ಪ್ರಸನ್ನರ ಯಂತ್ರಗಳನ್ನು ಕಳಚೋಣ ಬನ್ನಿ - ಒಂದು ಪ್ರತಿಕ್ರಿಯೆ.

0

(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ)

ಇದರಲ್ಲಿ ಹಿರಿಯರಾದ ಪ್ರಸನ್ನರು ಯುರೋಪಿಯನ್ ಕೈಗಾರಿಕಾ ಕ್ರಾಂತಿಗೂ ಹಿಂದಿನ ಕಾಲಮಾನದಲ್ಲಿ ನಿಂತು ಆಲೋಚನೆ ಮಾಡುತ್ತಿದ್ದಾರೆ ಎನಿಸುತ್ತದೆ. ಸುಲಭೋಪಾಯದ ಬದುಕನ್ನು ನೀಡುವ ಯಂತ್ರಗಳು ನಮ್ಮನ್ನು ಸೋಗಲಾಡಿಗಳನ್ನಾಗಿ ಮಾಡುತ್ತಿವೆ ಎಂದು ಆತಂಕ ಪಡುವ ಅವರು ಯಂತ್ರಗಳನ್ನು ಅತಿ ಕಡಿಮೆ ಅವಲಂಬಿಸಿ ಬಿಡುವಿನ ಸಮಯದಲ್ಲಿ ಏನೇನು ಮಾಡಬೇಕೆಂದು ಓದುಗರಿಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡುತ್ತಾರೆ. ಅಲ್ಲದೆ ಈ ಯಂತ್ರ ಹಾಗು ಸುಲಭ ಬದುಕುಗಳು ಹೇಗೆ ಸಮಾಜವಾದೀ ಮೌಲ್ಯಗಳನ್ನು ಹಾಳುಗೆಡವಿವೆ ಎಂದು ವಿವರಿಸುತ್ತಾರೆ. ಸರಳ ಬದುಕು ಹಾಗು ಬಡತನಗಳ ನಡುವಿನ ವ್ಯತ್ಯಾಸವನ್ನು ಪರಿಗಣಿಸದೆ ’ಎಲ್ಲ ಧರ್ಮಗಳೂ ಐಷಾರಾಮಿ ಬದುಕನ್ನು ತಿರಸ್ಕರಿಸಿವೆ, ಎಲ್ಲ ಕ್ರಾಂತಿಕಾರೀ ವಿಚಾರಗಳೂ ಬಡವರನ್ನು ಅವರ ಸರಳ ಬದುಕಿಗೆ ಮೆಚ್ಚಿಕೊಂಡಿವೆ’ ಎನ್ನುತ್ತಾರೆ. ಸರಳ ಬದುಕು ಬಡತನಕ್ಕೆ ಒಲಿದರೂ ಒಲಿಯಬಹುದು. ಆದರೆ ಬಡವನ ಬದುಕು ಹಾಗು ಮನಸ್ಸುಗಳು ಎಂದಿಗೂ ಸರಳವಾಗಿರದು. ಅಷ್ಟಕ್ಕೂ ಸರಳತೆ ಎಂದರೇನು? ಗಾಂಧಿಯನ್ನು ಸರಳ ಜೀವಿ ಎನ್ನಲಾಗುವುದೇ? ಅವರ ಅಮುಖ್ಯವಾದ ನಿತ್ಯಚರ್ಯೆಗಳನ್ನು ಮೇಲ್ನೋಟಕ್ಕೆ ಸರಳವೆನ್ನಬಹುದು ಅಷ್ಟೇ.

ಗಾಂಧಿಯ ’ಹಿಂದ್ ಸ್ವರಾಜ್’ ಚಿಂತನೆಗಳೇ ಇಲ್ಲೂ ಪ್ರತಿಫಲನವಾದಂತಿದೆ. ಹಾಗಾಗಿ ಪ್ರಸನ್ನರ ವಿಚಾರಗಳ ಜೊತೆಗೆ ಆ ವಿಚಾರಗಳ ಹಿಂದಿನ ಪ್ರೇರಣೆಯಾಗಿರುವ ಗಾಂಧಿಯ ಕೆಲವು ವಿಚಾರಗಳನ್ನು ತೀವ್ರವಾಗಿ ಶೋಧಿಸಬೇಕಾಗಿದೆ. ’ಹಿಂದ್ ಸ್ವರಾಜ್’ ಪುಸ್ತಕದ ವಿಚಾರಗಳನ್ನು ವಿವೇಚನೆಯುಳ್ಳ ಗಾಂಧೀವಾದಿಗಳು ಬಹು ಹಿಂದೆಯೇ ಕೈಬಿಟ್ಟಾಗಿದೆ. ಸ್ವತಃ ಗಾಂಧಿಯೇ ಆ ಕೃತಿಯಲ್ಲಿ ಪ್ರತಿಪಾದಿಸಿದ ತತ್ವಗಳಂತೆ ನಡೆದುಕೊಳ್ಳಲಿಲ್ಲ. ಆ ಕೃತಿಯಲ್ಲಿ ರೈಲನ್ನು ’ಸೈತಾನನ ಸೃಷ್ಟಿ; ಅದನ್ನು ದೇಶದಿಂದ ಉಚ್ಚಾಟಿಸಬೇಕು’ ಎಂದಿರುವ ಗಾಂಧಿ ತಮ್ಮ ಜೀವನವಿಡೀ ರೈಲ್ವೇ ಪ್ರಯಾಣ ಮಾಡುತ್ತಿದ್ದರು. ಅಂಚೆ ಪದ್ಧತಿಯನ್ನು ವಿರೋಧಿಸುವ ಅವರು ಅಂಚೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತಿದ್ದರು, ತಮ್ಮ ಜೀವಿತವನ್ನೆಲ್ಲ ನಗರಗಳಲ್ಲೇ ಕಳೆದ ಅವರು ಆ ಕೃತಿಯಲ್ಲಿ ನಾಗರಿಕ ಜೀವನವನ್ನು ವಿರೋಧಿಸಿ ಹಳ್ಳಿಗಳ ಬಗ್ಗೆ ರಮ್ಯವೆನಿಸುವ ಹುಸಿ ಕಲ್ಪನೆಗಳನ್ನು ಇರಿಸಿಕೊಂಡಿದ್ದರು. ಹಳ್ಳಿಗಳಲ್ಲಿ ಭವಿಷ್ಯವಿಲ್ಲ ಎಂಬುದು ಇಂದು ಭಾರತದ ಪ್ರತಿಯೊಬ್ಬ ಹಳ್ಳಿಗನಿಗೂ ಗೊತ್ತು. ’ಸುಳ್ಳನ್ನೇ ನೂರು ಸಲ ಹೇಳಿದರೆ ಸತ್ಯ ಎನಿಸಿಕೊಳ್ಳುತ್ತದೆ’ ಎಂದು ಹಿಟ್ಲರ್ ಹಿಂದೊಮ್ಮೆ ಹೇಳಿದ್ದ. ಗಾಂಧಿ ಕೆಲವು ಸುಳ್ಳುಗಳನ್ನೇ ಸತ್ಯವೆಂದು ಪ್ರಾಮಾಣಿಕವಾಗಿ ನಂಬಿ ಕೆಲವು ಮುಗ್ಧ ಗಾಂಧೀವಾದಿಗಳ ದಾರಿ ತಪ್ಪಿಸಿದರು, ಮತ್ತು ಕೆಲವು ಜಾಣ ಗಾಂಧೀವಾದಿಗಳನ್ನು ಪೂರ್ವಗ್ರಹ ಪೀಡಿತರನ್ನಾಗಿ ಮಾಡಿದರು. ಹಾಗಾಗಿ ಇಂದು ಗಾಂಧಿಯನ್ನು ವಿಮರ್ಶಿಸಲು ಹೊರಡುವವರು ಸಮಾಜ ವಿರೋಧಿಗಳು, ದೇಶದ್ರೋಹಿಗಳು ಎನಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಒಂದು ತಲೆಮಾರು ತನ್ನ ಕಾಲದಲ್ಲಿ ಹುಟ್ಟಿದ ಯಾವುದೇ ಮಹಾತ್ಮನನ್ನು ಕುರಿತು ಆಮೂಲಾಗ್ರವಾಗಿ ಆಲೋಚನೆ ಮಾಡದೇ ಹೋದರೆ ಆ ಮಹಾತ್ಮನ ಜೀವನ ಸಾಧನೆಗಳು ಆ ತಲೆಮಾರಿನ ಪಾಲಿಗೆ ದಕ್ಕದೇ ಹೋಗುವ ಅಪಾಯವಿದೆ.

ಗಾಂಧಿಯ ಬಹುತೇಕ ರಾಜಕೀಯ, ಸಾಮಾಜಿಕ ವಿಚಾರಗಳು ಅವೈಜ್ಞಾನಿಕ ಹಾಗು ಪ್ರತಿಗಾಮೀ ಚಿಂತನೆಗಳಾಗಿದ್ದವು ಎಂದು ಎಂ.ಎನ್. ರಾಯ್, ಅಂಬೇಡ್ಕರ್ ಮೊದಲಾದ ಚಿಂತಕರು ಬಹು ಹಿಂದೆಯೇ ತೀರ್ಮಾನಿಸಿದ್ದರು. ಇದನ್ನು ಮನಗಾಣದೇ ಹೋದಾಗ ಪ್ರಸನ್ನ ಅವರು ಪ್ರತಿಪಾದಿಸುವ ಯಂತ್ರವಿರೋಧೀ ವಿಚಾರಗಳು ತಲೆ ಎತ್ತುತ್ತವೆ. ಕೈಗಾರಿಕಾ ಕ್ರಾಂತಿಗೂ ಹಿಂದಿನ ದಿನಗಳಲ್ಲಿ ಸಂಪತ್ತನ್ನು ಶೋಷಣೆ ಮಾಡಿ, ಬಡವರ ರಕ್ತ ಹೀರಿ ಸಂಗ್ರಹಿಸಲಾಗುತ್ತಿತ್ತು. ಆದರೆ ಯಂತ್ರಗಳ ಕ್ರಾಂತಿಯಾದ ಮೇಲೆ ಹಿಂಸೆ, ಶೋಷಣೆಗಳಿಲ್ಲದೇ ಸಂಪತ್ತು, ಸವಲತ್ತುಗಳನ್ನು ಸೃಷ್ಟಿಸಿಕೊಳ್ಳುವ ದಾರಿಗಳು ತೆರೆದುಕೊಂಡವು. ಪ್ರಸನ್ನರು ಪ್ರಸ್ತಾಪಿಸುವ ’ಸಮಾಜವಾದ’ದಂತಹ ವಿಚಾರಗಳು ಸಹ ಕೈಗಾರಿಕಾ ಕ್ರಾಂತಿಯ ಫಲಶ್ರುತಿಗಳಾಗಿವೆ - ಕಮ್ಯುನಿಸಂ ಹುಟ್ಟಿದ್ದೇ ಯಂತ್ರಗಳಿಂದ ಹೀಗೆ ಅಗಾಧ ಪ್ರಮಾಣದಲ್ಲಿ ಉತ್ಪಾದನೆಯಾದ ಸಂಪತ್ತನ್ನು ಸಮನಾಗಿ ಹಂಚುವ ಉದ್ದೇಶದಿಂದ. ಕೈಗಾರಿಕಾ ಕ್ರಾಂತಿಯಾಗದೇ ಹೋಗಿದ್ದಿದ್ದರೆ ಇಂದಿಗೂ ಫ್ಯೂಡಲ್ ವ್ಯವಸ್ಥೆಯೇ ಮುಂದುವರೆಯುತ್ತಿತ್ತು ಎಂಬುದು ಪ್ರಸನ್ನರಿಗೆ ತಿಳಿಯದೇ ಏನಿಲ್ಲ.

