ಬದುಕೆಂಬ ದೊಡ್ಡಹಬ್ಬ.

0


 ಬದುಕನ್ನು ಒಂದು ಹಬ್ಬವನ್ನಾಗಿ ಆಚರಿಸಿದ, ಬಡತನದಲ್ಲಿಯೂ ರಾಣಿಯರಂತೆ ಆಳಿದ, ವಿಷಮ ಪರಿಸ್ಥಿತಿಗಳಿಗೆ ತಲೆ ಬಾಗದೇ ಮೆರೆದು ಜೀವನದುದ್ದಕ್ಕೂ ತಮ್ಮ ಒಲವಿನಂತೆ ವಿಜೃಂಬಿಸಿದ ಕೆಲ ಹೆಂಗಸರ ಕಥೆಯಿದು.

  ಇವರು ನಮ್ಮ ತಂದೆಯ ಅತ್ತೆಯರು. ಅಂದರೆ ತಂದೆಯ ತಂದೆಯ ತಂಗಿಯರು. ಅಂಜಿಕೆಯೆಂದರೇನೆಂದೆ ಅರಿಯದವರು. ಇವರ ತಿರುಗಾಟದ ಚಟಕ್ಕೆ ವಯಸ್ಸಾಗಲೀ ಊರುಗಳ ನಡುವಿನ ಅಂತರವಾಗಲೀ ಕುಂದುತ್ತಿರುವ ದೈಹಿಕ ಶಕ್ತಿಯಾಗಲೀ ಆತಂಕಗಳೆನಿಸಲೇ ಇಲ್ಲ. ಮನೋಸ್ಥೈರ್ಯ ಬದುಕಿನೆಡೆಗೆ ಪ್ರೀತಿಗಳೇ ಇವರ ಶಕ್ತಿ. ಕಷ್ಟಗಳನ್ನು ಎದುರಿಸಿ ದಕ್ಕಿಸಿಕೊಂಡ ಪರಿಯಿದೆಯಲ್ಲ ಅದು ನನ್ನನ್ನು ಮೆಚ್ಚಿಸುತ್ತದೆ. ಇವರ ಬಗ್ಗೆ ಕೆಲವು ಕಂತುಗಳಲ್ಲಿ ಹೇಳಬೇಕೆಂದಿದ್ದೇನೆ. ನಮ್ಮ ಜನಪದರ ಮನೋಸ್ಥೈರ್ಯದ ಬಗ್ಗೆ ಎಲ್ಲರಲ್ಲೂ ಒಂದು ಅಭಿಮಾನ ಮೂಡಿದರೆ ನನ್ನ ಮೊಗಸು ಸಾರ್ಥಕವೆಂದುಕೊಳ್ಳುತ್ತೇನೆ.


 ನಮ್ಮ ಅಜ್ಜನಿಗೆ ಇದ್ದ ತಂಗಿಯರ ಸಂಖ್ಯೆ ಸರಿಯಾಗಿ ಗೊತ್ತಿಲ್ಲ. ಒಡಹುಟ್ಟಿದವರಲ್ಲದೇ ದತ್ತಕ್ಕೆ ಹೋದ ಮನೆಯಲ್ಲೂ ಅಕ್ಕತಂಗಿಯರಂತೆ. ನನಗೆ ಹೆಚ್ಚಿನ ಸಂಪರ್ಕವಿದ್ದುದು ಪುಟ್ಟಮ್ಮ, ಮುರಿಗೆಮ್ಮ, ನಿಟ್ಟೂರು ಕೊಟ್ರವ್ವ ಇವರೊಂದಿಗೆ.

