ಪಿಕೆ ನಾಟ್ ಫುಲ್ಲಿ ಓಕೆ.ಯಾಕೆ. .?

5

ಪಿಕೆ ನಾಟ್ ಫುಲ್ಲಿ ಓಕೆ.ಯಾಕೆ. .?

ಪಿಕೆ ಚಿತ್ರವನ್ನು ಹಿಂದೂ ಸಂಘಟನೆಗಳು ವಿರೋಧಿಸುತ್ತಿವೆ ಅಂದಾಗ ಅದಕ್ಕೆ ಕಾರಣ ಸ್ಪಷ್ಟವಾಗಿರಲಿಲ್ಲ.ಕೆಲವೊಂದು ವಿಮರ್ಶೆಗಳು ಓದೋಕೆ ಸಿಕ್ಕಿತ್ತಾದರು ಅದು ಗೊಂದಲಮಯವಾಗಿ ಕಂಡಿತು. ಬಿಹಾರದಲ್ಲಿ ನಿತೀಶ್,ಉತ್ತರಪ್ರದೇಶದಲ್ಲಿ ಅಖಿಲೇಶ್ 'ಪಿಕೆ'ಚಿತ್ರಕ್ಕೆ ತೆರಿಗೆ ಮುಕ್ತ ಅಂತ ಘೋಷಿಸಿದಾಗ ಚಿತ್ರ ಹಿಂದೂ ವಿರೋಧಿ ಅಂಶಗಳನ್ನು ಒಳಗೊಂಡಿದೆ ಅನ್ನುವ ಅಂಶ ಸ್ಪಷ್ಟವಾಯಿತು.ಪರಿಣಾಮ ಚಿತ್ರ ನೋಡಬೇಕೆನ್ನುವ ಕುತೂಹಲ ಹೆಚ್ಚಾಯಿತು.ಅದೃಷ್ಟಕ್ಕೆ ನನ್ನ ಗೆಳೆಯ ಅಧಿಕೃತ ವೆಬ್ಸೈಟ್ ನಿಂದ ಚಿತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದ.ಚಿತ್ರ ನೋಡಿದ ಮೇಲೆ ನನಗನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ.

ಚಲನಚಿತ್ರವೊಂದು ಕೇವಲ ಮನರಂಜನೆಯ ಉದ್ದೇಶದಿಂದ ನಿರ್ಮಾಣವಾದರೆ ಅದನ್ನು ಪ್ರಶ್ನಿಸುವ ಅಗತ್ಯವಿರುವುದಿಲ್ಲ.ಆದರೆ ಅದು ಸಾಮಾಜಿಕ ಅಥವಾ ಧಾರ್ಮಿಕ ವ್ಯವಸ್ಥೆಯನ್ನು ವಿಡಂಬನೆ ಮಾಡುತ್ತದೆಯೆಂದಾದರೆ ಅದನ್ನು ಪ್ರಶ್ನಿಸಬೇಕಾಗುತ್ತದೆ.ಯಾಕೆಂದರೆ ಸಿನೆಮಾ ನಿರ್ದೇಶಕರುಗಳೇನು ದೇವರಲ್ಲ.ವಿಡಂಬಿಸುವ ಭರದಲ್ಲಿ ತಾವುಗಳು ಕೂಡ ಎಡವಿರುತ್ತಾರೆ.ಒಂದು ಧರ್ಮವನ್ನು ಅದರ ಸಂಸ್ಕೃತಿಯನ್ನು ಬೆತ್ತಲುಗೊಳಿಸಲು ಹೋಗಿ ತಾವೇ ಸ್ವತಃ ಬೆತ್ತಲಾಗುವುದೂ ಇದೆ.