’ಹಾಗಿದ್ದರೆ ಸಂಜೆ ಹಾಸಿಗೆಯಲ್ಲಿ ಉರುಳಿಕೊಂಡಾಗ ನಮಗೇಕೆ ನಿದ್ರೆ ಬರುತ್ತಿಲ್ಲ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಂದ ಏಕೆ ನರಳುತ್ತಿದ್ದೇವೆ? ಅದೇಕೆ ನಮ್ಮ ಮೆದುಳು ಉದ್ವೇಗದಲ್ಲಿರುತ್ತದೆ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಪ್ರಸನ್ನ ಅವರು ತಮ್ಮ ಒಂದು ಲೇಖನದಲ್ಲಿ ಕೇಳುತ್ತಾರೆ. ತಂತ್ರಜ್ಞಾನದ ಆವಿಷ್ಕಾರ ಸುಲಭ ಬದುಕನ್ನು ಹುಡುಕುವ ದಾರಿಗಳಲ್ಲ ಎಂಬುದು ಅವರ ಈ ಮಾತುಗಳಿಂದಲೇ ತಿಳಿಯುತ್ತದೆ. ಎತ್ತಿನ ಬಂಡಿ ಹಾಗು ವಿಮಾನಗಳ ಹಿಂದೆ ಇರುವ ತಾಂತ್ರಿಕ ತತ್ವ ಒಂದೇ. ವಿಮಾನದ ತಂತ್ರಜ್ಞಾನ ಎತ್ತಿನ ಗಾಡಿಯ ತಂತ್ರಜ್ಞಾನದ ವಿಸ್ತೃತ ರೂಪ ಅಷ್ಟೇ. ಪ್ರಸನ್ನರಂತಹವರ ವಿಚಾರಗಳು ಬೃಹತ್ ತಾಂತ್ರಿಕತೆಗಳನ್ನು ಮಾತ್ರ ವಿರೋಧಿಸುತ್ತದೆ. ಆದರೆ ಮನುಷ್ಯ ಬುದ್ಧಿ ಎಷ್ಟು ದೊಡ್ಡ ಯಂತ್ರಗಳನ್ನು ತಯಾರು ಮಾಡುವುದೋ ಅದೇ ಅನುಪಾತದಲ್ಲಿ ಅದು ಸಂಕೀರ್ಣವಾಗುತ್ತ ಹೋಗುವುದು. ಜೀವನವಿಡೀ ಎತ್ತಿನ ಬಂಡಿ ನಡೆಸುವವನ ಮೆದುಳಿಗೆ ಆ ಎತ್ತಿನ ಬಂಡಿಯ ತಂತ್ರಜ್ಞಾನ ಯಾವ ಸವಾಲುಗಳನ್ನು ತಾನೇ ಒಡ್ಡಬಲ್ಲುದು? ಅದೇ ವ್ಯಕ್ತಿಯನ್ನು ವಿಮಾನ ನಡೆಸಲು ಹಚ್ಚಿದರೆ ಅವನ ಬುದ್ಧಿ ಪರಿಣಾಮಕಾರಿಯಾಗಿ ವಿಕಾಸವಾಗುತ್ತದೆ. ಬುದ್ಧಿಗೆ ಸವಾಲಾಗುವ ಪ್ರತಿಯೊಂದೂ ಬುದ್ಧಿಯನ್ನು ನಿರಂತರವಾಗಿ ಬೆಳೆಸುತ್ತದೆ. ಸಣ್ಣ ಪುಟ್ಟ ಯಂತ್ರಗಳಲ್ಲೇ ಸ್ಥಗಿತಗೊಂಡಿರುವ ಸಮಾಜಗಳು ಸಾಮಾಜಿಕವಾಗಿ, ಬೌದ್ಧಿಕವಾಗಿ ಬೆಳೆಯುವುದನ್ನು ಎಂದೋ ನಿಲ್ಲಿಸಿಬಿಟ್ಟಿವೆ.

