ನೆನಪಿನ ಚಿತ್ರಕಲಾ ಶಾಲೆ: ಭಾಗ ೨೯ -- ಬ್ಲಾಕ್ ಹೋಲ್ ಎಂಬ ಒಳಕಲ್ಲ ತೀರ್ಥ

0

 

 
 
 
(೮೮)
     ಬಗೆಹರಿಯದ ಸಮಸ್ಯೆಯನ್ನು ಒಂದು ಹಂತದಲ್ಲಿ ಮುಗಿಯಿತೆಂದು ಭಾವಿಸುವುದನ್ನು ನಿರಾಳವೆನ್ನುತ್ತೇವೆ. ೧೯೮೯ರಲ್ಲಿ ಪರಿಷತ್ತಿನಲ್ಲಿ ದೃಶ್ಯಕಲೆಯ ಅತ್ಯಂತ ಸಮಕಾಲೀನ ವಾಹನವನ್ನು ಏರಿದ್ದವನೆಂದರೆ ಬಿಡಾ. ಮತ್ತು ಆತ ಓಡಿಸಿಕೊಂಡು ಬರುತ್ತಿದ್ದುದು ಸುವೇಗ ಅಥವ ಲೂನಾವನ್ನು. ಇಲಿಯ ಮೇಲಿನ ಗಣಪನೆಂದು ಎಲ್ಲಾ ತಮಾಷೆ ಮಾಡಿದರೂ ಸಿಟ್ಟಾಗದೆ ಬಿಗ್ ಡ್ಯಾಡಿ (ಬಿಡಾ) ಎಲ್ಲರಿಗೂ ಆಶೀರ್ವಾದ ಮಾಡುತ್ತಿದ್ದ, ಥೇಟ್ ಗಣಪನಂತೆ. ಈಗ ಆಟೋರಿಕ್ಷಾವನ್ನು, ಅದೂ ರಾತ್ರಿ ಹೊತ್ತಿನಲ್ಲಿ ಲೈಟ್ ಹತ್ತಿಸದೆ ರೌಂಡು ಹೊಡೆಸಿದ ಮಮಾ ಎಲ್ಲರ ಕಣ್ಣಿಗೂ ’ಪೈಲೆಟ್’ನಂತೆ ಕಾಣತೊಡಗಿಬಿಟ್ಟ. ಆಟೋ ಕ್ಯಾಂಟೀನಿಗೆ ತನ್ನ ಮುಖವನ್ನು ಬಡಿದುಕೊಂಡದ್ದರಲ್ಲಿ ನನ್ನದೇನೂ ತಪ್ಪಿಲ್ಲವಲ್ಲ. ಬೇಕಾದರೆ ವೀರಾನನ್ನೇ ಕೇಳಿ. "ಏನ್ ಗುರುವೆ, ಆಟೋದ ಮುಖಭಂಗವಾಗುವಾಗ ನಾನು ಎಲ್ಲಿದ್ದೆ ಹೇಳಪ್ಪಾ?" ಎಂದು ಮಮಾ ಕೇಳಿದ್ದನ್ನು ಕೇಳಿ ವೀರಾ ಮತ್ತೆ ಪರಿಷತ್ತಿನ ಗ್ಯಾಲರಿಯ ಆವರಣದಲ್ಲಿ ಬಿದ್ದು ಹೊಟ್ಟೆ ಹಿಡಿದುಕೊಂಡು ನಗತೊಡಗಿದ. 
 
     ಎಲ್ಲರಿಗೂ ಗಂಡಾಂತರವೊಂದು ತಪ್ಪಿದಂತೆ ನಿರಾಳವಾದರೆಂದುಕೊಳ್ಳುತ್ತಿರುವಂತೆಯೇ, ಸ್ವಲ್ಪವೇ ಹೊತ್ತಿನಲ್ಲಿ ರಾಮಾಯ್ಣ ಮತ್ತು ದೊಡ್ಡಯ್ಯ ಒಮ್ಮೆಲೆ ಗಲಭೆ ಎಬ್ಬಿಸುತ್ತ ಗ್ರಾಫಿಕ್ ವಿಭಾಗದಲ್ಲಿ ಅದೆ ಮದ್ಯರಾತ್ರಿಯಲ್ಲಿ ಎಚ್ಚಿಂಗ್, ಲಿಥೋಗ್ರಾಫಿ ಮತ್ತು ವುಡ್‌ಕಟ್ ಮಾಡುತ್ತಿದ್ದ ಹುಡುಗರ ಬಳಿ ಬಂದರು. ರಾಮಾಯ್ಣನ ದೊಡ್ಡಪ್ಪ ದೊಡ್ಡಯ್ಯ ಆತನ ಕಿವಿಹಿಂಡಿಕೊಂಡೇ ವಿಭಾಗಕ್ಕೆ ಬಂದ. "ನೋಡ್ ಬನ್ರಪ್ಪಾ, ನೀವ್ಗೊಳ್ ಮಾಡಿರೋ ಅವಾಂತರವ. ಇವ್ನ ಕೆಲ್ಸ ನಾಳೆ ಓದಂಗೇ ಲೆಕ್ಕ," ಎಂದು ಏನನ್ನೂ ವಿವರಿಸದೇ ರಾಮಾಯ್ಣನಿಗೆ ನಂದಿಬೆಟ್ಟ ತೋರಿಸತೊಡಗಿದ. 
 
