ಬೇಜಾರಾದಾಗೆಲ್ಲಾ ಚಾಪ್ಲಿನ್ ನೆನಪಾಗ್ತಾನೆ....

4.8

ದೊಗಳೆ ಪ್ಯಾಂಟ್ , ಬಿಗಿಯಾದ ಕೋಟು, ಪಾದಗಳಿಗಿಂತಲೂ ದೊಡ್ಡದಾದ ಹಳೇ ಶೂ, ದೊಡ್ಡ ಟೋಪಿ, ಪುಟ್ಟ ಮೀಸೆ, ಕೈಯಲ್ಲೊಂದು ಸ್ಟಿಕ್. ಉಡುಗೆ ಸರಿಯಿಲ್ಲದೇ ಇರುವ ಕಾರಣ ಅಸ್ತವ್ಯಸ್ತವಾದ ನಡಿಗೆ. ತುಂಟಾಟಿಕೆಯ ನಗು, ಮನಸ್ಸಿನಲ್ಲಿ ನಿಷ್ಕಲ್ಮಷ ಭಾವ, ಜಾಗತಿಕ ಸಿನಿಮಾದಲ್ಲಿ ಎಂದಿಗೂ ಚಿರಸ್ಥಾಯಿಯಾದ ಆ ಕಥಾಪಾತ್ರವನ್ನು ಈ ರೀತಿ ವಿವರಿಸಬಹುದು. ಬೀದಿ ಬಿಕಾರಿಯಂತೆ ಕಾಣಿಸಿಕೊಂಡ ಆ ಹಾಸ್ಯ ನಟನ ರೂಪದಲ್ಲಿ ಚಾಪ್ಲಿನ್ ಎಂಬ ಮಹಾನಟ ತೋರಿಸಿದ್ದು ನಗು ಮತ್ತು ಅಳು ಒಂದಾಗುವ ನಟನ ವಿದ್ಯೆಯನ್ನು. ಒಂದೊಳ್ಳೆ ನಟನಾ ಕೌಶಲವನ್ನು .

 ಪ್ರತಿಭಟನೆಯ ಚಲನಚಿತ್ರ ಪಾಠವನ್ನು . ಮೂಕಿ ಚಿತ್ರದ ಪ್ರತಿರೂಪವೆಂಬಂತಿರುವ  ಆ "ಟ್ರಾಂಪ್ "(ಅಲೆಮಾರಿ) ಅದ್ಭುತವಾಗಿ ಬೆಳೆದು ಅಚ್ಚರಿಗೊಳಿಸಿದಾಗ ಜಗತ್ತು ಮೂಕ ವಿಸ್ಮಿತವಾಗಿ ನೋಡಿತ್ತು.

ಅಳುವನ್ನು ಬಗಲಲ್ಲಿ ಇರಿಸಿ ಜಗತ್ತನ್ನೇ ನಗಿಸಿದ ಸರ್ ಚಾಲ್ಸ್೯  ಸ್ಪೆನ್ಸರ್  ಚಾಲಿ೯ ಚಾಪ್ಲಿನ್ (1889-1977) ಎಂಬ ಮಹಾ ನಟ ತೆರೆಯ  ಮೇಲೆ ಬಂದು ಕಳೆದ  ಫೆಬ್ರವರಿಗೆ ನೂರು ವಷ೯ಗಳಾದುವು. 1914 ಫೆ.2 ರಂದು ಚಾಪ್ಲಿನ್ ನ ಜೀವನದ ದಿಶೆಯನ್ನೇ ಬದಲಾಯಿಸಿದ "ಮೇಕಿಂಗ್ ಎ ಲಿವಿಂಗ್" (Making a Living) ಎಂಬ ಸಿಂಗಲ್ ರೀಲ್ ಚಲನಚಿತ್ರ ರಿಲೀಸ್ ಆಗಿತ್ತು.  ಮಾಕ್ ಸೆನೆಟ್ ನಿಮಿ೯ಸಿದ  ಈ ಚಿತ್ರದಲ್ಲಿ ಜನರನ್ನು ಮೋಸ ಮಾಡುವ ತಿರುಬೋಕಿಯ ಪಾತ್ರವಾಗಿತ್ತು ಚಾಪ್ಲಿನ್ನದ್ದು.  ಮೊದಲ ಚಿತ್ರ ಬಿಡುಗಡೆಯಾಗಿ ಒಂದೇ ವಾರದಲ್ಲಿ  ಚಾಪ್ಲಿನ್ ನ ಎರಡು ಚಿತ್ರಗಳು  ಒಟ್ಟೊಟ್ಟಿಗೆ ತೆರೆಕಂಡವು.  
ಸಿನಿಮಾ ಜತೆಗೆ ಆ ಬಿಕಾರಿ ವೇಷವೂ ಜನರನ್ನು ಆಕಷಿ೯ಸಿತು. ಜಗತ್ತು ನೋಡಿದ ಅತೀ ಪ್ರಸಿದ್ಧ ವೆನಿಸಿದ ಕಾಸ್ಟ್ಯೂಂ ಅದಾಗಿತ್ತು.