ಬಹುತೇಕ ಗಾಂಧೀವಾದಿಗಳ ಇನ್ನೊಂದು ಪೂರ್ವಗ್ರಹವೆಂದರೆ ಶಾರೀರಿಕ ಶ್ರಮದಿಂದ ಬದುಕು ಸಾರ್ಥಕವಾಗಿ ರೂಪುಗೊಳ್ಳುತ್ತದೆ ಎಂಬುದು. ಬೆವರು ಸುರಿಸುವುದರಿಂದ ಯಾರ ಬದುಕೂ ಸಾರ್ಥಕವಾಗುವುದಿಲ್ಲ. ಬೆವರು ಸುರಿಸಿ ದುಡಿಯುವವನ ಪ್ರಜ್ಞೆಗೂ, ದುಡಿಮೆಯಿಂದ ಬಿಡುಗಡೆ ಹೊಂದಿದವನ ಪ್ರಜ್ಞೆಗೂ ನಡುವೆ ಅಪಾರವಾದ ವ್ಯತ್ಯಾಸ ಏರ್ಪಡುತ್ತದೆ. ನಮ್ಮ ಈವರೆಗಿನ ಎಲ್ಲ ಸಾಧನೆಗಳೂ ದುಡಿಮೆಯಿಂದ ಬಿಡುಗಡೆ ಹೊಂದಿದ ಸನ್ನಿವೇಶದಲ್ಲಿ ಸಂಭವಿಸಿದವು. ಅಥೆನ್ಸ್‌ನಲ್ಲಿ ವಿಜ್ಞಾನ, ತತ್ವಜ್ಞಾನ, ನೀತಿಶಾಸ್ತ್ರ, ಸಾಹಿತ್ಯಗಳು ತಮ್ಮ ಉತ್ತುಂಗಕ್ಕೆ ತಲುಪಲು ಕಾರಣಗಳಿದ್ದವು. ಅಲ್ಲಿನ ಸಮಾಜವು ದುಡಿಯುವ ಗುಲಾಮ ವರ್ಗ ಹಾಗು ಅಭಿಜಾತ ವರ್ಗಗಳೆಂದು ವಿಭಜನೆಯಾಗಿತ್ತು. ಅವರನ್ನು ಮಾರ್ಕ್ಸಿಸ್ಟರು ಬೂರ್ಷ್ವಾಗಳೆಂದು ಕರೆಯುತ್ತಿದ್ದರು. ಈ ಬೂರ್ಷ್ವಾ ವರ್ಗವೇ ಸಾಕ್ರಟೀಸ್, ಅರಿಸ್ಟಾಟಲ್, ಪ್ಲೇಟೋರಂತಹ ತತ್ವಜ್ಞಾನಿಗಳಿಗೆ ಜನ್ಮ ನೀಡಿದ್ದು. ಭಾರತದಲ್ಲಿಯೂ ಶ್ರಮದಿಂದ ಸಂಪೂರ್ಣ ಬಿಡುಗಡೆ ಹೊಂದಿದ್ದ ಬ್ರಾಹ್ಮಣರದ್ದು ಇದೇ ಕತೆ. ಶ್ರಮದಿಂದ ಬಿಡುಗಡೆ ಹೊಂದಿದ ಬ್ರಾಹ್ಮಣನ ಚಿತ್ತ ಸುಲಭವಾಗಿ ಮುಂದಿನ ಹಂತವನ್ನು ಪ್ರವೇಶಿಸಿತು. ಆದರೆ ಬೆವರಿನಿಂದ ಬಿಡುಗಡೆ ಹೊಂದಿದ ಜನ ಎಂದೊಡನೆಯೇ ಪ್ರಸನ್ನರ ಕಣ್ಣಿಗೆ ಅದೇಕೆ ’ಅರ್ಧ ಗಂಟೆ ಪೇಪರ್ ಓದುವ, ಟೀವಿ ನೋಡುವ, ಹೊಟೆಲ್‌ನಲ್ಲಿ ಮೋಜು ಮಾಡುವ,..’ ಜನ ಮಾತ್ರ ಬೀಳುವರೋ ತಿಳಿಯದು. ಯಂತ್ರಗಳಿಂದಾಗಿ ಇಡೀ ಮನುಷ್ಯಜಾತಿಯೇ ಹೀಗೆ ಶ್ರಮಸಾಧ್ಯ ದುಡಿಮೆಯಿಂದ ಮುಕ್ತವಾಗುವ ಕಾಲ ಇಂದು ಸನ್ನಿಹಿತವಾಗಿದೆ. ಯಂತ್ರಗಳ ಆವಿಷ್ಕರಣ ಮನುಷ್ಯನನ್ನು ದೈಹಿಕ ಶ್ರಮ ಹಾಗು ಬೆವರಿನ ದುಡಿಮೆಗಳಿಂದ ಬಿಡುಗಡೆಗೊಳಿಸಿವೆ.

