ಪದ್ಯಗಳ ಜಳಕ್ಕೆ ಮುಖ ಬೆವರುತ್ತದೆ

0

ಪದ್ಯಗಳ ಝಳಕ್ಕೆ ಮುಖ ಬೆವರುತ್ತದೆ


ಸಂಧ್ಯಾದೇವಿ ತಮ್ಮ ಹಿಂದಿನ ಎರಡು ಸಂಕಲನಗಳಿಂದ ಈಗಾಗಲೇ ಕಾವ್ಯಾಸಕ್ತರ ಗಮನ ಸೆಳೆದು ಅವರ ಮುಂದಿನ ಹಾದಿಯ ಬಗ್ಗೆ ಕುತೂಹಲ ಹುಟ್ಟಿಸಿದ ಕವಯತ್ರಿ. ಉಪನಿಷತ್ತುಗಳ ಭಾವಧಾರೆ ಈ ಕವಿಯ ಮೂಲ ಧಾತು. ಸಂಸ್ಕೃತದ ನೇರ ಅನುವಾದವಲ್ಲದ ಆದರೆ ಭಾವಾನುವಾದವೆನ್ನುವುದನ್ನೂ ಅಲ್ಲಗಳೆಯುವ ಹಾಗೆ ಅವರು ಉಪನಿಷತ್ತುಗಳನ್ನು ತಮ್ಮ ಕಾವ್ಯ ವ್ಯವಸಾಯಕ್ಕೆ ಬಳಸಿಕೊಳ್ಳಬಲ್ಲರು. ಸಂಸ್ಕೃತವೆಂದರೆ ಮೂಗು ಮುರಿಯುವ ಕಾಲಕ್ಕೆ ಅದನ್ನು ಕನ್ನಡದ ಮನಸ್ಸಿನ ಮೂಲಕ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಬಗ್ಗಿಸಿಕೊಳ್ಳುವ ತಾಕತ್ತು ಈಕೆಗಿರುವುದರಿಂದಲೇ ಅವರ ಮೊದಲ ಸಂಕಲನ “ಮಾತು-ಚಿಟ್ಟೆ, ಬೆಂಕಿ-ಬೆರಳು, ಮುರಿದ ಮುಳ್ಳಿನಂತೆ ಜ್ಞಾನ” ಕಾವ್ಯಾಸಕ್ತರನ್ನು ಇನ್ನಿಲ್ಲದಂತೆ ಕಾಡಿತು ಮತ್ತು ಒಟ್ಟೂ ಹೊಸ ಸಂವೇದನೆಯೊಂದಕ್ಕೆ ಕನ್ನಡದ ಮನಸ್ಸು ತುಡಿಯುತ್ತಿರುವುದನ್ನು ಗುರುತಿಸುವಂತೆ ಮಾಡಿತು. ಅನುವಾದ ಮತ್ತು ಭಾವಾನುವಾದದ ಹೊರತಾಗಿ ವಸ್ತುವೊಂದು ಕವಿಮನಸ್ಸಿನಲ್ಲಿ ಬಹುಕಾಲ ಉಳಿದರೆ ಅದು ಮುಂದೊಂದು ಕಾಲದಲ್ಲಿ ಅಭಿವ್ಯಕ್ತಗೊಳ್ಳುವ ಕ್ರಮ ಚೇತೋಹಾರಿಯಾದದ್ದು. ಶೀರ್ಷಿಕೆಯ ಹಂಗಿಲ್ಲದೇ ಕವಿತೆ ಕಟ್ಟುವ ಮತ್ತು ಕವಿತೆಯ ಕಟ್ಟಡಕ್ಕೆ ಈಗಾಗಲೇ ಪರಿಚಿತವಾಗಿರುವ ನೀಲನಕ್ಷೆಯನ್ನು ಬಿಟ್ಟುಕೊಟ್ಟು ಹೊಸತೇ ಆದ ಒಂದು ವಿಶಿಷ್ಟತೆಯನ್ನು ಕೂಡ ಅದು ಪಡೆಯಬಲ್ಲದೆಂಬುದಕ್ಕೆ ಸಂಧ್ಯಾದೇವಿಯವರ ಮೊದಲ ಸಂಕಲನದ ಕವಿತೆಗಳೇ ಸಾಕ್ಷಿ.