     ಎಲ್ಲರೂ ಪರಿಷತ್ತಿನ ಮರದ ಬಾಗಿಲ ಬಳಿ ಬಂದು ಅದ್ದದ್ದೇನೆಂದು ನಿರುಕಿಸತೊಡಗಿದರು. ಶ್ರೀಮಂತ ಅಥವ ರಾಜಕಾರಣಿಯಾದ ಕೊಡುಗೈ ದಾನಿಯೊಬ್ಬ ದಾನ ಮಾಡದೆ ಮರದ ಗೇಟನ್ನು ಬದಲಿಸಲಾರೆನೆಂದು ಮೇಷ್ಟ್ರು ಆಣೆಪ್ರಮಾಣ ಮಾಡವ್ರೆ ಅಂತ ಹೇಳುತ್ತಿದ್ದ ದೊಡ್ಡಯ್ಯ. ಮೇಷ್ಟ್ರ ಆಣೆಪ್ರಮಾಣವೆಂದರೆ ದ್ರೌಪದಿಯ ಬಿಚ್ಚಿದ ಮುಡಿಯಂತೆ, ಅರ್ಜುನನ ಬಾಣದಂತೆ, ರಾಮನ ಮಾತಿನಂತೆ, ಹರಿಶ್ಚಂದ್ರನ ಸತ್ಯದಂತೆ, ನಕ್ಷತ್ರಿಕನ ಹಠದಂತೆ ಮತ್ತು ಪರಿಷತ್ತಿನ ಮರದ ಗೇಟುಗಳಂತೆ--ಏನಾಗಬೇಕೆಂದು ಇವೆಲ್ಲಾ ಅಸ್ತಿತ್ವದಲ್ಲಿವೆಯೋ, ಅವೆಲ್ಲಾ ಆಗದೆ ಇವಕ್ಕೆ ಮುಕ್ತಿ ಸಾಧ್ಯವೇ ಇಲ್ಲ! ಎರಡರಲ್ಲಿ ಒಂದು ಗೇಟು ಯಾವಾಗಲೂ ತೂಕಡಿಕೆ ರೋಗ ಬಂದ ಕೋಳಿಯಂತೆ ನೆಲಕ್ಕೆ ಒರಗಿಕೊಂಡು ಮಲಗಿದಂತೆಯೇ ನಿಂತಿರುತ್ತಿತ್ತು. ಅಲ್ಲಿಂದ ಪರಿಷತ್ತಿನ ಗ್ಯಾಲರಿ ಕಟ್ಟಡದವರೆಗೆ ಸುಮಾರು ನೂರು ಹೂಕುಂಡಗಳನ್ನು ’ಶೋ’ಗಾಗಿ ಇರಿಸಿದ್ದರು ಮೇಷ್ಟ್ರು. ’ಬೌಲಿಂಗ್’ ಮಾಡುವಂತೆ ಮಮಾ ಆಟೋವನ್ನು ಅವುಗಳ ಮೇಲೆ ಹರಿಸಿ, ಅವುಗಳನ್ನು ಬೀಳಿಸಿ ನುಜ್ಜುಗುಜ್ಜು ಮಾಡಿದ ನಂತರವೇ ಆಟೋ ಮುಂದಕ್ಕೆ ಹೋಗಿ, ವೀರಾ ಅದರ ಕುಂಡದ ಕೈಬಿಟ್ಟ ನಂತರ, ಮಮಾ ಅದರ ಉದರದಿಂದ ಬಲವಂತದಿಂದ ಹೊರಗಾದ ನಂತರ ಕ್ಯಾಂಟೀನಿನ ಗೋಡೆಯ ಮುಖಾಂತರವೇ ಅದಕ್ಕೆ ಮುಖಭಂಗವಾಗಿದ್ದದ್ದು. ಪಕ್ಕದಲ್ಲಿದ್ದ ಮರಗಳಷ್ಟು ಎತ್ತರವಿದ್ದ ರಾತ್ರಿಪಾಳಿಯ ವಿದ್ಯಾರ್ಥಿಗಳ ಅತ್ಮವಿಶ್ವಾಸವು ಮೆಷ್ಟ್ರು ನಾಳೆ ಬೆಳಿಗ್ಗೆ ಕಾಲೇಜಿಗೆ ಬಂದಾಕ್ಷಣ ಹೂಕುಂಡದ ಬಳ್ಳಿಗಳಷ್ಟು ಕುಬ್ಜಗೊಳಿಸುವುದು ಗ್ಯಾರಂಟಿಯಾಗಿತ್ತು. 
 
     ಎಲ್ಲರಿಗೂ ಚಿಂತೆ ಹತ್ತಿಕೊಂಡಿತು, ಮಮಾನೊಬ್ಬನನ್ನು ಬಿಟ್ಟು. ರಾಮಾಯ್ಣ ಮತ್ತು ಒಂದಿಬ್ಬರು ಹುಡುಗರನ್ನು ಹಿಂದೆ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡದ ಟೆಂಟುಗಳ ಬಳಿ (ಪ್ರಶ್ನಾಮೂರ್ತಿಯ ತ್ರಿಶಂಕು ಅವಸ್ಥೆಯೆಂಬ ಮೋಕ್ಷ ದೊರಕಿದ ಶಿಲ್ಪವಿಭಾಗದ ಬಳಿ ಇತ್ತದು) ಓಡಿಸಿ, ಮಕ್ಕರಿ, ಸನಿಕೆಗಳನ್ನು ತರಿಸಿದ. "ಏನ್ರೋ, ’ಲಂಡನ್ ಪ್ರವಾಸಕಥನದ ೮ರಿಂದ ೧೧ನೇ ಭಾಗಗಳನ್ನು ಓದಿರೋರಿದ್ರೆ ಬರ್ರೋ. ಪ್ರವಾಸಕಥನದಲ್ಲಾಗುವಂತೆ ಹೂಕುಂಡಗಳ ದೈಯ್ಯ ಪಿಶಾಚಿಗಳು ನಿಮ್ಮನ್ನು ಕಾಡಬಾರದೆಂದರೆ ಇವುಗಳನ್ನು ಕಾಂಪೌಂಡಿನಿಂದ ಹೊರಕ್ಕೆ, ಮೇಷ್ಟ್ರ ಕಣ್ಣಿಗೆ ಬೀಳದಂತ ಕಡೆ ಈಗಲೇ ಹೂತುಹಾಕಿ ಬನ್ನಿ," ಎಂದು ಮಮಾ ಅಲ್ಲಿದ್ದ ಹುಡುಗರ ತಲೆಗಳ ಮೇಲೆ ಪಾಟುಗಳ ಚೂರುಪಾರುಗಳು, ಮಣ್ಣು, ಗೊಬ್ಬರಗಳನ್ನೆಲ್ಲಾ ತುಂಬಿ ತುಂಬಿ ಏರಿಸತೊಡಗಿದ್ದ. 
 
