಪಲೆಂಬ ಆಶಯದಿಂದ ಬರೆಯಲೆತ್ನಿಸಿದ ಬರಹವಿದು. ನಿಮಗೆ ಹಿಡಿಸಿದ್ದು ತುಂಬಾ ಸಂತೋಷ:-) - ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್ ಜಿ, ಚೀನಿ ಮೊದಲನೆ ಪಾಠ ನೀವಾಗಲೆ ಪಾಸ್! ನಿ ಜನ್ ಚಾಂಗ್ ಮಿಂಗ್ (ನೀವು ನಿಜವಾಗಿಯೂ ಚತುರಮತಿಗಳು - ಎಂದರ್ಥ). ಅಂದ ಹಾಗೆ ಚೈನೀಸ್ ಹೆಸರೊಂದು ತಗಲಿ ಹಾಕಿಕೊಳ್ಳಬೇಕೇಂದರೆ ಚಾಂಗ್, ವಾಂಗ್, ಜಂಗ್, ಸೊಂಗ್ ತರದ ಯಾವುದಾದರೊಂದನ್ನು ಹುಡುಕಿಕೊಳ್ಳಬಹುದು - ಚಾಂಯ್ ಚುಂಯ್ ತರದ ದೋಸೆ ಹುಯ್ಯುವ ಸದ್ದಿನದೆ ಆಗಬೇಕೆಂದೇನಿಲ್ಲಾ! - ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶರೆ, ಆಧುನಿಕ ಮುದ್ದಣ ಮನೋರಮೆಯರ ಸಲ್ಲಾಪ ನಿಜಕ್ಕೂ ಮನಕ್ಕೆ ಮುದ ನೀಡಿತು. ಅದರೊಂದಿಗೆ ಚೀನೀ ಭಾಷಾ ಕಲಿಕೆಯ ಇತಿಮಿತಿಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದೀರ. ನಿಮ್ಮ ಒರಿಜಿನಲ್ ಐಡಿಯಾಗಳನ್ನು ಇಟ್ಟುಕೊಂಡು ನೀವು ಕಥೆ ಹೆಣೆಯುವ ರೀತಿಯೇ ಬಹಳ ಸೊಗಸಾಗಿರುತ್ತದೆ. ಅಂದ ಹಾಗೆ ನೀ ಹಾವ್ ಎಂದು ಓದಿದಾಗ, ಹಳೆಯ ಜೋಕೊಂದು ನೆನಪಿಗೆ ಬಂತು. ಕೊಂಕಣಿ ಭಾಷೆಯನ್ನ ತಮಾಷೆಯಾಗಿ ಪ್ರಾಣಿಗಳ ಭಾಷೆ ಎಂದು ಅವರವರೇ ಮಾತಿನಾಡಿಕೊಳ್ಳುತ್ತಾರಂತೆ. ಇದಕ್ಕೆ ಒಂದು ಮೋಜಿನ ಪ್ರಸಂಗವನ್ನು ಉದಾಹರಣೆಯಾಗಿ ಕೊಡುತ್ತಾರೆ. ಅದೇನೆಂದರೆ, ಯಾರಾದರೂ ಮನೆಯ ಬಾಗಿಲು ತಟ್ಟಿದರೆ, ಒಳಗಿನಿಂದ ಕೋಣ? (ಯಾರು) ಎನ್ನುವ ಧ್ವನಿ ಬರುತ್ತದಂತೆ. ಆಗ ಬಾಗಿಲು ತಟ್ಟಿದವನು ಹ್ಞಾಂಹು (ನಾನು) ಎನ್ನುತ್ತಾನಂತೆ. ಆಗ ಪುನಃ ಒಳಗಡೆಯಿದ್ದವರು ಅಂಬಾ ಅಂಬಾ (ಬಂದೆ ಬಂದೆ) ಎನ್ನುತ್ತಾರಂತೆ. ನನಗೆ ಕೊಂಕಣಿ ಭಾಷೆ ತಿಳಿಯದು;ಬಹುಶಃ ಇದು ತುಳುವಾಗಿದ್ದರೂ ಸಹ ನನಗೆ ಗೊತ್ತಿಲ್ಲ :). ಒಂದು ವೇಳೆ ತುಳುವಾಗಿದ್ದರೆ ಇದನ್ನು ಗಣೇಶ್‌ಜಿ ಸರಿಪಡಿಸುತ್ತಾರೆ; ಕೊಂಕಣಿಯಾಗಿದ್ದರೆ ಬಹುಶಃ ನಾವಡರು ಸರಿಪಡಿಸುತ್ತಾರೆ ಎಂದುಕೊಳ್ಳುತ್ತೇನೆ. ಜೈ ಜಿಯನ್... ಇದರಲ್ಲಿನ ಜೈ ಕೂಡಾ ಭಾರತದಿಂದ ವಲಸೆ ಹೋಗಿರಬಹುದು. ಏಕೆಂದರೆ ನಾವು ದೇವರ ಪೂಜೆ ಮುಗಿಸಿದ ನಂತರ ಜಯಕಾರ ಹಾಕುತ್ತೇವಲ್ಲವೇ? ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶ್ರೀಧರಜಿ, ಒರಿಜಿನಲ್ ಐಡಿಯದ ಕಥೆ ಮತ್ತು ಕವನ ಎರಡನ್ನೂ ಗುರುತಿಸಿ ಮೊದಲಿಂದಲೂ ಪ್ರೋತ್ಸಾಹಿಸುತ್ತಲೆ ಬಂದಿದ್ದೀರ.  ನನಗೆ ಸದಾ ಅಚ್ಚರಿ ತರುವ ವಿಷಯ ನಿಮ್ಮ ಅಗಾಧ ಶ್ರದ್ದೆ ಮತ್ತು ಹಾಗೆ ಆಂತರ್ಯವನ್ನು ಶೀಘ್ರವಾಗಿ ಗ್ರಹಿಸುವ ಸಹಜ ಚಾಕಚಕ್ಯತೆ - ಜತೆಗೆ ಎಲ್ಲಿಂದಲೊ ಹೆಕ್ಕಿ ತರುತ್ತಿರಲ್ಲ, ಆ ಜೋಕುಗಳು :-) ನನಗೂ ತುಳು, ಕೊಂಕಣಿ ಬರದು - ನೀವಂದಂತೆ ಗಣೇಶರೊ, ನಾವಡರೊ ಅಥವ ಭಾಷೆಬಲ್ಲವರಾರಾದರೂ ನೋಡಿ ವಿವರಿಸಿದರೆ ಚೆನ್ನಿರುತ್ತದೆ! ಅಂದಹಾಗೆ ಜೈ ಜಿಯನ್ ಬಗ್ಗೆ : ಇದು 'ಪಿನ್ ಯಿನ್' ನಲ್ಲಿ ಬರವಣಿಗೆಗೆ ಚೀನಿ ಲಿಪಿಯ ಬದಲು ಬಳಸುವ ಅದರ ಆಂಗ್ಲ ಉಚ್ಚಾರಣ ರೂಪಾಂತರ. ಆದರೆ ಕೆಲವು ಇಂಗ್ಲೀಷ್ ಅಕ್ಷರದ ಉಚ್ಚಾರಣೆ ಮೂಲ ಆಂಗ್ಲಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ 'ಕ್ಯು' ಅಕ್ಷರ 'ಚ್' ಸ್ವರದಲ್ಲಿ ಉಚ್ಚರಿಸಬೇಕು. ಹಾಗೆ ಜೆಡ್ + ಐ = ಜೈ ಅನ್ನುವುದನ್ನು ಸಹ ಒಂದು ರೀತಿ 'ಜ' ಮತ್ತು 'ಸ'ಗಳ ನಡುವೆ ತೇಲಿಸಿದಂತೆ ಉಚ್ಚರಿಸಬೇಕು. ಹೀಗಾಗಿ ಯಾರಾದರೂ ಚೈನಿ ವ್ಯಕ್ತಿ ಮಾತಾಡಿದರೆ 'ಜೈ' ಅನ್ನುವ ಬದಲು 'ಸೈ' ಅನ್ನುವ ಹಾಗೆ ಕೇಳಿಸಬಹುದು. ಅದೇನೆ ಇದ್ದರು ಬರಹದ ರೂಪದಲ್ಲಿ ಇದು ತೊಡಕುಂಟುಮಾಡುವುದಿಲ್ಲ. ನಿಮಗೆ ಬೇಕಾದಂತೆ ಮನದಲ್ಲುಚ್ಚರಿಸಿಕೊಳ್ಳಬಹುದು! ಹೀಗಾಗಿ ಎಷ್ಟೊ ಬಾರಿ ವಿದೇಶಿಯರು ಮಾತಾಡಿದರೆ ಅವರಿಗೆ ಅಷ್ಟು ಸುಲಭದಲ್ಲಿ ಅರ್ಥವಾಗದಿದ್ದರೂ 'ಪಿನ್ ಯಿನ್' ಬರೆದು ತೋರಿಸಿದರೆ ತಕ್ಷಣ ತಿಳಿದುಬಿಡುತ್ತದೆ! - ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>>ಒಳಗಿನಿಂದ ಕೋಣ? :) ಕೋಣ್ ? ಹ್ಞಾಂವ್..:) ಇದು ಕೊಂಕಣಿ ಭಾಷೆ ಶ್ರೀಧರ್‌ಜಿ. (ಇಂಗ್ಲೀಷ್-ಕೊಂಕಣಿ ಟ್ರಾನ್ಸ್‌ಲೇಟ್ ಮಾಡಲು : - http://www.savemylan... )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್‌ಜಿ, ನೀವು ಕೊಟ್ಟ ಕೊಂಡಿಯ ಸಹಾಯದಿಂದ ಸರಿಯಾದ ಶಬ್ದಗಳು ಸಿಕ್ಕವು. ಕೋಣ್ - ಯಾರು, ಹಾಂವ=ನಾನು ಮತ್ತು ಯೋ ಯೋ (ಬಾ, ಬಾ) ಅಂದರೆ ದನಗಳಿಗೆ ಹೇಳುವಂತೆ ಅನಿಸುವುದರಿಂದ ಬಹುಶಃ ಕೊಂಕಣಿಯನ್ನು ಪ್ರಾಣಿಗಳ ಭಾಷೆ ಎಂದು ಅವರೊಳಗೇ ಒಂದು ಜೋಕು ಪ್ರಚಲಿತವಿರಬೇಕು. ಇದೇ ರೀತಿಯ ಮತ್ತೊಂದು ಜೋಕು ಬೆಳಗಾವಿಯ ಬಡಾವಣೆಗಳ ಕುರಿತಾಗಿ ಇದೆ. ಹಣ್ಣು ಮಾರುವವನೊಬ್ಬ ಒಂದು ಬಡಾವಣೆಯಲ್ಲಿ ಮನೆಯ ಮುಂದೆ ಹೋಗಿ ಹಣ್ಣು ಬಾಯಾರ ಹಣ್ಣು ಅಂತಾ ಕೂಗ್ತಾನೆ. ಕನ್ನಡ ತಿಳಿಯದ ಆಕೆ ಮರಾಠಿಯಲ್ಲಿ ಕೋಣ (ಯಾರು) ಅನ್ನುತ್ತಾಳೆ. ಆಗ ಹಣ್ಣು ಮಾರುವವ ನಾನು ಕೋಣ ಅಲ್‌ರೀ ಬಾಯಾರ ನಾನು ಬಸಪ್ಪ ಎಮ್ಮಿರೀ ಅಂತಾನೆ. ಆಗ ಆಕೆ ಕಾಯ? (ಏಕೆ ಬಂದದ್ದು) ಎಂದು ಕೇಳುತ್ತಾಳೆ. ಆಗ ನಮ್ಮ ಬಸ್ಯಾ ಕಾಯ್ ಅಲ್ರೀ ಹಣ್ಣಾದವಾರ‍್ರೀ ಅಂತಾನೆ. ಪುನಃ ಕಸ? ಏನು ಕೆಲಸ ಎಂದು ಕೇಳುತ್ತಾಳೆ. ಆಗ ನಮ್ಮ ಬಸ್ಯಾ ಇದು ಕಸ ಅಲ್ರೀ ರಸ, ರಸಪೂರೀ ಮಾವಿನ ಹಣ್ಣು ಎಂದು ಹೇಳುತ್ತಾನೆ. ಇವ್ರು ನನ್ನ ರಸಪೂರಿ ಮಾವಿನ ಹಣ್ಣಿಗೆ ಕಸ ಅಂದದ್ದಕ್ಕೆ ಬೇಸರಿಸಿ ಬಸ್ಯಾ ಅಲ್ಲಿಂದ ಕಾಲ್ತೆಗೆಯುತ್ತಾನಂತೆ. ಶುಭರಾತ್ರಿ ಅಲ್ಲಲ್ಲ ಶುಭ ಮುಂಜಾವು :)) ಶ್ರೀಧರ್ ಬಂಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:) :) ಶುಭರಾತ್ರಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಈ ಹಾಸ್ಯ ಲೇಖನದ ನಿರೂಪಣೆಯ ಶೈಲಿ ತುಂಬಾ ಚೆನ್ನಾಗಿದೆ. ನಾವಿಬ್ಬರೂ ಮುದ್ದಣ್ಣ ಮನೋರಮೆಯರಂತೆ ಈ ಲೆಖನವನ್ನು ಒಟ್ಟಾಗಿ ಕುಳಿತು ಓದಿ ಆನಂದಿಸಿದೆವು. ನಮ್ಮಲ್ಲೂ ಈಗ ಹಿತವಾದ ಮಳೆ ಬರುತ್ತಿದ್ದು ಬಿಸಿಬಿಸಿ ಕಾಫಿ ಜೊತೆ ಚಿಪ್ಸ್ ತಿನ್ನುತ್ತಾ ನಿಮ್ಮ ಲೇಖನದ ಸವಿಯನ್ನು ಸವಿದೆವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಾಹ್! ಶೋಭಾ ಅರಸ್ ರವರೆ, ಪಕೋಡ ಜಾಗದಲ್ಲಿ ಚಿಪ್ಸು, ಹಿತವಾದ ಮಳೆ, ಬಿಸಿಬಿಸಿ ಕಾಫಿ ಜತೆ ಮುದ್ದಣ್ಣ - ಮನೋರಮೆಯರ ಹಾಗೆ ಓದಿ ಆನಂದಿಸಿದಿರೆಂದು ಕೇಳಲೆ ಖುಷಿಯಾಗುತ್ತಿದೆ! ನಾನು ಬರಿ ಊಹಾಲೋಕದಲ್ಲಿ ಸೃಷ್ಟಿಸಿದ್ದನ್ನ, ನೀವಲ್ಲಿ ನಿಜರೂಪದಲ್ಲಿ ಸಾಕಾರಗೊಳಿಸಿಕೊಂಡಿದ್ದಿರ! ಮುಂದಿನ ಮುದ್ದಣ್ಣ - ಮನೋರಮೆ ಎಪಿಸೋಡುಗಳಿಗೆ ಸ್ಪೂರ್ತಿ ಬೇಕೆಂದರೆ ನಿಮ್ಮಿಬ್ಬರ ಜೋಡಿಯನ್ನೆ ಇಂಟರ್ವ್ಯೂ ಮಾಡಿದರೆ ಸಾಕು ಅನಿಸುತ್ತದೆ :-) ತಮ್ಮ ಉತ್ತೇಜನಾಭರಿತ ಪ್ರತಿಕ್ರಿಯೆಗೆ ವಂದನೆಗಳು - ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮುದ್ದಣ ಮನೋರಮೆಯರ ವಿಭಿನ್ನ ಸಲ್ಲಾಪ ಹಾಗೆ ಹಿಂದೊಮ್ಮೆ ಸಂಪದದಲ್ಲಿ ಬಂದ ಈ ಬರಹ ನೋಡಿ ಬಲ್ಲೆಯವರು ಮುದ್ದಣ ಮನೋರಮೆಯರನ್ನು ಹೇಗೆ ವರ್ಣಿಸಿದ್ದಾರೆ ಹೀಗೊಂದು ಬೆಳಗಿನ ಸಂಭಾಷಣೆ !! November 14, 2011 - 12:01ambhalle 5 ಮೊನ್ನೆ ಹೀಗೆ ಕವಿ ಮುದ್ದಣ’ನ ಬಗ್ಗೆ ಓದುತ್ತಿದ್ದೆ ... ಮುದ್ದಣ-ಮನೋರಮೆಯರು ಮನಸ್ಸನ್ನು ಆವರಿಸುತ್ತಿದ್ದರು ... ವಿಭಿನ್ನ ಪ್ರಯತ್ನ ಮಾಡೋಣ ಎನ್ನಿಸಿತು ... ಗಂಡ-ಹೆಂಡತಿ’ಯ ಒಂದು ಸಂಭಾಷಣೆ ನಿಮ್ಮ ಮನರಂಜನೆಗಾಗಿ ... -------- ಬೆಳಿಗ್ಗೆ ಅಲಾರಂ ಸದ್ದು ------------ ಹೆಂಡತಿ: ಅಲಾರಂ ಹೊಡೀತಿದೆ ಏಳಬಾರದೆ? ಗಂಡ: ಓ! ಅಯ್ತು!! ಅಲಾರಂ ಹೊಡೆದದ್ದು ಕೇಳಲೇ ಇಲ್ವಲ್ಲಾ? ಹೆಂಡತಿ: ಅಲ್ಲಾ, ’ರಂ’ ಹೊಡೆದು ಮಲಗಿದರೆ, ಅಲಾರಂ ಹೇಗೆ ಕೇಳುತ್ತೆ? ಗಂಡ: ಅಲ್ಲಾ, ರಾಮ ಅಂತ ಮಲಗಿದ್ದೋನ ಬಗ್ಗೆ ನೀನು ಹೀಗೆ ಮಾತನಾಡಿದ್ದು, ಮನಸ್ಸಿಗೆ ಏಸುವಿಗೆ ಚಿತ್ರಹಿಂಸೆ ಕೊಟ್ಟ ಹಾಗಿದೆ ! ಹೋಗ್ಲಿ ಬಿಡು, ಟೈಮ್ ಎಷ್ಟಾಯ್ತು? ಹೆಂಡತಿ: ಏಳಕ್ಕೆ ಇಟ್ಟ ಅಲಾರಂ ಏಳಕ್ಕೇ ಹೊಡೆದಿದ್ರೆ, ಈಗ ಏಳು ಘಂಟೆ ... ಅಲ್ಲಾ, ಏಳಕ್ಕೆ ಏಳೋದಕ್ಕೇ ಏಳಾಳುದ್ದ ಚರ್ಚೆ ಯಾಕೆ? ಗಂಡ: ಘಂಟೆ ಏಳಾಗಿದ್ರೂ, ಏಳಲಾಗುತ್ತಿಲ್ವೇ? ಲೇಟ್ ಆಯ್ತು ಆಫೀಸಿಗೆ ! ಹೆಂಡತಿ: ಲೇಟಾಗಿರೋದು ನಿಮಗೆ, ಆಫೀಸಿಗಲ್ಲ ! ಗಂಡ: ಅಯ್ತು .. ಪರಮಾತ್ಮಾ, ಶರಣು ಶಂಕರ ಶಂಭೋ, ಎಡವಟ್ಟಾಗದ ಹಾಗೆ ಕಾಪಾಡೋ! ಹೆಂಡತಿ: ಬಲವಟ್ಟಾದರೆ ಅಡ್ಡಿ ಇಲ್ವೋ? ಗಂಡ: ಬೆಳಿಗ್ಗೇ ಬೆಳಿಗ್ಗೆ ನಿಂದೊಳ್ಳೇ ಹಾಡಾಯ್ತಲ್ಲ? ಹೆಂಡತಿ: ನಾನೇನ್ ಮಾಡ್ಲಿ ಎಸ್.ಜಾನಕಿ ಬರೋಲ್ಲ ಅಂದ್ರು ! ಗಂಡ: ಹೋಗತ್ಲಾಗೆ, ನಾಳೆಯಿಂದ ಖಂಡಿತ ಬೇಗ ಏಳ್ತೀನಿ ! ಹೆಂಡತಿ: ಬೇಗ ಏಳೋದು ನಿಮ್ಮ ಪಂಚ ವಾರ್ಷಿಕ ಯೋಜನೆ ಅಲ್ವೇನು? ಗಂಡ: ನಾನೇನ್ ಮಾಡ್ಲಿ, ಮಲಗಿರೋ ರಂಗನಾಥ ನಮ್ ಮನೆ ದೇವ್ರು ! ಹೆಂಡತಿ: ಅಂದ ಹಾಗೇ, ಪಕ್ಕದ್ಮನೆ ಪುರೋಹಿತ ರಂಗನಾಥರದು ಪಂಚ ವಾರ್ಷಿಕ ಯೋಜನೆಯಂತೇ? ಗಂಡ: ವರ್ಷಕ್ಕೆ ಐದು ಸಾರಿಯಾದ್ರೂ ತಮ್ಮ ಕೊಳೆ ಪಂಚೆ ಒಗೆಯಬೇಕೂ ಅಂತ್ಲೋ? ಹೆಂಡತಿ: ಕೊಳೆ ಪಂಚೆ ಉಟ್ರೆ ದಕ್ಷಿಣೆ ಧಾರಳ ಬರುತ್ತೆ ಕಣ್ರಿ ! ನಿಮಗೆ ಅವೆಲ್ಲ ಗೊತ್ತಾಗೊಲ್ಲ ! ಗಂಡ: ವರ್ಷಕ್ಕೆ ಕನಿಷ್ಟ ಪಂಚ (ಐದು) ವಾರ್ಷಿಕ ಮಾಡಿಸ್ಬೇಕೂ ಅನ್ನೋದೇನು? ಹೆಂಡತಿ: ಇದ್ದೋರ್ದಾ? ಹೋದೋರ್ದಾ? ಗಂಡ: ಇದ್ದು ಹೋದೋರ್ದು ಕಣೆ ... ಇದ್ದಾಗ ಇಲ್ಲದಂತೆ ಇದ್ದರೂ, ವಾರ್ಷಿಕಕ್ಕೆ ಅರ್ಹರು !! ಹೆಂಡತಿ: ಹೇಗೋ ಒಂದು ... ಹೋಗಿದ್ದು ಮುಖ್ಯ ಪುರೋಹಿತರಿಗೆ .. ನಿಮ್ ಉತ್ತರ ಸರಿ ... ಗಂಡ: ರಾಜ್ಯದಲ್ಲಿ ಪಂಚ ವರ್ಷ ಪೂರ್ತಿ ಒಬ್ಬರಾದಾರೂ ಕೂಡಲಿ ಅಂತ ಆಗಿರಬಾರದಿತ್ತೇ? ಹೆಂಡತಿ: ಸದ್ಯ, ವರ್ಷಕ್ಕೆ ಪಂಚ ಆಗದಿದ್ರೆ ಸಾಕು ಅನ್ನೋದೇ ಬೇಡಿಕೆ ಅಷ್ಟೇ ! ಗಂಡ: ಕನಿಷ್ಟ ಪಂಚ ವರ್ಷಕ್ಕೊಮೆ ಕೇಂದ್ರದಲ್ಲಿ ಪ್ರಧಾನಿ ಬದಲಾಗ್ಲಿ ಅಂತಾನಾದ್ರೂ ಇರಬಾರದಿತ್ತೇ? ಹೆಂಡತಿ: ಯಾವ ಪಕ್ಷ ಬಂದ್ರೇನು, ಪಿತೃ ಪಕ್ಷದ ಇವರ ಸಂಪಾದನೆಗೆ ಕುಂದು ಬರದಿದ್ದ ಮೇಲೆ ಇವರಿಗೇನಾಗಬೇಕು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮುದ್ದಣ ಮನೋರಮೆಯರ ವಿಭಿನ್ನ ಸಲ್ಲಾಪ ಹಾಗೆ ಹಿಂದೊಮ್ಮೆ ಸಂಪದದಲ್ಲಿ ಬಂದ ಈ ಬರಹ ನೋಡಿ ಬಲ್ಲೆಯವರು ಮುದ್ದಣ ಮನೋರಮೆಯರನ್ನು ಹೇಗೆ ವರ್ಣಿಸಿದ್ದಾರೆ ಹೀಗೊಂದು ಬೆಳಗಿನ ಸಂಭಾಷಣೆ !! November 14, 2011 - 12:01ambhalle 5 ಮೊನ್ನೆ ಹೀಗೆ ಕವಿ ಮುದ್ದಣ’ನ ಬಗ್ಗೆ ಓದುತ್ತಿದ್ದೆ ... ಮುದ್ದಣ-ಮನೋರಮೆಯರು ಮನಸ್ಸನ್ನು ಆವರಿಸುತ್ತಿದ್ದರು ... ವಿಭಿನ್ನ ಪ್ರಯತ್ನ ಮಾಡೋಣ ಎನ್ನಿಸಿತು ... ಗಂಡ-ಹೆಂಡತಿ’ಯ ಒಂದು ಸಂಭಾಷಣೆ ನಿಮ್ಮ ಮನರಂಜನೆಗಾಗಿ ... -------- ಬೆಳಿಗ್ಗೆ ಅಲಾರಂ ಸದ್ದು ------------ ಹೆಂಡತಿ: ಅಲಾರಂ ಹೊಡೀತಿದೆ ಏಳಬಾರದೆ? ಗಂಡ: ಓ! ಅಯ್ತು!! ಅಲಾರಂ ಹೊಡೆದದ್ದು ಕೇಳಲೇ ಇಲ್ವಲ್ಲಾ? ಹೆಂಡತಿ: ಅಲ್ಲಾ, ’ರಂ’ ಹೊಡೆದು ಮಲಗಿದರೆ, ಅಲಾರಂ ಹೇಗೆ ಕೇಳುತ್ತೆ? ಗಂಡ: ಅಲ್ಲಾ, ರಾಮ ಅಂತ ಮಲಗಿದ್ದೋನ ಬಗ್ಗೆ ನೀನು ಹೀಗೆ ಮಾತನಾಡಿದ್ದು, ಮನಸ್ಸಿಗೆ ಏಸುವಿಗೆ ಚಿತ್ರಹಿಂಸೆ ಕೊಟ್ಟ ಹಾಗಿದೆ ! ಹೋಗ್ಲಿ ಬಿಡು, ಟೈಮ್ ಎಷ್ಟಾಯ್ತು? ಹೆಂಡತಿ: ಏಳಕ್ಕೆ ಇಟ್ಟ ಅಲಾರಂ ಏಳಕ್ಕೇ ಹೊಡೆದಿದ್ರೆ, ಈಗ ಏಳು ಘಂಟೆ ... ಅಲ್ಲಾ, ಏಳಕ್ಕೆ ಏಳೋದಕ್ಕೇ ಏಳಾಳುದ್ದ ಚರ್ಚೆ ಯಾಕೆ? ಗಂಡ: ಘಂಟೆ ಏಳಾಗಿದ್ರೂ, ಏಳಲಾಗುತ್ತಿಲ್ವೇ? ಲೇಟ್ ಆಯ್ತು ಆಫೀಸಿಗೆ ! ಹೆಂಡತಿ: ಲೇಟಾಗಿರೋದು ನಿಮಗೆ, ಆಫೀಸಿಗಲ್ಲ ! ಗಂಡ: ಅಯ್ತು .. ಪರಮಾತ್ಮಾ, ಶರಣು ಶಂಕರ ಶಂಭೋ, ಎಡವಟ್ಟಾಗದ ಹಾಗೆ ಕಾಪಾಡೋ! ಹೆಂಡತಿ: ಬಲವಟ್ಟಾದರೆ ಅಡ್ಡಿ ಇಲ್ವೋ? ಗಂಡ: ಬೆಳಿಗ್ಗೇ ಬೆಳಿಗ್ಗೆ ನಿಂದೊಳ್ಳೇ ಹಾಡಾಯ್ತಲ್ಲ? ಹೆಂಡತಿ: ನಾನೇನ್ ಮಾಡ್ಲಿ ಎಸ್.ಜಾನಕಿ ಬರೋಲ್ಲ ಅಂದ್ರು ! ಗಂಡ: ಹೋಗತ್ಲಾಗೆ, ನಾಳೆಯಿಂದ ಖಂಡಿತ ಬೇಗ ಏಳ್ತೀನಿ ! ಹೆಂಡತಿ: ಬೇಗ ಏಳೋದು ನಿಮ್ಮ ಪಂಚ ವಾರ್ಷಿಕ ಯೋಜನೆ ಅಲ್ವೇನು? ಗಂಡ: ನಾನೇನ್ ಮಾಡ್ಲಿ, ಮಲಗಿರೋ ರಂಗನಾಥ ನಮ್ ಮನೆ ದೇವ್ರು ! ಹೆಂಡತಿ: ಅಂದ ಹಾಗೇ, ಪಕ್ಕದ್ಮನೆ ಪುರೋಹಿತ ರಂಗನಾಥರದು ಪಂಚ ವಾರ್ಷಿಕ ಯೋಜನೆಯಂತೇ? ಗಂಡ: ವರ್ಷಕ್ಕೆ ಐದು ಸಾರಿಯಾದ್ರೂ ತಮ್ಮ ಕೊಳೆ ಪಂಚೆ ಒಗೆಯಬೇಕೂ ಅಂತ್ಲೋ? ಹೆಂಡತಿ: ಕೊಳೆ ಪಂಚೆ ಉಟ್ರೆ ದಕ್ಷಿಣೆ ಧಾರಳ ಬರುತ್ತೆ ಕಣ್ರಿ ! ನಿಮಗೆ ಅವೆಲ್ಲ ಗೊತ್ತಾಗೊಲ್ಲ ! ಗಂಡ: ವರ್ಷಕ್ಕೆ ಕನಿಷ್ಟ ಪಂಚ (ಐದು) ವಾರ್ಷಿಕ ಮಾಡಿಸ್ಬೇಕೂ ಅನ್ನೋದೇನು? ಹೆಂಡತಿ: ಇದ್ದೋರ್ದಾ? ಹೋದೋರ್ದಾ? ಗಂಡ: ಇದ್ದು ಹೋದೋರ್ದು ಕಣೆ ... ಇದ್ದಾಗ ಇಲ್ಲದಂತೆ ಇದ್ದರೂ, ವಾರ್ಷಿಕಕ್ಕೆ ಅರ್ಹರು !! ಹೆಂಡತಿ: ಹೇಗೋ ಒಂದು ... ಹೋಗಿದ್ದು ಮುಖ್ಯ ಪುರೋಹಿತರಿಗೆ .. ನಿಮ್ ಉತ್ತರ ಸರಿ ... ಗಂಡ: ರಾಜ್ಯದಲ್ಲಿ ಪಂಚ ವರ್ಷ ಪೂರ್ತಿ ಒಬ್ಬರಾದಾರೂ ಕೂಡಲಿ ಅಂತ ಆಗಿರಬಾರದಿತ್ತೇ? ಹೆಂಡತಿ: ಸದ್ಯ, ವರ್ಷಕ್ಕೆ ಪಂಚ ಆಗದಿದ್ರೆ ಸಾಕು ಅನ್ನೋದೇ ಬೇಡಿಕೆ ಅಷ್ಟೇ ! ಗಂಡ: ಕನಿಷ್ಟ ಪಂಚ ವರ್ಷಕ್ಕೊಮೆ ಕೇಂದ್ರದಲ್ಲಿ ಪ್ರಧಾನಿ ಬದಲಾಗ್ಲಿ ಅಂತಾನಾದ್ರೂ ಇರಬಾರದಿತ್ತೇ? ಹೆಂಡತಿ: ಯಾವ ಪಕ್ಷ ಬಂದ್ರೇನು, ಪಿತೃ ಪಕ್ಷದ ಇವರ ಸಂಪಾದನೆಗೆ ಕುಂದು ಬರದಿದ್ದ ಮೇಲೆ ಇವರಿಗೇನಾಗಬೇಕು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಲ್ಲೆಯವರೆ ಎರಡು ಸಾರಿ ಪ್ರಯತ್ನಿಸಿದರು ಪ್ರತಿಕ್ರಿಯೆ ಪೂರ್ಣವಾಗಿ ಬರಲಿಲ್ಲ, ಈ ನಡುವೆ, ಪ್ರತಿಕ್ರಿಯೆಯಲ್ಲಿ ಲಿಂಕ್ ಸೇರಿಸುವುದು ತ್ರಾಸದಾಯಕವಾಗಿದೆ, ನಿರ್ವಾಹಕರ ಗಮನಕ್ಕೆ ಇನ್ನೊಮ್ಮೆ ತಂದು ನೋಡಬೇಕು :-( ಮೇಲಿನ ಬಲ್ಲೆಯವರ ಬರಹ ಪೂರ್ಣವಾಗಿ ಬರಲಿಲ್ಲ ಕಡೆಯಲ್ಲೊಂದು ಲಿಂಕ್ ಕೊಟ್ಟಿದೆ ನೋಡಿ ಮುದ್ದಣಮನೋರಮೆಯರ ಸಲ್ಲಾಪ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಪಾರ್ಥರೇ ... ನಾನೂ ಒಮ್ಮೆ ಲಿಂಕಿಸಲು ಪ್ರಯತ್ನಿಸುತ್ತಿದ್ದೇನೆ ... ನೋಡೋಣ http://sampada.net/%... ನಾಗೇಶರೇ, ನಿಮ್ಮ ಬರಹ ಇನ್ನೂ ಓದಿಲ್ಲ ... ಓದಿ ಕಮೆಂಟಿಸುವೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಭಲ್ಲೆಯವರೆ, ಪಾರ್ಥಾ ಸಾರ್ - ಮುದ್ದಣನ ಲಿಂಕಿಗೆ ಧನ್ಯವಾದಗಳು. ಈಗ ಲಿಂಕು ಕೆಲಸ ಮಾಡುತ್ತಿದೆ, ಜತೆಗೆ ನಾನು ಓದಲು ಸಾಧ್ಯವಾಯ್ತು - ಟಿಪಿಕಲ್ 'ಭಲ್ಲೆಯವರ ಶೈಲಿ' ಪಂಚ್ ಲೈನ್ಸ್, ಸೊಗಸಾಗಿದೆ. ನನ್ನ ಸಂಪದ ಸಾಂಗತ್ಯ ಇತ್ತೀಚೆಗೆ - ಹಾಗಾಗಿ 'ಲಿಂಕು' ಮಾಡಿದ ಪಾರ್ಥರಿಗೂ ಧನ್ಯವಾದ  :-) >>>> ಸರಿಹೋಯ್ತು ನಿಮ್ಮ ಪದಗಳ ಜೊತೆ ಆಟ ... ಹೋಗಿ ನೆಡೆಸಿ ನಿಮ್ಮ ಹಲ್ಲುಗಳ ತಿಕ್ಕಾಟ ...>>>> ಅಮೇರಿಕೆಯಲ್ಲಿ ಭಾನುವಾರದ ಬೆಳಗು - ಶುಭ ಬೆಳಗು, ಶುಭದಿನ ಭಲ್ಲೆಯವರೆ  :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.