ಕಠೋಪನಿಷತ್ತಿನ ನಚಿಕೇತ ಪ್ರಸಂಗ ಸಾವಿನಾಚೆಗಿರುವ ಸತ್ಯವನ್ನು ಕುರಿತದ್ದು. ನಚಿಕೇತನಿಗೆ ಸಿಕ್ಕ ಉತ್ತರ ನಮ್ಮ ಪ್ರಶ್ನೆಗಳಿಗೂ ಸಿಕ್ಕ ಸಿದ್ಧ ಉತ್ತರವೇ ಸರಿ. ಅವನ ಪ್ರಶ್ನೆಗಳು ಅಥವ ಅವನಿಗೆ ಸಿಕ್ಕ ಉತ್ತರಗಳು ಸೂಕ್ಷ್ಮ ಮನಸ್ಸನ್ನು ಕಾಡಿದ ಬಗೆಯನ್ನು  ‘ಅಗ್ನಿ ದಿವ್ಯ’ ಸಂಕಲನದ ಮೂಲಕ ಸಂಧ್ಯಾದೇವಿ ಈಗಾಗಲೇ ತೆರೆದಿಟ್ಟಿದ್ದಾರೆ. ಉಪನಿಷತ್ತುಗಳ ಪ್ರಭಾವ ಒಬ್ಬೊಬ್ಬರ ಮೇಲೆ ಒಂದೊಂದು ತೆರನಾಗಿ ಇರುತ್ತದೆ. ಅದು  ಲೌಕಿಕನ ಮೇಲೆ, ಸಾಮಾಜಿಕನ ಮೇಲೆ, ಧಾರ್ಮಿಕ ಹಿನ್ನೆಯುಳ್ಳವನ ಮೇಲೆ, ತತ್ವಜ್ಞಾನಿಯ ಮೇಲೆ, ಅನುಭಾವಿಯ ಮೇಲೆ, ಚಿಕಿತ್ಸಕ ದೃಷ್ಟಿಯುಳ್ಳವರ ಮೇಲೆ ಬೇರೆ ಬೇರೆಯದೇ ತೆರನಾಗಿರುತ್ತದೆ. ಸಂಧ್ಯಾದೇವಿಯವರ ಕಾವ್ಯ ಪ್ರಜ್ಞೆ  ಅನುರಾಗದ ಹಾದಿಯ ಮೇಲಣ ಅನುಭಾವದ ಹುಡುಕಾಟದಲ್ಲಿರುವಂಥದು. ಕಠೋಪನಿಷತ್ತಿನಿಂದಾಯ್ದ ೧೮ ಶ್ಲೋಕಗಳನ್ನು ಯಾವ ಅನುಕ್ರಮಣಿಕೆಯನ್ನೂ ಬಳಸದೆ ಅವು ಭಾವಕೋಶವನ್ನು ಕಡೆದು ಸೃಜಿಸಿದ ನವನೀತವನ್ನು ‘ಅಗ್ನಿದಿವ್ಯ’ದಲ್ಲಿ ನಮಗೆ ಉಣಬಡಿಸಿದ್ದರು.

ಅವರ ಮೂರನೆಯ ಸಂಕಲನ ‘ಝಳಕ್ಕೆ ಮುಖ ಬೆಳಗುತ್ತದೆ’ ಈವರೆಗಿನ ಅವರ ಕಾವ್ಯೋದ್ಯೋಗದ ಮತ್ತೊಂದು ಮಜಲು. ಝಳ, ಮುಖ ಮತ್ತು ಬೆಳಗು ಎಂಬ ಮೂರು ಶಬ್ದಗಳ ಲೌಕಿಕಾರ್ಥವು ಅನುಭಾವದರ್ಥದಿಂದ ಭಿನ್ನವಾದುದು. ಝಳ ಅನ್ನುವ ಶಬ್ದ  ಬಿಸಿಲಿನ ಪ್ರಖರತೆಗೆ, ಬೆಂಕಿಯ ಪ್ರಖರತೆಗೆ ಬಳಸುವಂಥದ್ದು. (ಕಮಲಳ ಲಂಗ ಝಳ ಝಳ ಅನ್ನುವ ಪ್ರಾಥಮಿಕ ಶಾಲೆಯ ಪಾಠದ ಕ್ರಮವೇ ಬೇರೆಯದು ಬಿಡಿ) ಬದುಕಿಗೂ ಝಳಗೊಳಿಸುವ ಪ್ರಖರತೆಯಿದೆ. ಅದನ್ನು ಸಾವಧಾನವಾಗಿ ಸಾನುರಾಗದ ಮೂಲಕ ಆನುಭಾವಿಕವಾಗಿ ತೂಗಿ ನೋಡುವ ಜೀರ್ಣಿಸಿಕೊಳ್ಳುವ ಬಗೆಯೇ ಇಲ್ಲಿನ ಪದ್ಯಗಳ ಮೂಲಕ ಕವಯತ್ರಿ ಸಾಧ್ಯಾವಾಗಿಸಿದ್ದಾರೆ. ಮುಖ ಎನ್ನುವುದು ದೇಹಕ್ಕಂಟಿದ ನಮ್ಮ ಶಿರ ಭಾಗವೇ ಅಥವ ದೇಹ ದೇಗುಲದ ವಕ್ತಾರಿಕೆಗೆ ಒಳಗೊಂಡ ದ್ವನಿ ವರ್ಧಕವೇ? ಅದು ಹೌದಾದಲ್ಲಿ ಬದುಕಿನ ಝಳಕ್ಕೆ ಅರಿವಿನ ಮುಖ ಬೆಳಗದೇ ಇಂಗುವುದು ಸಾಧ್ಯವೆ? ಬೆಳಗೆಂಬುದು ಬರಿಯ ಬೆಳಗೇ ಅಥವ ಅದು ಅರಿವಿನ ಮಹಾಮನೆಯೇ? ಬೆಳಗೆನ್ನುವುದು ಬೈಗಿನ ಅರಂಭವೋ ಅಥವ ಅದು ಅದರ ಅಂತ್ಯವೋ? ಏನೆಲ್ಲ ಪ್ರಶ್ನೆಗಳನ್ನು ಏಕಕಾಲದಲ್ಲಿ ಹುಟ್ಟಿಸುವ ಶಕ್ತಿ ಶೀರ್ಷಿಕೆಯಲ್ಲೇ ಅಡಕವಾಗಿರುವಾಗ ಇಲ್ಲಿನ ಪದ್ಯಗಳ ಪ್ರಖರತೆ ಓದುಗನಲ್ಲಿ ‘ಬೆಳಗು’ ಮೂಡಿಸಿ ಬೆಳಕ ಕಾಣಿಸುವ ಶಕ್ತಿ ಮತ್ತು ಸಂವರ್ಧನತೆಯನ್ನು ಸಹಜವಾಗಿಯೇ ಸಾಧಿಸಿವೆ ಅನ್ನುವುದು ಅತಿಶಯೋಕ್ತಿಯೇನೂ ಅಲ್ಲ. 
 