  ನಿಟ್ಟೂರು ಕೊಟ್ರವ್ವ ಎಲ್ಲರಿಗಿಂತ ಚಿಕ್ಕವಳು. ನಾನು ಕಂಡ ಅತ್ಯಂತ ಮುಗ್ಧ ಹಾಗೂ ತಮಾಷೆಯ ಸ್ವಭಾವದ ಅಜ್ಜಿ. ನೇರವಾಗಿ ಸೆಟೆದು ನಿಂತರೆ ಹತ್ತಿರತ್ತಿರ ಆರು ಅಡಿ ಎತ್ತರ. ಕೋಲು ಮುಖ. ಕೃಷ್ಣ ವರ್ಣ. ಗಡಸು ದನಿ, ಮಾತು ಮಾತ್ರ ಅಷ್ಟೇ ಸವಿ. ಯಾರನ್ನೂ ನೋಯಿಸುವಂತೆ ಮಾತನಾಡಿದ್ದು ನಾನು ಕೇಳಿಲ್ಲ. ದನಿ ಎತ್ತರಿಸಿದ್ದಂತೂ ಇಲ್ಲವೇ ಇಲ್ಲ. ಯಾರಾದರೂ ಏನಾದರೂ ಹೇಳುತ್ತಿದ್ದರೆ ಮೈಯೆಲ್ಲ ಕಿವಿಯಾಗಿ ಕೇಳಿ ಅನುಮೋದಿಸುತ್ತಿದ್ದ ರೀತಿಯೇ ಸೊಗಸು.

  ಗಂಡನ ಊರು ನಿಟ್ಟೂರು. ಈ ಅಜ್ಜಿಯ ಮದುವೆಯ ಪ್ರಸಂಗವೇ ಅತ್ಯಂತ ವಿಲಕ್ಷಣವಾಗಿದೆ. ಚಿಕ್ಕವಳಿದ್ದಾಗ ಶಾಲೆಯಲ್ಲಿ ಕೊಟ್ರವ್ವ ಬಹಳ ಜಾಣೆಯಂತೆ. ಬ್ರಿಟಿಷರ ಕಾಲದಲ್ಲಿಯೇ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು ನಮ್ಮ ಮನೆಯಲ್ಲಿ!

 ಕೊಟ್ರವ್ವ ಮತ್ತು ಆಕೆಯ ಅತ್ತೆಯ ಮಗ (ಹೆಸರು ನೆನಪಿಲ್ಲ. ’ಹೀರೋ’ ಎಂದು ಕರೆಯೋಣ) ಇಬ್ಬರೂ ಸಹಪಾಠಿಗಳು. ಆತನೋ ಶತದಡ್ಡ. ಆಕೆ ಶಾಲೆಯಲ್ಲಿ ಮೊದಲಿಗಳಾಗಿ ಎಲ್ಲರಿಗೂ ಅಚ್ಚುಮೆಚ್ಚು. ಪ್ರಶ್ನೆ ಕೇಳಿದಾಗ ಅದಕ್ಕೆ ನಮ್ಮ ನಾಯಕ ಉತ್ತರ ಹೇಳಲಾಗದೇ ಸೋತಾಗ ಕೊಟ್ರವ್ವನ ಕೈಲಿ ಆತನ ಮೂಗು ಹಿಡಿದು ಹೊಡೆಸುತ್ತಿದ್ದರಂತೆ. ಇದು ದಿನಕ್ಕೆ ಒಂದು ಬಾರಿಯಾದರೂ ಪುನರಾವರ್ತನೆಯಾಗುತ್ತಿತ್ತು. ಕೊಟ್ರವ್ವನ ಬುದ್ದಿವಂತಿಕೆಯನ್ನು ನಮ್ಮ ನಾಯಕ ಅತ್ಯಂತ ಪರ್ಸನಲ್ ಆಗಿ ತೆಗೆದುಕೊಂಡು ಬಿಟ್ಟ. ಪರ್ಸನಲ್ ಆಗಿ ತೆಗೆದುಕೊಳ್ಳುವ ಹಂತದಲ್ಲಿಯೇ ಸಮಸ್ಯೆಗಳು ಶುರುವಾಗುತ್ತವೆ. ಎಲ್ಲರೂ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದುಕೊಂಡರೆ ಪ್ರಪಂಚ ಸುಖವಾಗಿರುತ್ತದೆ.
 

