ಮುಂಬಯಿ

ಮುಂಬಯಿ ಮುಖಗಳು.. ಭಾಗ ೨......

ಭೂಷಣ್ ಭಾಯಿ ಬಟುಕ್ ಲಾಲ್ ಪಟೇಲನ ಜೀವನವೇ ವಿಚಿತ್ರ. ಮೊದಲು ಯಾವ ವಸ್ತುಗಳು ಅವನಿಗೆ ತುಂಬ ಇಷ್ಟವಾಗುತ್ತಿದ್ದವೋ, ಇಂದು ಅವನ್ನು ಕಂಡರೆ ಆಗುವುದಿಲ್ಲ. ಮೊದಲು ಯಾವ ವಸ್ತು ಅಂದರೆ ಉರಿದುಬೀಳುತ್ತಿದ್ದನೋ, ಇಂದು ಅವುಗಳೇ ಪಂಚ ಪ್ರಾಣ. ಅದರಲ್ಲಿ ಅವನ ಅಲಾರ್ಮ್ ಕೂಡ ಒಂದು. ಮೊದಲಾದರೆ ಅಲಾರ್ಮ್ ಕಂಡುಹಿಡಿದ ಪ್ರಾಣಿಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ಆದರೆ ಈಗ ಬೆಳಿಗ್ಗೆ ಐದೂ ಕಾಲಿಗೆ ಅಲಾರ್ಮ್ ಬಾರಿಸುತ್ತಲೆ, ನಿದ್ದೆಯಲ್ಲೇ ಮಂದಹಾಸ ಬೀರುತ್ತಾನೆ. ಮೊದಲಾದರೆ ಅಲಾರ್ಮ್ ಬಾರಿಸಿದ ನಂತರವೂ ಹತ್ತು ನಿಮಿಷ ಸುಖನಿದ್ರೆಗೆ ಹಪಹಪಿಸುತ್ತಿದ್ದವ, ಇಂದು ಅದು ಹೊಡೆದುಕೊಳ್ಳುತ್ತಲೇ, ಎದ್ದು ನೀಟಾಗುತ್ತಾನೆ. ಹಾಗೆ ನೋಡಿದರೆ, ಅಷ್ಟು ಬೇಗ ಏಳುವ ಅವಶ್ಯಕತೆ ಆತನಿಗಿಲ್ಲ. ಆದರೆ ಈ ಮೂರು ತಿಂಗಳಿನಿಂದೀಚೆ, ಅಂತಹ ಅವಶ್ಯಕತೆ ಬಂದು ನಿಂತಿದೆ. ಅದು ಅವನ ಜೀವನ್ಮರಣದ ಪ್ರಶ್ನೆ.

ನಾಲಾಸೋಪಾರಾ ಪೂರ್ವದಲ್ಲಿ ರೇಲ್ವೇ ಹಳಿಗುಂಟ ಒಂದೈವತ್ತು ಹೆಜ್ಜೆ ನಡೆದರೆ, ಎದುರುಗಡೆಯೇ ಕಾಣುತ್ತೆ ’ಜೈ ಜಿನೇಂದ್ರ ಕೋ-ಆಪ್ ಹೌಸಿಂಗ್ ಸೊಸಾಯಟಿ’. ನಾಲ್ವತ್ತು ಮನೆಗಳಿವೆ ಅಲ್ಲಿ. ಹೆಚ್ಚಾಗಿ ಎಲ್ಲರೂ ಇಮಿಟೇಶನ್ ಜೆವೆಲ್ಲರಿ ಕೆಲಸ ಮಾಡುವವರೇ. ನಮ್ಮ ಭೂಷಣ್ ಭಾಯಿ ಈ ಸೊಸಾಯಟಿಯ ಹೆಮ್ಮೆಯ ಸೆಕ್ರೆಟರಿ. ಅತ್ಯಂತ ಜನಪ್ರಿಯ ಕೂಡ. ಚೂರು ಬೊಕ್ಕ ತಲೆ- ಚೂರೇ ಚೂರು ಹೊಟ್ಟೆ ಇರದಿದ್ರೆ, ಆತ ಗುಜರಾತಿ ಫಿಲ್ಮುಗಳ ನಾಯಕನಾಗಿರಬಹುದಿತ್ತೆಂದು, ಬಹಳ ಜನರು ಆತನಿಗೆ ಹೇಳಿದ್ದಿದೆ. ಅದನ್ನು ಆತ ಈಗೀಗ ನಂಬತೊಡಗಿದ್ದಾನೆ. ವಯಸ್ಸು ನಾಲ್ವತ್ತೈದು ದಾಟಿದೆ ಎಂಬುದನ್ನು ಆತ ಮೂರು ತಿಂಗಳ ಹಿಂದೆಯೇ ಮರೆತಿದ್ದಾನೆ. ಮೂರು ತಿಂಗಳ ಹಿಂದೆ ಅಂಥದ್ದೇನು ಅನಾಹುತ ಆಯ್ತೂಂತೀರಾ? ನವರಾತ್ರಿಯ ಉತ್ಸವದ ಸಮಯ. ಅಂದು ಸೊಸಾಯಟಿ ಕಂಪೌಂಡಿನಲ್ಲಿ ಬಹಳ ವಿಜೃಂಭಣೆಯಿಂದ ದಾಂಡಿಯಾ ನೃತ್ಯ ನಡೆಯುತ್ತಿತ್ತು. ಒಂಭತ್ತು ದಿನಗಳ ಸುದೀರ್ಘ ಹಬ್ಬಕ್ಕೆ ಅಂದು ತೆರೆ ಬೀಳಲಿತ್ತು. ಇಡೀ ಸೊಸಾಯಟಿ ಸಂಭ್ರಮದಲ್ಲಿತ್ತು. ದೂರದ ಜೀವದಾನಿ ಬೆಟ್ಟದಿಂದ ನೋಡಿದರೆ, ಇಡೀ ನಾಲಾಸೋಪಾರಾದಲ್ಲಿ ಜೈ ಜಿನೇಂದ್ರ ಬಿಲ್ಡಿಂಗ್ ಮಾತ್ರ ಹೊಳೆಯುತ್ತಿರುವಂತಿತ್ತು. ಬಿಲ್ಡಿಂಗಿನ ಇಪ್ಪತ್ತೇಳು ವರ್ಷಗಳ ಇತಿಹಾಸದಲ್ಲೇ ಇಂಥದ್ದೊಂದು ಉತ್ಸವ ಆಗುತ್ತಿರುವುದೇ ಮೊದಲ ಬಾರಿ. ನವರಾತ್ರಿ ಆಚರಣೆಯ ಐಡಿಯಾ ಕೊಟ್ಟ, ಅದನ್ನು ಸಾಂಗವಾಗಿ ನೆರವೇರಿಸಿದ ಭೂಷಣ್ ಭಾಯಿ ಅಂದು ಸೊಸಾಯಟಿಯ ಹೀರೋ. ಜನರೆಲ್ಲ "ಮಾಡ ತಾರಾ ಮಂಡರಿಯಾಮಾ", "ತಾರಾ ವಿನಾ ಶಾಮ್ ಮನ್ನೆ ಇಕಲಡು ಲಾಗೆ" ಹಾಡುಗಳಿಗೆ ಮೈಮರೆತು ಕುಣಿಯುತ್ತಿದ್ದರೆ, ದೂರ ನಿಂತ ಭೂಷಣ ಭಾಯಿಯ ಕಣ್ಣುಗಳು ಅವಳನ್ನೇ ದಿಟ್ಟಿಸುತ್ತಿವೆ. ಆಕೆ ಕೊನೆಗೂ ಓರೆಗಣ್ಣಿನಿಂದ ಆತನನ್ನು ನೋಡಿ, ಒಂದು ಪುಟ್ಟ ಹೂ ನಗೆಯೊಂದನ್ನು ಅವನ ಮೇಲೆಸೆದಾಗ, ಜೀವನದಲ್ಲಿ ಎರಡನೇ ಬಾರಿ ಪ್ರೀತಿಯ ಹೊಂಡಕ್ಕೆ ಬಿದ್ದುಬಿಟ್ಟಿದ್ದ ಭೂಷಣ್. ಆಕೆ ರೀಟಾ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಭಾಗ ೨.