ಫೆಬ್ರವರಿ 7 ರಂದು ಬಿಡುಗಡೆಯಾದ "ಕಿಡ್ಸ್ ಆಟೋ ರೇಸ್ ಸ್ ಅಟ್ ವೆನೀಸ್ (Kid Auto Races at Venice ) "ಎಂಬ ಸಿನಿಮಾದಲ್ಲಿ ಈ ಕಾಸ್ಟ್ಯೂಂ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.  ಮಕ್ಕಳ  ಕಾರ್ ರೇಸ್ ನಲ್ಲಿ  ಪ್ರೇಕ್ಷಕರ ಸೀಟಿನಲ್ಲಿ ಕುಳಿತ ಚಾಪ್ಲಿನ್ ಟ್ರ್ಯಾಕಿಗೆ ಇಳಿದು ಎಲ್ಲರಿಗೂ ತೊಂದರೆ ಕೊಡುವ ಪುಟ್ಟ ಹಾಸ್ಯ ಸಿನಿಮಾ ಇದು.  ಆದರೆ ಕ್ಯಾಮೆರಾ ಮುಂದೆ ಮೊದಲಬಾರಿಗೆ ಈ ಕಾಸ್ಟ್ಯೂಂ ಧರಿಸಿ ಕಾಣಿಸಿಕೊಂಡ ಚಿತ್ರ  "ಮೇಬಲ್ಸ್  ಸ್ಟ್ರಾಂಜ್ ಪ್ರೆಡಿಕಾಮೇಂಟ್" (Mabel's Strange Predicament).  ಆದರೆ ಕಿಡ್ಸ್ ಆಟೋ ರೇಸ್ ಅಟ್ ವೆನೀಸ್  ಬಿಡುಗಡೆಯಾದ ಎರಡು ದಿನ ಕಳೆದ ನಂತರ ಇದು ಬಿಡುಗಡೆಯಾಗಿತ್ತು.
 ಮೊದಲ ವಷ೯ 35 ಚಿತ್ರಗಳಲ್ಲಿ ಈ ಕಾಸ್ಟ್ಯೂಂ ಕಾಣಿಸಿಕೊಂಡಿತು. ಮರು ವಷ೯ದಲ್ಲೇ ದ ಟ್ರಾಂಪ್ (The Tramp) ಎಂಬ ಸಿನಿಮಾ ಕೂಡಾ ತೆರೆ ಕಂಡಾಗ ಈ ಬಿಕಾರಿ ವೇಷ ಜಗತ್ಪ್ರಸಿದ್ಧವಾಯಿತು.

ನರಕಯಾತನೆಯ ಬಾಲ್ಯವಾಗಿತ್ತು ಚಾಪ್ಲಿನ್ನದ್ದು. ಕಡು ಬಡತನವನ್ನು ಹೊದ್ದು ಮಲಗಿದ್ದ ಚಾಪ್ಲಿನ್ ತನ್ನ ವೇದನೆಯನ್ನು ಮುಚ್ಚಿಟ್ಟು ಜಗತ್ತನ್ನು ನಗಿಸಲು ಪಣ ತೊಟ್ಟವನಂತೆ ಬೆಳೆದು ಬಿಟ್ಟ. ನನಗೆ ಮಳೆಯಲ್ಲಿ ನಡೆಯುವುದು ಇಷ್ಟ, ಕಾರಣ ನನ್ನ ಕಣ್ಣೀರು ಯಾರಿಗೂ ಕಾಣಿಸುವುದಿಲ್ಲ ಎನ್ನುವ ಮೂಲಕ ಚಾಪ್ಲಿನ್ ಕಣ್ಣೀರ ಕಥೆಯನ್ನು ಒಂದೇ ವಾಕ್ಯದಲ್ಲಿ ಸಂಕ್ಷಿಪ್ತಗೊಳಿಸಿದ.

 ಚಾಪ್ಲಿನ್  ಅಮ್ಮ ಓವ೯ ನಟಿಯಾಗಿದ್ದರೂ ಬಡತನದಿಂದ ಹುಚ್ಚಿಯಾಗಿ ಬಿಟ್ಟಿದ್ದರು . ಕುಡುಕನಾದ ಅಪ್ಪ ಅಮ್ಮನಿಗೆ ಕೈ ಕೊಟ್ಟಾಗ ಚಾಪ್ಲಿನ್ ಗೆ ಎರಡು ವಯಸ್ಸು ಕೂಡಾ ಆಗಿರಲಿಲ್ಲ. ಒಂಭತ್ತು ವಯಸ್ಸಾಗುವ ಮುನ್ನವೇ ಎರಡು ಬಾರಿ ಈತ ವಕ್೯ ಹೌಸ್ ಎಂಬ ಅನಾಥ ಮಂದಿರದಲ್ಲಿ ಅನಾಥ ಮಗುವಾಗಿ ಬೆಳೆದ . ಅಲ್ಲಿ  ಮೈ ಮುರಿಯುವ ಕೆಲಸ , ಸಂಬಳವಿಲ್ಲ, ತಿನ್ನೋಕೆ ಸಿಗುತ್ತಿತ್ತು . ಸುಖ ವಾಸ!. ಅನಾಥ ಮಕ್ಕಳಿಗಾಗಿಯೇ ಇರುವ ಶಾಲೆಯಲ್ಲೇ ಓದಿದ ಚಾಪ್ಲಿನ್  ಮಾಡದ ಕೆಲಸಗಳಲ್ಲ, ಅರೆ ಹೊಟ್ಟೆಯಲ್ಲೇ ಹಸಿದು ಮಲಗಿದ ದಿನಗಳೆಷ್ಟೋ...