‘ಮೆಲು ದನಿಯ ಇಂತಹ ಕಾವ್ಯವನ್ನು ಬಲು ನಿಧಾನವಾಗಿ ತಾಳ್ಮೆಯಿಂದ ಓದಬೇಕಾಗುತ್ತದೆ’ ಎಂದಂದು ಯು.ಆರ್.ಅನಂತ ಮೂರ್ತಿ ಈ ಸಂಕಲನದ ಮುನ್ನುಡಿಯಲ್ಲಿ ಗಹನವಾದ ಆದರೆ ಸಂಕ್ಷಿಪ್ತವಾದ ಮಾತುಗಳನ್ನಾಡಿ ಸಂಕಲನದ ತೂಕವನ್ನು ಹೆಚ್ಚಿಸಿದ್ದಾರೆ. ಕವಯತ್ರಿಯ ಕವಿತೆಗಳಲ್ಲಿರುವ ಏಕತಾನತೆಯನ್ನು, ವಾಚಾಳಿಯಲ್ಲದ ಸ್ವಗತದ ನಿರೂಪಣೆಯನ್ನು, ಅಹಂ ಇಲ್ಲದ ಅನುರಾಗವೆಂದು ವ್ಯಾಖ್ಯಾನಿಸಿ ಸಂಧ್ಯಾದೇವಿಯವರ ಕಾವ್ಯ ಕರ್ಮಕ್ಕೆ ಅಡಿಗೀಟು ಹಾಕಿಕೊಟ್ಟು ಓದುಗನಿಗೆ ಓದುವ ಕ್ರಮ ಒದಗಿಸಿ ಉಪಕರಿಸಿದ್ದಾರೆ.
ಅರವತ್ತು ಕವಿತೆಗಳ ಶರಬತ್ತು ಈ ಸಂಕಲನ. ಶೀರ್ಷಿಕೆಯ ಜೊತೆಗೆ ಸ್ವತಂತ್ರವಾಗಿ, ಶೀರ್ಷಿಕೆ ತೆಗೆದರೆ ಒಂದೇ ಪದ್ಯದ ಹಾಗೆ ಇಲ್ಲಿನ ಕವಿತೆಗಳನ್ನು ಆಸ್ವಾದಿಸಬಹುದು. ನನ್ನ ಜಾಗವನ್ನು ಹಸನು ಮಾಡಿದ್ದೇನೆ/ ಚಿನಿವಾರನ ಕುಲುಮೆ/ಬೆಂಕಿಯಲ್ಲೂ ಅರಳುವ ಹೂವು/ ಚಿನ್ನ. /ಜಡೆ ಬಂಗಾರ/ ನಾಗ ಮುರಿ/ ಗೆಜ್ಜೆ ಮಾಲಾಕು/ ಜುಮುಕಿ. / ಪುಟಕ್ಕೊಪ್ಪುವ ಘನ!/ ಝಳಕ್ಕೆ ಮುಖ ಬೆಳಗುತ್ತದೆ/ ಇಬ್ಬರದ್ದೂ./  (ಪುಟಕ್ಕೊಪ್ಪುವ ಘನ) ಮೊದಲ ಪದ್ಯದಲ್ಲೇ ಕುತೂಹಲವನ್ನೂ, ಸಹಜ ಸತ್ಯವನ್ನೂ, ತನ್ನ ‘ಪುಟಕ್ಕೊಪ್ಪುವ ಘನ’ಸ್ತಿಕೆಯನ್ನೂ ಬಡಿವಾರವಿಲ್ಲದೆ ಪ್ರದರ್ಶಿಸುವ ಕವಿ  ಅಲ್ಲಿ- ಸಭೆ ಸಮಾರಂಭಗಳಿಗೆ/ನೀನು ಮುಖ್ಯ /ಅತಿಥಿ. /ಇಲ್ಲಿ- ನನ್ನ ಖಾಲಿ ದೇಗುಲದಲ್ಲಿ/ ಮೂಕ ಉದ್ಭವ / ಮೂರ್ತಿ./ ಗೋಪುರದ ಕಳಶದಲ್ಲಿ /ಮೌನ ಮುದ್ರೆ./ ( ಏಕ ಕಾಲದಲ್ಲಿ) ಅನ್ನುವ ಮೂಲಕ ಒಂದೇ ವಸ್ತುವು ಪರಿಭಾವಿಸುವವರ ಮೇಲೆ ಪಡಿಮೂಡಿಸುವ ಸ್ತರವನ್ನು ಚಿತ್ರಿಸುತ್ತಾರೆ. ಕಾಯಬೇಕು ಅದನ್ನು ಅನ್ನುವ ಪದ್ಯ ಬಗೆಯುವ ಏಕಾಂತದ ಪರಿ ಅನನ್ಯವಾದುದು. ಏಕಾಂತ ಒಂದು ಹಕ್ಕಿ! /ಹಕ್ಕಿಯೆಂದರೆ ಹಕ್ಕಿಯಲ್ಲ, ಹಕ್ಕಿಯ ಏಕಾಗ್ರತೆ/ ಅಂತೆನ್ನಬಹುದೇನೋ.. ../ ಎಂದು ಪ್ರಾರಂಭವಾಗುವ ಕವಿತೆ ಅಸಲಿಗೆ ಆ ಹಕ್ಕಿ, ಹಕ್ಕಿಯೆಂದರೆ ಹಕ್ಕಿಯೇ? /ಇರಬಹುದು, ಹಕ್ಕಿಯ ಏಕಾಂತ /ಇಲ್ಲವಾದರೆ, ಇನ್ನು ನಾಳೆಗೆ /ಇಷ್ಟೇ ಹೊತ್ತಿಗೆ, ಇವತ್ತಿನಂತೆ/ ಕೆಲಸ ಮುಗಿಸಿ, ಕಣ್ಣಾಗಿ ಕಾಯಬೇಕು... ಅದನ್ನು./ ಎಂದು ಮುಕ್ತಾಯವಾಗುವಾಗ ಧ್ಯಾನಿಸುವ ಕಲ್ಪಕ ಶಕ್ತಿ ಸಹನೀಯವೂ ಸ್ವಾಧ್ಯಾಯಿಯೂ ಆದುದು.
ಮೂರು ಆಮೆಗಳು, ಹೆಣ್ಣು, ಸುಗಂಧದ ಜಾಡು ಹಿಡಿದು, ನಾಜೂಕು, ಕೆಂಡದ ಹೂವು, ಅದಕ್ಕೊಪ್ಪುವ ಪದಕ, ಅರಿಕೆ, ಸಮುದ್ರ ಮುಂತಾದ ಪದ್ಯಗಳು ಕಾಣಿಸುವ ಸತ್ಯಗಳು ಈ ಹೊತ್ತಿನ ಕನ್ನಡ ಕಾವ್ಯಕ್ಕೆ ಭಿನ್ನವಾದ ಅಂದರೆ, ಹಿಡಿಯಳತೆಯ ಸ್ವಾನುಭವಕ್ಕೆ ಸಾಗರದ ಆಳ ಮತ್ತು ವಿಸ್ತರತೆಯನ್ನು ಪರಿಚಯಿಸುವಂಥ ಶಕ್ತ ಪದ್ಯಗಳು. ಸಮಯ ಪರೀಕ್ಷೆ, ಇದೆಲ್ಲ ನಿನ್ನದಲ್ಲ, ಅಂದಿನಿಂದ, ಒಂದು ಗುಟುಕು, ಮುಚ್ಚಿರುವುದು ಯಾಕೆ?, ಇಬ್ಬರು, ಇನ್ನೊಂದು ನೆರಳು, ಕರೆ, ಪದ್ಯಗಳು ವಿವಿಧ ಉಪನಿಷತ್ತುಗಳಿಂದ ಕಡ ತಂದ ಎಣ್ಣೆ ಸುರಿದು ಬೆಳಗಿದ ಕಾವ್ಯ ದೀಪಗಳು.
ಸಂಕಲನದ ಎಲ್ಲ ಪದ್ಯಗಳನ್ನೂ ವಿವರವಾಗಿ ಚರ್ಚಿಸುತ್ತ ಹೋದರೆ ಓದುಗ ಮೂಲ ಓದಿನ ಸುಖದಿಂದ ವಂಚಿತನಾಗಬಹುದೆಂದು ಹೆದರಿ ಬೇಕೆಂತಲೇ ಇಲ್ಲಿಂದ ಮುಂದಿನ ಪದ್ಯಗಳನ್ನು ವಿಶ್ಲೇಷಿಸಿಲ್ಲ. ಓದುಗ ಸಾವಧಾನವಾಗಿ, ಸಾವಕಾಶವಾಗಿ ಓದಿಕೊಳ್ಳಬೇಕೆಂಬ ಮುನ್ನುಡಿಕಾರರ ಆಸ್ತೆಗೆ ಭಂಗ ಬಾರದಿರಲಿ ಎಂಬ ಸದುದ್ದೇಶವೂ ಹಾಗೆ ಮಾಡುವಂತೆ ಪ್ರಚೋದಿಸುತ್ತಿದೆ.