     ಹನ್ನೆರೆಡೂವರೆ ರಾತ್ರಿಯಲ್ಲಿ ಎಲ್ಲರೂ ಮಕ್ಕರಿ ಹೊತ್ತು, ಪರಿಷತ್ತಿನ ಗೇಟಿನ ಹೊರಗೋಗಿ, ರಸ್ತೆ ದಾಟಿ ಎದುರಿಗಿನ ಕಟ್ಟಡದ ಎಡಕ್ಕಿದ್ದ ದೊಡ್ಡ ಕಟ್ಟಡ ನಿರ್ಮಾಣದ ಮರಳು-ಜಲ್ಲಿಗಳಿದ್ದೆಡೆ ಮಕ್ಕರಿ ಖಾಲಿ ಮಾಡಿ ಬರತೊಡಗಿದರು. ಅಚ್ಚರಿಯ ವಿಷಯವೆಂದರೆ ಇಂದಿಗೂ, ಸುಮಾರು ಎರಡು ದಶಕಗಳ ನಂತರವೂ, ಪರಿಷತ್ತಿನಿಂದ ಹೊರಗೋದಾಗ ಎದುರಾಗುವ ಕಟ್ಟಡದ ಎಡಭಾಗಕ್ಕಿರುವ ಸೈಟು ಖಾಲಿ ಇದೆ ಅಥವ ಪೂರ್ಣವಾಗಿಲ್ಲ!
 
      "ಹುಷಾರು ಕಣ್ರೋ, ರಸ್ತೆ ದಾಟುವಾಗ ಯಲಹಂಕದ ಕಡೆಯಿಂದ ಬರುವ ಬಸ್ ಡ್ರೈವರ್ರುಗಳಿಗೆ ಚಲಿಸುವ ಒಂದಿಡೀ ತೋಟವೇ, ನರ್ಸರಿಯೇ ಕಂಡುಬಂದಂತಾಗಿ ತಾವುಗಳು ಕುಡಿದದ್ದು ಜಾಸ್ತಿಯಾಯಿತು ಎಂದು ಭ್ರಮೆಗೊಂಡಾರು," ಎಂದು ರಮಾನಾಥೆಸ್ಸೆಮ್ಮೆಸ್ ಅಪರೂಪದ ಡೈಲಾಗು ಹೊಡೆದುಬಿಟ್ಟ. "ಹೂ ಕಣ್ರೋ, ಸ್ವಲ್ಪ ಗ್ಯಾಪ್ ಇಟ್ಟುಕೊಂಡು ರಸ್ತೆ ದಾಟಿ ಬನ್ನಿ," ಎಂದು ದನಿಗೂಡಿಸಿದ ವೀರಾ, ಚಾರ್ವಾಕಿಯ ನೆನಪಿನಲ್ಲಿ. ಬೆಳಿಗ್ಗೆ ಎದ್ದು ಕಾರಣಾಂತರದಿಮ್ದ ಸಮಾ ಹೊತ್ತಾದ ಮೇಲೂ ಹಲ್ಲುಜ್ಜದೇ ಇರುವವರು ಉಜ್ಜಲಾಗದಿರುವ ಹಲ್ಲನ್ನು ತಲೆ ತುಂಬಿಕೊಳ್ಳುವಂತೆ ಚಾರ್ವಾಕಿಯ ನೆನಪು ಆತನನ್ನು ಇನ್ನೂ ಕಾಡುತ್ತಲೇ ಇತ್ತು.
 
     ನಲ್ಲಸಿವ, ಮಲ್ಲುಮೋಗನ, ತರುಣ್ ಚಂಗಪ್ಪ, ವೀರಾ, ಅನೇಖ, ಮಮಾ ಎಲ್ಲರೂ ಸೇರಿ ಒಂದು ಪರಿಹಾರ ಹುಡುಕಿದ್ದರು, ಮೆಷ್ಟ್ರ ಗಮನಕ್ಕೆ ಬರದಂತೆ ಯಥಾಸ್ಥಿತಿಯನ್ನು ಪರಿಷತ್ತಿನ ಮುಖ್ಯ ದ್ವಾರದ ರಸ್ತೆಯಲ್ಲಿ ಕಾಯ್ದುಕೊಳ್ಳಲು. ಗಣೇಶ ಮಂದಿರದ ಹಿಂದೆ, ಈಗ ಇಟ್ಟಿಗೆ ಹಟ್‌ಗಳು ಇರುವೆಡೆ ಆಗ ಶಿಲ್ಪವಿಭಾಗದ ಒಂದೆರೆಡು ರೂಮುಗಳಿದ್ದವು. ಅವುಗಳ ಹಿಂದೆ ಸುಮಾರು ನೂರು ಅಚ್ಚಹಸಿರು ಹೂಕುಂಡಗಳನ್ನು ಮೆಷ್ಟ್ರು ಜನಾರ್ಧನ ಮತ್ತು ಎಲೆಕ್ಟ್ರಿಷಿಯನ್ ಜಯರಾಮ ಸಹಾಯದಿಂದ ಹೆಬ್ಬಾಳದ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದಿಂದ ತರಿಸಿ ಇರಿಸಿದ್ದರು. ಅಲ್ಲಿಂದ ಸುಮಾರು ಪಾಟುಗಳನ್ನು ಡೆಮೇಜ್ ಆದ ಕಡೆ ತಂದಿಟ್ಟುಬಿಟ್ಟು ಸಹಜಸ್ಥಿತಿಯನ್ನು ಹೋಲುವಂತಹು ಸ್ಥಿತಿಸ್ಥಾಪನೆಯೇ ಆ ಪ್ಲಾನ್. ಅದಕ್ಕೆ ಮುನ್ನ ಎಲ್ಲವನ್ನೂ ಸಾಕ್ಷಿ ಸಿಗದಂತೆ ಸಾರಿಸಿ ಗುಡಿಸಿಹಾಕಬೇಕಿತ್ತು. ಸಹಜವಾಗಿ ಕಾಣಲಿ ಎಂದು ಅಶೋಕ ಟ್ರೀಗಳ ಎಲೆಗಳನ್ನು ಸಹಜವಾಗಿ ಗಾಳಿಗೆ ಉದುರಿದಂತೆ ಕಿತ್ತು ಉದುರಿಸಿದರು ಕೆಲವರು. ನೆಲವನ್ನು ಸಾರಿಸಲಾಯಿತು, ಬಕೆಟಿನಲ್ಲಿ ನೀರು ಸುರಿದು ಇರೋಬರೋ ಪಾಟಿನ ಚೂರುಗಳ ಸಾಕ್ಷಿಗಳನ್ನೆಲ್ಲಾ ನಾಶಮಾಡಲಾಯಿತು. ಒಣ ಮರಳನ್ನು ಪ್ರಕೃತಿ ದೈವವು ಹೇಗೆ ಸಹಜವಾಗಿ ತಂದು ನೆಲಕ್ಕೆ ಸುರಿಯುತ್ತದೆಯೋ ಹಾಗೆಯೇ ಚಿಮುಕಿಸಲಾಯಿತು. ಪಾಟುಗಳು ಬಂದವು. ಎಲ್ಲವೂ ಸಹಜವಾಗಿ ಕಂಡು ’ಆರ್ಟ್ ಡೈರೆಕ್ಷನ್ ಅಂದ್ರೆ ಇಂಗಿರಬೇಕು ನೋಡ್ರೋ’ ಎಂದು ಮಮಾ, ಶಂಕರ್‌ನಾಗರ ’ನಾಗಮಂಡಲ’ ನಾಟಕಕ್ಕೆ ಇದೇ ಪರಿಷತ್ತಿನಲ್ಲಿ ದುಡಿದಿದ್ದ ಮಮಾ ರಿಕ್ಷಾಗಾತಕ್ಕೊಂದು ಸೌಂದರ್ಯಶಾಸ್ತ್ರೀಯ ಇಂಟರ್‌ವೆನ್ಶನ್ ತಂದುಕೊಟ್ಟಿದ್ದ. ಇನ್ನೂ ಸಹಜವಾಗಿರಲಿ ಎಂದು ಅಕ್ಕಪಕ್ಕದ ಮರಗಳ ಎಲೆಗಳಲ್ಲಿ ವಯಸ್ಸಾಗಿ ರಿಟೈರ್ ಆದವನ್ನು ಗುರ್ತಿಸಿ ಅವುಗಳನ್ನು ಕೊಂಬೆಯ ಬಳಿ ಹರಿಯದೆ ಕಿತ್ತು, ನೆಲಕ್ಕೆ ಸಹಜವಾಗಿ ಹಾರಿಬೀಳುವಂತೆ ಮಾಡಲಾಯಿತು. ಒಂದು ಸಣ್ಣ ಬೀಡಿ ತುಂಡನ್ನೂ, ಅದು ಹುಲ್ಲುವಾಮೆಯಲ್ಲಿ ಸೂಜಿಗಿಂತ ಚಿಕ್ಕದಾಗಿದ್ದರೂ ಸಹ, ಅದನ್ನು ಪರಿಷತ್ತಿನ ಆವರಣದಲ್ಲಿ ಹೆಕ್ಕಿತೋರಿಸುತ್ತಿದ್ದ ದೃಶ್ಯಕಲಾವಿದ, ಹದ್ದಿನಕಣ್ಣಿನ ಮೇಷ್ಟ್ರ ಗಮನ ತಪ್ಪಿಸುವುದು ಎಂತಹ ಕಷ್ಟದ ಮಾತು ಎಂಬುವುದು ತಪ್ಪುಮಾಡಿ ಸಿಕ್ಕಿಹಾಕಿಕೊಂಡ ಕೆಲವರಿಗೆ ಮಾತ್ರ ಗೊತ್ತಿತ್ತು. ಮಮಾನಿಗೆ ಇದು ಅತ್ಯಂತ ಸ್ಪಷ್ಟವಾಗಿ ಗೊತ್ತಿತ್ತು. ಆದರೆ ಅದು ಸ್ವಾನುಭವವೋ ಅಲ್ಲವೋ ಎಂಬುದನ್ನು ಮಾತ್ರ ಆತ ಬಾಯಿಬಿಟ್ಟು ಹೇಳಿರಲಿಲ್ಲ. 
 