’ಯಂತ್ರಗಳನ್ನು ಬಳಸಿಕೊಂಡು ಬಡವರನ್ನೂ ಶ್ರೀಮಂತರಾಗಿಸಲು ಹೊರಟಿದ್ದೇವೆ ನಾವು’ ಎನ್ನುವ ಅವರ ಮಾತುಗಳಲ್ಲಿ ಇರುವುದು ಐಷಾರಾಮೀ ಬದುಕಿನ ತಿರಸ್ಕಾರವೋ ಅಥವ ಯಂತ್ರದ್ವೇಷವೋ ಎಂಬುದು ಸ್ಪಷ್ಟವಿಲ್ಲ. ’ತಂತ್ರಜ್ಞಾನ ಹಾಗು ಪ್ರಗತಿ ವಿಚಾರಗಳಿಂದ ಬಡವರು ಶ್ರೀಮಂತರಾಗುವರೋ ನಾ ಕಾಣೆ,.. ಹಣ ಸಂಚಯನ, ಶ್ರೀಮಂತಿಕೆಗಳು ಕೆಟ್ಟಸಂಗತಿ ಎಂಬ ಪಾಪಪ್ರಜ್ಞೆಯೂ ಇಲ್ಲ’ ಎಂದು ಹೇಳುವ ಅವರ ಮಾತುಗಳಲ್ಲಿ ಯಂತ್ರ ವಿರೋಧದೊಂದಿಗೆ ಗಾಂಧಿ ನಂಬಿದ್ದ ಕೆಲವು ಕಂದಾಚಾರಗಳೂ ಗೋಚರಿಸುತ್ತವೆ. ನಿಜವೇನೆಂದರೆ, ಪಶ್ಚಿಮದಲ್ಲಿ ಕೈಗಾರಿಕೀಕರಣದ ನಂತರ ಅಗಾಧ ಶಕ್ತಿಯ ಯಂತ್ರಗಳು ಅಪಾರ ಪ್ರಮಾಣದ ಸಂಪತ್ತನ್ನು ಗುಡ್ಡೆ ಹಾಕಿದವು. ಯಂತ್ರಗಳು ಬರುತ್ತಲೇ ಮನುಷ್ಯ ಗುಲಾಮತನದಿಂದ ಮುಕ್ತನಾದ. ಇಂದು ಗುಲಾಮತನವಿಲ್ಲದೇ ಸಮಾಜ ಸಮೃದ್ಧವಾಗಿ ಬೆಳೆಯುವ ದಾರಿಗಳು ತೆರೆದುಕೊಂಡಿವೆ. ನಾವು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟರೆ ಇನ್ನು ಕೆಲವೇ ವರ್ಷಗಳಲ್ಲಿ ಕಾರ್ಮಿಕ ಎಂಬ ವರ್ಗವೇ ಮನುಷ್ಯಜಾತಿಯಿಂದ ಕಣ್ಮರೆಯಾಗಲಿದೆ, ಆಗಲೇ ಬೇಕು. ಯಂತ್ರಗಳಿಂದಾಗುವ ಕೆಲಸಗಳನ್ನು ಮನುಷ್ಯರ ಕೈಲಿ ಮಾಡಿಸುವುದು ನಿಜಕ್ಕೂ ಅಮಾನವೀಯತೆ. ದುಡಿಯುವ ಕೈಗಳೇ ಬದುಕನ್ನು ಕಟ್ಟುವುದು ಎಂಬ ತರಹದ ಹಳೆಯ ಗಾದೆಯ ಮಾತುಗಳನ್ನೇ ನಿಜವೆಂದು ನಂಬಿದರೆ ಮನುಷ್ಯನ ದೈಹಿಕ ಶ್ರಮ ಹಾಗು ಶಕ್ತಿಗಳು ಅವನ ಸೃಜನಶೀಲತೆ ಹಾಗು ಬುದ್ಧಿಗಳ ಮೇಲೆ ಸವಾರಿ ಮಾಡಿ ನಾವು ಮತ್ತೆ ಶಿಲಾಯುಗದತ್ತ ಪಯಣಿಸಬೇಕಾಗುತ್ತದೆ. ಇಂದು ನಮಗೆ ಬೇಕಾಗಿರುವುದು ಗ್ರಾಮಸ್ವರಾಜ್ಯವಲ್ಲ, ಈಗ ನಮಗೆ ತುರ್ತಾಗಿ ಕೋಟ್ಯಂತರ ಹಸಿದ ಹೊಟ್ಟೆಗಳನ್ನು ಒಂದೇ ಸಲಕ್ಕೆ ತುಂಬಬಲ್ಲ ಸಾಧನಗಳ ಅವಶ್ಯಕತೆ ಇದೆ. ಈ ಹಸಿವು ಬಡತನಗಳಿಗೆ ಯಂತ್ರಗಳೇ ನೇರ ಮದ್ದು, ಯಂತ್ರಗಳ ನೆರವಿನಿಂದ ಹಳ್ಳಿಗಳಲ್ಲಿ ಸಮರೋಪಾದಿಯಲ್ಲಿ ಕೃಷಿ ಚಟುವಟಿಕೆಗಳನ್ನು ನೆರವೇರಿಸಲು ಸಾಧ್ಯ ಎಂದು ಪಶ್ಚಿಮದ ದೇಶಗಳು ಸಾಬೀತು ಮಾಡಿವೆ. ಯಂತ್ರಗಳನ್ನು ನಂಬಿ ಕೆಲವು ಮಂದಿ ಸೋಮಾರಿಗಳಾಗಿಬಿಡುವರು ಎಂದು ಯಂತ್ರಗಳನ್ನೇ ಕಳಚಿಡುವ ಆಲೋಚನೆ ಮಾಡುವುದು ನಿಜಕ್ಕೂ ಅಚಾತುರ್ಯವಾಗುತ್ತದೆ.

