ಮಲೆನಾಡಿನ ಚಿತ್ರಗಳು

4.666665
ಪುಸ್ತಕದ ಲೇಖಕ/ಕವಿಯ ಹೆಸರು : 
ಕುವೆಂಪು
ಪ್ರಕಾಶಕರು: 
ಉದಯರವಿ ಪ್ರಕಾಶನ
ಪುಸ್ತಕದ ಬೆಲೆ: 
92

ಕುವೆಂಪು ಅವರ ಬರಹಗಳಲ್ಲಿ ಮಲೆನಾಡಿನ ಚಿತ್ರಗಳೂ ಒಂದು. ಚಿತ್ರಗಳಿಲ್ಲದೆ ಮಲೆನಾಡಿನ ಸೌಂದರ್ಯವನ್ನು ಕಣ್ಣಿಗೆ ಕಟ್ಟುವಂತೆ, ಅಲ್ಲಿನ ಪ್ರಕೃತಿಯ ರಮ್ಯ ಮನೋಹರ ದೃಶ್ಯವನ್ನು ಸೆರೆಹಿಡಿಯುವಂತೆ ಮಾಡುವ, ವಿವರಿಸುವ ಅದ್ಭುತ ಶಕ್ತಿ ಕುವೆಂಪು ಅವರ ಬರಹಗಳದ್ದು. ಈ ಪುಸ್ತಕದಲ್ಲಿ ಮಲೆನಾಡಿನ ಮಡಿಲಲ್ಲಿ ಹಾಯಾಗಿದ್ದ ಕುಪ್ಪಳಿ ಮನೆ, ಕವಿಶೈಲ, ಕುಪ್ಪಳಿ ಮನೆಯ ದಕ್ಷಿಣ ಭಾಗದಲ್ಲಿ ಭೀಮಾಕಾರವಾದ ಪರ್ವತ ಶ್ರೇಣಿಗಳು, ಪಶ್ಚಿಮ ಭಾಗಗಳ ಬೆಟ್ಟಗಳು, ಪೂರ್ವಕ್ಕೆ ಹರಡಿಕೊಂಡ ಅಡಿಕೆ ತೋಟಗಳು ಮುಂತಾದವುಗಳ ವರ್ಣನೆ ಅತ್ಯದ್ಭುತವಾಗಿವೆ. ಯಾವುದೇ ಚಿತ್ರಗಳಿಲ್ಲದೆಯೂ ಅವುಗಳ ವರ್ಣನೆಯನ್ನು ಸೊಗಸಾಗಿ ಮೂಡಿಸಿ, ಓದುಗನ ಮನಪಟಲದಲ್ಲಿ ಅವರ ವರ್ಣನೆಗಳು ಹಾಗೆಯೇ ಚಿತ್ರಗಳಾಗುತ್ತಿರುವಂತೆ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ. ಪ್ರಕೃತಿ ಪ್ರೇಮಿಗಳಿಗಂತೂ  ಈ ಪುಸ್ತಕ ಹಾಗೂ  ಕುಪ್ಪಳಿ ನಿಸರ್ಗ ಸ್ವರ್ಗ ಎಂದೇ ಹೇಳಬಹುದು.