 ಪ್ರಥಮ ಬಾರಿಗೆ ವೇದಿಕೆಗೆ ಹತ್ತಿದಾಗ ಚಾಪ್ಲಿನ್ ನ ವಯಸ್ಸು 5.  ಒಂಭತ್ತನೇ ವಯಸ್ಸಿಗೆ ಕಾಲಿಡುವ ಹೊತ್ತಲ್ಲಿ  ಅಮ್ಮ ಮನೋ ಸ್ಥಿಮಿತ ಕಳೆದು ಕೊಂಡರು. ಆಮೇಲೆ ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ ಪುಟ್ಟ ಚಾಪ್ಲಿನ್ ಮತ್ತು ಅವನ ಅಣ್ಣನ ತಲೆಯ ಮೇಲೆ ಬಿತ್ತು.  ಹೊಟ್ಟೆಪಾಡಿಗಾಗಿ ಕೆಲಸವನ್ನರಸಿ ಅಣ್ಣ ಊರು ಬಿಟ್ಟ. ಇತ್ತ ಅಮ್ಮ ಹುಚ್ಚಾಸ್ಪತ್ರೆ ಸೇರಿದರು.  ಆ ದಿನಗಳಲ್ಲಿ ಬಾಲಕ ಚಾಪ್ಲಿನ್ ಒಬ್ಬನೇ ಬಿಕಾರಿಯಂತೆ ಅಲೆದಾಡಿದ.  ಇನ್ನು ಸ್ವಲ್ಪ ದೊಡ್ಡವನಾದ ಮೇಲೆ ಸಂಗೀತ, ನೖತ್ಯ , ನಟನೆ ಕಲಿಯುತ್ತಾ ಊರೂರು ಸುತ್ತ ತೊಡಗಿದ.  ನಾಟಕಗಳ ಜತೆ ಕಿರುಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದ ಚಾಪ್ಲಿನ್ 19ನೇ ವಯಸ್ಸಿನಲ್ಲಿ  ಅಂದು ಪ್ರಸಿದ್ಧವಾಗಿದ್ದ ಫ್ರೆಡ್ ಕಾನೋ೯ ಕಂಪನಿಯಲ್ಲಿ ಸೇರಿ ಅಮೆರಿಕಾಗೆ ತಲುಪಿದ.

ಚಾಪ್ಲಿನ್ ತನ್ನ 24ನೇ ವಯಸ್ಸಿನಲ್ಲಿ ,  ಕೀಸ್ಟೋನ್  ಸ್ಟುಡಿಯೋ ದೊಂದಿಗೆ ಸಿನಿಮಾ ಕರಾರುವೊಂದಕ್ಕೆ ಸಹಿ ಹಾಕಿದ. ಅಲ್ಲಿಂದ ನಟನೆಯೇ ವೖತ್ತಿಯಾಯಿತು. ವಾರದಲ್ಲಿ 150 ಡಾಲರ್ ಸಂಬಳಕ್ಕೆ ದುಡಿಯುತ್ತಾ ಈತ ನಟನಾದ.  ಆದಾಗ್ಯೂ, ತನ್ನ ಮೊದಲ ಸಿನಿಮಾದ ಕಾಸ್ಟ್ಯೂಂ ಮತ್ತು ಅಭಿನಯ ಇವರೆಡೂ ಚಾಪ್ಲಿನ್ ಗೆ ತೖಪ್ತಿ ತರಲಿಲ್ಲ.  
ಮುಂದಿನ ಚಿತ್ರಕ್ಕಾಗಿ ಮೇಕಪ್ ರೂಂನಲ್ಲಿ ಕುಳಿತು ಮೇಕಪ್ ಮಾಡುತ್ತಿರುವಾಗಲೇ ಯಾದೖಶ್ಚಿಕವಾಗಿ  ಆ ಬಿಕಾರಿ ವೇಷ  ಅವರ ಮನಸ್ಸಲ್ಲಿ ಮೂಡಿದ್ದು. ಹಾಗೆ ಆ ಸ್ಟುಡಿಯೋ ದ ಕೋಣೆಯಲ್ಲಿ ಇತಿಹಾಸವೊಂದು ಸೖಷ್ಟಿಯಾಯಿತು.  ಆವಾಗ ಸಿನಿಮಾ ಶೈಶವಾವಸ್ಥೆಯಲ್ಲಿತ್ತು. ಅಂದರೆ ವಾಕ್  ಚಿತ್ರಗಳಿರಲ್ಲಿ. ದೊಡ್ಡ ದೊಡ್ಡ ಕ್ಯಾಮೆರಾಗಳು, ಎಡಿಟಿಂಗ್ ವಿದ್ಯೆ ಆವಾಗ ಶುರುವಾಗಿತ್ತಷ್ಟೇ. ಮಾಯಾಲೋಕದಲ್ಲಿ ಪ್ರೇಕ್ಷಕರನ್ನು ಕೊಂಡೊಯ್ದು ಅವರನ್ನು ಅಚ್ಚರಿ ಪಡುವಂತೆ ಮಾಡುವುದರತ್ತ ಮಾತ್ರ ಸಿನಿಮಾಗಳು ಗಮನ ಹರಿಸಿದ್ದ ಕಾಲವದು. ಚಾಪ್ಲಿನ್ ನಂಥಾ ಪ್ರತಿಭೆ ತೆರೆಗೆ ಬಂದಿದ್ದು ಆ ಕಾಲದಲ್ಲಿ.