ಯಂತ್ರಗಳಿಂದ ಹಾನಿ ಇಲ್ಲದೇ ಇಲ್ಲ. ಯಾವುದೇ ಹೊಸ ಆವಿಷ್ಕರಣಗಳು ಹೊಸ ಸಮಸ್ಯೆಗಳನ್ನು ತಂದೇ ತರುತ್ತದೆ, ದೊಡ್ಡ ಆವಿಷ್ಕರಣಗಳು ದೊಡ್ಡ ಸಮಸ್ಯೆಗಳನ್ನೇ ತಂದು ಹಾಕುತ್ತದೆ. ಸಮಸ್ಯೆ ದೊಡ್ಡದೆಂದು ಹೆದರಿ ಆವಿಷ್ಕರಣದಿಂದಲೇ ಹಿಂದೆ ಸರಿಯುವ ಚಿಂತನೆ ಮಾಡುವುದು ಒಂದು ಬಗೆಯ ಮನೋದೌರ್ಬಲ್ಯ, ಆ ಲಕ್ಷಣವನ್ನು ಮನೋವಿಜ್ಞಾನಿಗಳು ’ರಿಗ್ರೆಷನ್’ ಎಂದು ಹೆಸರಿಸುತ್ತಾರೆ. ರಿಗ್ರೆಷನ್ ಎಂದರೆ ಹಿಂದಕ್ಕೆ ಹೋಗುವುದು, ಶಿಲಾಯುಗ, ಬುಡಕಟ್ಟು ಪದ್ಧತಿಗಳೇ ಚೆಂದ ಎನ್ನುವಂತಹ ನಾಸ್ಟಾಲ್ಜಿಯಾ. ಗಾಂಧಿಯ ಬಹುತೇಕ ವಿಚಾರಗಳು ಈ ಬಗೆಯ ’ನಾಸ್ಟಾಲ್ಜಿಯಾ’ದಿಂದ ಕೂಡಿತ್ತು. ಹಿಂದೆ ದೇಶದಾದ್ಯಂತ ಎರಡೇ ವಿಶ್ವವಿದ್ಯಾಲಯಗಳಿದ್ದವು. ಇಂದು ನೂರಾರು ವಿಶ್ವವಿದ್ಯಾಲಯಗಳಿವೆ, ಒಂದೊಂದರಲ್ಲೂ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಇಂದು ಜ್ಞಾನ ಎಷ್ಟು ವೇಗವಾಗಿ ನಿರ್ಮಾಣವಾಗುತ್ತಿದೆ ಎಂದರೆ ಅದನ್ನು ನಿಭಾಯಿಸಲು ಈಗಿನ ವಿಶ್ವವಿದ್ಯಾಲಯಗಳಿಗೂ ಸಾಧ್ಯವಾಗುತ್ತಿಲ್ಲ. ಒಂದೇ ಕ್ಯಾಂಪಸ್ಸಿನಲ್ಲಿ ಇಪ್ಪತ್ತು ಸಾವಿರ ವಿದ್ಯಾರ್ಥಿಗಳು ಒಟ್ಟಿಗೆ ಓದುವಂಥ ಪರಿಸ್ಥಿತಿ ಮನುಷ್ಯನ ಇತಿಹಾಸದಲ್ಲಿ ಹಿಂದೆಂದೂ ನಿರ್ಮಾಣವಾಗಿರಲಿಲ್ಲ. ಇಂಥ ವ್ಯವಸ್ಥೆ ನಿಸ್ಸಂಶಯವಾಗಿ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ಹುಟ್ಟಿಸುತ್ತದೆ. ಪರಂಪರೆಯಿಂದ ಪರಿಹಾರ ಸಿಗದ ಈ ಬಗೆಯ ಸಮಸ್ಯೆಗಳಿಂದ ಹಿಂದೆ ಸರಿಯುವ ಗಾಂಧಿ ಹಿಂದ್ ಸ್ವರಾಜ್‌ನಲ್ಲಿ ’ವಿಶ್ವವಿದ್ಯಾಲಯಗಳನ್ನೆಲ್ಲ ಮುಚ್ಚಿ ಈ ಯುವಜನತೆಯನ್ನು ಹಳ್ಳಿಗಳಿಗೆ ಕಳುಹಿಸಿ, ಮೂಲಭೂತ ಶಿಕ್ಷಣ ನೀಡಿ’ ಎಂದು ಹೇಳುತ್ತಾರೆ. ಅವರು ತಮ್ಮ ಸ್ವಂತ ಮಕ್ಕಳನ್ನೂ ವಿಶ್ವವಿದ್ಯಾಲಯದ ಮೆಟ್ಟಿಲುಗಳನ್ನೇರಲು ಬಿಟ್ಟವರಲ್ಲ. ಅವರ ದೃಷ್ಟಿಯಲ್ಲಿ ಇಂದಿನ ಯುವಪೀಳಿಗೆ ಬಡಗಿ ಕೆಲಸ, ನೇಯ್ಗೆ, ಚಮ್ಮಾರಿಕೆ, ಇಂಥವುಗಳನ್ನು ಕಲಿತರೆ ಸಾಕು. ಹೊಸ ಸಮಸ್ಯೆಗಳಿಗೆ ಉತ್ತರವಿಲ್ಲದಾಗ ಮಾತ್ರ ನಾವು ಯಂತ್ರಗಳನ್ನು ಕಳಚಿಟ್ಟು ಹಳೆಯದರ ಮೊರೆ ಹೋಗುವುದು.