 ಕೊಟ್ರವ್ವನ ಮೇಲೆ ಅವನು ತೀರಿಸಿಕೊಂಡ ಸೇಡಾದರೂ ಯಾವ ಪರಿಯದು? ವಯಸ್ಸಿಗೆ ಬರುತ್ತಿದ್ದಂತೆ ಅವಳನ್ನೇ ಮದುವೆಯಾಗುತ್ತೇನೆಂದು ಹಟ ಹಿಡಿದ! ಮದುವೆಯಾದ ಮೇಲೆ "ನೀನು ನನಗ ಸಾಲ್ಯಾಗ ಹೊಡೀತಿದ್ಯಲ?" ಅಂತ ಪದೇ ಪದೇ ನೆನಪಿಸಿಕೊಂಡು ಅವಳಿಗೆ ಹೊಡೆಯುತ್ತಿದ್ದ. ಈ ಹಟ ಛಲದ ನಡುವೆಯೇ ಅವಳಿಗೆ ನಾಲ್ಕು ಮಕ್ಕಳಾದವು. ನಮ್ಮ ಹೀರೋ ಸಾಧಾರಣದವನಲ್ಲ. ಎರಡೂ ಕಾಲುಗಳು ಡೊಂಕು. ಮೊಳಕಾಲುಗಳ ನಡುವೆ ಕನಿಷ್ಟ ಎರಡಡಿ ಜಾಗ. ಅವಳಿಗಿಂತ ಅರ್ಧ ಅಡಿ ಕುಳ್ಳ.ಸಣಕಲ. ಒಟ್ಟಿನಲ್ಲಿ ಕೊಟ್ರವ್ವನ ಪರ್ಸನಾಲಿಟಿಗೆ ತಕ್ಕ ಗಂಡನೇ ಅಲ್ಲ ಅವನು. ಕೊಟ್ರವ್ವನೇನಾರೂ ತಿರುಗಿಸಿ ಬಿಟ್ಟಿದ್ದರೆ ಅವನು ಮತ್ತೆ ಎದ್ದು ನಿಲ್ಲುವುದೂ ಕಷ್ಟವಿತ್ತು. ಆದರೆ ನಮ್ಮ ದೇಶದ  ಹೆಂಗಸರಿಗೆ  ಸಾಧ್ವಿತನ ಹುಟ್ಟಿನಿಂದ ಬರುತ್ತೋ, ಸಮಾಜ ಅವರನ್ನು ಆ ಮಟ್ಟಕ್ಕೆ ಎತ್ತಿ(ತುಳಿದು?) ಬಿಡುತ್ತೋ ಗೊತ್ತಿಲ್ಲ. ಕೊಟ್ರವ್ವ ಅಪ್ಪಿತಪ್ಪಿಯೂ ಗಂಡನ ಮೇಲೆ ಕೈ ಎತ್ತಲಿಲ್ಲ. ಜೀವನ ಪರ್ಯಂತ ಆ ಅಯೋಗ್ಯನನ್ನು ಸಹಿಸಿಕೊಂಡಳು ಸಾಯುವವರೆಗೆ ಪ್ರೀತಿಯಿಂದ ನೋಡಿಕೊಂಡಳು.

 ಅವನೆಂತ ಅಯೋಗ್ಯ ಎಂದು ಸಾರುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಅವನಿಗೆ ಖಾರ ಮಂಡಕ್ಕಿ ತಿಂದು ಚಾ ಕುಡಿಯುವ ಚಟ. ಜೀವನ ಪರ್ಯಂತ ಉದ್ರಿಯಲ್ಲಿ ಅದೆಷ್ಟು ಮಂಡಕ್ಕಿ ತಿಂದನೋ ಉದ್ರಿ ತೀರಿಸಲು ಎರಡೆಕರೆ ಹೊಲ ಮಾರಬೇಕಾಯಿತು. ಕೊಟ್ರವ್ವನ ಹಿರಿಯ ಮಗ ಶಾಂತವೀರ ಅಪ್ಪನಷ್ಟೇ ಧೀಮಂತ! ಮುಂಜಾನೆ ಎಬ್ಬಿಸಿ ಮುಖ ತೊಳೆಯಲು ಬಚ್ಚಲು ಮನೆಗೆ ಕಳಿಸಿದರೆ ಬಚ್ಚಲಲ್ಲಿಯೇ ಒಣ ಜಾಗವನ್ನು ನೋಡಿ ಕಾಲು ಚಾಚಿ ಮಲಗಿಬಿಡುತ್ತಿದ್ದ!

 

 ಇಂತಿಪ್ಪ ಕೊಟ್ರವ್ವ ಎಂದೂ ತನ್ನ ಗಂಡನಿಗೆ ಹಿಡಿ ಶಾಪ ಹಾಕಿದವಳಲ್ಲ. ಮಕ್ಕಳಿಗೆ ಒಂದು ಮಾತೂ ಬೈದವಳಲ್ಲ.

 

ಕೊಟ್ರವ್ವನ  ಮುಗ್ಧತೆಯನ್ನು ತೋರುವ ಒಂದು ಪ್ರಸಂಗ,

 ಕೊಟ್ರವ್ವನ ಹಿರಿಯ ಮಗ ಶಾಂತವೀರ ನನಗಿಂತ ಸುಮಾರು ಹದಿನೈದು ವರ್ಷ ದೊಡ್ಡವನಿರಬಹುದು. ಎಷ್ಟು ಎತ್ತರಕ್ಕೆ ಬೆಳೆದರೂ ಹಾಸಿಗೆಯನ್ನು ಒದ್ದೆ ಮಾಡುತ್ತಿದ್ದ. ಇದೊಂದು ನಮ್ಮ ಕೊಟ್ರವ್ವನಿಗೆ ದೊಡ್ಡ ತಲೆನೋವಾಗಿತ್ತು. ಪರಿಹಾರ ಕೇಳಿ ನಮ್ಮ ಅಪ್ಪ ಮತ್ತು ಚಿಕ್ಕಪ್ಪಂದಿರ ಬಳಿ ಬಂದಳು. ನಮ್ಮ ಚಿಕ್ಕಪ್ಪ ವೈದ್ಯರು. ಮಗ ಅಖಿಲ್ ಒಂದು ವರ್ಷದವನಿದ್ದ.  ಪರಿಹಾರವಾಗಿ ಚಿಕ್ಕಪ್ಪ ಹೇಳಿದ ಔಷಧಿ ಹೀಗಿತ್ತು. "ಬೆಳಿಗ್ಗೆ ಆರಕ್ಕೆ ನಮ್ಮ ಅಖಿಲ ಉಚ್ಚಿ ಹೊಯ್ತಾನ.ಒಂದು ಸ್ಟೀಲಿನ ಲೋಟಾದಾಗ ಹಿಡಕಂಡು ಹೋಗಿ ನಿನ್ ಮಗನಿಗೆ ಹಾಳು ಬಾಯಗ ಕುಡಿಸು".

"ಹೌದೇನ ಯಪ್ಪಾ?" ಅಂತ ನನ್ನ ಅಪ್ಪನನ್ನು ಕೇಳಿತು ಕೊಟ್ರವ್ವಜ್ಜಿ.

"ಹು ಹೌದಬೇ. ಒಂದು ಸರಿ ಟ್ರೈ ಮಾಡಿ ನೋಡಲ" ಅಣ್ಣ ಅಲ್ಲವೇ? ಕೀಟಲೆಯಲ್ಲಿ ಒಂದು ಕೈ ಮೇಲಿರಬೇಕು.

"ನೋಡ ಯಣ್ಣಾ ಹಿಂಗಂತಾರ. ಹಿಂಗ ಉಚ್ಚಿ ಕುಡ್ಸಿದರ ಸರಿ ಹೊಕತ?" ಅಂತ ನನ್ನ ಅಜ್ಜನನ್ನು ಕೇಳಿತು. ಮಕ್ಕಳೇ ಹಾಗಿರಬೇಕಾದರೆ ಅಪ್ಪ ಹೇಗಿರಬೇಕು?

"ಹು. ಹೌದು!" ಅಂತ ಹೇಳಿ ಅಜ್ಜ ಮೈತುಂಬ ಚಾದರ ಹೊಚ್ಚಿಕೊಂಡು ಮಲಗಿಬಿಟ್ಟರು!

   ಮರುದಿನ ಬೆಳಿಗ್ಗೆ ಸ್ಟೀಲಿನ ಲೋಟ ಹಿಡಿದು ಕೊಟ್ರವತ್ತಿ ಹಾಜರಾಗಿಬಿಡಬೇಕೆ? ಸಾಲದ್ದಕ್ಕೆ "ಲಗೂನ ಕೊಡ್ರಪ್ಪ ನನ್ ಮಗಾ ಏಳೊದ್ರಾಗ ತಗಂಡು ಹೋಗತೀನಿ" ಅಂತ ದುಂಬಾಲು ಬಿದ್ದುಬಿಟ್ಟಿತು. ಅಜ್ಜಿ ಮುಸಿಮುಸಿ ನಗುತ್ತಾ "ತಾಯಿ ಅವರು ಚಾಷ್ಟಿ ಮಾಡತಾರ ಗೊತ್ತಾಗಲ್ಲೇನು ನಿನಗ" ಅಂತ ಹೇಳಿ ಕಳಿಸಿದರು. ನಮ್ಮ ಅಜ್ಜಿ ಹೇಳದಿದ್ದರೆ ಅವತ್ತು ಶಾಂತವೀರ ಅಖಿಲನ ಮೂತ್ರಪಾನ ಮಾಡಿಯೇಬಿಡುತ್ತಿದ್ದನೇನೋ!

 

ತಮ್ಮ ಗಮನಕ್ಕೆ: ಉತ್ತರ ಕರ್ನಾಟಕದ ಕಡೆ ಇದೊಂದು ಸಾಮಾನ್ಯ ಆಡುನುಡಿ. ಹುಡುಗ ದಡ್ಡನಿದ್ದರೆ ಹೋಗಿ ಅವನ(ಬುದ್ದಿವಂತ ಹುಡುಗನ) ಉಚ್ಚಿ ಕುಡಿ ಅಂತ ಹಂಗಿಸುತ್ತಾರೆ. ಅಶ್ಲೀಲತೆಯ ಎಳ್ಳಷ್ಟೂ ಲೇಪವಿಲ್ಲದಂತೆ ಮಾತಿನಲ್ಲಿ ಈ ನುಡಿಗಟ್ಟನ್ನು ಬಳಸುತ್ತಾರೆ. ಅಲ್ಲಿಯೇ ಬೆಳೆದವರಿಗೆ ಇದು ಅಶ್ಲೀಲ ಎನ್ನಿಸದು. ಈ ವೇದಿಕೆಯಲ್ಲಿರುವ ವಿವಿದ ತಾಣಗಳ ಜನರು ಮೂಗು ಮುರಿಯಬಾರದಾಗಿ ಕೋರಿಕೆ.

 

 ಕೊಟ್ರವ್ವನಿಗೆ ನೂರಾರು ಜನಪದ ಹಾಡುಗಳು, ಸೋಬಾನೆ ಪದಗಳು ಬಾಯಿಪಾಠವಾಗಿದ್ದವು. ಒಡಪುಗಳು ಕೊಟ್ರವ್ವನ ಬಾಯಲ್ಲಿ ಹತ್ತುಹದಿನೈದು ನಿಮಿಷಗಳ ಕಾಲ ಬಾಳುತ್ತಿದ್ದವು. ಅಷ್ಟುದ್ದದ ನೂರಾರು ಒಡಪುಗಳನ್ನು ನೆನಪಿಟ್ಟುಕೊಂಡು ಮದುವೆ, ಸೀಮಂತ ಇತ್ಯಾದಿ ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದಳು. ಇನ್ನೊಂದು ವಿಶೇಷವೆಂದರೆ ಆಕೆಗೆ ಇವೆಲ್ಲದರ ಅರ್ಥವೂ ಗೊತ್ತಿತ್ತು. ಅಕ್ಕಪಕ್ಕದವರಿಗೆ ಹಾಡು, ಪದ ಅಥವಾ ಒಡಪು ಅರ್ಥವನ್ನು ತಿಳಿಸಿ ಹೇಳುತ್ತಿದ್ದಳು.

 ಒಂದು ಸೋಬಾನೆ ಪದ ಅರೆಬರೆಯಾಗಿ ನೆನಪಿದೆ.

 

 ಹೆಬ್ಬಗಲ್ಲಡವತಿರಲೀ ಮಳೆ ಬಂದು ತೋಯುತಿರಲಿ

..................

ನಮ ಶಿವಗ ನಾಗನ್ನಕ್ಕೇರು ಸೋಬಾನ ಪಾಡತಿರಲಿ.

 

 ಹೆಬ್ಬಗಲ್ಲಡವಿರಲಿ ಎಂದರೆ ಅರ್ಥ ಏನಬೇ ಅಂತ ಕೇಳಿದೆ. "ಕಲ್ಲ ತಮ್ಮಾ ಕಲ್ಲು, ಹೆಬ್ಬಗಲ್ಲು ಅಂದರ ದೊಡ್ಡ ಕಲ್ಲು ಅಡವತಿರೋದು ಅಂದರ ನಡುಗೋದು, ನೀವು ಬೂಕಂಪ ಅಂತೀರಲ್ಲ ಬೂಮಿ ನಡುಗೋದು ಅದ ಅರ್ಥ"

 ಎಷ್ಟು ಸ್ವಾರಸ್ಯಕರವಾಗಿ ಹೇಳಿದಳು ಕೊಟ್ರವ್ವ! ಈಗಲೂ ನೆಲಕ್ಕೆ ಕಲ್ಲು ಅಂತಾರೆ. ಕಲ್ಲು ಒರೆಸು ಅಂದರೆ ನೆಲ ಒರೆಸು, ಕಲ್ಲು ಸಾರಿಸು ಅಂದರೆ ನೆಲ ಸಾರಿಸು.

 ಹೆಬ್ಬಗಲ್ಲು = ದೊಡ್ಡಕಲ್ಲು ಅಂದರೆ ಭೂಮಿ.

 

 "ಭೂಕಂಪವಾಗಲಿ, ಪ್ರವಾಹ ಬರಲಿ ಮದುಮಗನಿಗೆ ನಿದ್ರಾಭಂಗವಾಗದಂತೆ ಸುಪ್ಪತ್ತಿಗೆಯಲ್ಲಿ ಮಲಗಿಸಿ ನಾಗಕನ್ನಿಕೆಯರು ಸೋಬಾನೆ ಪದ ಹಾಡುತಿರಲಿ" ಅಂತ ಆ ಸೋಬಾನೆ ಪದದ ಅರ್ಥ!

 

 ಕೊಟ್ರವ್ವ ದಿ ಗ್ರೇಟ್ ನ ಕಥೆ ಮುಂದುವರಿಯಲಿದೆ.....

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.