ಪಿಕೆ ಚಲನಚಿತ್ರವು ದೇವರು,ಧರ್ಮ,ಭೂಮಿಯ ಮೇಲಿನ ವಿವಿಧ ಸಂಸ್ಕೃತಿಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿವೆ.ಧರ್ಮ,ದೇವರು ಮಾಡಿದ್ದಲ್ಲ.ದೇವರಿಗೆ ಯಾವುದೇ ಧರ್ಮವಿಲ್ಲ.ದೇವರ ಮ್ಯಾನೆಜರ್ಗಳಂತಿರುವ ಪುರೋಹಿತರಿಂದ ಢಾಂಬಿಕ ಆಚರಣೆಗಳೆಂಬ ' ರಾಂಗ್ ನಂಬರ್'ಗಳು ಸೃಷ್ಟಿಯಾಗಿದೆ.ಇಂತವರಿಂದ ಸ್ಥಾಪಿತವಾದ ಧರ್ಮ ಇಂದು ಜನರ ನಡುವೆ ದೊಡ್ಡ ಕಂದಕವನ್ನು ಸೃಷ್ಠಿಸಿ,ಪರಸ್ಪರ ವೈಷಮ್ಯವನ್ನು ಬೆಳೆಸಿದೆ.ಜನರು ಧರ್ಮದ ನಿಜವಾದ ಆಶಯದ ಬದಲಿಗೆ ಅದರ ಅರ್ಥವಿಲ್ಲದ ಆಚರಣೆಗಷ್ಟೆ ಮಹತ್ವ ಕೊಡುತ್ತಿದ್ದಾರೆ ಎಂಬುದು ಪಿಕೆ ಚಿತ್ರದ ಒಟ್ಟಾರೆ ಸ್ವಾರಸ್ಯ.

ಇಷ್ಟೇ ಆಗಿದ್ದರೆ ಈ ಚಿತ್ರವನ್ನು ಹಿಂದೂಪರ ಸಂಘಟನೆಗಳು ವಿರೋಧಿಸುತ್ತಿರಲಿಲ್ಲವೇನೋ.ಚಿತ್ರ,ಹಿಂದೂಗಳ ಭಗವಾನ್ ಮತ್ತು ಮಂದಿರದ ಪರಿಕಲ್ಪನೆಯ ಬಗ್ಗೆ ಕುಹಕವಾಡಿದರೆ ಮುಸ್ಲಿಮರ ಅಲ್ಲಾ ಮತ್ತು ಮಸೀದಿ ಹಾಗೂ ಕ್ರೈಸ್ತರ ಜೀಸಸ್ ಮತ್ತು ಚರ್ಚ್ ವ್ಯವಸ್ಥೆಯ ಬಗ್ಗೆ ಜಾಣ ಮೌನ ವಹಿಸುತ್ತದೆ.ಅನ್ಯಗ್ರಹದಿಂದ ಬಂದ ಮನುಷ್ಯನಿಗೆ ಹಿಂದೂ ಧರ್ಮದಲ್ಲಿ ಮಾತ್ರ ಲೋಪದೋಷಗಳು ಕಂಡುಬಂದದ್ದು ನಿರ್ದೇಶಕರ ಪ್ರಗತಿಪರ ಜಾತ್ಯತೀತ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ. ತಾನೊಬ್ಬ ನಿಷ್ಪಕ್ಷಪಾತ ನಿರ್ದೇಶಕ ಅಂತ ಪೋಸು ಕೊಡಲು ಇತರೆ ಧರ್ಮಗಳ ಲೋಪವನ್ನು ಅಲ್ಲೊಂದು ಚೂರು ಇಲ್ಲೊಂದು ಚೂರು ತೋರಿಸುವ ಪ್ರಯತ್ನ ಮಾಡಿದ್ದರೂ ಅದರಲ್ಲಿ ವಿಫಲರಾಗಿದ್ದಾರೆ.ಇಲ್ಲೇ ಹಿಂದೂಗಳಿಗೆ ಇದು ಅರಬ್ನಿಂದ ದೇಣಿಗೆ ಪಡೆದು ಹಿಂದೂ ಧರ್ಮದ ವಿರುದ್ಧವಾಗಿ ನಿರ್ಮಿಸಿದ ಚಿತ್ರ ಅಂತ ಅನುಮಾನ ಬರೋದು.ಭಾರತೀಯರನ್ನು ಕಳ್ಳರನ್ನಾಗಿ,ಹಗಲು ದರೋಡೆ ಮಾಡುವವರನ್ನಾಗಿ ಚಿತ್ರಿಸಿ ಕಥಾನಾಯಕಿ ಜಗ್ಗುವನ್ನು ಪ್ರೀತಿಸಿದ ಪಾಕಿಸ್ತಾನದ ಸರ್ಫರಾಜ್ ನನ್ನು ನಂಬಿಕೆಗೆ ಅರ್ಹನಾದ ಪ್ರಾಮಾಣಿಕ ವ್ಯಕ್ತಿಯಾಗಿ ಬಿಂಬಿಸಿರೋದು ಈ ಚಿತ್ರಕ್ಕೆ ಐಎಸ್ ಐ ನಿಂದಲೂ ಹಣ ಹರಿದು ಬಂದಿದೆ ಅನ್ನೊ ಸುಬ್ರಹ್ಮಣ್ಯಮ್ ಸ್ವಾಮಿಯವರ ವಾದಕ್ಕೆ ಪುಷ್ಠಿಕೊಡುವಂತೆ ಮಾಡಿದೆ.

ಹಿಂದೂಧರ್ಮದ ಆಚರಣೆಯ ಬಗ್ಗೆ ಹಿರಾನಿ ಎತ್ತಿರುವ ಕೆಲವು ಪ್ರಶ್ನೆಗಳನ್ನು ಗಮನಿಸೋಣ

ಅ)ದೇವರಹುಂಡಿಗೆ ಹಣ ಹಾಕಿದರೆ ಅದು ದೇವರಿಗೆ ಫೀಸು ಕೊಟ್ಟಂತೆ!!
ದೇವರಹುಂಡಿಗೆ ಹಣ ಹಾಕೋದರ ಹಿಂದೆ ದೊಡ್ಡ ಇತಿಹಾಸವೆ ಇದೆ.ಅದನ್ನು ಈ ಲಿಬೆರಲ್ ಹಿರಾನಿ ಅರ್ಥಮಾಡಿಕೊಂಡಿಲ್ಲ ಅಷ್ಟೇ.ದೇವಸ್ಥಾನ, ಮಠಮಾನ್ಯ,ಆಶ್ರಮಗಳಿಗೆ ಜನ ಹಣ ಸುರಿಯೋದರ ಹಿಂದೆ ಒಂದು ಸಾಮಾಜಿಕ ಕಳಕಳಿ ಇರುತ್ತದೆ.ಹಿಂದೂ ಧಾರ್ಮಿಕ ಸಂಸ್ಥೆಗಳು ಶತಶತಮಾನದಿಂದ ಅಕ್ಷರದಾಸೋಹ,ಅನ್ನದಾಸೋಹದಂತಹ ಸಾಮಾಜಿಕ ಕಾರ್ಯವನ್ನು ಮಾಡುತ್ತ ಬರುತ್ತಿದೆ.ಜನರು ಸಾಮಾಜಿಕ ಕಾರ್ಯವನ್ನೇ ದೇವರ ಕಾರ್ಯವೆಂದು ನೆನೆದು ಅಲ್ಲಿಗೆ ಹಣ ಹಾಕುತ್ತಾರೆಯೇ ಹೊರತು ಫೀಸು ಅಂತ ಅಲ್ಲ.ಈಗಲೂ ಸರ್ಕಾರಗಳು ಮುಜರಾಯಿ ಇಲಾಖೆಯ ಮೂಲಕ ದೇವಸ್ಥಾನದಲ್ಲಿ ಸಂಗ್ರಹವಾಗುವ ಸಂಪತ್ತನ್ನು ಸಾಮಾಜಿಕ ಕಾರ್ಯಕ್ಕೆ ಬಳಸುತ್ತಿದೆ.ದೇವಸ್ಥಾನಕ್ಕೆ ಜನ ಹಣ ಹಾಕೋದು ನಿಮ್ಮ ಕಣ್ಣು ಕೆಂಪಾಗಿಸಿದೆ.ಅದೇ ಸರಕಾರ ಚರ್ಚ್ ಮಸೀದಿಗಳಿಗೆ ಹಣ ಹಾಕುತ್ತಲ್ವ ಅದು ನಿಮ್ಮ ಫೀಸಿನ ವ್ಯಾಪ್ತಿಯಲ್ಲಿ ಬರೋದಿಲ್ಲವೆ ಸ್ವಾಮಿ. .?ಇನ್ನೂ ಪೂಜಾರಿ ತಟ್ಟೆಗೆ ಹಾಕುವ ಹಣವನ್ನು ಲಂಚ ಅನ್ನೋ ರೀತಿಯಲ್ಲಿ ಬಿಂಬಿಸಿದ್ದೀರಿ.ಪ್ರತಿದಿನ ದೇವರ ಮೂರ್ತಿಯನ್ನು ತೊಳೆದು ಅದನ್ನು ಅಲಂಕರಿಸಿ,ದೇವಸ್ಥಾನವನ್ನು ಭಕ್ತಿಯೋಗ್ಯ ಸ್ಥಳವನ್ನಾಗಿ ಇಟ್ಟುಕೊಳ್ಳುವ ಪೂಜಾರಿಗೆ ತಮ್ಮ ಕಡೆಯಿಂದ ಕಿರು ಕಾಣಿಕೆ ಇರಲಿ ಅಂತ ಜನ ಹಣ ಹಾಕುತ್ತಾರೆಯೇ ಹೊರತು ಲಂಚ ಅಂತ ಅಲ್ಲ.ಪ್ರಗತಿಪರ ಕಣ್ಣುಗಳಿಂದ ನೋಡುವ ನಿಮಗೆ ಅದು ಫೀಸು,ಲಂಚವಾಗಿ ಕಾಣುತ್ತದೆ.
ಆ)ದೇವರನ್ನು ಪ್ರಾರ್ಥಿಸಲು ಮೂರ್ತಿಯ ಅಗತ್ಯವಿಲ್ಲ!!