ಯಂತ್ರ ನಾಗರೀಕತೆ ಹೊಸ ಸಮಸ್ಯೆಗಳನ್ನು ತರುವ ಮಾತ್ರಕ್ಕೆ ಅದನ್ನು ಪ್ರಸನ್ನರು ಸೂಚಿಸುವಂತೆ ಅನುಮಾನದಿಂದ ನೋಡಬೇಕಾಗಿಲ್ಲ. ಅದರಿಂದ ಉಂಟಾಗುವ ತೊಡಕುಗಳನ್ನು ಬಿಡಿಸಿಕೊಂಡರೆ ಸಾಕು. ಹಾಗೆ ಅನುಮಾನಿಸುವುದರಿಂದ ನಾವು ಮಧ್ಯಯುಗಕ್ಕೋ, ಗಾಂಧೀ ಸೂಚಿಸುವ ತ್ರೇತಾಯುಗದ ರಾಮರಾಜ್ಯಕ್ಕೋ ಹಿಂದಿರುಗುವ ಅಪಾಯವಿದೆ. ಜನರ ಭ್ರಷ್ಟತೆಗೆ ಯಂತ್ರಗಳು ಕಾರಣವಲ್ಲ. ಮನುಷ್ಯನೊಳಗಿನ ಕೇಡು ಭ್ರಷ್ಟತೆ ಸೋಗಲಾಡಿತನಗಳಿಗೆ ಸಾವಿರಾರು ವರ್ಷಗಳ ಸಂಸ್ಕಾರವಿದೆ. ಹೀಗಿರುವಾಗ ೧೫೦-೨೦೦ ವರ್ಷಗಳ ಹಿಂದಷ್ಟೇ ಹುಟ್ಟಿದ ಬಡಪಾಯಿ ಯಂತ್ರಗಳೇ ನಮ್ಮ ಬದುಕಿನ ಎಲ್ಲ ಅನಿಷ್ಟಗಳಿಗೂ ಕಾರಣವೆನ್ನುವುದು ಅಸಂಗತ, ಕೆಲವು ಸಲ ಇದು ಆತ್ಮವಂಚನೆಗೂ ಕಾರಣವಾಗುತ್ತದೆ. ಭ್ರಷ್ಟರಾಗುವ ಜನ ಯಾವುದನ್ನಾದರೂ ಬಳಸಿಕೊಂಡು ಭ್ರಷ್ಟರಾಗುವರು. ಪ್ರಸನ್ನರು ಪ್ರಸ್ತಾಪಿಸುವ ಸಮಾಜವಾದ, ಧರ್ಮ, ರಂಗಭೂಮಿ, ಸಾಹಿತ್ಯ ಎಲ್ಲವೂ ಇಂದು ಭ್ರಷ್ಟರನ್ನು ಹುಟ್ಟಿಸುವ ಯಂತ್ರಗಳಾಗಿಲ್ಲವೆ? ಹೀಗಿರುವಾಗ ಯಾವ ಯಂತ್ರಗಳನ್ನು ನಾವು ಕಳಚಿಡಬೇಕೆಂದು ಅವರು ಕರೆ ನೀಡುವುದು? ’ಇಂದು ಮನರಂಜನೆಯೂ ಒಂದು ಬೃಹತ್ ಕೈಗಾರಿಕೆಯಾಗಿದೆ’ ಎಂಬಿವೇ ಮೊದಲಾದ ಅವರ ವಿಚಾರಗಳು ಸುಳ್ಳಲ್ಲ. ಆದರೆ ಅದಕ್ಕೆ ತಂತ್ರಜ್ಞಾನ ಹೊಣೆಯಲ್ಲ. ಎಲ್ಲ ಕೇಡಿಗೂ ತಂತ್ರಜ್ಞಾನವನ್ನು ಹೊಣೆಯಾಗಿಸಿ ಅದಕ್ಕೆ ಬಹಿಷ್ಕಾರ ಹಾಕುವುದು ನಿಜಕ್ಕೂ ಆತ್ಮಹತ್ಯಾತ್ಮಕವಾದುದು. ಯೇಸುಕ್ರಿಸ್ತನ ಕಾಲದಿಂದ ಈತನಕ ಎಷ್ಟು ಪ್ರಮಾಣದ ಜ್ಞಾನ ಉತ್ಪತ್ತಿಯಾಯಿತೋ ಅದನ್ನು ಆಧುನಿಕ ತಂತ್ರಜ್ಞಾನ ನೂರೈವತ್ತು ವರ್ಷಗಳಲ್ಲೇ ಸಾಧಿಸಿದೆ. ’ಇಂತಹ ಪವಾಡ ಸದೃಶ ಆವಿಷ್ಕರಣಗಳು ಲೋಭಿಗಳ ಪಾಲಿನದಾಗಬಾರದು, ಅದರ ನೆರವಿನಿಂದ ಒಂದು ಹೊಸ ಸಮಾಜವನ್ನು, ಹೊಸ ಸಂಸ್ಕೃತಿಯನ್ನು ರೂಪಿಸಬೇಕು’ ಎಂದು ಕಾರ್ಲ್‌ಮಾರ್ಕ್ಸ್‌ನಂಥವರ ಕಾಳಜಿಯಾಗಿತ್ತೇ ವಿನಃ ಅದನ್ನು ಕಳಚಿಡುವ, ಬಹಿಷ್ಕರಿಸುವ ದುಡುಕುತನವನ್ನು ಅವರು ತೋರಿಸಲಿಲ್ಲ. ಹಾಗೆ ಕಳಚಿಡುವುದರಿಂದ ಬಡವನ ಹೊಟ್ಟೆಯ ಕಿಚ್ಚು ತಣಿವುದಲ್ಲದೆ ಅವನ ತುತ್ತಿನ ಚೀಲ ತುಂಬದು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಮಸ್ಕಾರ, ಯ‌ಂತ್ರಗಳನ್ನು ಕಳಾಚೋಣ ಬನ್ನಿ ಒಂದು ಚಿಂತನೆಗೆ ಹಚ್ಚುವ ಪುಸ್ತಕ. ಇಲ್ಲಿ ತಂತ್ರಜ್ನಾನವನ್ನು ಕಳಚಬೇಕೆಂಬ ಚಿಂತನೆಗಿಂತ ಹೊಸ ‍ ಮನುಷ್ಯನ ಪರಿಶ್ರಮವೇ ಇಲ್ಲದ ಯಂತ್ರಗಳನ್ನು ಕಳಚುವ ಬಗ್ಗೆ ಚಿಂತನೆ ಇದೆ. ಕುಂಬಾರನ ಬಂಡಿಯೂ, ಚಮ್ಮಾರನ ದಬ್ಬಣವೂ, ನೇಯ್ಗೆಯವನ್ನ ಕೈ ಮಗ್ಗವೂ ಯಂತ್ರವೇ. ಇವುಗಳ ಬಗ್ಗೆ ಬಹುಶ: ಯಾರ ತಕರಾರೂ ಇರಲಿಕ್ಕಿಲ್ಲ. ಆದರೆ ಇಲ್ಲಿ ಬರುವ ಪ್ರಶ್ನೆ ‍ ಇಂದಿನ ಆಧುನಿಕ ಯಂತ್ರಗಳ ಗುಲಾಮರಾಗೇ ನಾವು ಬದುಕಬೇಕೆ ಎಂಬುದು. 