(೮೯)
 
     "ವಾಹನಗಳಿಂದ ಇಂದು ಮೈಕೈ ನೋವು, ತತ್ಪರಿಣಾಮವಾಗಿ ತೋಟಗಾರಿಕೆಯಿಂದ ಕಾಲು-ಹೊಟ್ಟೆ ನೋವು’ ಎಂದಿರಬೇಕು ಮಮಾ ನಿನಗೆ ಇವತ್ತಿನ ಭವಿಷ್ಯದಲ್ಲಿ," ಎಂದ ಅನೇಖ. "ಹೌದು. ರಾಮಾಯ್ಣನಿಗೂ ನಂಗೂ ಒಂದೇ ಭವಿಷ್ಯ ನೋಡು ಇವತ್ತು," ಎಂದ ಮಮಾ ರಮಾನಾಥೆಸ್ಸೆಮ್ಮೆಸ್ಸನ ಸ್ಕೆಚಸ್‌ಗಳನ್ನು ಪರಿಶೀಲಿಸುತ್ತಿದ್ದ. ರಾಮಾಯ್ಣನ ಸೈಕಲ್ ಸವಾರಿಯಿಂದ ಹೂಕುಂಡ ಸವರುವವರೆಗೂ ಎಲ್ಲಾ ಸ್ಕೆಚ್‌ಗಳನ್ನೂ ಬಿಡಿಸಿದ್ದನಾತ. "ಲೋ, ನೀನೆಲ್ಲೋ ಮುಘಲ್ ಸಾಮ್ರಾಟರ ಆಸ್ಥಾನ ಕಲಾವಿದನಾಗಿದ್ದೆ ಎನ್ನಿಸುತ್ತದೆ ಎಂದಿದ್ದ ಮಮಾ. ಯಾಕೆ? ಸಾಬ್ರು ದೊರೆಗೊಳು ಬೇಟೆಯಾಡಲು ಹೋದಾಗಲೆಲ್ಲಾ, ತಮ್ಮ ಜನಾನವನ್ನು ಕರೆದೊಯ್ಯದಿದ್ದರೂ ಆಸ್ಥಾನ ಕಲಾವಿದನನ್ನಂತೂ ಬಿಡದೆ ತಮ್ಮೊಂದಿಗೆ ಕರೆದೊಯ್ಯುತ್ತಿದ್ದರಂತೆ, ಮತ್ಯಾವುದಕ್ಕಲ್ಲದಿದ್ದರೂ ತಮ್ಮನ್ನೇ ಚಿತ್ರಿಸಿಕೊಳ್ಳಲಿಕ್ಕೆ. ಇಂದು ಮೀಡಿಯಾ ಇಲ್ದೆ ಎಂಗೆ ಸಮಾಜ ಸೇವಕ್ರು, ಅದೇ ಸೋಷಿಯಲ್ ವರ್ಕರ್ಸು ಏನೂ ಸಮಾಜಸೇವೆ ಹೇಗೆ ಮಾಡೋದಿಲ್ಲವೋ ಹಾಗಾಯಿತಿದು," ಎಂದ. ಹೊಗಳಿಸಿಕೊಳ್ಳಲು ಹೋಗಿ ಉಗಿಸಿಕೊಳ್ಳುವ ಸರದಿ ರಮಾನಾಥೆಸ್ಸೆಮ್ಮೆಸ್ಸನದಾಗಿ, ’ಈ ಮಮಾ ತಾನಾಗಿ ಏನನ್ನೂ ಕೊಡದಿದ್ದಾಗ, ಯಾರೋ ಏನೋ ಆತನ ಹತ್ರ ತೆಗೆದುಕೊಳ್ಳಲಾಗದು’ ಎಂದು ಮುನಿಸಿಕೊಂಡ.
 