ನಮ್ಮ ವೇದಗಳು ಕೂಡ ದೇವರು ನಿರಾಕಾರ ಅಂತ ಹೇಳುತ್ತವೆ.ಆದರೆ ಮೂರ್ತಿಪೂಜೆ ನಿಷಿದ್ಧ ಎಂಬುದಾಗಿ ಹೇಳಿಲ್ಲ.ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು.ಅದೇನೆಂದರೆ ಯೋಗಿಗಳು ಮತ್ತು ಸಾಧಕರು ಯಾವುದೇ ಮಾಧ್ಯಮ ಇಲ್ಲದಿದ್ದರು ಕೇವಲ ತಮ್ಮ ಮನೋಬಲದಿಂದ ದೇವರ ಜೊತೆ ಏಕಮುಖ ಸಂವಹನ ಮಾಡುತ್ತಾರೆ.ಆದರೆ ಸಾಮಾನ್ಯ ಜನರಿಗೆ ಇದು ಕಷ್ಟಸಾಧ್ಯ.ಹೀಗಾಗಿ ಅವರು ತಮ್ಮ ಕಲ್ಪನೆಗೆ ಬಂದ ಆಕಾರಕ್ಕೆ ರೂಪವನ್ನು ಕೊಟ್ಟು ಶಿಲೆಯಲ್ಲಿ,ಲೋಹದಲ್ಲಿ,ರೇಖಾಚಿತ್ರದಲ್ಲಿ ಅಭಿವ್ಯಕ್ತಗೊಳಿಸಿ ಅದನ್ನು ಪೂಜಿಸಲು ಪ್ರಾರಂಭಿಸಿದರು.ದೇವರ ಜೊತೆ ಸಂವಹನ ಮಾಡಲು,ತನ್ನ ಭಕ್ತಿಯನ್ನು ಪ್ರಕಟಪಡಿಸಲು ಅವರಿಗೊಂದು ಸಾಧನಬೇಕಿತ್ತು.ಅದರ ಫಲವೇ ಈ ಮೂರ್ತಿ.ಕ್ರಿಶ್ಚಿಯನ್ನರು ಶಿಲುಬೆಯನ್ನು ಕೊರಳಿಗೆ ಹಾಕೋದರ ಹಿಂದೆ,ಮೂರ್ತಿಪೂಜೆಯನ್ನು ಬಲವಾಗಿ ವಿರೋಧಿಸುತ್ತಿದ್ದ ಬೌದ್ಧರು ಕೊನೆಗೆ ಬುದ್ಧನಮೂರ್ತಿಯಲ್ಲಿ ಬಂಧಿಯಾಗಿರೋದರ ಹಿಂದೆ ಇಂತಹದ್ದೆ ಕಾರಣವಿದೆ.ಮೂರ್ತಿಯ ನಿರ್ಮಾಣವನ್ನು ವಿರೋಧಿಸುವ ಇಸ್ಲಾಮ್ ಧರ್ಮವೂ ಕೂಡ ಪ್ರಾರ್ಥನಾ ಮಂದಿರವನ್ನು ನಿರ್ಮಾಣ ಮಾಡುತ್ತದೆ.ಮಸೀದಿಗೆ ಹೋಗಿ ನಮಾಜ್ ಮಾಡಿದರೆ ಏನೋ ಒಂದು ರೀತಿಯ ಸಂತೃಪ್ತಿ ಸಿಗುತ್ತದೆ ಎಂಬ ಭಾವ ಅವರಿಗೆ.ಇಂತಹ ಭಾವವೇ ಮೂರ್ತಿಪೂಜೆಗೆ ಪ್ರೇರಣೆಯಾಗಿರೋದು.ಹಿರಾನಿಯವರೇ ನಾಳೆ ನೀವು ಸತ್ತರೆ,ನಿಮ್ಮ ಪೋಟೊವನ್ನೋ,ಪ್ರತಿಮೆಯನ್ನೋ ಮನೆಯಲ್ಲಿ ಇಡುತ್ತಾರೋ ಇಲ್ಲವೋ ಅಂತ ನಿಮ್ಮ ಮಕ್ಕಳನ್ನು ಕೇಳಿ ನೋಡಿ.ಇಡುತ್ತಾರಾದರೆ,ಯಾಕಂತ ಅವರನ್ನು ಪ್ರಶ್ನಿಸಿ.ಆಗ ಮೂರ್ತಿಯ ಬಗೆಗಿನ ನಿಮ್ಮ ಪ್ರಶ್ನೆಗೆ ಇನ್ನೂ ನಿಖರವಾಗಿ ಉತ್ತರ ಸಿಗುತ್ತದೆ.