'ಹಿಂದ್ ಸ್ವರಜ್'ನ ಕನಸಿನ ಜೀವನವನ್ನು ಇವತ್ತು ಬಾಳಲು ಅಸಾಧ್ಯ ಎಂಬುದು ಎಷ್ಟು ಸತ್ವವೋ ಇಂದಿನ ಯಂತ್ರ ಗುಲಾಮಗಿರಿಯಲ್ಲಿ ಇನ್ನು ಹೆಚ್ಚು ವರ್ಷ ಬದುಕಲಾರೆವೂ ಎಂಬುದೂ ಅಷ್ಟೇ ಸತ್ಯ. ಇಲ್ಲಿ ಯಂತ್ರದ ಬಗೆಗಿನ ದ್ವೆಷಕ್ಕಿಂತ ಪ್ರಪಂಚದ ಸಮಗ್ರ ಅಳಿವು ಉಳಿವಿನ ಪ್ರಶ್ನೆ ಇದೆ. ಮನುಷ್ಯನ ಲೋಭ, ಭಷ್ಟತೆ ಇವುಗಳು ಕಳೆದ 100_200 ವರ್ಷಗಳಲ್ಲಿ ಬಂದಿಲ್ಲವಾದರೂ ಮನುಷ್ಯ ಉಪಯೋಗಿಸುವ ರೀತಿ ಮಾತ್ರ ದಿಗಿಲು ಹುಟ್ಟಿಸುವಂತಹುದು. ಮಿಲಿಯನ್ ಗಟ್ಟಲೆ ವರ್ಷದಿಂದ ರೂಪುಗೊಂಡ ಖನಿಜಗಳು, ಬೆಟ್ಟ, ಗುಡ್ಡಗಳು, ಕಾಡು, ಇಂಧನ ಮೂಲಗಳು ಇತ್ಯಾದಿಗಳನ್ನು ಕೆಲವು ದಶಕಗಳಲ್ಲೇ ನಿರ್ನಾಮ ಮಾಡುವ ಶಕ್ತಿ ಬಂದದ್ದು ಯಂತ್ರಗಳಿಂದಲೇ. ಬಾರತಂದಹ ದೇಶದಲ್ಲಿ ಯಂತ್ರದ ಗುಲಾಮರಾಗಿ, ನಗರೀಕರಣಕ್ಕೆ ಮುಖ ಮಾಡಿ ನಿಂತರೆ ನಮ್ಮ ಮುಂದಿನ ಜನಾಂಗಕ್ಕೆ ತಿನ್ನಲು ಸಸ್ಯ ಜನ್ಯವಾದದ್ದೇನೂ ಸಿಗದೇ ಹೋಗಬಹುದು. ಯಂತ್ರ ನಾಗರೀಕತೆ ಇಂದು ಸ್ವಲ್ಪ ಮಟ್ಟಿಗೆ ನಿರುದ್ಯೋಗವನ್ನು ತಗ್ಗಿಸುತ್ತಿರಬಗುದಾದರೂ ಅದು ಖಂಡಿತ ನಿರುದ್ಯೋಗವನ್ನು ಹೆಚ್ಚಿಸುತ್ತದೆ. ಸಾವಿರಾರು ಕೈಗಳು ಒಂದು ವರ್ಷ‌ ಮಾಡವಬಹುದಾದ ನೇಯ್ಗೆಯನ್ನು ಇಂದು ಒಂದು ಯಂತ್ರ ಒಂಡು ದಿನದಲ್ಲಿ ಮಾಡುತ್ತಿರುವುದಾದರೆ 'ಅಭಿವ್ಱುದ್ದಿ' ಹೊಂದುತ್ತಿರುವವರು ಯಂತ್ರದ ತಯಾರಕ ಹಾಗೂ ಕಾರ್ಖಾನೆಯ ಮಾಲೀಕ ಮಾತ್ರ. ತ‌ಂತ್ರಜ್ನಾನಗಳು ಲೋಭಿಗಳ ಪಾಲಾಗಬೇರದೆಂದು ಹೇಳಿದರೂ ಅವುಗಳು ಇಂದು ಲೋಭಿಗಳಿಗೇ ವರವಾಗಿರುವುದ್ ಪರಮ ಸತ್ಯ. ಯ‌ಂತ್ರಗಳು ಖಂಡಿತ ಇಂದು ಬಡವರ ತುತ್ತಿನಚೀಲವನ್ನು ಖಂಡಿತ ತುಂಬುತ್ತಿಲ್ಲ ‍ ಮುಂದಿಗೂ ತುಂಬಲಾರವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿರುದ್ಯೋಗ, ಹಸಿವು, ಹಿಂಸೆ ಹೀಗೆ ಅನೇಕ ಸಮಾಜಿಕ ಸಮಸ್ಯೆಗಳಿಗೆ ಉತ್ತರವನ್ನ ಹುಡುಕುವಲ್ಲಿ, ಪ್ರಸನ್ನರ ಚಿಂತನೆ ಭಾವನಾತ್ಮಕವಾದದ್ದು, ಹಸಿದ ಬಡವರ ಮತ್ತು ತಿಂದದ್ದು ಅರಗದವ್ರ ಬಗೆಗಿನ ನಾಲ್ಕು ಗೊಡೆಗಳೊಳಗೆ ಅವಿತ ಮಾತುಗಳು, ಅವು ಬರಿ ಮಾತುಗಳು. ಈ ರೀತಿಯ ಚರ್ಚೆಗಳು ಬರಿ ಪದಗಳ ಸರ್ಕಸ್ಸು. ಸಮಾಜದ ವರ್ಗ ಹಿತಾಸಾಕ್ತಿ ಈ ಎಲ್ಲಾ ಸಮಸ್ಯೆಗಳ ಬೇರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.