     ಅಷ್ಟರಲ್ಲಿ ಎಲ್ಲರೂ ಮತ್ತೆ ಗ್ರಾಫಿಕ್ ವಿಭಾಗಕ್ಕೆ ಹಿಂದಿರುಗತೊಡಗಿದರು. ವಿಭಾಗವು ಗ್ರಾಫಿಕ್ ಎಂಬುದೊಂದು ನೆಪವಷ್ಟೇ. ಪೈಂಟಿಂಗ್ ಮಾಡುವವರು, ಆರ್ಡರ್ ವರ್ಕ್ ಮಾಡಿಕೊಡುವವರು-ಎಲ್ಲರೂ ಅದೇ ವಿಭಾಗದಲ್ಲಿ ಜಂಡಾ ಊರಿದ್ದರು. ’ರಾತ್ರಿ ಹೊತ್ತಿನಲ್ಲಿ ಕ್ರಿಯಾತ್ಮಕವಾಗಿರಲು ಈ ವಿಭಾಗವು ಒಂದು ಬಾಟೆಲ್ ನೆಕ್ ಇದ್ದಹಾಗೆ’ ಎನ್ನುತ್ತಿದ್ದ ಮಮಾ. ಆತನ ಉದ್ದೇಶ ಒಂದೇ: ತಾನು ಇತ್ತೀಚೆಗೆ ಕಲಿತ ’ಬಾಟೆಲ್ ನೆಕ್’ ಪದವನ್ನು ಆದಷ್ಟೂ ಸಲ ಬಳಸಿಬಿಡಬೇಕೆಂಬುದು ಆತನ ಆಸೆ. ಇಂಗ್ಲೀಸು ಕಲಿಯಲು ಇದೊಂದು ಸ್ವಯಂ ಸಂಶೋಧಿತ ಮಾರ್ಗ ಎಂದಾತನ ಸಮರ್ಥನೆಯಾಗಿತ್ತು. 
 
     ಇನ್ನೇನು ಕುರುಕ್ಷೇತ್ರ ಮುಗಿದು ಇನ್ನು ಏನಿದ್ದರೂ ಸ್ವರ್ಗಾರೋಹಣವೇ ಎಂದು ಎಲ್ಲರೂ ಭಾವಿಸುವಷ್ಟರಲ್ಲಿ ಪಾಟುಗಳ ನಡುವೆ ಅದೆಲ್ಲೋ ಮೂಲೆಯಲ್ಲಿ ಮುಚ್ಚಿಟ್ಟುಕೊಂಡಿದ್ದ ಕೊನೆಯ ಮಕ್ಕರಿಯ ತುಂಬಿದ್ದ ತೂಕದ ಮುರಿದ ಪಾಟುಗಳು, ಕಲ್ಲುಗಳು, ದೊಡ್ಡ ದೊಡ್ಡ ಗಿಡಗಳ ಮೊತ್ತ ಕಾಣಿಸಿತು! ಅವೆಲ್ಲವೂ ಒಂದರಲ್ಲೇ ಇದ್ದಿದ್ದರಿಂದಲೇ ಎಲ್ಲರೂ ಆ ಮಕ್ಕರಿಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನೂ ಎದುರಿಗಿನ ಕಟ್ಟಡದ ಮರಳ ದಿಬ್ಬಕ್ಕೆ ಎಸೆದು ಬಂದಿದ್ದರು. ಈ ಕೊನೇ ಮಕ್ಕರಿಯನ್ನ ಯಾರು ಎಸೆದುಬರುತ್ತಾರೆ ಅವರಿಗೆ ಲವ್ ಮ್ಯಾರೇಸ್ ಗ್ಯಾರಂಟಿ. ಜೊತೆಗೆ ಗ್ರಾಫಿಕ್ ವಿಭಾಗದಲ್ಲಿ ಚಹಾ ತಯಾರಿಸಲಾಗುತ್ತಿದ್ದು, ಮೊದಲ ಕಪ್ ಚಹ ಅವರಿಗೇ ಎಂದು ಮಮಾ ಘೋಷಿಸಿದ ಕೂಡಲೆ ಆ ಚಳಿಯಲ್ಲಿ ಮಾರೀಷ ಕುಂಟುತ್ತಲೇ, ತನ್ನ ಪೋಲಿಯೋ ಕಾಲನ್ನು ಎಳೆದುಕೊಂಡೇ ಓಡಿಬಂದು ಮಕ್ಕರಿಯನ್ನು ಎತ್ತಿಸಿಕೊಂಡು, ತಲೆಯ ಮೇಲಿರಿಸಿಕೊಂಡು ದಡದಡನೆ ಓಡಿಬಿಟ್ಟ ಗೇಟಿನ ಕಡೆ, ಚಹಾ ಎಲ್ಲಿ ಮುಗಿದುಹೋಗಿಬಿಡುತ್ತದೋ ಎಂದು. ಕನ್ನಡ ಬಾರದ, ದೆಹಲಿಯ ಹಿಂದಿ ಮಾತಿನ ಮಾರೀಷ ಮಮಾ ಮುಂದೊಮ್ಮೆ ನಿರ್ದೇಶಿಸಿದ, ಪ್ರಶ್ನಾಮೂರ್ತಿ ನಟಿಸಿದ ’ಗಾಜಿನ್ಮನೇಲಿ ಟೋಪಿ’ ಟೀವಿ ಸೀರಿಯಲ್ಲಿನ ಘಟನೆಯ ಅನಿವಾರ್ಯ ಭಾಗವಾಗಿದ್ದುದನ್ನು ಈಗಾಗಲೇ ’ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ’ ಪುಸ್ತಕದಲ್ಲಿ ಬರೆಯಲಾಗಿದೆ. ಆ ಬರಹದಾಚೆಗಿನ ಆತನ ಅಸ್ತಿತ್ವವಿಲ್ಲವೇಕೆಂದರೆ ಈಗ ಆತ ಇಲ್ಲ. ಮತ್ತು ಅನೇಕರಿಗೆ ಆ ಬರಹದಾಚೆಗಿನ ಆತನ ಪರಿಚಯವೇ ಇಲ್ಲ. ದೆಹಲಿ ಕಲಾವಿದ ದಂಪತಿಗಳ ಮಗನಾದ ಆತ ಗ್ರಾಫಿಕ್ ವಿಭಾಗಕ್ಕೆ ಅಂಟಿಕೊಂಡಿದ್ದ ಕೋಣೆಯಲ್ಲಿ ವಾಸವಾಗಿದ್ದ ಹೊರ ರಾಜ್ಯದ ಕಲಾಉಪನ್ಯಾಸಕರುಗಳ ಜೊತೆಗೇ ಅಲ್ಲಿಯೇ ಠಿಕಾಣಿ ಹಾಕಿಬಿಟ್ಟಿದ್ದ. ಈ ಮುಂಚಿನ ವಾಕ್ಯದ ನಂತರ ಮತ್ತು ಈ ವಾಕ್ಯದ ನಂತರದ ಕೆಲವ ವಾಕ್ಯಗಳಿಂದಾಗಿ ಮುಂಚಿನ ವಾಕ್ಯಕ್ಕೂ ಮುಂಚಿನ ವಾಕ್ಯವು ಸ್ವಲ್ಪ ಸುಳ್ಳಾಗುತ್ತದೆ:
 