ಇ)ಭಯವಿರುವವರು ದೇವಸ್ಥಾನಕ್ಕೆ ಹೋಗುತ್ತಾರೆ!!
ಸ್ವಾಮಿ,ನಿಮ್ಮ ಕಥಾನಾಯಕ ನಿಜ ಜೀವನದಲ್ಲಿ ಮಸೀದಿಗೆ ಹೋಗುತ್ತಾರೆ,ಹಜ್ ಯಾತ್ರೆಗೆ ಹೋಗುತ್ತಾರೆ, ಅಲ್ಲಿ ಸೈತಾನನಿಗೆ ಕಲ್ಲು ಹೊಡೆಯುತ್ತಾರೆ,ಭಕ್ರೀದ್ ಗೆ ಕುರಿ ಬಲಿ ಕೊಡುತ್ತಾರೆ.ಅದು ನಿಮ್ಮ ಭಯದ ಪರಿಧಿಯಲ್ಲಿ ಬರುತ್ತದೆಯೇ..? ಆರೋಗ್ಯ ಸರಿಯಿಲ್ಲದಿದ್ದರೆ ಆಸ್ಪತ್ರೆಗೆ ಹೋಗೋದು ಕೇವಲ ಪ್ರಾಣಭಯದಿಂದ ಮಾತ್ರವಲ್ಲ,ಬದುಕುವ ಆಸೆಯಿಂದಲು ಹೋಗುತ್ತಾರೆ.ದೇವಸ್ಥಾನದಲ್ಲಿ ದೈವಶಕ್ತಿ ಇದೆಯೋ ಇಲ್ಲವೋ.ಆದರೆ ಆಸ್ತಿಕನಿಗೆ ಮನಃಶಾಂತಿ,ಆತ್ಮಸ್ತೈರ್ಯವನ್ನು ಕೊಡುವಂತಹ ಶಕ್ತಿಯಂತು ಅಲ್ಲಿ ಇದೆ.ಇದು ನಿಮ್ಮಂತಹ ನಾಸ್ತಿಕರಿಗೆ ಅರ್ಥವಾಗಲು ಸಾಧ್ಯವಿಲ್ಲ.ನಿಮ್ಮ ಚಿತ್ರದಲ್ಲಿನ ಈ ಹೇಳಿಕೆ ಎಲ್ಲಾ ಆಸ್ತಿಕರಿಗೆ ಮಾಡಿದ ಅವಮಾನ.ಹಿಂದೂ ದೇವಾಲಯಗಳು ಜಗತ್ತಿಗೆ ಅದ್ಭುತ ವಾಸ್ತುಶಿಲ್ಪವನ್ನು ಪರಿಚಯಮಾಡಿಕೊಟ್ಟಿದೆ.ಅದಕ್ಕಾದರು ಅವುಗಳ ಬಗ್ಗೆ ನಿಮಗೆ ಗೌರವ ಇರಲಿ.