ಕುವೆಂಪು ಅವರು ಮಲೆನಾಡನ್ನು ಬಿಟ್ಟು ಬಂದು ಬಯಲುಸೀಮೆಯಲ್ಲಿದ್ದಾಗ ಅವರ ಮನಸ್ಸು- ತವರುನಾಡಿನ ಚೆಲುವು, ಗೆಲುವುಗಳನ್ನೂ, ದೃಶ್ಯಗಳನ್ನೂ, ವ್ಯಕ್ತಿಗಳನ್ನೂ , ಸನ್ನಿವೇಶಗಳನ್ನೂ  ಆಗಾಗ ನೆನಪಿಸುತ್ತಿತ್ತಂತೆ. ಆಪ್ತ ಮಿತ್ರರ ಜತೆ ಅವುಗಳನ್ನು ಹಂಚಿಕೊಂಡು ಸುಖ ಪಡುತ್ತಿದ್ದರಂತೆ. ಈ ನೆನಪುಗಳ ವರ್ಣನೆಯ ಪರಿಣಾಮವೇ ಮಲೆನಾಡಿನ ಚಿತ್ರಗಳು. ನಾವು ಹುಟ್ಟಿ, ಆಡಿ-ಕುಣಿದಾಡಿ ಬೆಳೆದ ನಮ್ಮ ತವರು ನೆಲ, ನಾವು ಎಷ್ಟೆ ಸಾಧನೆ ಮಾಡಿದರೂ, ಎಷ್ಟೇ ದೂರ ಹೋದರೂ ನಮ್ಮ ನೆನಪಿನಿಂದ ದೂರಾಗದ್ದು ಎಂದರೆ ಅದೊಂದೇ. ನಾವು ದೂರ ಸಾಗಿದಷ್ಟು ನಮ್ಮನ್ನು ಮತ್ತೆ ಮತ್ತೆ ಕೈಬೀಸಿ ತನ್ನೊಡಲಿಗೆ ಕರೆಯುತ್ತಿರುತ್ತದೆ. ಜೀವನದ ಸುಂದರವಾದ ಬಾಲ್ಯದ ದಿನಗಳನ್ನು ನಾವು ಅಲ್ಲೇ ಕಳೆದಿರುತ್ತೇವೆ. ಅವು ಮತ್ತೆ ಮತ್ತೆ ನೆನಪಲ್ಲಿ ಮರುಕಳಿಸುತ್ತವೆ. ಈ ಮಲೆನಾಡಿನ ಚಿತ್ರಗಳೂ ಕೂಡ ಕುವೆಂಪು ಅವರ ಅದ್ಭುತ ನೆನಪಿನ ಬುತ್ತಿಯನ್ನು ತೆರೆದಿಡುತ್ತದೆ. ಮಲೆನಾಡಿನ ಚಿತ್ರಗಳಲ್ಲಿ ಅವರ ಬದುಕಿನ ಸುಖಗಳ ಜತೆಗೆ ಕಷ್ಟಗಳನ್ನೂ ಹಂಚಿಕೊಂಡಿದ್ದಾರೆ. ಆದರೆ ಮನಸ್ಸಿಗೆ ಜೀವನದ ಅನುಭವಗಳನ್ನು ಆಯ್ದಿಟ್ಟುಕೊಳ್ಳುವ ಶಕ್ತಿಯಿದೆ. ತನಗೆ ಬೇಕಾದುದನ್ನು ಅದು ಹಿತವಾಗಿರಲಿ ಅಹಿತವಾಗಿರಲಿ ಉಳಿಸಿಕೊಂಡು ಉಳಿದುದನ್ನು ಮರೆತು ಬಿಡುತ್ತದೆ. ಏಕೆಂದರೆ ಸಣ್ಣ ಪುಟ್ಟ ಸಾಮಾನ್ಯ ನೀರಸ ಅನುಭವಗಳನ್ನು ನೆನಪಿನಲ್ಲಿ ಇಡುವುದೆಂದರೆ ಅದಕ್ಕೆ ಹೊರಲಾರದ ಭಾರವಾಗಬಹುದು.