(೯೦)
 
     ಮಾರಿಷ ಕುಂಟುತ್ತಲೇ ಮಧ್ಯರಾತ್ರಿಯಲ್ಲಿ ತಲೆಯ ಮೇಲೆ ಮುರಿದ ಪಾಟುಗಳ ಕಟ್ಟಕಡೆಯ ಮಕ್ಕರಿ ಹೊತ್ತುಕೊಂಡು ಒಂಟಿಗಾಲಿನ ಕೊಕ್ಕರೆಯೋಪಾದಿಯಲ್ಲಿ, ತಮಗೆ ದಯಾಮರಣದ ಮುಕ್ತಿ ದೊರಕಿಸಿಕೊಡಬಹುದಾದ ದಾನಿಗಳಿಗಾಗಿ ಕಾದು ಕುಸಿಯುತ್ತಿರುವ ಪರಿಷತ್ತಿನ ಮರದ ಗೇಟೆಂಬುದನ್ನು ದಾಟಿ ರಸ್ತೆಯನ್ನು ಮತ್ತೊಂದು ದಡ ಸೇರುವ ಪ್ರಯತ್ನದಲ್ಲಿದ್ದಾಗ, ಆತ ಕಾಣದಂತಾಗಿ, ಸ್ವತ: ಒಂದು ಮಿನಿಯೇಚರ್ ಗದ್ದೆಯೊಂದರ ಮಕೆಟ್ (ಶಿಲ್ಪದ ಕರಡು ಪ್ರತಿ) ಆ ಕತ್ತಲಲ್ಲಿ ಆತನ ತಲೆಯ ಮೇಲೆ ಗೋಚರವಾಗುತ್ತಿದ್ದುದು, ಏರಿಳಿತವನ್ನು ಬಂದಂತೆ ಸ್ವೀಕರಿಸುತ್ತ ಕಗ್ಗತ್ತಲೆಂಬ ಸಾಗರದಲ್ಲಿ (ಆತನ ಕುಂಟಿನ ದೆಸೆಯಿಂದ) ದಿಕ್ಕುದೆಸೆಯಿಲ್ಲದೆ ಸಾಗುವ ಎಲ್ಲರ ಬದುಕಿನಂತೆ ಗೋಚರಿಸುತ್ತಿದೆ ಎಂದು ವಿರಹಿ ವೀರಾ ಅರುಹಿದಾಗ, ಈಟುದ್ದ ವಾಕ್ಯಾವ ಏಳುವಂತವ್ನು ಅನೇಖ ಮಾತ್ರ ಅಂದ್ಕೊಂಡಿದ್ದೆ ನೋಡು ಕನ. ನೀನೂ ಪಳಗ್ಬಿಟ್ಟೆ ಬುಡು ಎಂದ ದೊಡ್ಡಯ್ಯ ವೀರಾನನ್ನು ಕತ್ತಲಲ್ಲಿ ತೇಲುವ ಹಸಿರೆಂದು ಹೊಗಳುತ್ತಿದ್ದಾನೋ ಅಥವ ಕಗ್ಗತ್ತಲಲ್ಲಿ ಮುಳುಗುತ್ತಿರುವ ಹಸಿರಿನ ಕೊನೆಯ ಭಾಗ ಎಂದು ಬಯ್ಯುತ್ತಿದ್ದಾನೋ ಎಂದು ಯಾರಿಗೂ ನಿರ್ದಿಷ್ಟಪಡಿಸಲಾಗದಾಯ್ತು. 
 