ಈ)ಧರ್ಮಗುರುಗಳು 'ರಾಂಗ್ ನಂಬರ್ಗಳು'
ಪಿಕೆಯ ರಿಮೋಟ್ಕಂಟ್ರೋಲ್ ಕಳವಾಗೋದು ಭೋಜಪುರಿ ಭಾಷೆ ಮಾತನಾಡುವ ಪ್ರದೇಶದಲ್ಲಿ.ಆದರೆ ಕದ್ದವನು ಅದನ್ನು ಮಾರೋದು ದೆಹಲಿಗೆ ಬಂದು.ಅದೂ ತಪಸ್ವಿ ಎಂಬ ಹಿಂದೂ ಧರ್ಮಗುರುವಿಗೆ.ಯಾಕೆ ಸ್ವಾಮಿ. .?ನಿಮಗೆ ಅಲ್ಲೆ ಯಾವುದಾದರು ಬೇರೆ ಧರ್ಮದ ಧರ್ಮಗುರುಗಳು ಸಿಗಲಿಲ್ಲವೇ..?ಹಿಂದೂ ಧರ್ಮಗುರೂವಿಗೆ ಅದನ್ನು ಮಾರಿಸುವ ಹಿಂದೆ ಇದ್ದದ್ದು ನಿಮ್ಮ ಹಿಂದೂ ದ್ವೇಷಿ ನಿಲುವು ಅಷ್ಟೇ.ಈ ಮೂಲಕ ನಿಮ್ಮನ್ನು ನೀವೇ ಬೆತ್ತಲುಗೊಳಿಸಿದ್ದೀರಿ.ನಾನೇನು ಹಿಂದೂ ಸಮಾಜ ಅಪ್ಪಟ ಬಂಗಾರವೆಂದು ಹೇಳುತ್ತಿಲ್ಲ.ನೀವು ಚಿತ್ರದಲ್ಲಿ ಪತ್ತೆ ಹಚ್ಚಿರುವಂತೆ ಕೆಲವೊಂದು ರಾಂಗ್ ನಂಬರ್ಗಳು ಖಂಡಿತ ಇದೆ.ತಪ್ಪುಗಳನ್ನು ಎತ್ತಿ ತೋರಿಸೋದಕ್ಕೆ ಒಂದು ಕ್ರಮ ಇದೆಯಲ್ಲವೇ..?ನೀವು ಮಾಡಿರೋದು ಸಂಸ್ಕೃತಿಯ ಅಪಹಾಸ್ಯ.ನನ್ನದೊಂದು ಪ್ರಶ್ನೆ ನಿಮಗೆ, ನೀವು ನಿರ್ದೇಶಕರುಗಳು ಮತ್ತು ಹೀರೋಗಳೇನು ಬಹಳ ಸಾಚಾನಾ..?ನಾಯಕಿಯಾಗಿ ನಟಿಸಲು ಬರುವವಳನ್ನ ಮಂಚ ಹಂಚಿಕೊಳ್ಳುವಂತೆ ಕರೆಯುವ ಅದೆಷ್ಟು ನಿರ್ದೇಶಕರು,ಹೀರೋಗಳು ಇಲ್ಲ ಹೇಳಿ..?ನಿಮ್ಮ ಉದ್ಯಮದಲ್ಲಿ ರಾಂಗ್ ನಂಬರ್ಗಳ ದೊಡ್ಡ ಡೈರೆಕ್ಟರಿಯೇ ಇದೆ. ಕಪ್ಪುಕುರಿಗಳು ಎಲ್ಲಾ ಕ್ಷೇತ್ರದಲ್ಲು ಇರ್ತಾರೆ.ಅದನ್ನೇ ವೈಭವೀಕರಿಸುವದರ ಹಿಂದೆ ಒಂದು ಷಡ್ಯಂತ್ರವಿರುತ್ತದೆಯಷ್ಟೇ.

