ಬಿಡುಗಡೆಯಾಗಲಿರುವ ಕಥಾ ಸಂಕಲನ

3

ಮಳೆಗಾಲ ಬಂದು ಬಾಗಿಲು ತಟ್ಟಿತು (ಕಥಾ ಸಂಕಲನ)

20/1/ 2013 ಅಂದರೆ ನಾಳೆ ಬಿಡುಗಡೆಯಾಗಲಿರುವ, ಬರಹಗಾರ ವಿಕಾಸ್ ನೇಗಿಲೋಣಿ ಅವರ ಮಳೆಗಾಲ ಬಂದು ಬಾಗಿಲು ತಟ್ಟಿತು ಕಥಾ ಸಂಕಲನದ ಬಗ್ಗೆ ಒಂದಿಷ್ಟು.. ಅದಕ್ಕೂ ಮುನ್ನ ನಾಳೆಯ ಕಾರ್ಯಕ್ರಮಕ್ಕೆ ಎಲ್ಲರಿಗೂ ಸವಿನಯ ಆಮಂತ್ರಣ..ಬನ್ನಿ ಪಾಲ್ಗೊಳ್ಳಿ..

ಬದುಕಿನ ಆಗುಹೋಗುಗಳನ್ನು, ಯಾರಲ್ಲೂ ಹೇಳಿಕೊಳ್ಳಲಾಗದ ಸುಪ್ತ ವಿಷಯಗಳನ್ನು ಕಥೆ, ಕಾದಂಬರಿ, ಕವನಗಳು ಧ್ವನಿಸುತ್ತವೆ. ಇವು ವಾಸ್ತವವೂ ಆಗಿರಬಹುದು ಅಥವಾ ಕಾಲ್ಪನಿಕ ಚಿತ್ರಣವೂ ಆಗಿರಬಹುದು. ತನ್ನ ಬರಹದ ಮೂಲಕ ಬರಹಗಾರ ಅಭಿವ್ಯಕ್ತಗೊಳಿಸುವ  ಪಾತ್ರಗಳು, ಅವುಗಳ ಸಂಭಾಷಣೆ, ಕೆಲವೊಮ್ಮೆ ಯೋಚನಾಶಕ್ತಿಗೂ ಮೀರಿ ಬರಹಗಳು ಸಾಗಿದಾಗ ಅವು ಓದುಗನಲ್ಲೂ ಒಂದು ರೀತಿಯ ಸಂಚಲನ, ಆಸಕ್ತಿ ಹಾಗೂ ಇನ್ನೂ ಹೆಚ್ಚು ಓದುವಂತೆ ಪ್ರೇರೇಪಿಸುತ್ತದೆ. ಇಂತಹುದೇ ಒಂದು ಕಥಾ ಸಂಕಲನ ಬರಹಗಾರ ವಿಕಾಸ್ ನೇಗಿಲೋಣಿ ಅವರದ್ದು.
 "ಮಳೆಗಾಲ ಬಂದು ಬಾಗಿಲು ತಟ್ಟಿತು" ಒಟ್ಟು ಹದಿನೈದು ಕಥೆಗಳಿರುವ ಕಥಾ ಸಂಕಲನ. 'ಇಂದಿರೆಗೆ ತಲೆಬಾಗಿ ವಂದಿಸುತ ಪರಮಾನಂದ ಭಕ್ತಿಯೊಳ್','ಮಳೆಗಾಲ ಬಂದು ಬಾಗಿಲು ತಟ್ಟಿತು', 'ಕದ ಬಾಗಿಲಿರಿಸಿಹ ಕಳ್ಳ ಮನೆ', 'ಊರ್ಮಿಳಾ ಫೋನು ಮಾಡಿದಾಗ', 'ಮಗನೊಂದಿಗೆ ಕಳೆದ ಅಪರಾಹ್ನ','ಕೊನೆಯ ಕ್ಷಣದ ಬದಲಾವಣೆಗಳ ಹೊರತಾಗಿ','ಕೆಂಪು ರಕ್ತದ ಕಣಗಳು','ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನು','ಯಾರೋ ಕೇಳಲು ಮರೆತ ಹಾಡು', ಒಂದು ಸಾವಿನ ಗುಟ್ಟು, ಕಥೆಗಳು ಓದುಗನ ಮನದಲ್ಲಿ ಸ್ಥಿರವಾಗಿ ನಿಲ್ಲುವಂತಹ ನಿರೂಪಣೆಗಳಾಗಿವೆ.