ಕುವೆಂಪು ಅವರೇ ಹೇಳುವಂತೆ, ಜೀವನದ ಸಂಪತ್ತು ಅದರ ಅನುಭವಗಳಲ್ಲಿದೆ. ನೆನಪು ಆ ಅನುಭವಗಳ ನಿಧಿ. ನೆನಹಿನಲ್ಲಿ ಮಹತ್ತಾದ ವಿಷಯಗಳನ್ನಾಗಲಿ ಚಿತ್ರಗಳನ್ನಾಗಲಿ ದೃಶ್ಯಗಳನ್ನಾಗಲಿ ವ್ಯಕ್ತಿಗಳನ್ನಾಗಲಿ ತುಂಬಿಕೊಳ್ಳದ ನರನ ಆತ್ಮ ದಾರಿದ್ರ್ಯದ ಸೀಮೆ. ಸ್ಮೃತಿ ಮಂದಿರದಲ್ಲಿ ಆರಾಧನೆಯ ದೇವತೆಗಳು ಹೆಚ್ಚಿದಷ್ಟೂ ಮನುಷ್ಯ ಶ್ರೀಮಂತನಾಗುತ್ತಾನೆ, ಪವಿತ್ರನಾಗುತ್ತಾನೆ, ಪೂಜ್ಯನಾಗುತ್ತಾನೆ. ಜೀವನದಲ್ಲಿ ನಾವು ಸಂಧಿಸುವ ಮಹಾ ಘಟನೆಗಳನ್ನೂ ಸನ್ನಿವೇಶಗಳನ್ನೂ ದೃಶ್ಯಗಳನ್ನೂ ಕಲ್ಪನೆಯಲ್ಲಿ ಸೆರೆಹಿಡಿದು, ಕಾಲದೇಶಗಳ ನಶ್ವರ ಜಾಲದಿಂದ ಪೊರೆದು, ಪ್ರತಿಭೆಯ ಅಮೃತ ಸೇಚನೆಯಿಂದ ಅವುಗಳನ್ನು ಸ್ಮೃತಿ ಮಂದಿರದಲ್ಲಿ ಶಾಶ್ವತಗೈಯಬೇಕು. ಹಾಗೆ ಮಾಡುವುದರಿಂದ ನಮ್ಮ ನೆನಹಿನ ಬೊಕ್ಕಸದಲ್ಲಿ ಅಪೂರ್ವ ಅನುಭವಗಳು ಸಂಗ್ರಹವಾಗುತ್ತವೆ. ಯಾವಾಗ ಬೇಕೆಂದರಾಗ ಆ ವರ್ಣಮಯವಾದ ಗಾನಮಯವಾದ ರೂಪ ರಸಮಯವಾದ ಮನಸ್ಸಿನ ಅಲಕಾವತಿಯನ್ನು ಕಲ್ಪನೆಯ ಇಂದ್ರಧನುಷ್ಪಥದಿಂದ ಪ್ರವೇಶಿಸಿ ಕಾಲದೇಶಾತೀಥರಾಗಿ ನಲಿಯಬಹುದು. ನಾವು ಮೈಸೂರಿನ ಸಂತೇಪೇಟೆಯ ಹೊಟೇಲಿನ ಗಲಿಬಿಲಿ ಗಲೀಜುಗಳಲ್ಲಿದ್ದರೂ ಮಲೆನಾಡಿನ ಕವಿಶೈಲ ನವಿಲುಕಲ್ಲುಗಳ ನೆತ್ತಿಯ ಚೇತೋಹಾರಿಯಾದ ವಾತಾವರಣದಲ್ಲಿ ರಸ ಋಷಿಗಳಾಗಿರಬಹುದು.