ಹಸಿವು, ಸಂಕಟ ಎಲ್ಲವೂ ಮೊದಲನೇ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಚಾಪ್ಲಿನ್ ನ ಈ ತಿರುಬೋಕಿ ವೇಷದ ಮೂಲಕವೇ .  ತನ್ನದೇ ಆದ ಕರಾಳ ಬಾಲ್ಯದ ಅನುಭವವೇ ಆ ಪಾತ್ರವನ್ನು ಮಾಡಲು ಚಾಪ್ಲಿನ್ ಗೆ ಪ್ರೇರಣೆಯಾಗಿತ್ತು.  ಪ್ರಸಿದ್ಧವಾದ ಹಲವಾರು ಕಿರುಚಿತ್ರಗಳಿಂದ ಹಿಡಿದು ಜಗತ್ತನ್ನೇ ದಿಗ್ಬ್ರಮೆಗೊಳಿಸಿದ ಕಥಾ ಸಿನಿಮಾಗಳಲ್ಲೂ ಚಾಪ್ಲಿನ್ ನ ಛಾಪು ಮೂಡುವಂತೆ ಮಾಡಿದ್ದು ಕೂಡಾ ಈ ವೇಷವೇ.

ಅಲೆಮಾರಿ ವೇಷದಲ್ಲಿದ್ದ ಚಾಪ್ಲಿನ್  ಬೀದಿಯಲ್ಲಿ ಸಿಕ್ಕ ಅನಾಥ ಬಾಲಕನನ್ನು ಜುವೆನೇಲ್  ಹೋಂನ ಕಂಬಿಗಳ ನಡುವೆ ಸಿಕ್ಕಿ ಹಾಕಿಕೊಳ್ಳದಂತೆ ಕಾಪಾಡಿದ...
 ಹಸಿವು ತೀವ್ರವಾದಾಗ ಹಳೇ ಶೂವನ್ನು ಸುಟ್ಟು ತಿಂದ. ಅಂಧೆಯಾದ ಬೀದಿಯ ಯುವತಿಗೆ ಜೀವನ ನೀಡಿದ... ವೖತ್ತಿ ಸ್ಥಳದಲ್ಲಿ ಮಾನವ ಹಕ್ಕು ಸಮರಗಳಲ್ಲಿ, ಬೈ ಮಿಸ್ಟೇಕ್  ಆಗಿಯಾದರೂ  ಕೆಂಪು ಧ್ವಜ ಹಿಡಿದು  ಮುನ್ನಡೆದು ಜೈಲು ಸೇರಿದ... ಕೆಲಸ ಸ್ಥಳದಲ್ಲಿನ ಅತೀ ಒತ್ತಡದಿಂದ ಹುಚ್ಚನಾದಾಗ ವ್ಯವಸ್ಥೆಯ ವಿರುದ್ಧ ಏಕಾಂಗಿಯಾಗಿ ಸಿಡಿದೆದ್ದ.
 ಹೀಗೆ ಮೌನದಲ್ಲೂ ನಂತರ ಸಂಭಾಷಣೆಯ ಮೂಲಕವೂ ಹಲವಾರು ಪ್ರಯೋಗಗಳನ್ನು ಮಾಡುವಲ್ಲಿ ಚಾಪ್ಲಿನ್ ಯಶಸ್ವಿಯಾದ.