ಯಕ್ಷಗಾನ ನೋಡಲೆಂದು ಮಕ್ಕಳು ಹಾಗೂ ತನ್ನ ಆಳು ಕೊರಗನ ಜತೆ ಹೋದ ಸೀತಾಲಕ್ಷ್ಮಿ ಗೆ ಅಲ್ಲಿನ ದೃಶ್ಯಗಳು ತನ್ನ ಗತನೆನಪುಗಳನ್ನು ಕೆದಕಿದಾಗ ಮುಂದೆ ನೋಡಲಾಗದೆ ಅರ್ಧದಿಂದಲೇ ಎದ್ದು ಮನೆಕಡೆ ಹೆಜ್ಜೆ ಹಾಕುತ್ತಾಳೆ. ದಾರಿಯಲ್ಲಿ ತನ್ನಲ್ಲಿ ಹೊಳೆದ ಹಲವಾರು ಪ್ರಶ್ನೆಗಳನ್ನು ಕೊರಗನೊಂದಿಗೆ ಚರ್ಚಿಸಿ ತನ್ನದೇ ವಾದವನ್ನು ಬಲಗೊಳಿಸಿ ಕೊರಗನ ನಂಬಿಕೆಯನ್ನೇ ಗೊಂದಲಗೊಳಿಸುವಂತೆ ಆಡುತ್ತಾಳೆ. ಮನೆಯ ಗೋಡೆಯ ಮೇಲೆ ನೇತು ಹಾಕಿದ್ದ ರಾಮ ಸೀತೆ ಫೊಟೋವನ್ನು ಎತ್ತಿ ಅಂಗಳಕ್ಕೆ ಎಸೆಯುತ್ತಾಳೆ. ಯಾರಲ್ಲೂ ಹೇಳಿಕೊಳ್ಳಲಾಗದ ತನ್ನನ್ನು ಕಾಡುತ್ತಿರುವ ಆ ನೆನಪನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಾಳೆ. ಹೀಗೆ ಈ ಕಥೆಯಲ್ಲಿ ಬರುವ ಪಾತ್ರಗಳನ್ನು ಅವಲೋಕಿಸಿದಾಗ ವಾಸ್ತವದಲ್ಲಿ ಅದೆಷ್ಟೋ ಘಟನೆಗಳನ್ನು ಯಾರ ಜತೆಯೂ ಹಂಚಿಕೊಳ್ಳಲಾಗದೆ, ಮನದ ಮೂಲೆಯಲ್ಲಿ ಮಡುಗಟ್ಟಿರುವ ನೋವು ಯಾವುದೋ ಒಂದು ಸಂದರ್ಭದಲ್ಲಿ ಸ್ಪೋಟಗೊಳ್ಳುವ ಮನಸ್ಸುಗಳ ಚಿತ್ರಣವನ್ನೇ ಕಟ್ಟಿಕೊಡುತ್ತದೆ.

ದಟ್ಟಾರಣ್ಯವೊಂದರ ಮಧ್ಯಭಾಗದಲ್ಲಿ ಬಸ್ಸು ಕೆಟ್ಟು ನಿಂತಿತು. ಆ ರಾತ್ರಿ ಅಲ್ಲೇ ಕಳೆಯಬೇಕಾದ ಸಂದರ್ಭ ಬಂದಾಗ ಮನೆಯಲ್ಲಿ ಅಮ್ಮನ ಮಾತನ್ನೂ ಕೇಳದೆ ಛಳಿಗಾಗಿ ಸ್ವೆಟರ್ ನ್ನೂ ತೆಗೆದುಕೊಳ್ಳದ ತನ್ನ ಉದಾಸೀನತೆಯನ್ನು ಹಳಿದುಕೊಂಡೇ ತನ್ನನ್ನು ತಾನೇ ಬೈದುಕೊಳ್ಳುತ್ತಾ, ಕೊನೆಯ ಆಸರೆ ಎಂಬಂತೆ ಉಳಿದಿದ್ದ ಮೊಬೈಲ್ ನ ಬೆಳಕಿನಲ್ಲಿ ಚಲಿಸುತ್ತಾ ಮುಂದೆ ಯಾವುದಾದರೂ ಮನೆ ಸಿಗಬಹುದೆಂಬ ಆಶಯದಿಂದ ಹೆಜ್ಜೆ ಹಾಕುತ್ತಾನೆ ರಂಗನಾಥ. ಕೊನೆಗೂ ಒಂದು ಕಿಟಕಿಯಲ್ಲಿ ಒಳಗಡೆಯಿಂದ ದೀಪದ ಬೆಳಕು ಇವನಿಗೆ ಗೋಚರಿಸುತ್ತದೆ. ಜೋರಾಗಿ ಸುರಿಯುತ್ತಿರುವ ಈ ಮಳೆಯಲ್ಲಿ ಬಾಗಿಲು ತಟ್ಟುವುದು ಮಳೆಗಾಲವೇ, ಮನುಷ್ಯರಲ್ಲ ಎಂಬ ದಮಯಂತಿ ತಾಯಿಯ ಮಾತು ಆಕೆ ಬಾಗಿಲು ತೆಗೆಯುವುದನ್ನು ತಡೆಯುತ್ತದೆ. ಮುಂದೆ ಈ ಕಥೆ ಕುತೂಹಲ ಕಾರಿಯ ತಿರುವನ್ನು ಪಡೆಯುತ್ತದೆ.