     ’ಇನ್ನು ಮುಂದೆ ಟೆನ್ಶನ್ ಇಲ್ಲ’ ಎಂದು ಯಾರದ್ದೋ ಯಾವ ಕಾಲದ್ದೋ--ಭವಿಷ್ಯದ್ದೂ ಆಗಿರಬಹುದು-ಕನ್ನಡದ ಕವನಸಂಗ್ರಹವೊಂದರ ಶೀರ್ಷಿಕೆಯನ್ನು ಅಣಕಿಸುವಂತೆ ರಮಾನಾಥೆಸ್ಸೆಮ್ಮೆಸ್ ಇತರರೊಡನೊಡಗೂಡಿ ಗ್ರಾಫಿಕ್ ವಿಭಾಗದ ಚಹಾ ಸೇವನೆಗೆ ಹೊರಟ. ಯಾವಾಗಲೋ, ಎಲ್ಲಿಯೋ, ಹೇಗೋ ಕೇಳಿದ್ದನ್ನು ಹೇಗೆ, ಎಲ್ಲಿ ಕೇಳಿದೆ ಎಂಬುದಕ್ಕಿಂತಲೂ ಏನನ್ನು ಕೇಳಿದೆ ಎಂಬುದನ್ನು ಕರಾರುವಾಕ್ಕಾಗಿ ನೆನಪಿಟ್ಟುಕೊಂಡು, ಅದಕ್ಕೊಂದು ಸೂಕ್ತ ಪರ್ಯಾಯ ಪದಗುಚ್ಛದ ಮೂಲಕ ಅಣಕವೋ, ಮೆಚ್ಚುಗೊಯೋ ಸೂಸುವ ವಾಕ್ಯವೊಂದನ್ನು ದಢಕ್ಕನೆ ಉದುರಿಸುವುದು ರಮಾನಾಥೆಸ್ಸೆಮ್ಮೆಸ್ಸನ ಚಾಳಿ. ಆತ ಹೇಳುವುದನ್ನು ಬೇಧಿಸುವುದು ಆಸಕ್ತರಿಗೆ ತಮ್ಮ ಐ.ಕ್ಯೂವನ್ನು ಅಭಿವೃದ್ಧಿ ಪಡಿಸಿಕೊಳ್ಳಲಿಕ್ಕೊಂದು ಸುಲಭೋಪಾಯವಾಗಿತ್ತು. ’ಆಯ್ತು ಬಾರಪ್ಪ, ಇನ್ನು ಮುಂದೆ ಬೆಳಕೇ ಎಲ್ಲ. ಬೆಳಕು ಹರಿವ ಹೊತ್ತಾಯಿತು’ ಎಂದದಾರೋ ಈತನ ಹೆಗಲ ಮೇಲೆ ಕೈ ಹಾಕುತ್ತ ನಡೆಯತೊಡಗಿದರು. 
 
ಗ್ರಾಫಿಕ್ ವಿಭಾಗದಲ್ಲಿ ಎಲ್ಲವೂ ಶಾಂತವಾಗಿತ್ತು. ಟೀ ಹೀರುವ ಬಾಯಿಗಳ ಧ್ವನಿಗಳನ್ನು ಹೊರತುಪಡಿಸಿದರೆ ಎಲ್ಲರಲ್ಲೂ ನಗುವಿತ್ತೇ ಹೊರತು ಅದರ ಸದ್ದಿರಲಿಲ್ಲ. ಏನೇನೆಲ್ಲಾ ನಡೆದುಹೋಯಿತು ಕೆಲವೇ ಗಂಟೆಗಳಲ್ಲಿ ಎಂದು ಒಬ್ಬೊಬ್ಬರೂ ಲೊಚಗುಟ್ಟತೊಡಗಿದರು. ಹೊಸ ಆಟೋ, ಅದರ ಸವಾರಿ, ಅದರ ಸೊಟ್ಟಗಾದರೆ ಮಾತ್ರ-ನೇರ-ಸಾಗುವ-ಹ್ಯಾಂಡಲ್, ಒಡೆದ ಪಾಟುಗಳು ಮತ್ತವುಗಳ ರಿಪೇರಿ ಅಥವ ರಿ-ಪ್ಲೇಸ್‌ಮೆಂಟ್, ರಾಮಾಯ್ಣನ ಹಳೆಯ ಸ್ನೇಹಿತನ ಹೊಸ ಗಾಡಿ-ಇತ್ಯಾದಿಗಳನ್ನು ಎಲ್ಲರೂ ಲೂಪಿನಲ್ಲಿ ವಿವರಿಸುತ್ತ, ಚಹಾದ ಚೂಡಾದಂಗೆ ನಂಚಿಕೊಳ್ಳುತ್ತಿದ್ದರು. ಯಾವ ಕಾರಣಕ್ಕೂ ಮೇಷ್ಟ್ರ ಕಣ್ಣಿಗೆ ಒಂಚ್ಚೂರೂ ಸುಳಿವು ಸಿಗದಿರುವ ಬಗೆಗಿನ ವಿಶ್ವಾಸ ಬಹಳವಾಗಿತ್ತು ಮಮಾನಲ್ಲಿ. 
 
(೯೧)
 
     ಅಷ್ಟರಲ್ಲಿ, ದೇವಲೋಕದ ಗಾಡ್‌ಗಳೆಲ್ಲ ಧರೆಗಿಳಿವ ಆ ಗಾಡಾಂದಕಾರದಲ್ಲಿ ಏನೋ ಸರಸರ ಸದ್ದು. ಯಾರೂ ’ಎದ್ದೆನೋ ಬಿದ್ದೆನೋ’ ಎಂದು ಹಿಂದಿಯಲ್ಲಿ ಹೇಳುತ್ತ (ಉಟಾಯಾ, ಗಿರಾಯಾ ?) ಜೀವ ಉಳಿಸಿಕೊಳ್ಳಲು ಗ್ರಾಫಿಕ್ ವಿಭಾಗಕ್ಕೆ ಓಡಿಬರುತ್ತಿರುವಂತಹ ಭಾಸ. ಹಿಂದಿ ಬರದ ಅನೇಖನಿಗೆ ಅದು ನಡೆವ ಕಾಲಕ್ಕೇ ಅದರ ಸತ್ವವು ಕನ್ನಡದಲ್ಲೂ ಭಾಷಾಂತರವಾಗುತ್ತಿರುವಂತೆ ಭಾಸವಾಯಿತು. ಒಂದರೆಕ್ಷಣ ಇದು ಹೇಗೆ ಸಾಧ್ಯ ಎಂದು ಚಿಂತಿಸುತ್ತ ಓಡಿಬರುತ್ತಿರುವವರ ಇಮೇಜು ಆ ಪ್ರಶ್ನಾರ್ಥಕ ಚಿಂತನೆಯೊಂದಿಗೆ ಜಕ್ಸ್ಟಪೋಸ್ ಆಗಿಬಿಟ್ಟಿತ್ತು. ಅಂದರೆ ಸೂಪರ್-ಇಂಪೋಸ್ ಆಗಿಬಿಟ್ಟಿತ್ತು. ಹಿಂದಿನಿಂದ ಯಾವುದೋ ಒಂದು ಹೆಣ್ಣು ಮತ್ತು ಗಂಡು ಧ್ವನಿ ಆ ಧ್ವನಿಯ ಒಡೆಯನ ಲಿಂಗದ ಗುರ್ತನ್ನೇ ಅಡಿಗಿಸುವಂತಹ ಅರ್ಥದ ಹಾಗೂ ಏರಿಕೆಯ ಮಟ್ಟದ್ದಾಗಿತ್ತು. ಮಾರೀಷ ಬರಿಗೈಯಲ್ಲಿ ಕುಂಟುತ್ತ ಓಡಿಬರುತ್ತಿದ್ದ. ಹಿಂದೆ ಒಬ್ಬ ಕೂಲಿ ಹೆಣ್ಣು ಮತ್ತು ಗಂಡು. ಹೆಣ್ಣಿನ ಕೈಲಿ ಮಾರೀಷ ಹೊತ್ತೋಯ್ದಿದ್ದ ಮಕ್ಕರಿಯ ಖಾಲಿಯವತಾರ. ಅವರಿಬ್ಬರೂ ಮಾರೀಶನನ್ನು ಗ್ರಾಫಿಕ್ ವಿಭಾಗದ ತಲೆಬಾಗಿಲ ಬಳಿ ಹಿಡಿದು ಜಗ್ಗಾಡತೊಡಗಿದರು. "ನೀಕೇಮ್ರಾ ವಚ್ಚಿಂಡೇದಿ, ಮೇಮು ನೀಕಿ ಏಮಯ್ಯಾ ಅನ್ಯಾಯಮು ಸೇಸ್ಯಾಮು?" ಎಂದೆಲ್ಲಾ ಅವರುಗಳು ಆತನನ್ನು ಪ್ರಶ್ನೆ ಕೇಳಿದಂತೆ ನಮಗೆಲ್ಲಾ ಕುತೂಹಲ, ಮಾರೀಷ ಕಸ ಹೊತ್ತೋಯ್ದ ಮೂರು ನಿಮಿಷದಲ್ಲಿ ಏನು ಮಾಡಿರಬಹುದೆಂದು. ಕೂಲಿಯವ ಏನು ಹೇಳುತ್ತಿರಬಹುದೆಂಬ ಕುತೂಹಲ ಮಾರೀಷನಿಗೆ!
 