ಚಾಪ್ಲಿನ್ ನ ಈ ಹಾಸ್ಯದ ಅಲೆಗೆ ಮಹಾಸಿಂಹಾಸನಗಳೇ ನಡುಗಿದವು. ಸೂಟು ಬೂಟುಗಳು ರಾರಾಜಿಸಿ ವೈಭವದಿಂದ ಮೆರೆಯುವ ಸಿನಿಮಾಗಳ ನಡುವೆ ಚಾಪ್ಲಿನ್ನ  ಬಿಕಾರಿ ವೇಷ ನಿಷ್ಕಳಂಕತೆಯ ಸಂಕೇತವಾಯಿತು.  ಕಣ್ಣ್ತಪ್ಪಿಸಿ ಏನಾನ್ನಾದರೂ ತಿನ್ನುವುದು. ಸೊಕ್ಕಿನಿಂದ ಮೆರೆವ ಶ್ರೀಮಂತರನ್ನು ಪರಸ್ಪರ ಗುದ್ದಾಟ ಮಾಡುವಂತೆ ಮಾಡುವುದು. ತನ್ನ ಹ್ಯಾಟ್ ತೆಗೆದು ಅಭಿನಂದನೆ ಸಲ್ಲಿಸುವುದು.
 ಮಧ್ಯ, ಮೇಲ್ವಗ೯ದ ದಪ೯ಗಳನ್ನು ಚಾಪ್ಲಿನ್ ತನ್ನ ಕಿರುಚಿತ್ರಗಳ ಮೂಲಕ ತಮಾಷೆ ಮಾಡಿದ. ಇಲ್ಲಿರುವ ಕಥಾಪಾತ್ರಗಳು ಎಲ್ಲಿಯೂ ಗಟ್ಟಿಯಾಗಿ ಅಟ್ಟಹಾಸ ಮಾಡುವುದಿಲ್ಲ, ಇವುಗಳೆಲ್ಲಾ ಬರೀ ಮುಗುಳ್ಳಕ್ಕು ನಮ್ಮ ಮನಸ್ಸಲ್ಲಿ ನೆಲೆಯೂರುತ್ತವೆ. ವಿಷಾದದಿಂದಲೂ  ಶಾಂತತೆಯಿಂದ ಕೂಡಿದ ಕಥಾಪಾತ್ರಗಳಿರುವ ಕಿರುಚಿತ್ರಗಳಾಗಿದ್ದವು ಇವೆಲ್ಲಾ.

1936ರಲ್ಲಿ ಬಿಡುಗಡೆಯಾದ  ಮಾಡನ್೯ ಟೈಂಸ್  (modern times) ಕೊನೆಯ ದೖಶ್ಯದಲ್ಲಿ ತನ್ನ ಪ್ರಿಯತಮೆಯ ಕೈ ಹಿಡಿದು ಅನಂತತೆಯತ್ತ ನಡೆದು ಅಪ್ರತ್ಯಕ್ಷವಾಗುತ್ತೆ  ಚಾಪ್ಲಿನ್ನ  ಕಥಾಪಾತ್ರ. ಚಾಪ್ಲಿನ್ ನ ಕೊನೆಯ ಮೂಕಿ ಚಿತ್ರವಾಗಿತ್ತು ಅದು. ವಾಕ್  ಚಿತ್ರಗಳು ಬಂದರೂ ಚಾಪ್ಲಿನ್ ನ ಸಿನಿಮಾಗಳು ಮಾತ್ರ ಸಾವ೯ಕಾಲಿಕವೆಂಬಂತಿದ್ದವು.

1927 ರಲ್ಲಿ  ವಾಕ್  ಚಿತ್ರಗಳು ಮಾತನಾಡತೊಡಗಿದಾಗಲೂ ಚಾಪ್ಲಿನ್ ಮೂಕಿ ಚಿತ್ರಗಳನ್ನೇ ಸಿಮಿ೯ಸುತ್ತಿದ್ದರು.  ಇಂಥಾ ಸಿನಿಮಾಗಳಲ್ಲಿ ಚಾಪ್ಲಿನ್ ಸಂಗೀತವನ್ನು ಬಹುವಾಗಿ ಬಳಸಿದ್ದರೂ ಇಲ್ಲಿನ ಕಥಾಪಾತ್ರಗಳು ಮೌನವಾಗಿಯೇ ಮಾತನಾಡಿದವು. ಸಿನಿಮಾವೊಂದು ಮಾತನಾಡತೊಡಗಿದರೆ ಅವು ಪ್ರತ್ಯೇಕ ಭಾಷಾ ಪ್ರಕಾರಕ್ಕೆ ಸೇರಿ ಬಿಡುತ್ತದೆ ಎಂಬ ಆತಂಕವೂ ಚಾಪ್ಲಿನ್ಗೆ ಇತ್ತು.
ಈ ನಡುವೆಯೇ ತನ್ನ ಸಿನಿಮಾ ವಿಶ್ವದ ಎಲ್ಲೆಡೆಯಿರುವ ಜನರಿಗೆ ಅಥ೯ವಾಗಬೇಕೆಂದು ಅವರು ಹಂಬಲಿಸಿದ್ದರು.  ಈ ನಿಟ್ಟಿನಲ್ಲಿಯೇ ಜಗತ್ತಿನಾದ್ಯಂತವಿರುವ ಜನರಲ್ಲಿ ಸಂವಾದ ನಡೆಸಲು ಸಾಧ್ಯವಾದ ಏಕೈಕ ಮಾಧ್ಯಮವೆಂದರೆ ನಗುವೊಂದೇ ಎಂಬುದನ್ನು ಚಾಪ್ಲಿನ್ ಕಂಡು ಕೊಂಡಿದ್ದ.

ಕಾಲ ಪ್ರವಾಹದಲ್ಲಿ ತನ್ನ ಕಿರುಚಿತ್ರಗಳು ಅಪ್ರಸ್ತುತವೆನಿಸುವುದೂ, ನಗಿಸುವ ತನ್ನ ಕೌಶಲ ನಷ್ಟವಾಗುವುದನ್ನೂ ನೋಡಿ ದುಃಖಿತನಾಗುವ ಹಾಸ್ಯ ಕಲಾವಿದನ  ಜೀವನವನ್ನು ಮನೋಜ್ಞವಾಗಿ ಬಿಂಬಿಸಿದ್ದು ಲೈಂ ಲೈಟ್ (1952) ಚಿತ್ರ.  ವಿಖ್ಯಾತ ಹಾಸ್ಯ  ನಟ ಬಸ್ಟರ್ ಕೀಟನ್  ಇದರಲ್ಲಿ ಚಾಪ್ಲಿನ್ ನ ಸಹ ನಟನಾಗಿ ನಟಿಸಿದ್ದರು.  
ಇಬ್ಬರ ಜೀವನ ಸಮಸ್ಯೆಗಳನ್ನು ಈ ಸಿನಿಮಾದಲ್ಲಿ ನಾವು ಕಾಣಬಹುದು.  ವಾಕ್ ಚಿತ್ರದ ಆಗಮನದೊಂದಿಗೆ ವ್ಯಥೆಪಡುವ ಮೂಕಿ ಚಿತ್ರದ  ನಟನನ್ನು , ಕಾಲ ಬುಡದ ಮಣ್ಣು ಕೊಚ್ಚಿ ಕೊಂಡು ಹೋದರೂ ಅರಿವೇ ಇಲ್ಲದಂತೆ ಚಿಂತೆಯಲ್ಲಿ ಮುಳುಗುವ ನಟನನ್ನು, ಚಾಪ್ಲಿನ್ ನ ನಂತರ ಆಟಿ೯ಸ್ಟ್ (2011) ಎಂಬ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದಲ್ಲಿ ನಾವು ನೋಡಿದ್ದೇವೆ.  ಸಿನಿಮಾ ನಟನಾದ ಚಾಪ್ಲಿನ್ನ ವ್ಯಥೆಯ ಕಥೆಯಾಗಿತ್ತು ಇದು.

ಬರೀ ತಮಾಷೆ ಮಾತ್ರವಲ್ಲದೇ ದೈನಂದಿನ ಜೀವನದ ಸಮಸ್ಯೆಗಳನ್ನು ಚಿತ್ರಿಸಿದ್ದು ಎ ಡಾಗ್ಸ್  ಲೈಫ್ , ದ ಕಿಡ್ , ದ ಸಕ೯ಸ್ , ಗೋಲ್ಡ್  ರಶ್ , ಸಿಟಿ ಲೈಟ್ಸ್  ಮೊದಲಾದ ಚಿತ್ರಗಳು. ನಗುವಿನ ಹಿಂದೆ ದುಃಖವನ್ನಡಗಿಸಿದ ಚಾಪ್ಲಿನ್, ಜನರ ಜೀವನ ಸಮಸ್ಯೆಗಳನ್ನು ತೆರೆಯ ಮೇಲೆ ತಂದು ಅಲ್ಲಿಯೂ   ನಗುವಂತೆ ಮಾಡಿದವರು. ಉದಾಹರಣೆ ಮಾಡನ್೯ ಟೈಂಸ್  ಸಿನಿಮಾದಲ್ಲಿ ಯಂತ್ರಯುಗವೇ ಕೇಂದ್ರ ಬಿಂದು.  ಆರಾಮ ಕೋಣೆಯಲ್ಲೂ, ಬಾತ್  ರೂಂಗೂ ತಲುಪುವ ನಿಗಾ  ಕಣ್ಣುಗಳು ಭವಿಷ್ಯತ್ತಿನ ಸವಾಲುಗಳೂ , ಸಮಸ್ಯೆಗಳೂ ಆಗಿದ್ದವು.  ಜಗತ್ತು ಈಗ ಎದುರಿಸುತ್ತಿರುವ ಅಭದ್ರತೆಯನ್ನು ಚಾಪ್ಲಿನ್ ಆ  ಕಾಲದಲ್ಲೇ  ಮನಗಂಡಿದ್ದರು ಎಂದರೆ ಅವರ ದೂರದೖಷ್ಟಿ ಎಷ್ಟಿರಬೇಡ?