ಕವಿಶೈಲದ ವರ್ಣನೆ ಹೀಗಿದೆ- ಕಲೆಯ ಕಣ್ಣಿಲ್ಲದವರಿಗೆ ಕವಿಶೈಲ ಒಂದು ಕಲ್ಲು ಕಾಡು; ಕಲಾವಂತನಿಗೆ ಅದು ಸಗ್ಗವೀಡು. ಕವಿಶೈಲ ಪಶ್ಚಿಮ ದಿಕ್ಕಿಗೆ ಮುಖ ಹಾಕಿಕೊಂಡಿದೆ. ಪೂರ್ವದಿಕ್ಕಿನಲ್ಲಿ ಎತ್ತರವಾದ ಬೆಟ್ಟಗಾಡುಗಳು ಹಬ್ಬಿರುವುದರಿಂದ ಉಳಿದ ದಿಕ್ಕುಗಳಲ್ಲಿ ನಮಗೆ ಗೋಚರವಾಗುವಂತೆ ದೂರದೃಶ್ಯಗಳು ಕಾಣುವುದಿಲ್ಲ. ಆದ್ದರಿಂದ ಅಲ್ಲಿಗೆ ಸೂರ್ಯೋದಯಕ್ಕಿಂತಲೂ ಸೂರ್ಯಾಸ್ತವೇ ಸಹಸ್ರ ಪಾಲು ಅತಿಶಯವಾಗಿ ತೋರುತ್ತದೆ. ಕವಿಶೈಲವನ್ನು ನೆನೆದರೆ ನೂರಾರು ಮಧುರ ಚಿತ್ರಗಳು ಅನುಭವಗಳು, ವ್ಯಕ್ತಿಗಳು, ಸನ್ನಿವೇಶಗಳು, ಮನಸ್ಸಿಗೆ ಬಂದು ಅದನ್ನು ಇನ್ನೂ ಹೆಚ್ಚಾಗಿ ಪ್ರೀತಿ ಪಾತ್ರರಾಗುವಂತೆ ಮಾಡುತ್ತವೆ. ಒಂದೆರಡು ಫರ್ಲಾಂಗುಗಳಷ್ಟು ವಿಸ್ತಾರವಾಗಿ ಹಬ್ಬಿರುವ ಆ ಬಂಡೆಯಲ್ಲಿ ಒಂದು ಕಡೆ ದಪ್ಪ ಅಕ್ಷರಗಳಿಂದ "ಕವಿಶೈಲ" ಎಂಬ ಹೆಸರು ಖಚಿತವಾಗಿದೆ. ಇನ್ನೊಂದು ಕಡೆ 'ಅನಿರ್ವಚನೀಯ ಮೂರ್ತಿ'ಎಂಬ ಚಿತ್ರವಿದೆ. ಮತ್ತೊಂದೆಡೆ ಏಸುಕ್ರಿಸ್ತನನ್ನು ಶಿಲುಬೆಗೆ ಹಾಕಿದ ರೀತಿಯ ಚಿತ್ರವಿದೆ. ಇಲ್ಲಿನ ಸಂಧ್ಯಾಕಾಲದಲ್ಲಿ ಎಂತವನೂ ಧ್ಯಾನಶೀಲನಾಗದೆ ಹಿಂತಿರುಗುವುದಿಲ್ಲ.
ಹೀಗೆ ಮಲೆನಾಡಿನ ವರ್ಣನೆಯು ಈ ಚಿತ್ರಗಳಲ್ಲಿ ರೋಚಕವಾಗಿ ಮೂಡಿ ಬಂದಿವೆ. ನವಿಲುಕಲ್ಲಿನ ವರ್ಣನೆ, ಹಾಸ್ಯದ ಚಟಾಕಿಯಲ್ಲಿ ಕುವೆಂಪು ಅವರ ಮಿತ್ರರೊಡಗೂಡಿದ ಕಾಡಿನ ಬೇಟೆಯ ವರ್ಣನೆ, ಮಲೆನಾಡಿನ ಸೊಬಗನ್ನು ವಿವರಿಸಿ ಕೈಬೀಸಿ ಕರೆಯುತ್ತಿರುವ - ಮಲೆನಾಡಿಗೆ ಬಾ ಕವಿತೆ, ಕಾಡಿನಲ್ಲಿ ಕಳೆದ ಒಂದಿರುಳು ಚಿತ್ರದಲ್ಲಿ ಬೇಟೆಗೆಂದು ಮಿತ್ರರೊಡನೆ ಹೋದಾಗ ಕಾಡಿನ ಕಗ್ಗತ್ತಲೆಯಲ್ಲಿ, ಜತೆಗೆ ತಂದಿದ್ದ ಕಾಫಿಯನ್ನು ಕುಡಿಯುವಾಗ ಕತ್ತಲೆಯಲ್ಲಿ ಮೂಗು ಬಾಯಿಯ ವ್ಯತ್ಯಾಸ ಗೊತ್ತಾಗದೆ ಕುಡಿದ ಕಾಫಿ ಮೂಗಿಗೂ ಹೋಗಿ ಕೆಮ್ಮು, ಸೀನು ಬಂದು ಆ ನೀರವ ಕಾಡಿನ ಮೌನದಲ್ಲಿ ಇವರ ಧ್ವನಿ ಪ್ರತಿಧ್ವನಿಸಿ, ಕಾಡು ಮಾವಿನ ಹಣ್ಣನ್ನು ತಿನ್ನಲು ಬಂದ ವನವರಾಹಗಳು ದಿಕ್ಕಾಪಾಲಾಗಿ ಓಡಿದ್ದು, ಜತೆಯಿದ್ದ ಬೇಟೆಗಾರ ಇಟ್ಟ ಗುರಿ ಇದರಿಂದಾಗಿ ತಪ್ಪಿದ್ದು, ಹಿಂತಿರುಗಿ ಬರುವಾಗ ಇವರ ಕೆಮ್ಮು, ಸೀನಿನಿಂದಾಗಿ ಕೆಲಸ ಕೆಟ್ಟದಕ್ಕೆ ಸನ್ಮಾನವೂ ಆದದ್ದು ಬಹಳ ರಸಮಯವಾಗಿ ಮೂಡಿ ಬಂದಿದೆ, ಅಜ್ಜಯ್ಯನ ಅಭ್ಯಂಜನದ ಮಹೋತ್ಸವ, ಬಂದನಾ ಹುಲಿರಾಯನು ಚಿತ್ರದಲ್ಲಿ ಹುಲಿರಾಯನ ವರ್ಣನೆ- ರಂಗಯ್ಯನ ಪ್ರಾಣ ಸಂಕಟ, ಪುಟ್ಟಾಚಾರಿಯ ಕಾಡುಕೋಳಿಯ ಚಿತ್ರದಲ್ಲಿ ಆತನು ಬೇಟೆಗೆಂದು ಹೊರಟಾಗ ಏನೂ ಸಿಗದೆ ಕೊನೆಗೆ ದೂರದ ಹುಲ್ಲು ಹಾಸಿನ ಮೇಲೆ ಹಾಸಿ ಆಚೀಚೆ ಅಲ್ಲಾಡುತ್ತಿದ್ದ ಬಾಲವನ್ನು ಕಂಡು ಕಾಡುಕೋಳಿಯ ಬಾಲವೆಂದು ನಿರ್ಧರಿಸಿ ಅದಕ್ಕೆ ಗೊತ್ತಾಗದಂತೆ ತಾನು ಅದರ ಬಳಿ ಹೋಗಿ ಗುರಿಯಿಡಬೇಕೆಂದು ನಿರ್ಧರಿಸಿ ಹಾಗೆಯೇ ಬಗ್ಗಿಕೊಂಡು ಹೋಗಿ ನೋಡಿದಾಗ ಅದು ಮರಿಹುಲಿಗಳೊಂದಿಗೆ ಚಿನ್ನಾಟವಾಡುತ್ತಿದ್ದ ಹೆಬ್ಬುಲಿ! ಅದನ್ನು ಕಂಡು ಜೀವ ಹೋದಂತಾಗಿ ಫಜೀತಿ ಪಡುವ ಚಿತ್ರ ಗಮನಾರ್ಹವಾಗಿದೆ, ತೋಟದಾಚೆಯ ಭೂತ, ಅಣ್ಣಪ್ಪನ ರೇಶ್ಮೆ ಕಾಯಿಲೆ, ಮಲೆನಾಡಿನ ಗೋಪಾಲಕರು, ಕತೆಗಾರ ಮಂಜಣ್ಣ, ಜೇನು ಬೇಟೆ, ಹೀಗೆ ಒಂದಿಲ್ಲೊಂದು ಮಿಗಿಲಾದ ಚಿತ್ರಗಳು ಓದುಗನನ್ನು ಒಂದು ಸುಂದರ ಪ್ರಕೃತಿಯ ಮಡಿಲಿಗೆ ಕೊಂಡೊಯ್ಯುತ್ತದೆ.