ಪಿಕೆ2 ಮಾಡಬಲ್ಲಿರಾ..?
ಚಿತ್ರದ ಕ್ಲೈಮಾಕ್ಸ್ ನಲ್ಲಿ ಪಿಕೆ ಮತ್ತೆ ಆತನ ಸಹೋದರನೊಂದಿಗೆ(ರಣಬೀರ್ ಕಪೂರ್)ಭೂಮಿಗೆ ಬರುವ ದೃಶ್ಯವಿದೆ.ಇದು ಪಿಕೆ2 ನಿರ್ಮಾಣವಾಗಲಿದೆ ಅಂತ ಮುನ್ಸೂಚನೆ ಕೊಟ್ಟಂತಿದೆ.ಒಂದುವೇಳೆ ಪಿಕೆ2 ಮಾಡಿದರೆ,ಒಂದು ಸಮುದಾಯಕ್ಕೆ ಸೇರಿದ ವಿದ್ಯಾವಂತ ಯುವಕರು ಭಯೋತ್ಪಾದನ ಸಂಘಟನೆಗಳಿಗೆ ಸೇರುತ್ತಿರುವುದನ್ನು,ತಮ್ಮ ಧಾರ್ಮಿಕ ಕೇಂದ್ರಗಳನ್ನು ಬಾಂಬ್ ಫ್ಯಾಕ್ಟರಿಗಳನ್ನಾಗಿ ಮಾಡುತ್ತಿರುವುದನ್ನು,ಧರ್ಮದ ಹೆಸರಿನಲ್ಲಿ ಹೆಣ್ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದನ್ನು,ಹೆಣ್ಣುಮಕ್ಕಳ ಲಿಂಗಾನುಪಾತ ಕುಸಿಯುತ್ತಿದ್ದರು ಬಹುಪತ್ನಿಯರನ್ನು ಹೊಂದುವುದನ್ನು,ಚರ್ಚ್ ಗಳಲ್ಲಿ ನನ್ ಗಳು,ಅಪ್ರಾಪ್ತರ ಮೇಲೆ ನಡೆಯುವ ಅತ್ಯಾಚಾರವನ್ನು ಈ ಕಥವಸ್ತುಗಳನ್ನಾಗಿ ಆಯ್ಕೆ ಮಾಡುವ ಧೈರ್ಯ ತೋರುವಿರಾ..?

ಅಮೀರ್ ಖಾನ್ ಆಥವಾ ಹಿರಾನಿ ಈ ಹಿಂದೆ ವಿಶ್ವರೂಪಂ,ಇನ್ನೊಸೆನ್ಸ್ ಆಫ್ ಮುಸ್ಲಿಂ ಮತ್ತು ದ ವಿಂಚಿ ಕೋಡ್ ನಂತಹ ಸಿನೇಮಾಗಳು ಬಂದಾಗ ಯಾವ ರೀತಿ ಪ್ರತಿಕ್ರಿಯಿಸಿದ್ದರು ಅನ್ನೋದು ಮುಖ್ಯವಾಗುತ್ತದೆ.ವಿಶ್ವರೂಪಂಗೆ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿದಾಗ ಈ ಖಾನ್ ಗಾಗಲಿ,ಹಿರಾನಿಗಾಗಲಿ ಅದೊಂದು ಜಸ್ಟ್ ಸಿನೆಮಾ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ಅಂತ ಅನ್ನಿಸಲೇ ಇಲ್ಲ.ಇವರು ಅಷ್ಟೊಂದು ಲಿಬೆರಲ್ ಆಗಿದ್ದರೆ ಕಮಲ್ ಹಾಸನ್ ರ ಬೆಂಬಲಕ್ಕೆ ನಿಲ್ಲಬೇಕಿತ್ತು.ಇದರಲ್ಲಿ ಒಂದಂತು ಸ್ಪಷ್ಟ.ಇವರುಗಳ ವಿರೋಧ ಸೀಮಿತ ವಿಷಯಕ್ಕೆ ಅಷ್ಟೇ ಅನ್ನುವುದು.ನಿಮ್ಮಲ್ಲೊಂದು ಹಿಡೆನ್ ಅಜೆಂಡಾ ಇದೆ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ.

. ಮಿಸ್ಟರ್ ಪರ್ಫೆಕ್ಟ್ ರವರೇ, ಚಿತ್ರದಲ್ಲಿ ಧರ್ಮನಿರಪೇಕ್ಷತೆಯ ಬಗ್ಗೆ ಬಹಳ ಚೆನ್ನಾಗಿ ಪ್ರಾತ್ಯಕ್ಷಿಕೆ ಕೊಟ್ಟ ನೀವು ಪತ್ನಿ ಹಿಂದು ಆಗಿದ್ದರು ಮಕ್ಕಳನ್ನು ಯಾಕೆ ಇಸ್ಲಾಮ್ ಧರ್ಮಕ್ಕೆ ಸೇರಿಸಿಕೊಂಡಿರಿ..?ಮಕ್ಕಳ ಧರ್ಮವನ್ನು ಆಯ್ಕೆ ಮಾಡುವ ಅಧಿಕಾರವನ್ನು ನಿಮ್ಮ ಹೆಂಡತಿಗೆ ನೀಡಬಹುದಿತ್ತಲ್ವ..? ಡೆಮೊ ಕೊಡೋದು ಸುಲಭ.ಅದನ್ನು ನಿಜ ಜೀವನದಲ್ಲಿ ಪಾಲಿಸೋದು ಕಷ್ಟ ಸ್ವಾಮಿ.ನೀವು ಮೆಕ್ಕಾಗೆ ಹೋದರೆ ಪವಿತ್ರಯಾತ್ರೆ ನಾವು ದೇವಸ್ಥಾನಕ್ಕೆ ಹೋಗೋದು ಪುಕ್ಕಲುತನವಾಗಿ ಕಾಣುತ್ತದೆಯಲ್ಲವೆ..?ಅದ್ಭುತ ಚಿಂತನೆ ನಿಮ್ಮದು.ಚಿತ್ರದ ಆರಂಭದಲ್ಲಿ ನೀವಾಗಿಯೇ ಬೆತ್ತಲಾಗಿದ್ದಿರಿ.ನಿಮ್ಮ ಅಪಕ್ವ ವಿಡಂಬನೆಯಿಂದ ಚಿತ್ರದ ಅಂತ್ಯದಲ್ಲು ಕೆಲವು ಪ್ರೇಕ್ಷಕರ ಕಣ್ಣಿನಲ್ಲಿ ಬೆತ್ತಲಾದಿರಿ.
#sklines