 ಈ ನಡುವೆ  ಚಾಪ್ಲಿನ್ ದ ಗ್ರೇಟ್ ಡಿಕ್ಟೇಟರ್ (1939)ಲ್ಲಿ ಹಿಟ್ಲರ್ ನ ಉಗ್ರವಾದದೊಂದಿಗೆ ಹೋರಾಡುವ ಕಿಚ್ಚನ್ನು ತೆರೆಗೆ  ತಂದರು . 2 ನೇ ಮಹಾಯುದ್ಧದ ಸಮಯದಲ್ಲಿ ಹಿಟ್ಲರ್ ಯಹೂದಿಯರ ಮಾರಣ ಹೋಮ ಮಾಡಿದ್ದಕ್ಕೆ ಪ್ರತಿಭಟನೆಯಂತಿತ್ತು ಈ ಸಿನಿಮಾ. ವಿಶೇಷವೇನೆಂದರೆ ಯುದ್ಧಕ್ಕಿಂತ ಮುನ್ನವೇ ಚಾಪ್ಲಿನ್ ಸಿನಿಮಾ ತೆರೆ ಕಂಡಿತ್ತು.  ಪ್ರಸ್ತುತ ಸಿನಿಮಾದಲ್ಲಿನ ಯಹೂದಿ ಬಾಬ೯ರ್ ಗೆ ಹಿಟ್ಲರ್ನ ಹೋಲಿಕೆಯಿದ್ದರೂ, ತುಂಡು ಮೀಸೆ ಟೋಪಿ ಮತ್ತೆ  ಟ್ರಾಂಪ್  ನ್ನು ನೆನಪಿಸುವಂತಿತ್ತು.

ಬೀದಿಯ ಬರೀ ಸಾಧಾರಣ ಮನುಷ್ಯನ ಪ್ರತಿರೂಪದಂತಿರುವ ಈ ಬಡಪಾಯಿಯ ಕಥಾಪಾತ್ರವನ್ನು  ಹಿಟ್ಲರ್ಗೆ ಹೋಲಿಕೆ ಮಾಡುವ ಮೂಲಕ ಚಾಪ್ಲಿನ್ ಮೌನವಾಗಿಯೇ ಪ್ರತಿಭಟನೆ ಮಾಡಿದ್ದ. ಸಾಮಾನ್ಯ ಮನುಷ್ಯನೊಬ್ಬ (ಆಮ್ ಆದ್ಮಿ) ಹಿಟ್ಲರ್ನ ಏಕಾಧಿಪತ್ಯದ ವಿರುದ್ಧ ಸಿಡಿದೇಳುವುದನ್ನು ಚಾಪ್ಲಿನ್ ಈ ಸಿನಿಮಾ ಮೂಲಕ ತೋರಿಸಿದ. ಹೀಗೆ ಹಾಸ್ಯದ ಜತೆಗೇ ಲೋಕಶಾಂತಿಯ ಬಗ್ಗೆ ಕಾಳಜಿ ವಹಿಸುವ ಮೂಲಕ ಚಾಪ್ಲಿನ್ ನಮ್ಮೊಳಗೊಬ್ಬರಾಗಿ ಬಿಟ್ಟ!

ಕಥಾಪಾತ್ರದೊಂದಿಗೆ ಹೊಂದಿಕೊಂಡು ಹೋಗುವವನು ನಟನಲ್ಲ, ಕಥಾಪಾತ್ರವೊಂದು ನಟನಾಗಿ  ಬದಲಾಗಬೇಕು ಎಂಬುದು ಚಾಪ್ಲಿನ್ನ  ಸಿದ್ಧಾಂತವಾಗಿತ್ತು. ಈ ಸಿದ್ಧಾಂತವನ್ನು ನಾವು ದ ಗ್ರೇಟ್  ಡಿಕ್ಟೇಟರ್ನಲ್ಲಿ ಕಾಣಬಹುದು.

ಚಾಪ್ಲಿನ್ ನ ಕಲಾ ಪಯಣ ಸಾಗುತ್ತಿದ್ದಂತೆ ಕಮ್ಯೂನಿಸ್ಟ್ ವಾದಿ  ಎಂಬ ಮುದ್ರೆಯೊತ್ತಿ ಅಮೆರಿಕ ಅವರನ್ನು ಹೊರಗೆ ಹಾಕಿದ್ದೂ ಇದೆ. ಅಷ್ಟೇ ಯಾಕೆ ಚಾಪ್ಲಿನ್ನಲ್ಲಿ ಪ್ರತಿಭಟನೆಯ ಕಿಚ್ಚು ಎಷ್ಟಿತ್ತೆಂದರೆ  40 ವಷ೯ ಅಮೆರಿಕವನ್ನು ಕಮ೯ಭೂಮಿಯಾಗಿಸಿಕೊಂಡಿದ್ದರೂ ಆತ ಅಮೆರಿಕದ ಪೌರತ್ವ ಪಡೆದಿರಲಿಲ್ಲ.   ಚಾಪ್ಲಿನ್  ಅಮೆರಿಕದ ವಿರುದ್ಧದ ಪ್ರತಿಭಟನೆ ನಡೆಸಿದ ರೀತಿ ಇದು.