ಆಧುನಿಕ ಸಣ್ಣ ಕಥೆಗಳ ಜನಕ ಎಂದು ಕರೆಸಿಕೊಳ್ಳುವವರಲ್ಲಿ ಫ್ರೆಂಚ್ ನ ಗೀ ಡಾ ಮೊಪಾಸಾ ಕೂಡ ಒಬ್ಬರು. "ಎ ಡೆಡ್ ವುಮನ್ಸ್‌ ಸೀಕ್ರೆಟ್" ಎಂಬ ಈ ಕತೆ ಒಬ್ಬ ಅಮ್ಮನದು. ಅಮ್ಮನನ್ನು ಅತಿಯಾಗಿ ಪ್ರೀತಿಸುತ್ತಾ, ಆಕೆಯೊಳಗಿನ ಕಠೋರ ಸತ್ಯವನ್ನು ಆಕೆಯ ಸಾವಿನ ನಂತರ ಮಕ್ಕಳು ಕಾಣುವ ಕಥೆ. ಕನ್ನಡ ಅನುವಾದವೇ ಒಂದು ಸಾವಿನ ಗುಟ್ಟು.

ಇಂಗ್ಲಿಷ್ ನ ಖ್ಯಾತ ಕತೆಗಾರ ಶೇರ್‌ವುಡ್ ಆಂಡರ್ ಸನ್ ಬರೆದ ಅಡ್ವೆಂಚರ್ ಕತೆಯ ಭಾವಾನುವಾದ. ಕೆಲಸಕ್ಕಾಗಿ ದೂರದ ಊರಿಗೆ ಹೋದ ತನ್ನ ಪ್ರೇಮಿ, ಯಾವತ್ತಾದರೂ ಒಂದು ದಿನ ನನ್ನ ಬಳಿ ಬಂದೇ ಬರುವನು ಎಂದು ಕಾದಿದ್ದ ಬೃಂದಾ, ಹಲವು ವರ್ಷವಾದರೂ ಆತ ಹಿಂತಿರುಗದಿದ್ದಾಗ ಆಕೆಯ ಆರ್ತ ಹುಡುಕಾಟ, ತನ್ನ ಒಂಟಿತನವನ್ನು ನೀಗುವ ಸಾಹಸ, ಯಾರೋ ಕೇಳಲು ಮರೆತ ಹಾಡು- ಈ  ಕತೆಯಲ್ಲಿ ಭಾವುಕ ರೀತಿಯಲ್ಲಿ ವ್ಯಕ್ತವಾಗಿದೆ.

ಹೀಗೆ ಒಂದಿಲ್ಲೊಂದು ವಿಭಿನ್ನ ಕಥೆಗಳನ್ನು ಹೊಂದಿರುವ ಈ ಕಥಾ ಸಂಕಲನವನ್ನು ಒಮ್ಮೆ ಓದಲು ಕುಳಿತರೆ ನಿರಾಂತಕವಾಗಿ ಓದುವಂತೆ ಮಾಡುತ್ತದೆ. ಓದುಗನ ಮನಸ್ಸನ್ನು ಕಥೆಗಳ ಮೂಲಕ ಅರಿಯಲು ವಿಕಾಸ್ ನೇಗಿಲೋಣಿಯವರು ಯಶಸ್ವಿಯಾಗಿದ್ದಾರೆ ಎನ್ನಬಹುದು.

ನಾಳೆಯೇ ಬಿಡುಗಡೆ ಕೊಂಡು ಓದಿ ನೀವೂ ಅಭಿಪ್ರಾಯಿಸಿ..
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮಮತಾರವರೇ, ಕಥೆಗಾರರಿಗೂ ನಿಮಗೂ ಅಭಿನಂದನೆಗಳು. ಕುತೂಹಲ ಮೂಡಿಸುವ ವಿಮರ್ಶೆ, ವಿಶೇಷವಾದ ಕತೆಯ ಶೀರ್ಷಿಕೆಗಳು ಗಮನ ಸೆಳೆಯುತ್ತವೆ. ಕಾರ್ಯಕ್ರಮಕ್ಕೆ ನನ್ನ ಹೃತ್ಪೂರ್ವಕ ಶುಭಕಾಮನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.