ಅಸ್ಮಿತೆಯ ಮೋಹಕ್ಕೆ ಒಳಗಾಗದ, ಪರಂಪರೆಯ ಕೂಪದ ವಿಸ್ತರವನ್ನು ಮೀರಿದ, ಶ್ರದ್ಧೆಯ ಕೇಂದ್ರ ಬಿಂದುವಿನಲ್ಲೇ ತುಯ್ಯದ, ಎಲ್ಲವನ್ನು ಒಳಗೊಂಡೂ ಎಲ್ಲವನ್ನೂ ನಿರಾಕರಿಸುವ, ಅನುರಾಗದ ಮೂಲಕವೇ ಆನುಭಾವದ ಹುಡುಕಾಟ ಇಲ್ಲಿನ ಪದ್ಯಗಳ ಮೂಲ ಧಾತು. ಅಕ್ಕ ಚನ್ನಮಾಲಿಕಾರ್ಜುನನ ಮೂಲಕ, ಮೀರಾ ಗಿರಿಧರ ಮಾಧವನ ಮೂಲಕ ಹುಡುಕಿದ್ದನ್ನು ಈ ಆಧುನಿಕ ಕವಯತ್ರಿ ಕವಿತೆಯೆಂಬ ಮಾಧ್ಯಮದ ಮೂಲಕ ಹುಡುಕಹೊರಟಿರುವುದು ಅವರ ಕವಿತೆಗಳಷ್ಟೇ ‘ಝಳ’ ತುಂಬಿರುವಂಥದು. ಅವರ ಹುಡುಕಾಟ ಕನ್ನಡ ಕಾವ್ಯಕ್ಕೆ ಹೊಸ ದಿಕ್ಕು ದೆಶೆಗಳನ್ನು ಹಾಗೇ ಹೊಸ ತಂತ್ರಗಾರಿಕೆಯನ್ನು ಕೊಡಮಾಡಿದೆ. ಧಾರ್ಮಿಕವಾಗಿ ಯಾವ ಗುಂಪಿಗೂ ಸೇರದ ಉಪನಿಷತ್ತುಗಳು ಮನುಷ್ಯನ ‘ಒಳಗನ್ನು’ ವಿಶ್ಲೇಷಿಸಿದ ಬಗೆ ಈ ಮೂಲಕ ದಕ್ಕುವಂತೆ ಮಾಡಿದ ಕವಯತ್ರಿಗೆ ಅಭಿನಂದನೆ.
    

 


 


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.