ಮಹಾರಾಷ್ಟ್ರದ ರಾಜಕೀಯ ರಂಗದಲ್ಲಿ ಈ ರಾಜ್ ಠಾಕರೆ ಎಂಬಾತ ಮೂಡಿ ಬರುವ ಸುಮಾರು ಐದು ದಶಕಗಳ ಹಿಂದೆ ಬಾಳಾಸಾಹೇಬ ಠಾಕರೆ ಎಂಬ ಕಾರ್ಟೂನಿಸ್ಟ್, ಇದೇ ರೀತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಂಬಯಿ, ಠಾಕರೆ ಮತ್ತು ಕಿಡಿಗೇಡಿ ಮಾಧ್ಯಮಗಳು... ಬಾಗ ೧...

ಸಂಜೆ ಮನೆಗೆ ಬಂದವನೆ ರಿಮೋಟ್ ಮೇಲೆ ಕೈ ಇಟ್ಟು ನ್ಯೂಸ್ ಚಾನೆಲ್ಲುಗಳನ್ನು ಹುಡುಕತೊಡಗಿದೆ. ಇತ್ತೀಚೆಗೆ ರಾಜ್ ಠಾಕರೆಯನ್ನು, ಓಸಾಮಾ ಬಿನ್ ಲಾದೆನ್ ನ ಅಪ್ಪನಂತೆ ಚಿತ್ರಿಸುವುದರ ಮೂಲಕ ಈ ’ಆಜ್ ತಕ್’ ನಂಥ ಚಾನೆಲ್ಲುಗಳು ತಮ್ಮ ಟಿ.ಆರ್.ಪಿ ಯನ್ನು ಹೆಚ್ಚಿಸಿಕೊಳ್ಳುವ ಕ್ಷುದ್ರ ಪ್ರಯತ್ನದಲ್ಲಿ ತೊಡಗಿವೆ. ಲೋಕಲ್ ಟ್ರೇನಿನಲ್ಲಿ ಬರುವಾಗ, ಮುಂಬಯಿಯ ಒಂದು ಜನನಿಬಿಡ ಭಾಗದಲ್ಲಿ ೨೩ ವರ್ಷದ ಯುವಕನೊಬ್ಬನನ್ನು ’ಎನ್ ಕೌಂಟರ್’ನಲ್ಲಿ ಪೋಲೀಸರು ಕೊಂದು ಹಾಕಿದರು ಎಂಬ ಚರ್ಚೆ ಕೇಳಿ ಬರುತ್ತಿತ್ತು. ನ್ಯೂಸು ನೋಡಿದರೆ, ಅಂತಹ ಒಂದು ಘಟನೆಗೂ ರಾಜಕೀಯ ಬಣ್ಣ ಹಚ್ಚಿ ಮಜ ನೋಡುತ್ತಿದೆ ಈ ಸಬ್ ಸೆ ತೇಜ್ ಚಾನೆಲ್ಲು. ಸಾವಿರಾರು ಜನ ಓಡಾಡಿಕೊಂಡಿರುವ ಒಂದು ಮಾರುಕಟ್ಟೆಯಲ್ಲಿ, ಹಲವಾರು ಜನ ಪಯಣಿಸುತ್ತಿರುವ ಒಂದು ಬಸ್ಸಿನಲ್ಲಿ, ಯುವಕನೊಬ್ಬ ರಿವಾಲ್ವರ್ ಹಿಡಿದು ’ನನಗೆ ರಾಜ್ ಠಾಕರೆ ಬೇಕು’ ಅಂತ ಕೂಗಾಡುತ್ತ ಬಸ್ಸಿನಲ್ಲಿದ್ದ ಜನರನ್ನು ಬೆದರಿಸುತ್ತಿದ್ದರೆ, ಅಂತಹ ಯುವಕನಿಗೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ಕೊಟ್ಟಾಗಲೂ ಆತ ಶರಣಾಗಲು ಒಪ್ಪದಿದ್ದರೆ, ಪೋಲೀಸರು ಆತನನ್ನು ಕ್ಷಮಿಸಿ, ’ಆಯ್ತಪ್ಪ, ಇಲ್ಲೇ ಕುಂತಿರು, ನಿನಗೋಸ್ಕರ ರಾಜ್ ಠಾಕರೆಯನ್ನ ಹುಡುಕಿ ತರ್ತೀವಿ, ನೀನು ಮನಸಾರೆ ಗುಂಡು ಹೊಡೆದು ಆರಾಮವಾಗಿ ಬಿಹಾರಿಗೆ ಹೋಗು, ಆದ್ರೆ ಅಲ್ಲಿವರೆಗೆ ನೀನು ಇಲ್ಲೇ ಕುಂತು, ಪಿಜ್ಜಾ ತಿನ್ನಪ್ಪ ನನ್ನಪ್ಪ’ ಅನ್ನೋಕೆ ಇದು ಬಿಹಾರ ಅಥವಾ ಅಫಘಾನಿಸ್ತಾನ ಅಲ್ವಲ್ಲ ಸ್ವಾಮಿ. ಸಹಜವಾಗಿಯೇ ಆತನನ್ನು ಪೋಲೀಸರು ಹೊಡೆದು ಹಾಕಿದ್ದಾರೆ. ಇಷ್ಟಾಯಿತೆ... ಲಾಲೂ, ನಿತೀಶ್ ಹಾಗೂ ಪಾಸ್ವಾನ್ ರಂಥ ಅನಕ್ಷರಸ್ತ ನೇತಾರರು ’ಇದು ಮುಂಬಯಿ ಪೋಲೀಸರು ಮಾಡಿದ ಹತ್ಯೆ’ ಎಂದು ದೊಡ್ಡದಾಗಿ ಮಾಧ್ಯಮದ ಎದುರು ಹೇಳಿಕೆಯನ್ನು ನೀಡುತ್ತಾರೆ. ಸಾಕಲ್ಲವೇ ಬಿಹಾರ ಹೊತ್ತಿ ಉರಿಯಲು? ಈ ನೇತಾರರಿಗೆ ಕಣ್ಣು ಕಾಣುವುದಿಲ್ಲವೆ? ಆ ಹುಡುಗ ಬಸ್ಸಿನಲ್ಲಿ ಕುಳಿತು ಸಾರಾಸಗಟಾಗಿ ತನ್ನ ಗನ್ನಿನ ಪ್ರದರ್ಶನ ಮಾಡಿ ಜನರನ್ನು ಬೆದರಿಸುತ್ತಿದ್ದರೆ, ಪೋಲೀಸರು ಆ ಹುಡುಗನಿಗೋಸ್ಕರ ಕೂಲ್ ಡ್ರಿಂಕ್ ತರಬೇಕಿತ್ತೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಂಬಯಿ ಮುಖಗಳು ಭಾಗ ೧.....