ಬಹುಶಃ ಪ್ರಕೃತಿ, ನಿಸರ್ಗವನ್ನು  ಚಿತ್ರಿಸುವುದು ಹಾಗೂ ವರ್ಣಿಸಿರುವುದರಲ್ಲಿ ಕುವೆಂಪುರವರದ್ಧೇ ಮೇಲುಗೈ. ಅವರ ಬರಹಗಳಿಗೆ ಓದುಗನನ್ನು ಹಿಡಿದಿಡುವಂತಹ ಮಾಂತ್ರಿಕ ಶಕ್ತಿಯಿದೆ ಎನ್ನಬಹುದು. ಮಲೆನಾಡಿನ ಚಿತ್ರಗಳು, ನಿಸರ್ಗದ ಸಚಿತ್ರಣ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜಕ್ಕೂ ಅಮೋಘ‌ ಪುಸ್ತಕ‌. ಮನಸ್ಸು ಬೇಸರಿಸಿದಾಗ‌ ಆ ಪುಸ್ತಕ‌ ಹಿಡಿದು ಬೆ೦ಗಳೂರಲ್ಲೇ ಕುಳಿತುಕೊ೦ಡು ಸೀದಾ ಕುಪ್ಪಳ್ಳಿಗೆ ಹೋಗಿಬಿಡ್ತೀನಿ. ಒ೦ದೆರಡು ಲೇಖನ‌ ಓದುವುದರಲ್ಲಿ ಬೇಸರವೆಲ್ಲೋ! ನನ್ನ ಮನದ‌ ಭಾವನೆಗಳೇ ನೀವು ದಾಖಲಿಸಿದ್ದೀರ‌. ಧನ್ಯವಾದಗಳು ಮಮತಾ

ಮಮತಾ ಅವರೇ , ಈ ಪುಸ್ತಕದ ಬಗೆಗೆ ತಿಳಿಸಿದ್ದಕ್ಕೆ ಧನ್ಯವಾದಗಳು. 'ಮಲೆನಾಡಿನ ಚಿತ್ರಗಳು' ಪುಸ್ತಕ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಆನ್ಲೈನ್ ಆಗಿ ಓದಲು ಲಭ್ಯವಿದೆ. http://www.dli.gov.in/cgi-bin/metainfo.cgi?&title1=Malenaad%27ina%20Charitragal%27u%2023&author1=Kuven%27pu&subject1=GENERALITIES&year=1946%20&language1=kannada&pages=147&barcode=2030020027489&author2=&identifier1=&publisher1=Kaavyaalaya&contributor1=&vendor1=NONE&scanningcentre1=rmsc,%20iiith%20&slocation1=NONE&sourcelib1=Osmania%20University&scannerno1=6&digitalrepublisher1=Digital%20Library%20Of%20India&digitalpublicationdate1=&numberedpages1=&unnumberedpages1=&rights1=IN_COPYRIGHT&copyrightowner1=&copyrightexpirydate1=&format1=Tagged%20Image%20File%20Format%20&url=/data7/upload/0197/579

ಮೆಚ್ಚುಗೆಗಾಗಿ ಧನ್ಯವಾದಗಳು ವೇದ ಉಡುಪ ಹಾಗೂ ಶ್ರೀಕಾಂತ್ ಮಿಶ್ರಕೋಟಿಯವರಿಗೆ. ಈ ಪುಸ್ತಕದಲ್ಲಿರುವ ಪುಟ್ಟಾಚಾರಿಯ ಕಾಡುಕೋಳಿ ಬರಹ ಓದಿ ನಕ್ಕೂ ನಕ್ಕೂ ಸುಸ್ತಾಗಿತ್ತು. ಪುಸ್ತಕಗಳೇ ಸಂಗಾತಿಯೆಂದೆನಿಸಿದಾಗ ಜತೆ ಯಾರೂ ಇಲ್ಲದಿದ್ದರೂ ಹೀಗಾಗುತ್ತದೆ. ಉತ್ತಮ ಬರಹಗಳು ಇವೆ. ಓದುಗನನ್ನು ತನ್ನ ವಿಚಾರಗಳಲ್ಲಿ ಲೀನವಾಗಿಸುವ ಶಕ್ತಿ ಕನ್ನಡದ ಅನೇಕ ಸಾಹಿತಿಗಳಲ್ಲಿವೆ. ಕುವೆಂಪು ಅವರ ಬರಹಗಳಲ್ಲಿ ಇದು ಹೆಚ್ಚಾಗಿದೆ.