ಫ್ಯಾಕ್ಸ್ ಯಂತ್ರಕ್ಕೆ ಇನ್ನೂ ಜೋತು ಬಿದ್ದಿರುವ ಜಪಾನ್

1

ಕಂಪ್ಯೂಟರಿಗೆ ಮೊಬೈಲ್ ಕುಟ್ಟಿ ಕಡತ ವರ್ಗಾವಣೆ


ಮೊಬೈಲ್‌ಗಳಲ್ಲಿ ಬಂಪ್ ಎನ್ನುವ ತಂತ್ರಾಂಶ ಇದ್ದರೆ, ಅವನ್ನು ಡಿಕ್ಕಿ ಹೊಡೆಸಿ, ಕಡತಗಳನ್ನು ಒಂದರಿಂದ ಇನ್ನೊಂದಕ್ಕೆ ವರ್ಗಾಯಿಸಲು ಸಾಧ್ಯವಿತ್ತು. ಈ ತಂತ್ರಾಂಶವು ಐಓಎಸ್ ಮತ್ತು ಆಂಡ್ರಾಯಿಡ್ ಫೋನುಗಳಿಗೆ ಲಭ್ಯವಿದೆ. ಈಗ ಅದರ ಹೊಸ ಸುಧಾರಿತ ಆವೃತ್ತಿಯಲ್ಲಿ ಈ ಸೌಕರ್ಯವನ್ನು ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲೂ ಪಡೆಯಲು ಸಾಧ್ಯ. ಇದಕ್ಕೆ ಕಂಪ್ಯೂಟರಿನಲ್ಲಿ ತಂತ್ರಾಂಶ ಅಳವಡಿಸಬೇಕಿಲ್ಲ. ಬಂಪ್ ತಂತ್ರಾಂಶವು ಮೊಬೈಲಿನಲ್ಲಿ ಇರಬೇಕು. ವರ್ಗಾಯಿಸ ಬೇಕಿರುವ ಕಡತಗಳನ್ನು ಆಯ್ಕೆ ಮಾಡಿ. ನಂತರ ಮೊಬೈಲನ್ನು ಕಂಪ್ಯೂಟರಿನ ಸ್ಪೇಸ್‌ಬಾರ್ ಕೀಲಿಯ ಮೇಲೆ ಕುಟ್ಟಿದರೆ ಸರಿ, ಕಡತಗಳು ವರ್ಗಾಯಿಸಲ್ಪಡುತ್ತವೆ. ಆಡಿಯೋ,ವೀಡಿಯೋ,ಲಿಪಿ ಕಡತಗಳು ಯಾವುದನ್ನೂ ವರ್ಗಾಯಿಸಲು ಬರುತ್ತದೆ. ವಿವರಗಳಿಗೆ bu.mp ತಾಣವನ್ನು ನೋಡಿ.

ಟ್ವೀಟಿಸಿ ಹಣ ಪಾವತಿಸಿ
ಅಮೆರಿಕನ್ ಎಕ್ಸ್‌ಪ್ರೆಸ್(ಅಮೆಕ್ಸ್)  ಕ್ರೆಡಿಟ್‌ಕಾರ್ಡ್ ತನ್ನ ಬಳಕೆದಾರರು ವಸ್ತುಗಳನ್ನು ಖರೀದಿಸುವಾಗ, ಟ್ವಿಟರ್ ಸಂದೇಶ ಕಳುಹಿಸುವ ಮೂಲಕ ಪಾವತಿಸಲು ಅನುವು ಮಾಡಿದೆ. ಈ ಸೌಲಭ್ಯ ಪಡೆಯಲು, ಅಮೆಕ್ಸ್ ಅವರು ಒದಗಿಸಿರುವ ತಂತ್ರಾಂಶವನ್ನು ಮೊಬೈಲ್ ಸಾಧನದಲ್ಲಿ ಅನುಸ್ಥಾಪಿಸಬೇಕು. ಟ್ವಿಟರ್ ಖಾತೆಯ ಮೂಲಕ ಕ್ರೆಡಿಟ್‌ಕಾರ್ಡ್ ಖಾತೆಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಖರೀದಿ ತಾಣದಲ್ಲಿ ಪ್ರತಿ ವಸ್ತುವಿನೊಂದಿಗೆ ಹ್ಯಾಶ್‌ಟ್ಯಾಗ್ # ಚಿಹ್ನೆಯ ಜತೆ ಪದವೊಂದು ಇರುತ್ತದೆ. ಅದನ್ನು ಅಮೆಕ್ಸ್ ಟ್ವಿಟರ್ ಖಾತೆಗೆ ಟ್ವೀಟ್ ಮಾಡಬೇಕು. ನಂತರ ಅಮೆಕ್ಸ್ ಇನ್ನೊಂದು ಹ್ಯಾಶ್‌ಟ್ಯಾಗನ್ನು ಟ್ವೀಟ್ ಮಾಡುತ್ತದೆ. ಇದನ್ನು ಗ್ರಾಹಕ ಮರು ಟ್ವೀಟ್ ಮಾಡಿದರೆ, ಪಾವತಿಯಾಗುತ್ತದೆ. ಹ್ಯಾಶ್‌ಟ್ಯಾಗ್ ಬಳಕೆಯ ಕಾರಣ ಮತ್ತು ಮುಖ್ಯವಾಗಿ, ಟ್ವಿಟರ್ ಖಾತೆಯ ಮೂಲಕ ಕ್ರೆಡಿಟ್‌ಕಾರ್ಡ್ ಪಾವತಿಗೆ ಪ್ರವೇಶ ಪಡುವ ಕಾರಣ, ಈ ವ್ಯವಹಾರ ಭದ್ರವಾಗಿದೆ, ದುರುಪಯೋಗವಾಗದು.

ರಶ್ಯಾಕೆ ಅಪ್ಪಳಿಸಿದ ಉಲ್ಕೆ
ರಶ್ಯಕ್ಕೆ ಬಡಿದದ್ದು Asteroid 2012 DA14 ಅಲ್ಲವೇ? ಹಾಗೆಂದು ಹೇಳಲಾಗಿದೆ. ನಾಸಾವು ನೂರೈವತ್ತಡಿ ಉದ್ದದ Asteroid 2012 DA14ವು ಭೂಮಿಯಿಂದ ಹದಿನೈದು ಸಾವಿರಕ್ಕಿಂತ ಹೆಚ್ಚು ದೂರದಲ್ಲಿ ಸಾಗಿಹೋಗಲಿದೆ ಎಂದು ಮೊದಲಿನಿಂದಲೂ ಸಮಾಧಾನ ಹೇಳುತ್ತಿದ್ದರು. ಹದಿನೈದು ಸಾವಿರ ಕಿಲೋಮೀಟರ್ ದೂರದಲ್ಲೇ ಸಾಗಿದರೂ, ಇದು ಭೂಮಿಗೆ ಅತ್ಯಂತ ಸಮೀಪದಲ್ಲಿ ಸಾಗಿಹೋಗುತ್ತಿರುವ ಉಲ್ಕೆಯಾಗಿದೆ. ರಶ್ಯಾದಲ್ಲಿ ಬಿದ್ದ ಉಲ್ಕೆಯು ಉಂಟು ಮಾಡಿದ ಕಂಪನ, ಆಘಾತಗಳಿಂದಾಗಿ, ಕಟ್ಟಡಗಳ ಕಿಟಕಿ ಗಾಜುಗಳು ಒಡೆದು ಜನರು ಗಾಯಗೊಂಡರು.

ಆಫೀಸ್ ತಂತ್ರಾಂಶ ಸಹಿತ ಕಂಪ್ಯೂಟರ್?
ಆಫೀಸ್ 365 ತಂತ್ರಾಂಶವನ್ನು ವಿಂಡೋಸ್ 8 ಆಪರೇಟಿಂಗ್ ವ್ಯವಸ್ಥೆಯ ಜತೆಗೆ ಒದಗಿಸಲು ಮೈಕ್ರೋಸಾಫ್ಟ್ ಕಂಪ್ಪೆನಿಯು ಉದ್ದೇಶಿಸಿದೆ. ಈ ಬಗ್ಗೆ ಕಂಪ್ಯೂಟರ್ ಯಂತ್ರಾಂಶ ಒದಗಿಸುವ ಏಸರ್, ಟೊಶಿಬಾ, ಹ್ಯೂಲೆಟ್ ಪ್ಯಾಕರ್ಡ್ ಮುಂತಾದ ಕಂಪೆನಿಗಳ ಜತೆಗದು ಮಾತುಕತೆ ನಡೆಸಿದೆ. ಮೈಕ್ರೋಸಾಫ್ಟ್ ಆಫೀಸ್ 365 ಇಂಟರ್‌ನೆಟ್‌ನಿಂದ ಕ್ಲೌಡ್ ಸೇವೆ ಮೂಲಕ ಪಡೆಯಲು ಲಭ್ಯವಿರುವ ತಂತ್ರಾಂಶ. ಇದರ ಬಳಕೆಗೆ ಹಣ ಪಾವತಿಸಬೇಕು. ಇದು ತಂತ್ರಾಂಶ ಖರೀದಿಗಿಂತ ಬಲು ಅಗ್ಗವಾಗುತ್ತದೆ. ಬಳಸಿದ ಸಮಯದ ಮೇಲೆ ದರ ವಿಧಿಸುವುದರಿಂದ ಹೀಗಾಗುತ್ತದೆ. ಈ ತಂತ್ರಾಂಶ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಲೂ ಲಭ್ಯವಿದೆಯಾದರೂ, ಹೆಚ್ಚಿನವರು ಇದರ ನಕಲಿಯನ್ನು ಬಳಸುವುದೇ ಹೆಚ್ಚು. ಪೈರಸಿ ಸಮಸ್ಯೆಯನ್ನು ಕಡಿಮೆ ಮಾಡಲು ಹೊಸ ವ್ಯವಸ್ಥೆ ಸಹಾಯ ಮಾಡುತ್ತದೆ.

ಫ್ಯಾಕ್ಸ್ ಯಂತ್ರಕ್ಕೆ ಇನ್ನೂ ಜೋತು ಬಿದ್ದಿರುವ ಜಪಾನ್
ಇಲೆಕ್ಟ್ರಾನಿಕ್ಸ್ ಸಾಧನಗಳು, ರೊಬೋಟ್‌ಗಳ ತಯಾರಿಕೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದಿರುವ ಜಪಾನ್ ಡಿಜಿಟಲ್ ಯುಗದ ಮಟ್ಟಿಗೆ ಹಿಂದುಳಿದೆ. ಅಲ್ಲಿನ್ನೂ ಪ್ರತಿ ಕಚೇರಿಯಲ್ಲೂ,ಅರೆವಾಸಿ ಮನೆಗಳಲ್ಲೂ ಫ್ಯಾಕ್ಸ್ ಯಂತ್ರ ಈಗಲೂ ಬಳಕೆಯಾಗುತ್ತಿದೆ. ತಮಯೋಗಾದಂತಹ ಫ್ಯಾಕ್ಸ್ ತಯಾರಿಕಾ ಯಂತ್ರ ದಿನಾಲೂ ಫ್ಯಾಕ್ಸ್ ಯಂತ್ರಕ್ಕೆ ಹೊಸ ಆದೇಶಗಳನ್ನು ಪಡೆಯುತ್ತಿದೆ. ಸುನಾಮಿಯ ಸಮಯದಲ್ಲಿ ನೆರೆಯಲ್ಲಿ ಕೊಚ್ಚಿ ಹೋದ ಫ್ಯಾಕ್ಸ್ ಯಂತ್ರಗಳ ಬದಲಿಯಾಗಿ ಬಳಸಲು ಫ್ಯಾಕ್ಸ್ ಯಂತ್ರಕ್ಕಾಗಿನ ಬೇಡಿಕೆ ಹೆಚ್ಚಿದೆ. ಜಪಾನಿನಲ್ಲಿ ವೃದ್ಧರ ಸಂಖ್ಯೆ ಮಿತಿಮೀರಿದೆ. ಅವರು ತಮ್ಮ ಜೀವನಶೈಲಿಯನ್ನು ಬದಲಿಸಲು ಆಸಕ್ತರಾಗದಿರುವುದೂ ಫ್ಯಾಕ್ಸ್ ಯಂತ್ರದ ಬಳಕೆ ಮುಂದುವರಿಯಲು ಕಾರಣವಾಗಿದೆ. ಅಮೆರಿಕಾದಂತಹ ದೇಶದಲ್ಲಿ, ಇ-ಮೇಲ್,ಮೊಬೈಲ್ ಯುಗದಲ್ಲಿ ಫ್ಯಾಕ್ಸ್ ಯಂತ್ರಗಳನ್ನು ಕೇಳುವವರೇ ಇಲ್ಲ. ಕಂಪ್ಯೂಟರ್ ಫ್ಯಾಕ್ಸ್ ಯಂತ್ರದಂತೆ ಕೆಲಸ ಮಾಡುವುದರಿಂದ ಪ್ರತ್ಯೇಕ ಫ್ಯಾಕ್ಸ್ ಯಂತ್ರ ಬೇಕಿಲ್ಲ. ಅಮೆರಿಕಾ ಬಿಡಿ, ನಮ್ಮ ದೇಶದಲ್ಲೂ ಫ್ಯಾಕ್ಸ್ ಯಂತ್ರದ ಬಳಕೆ ಭಾರೀ ಪ್ರಮಾಣದಲ್ಲಿ ತಗ್ಗಿದೆ.

ಮೊಬೈಲ್ ಮೂಲಕ ವಿಮೆ
ಭಾರತದಲ್ಲಿ ವಿಮೆ ಜನಪ್ರಿಯವಾಗಿಲ್ಲ. ನೂರಿಪ್ಪತ್ತು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ನಮ್ಮಲ್ಲಿ ಇಪ್ಪತ್ತೈದು ಕೋಟಿ ಜನರು ಮಾತ್ರಾ ವಿಮಾವ್ಯಾಪ್ತಿಯಲ್ಲಿದ್ದಾರೆ. ಮೊಬೈಲ್ ಹೊಂದಿರುವವರ ಸಂಖ್ಯೆ ಗಮನಿಸಿದರೆ ಇದು ಸುಮಾರು ನೂರು ಕೋಟಿ. ಈಗ ವಿಮಾ ಪ್ರಾಧಿಕಾರ, ಹೆಚ್ಚು ಜನರನ್ನು ವಿಮಾವ್ಯಾಪ್ತಿಯಲ್ಲಿ ತರಲು, ಸೆಲ್‌ಪೋನನ್ನೇ ಬಳಸಿದರೆ ಹೇಗೆ ಎನ್ನುವ ಯೋಚನೆಯಲ್ಲಿದೆ. ಸೆಲ್‌ಫೋನ್ ಹೊಂದಿರುವವರನ್ನು ವಿಮೆಗೊಳಪಡಿಸಿ, ಅವರು ಮಾಡುವ ರಿಚಾರ್ಜಿನ ಸಣ್ಣ ಮೊತ್ತವನ್ನು ಗುಂಪು ವಿಮೆಯ ಕಂತಾಗಿ ಮುರಿದರೆ, ಗುಂಪುವಿಮೆಯನ್ನು ಜನತೆಗೆ ಒದಗಿಸಿದಂತಾಗುತ್ತದೆ. ಅಪಘಾತ,ಅನಾರೋಗ್ಯಕ್ಕೆ ಜನರಿಗೆ ವಿಮಾಸೌಲಭ್ಯ ಸಿಗುತ್ತದೆ. ಆದರಿದು ಹೇಳಿದಷ್ಟು ಸುಲಭವಲ್ಲ. ಕೆಲವರಲ್ಲಿ ಹಲವು ಮೊಬೈಲ್ ಸಾಧನಗಳಿರಬಹುದು. ಇನ್ನು ಜನರು ಮೊಬೈಲ್ ಬಳಕೆಯನ್ನು ನಿಲ್ಲಿಸಬಹುದು. ಬೇರೆ ಸೆಟ್ ಖರೀದಿಸಬಹುದು. ಹಾಗಾಗಿ ವಿಮಾಯೋಜನೆ ವಿಫಲವಾಗಬಹುದು.ಈ ಸಮಸ್ಯೆ ನಿವಾರಿಸಲು,ಆಧಾರ್ ಸಂಖ್ಯೆ ಮೂಲಕ ಮೊಬೈಲ್ ನಂಬರ್ ಗುರುತಿಸಿ,ಒಬ್ಬನಿಗೆ ಒಂದೇ ವಿಮಾಸೌಲಭ್ಯ ಸೀಮಿತಗೊಳಿಸಬಹುದು.ಮೊಬೈಲ್ ಬದಲಿಸಿದರೆ,ಆ ವ್ಯಕ್ತಿಯ ಆಧಾರ್ ಸಂಖ್ಯೆಗೆ ಹೊಸ ಮೊಬೈಲ್ ಸಾಧನವನ್ನು ಜೋಡಿಸಬಹುದು. ವಿಮಾ ಕಂಪೆನಿಗಳು ಇಂತಹ ಯೋಜನೆಯ ಲಾಭ ಪಡೆಯುತ್ತಾರೆ. ಅವರ ಆದಾಯವು ಹೆಚ್ಚುತ್ತದೆ. ಮೊಬೈಲ್ ಕಂಪೆನಿಗಳೂ, ಪ್ರತಿ ವಿಮೆಯ ಮೇಲೆ ಸಣ್ಣ ಪಾಲುಪಡೆಯುವ ಮೂಲಕ ಲಾಭ ಗಿಟ್ಟಿಸಬಹುದು. ಜನರಿಗಂತೂ ವಿಮೆಯಿಂದ ಲಾಭ ಇದ್ದೇ ಇದೆಯಲ್ಲ?

ಕರಕುಶಲ ಸಾಮಗ್ರಿಗಳ ತಾಣ ಶಾಪೆಟ್‌ಪ್ಲೇಸಸ್
Shopatplaces ಇಂಟರ್ನೆಟ್ ತಾಣವು
ಇದರಲ್ಲಿ ವಿವಿಧ ಸ್ಥಳಗಳ ವಿಶೇಷ ಸಾಮಗ್ರಿಗಳ ಆನ್‌ಲೈನ್ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಸದ್ಯ ಎಂಟು ರಾಜ್ಯಗಳ ಕರಕುಶಲ ಸಾಮಗ್ರಿಗಳಷ್ಟೇ ಈ ತಾಣದಲ್ಲಿ ದೊರಕುತ್ತಿದೆ. ನಿಧಾನವಾಗಿ ಈ ತಾಣ ಎಲ್ಲಾ ರಾಜ್ಯಗಳನ್ನೂ ಒಳಗೊಳ್ಳಲಿದೆ. ಗ್ರಾಹಕರು ತಮಗೆ ಬೇಕಾದ ವಸ್ತುಗಳಿಗೆ ಬೇಡಿಕೆ ಸಲ್ಲಿಸಿದರೆ, ಅದನ್ನು ಕಳುಹಿಸುವ ಏರ್ಪಾಡು ಮಾಡಲಾಗುತ್ತದೆ. ಸಾಮಗ್ರಿಯನ್ನು ತಲುಪಿಸಿದಾಗ, ಪಾವತಿ ಮಾಡಿದರೆ ಸಾಕು.

ಕಂಪ್ಯೂಟರಿನ ಇಂಟರ್ನೆಟ್ ಮೊಬೈಲಿಗೆ
ಮೊಬೈಲಿನಲ್ಲಿ ಇಂಟರ್ನೆಟ್ ಸಂಪರ್ಕವನ್ನು ಪಡೆದು, ವೈ_ಫೈ ಸೃಷ್ಟಿಸಬಹುದು. ವೈ-ಫೈ ಕಾರ್ಡ್ ಇರುವ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವ ಸಾಧನಗಳಲ್ಲಿ ಕೂಡಾ ಇಂಟರ್ನೆಟ್ ಪಡೆಯಲು ಸಾಧ್ಯವಾಗುತ್ತದೆ. ವೈ-ಫೈ ಬದಲು ಕಂಪ್ಯೂಟರಿನ ಯು ಎಸ್ ಬಿ ಪೋರ್ಟ್ ಮೂಲಕವೂ ಮೊಬೈಲಿನ ಇಂಟರ್ನೆಟ್ ಪಡೆಯಬಹುದು. ಈಗ ತಂತಿ ಮೂಲಕ ಇಂಟರ್‌ನೆಟ್ ಸಂಪರ್ಕವಿರುವ ಕಂಪ್ಯೂಟರಿನಿಂದ ಮೊಬೈಲಿನಲ್ಲಿ ಇಂಟರ್ನೆಟ್ ಪಡೆಯಬೇಕೆಂದರೆ ಸಾಧ್ಯವೇ ಎಂದು ನೀವು ಕೇಳಬಹುದು. ಹೌದು,ಸಾಧ್ಯ. ಆದರೆ ನೀವು ಮೊಬೈಲಿನಲ್ಲಿ ರಿವರ್ಸ್-ತೆದರಿಂಗ್ ಎನ್ನುವ ತಂತ್ರಾಂಶವನ್ನು ಅನುಸ್ಥಾಪಿಸಬೇಕು. ಈ ತಂತ್ರಾಂಶಕ್ಕೆ ಹಣ ಪಾವತಿಸಬೇಕಾಗುತ್ತದೆ. ಆಂಡ್ರಾಯಿಡ್ ಫೋನುಗಳಿಗೆ ಈ ಆಪ್ ಲಭ್ಯವಿದೆ.
ಇಂಟ‌ರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.comನಲ್ಲಿ ಲಭ್ಯ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.