ಸದಾ ತಡವಾಗಿ ಓಡುವ ಲೋಕಲ್ ಟ್ರೇನುಗಳ ರಭಸ, ಸತ್ತ ಮೀನುಗಳೇ ತುಂಬಿರುವ ಬುಟ್ಟಿಗಳ ನಾರು ವಾಸನೆ, ರೈಲು ಹಳಿಯುದ್ದಕ್ಕೂ ಮೈ-ಮರೆತು ಪ್ಲಾಸ್ಟಿಕ್ ತಂಬಿಗೆ ಹಿಡಿದು ಕೂತಿರುವ ಭಯ್ಯಾಗಳ ಕೄತಘ್ನತೆ, ಯಾವ ಬಾಂಬು ಎಲ್ಲಿ ಸಿಡಿಯುವುದೋ ಎಂಬ ಕರಿ ಭಯದ ನೆರಳಲ್ಲೇ ಎದ್ದು ಮೈ ಮುರಿಯುತ್ತದೆ ಮುಂಬಯಿ. ದೂರದ ಬ್ಯಾಂಡ್ ಸ್ಟಾಂಡ್ ನಲ್ಲಿ ಚರಸ್ ಸೇವಿಸಿ, ಹೈರಾಣಾಗಿ, ಗೆಳೆಯನ ಅಪ್ಪನ ಕ್ವಾಲಿಸ್ ಗಾಡಿಯಲ್ಲಿ ಕುಳಿತು ಮನೆಗಡೆ ಹಿಂದಿರುಗುವ ಯೋಚನೆಯಲ್ಲಿ ಕಾಲ್ ಸೆಂಟರ್ ನ ಹೈ-ಟೆಕ್ ಹೈಕಳು ಚರ್ಚಿಸುತ್ತಿದ್ದರೆ, ಈಚೆ ಗಡದ್ದಾಗಿ ಹೊದ್ದು ಮಲಗಿದ ಲಕ್ಷ್ಮಣ ಭಾವೂ ಸುರ್ವೆ ಚಾಳಿನ ಹದಿನೇಳನೇ ನಂಬರ್ ಮನೆಯಲ್ಲಿ ದೀಪ ಝಗ್ಗನೇ ಬೆಳಗುತ್ತದೆ. ವಸಂತರಾವ್ ವಿಠೋಬಾ ಪಾರಂಗೆಯ ಅರೆ-ತೆರೆದ ಕಣ್ಣುಗಳು, ಆತನಿಗೆ ಎಂದೂ ಮೋಸ ಮಾಡಿಲ್ಲ. ಅಡ್ಡಾದಿಡ್ಡಿ ಮಲಗಿದ ಮಕ್ಕಳಿಗೆ ಕಾಲು ತಾಕದಂತೆ ಎಚ್ಚರವಹಿಸಿ, ಚೊಂಬು ಹಿಡಿದು ಆತ ಮೆಲ್ಲನೆ ಹೊರಬರುತ್ತಾನೆ. ಹದಿನಾರು ವರ್ಷಗಳೇ ಕಳೆದು ಹೋಗಿವೆ ನೋಡಿ, ಆತ ಚಾಳಿನ ಪಾಯಖಾನೆಯ ಬಳಕೆಗಾಗಿ ಲೈನಿನಲ್ಲಿ ನಿಂತಿರುವವರ ಜೊತೆ ಜಗಳವಾಡಿ. ಜಗಳಾಡಲು, ಮೂರೂ ಮುಕ್ಕಾಲರ ’ಮಟಮಟ’ ಮುಂಜಾನೆ ಅಲ್ಲಿ ಯಾರಿರುತ್ತಾರೆ? ಪಾಯಖಾನೆಯ ಬಳಿ ಮಲಗಿರುತ್ತಿದ್ದ ಮೋತಿ ಕೂಡ ಹೋದ ಸಾಯಿಬಾಬಾ ದಿಂಡಿಯ ದಿನ ಸತ್ತು ಹೋಯ್ತು. ಆವತ್ತಿನಿಂದ ಪಾರಂಗೆ ಕಾಕಾನ, ಮುಂಜಾವಿನ ಗುಣು ಗುಣು ಭಜನೆಯನ್ನು ಕೇಳುವವರೆ ಇಲ್ಲ. ಪಾರಂಗೆ ಕಾಕಾನ ಬಳಿ ಮರಾಠಿ ಭಜನೆಗಳ ಭಾಂಡಾರವೇ ಇದೆ. "ಆಜ ಆನಂದೀ ಆನಂದ ಝಾಲಾ..", "ವಿಠೂ ಮಾವುಲೀ ತೂ ಮಾವುಲೀ ಜಗಾಚೀ..", " ಬಾಬಾಂಚಾ ಝಾಲಾ ಪ್ರಸಾದ...", ಹೀಗೆ ಒಂದೇ, ಎರಡೇ?. ಪಾರಂಗೆ ಕಾಕಾ ಹಾಡಲು ಕುಳಿತರೆಂದರೆ, ಚಾಲಿಗೆ ಚಾಳೇ ಕಿವಿಯಾಗುತ್ತದೆ. ನಿನ್ನೆ ಸಂಜೆ ತಂದ ಕ್ಯಾಸೆಟ್ ನ ಹೊಸ ಹಾಡೊಂದನ್ನು ಗುಣಗುಣಿಸುತ್ತ, ಕಾಕಾ ಪಾಯಖಾನೆಯ ಬಳಿ ಹೆಜ್ಜೆ ಹಾಕುತ್ತಿದ್ದರೆ, ಅದಕ್ಕೆ ತಾಳ ಹಾಕುವಂತೆ, ಫನ್ಸೆಕರ್ ಮಾವಶಿಯ ಭಯಾನಕ ಕೆಮ್ಮು. "ಈ ಮುದುಕಿ ರಾತ್ರಿ ಇಡೀ ಕೆಮ್ಮುತ್ತೆ. ಹ್ಯಾಗಾದ್ರೂ ಸಹಿಸ್ತಾರೊ ಆ ಜನ? ರಾತ್ರಿ ಅವಕ್ಕೆ ನಿದ್ದೆಯಾದ್ರೂ ಬರುತ್ತೋ? ಒಂದೇ ಒಂದ್ಸಲ ಸತ್ತಾದ್ರೂ ಹೋಗ್ಬಾರದೆ ಈ ಗೊಡ್ಡು" ಎಂದು ಒಂದು ಕ್ಷಣ ಅಂದುಕೊಳ್ಳುತ್ತಾರೆ ಪಾರಂಗೆ ಕಾಕಾ. ಆದರೆ ವಿನಾಯಕನಿಗೆ ಆಕ್ಸಿಡೆಂಟ್ ಆದಾಗ, ದಿನ ರಾತ್ರಿ ಅನ್ನದೇ ಅವನನ್ನು ನೋಡಿಕೊಂಡದ್ದು ಅದೇ ಮುದುಕಿಯಲ್ಲವೇ ಎಂಬುದು ನೆನಪಾಗಿ ತಮ್ಮ ಯೋಚನೆಗೆ ತಾವೇ ಪಶ್ಚಾತ್ತಾಪ ಪಡುತ್ತ, ತಮ್ಮ ಭಜನೆಯನ್ನು ಮುಂದುವರಿಸುತ್ತ, ನಿರ್ಭೀತರಾಗಿ ಪಾಯಖಾನೆಯೊಳಗೆ ನುಗ್ಗುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಂಬಯಿಯಲ್ಲಿ ವಲಸೆ ಬಂದವರ ಮೇಲೆ ಹಾವಳಿ - ಈ ಸಮಸ್ಯೆಗೆ ಕಾರಣರಾರು?

ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು).
ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈಯ್ಯಾ ( ಬಿಹಾರಿ, ಉಪ್ರದವರು) ಗಳ ಮೇಲೆ ಜನ ತಲೆಗೊಂದೇಟು ಹಾಕುತ್ತಿದ್ದಾರೆ.

ಎಲ್ಲ ಪತ್ರಿಕೆಗಳಲ್ಲಿ ಖಂಡನೆಯಾಗುತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಮುಂಬಯಿ