ನೆನಪಿನ ಚಿತ್ರಕಲಾ ಶಾಲೆ: ಭಾಗ ೩೦ - ಪ್ರತಿಬಿಂಬಿಸದ ಕನ್ನಡಿ ಮತ್ತು ಸ್ಪರ್ಶ-ಛಾಯಾಚಿತ್ರಣ

0

 
(೯೪)
೧೯೯೦, ಜನವರಿ, ಪರಿಷತ್ತು:
 
     ೨೦೧೧ರ ಸೋಕುಮಾರಿ ಉರುಫ್ ಕೆ.ಕೃತಿ ಉರುಫ್ ಕಲಾಕೃತಿಯಿಂದ ಪತ್ರಗಳು ೧೯೯೦ಕ್ಕೆ ಬರುವುದು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸರ್ವೆಸಾಮಾನ್ಯವೇ ಆಗಿಬಿಟ್ಟಿದ್ದರೂ, ಯಾರೂ ಆ ಪತ್ರಗಳನ್ನು ಭವಿಷ್ಯದಿಂದ ಬಂದವು ಎಂದು ನಂಬುವ ಬಾಲಿಶತನವನ್ನು ಪ್ರಕಟಿಸಿರಲಿಲ್ಲ. ಅಲ್ಲಿದ್ದ ಚುರುಕಾದ ವಿದ್ಯಾರ್ಥಿಗಳೆಲ್ಲರೂ ನಾಸ್ತಿಕರೇ, ದೇವರನ್ನು ನಂಬಲು ಅವಶ್ಯಕವಿರುವ ಶ್ರದ್ಧೆ, ಏಕಾಗ್ರತೆ ಅಥವ ಭಯ-ಭಕ್ತಿಗಳೆಲ್ಲಾ ಇವರಿಗೆ ಸಾಧ್ಯವೇ ಇರಲಿಲ್ಲವಾದ್ದರಿಂದ. ಅದೇ ಗುಂಪಿನವನಾದ ನಾನು ಹೀಗೆ ಬರೆಯಲು ಕಾರಣ ಆಸ್ತಿಕರ ಬಗ್ಗೆ ನಾಸ್ತಿಕರಿಗಿರುವ ಕ್ಷಮೆ ನಾಸ್ತಿಕರ ಬಗ್ಗೆ ಆಸ್ತಿಕರಿಗಿಲ್ಲದಿರುವುದು. ೮೦ರ ದಶಕದಷ್ಟರಲ್ಲಿ ಭಾರತೀಯ ಮಾನವಿಕ ವಿಭಾಗಗಳಲ್ಲಿ ಎಡಪಂಥೀಯರ ಬಲವಾದ ಪ್ರಭಾವದ ಪರಿಣಾಮವದು: ಇದನ್ನೂ ಅಂದರೆ ’ಎಡಪಂಥೀಯರ ಬಲವಾದ’ವೆಂಬ ವಾಕ್ಯವನ್ನೇ ಎಡಪಂಥೀಯರು ಒಪ್ಪುತ್ತಿರಲಿಲ್ಲವಾದುದಕ್ಕೆ ಕಾರಣ ಅದರಲ್ಲಿದ್ದ ’ಬಲ’ ಪದದ ಪ್ರಯೋಗ. ತಮಗೆ ದೈವದ ಅವಶ್ಯಕತೆ ಇಲ್ಲವೆಂಬುದು ಪರಿಷತ್ತಿನ ವಿದ್ಯಾರ್ಥಿಗಳ ವಾದವೇಕೆಂದರೆ ದೈವವು ದೊರಕಿದಲ್ಲಿ ಆತನಿಂದ/ಆಕೆಯಿಂದ ಏನನ್ನು ಕೇಳಬೇಕೆಂಬ ಪರಿಕಲ್ಪನೆಯೇ ಇರಲಿಲ್ಲ ನಮ್ಮಗಳಿಗೆ.
 
     ಎಲ್ಲರಿಗೂ ಪ್ರಶ್ನೆಗಳನ್ನು ಕೇಳುವುದು, ಸೋಕುಮಾರಿಯ ಉತ್ತರದಲ್ಲಿರಬಹುದಾದ ಮನೋರಂಜನೆಯ ಅಂಶವನ್ನು ಲೇವಡಿ ಮಾಡಿಕೊಂಡು ನಗುವುದು, ಅಷ್ಟರಲ್ಲಿ ಆ ಪತ್ರದ ಅಕ್ಷರಗಳು ಇಪ್ಪತ್ತನಾಲ್ಕು ಗಂಟೆಯೊಳಗೆ ಕಾಣೆಯಾಗುವುದು, ಅದಕ್ಕೆ ತಮ್ಮ ಬೇಜವಾಬ್ದಾರಿಯನ್ನೇ ನೆಪಮಾಡಿಕೊಂಡು ಮತ್ತೆ ಅದರ ಪುನರ್‌ನೆನಕೆಯಲ್ಲಿ ಮನೋರಂಜನೆ ಹುಡುಕುವುದು-ಇದು ಪರಿಷತ್ತಿನ ವಿದ್ಯಾರ್ಥಿಗಳಾದ ನಮ್ಮ ದೈನಂದಿನ, ವಾರದ ಮತ್ತು ತಿಂಗಳ ದಿನಚರಿಯೂ ಆಗಿಬಿಟ್ಟಿತ್ತು, ೧೯೮೯-೯೦ರ ನಡುವೆ. ತೀರ ಅನುಮಾನದ ತಲೆಮಾರು ನಮ್ಮದಾಗಿದ್ದು, ಯಾರಾದರೂ ತಮ್ಮ ಗಂಭೀರ ಸಮಸ್ಯೆಯನ್ನು ನಮ್ಮೆದಿರು ಹೇಳಿಕೊಂಡಾಗಲೂ ನಾವ್ಗಳೆಲ್ಲಾ ಅದನ್ನು ಅತ್ಯಂತ ಪ್ರೌಢಮುಖಭಾವದಿಂದ ಕೇಳಿದರೂ, ಅದರ ನಂತರ ಸುಮಾರು ವರ್ಷಗಳ ಕಾಲ ಅದರ ಲೇವಡಿಯ, ರಂಜನೆಯ ಅಂಶಗಳನ್ನು ಮಾತ್ರ ಅನುಕರಿಸಿಕೊಂಡು ಖುಷಿಯಾಗಿರಬೇಕೆನ್ನುತ್ತಿದ್ದ ಮನೋಭಾವದವರಾಗಿದ್ದೆವು. ಡಾ ವಿಂಚಿ ಮತ್ತು ಮಿಕೆಲೆಂಜೆಲೋವಿನ ನೈಜ ಮುಖಭಾವದ ಗಾಂಭೀರ್ಯದಲ್ಲಿ ಅವರ ಸಮಸ್ಯೆಗಳನ್ನು ಕೇಳಿ ಕೊನೆಗೆ ಅದೇ ಸಮಸ್ಯೆಯನ್ನು ಪಿಕಾಸೋನ ಕೊಲಾಜ್ ಚಿತ್ರಗಳಂತೆ ರಾಡಿ ಎಬ್ಬಿರಿಸಿಬಿಟ್ಟಿರುತ್ತಿದ್ದೆವು (ನೈಜತೆಯ ದೃಷ್ಟಿಕೋನದಿಂದ).  
 
     ಪ್ರಾಯಶಃ ಭವಿಷ್ಯದಿಂದ ಬರುತ್ತಿದ್ದ ಸಂದೇಶಗಳು, ಏನನ್ನು ಹೊತ್ತು ತರುತ್ತಿದ್ದಾವೆ ಎಂಬುದಕ್ಕಿಂತಲೂ ’ಅಲ್ಲಿಂದ ಬಂದವು’ ಎಂಬ ಅಂಶವೇ ಅಲ್ಲಿಂದ ಬರುತ್ತಿರುವ ಪ್ರತಿ ಸಂದೇಶದ ಏಕೈಕ ಸಂದೇಶವಾಗಿರಬಹುದೆ? ಎಂಬ ಅನುಮಾನವು ಅನೇಖನನ್ನು ಕ್ರಮೇಣ ಕಾಡತೊಡಗಿತ್ತು. ಇತರರನ್ನೂ ಕಾಡಿಲ್ಲವೆಂತಲ್ಲ. ಮಮಾ ಜೋರಾಗಿ ನಗಾಡಿಬಿಡುತ್ತಿದ್ದ ಈ ವಿಷಯವನ್ನು ಪ್ರಸ್ತಾಪಿಸಿದಾಗ. ಅದು ’ಹೌದು’ ಅಂತಲ ಅಥವ ’ಸಾಧ್ಯವೇ ಇಲ್ಲ’ ಅಂತಲ ಎಂದು ನಿರ್ದಿಷ್ಟ ಪಕ್ಷವಹಿಸುವ ನಗುವೆ ಎಂಬ ಬಗ್ಗೆ ಆತನಿಗೇ ಗ್ಯಾರಂಟಿ ಇರುತ್ತಿರಲಿಲ್ಲ. "ಯಾರಿಗ್ಗೊತ್ತು, ಇವತ್ತಿನ್ ತನಕ ದೇವ್ರು ಇಲ್ದೇ, ನಾಳೆ ಹುಟ್ಟಿದ್ರೂ ಹುಟ್ಟಿಬಿಡಬಹುದು. ಅದಕ್ಕೇ ಹೇಳೋದು ನಮ್ಮ ಅಭಿಪ್ರಾಯಗಳನ್ನು ಕಾಂಕ್ರೀಟಿನಲ್ಲಿ ಅಚ್ಚು ಹಾಕಿಸಿಬಿಡಬಾರದು," ಅಂತ ಎನ್ನುತ್ತಿದ್ದ. ನಲ್ಲಸಿವನ್ ಇದಕ್ಕಿಂತ ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದ. "ಭವಿಷ್ಯದಿಂದ ಬರುತ್ತಿರುವ ಸೋಕುಮಾರಿಯ ಪತ್ರಗಳು ಬಹುಶಃ ಮುಂದಿನ ಕಾಲದಿಂದಲೇ ಬರುತ್ತಿರಬಹುದು. ಒಂದೇ ದಿನದಲ್ಲಿ ಕಾಗದದ ಮೇಲಿನ ಅಕ್ಷರಗಳ ರೂಪದಲ್ಲಿ ಬರುವ ಅದು ಮರೆಯಾಗುತ್ತದೆಂದರೆ, ಒಂದಾರು ತಿಂಗಳಲ್ಲಿ ನಮ್ಮ ಮನಸ್ಸಿನಿಂದಲೇ ಅದು ಅಳಿಸಿಹೋಗುವ ಸಾಧ್ಯತೆಯೂ ಇರಬಹುದಲ್ಲವೆ?" ಎಂದು ಸ್ಪಷ್ಟವಾಗಿ ಅಡ್ಡಗೋಡೆಯ ಮೇಲೆ ದೀಪವಿರಿಸಿಬಿಡುತ್ತಿದ್ದ. ಈಗ ೨೦೧೧ರಲ್ಲಿ ಇದನ್ನು ಬರೆಯುತ್ತಿರುವಾಗ ಇದೆಲ್ಲ ನೆನಪಿದೆ. ಆದರೆ ನಲ್ಲಸಿವನ್ ಮಾತ್ರ ಯಾರಿಗೂ ಗೊತ್ತಿಲ್ಲದಂತೆ ಮಾಯವಾಗಿಬಿಟ್ಟಿರುವುದು ಕೇವಲ ಸಾಂದರ್ಭಿಕವಾಗಿರಲಾರದು ಎಂದು ಗೆಳೆಯರೆಲ್ಲರ ಅನುಮಾನ.
(೯೫)
     ಒಟ್ಟಾರೆಯಾಗಿ ಭವಿಷ್ಯದಿಂದ ಬರುತ್ತಿರುವ ಸಂದೇಶಗಳಿಂದ ಕೆಲವು ಅಂಶಗಳು ಸ್ಪಷ್ಟವಾದವು. ಅಥವ ೧೯೯೦ರ ಬಿಡಾ, ಮಮಾ, ಅನೇಖ, ಮಲ್ಲುಮೋಗನ, ರಮಾನಾಥೆಸ್ಸೆಮ್ಮೆಸ್, ಕೃತಿ.ಕೆ, ಸ್ಟೈಲಜಾ, ಸ್ಮಿತಾಕರಿ ಮುಂತಾದವರೆಲ್ಲರೂ ಒಂದು ಸೋಂಬೇರಿ ಮಧ್ಯಾಹ್ನದಂದು ಮಾಡಲೇನೂ ಕೆಲಸವಿಲ್ಲದವರಂತೆ ಈ ಭವಿಷ್ಯ-ಸಂದೇಶಗಳ ವಿಶ್ಲೇಷಣೆಗೆ ತೊಡಗಿಬಿಟ್ಟರು. 
"ಮೊದಲಿಗೆ ಹೆಣ್ಣಿನ ಜಗತ್ತಿನಿಂದ ಬರುತ್ತಿರುವ ಸಂದೇಶವದು. ಅಂದರೆ ಹೆಣ್ಣೇ ನಮ್ಮ ಭವಿಷ್ಯ ಎಂದಂತಾಯಿತು," ಎಂದ ಆಗಷ್ಟೇ ಚಾರ್ವಾಕಿಯ ದೆಸೆಯಿಂದ ಜೀವಂತ ಹೆಂಗಸೊಂದರ ಅತ್ಯಂತ ಸಮೀಪ ಹೋಗಿ ಬಂದಿದ್ದ ವೀರಾ.
"ಹೆಂಗಸರಿಗೂ ಹೆಣ್ಣೇ ಭವಿಷ್ಯವಾ?" ಎಂದು ಕಾಲೆಳೆದಿದ್ದಳು ಕೃತಿ.ಕೆ.
"ನೀನು ಜಾಸ್ತಿ ಮಾತಾಡ್ಬೇಡ. ಎಲ್ಲಾ ನಿನ್ನಿಂದಲೇ ಈ ಫ್ರಾಬ್ಲಾಂ," ಎಂದಿದ್ದ ಸೋಸ್ ಉರುಫ್ ಎಸ್.ಓ.ಎಸ್. ದೌಡಾ.
"ಅಯ್ಯೋ ನಾನೇನು ಮಾಡಿದೆ?" ಎಂದಳಾಕೆ.
"ಣಿಣ್ಣ ಅವಟಾರ ಭವಿಷ್ಯತ್ತಿಲೆ ಮಾಡ್ಲಿಕ್ಕೆ ಜೋಬ್ ಇಲ್ಲದೆ ನೆಮ್ಮ ನಮ್ಮದಿ ಕೆಡಿಸ್ಲಿಕ್ಕೆ ಹೀಗೆ ರೀವರ್ಸ್ ಲೆಟರ್ಸ್ ಬರೀಲಿಕ್ಕೆ ಉಂಟು. ಅದಕ್ಕೆ ಆತ ಣಿಣಕೆ ಅಡ್ವಾನ್ಸಾಗಿ ಬಯ್ಯುತ್ತಿರುವುದು," ಎಂದ ನಲ್ಲಸಿವ. ಮಲಯಾಳಿಯಾದರೂ ಕನ್ನಡಿಗನಾದ ಆತ ಮಲ್ಲು ಆಕ್ಸೆಂಟಿನ ಈ ವಾಕ್ಯವನ್ನು ನಿರ್ಮಿಸಲು ಬಹಳ ಶ್ರಮಪಟ್ಟುಬಿಟ್ಟರೂ ಸುಮಾರು ಜನಕ್ಕೆ ಅದರರ್ಥವಾಗಲಿಲ್ಲ.
"ಸೀರಿಯಸ್ಸಾಗಿರಿ ಲೈಫಲ್ಲಿ ಒಂದ್ಸಲಾನಾದ್ರೂ ಎಲ್ರೂ," ಎಂದು ಬಿಡಾ ಮುಂದುವರೆಸಿದ್ದ, "ಸೋಕುಮಾರಿ ಭವಿಷ್ಯದಿಂದ ನಮ್ಮನ್ನು ಸಂಪರ್ಕಿಸುತ್ತಿದ್ದಾಳೆ ಸರಿ. ಆದರೆ ಒಬ್ಬ ಹೆಣ್ಣೇ ನಮ್ಮನ್ನು ಕಾಂಟ್ಯಾಕ್ಟ್ ಮಾಡಲು ಯತ್ನಿಸುತ್ತಿರುವುದರಲ್ಲಿ ವಿಶೇಷವೇನೋ ಇರಬೇಕು. ಮತ್ತೊಂದು ವಿಷ್ಯ. ಏನಪ್ಪಾಂದ್ರೆ, ಆಕೆ ಕಳಿಸುತ್ತಿರುವ ಸಂದೇಶಗಳು ಪತ್ರದ ಮೇಲಿನ ಅಕ್ಷರಗಳಾಗಿದ್ದು, ಅವು ಕನ್ನಡದಲ್ಲಿದ್ದು, ನಾವ್ಯಾರಾದರೂ ಆ ಪತ್ರವನ್ನು ಮೊದಲ ಬಾರಿಗೆ ತೆಗೆದ ಕ್ಷಣದಿಂದ ಇಪ್ಪತ್ತನಾಲ್ಕು ಗಂಟೆಯೊಳಗಾಗಿ ಮಾಯವಾಗುತ್ತಿರುವುದು.."
"ಅಂದ್ರೆ ೨೦೧೧ಕ್ಕೇ ಕನ್ನಡ ಭಾಷೆ ಮಾಯವಾಗಿಬಿಟ್ಟಿರುತ್ತದಾ?" ಎಂದ ಕನ್ನಡಾಭಿಮಾನಿ ಈರಡಬ್ರಿ.
"ಭಾಷೇನ ಕೊಲ್ಲೋಕೋದರೆ ಅದು ರಕ್ತಬೀಜಾಸುರವಾಗುತ್ತದೆ. ಯಾಕಂದ್ರೆ ಕೊಲ್ಲೋಕೂ ಅದನ್ನೇ ಬಳಸಬೇಕಲ್ಲ. ಭಾಷೇನ ಕೊಲ್ಲಲಾಗದು, ಮರೀಬಹುದು ಅಷ್ಟೇ," ಎಂದ ಬಿಡಾ, "ವಿಷಯಕ್ಕೆ ಬನ್ನಿ. ಭವಿಷ್ಯದಿಂದ ಭೂತಕ್ಕೆ ಯಾರೂ ಯಾರನ್ನೂ ಸಂಪರ್ಕ ಮಾಡೋಕೋಗಲ್ಲ. ವರ್ತಮಾನದಿಂದ ಭೂತವನ್ನು ಒಂದರ್ಥದಲ್ಲಿ ಸೆರೆಹಿಡಿಬಹುದೇ ಹೊರತು ಭೂತ ಮತ್ತು ವರ್ತಮಾನದಿಂದ ಭವಿಷ್ಯವನ್ನು ಸೆರೆಹಿಡಿಯಲಾಗದು. ನೈಜವಾಗಿರುವುದನ್ನು ಕಳೆದುಕೊಂಡ ಕ್ಷಣದ ಭ್ರಮೆಯೇ ಕಾಲಮಾಪನ.." ಇನ್ನೂ ಏನೇನೋ ವ್ಯಾಖ್ಯಾನಿಸುವ ಹೊತ್ತಿಗೆ ಎಲ್ಲರೂ ಅಲ್ಲಿಂದ ವ್ಯಾಖ್ಯೆಯ ಭಾರಕ್ಕೆ ನಿರ್ಲಜ್ಜರಾಗಿ ಜಾಗ ಖಾಲಿ ಮಾಡಿದ್ದರು.  
 
(೯೬)
 
ಅನೇಖ, ೧೯೯೦, ಜನವರಿ:
 
      ೨೦೧೧ ಎಂ ಭವಿಷ್ಯತ್ ಕಾಲದೊಂದಿಗಿನ ಸಂಪರ್ಕವನ್ನು ನಾನು ಮಾತ್ರ ನನ್ನದೇ ಕ್ರಮದಲ್ಲಿ ಒಪ್ಪಿ, ಗ್ರಹಿಸತೊಡಗಿದ್ದೇನೆ. ಎರಡು ದಶಕದ ಭವಿಷ್ಯದ ಕಾಲದಿಂದ ಬರುವ ಸಂಪರ್ಕವನ್ನೇ ಅನುಮಾನದಿಂದೇಕೆ ನೋಡಬೇಕು? ನಾವು ಮಾಡುವ ನಿದ್ರೆಯ ಪ್ರತಿಕ್ಷಣವೂ ಸಹ ಕಾಲದ ಅನಂತ ಆಯಾಮಕ್ಕೆ ಕೊರೆದ ತೂತಲ್ಲವೆ? ಎಂದು ನಾನು ಬರೆದುದನ್ನು ಓದಿ ಸೋಕುಮಾರಿ ೨೦೧೧ರಿಂದ ಮೆಚ್ಚುಗೆ ಸೂಸುವ ಪತ್ರವನ್ನು ಬರೆದಿದ್ದಳು. ’ತನ್ನನ್ನು ಭವಿಷ್ಯದಲ್ಲಿರುವವರೊಬ್ಬರು ಮೆಚ್ಚುವುದೆಂದರೆ ತಾನು ಪ್ರಸಿದ್ಧನೆಂದೇ ಅರ್ಥ. ವರ್ತಮಾನದ ಕ್ರಿಯೆಯನ್ನು ಭವಿಷ್ಯವು ಮೆಚ್ಚಿ ಸ್ವೀಕರಿಸುವುದನ್ನೇ ದಂತಕಥೆ ಎನ್ನುವುದು. ವರ್ತಮಾನದಲ್ಲೇ ಜನಪ್ರಿಯರಾಗಿ, ದಂತಕಥೆಯಾದವರುಗಳ ಕ್ರಿಯೆಯಲ್ಲಿ ಹಾಗಾಗುವುದೂ ಕ್ರಿಯಾತ್ಮಕತೆಯ ಭಾಗ ಎಂಬ ಭಾವವುಂಟು’ ಇತ್ಯಾದಿಯಾಗಿ ನಾನು ಬರೆದ ವಾಕ್ಯಗಳನ್ನು ಸೋಕುಮಾರಿಗೆ ಓದಿ, ’ನಿನಗೆ ಕಾಲಾತೀತವಾದ ಸತ್ಯಗಳನ್ನು ಕುರಿತಾದ ನಿನ್ನ ಅಭಿಪ್ರಾಯಗಳನ್ನು ಮತ್ತಷ್ಟು ಸಾಣೆ ಹಿಡಿದಲ್ಲಿ, ಕೇವಲ ಆಸಕ್ತಿಕರ ಶೀರ್ಷಿಕೆ ಬರೆವ ಬದಲು ಅವುಗಳಿಗೆ ಒಳ್ಳೆಯ ಭಾಷ್ಯವನ್ನೂ ಬರೆಯಬಲ್ಲೆ’, ಎಂದಿದ್ದಳು. ಒಮ್ಮೆಲೆ ನನಗಾಕೆ ಮೇಡಂ ತರಹ ಅನ್ನಿಸಿಬಿಟ್ಟಳು. ಆಕೆಯ ಈ ಹೇಳಿಕೆಯ ಆಳವನ್ನು ಲೇಖನದಂತೆ ವಿಸ್ತಾರವಾಗಿ ಗ್ರಹಿಸದೆ ಮತ್ತೆ ಶೀರ್ಷಿಕೆಯೊಂದರ ಕೆಲವೇ ಪದಗಳಂತೆ ಭಾವಿಸಿ, ಅಷ್ಟಕ್ಕೇ ಥ್ರಿಲ್‌ಗೊಂಡಿದ್ದೆ. ಆಕೆಯ ಪ್ರಸ್ತುತ ರೂಪ, ಅಂದರೆ ಈಗ ನನ್ನ ಸಹವಿದ್ಯಾರ್ಥಿನಿಯಾದ ಸೋಕುಮಾರಿಯನ್ನು ಎಷ್ಟೇ ದಿಟ್ಟಿಸಿ ನೋಡಿದರೂ, ಕೆದಕಿ ಮಾತನಾಡಿಸಿದರೂ ಭೌತಿಕ ವ್ಯವಹಾರವನ್ನು ಮೀರುವ ಯಾವ ಸೂಕ್ಷ್ಮ ಹಂದರಗಳೂ ಗೋಚರಿಸುತ್ತಿಲ್ಲ ಅಕೆಯಲ್ಲಿ!
 
     ಎಲ್ಲರೂ ಸೋಕುಮಾರಿಗೆ ಕೇವಲ ಪ್ರಶ್ನೆಗಳನ್ನು ಕೇಳುವುದು, ತಮ್ಮ ಭವಿಷ್ಯವನ್ನು ಕುರಿತು ವಿಚಾರಿಸುವುದರಲ್ಲೇ ತೊಡಗಿದ್ದಾಗ ನಾನು ಇಲ್ಲಿನ ಆಗುಹೋಗುಗಳನ್ನು ಅಲ್ಲಿಗೆ ರವಾನಿಸತೊಡಗಿದ್ದೆ. ಅಂದರೆ ೧೯೯೦ರ ಪರಿಷತ್ತಿನ ಆಗುಹೋಗುಗಳನ್ನು ೨೦೧೧ಕ್ಕೆ ಭಿತ್ತರಗೊಳಿಸುತ್ತಿದ್ದೆ. ಹಾಗಿರುವಾಗೊವ ಚಾರ್ವಾಕಿಯ ವಿಷಯ ಬಂದಿತು. "ಯಾರು, ಆ ಅಳತೆಯ, ಈ ವರ್ಣದ, ಇಷ್ಟು ವಯಸ್ಸಿನ ಈ ವೃತ್ತಿಯವಳೇ?" ಎಂದು ಸೋಕುಮಾರಿ ಕೇಳುತ್ತಲೇ ’ಹೌದು, ಹೌದು, ನಿನಗೆ ಹೇಗೆ ಗೊತ್ತು?’ ಎಂದುತ್ತರಿಸುವ ಪ್ರಶ್ನೆ ಕೇಳಿದ್ದೆ. 
 
     "ಆಕೆ ನನ್ನ ಸ್ನೇಹಿತೆ ಮತ್ತು ಸಹೋದ್ಯೋಗಿ, ಬಾಯ್ಸ್ ಕಲಾಶಾಲೆಯಲ್ಲಿ," ಎಂದು ಸ್ಪಷ್ಟೀಕರಣ ನೀಡಿದ್ದಳು ೨೦೧೧ರ ಸೋಕುಮಾರಿ! ಅಲ್ಲಿಗೆ ಆಕಾಶವೇ ಕಳಚಿ ಬಿದ್ದಂತಾಗಿತು ನನಗೆ. ಅದೇ ವಯಸ್ಸಿನ, ಅದೇ ವ್ಯಕ್ತಿ, ಒಂದೇ ವಯಸ್ಸಿನವಳಾಗಿ ಎರಡು ಕಾಲಘಟ್ಟಗಳಲ್ಲಿರುವುದನ್ನು ಅಸಂಗತ ಮಾಪನದಲ್ಲಿ ಎಲ್ಲಿರಿಸಿವುದು ಎಂಬ ಗೊಂದಲಕ್ಕೆ ಬಿದ್ದಿದ್ದ್ದೆ. ಇಷ್ಟರಲ್ಲಾಗಲೇ ಅನೇಕ ದಿನಗಳಿಂದ ವೀರಾ ನನ್ನಿಂದ ದೂರವಾಗತೊಡಗಿದ್ದ, ಅಥವ ದೂರವಾಗುತ್ತಿದ್ದೇನೆಂದು ಹತ್ತಿರ ಬಂದು ಬಂದು ಹಲವು ಬಗೆಗಳಲ್ಲಿ ಸೂಚನೆ ನೀಡುತ್ತಿದ್ದ. ’ಬೆಳೀತಾ ಬೆಳೀತಾ ದೋಸ್ತುಗಳು ದೊಡ್ಡೋರಾದ್ಮೇಲೆ ಸ್ಪರ್ಧಿಗಳಾಗ್ತಾರೆ’ ಎನ್ನುವ ಕಲಾವಲಯದ ಹೇಳಿಕೆಯನ್ನು ಈಗ ಸೂಕ್ತವಾಗಿ ಗ್ರಹಿಸಿದಂತಾಗಿತ್ತು ನನಗೆ. ಇನ್ನು ಮುಂದಿನ ಎಡವಟ್ಟುಗಳಾಗುವ ಮುನ್ನ ಚಾರ್ವಾಕಿಯನ್ನು ಭೇಟಿ ಮಾಡಲೇಬೇಕು ಎಂದು ಒಂದು ದೃಢ ನಿರ್ಧಾರಕ್ಕೆ ಬಂದುಬಿಟ್ಟೆ. ನೇರ ಬಾಯ್ಸ್ ಕಲಾಶಾಲೆಯ ಕಡೆ ಊಟದ ಹೊತ್ತಿನಲ್ಲಿ ಹೆಜ್ಜೆ ಹಾಕತೊಡಗಿದೆ. ಚಾರ್ವಾಕಿ ಮೇಡಮ್ಮಳ ಕೋಣೆ ಹೊಕ್ಕು ಮಧ್ಯಾಹ್ನ ಕಳೆಯಿತು, ಇರುಳಿನ ತಿರುಳೂ ಮುಗಿಯಿತು, ಆಕೆಯ ಸ್ಟಾಫ್ ರೂಮಿನಿಂದ ಆಕೆಯ ಸಹೋದ್ಯೋಗಿಗಳೆಲ್ಲಾ ಬಾಗಿಲಿನಿಂದ ಹೊರಬಂದರೆ, ಸಿಗರೇಟಿನ ಹೊಗೆ ಕಿಟಕಿಯಿಂದ ಹೊರಬರುತ್ತಿತ್ತು. ಸಹೋದ್ಯೋಗಿಗಳು ಮನೆಗೆ ಹೋದರೆ, ಹೊಗೆ ಮಾತ್ರ ಚಾರ್ವಾಕಿ ಮತ್ತು ನನ್ನ ಮಾತುಗಳನ್ನು ಕೇಳುವ ಕಳ್ಳಾಸೆಯಿಂದ, ತಾನು ಒಗೆಯಾದ್ದರಿಂದಲೇ ಬೇಕುಬೇಕಾದಂತೆ ಬಾಗಿ, ತೋರಿಕೆಯ ಅವಶ್ಯಕತೆ ಇಲ್ಲದಂತೆ ತಾವೇ ತಾವಾಗಿ ಒಳಗಿನ ನಮ್ಮಿಬ್ಬರನ್ನೂ ಯಾವುದೇ ಬಿಂಕಬಿಗುಮಾನವಿಲ್ಲದೆ ಸುತ್ತುವರೆದಿದ್ದವು. 
(೯೭)
ಅನೇಖ, ೧೯೯೦, ಜನವರಿ:
 
     "ವೀರಾ, ಚಾರ್ವಾಕಿಗೆ ನಮ್ಮೆಲ್ಲರ ತುರ್ತು ಸಹಾಯ ಬೇಕಿದೆ. ಅದರಲ್ಲೂ ಸಾಂಪ್ರದಾಯಿಕ ಚಿತ್ರಕಾರರ ಕುಟುಂಬದಿಂದ ಬಂದ ನಿನ್ನ ಸಹಾಯವಂತೂ ತೀರ ತುರ್ತಿನದ್ದಾಗಿದೆ," ಎಂದಿದ್ದೆ, ಪ್ಲಾಝಾ ಥಿಯೇಟರಿನ ಅಂದಿನ ಆ ನಿರ್ದಿಷ್ಟ ಘಟನೆಯು ವೀರಾನನ್ನು ಎಷ್ಟರಮಟ್ಟಿಗೆ ಅಂತರಿಕವಾಗಿ ಕುಸಿಯುವಂತೆ ಮಾಡಿದೆ ಎಂಬುದರ ಸ್ಪಷ್ಟ ಅರಿವಿದ್ದೂ ಸಹ. ಚಾರ್ವಾಕಿಯನ್ನು ಭೇಟಿ ಮಾಡಿದ ಕೆಲವೇ ದಿನಗಳ ನಂತರ ವೀರಾನನ್ನು-ಆತ ನನ್ನ ಸಹಪಾಠಿಯಾದರೂ ಸಹ--ನಿರ್ದಿಷ್ಟ ಕಾರಣಕ್ಕಾಗಿ ಭೇಟಿ ಮಾಡಿದ್ದೆ. 
"ಅನೇಖ. ನನಗೆ ಚಾರ್ವಾಕಿಯ ಮೇಲೆ ವಿಶ್ವಾಸ ಹೋಗಲು ಅದು ಮೊದಲಿಗೆ ಅಲ್ಲಿ ಇರಲೇ ಇಲ್ಲ. ಇದ್ದದ್ದೆಲ್ಲಾ ಆಸೆ, ಅಸ್ಪಷ್ಟವಾದ ಆಸೆ, ಆಕೆಯ ಮೂಲಕ ಸಾಧಿತವಾಗುತ್ತದೆಂಬ ಆಸೆ. ಆದರೆ ಕರೆಂಟು ಹೋದಾಗ ನಾನು ಕಾಫಿ ತಂದಾಗ ಅತ್ತ ನಿನ್ನ ತೆಕ್ಕೆಯಲ್ಲಿ ಆಕೆ.." ಎನ್ನುತ್ತಿದ್ದಾಗಲೇ ನಾನು ಆತನನ್ನು ತಡೆದು,
"ನನ್ನ ತೆಕ್ಕೆಯಲ್ಲಿ ಆಕೆಯಲ್ಲ, ಆಕೆಯ ತೆಕ್ಕೆಯಲ್ಲಿ ನಾನು ಎನ್ನು ಅದು ಸರಿಯಾದೀತು?"
"ಯಾವುದೋ ಒಂದು. ಎರಡರಲ್ಲೂ ಸ್ಪರ್ಶಸುಖವಂತೂ ಇದ್ದೇ ಇದೆಯಲ್ಲ!" ಎಂದು ಸುಮ್ಮನಾದ ವೀರಾ.
"ವೀರಾ, ನಿನ್ನ ಬದಲಿಗೆ ನನಗೆ ಹಾಗಾಗಿದ್ದರೂ ನಾನೂ ಧೃತಿಗೆಡುತ್ತಿದ್ದಿರಬಹುದಾದ ಸಾಧ್ಯತೆಯೇ ಹೆಚ್ಚು. ಆದರೆ ವಿಷಯವು-ಚಾರ್ವಾಕಿಗೆ ನಿನ್ನಿಂದ ಈಗ ಆಗಬೇಕಿರುವ ಸಹಾಯ ಮತ್ತು ಅಂದಿನ ಪ್ಲಾಝಾ ಥಿಯೇಟರಿನ ಘಟನೆಗಳಿಗೆ--ನಾವು ಭಾವಿಸಿದ್ದಕ್ಕಿಂತಲೂ ಆಳವಾದ ಅರ್ಥಗಳನ್ನು ಒಳಗೊಂಡಿವೆ," ಎಂದು ವೀರಾನಿಗೆ ಎಲ್ಲವನ್ನೂ ಬಿಡಿಸಿಹೇಳತೊಡಗಿದೆ. ಮುಂದುವರೆದು ಮಾತನಾಡತೊಡಗಿದೆ, "ಮೊದಲಿಗೆ ನನಗೂ ನಂಬಿಕೆ ಬರಲಿಲ್ಲ. ಮಧ್ಯಾಹ್ನದಾದ್ಯಂತ ಚಾರ್ವಾಕಿಯ ಸ್ಟಾಫ್‌ರೂಮಿನಲ್ಲೇ ಕುಳಿತು, ಸೀರಾಕ್ ಹೋಟೆಲ್ಲಿನಿಂದ ಎಲ್ಲಾ ಸಪ್ಲೈ ತರಿಸಿಕೊಂಡು ಕೇಳಿದಂತಹ ವಿವರವಿದು. ನನಗೂ ಕೆಲವು ಅನುಮಾನಗಳಿದ್ದು, ಅವು ಈಗ ಒಂದು ರೂಪುಪಡೆದುಕೊಂಡಿದೆ. ನೀನು ನಂಬಲೇಬೇಕೆಂದೇನಿಲ್ಲ. ಅಷ್ಟು ಸುಲಭಕ್ಕೆ ನಂಬುವವ ನೀನಲ್ಲ ಎಂಬ ನನ್ನ ನಂಬಿಕೆಗೇ ಬಲ ಜಾಸ್ತಿ.
ವಿಷಯ ಹೀಗಿದೆ: ಸೋಕುಮಾರಿಯಿಂದ ಭವಿಷ್ಯದಿಂದ ೨೦೧೧ರಿಂದ ೧೯೮೯ಕ್ಕೆ ಪತ್ರಗಳು ಬರುವಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಯಾವುದೂ ಇಲ್ಲಿ ಕಾರ್ಯ ಕಾರಣ ಸಂಬಂಧವಿಲ್ಲದೆ ಉಂಟಾಗಲಾರದು. ಆ ’ಕಾರ್ಯ-ಕಾರಣ ಸಂಬಂಧ’ ಅಥವ ಅದನ್ನು ಕುರಿತಾದ ನಂಬಿಕೆಗೇ ಇಂದು ಕುತ್ತು ಬಂದಿದೆ," ಎಂದು ನಾನು ಅರುಹಿದ್ದನ್ನು ವೀರಾ ಎಷ್ಟರಮಟ್ಟಿಗೆ ಸ್ವೀಕರಿಸಿದನೆಂಬುದನ್ನು ಆತನ ಪ್ರತಿಕ್ರಿಯೆಯೇ ಸೂಚಿಸಿತ್ತು.
 
"ಇದೆಲ್ಲಾ ಫಿಲಾಸಫಿ ಬಿಟ್ಟಾಕು ಗುರುವೆ. ಚಾರ್ವಾಕಿಗೆ ನನ್ನಿಂದ ಏನಾಗಬೇಕಿದೆ?" ಎಂದು ಇರುಸುಮುರಿಸುಗೊಂಡ ವೀರಾ. ವೀರಾನ ಕೋಣೆಯಲ್ಲಿ ಕುಳಿತಿದ್ದ ನಮ್ಮಿಬ್ಬರ ಹಿಂದೆ, ಗೋಡೆಗಳ ಮೇಲೆಲ್ಲಾ ಅರೆ-ಪೂರ್ಣಗೊಂಡ ಅಸಲಿ ಕೃತಿಗಳು, ಕೆಲವು ವರ್ಣಮಯ ನಕಲಿ ಚಿತ್ರಗಳು, ಸಾಪ್ಟ್ ಬೋರ್ಡಿನ ಮೇಲಿದ್ದ ಪೇಪರ್‌ಕಟಿಂಗ್‌ಗಳು, ಪುಸ್ತಕಗಳಲ್ಲಿನ ಚಿತ್ರಗಳನ್ನು ಝೆರಾಕ್ಸ್ ಮಾಡಿ ಅಂಟಿಸಲಾಗಿದ್ದ ದೃಶ್ಯಗಳಿದ್ದವು. ನಾನು ವೀರಾನಿಗೆ ಕೆಲವು ಗುಟ್ಟುಗಳನ್ನು ಬಿಡಿಸಿ ಹೇಳತೊಡಗಿದೆ, "ಮೊದಲಿಗೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿಬಿಡಬೇಕು. ಪ್ರೀತಿ, ಪ್ರೇಮ, ಪ್ರಣಯ ಅನ್ನೋದೆಲ್ಲಾ ಆಕಸ್ಮಿಕವಾಗಿ, ದೈವೇಚ್ಛೆ ಮೀರಿ ಎರಡು ವಿರುದ್ಧ ಲಿಂಗೀಯ ವ್ಯಕ್ತಿಗಳಲ್ಲಿನ ಪರಸ್ಪರ ರಸಾಯನಶಾಸ್ತ್ರ ಅಥವ ಕೆಮಿಸ್ಟ್ರಿಯಿಂದಾಗುವುದು ಅಂದುಕೊಳ್ಳುತ್ತೇವಲ್ಲ, ಆ ಕಾಲದ ಅಂಚಿನಿಂದ ಬಂದವಳು ಚಾರ್ವಾಕಿ. ಇನ್ನು ಇಪ್ಪತ್ತು ವರ್ಷಗಳ ಮುಂದಿನಿಂದ ಬಂದಿರುವುದು ಎಂದು ನಂಬಬಹುದಾದ ಸುದ್ದಿ ಏನೆಂದರೆ ಚಾರ್ವಾಕಿಗೆ ಈಗಿರುವುದಕ್ಕಿಂತಲೂ ಒಂದು ವರ್ಷವೂ ಆಯಸ್ಸು ಆಕೆಗೆ ಆಗುವುದೇ ಇಲ್ಲವಂತೆ, ಆಕೆ ಇಚ್ಛೆಪಡದಿದ್ದಲ್ಲಿ. ಆದ್ದರಿಂದ ಪ್ಲಾಝಾದಲ್ಲಿ ನಿನ್ನ ಕೈಯನ್ನು ಆಕೆ ಹಿಡಿದಿದ್ದಾಗ, ಆಮೇಲೆ ನೀನು ಆಕೆಯ ಕೈಯನ್ನು ಹಿಡಿದು ಅಂಗೈಯಲ್ಲಿಟ್ಟುಕೊಂಡಾಗಿನ ವ್ಯತ್ಯಾಸವೇನು ಗೊತ್ತೆ?" ಕೇಳಿದ ಅನೇಖ.
"ಅದೇ ಸ್ಪರ್ಶಸುಖದ ಬೆಚ್ಚನೆಯ ಭಾವ."
"ಅದೇ ಅಕ್ಕನ ಗಂಡ ಭಾವ! ತಮಾಷೆಯಾಗಿದೆ. ಸರಿಯಾಗಿ ನೆನಪು ಮಾಡಿಕೋ. ಆಕೆ ನಿನ್ನಯ ಕೈಯನ್ನು ಹಿಡಿದಿರಿಸಿಕೊಂಡಿದ್ದಾಗ ಆಕೆಯ ಸ್ಪರ್ಶವು ನಿನಗೆ ಸೇಂದ್ರೀಯ ಅನುಭವ ನೀಡಿದ್ದೇನೋ ಸರಿ. ಆದರೆ ನೀನಾಗಿ ಆಕೆಯ ಕೈಯನ್ನು ಹಿಡಿದಿರಿಸಿಕೊಂಡಾಗ ಅದೇ ಸ್ಪರ್ಷವಿತ್ತೆ, ಸ್ಪಷ್ಟವಾಗಿ ನೆನಪು ಮಾಡಿಕೋ?"
"ಇಲ್ಲ," ಎಂದ ವೀರಾ, ತನ್ನೊಳಗಿನ ಗೊಂದಲವನ್ನು ಹೊರಗೆಡವದೆ.
"ನೀನು ಕಾಫಿ ತಂದಾಗ, ನನ್ನ ಕೈಯನ್ನು ಆಕೆ ಹಿಡಿದಿದ್ದಳೋ ಅಥವ ಆಕೆಯನ್ನು ನಾನು ಹಿಡಿದಿದ್ದೆನೋ?"
"ಆಕೆ ನಿನ್ನನ್ನು ಹಿಡಿದಿದ್ದಳು..?"
"ನೋಡು ಅದೇ ವ್ಯತ್ಯಾಸ. ನಾನಾಗಿ ಆಕೆಯನ್ನು ಹಿಡಿದಿರಲಿಲ್ಲ. ಇನ್ನೂ ಅಚ್ಚರಿಯ ವಿಷಯವೆಂದರೆ ನಾನಲ್ಲಿ ಇರಲೇ ಇಲ್ಲ!! ಅಲ್ಲಿನ ನಾನು ಆಕೆಯ ಬಲಗೈಯಲ್ಲಿದ್ದ ವಾಚಿನಾಕಾರದ ಯಂತ್ರದ ಉದ್ದೀಪನೆಯೊಂದಿಗೆ ಮೂಡಿಬಂದಿದ್ದ ನನ್ನ ಪ್ರತಿಮೆಯಷ್ಟೇ. ಭವಿಷ್ಯದಲ್ಲಿ ಮನುಷ್ಯರ ’ಸ್ಪರ್ಶ’ವನ್ನು, ನಾವೀಗ ಫೋಟೋದಲ್ಲಿ ಎದುರಿಗಿರುವವರ ’ಆಕಾರ’ವನ್ನು ಸೆರೆ ಹಿಡಿಯುತ್ತೇವಲ್ಲ ಹಾಗೆ ’ಸ್ಪರ್ಶ’ವನ್ನು ಹಿಡಿದಿರಿಸಬಲ್ಲ ಯಂತ್ರ ಬರಲಿದ್ದು, ಆಕೆಯ ಕೈಯಲ್ಲಿರುವುದು ಆ ಯಂತ್ರವೇ," ಎಂದು ಹೇಳಿ ವೀರಾನ ಅಚ್ಚರಿಯುಕ್ತ ಮುಖಭಾವವನ್ನು ಗಮನಿಸಲುದ್ಯುಕ್ತನಾದೆ. ಇನ್ನೂ ಆತ ಭಗ್ನಪ್ರೇಮದ ತಲಬಾಗಿಲ ಬಳಿ ಇದ್ದರೂ ಅದನ್ನು ದಾಟಿರಲಿಲ್ಲವೆಂಬುದು ಆತನ ಮುಖಚಹರೆಯ ಮೇಲೆ ಸ್ಪಷ್ಟವಾಗಿ ’ಎಚ್’ ಆಗಿತ್ತು.
 
"ನಿನ್ನ ಪ್ರತಿಕ್ರಿಯೆ ನೋಡಲೆಂದೇ ಆಕೆ ನನ್ನ ಸ್ಪರ್ಶ-ದೃಶ್ಯವನ್ನು ತನ್ನ ಯಂತ್ರದಿಂದ ಉದ್ದೀಪಿಸಿ ನನ್ನನ್ನು ತನ್ನ ಸೀಟಿನ ಬಲಬದಿಗೆ ಕುಳ್ಳಿರಿಸಿದ್ದಳು. ನೀನು ಸಿಟ್ಟುಮಾಡಿಕೊಂಡು ಅಲ್ಲಿಂದ ಓಡಿಹೋದೆ. ಇದನ್ನು ನಂಬು ಎಂದು ನಾನು ನಿನಗೆ ಹೇಳುತ್ತಿಲ್ಲ, ಆದರೆ ಇದನ್ನು ಕೇಳಬಹುದಾದಂತಹ ನಂಬಿಗಸ್ಥ ನೀನು ಎಂಬ ವಿಶ್ವಾಸದಿಂದ ಮಾತ್ರ ನಿನಗೆ ಇದನ್ನು ಹೇಳುತ್ತಿದ್ದೇನೆ," ಎಂದು ನಾನು ನುಡಿದಾಗ ವೀರಾನಲ್ಲಿ ಆತ್ಮವಿಶ್ವಾಸದ ಸ್ನಾಯುಗಳು ಸಡಿಲಗೊಂಡವು. 
"ಆದರೆ ಒಂದು ವಿಷಯ ಸ್ಪಷ್ಟವಾಗಲಿಲ್ಲ ನನಗೆ ಅನೇಖ. ಆಕೆಯನ್ನು ಮುಟ್ಟಿದವರಿಗೆ ಆಕೆಯ ಸ್ಪರ್ಶ ಲಭ್ಯವಾಗದು. ಆದರೆ ಆಕೆ ಯಾರನ್ನಾದರೂ ಮುಟ್ಟಿದರೆ ಮುಟ್ಟಿಸಿಕೊಂಡವರಿಗೆ ಮತ್ತು ಆಕೆಗೆ, ಇಬ್ಬರಿಗೂ ಆ ಸ್ಪರ್ಶ ಲಭ್ಯವಾಗುತ್ತದೆ, ಸರಿಯೆ?"
"ಹೌದು. ಸರಿ," ಎಂದೆ.
"ನೀನು ಥಿಯೇಟರಿನಲ್ಲಿ ಆಗ ಇರಲಿಲ್ಲ. ಆದರೂ ಆಕೆ ತನ್ನ ’ಸ್ಪರ್ಶ-ಕೆಮರ’ದಿಂದ ನಿನ್ನ ಪ್ರತಿಮೆಯ ’ಸ್ಪರ್ಶ-ಪ್ರಿಂಟನ್ನು’ ಹೊರತೆಗೆದು ನಿನ್ನನ್ನು ಮುಟ್ಟಿದ್ದಳು."
"ಹೌದು?"
"ಆಗ ನೀನು ಎಲ್ಲಿದ್ದೆ?"
"ಸರಿಸುಮಾರು ಪರಿಷತ್ತಿನ ಕಡೆ ಬರುತ್ತಿದ್ದೆ ಮನೆಯಿಂದ, ರಾತ್ರಿಯ ಪಾಳಿಗೆ."
"ಆಕೆ ನಿನ್ನ ಸ್ಪರ್ಶ-ಪ್ರತಿಮೆಯನ್ನು ಥಿಯೇಟರಿನಲ್ಲಿ ಮುಟ್ಟಿದಾಗ ಅಸಲಿ ನಿನಗೆ ಅದರ ಅನುಭವವಾಗಿರಲೇಬೇಕು, ಏಕೆಂದರೆ ಅದಕ್ಕೂ ಮುನ್ನ ಆಕೆ ನನ್ನ ಕೈಹಿಡಿದುಕೊಂಡಾಗ ನನಗೆ ಆಕೆಯ ಸ್ಪರ್ಶದ ಅನುಭವವಾಗಿತ್ತು."
"ಇಲ್ಲ. ನನಗೆ ಆಕೆಯ ಸ್ಪರ್ಶ ಆಗಿರಲಿಲ್ಲ. ಇಂದು ಮಧ್ಯಾಹ್ನ ಆಕೆ ಸ್ಪಷ್ಟಗೊಳಿಸಿದ ವಿಷಯವೊಂದಿತ್ತು," ಎಂದೆ.
"ಏನದು?" ಕೇಳಿದ ವೀರಾ.
"ಆಕೆಯ ಸ್ಪರ್ಶ-ಕೆಮರಾದಿಂದ ಸೆರೆ ಹಿಡಿದ ಯಾವುದೇ ಆಕಾರವನ್ನೂ ಬೇಕಾದಾಗ ಹೊರಕ್ಕೆ ಪ್ರೊಜೆಕ್ಟ್ ಮಾಡಿ ಅದನ್ನು ಸ್ಪರ್ಶಿಸಬಲ್ಲಳಂತೆ. ಆಗ ಅಲ್ಲಿ ಪ್ರೊಜೆಕ್ಟ್ ಆದ ವ್ಯಕ್ತಿಗಳಿಗೂ ಸಹ-ಅಂತಹವರುಗಳು ಎಲ್ಲಿಯೇ ಯಾವ ಸ್ಥಿತಿಯಲ್ಲಿಯೇ ಇರಲಿ--ಆಕೆಯ ಸ್ಪರ್ಶ ಉಂಟಾಗುತ್ತದಂತೆ!" ಎಂದು ಹೇಳಿ ಆತನನ್ನು ಗಮನಿಸತೊಡಗಿದೆ. ಆತನ ಮುಖಭಾವ ಗಾಂಭೀರ್ಯದಿಂದ ಹಸನ್ಮುಖಿಯಾಗಿ ನಂತರ ಪೋಲಿಯಾಗತೊಡಗಿತು. "ಓಕೆ, ಓಕೆ. ಅರ್ಥವಾಯಿತು. ’ಆಕೆ ಯಾರನ್ನು ಸ್ಪರ್ಶ-ಕ್ಯಾಮರಾದಲ್ಲಿ ಪ್ರೊಜೆಕ್ಟ್ ಮಾಡುತ್ತಾಳೋ ಆಗ ಆ ಪ್ರೊಜೆಕ್ಟ್ ಆದವರು ಯಾವ ಸ್ಥಿತಿಯಲ್ಲಿರುತ್ತಾರೋ ಅದೂ ಮುಖ್ಯವಾಗುತ್ತದಾ?’ ಎಂಬ ನಿನ್ನ ಹುಟ್ಟುಗುಣದ ಪ್ರಶ್ನೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ, ಪೋಲಿ ಮುಂಡೇದೆ. ಅಂತಹ ಸಮಯದಲ್ಲಿ ಎರಡಕ್ಕಿಂತ ಹೆಚ್ಚು ದೇಹಗಳು ಪರಸ್ಪರ ಸ್ಪರ್ಶಸುಖವನ್ನು ಅನುಭವಿಸುವ ಸ್ಪರ್ಶ-ಫೋಟೋ ಯಂತ್ರವನ್ನು ಆಕೆ ತಂದಿಲ್ಲವಂತೆ," ಎಂದು ಸಮಜಾಯಿಶಿ ನೀಡಿದೆ.
"ಆದರೂ ನಿನ್ನಲ್ಲೆನೋ ಗೊಂದಲವಿದೆ, ಈ ಘಟನೆಯನ್ನು ಕುರಿತಂತೆಯೇ. ಹೇಳಬಲ್ಲೆಯ?" ಎಂದು ವೀರಾ ತೀಕ್ಷ್ಣವಾಗಿ ನನ್ನನ್ನು ಗಮನಿಸಿ ಕೇಳಿದ.
"ಎಲಾ ಬಡ್ಡೀಮಗನೆ. ಎಂಥಾ ಸೂಕ್ಷ್ಮ ಕಣಯ್ಯಾ ನೀನು. ಕೇವಲ ಮೂರು ನಿಮಿಷದ ಮುಂಚೆ ದುಃಖಿತನಾಗಿದ್ದೆ. ಈಗ ನೋಡಿದರೆ ನನ್ನನ್ನೆ ಶೋಧನೆಗೆ ಒಳಪಡಿಸುತ್ತಿರುವೆಯಲ್ಲ. ಪ್ರಶ್ನೆ ನಿನ್ನ ಬಾಯಿಂದಲೇ ಬಂದುಬಿಡಲಿ ಗುರುವೆ," ಎಂದೆ.
"ಆಕೆ ನಿನ್ನನ್ನು ಅಥವ ನಿನ್ನ ಕ್ಯಾಮರಾ-ಪ್ರತಿಮೆಯನ್ನು ಥಿಯೇಟರಿನಲ್ಲಿ ಸ್ಪರ್ಶಿಸಿದಾಗ ಅದು ನಿನ್ನ ಅನುಭವಕ್ಕೆ ಏಕೆ ಬರಲಿಲ್ಲ?" ಎಂದು ನಚಿಕೇತು, ಸತಿಸಾವಿತ್ರಿ, ಧೃವ ಮುಂತಾದ ಪೌರಾಣಿಕ ವ್ಯಕ್ತಿತ್ವಗಳು ಕೇಳಿದ ಮೂಲಭೂತ ಪ್ರಶ್ನೆಯನ್ನೇ ಕೇಳಿಬಿಟ್ಟ.
"ಖಂಡಿತ ನನಗೇ ಗೊತ್ತಾಗುತ್ತಿಲ್ಲ," ಎಂದು ಸುಳ್ಳು ಅಥವ ಅರೆಸುಳ್ಳು ಹೇಳಿದೆ. 
"ನಿನ್ನ ನೆರಳು ಆಗಾಗ ಇದ್ದಲ್ಲೆ ಸ್ಥಿರವಾಗುವ ವಿಷಯ ನಿನಗೆ ಗೊತ್ತೆ?" ಎಂದಾತ ಕೇಳಿದಾಗ ಹಾವು ಮೆಟ್ಟಿದಂತೆ ಬೆಚ್ಚಿದೆ. ಕೆಲವರಿಗೆ ಅದು ಗೊತ್ತೆಂದು ನನ್ನ ಅರಿವಿಗೆ ಬಂದಿದ್ದರೂ ಸಹ ನನ್ನನ್ನೇ ನೇರವಾಗಿ ಕೇಳುವ ಧೈರ್ಯ ಮಾಡಬಲ್ಲರು ಎಂದು ನಾನು ಭಾವಿಸಿರಲಿಲ್ಲ.
"ನಿನಗೆ ನಾನು ಮತ್ತೊಂದು ವಿಷಯ ಹೇಳಲೇಬೇಕು ವೀರಾ," ಎಂದು ಮುಂದುವರೆಸಿದ್ದನ್ನು ಆತ ತಡೆದು, "ನೀನು ಹೇಳಿದ್ದನ್ನೆಲ್ಲಾ ಬೌದ್ಧಿಕವಾಗಿ ಒಪ್ಪುವೆ. ಆದರೆ ಅದು ನನ್ನ ಶೋಕವನ್ನು ಏನಾದರೂ ಕಡಿಮೆ ಮಾಡುತ್ತದೆಂದು ನೀನು ಭಾವಿಸುವುದಾದರೆ ಅದು ಸುಳ್ಳು. ಸಾಧಾರಣವಾಗಿ ನನಗೆ ಡಿಪ್ರೆಶನ್ ಆಗುವುದಿಲ್ಲ. ಏಕೆಂದರೆ ಅದಕ್ಕೆ ಕಾರಣ ನನಗೆ ಸ್ಪಷ್ಟವಾಗಿರುತ್ತದೆ. ಆದರೆ ಈಗ ನಾನು ಡಿಪ್ರೆಶನ್ನಿಗೆ ಹೋಗಿರುವುದಕ್ಕೆ ಪ್ಲಾಝಾ ಥಿಯೇಟರಿನ ಘಟನೆ ಒಂದು ನೆಪವಷ್ಟೇ. ಅಂದ ಹಾಗೆ ನಿನ್ನನ್ನು ಕುರಿತಾದ ಒಂದು ಸೂಕ್ಷ್ಮ ವಿಷಯ ತಿಳಿಸಲೆ?" ಎಂದ, ಯಾವಾಗಲೂ ಇಂತಹ ವಿಕ್ಷಿಪ್ತ ವಿಷಯಗಳನ್ನು, ತರಲೆ, ತಮಾಷೆ ಹಾಗೂ ಶಾಕ್‌ಗಳನ್ನು ನೀಡುತ್ತಿದ್ದ ವೀರಾ. ಹೇಳು ಎಂಬಂತೆ ಸಂಜ್ಞೆ ಮಾಡಿದೆ, ಹಾಗೆ ಮಾಡಬಾರದಿತ್ತು ಎಂದು ಕ್ಷಣಾರ್ಧದಲ್ಲೆ ಅರಿತುಕೊಂಡೆ. ಆದರೆ ಅಷ್ಟರಲ್ಲಿ ನುಡಿಯಬಾರದ್ದನ್ನು ಆತ ನುಡಿದುಬಿಟ್ಟಿದ್ದ.
 
"ಅನೇಖ, ಸರಿಯಾಗಿ ಕೇಳು. ನಿನ್ನ ನೆರಳು ಇದ್ದಲ್ಲೆ ಇರುತ್ತದೆ, ಬೆಳಕಿನ ಬದಲಾವಣೆಯೊಂದಿಗೆ ಅದು ಚಲಿಸದು.."
"ಈಗಷ್ಟೇ ಅದನ್ನು ಒಪ್ಪಿಕೊಂಡೆನಲ್ಲ!" ಎಂದೆ.
"ಮತ್ತು ನೀನು ಯಾವುದೇ ಕನ್ನಡಿಯ ಎದಿರು ನಿಂತರೂ ನಿನ್ನ ಬಿಂಬ ನಿನಗೇ ಕಾಣಿಸದು!" ಎಂದು ಏನೋ ಸಿಡಿಮಿಡಿಗೊಂಡವನಂತೆ ಎದ್ದು ಹೋದ.    
"ಹೌದು. ಆದರೆ ನನ್ನ ಸಮಸ್ಯೆಯೆಂದರೆ, ನನ್ನೊಬ್ಬನಿಗೆ ಮಾತ್ರ ನನ್ನ ಪ್ರತಿಬಿಂಬ ಕಾಣಿಸದು," ಎಂದು ನಾನು ಸ್ಪಷ್ಟೀಕರಣ ನೀಡುವಂತೆ ಸಣ್ಣ ತಿದ್ದುಪಡಿಯೊಂದನ್ನು ಮಾಡಿ ಹೇಳಿದ್ದನ್ನು ದೂರದಲ್ಲಿ ದಡದಡನೆ ನಡೆದುಹೋಗುತ್ತಿದ್ದ ವೀರಾನಿಗೆ ಕೇಳಿಸಲೇ ಇಲ್ಲ!//
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):