-@ಯೆಸ್ಕೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿಂದೂಗಳನ್ನು ಅವಹೇಳನ ಮಾಡಿದರೆ ತಾವು ಜಾತ್ಯಾತೀತರು ಎಂದು ಅನ್ನಿಸಿಕೊಳ್ಳಬಹುದು ಎಂಬ ಕೆಟ್ಟ ವಾತಾವರಣ, ಪರೋಕ್ಷವಾಗಿ ತಾವು ಮುಸ್ಲಿಮ್, ಕ್ರಿಶ್ಚಿಯನರ ಪರ ಎಂದು ತೋರಿಸಿಕೊಳ್ಳಬಯಸುವ ಅಖಿಲೇಶ, ನಿತೀಶ್ ರಂತಹವರು ನೈಜ ಜಾತ್ಯಾತೀತತೆಗೆ ಕಳಂಕ ತರುತ್ತಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎಲ್ಲರೂ ಹಾ ಆ ಅಂದ ಕಡೆ - ನಾ ನಾ ಎಂದದ್ದಕ್ಕೆ ಬೆಲೆ -ಕುತೂಹಲ ಜಾಸ್ತಿ ..!! ಹೀಗಾಗಿ ಸುದ್ಧಿ ಮಾಡಲು ಜನ ಆರಿಸಿಕೊಳ್ಳೋದು ವಿರುದ್ಧ ದಾರಿಯನ್ನ ..!!
ಪೀ ಕೆ ಬಗ್ಗೆ ಸ್ವಲ್ಪ ಸವಿಸ್ತಾರವಾಗಿ -ಸರಳವಾಗಿ ಚೆನ್ನಾಗಿ ಬರೆದಿರುವಿರಿ . ಪೀ ಕೆ ಬಗ್ಗೆ ಯಾಕೆ ಟೀ ಕೆ ಅಂತ ...
ಇದು ಹಣ ಗಳಿಸಿರಬಹುದು ಆದರೆ ಇದಕ್ಕೂ ಮುಂಚೆಯೇ ಬಂದ ಓ ಮೈ ಗಾಡ್ ಹಿಂದಿ ಚಿತ್ರದ ಮುಂದೆ ಏನೋ ಅಲ್ಲ .. ಅದರಲ್ಲಿ ಎಲ್ಲ ಧರ್ಮಗಳ ಒಪ್ಪು ತಪ್ಪು ಓರೆ ಕೋರೆ ಎತ್ತಿ ತೋರಿಸಿದ್ದರು.. ಇದು ಹಿಂದೂಗಳನ್ನು ಮಾತ್ರ ಗುರಿಯಾಗಿಸಿ ತೆಗೆದ ಚಿತ್ರ .
ಇದರಲ್ಲೂ ಓಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುವ ಅಖಿಲೇಶ್ ಮತ್ತು ನಿತೀಶ್ ಅವರು ಕಳೆದ ಲೋಕ ಸಭೆ ಚುನಾವಣೆಯಲ್ಲಿ -ಜನ ಸಾರಾಸಗಟಾಗಿ ತಮ್ಮನ್ನು ತಿರಸ್ಕರಿಸಿದ್ದು ಮರೆತ ಹಾಗಿದೆ ...ಜಾತಿ ರಾಜಕಾರಣ ಮೂಲೆಗೆ ಸರಿದಿದೆ..
ಶುಭವಾಗಲಿ

ನನ್ನಿ

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.