ಈ ಮಹಾನಟ ಪ್ರಜಾಪ್ರಭುತ್ವವು ಏಕಾಧಿಪತ್ಯ ವಾಗುತ್ತಿರುವುದನ್ನು ರೋಷದಿಂದಲೇ ನೋಡಿದರು. ಆದರೆ ಎಲ್ಲವನ್ನೂ ಮೌನದಲ್ಲೇ ಜಯಿಸಿದರು. ಮಾತು ಮೌನಗಳ ಅವ್ಯಕ್ತ ಭಾವನೆಯನ್ನು ಗ್ರಹಿಸಿ ಬದುಹಿದ  ಮಹಾನಟ ಎಂದರೆ ಅದು ಚಾಪ್ಲಿನ್  ಮಾತ್ರ.  ಗಾಂಧೀಜಿಯನ್ನು ಆರಾಧಿಸಿದ್ದ ಚಾಪ್ಲಿನ್ ಗೆ ಇದೆಲ್ಲವೂ ದಕ್ಕಿದ್ದು, ತನ್ನ ಅನುಭವದಿಂದ, ಅನುಭಾವದಿಂದ. ಕಷ್ಟಗಳನ್ನುಂಡರೂ ಜಗತ್ತಿಗೆ ನಗುವನ್ನು ಮಾತ್ರ ನೀಡಿದ  ಚಾಪ್ಲಿನ್ ಇನ್ನೂ ಬದುಕಿದ್ದಾನೆ...ಎಲ್ಲರ ನಗುವಿನಲ್ಲಿ...

(ಚಾಪ್ಲಿನ್  ಕೀಸ್ಟೋನ್ ಫಿಲ್ಮ್ ಕಂಪನಿಯೊಂದಿಗೆ 1913 ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಸಿನಿಮಾ ಒಪ್ಪಂದಕ್ಕೆ ಸಹಿ ಹಾಕಿದ್ದ)

ಫೋಟೋ ಕೖಪೆ:wikipedia
 

                                                                     
        
 
                                                                               
        
 
                                                                               
        
 
                                                                               
        
 
                                                                               
        

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನೂ ಸಹ ಚಾಪ್ಲಿನ್ನನ ಅಭಿಮಾನಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

>> "ಚಾಪ್ಲಿನ್ ಇನ್ನೂ ಬದುಕಿದ್ದಾನೆ...ಎಲ್ಲರ ನಗುವಿನಲ್ಲಿ..."
ನಿಜ ರಶ್ಮಿಯವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

kavinagaraj, ಗಣೇಶ ಅವರೇ,
ಲೇಖನ ಓದಿ ಪ್ರತಿಕ್ರಿಯಿಸಿದ್ದು, ಖುಷಿ ಕೊಟ್ಟಿತು. ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಗಣೇಶ್ ಅಣ್ಣಾ ಅವರು ಹೇಳಿದ್ದು ಸತ್ಯ -ಚಾಪ್ಲಿನ್ ಎಂದೆಂದೂ ಅಮರ ಪಾತ್ರಗಳ ಮೂಲಕ -ನಮ್ಮ ನಿಮ್ಮೆಲ್ಲರ ಮನಸ್ಸಿನಲ್ಲಿ ..ಇನ್ದಿಗೊ ಎಂದಿಗೊ ಹಾಸ್ಯ ಎಂದೊಡನೆ -ಮೊದಲು ನೆನಪಿಗೆ ಬರೋದು ಚಾಪ್ಲಿನ್ ...ಶುದ್ಧ ಹಾಸ್ಯ -ಅದರಲ್ಲೂ ಮೂಕಿ ಹಾಸ್ಯ ಕ್ಕೆ ಚಾಪ್ಲಿನ್ ಸಾಮ್ರಾಟ್ ... ಚಾಪ್ಲಿನ್ ಬಗ್ಗೆ ಎಸ್ಟು ಹೇಳಿದರೂ ಬರೆದರೂ ಕಡಿಮೆಯೇ ..ಬಹುಶ ಈ ಜಗತ್ತಿನಲ್ಲಿ ಚಿಕ್ಕ ಮಗುವಿಂದ ಹಿಡಿದು ಮುದುಕರವರೆಗೂ ಇಸ್ಟ ಆಗುವ ಏಕೈಕ ಕಲಾವಿದ ...
ಅವರ ಬಗ್ಗೆ ನಾನೂ ಒಂದು ಬರಹ ಬರೆದಿದ್ದೆ ...
http://bit.ly/1tKgpJM

ಶುಭವಾಗಲಿ

ನನ್ನಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.