     ಆಗಿದ್ದಿದ್ದಿಷ್ಟು. ರಸ್ತೆ ದಾಟಿ, ಕಾರ್ಗತ್ತಲಲ್ಲಿ ಪಾಟುಗಳ ಪುಡಿ ತುಂಬಿದ ಕೊನೆಯ ಮಕ್ಕರಿಯನ್ನು ಮಾರೀಷನು ಪರಿಷತ್ತಿನೆದುರಿನ ಕಟ್ಟಡದ ಎಡಕ್ಕಿರುವ ಖಾಲಿ ಸೈಟಿನಲ್ಲಿ ಕುಮ್ಮರಿಸಿದ್ದ. ಸುಮಾರು ಐವತ್ತಡಿ ಅಗಲ, ನೂರಡಿ ಉದ್ದವಿರುವ ಈ ಸೈಟನ್ನು ನೆಲದ ಮಟ್ಟದಿಂದ ಆರಡಿ ಆಳಕ್ಕೆ ಹಳ್ಳ ತೋಡಿದ್ದರು. ನೀರು ತುಂಬಿದ್ದರೆ ಪರಿಷತ್ತಿನ ಗಂಡು ಹುಡುಗರಿಗೆಲ್ಲಾ ಈಜಲು ಒಂದು ಈಜುಕೊಳವೂ ಹೆಣ್ಮಕ್ಕಳಿಗೆ ದೃಷ್ಟಿಜಳಕಕ್ಕೆ ತಾಣವೂ ಆಗಿಬಿಡುತ್ತಿತ್ತು. ಇಂದಿಗೂ, ೨೦೧೧ರಲ್ಲೂ ಆ ಜಾಗದಲ್ಲಿ ಅಪೂರ್ಣವಾದ ಕಟ್ಟಡವೊಂದು ಇದೆಯೇ ಹೊರತು ಪೂರ್ಣಗೊಂಡ ಕಟ್ಟಡವೆಂಬುದಕ್ಕೂ ಆ ಸೈಟಿಗೂ ಎಂದಿಗೂ ಆಗಿಬರಲಿಲ್ಲ. 
 
     ಆ ಹಳ್ಳದ ಬಲಭಾಗಕ್ಕೆ, ಅಂದರೆ ಪರಿಷತ್ತಿಗೆ ಅತ್ಯಂತ ಹತ್ತಿರವಿರುವ ಮೂಲೆಯಲ್ಲಿ ನೀಲುಬಣ್ಣದ ಆರಡಿ ಆರಡಿ ಅಗಲದ ಚಪ್ಪರವಿತ್ತು. ಅಂದರೆ ನೆಲದ ಮಟ್ಟದಲ್ಲಿ, ಆ ಸೈಟಿನಲ್ಲಿ ಹಳ್ಳವಿರುವುದು ಗೊತ್ತಿಲ್ಲದವರಿಗೆ ಅದು ಸುಮ್ಮನೆ ನೆಲದ ಮೇಲಿನ ಹಾಸು ಎಂದು ರಾತ್ರಿ ಹೊತ್ತು ಭಾಸವಾಗುವಂತಿತ್ತು. ಕನ್ನಡಕದಾರಿ ಕುಂಟು ಮಾರೀಷ್ ಪಾಲನ ಪಾಲಿಗೆ ಅದು ಆ ಕಗ್ಗತ್ತಲ ಮದ್ಯರಾತ್ರಿಯಲ್ಲಿ ಅದು ಹೇಗೆ ಕಂಡಿತೋ ತಿಳಿಯದು, ಆತ ತೂಕದ ಮಕ್ಕರಿಯಲ್ಲಿದ್ದುದನ್ನೆಲ್ಲಾ ಆ ನೀಲಿ ಚಪ್ಪರಹಾಸಿನ ಮೇಲಕ್ಕೆ ಧಡಕ್ಕನೆ ಉದುರಿಸಿಬಿಟ್ಟಿದ್ದ. ಆ ನೀಲಿ ಹಾಸಿನ ಪ್ಲಾಸ್ಟಿಕ್ ಹರಡುವಿಕೆಯು ಹಳ್ಳದಲ್ಲಿ ಮನೆಮಾಡಿಕೊಂಡಿದ್ದ ವಾಚ್‌ಮನ್ ಮತ್ತು ಆತನ ಮಡದಿಯ ಗುಡಿಸಲ ಮೇಲ್ಛಾವಣಿಯಾಗಿತ್ತು! ಗಾಢನಿದ್ರೆಯಲ್ಲಿದ್ದ ದಂಪತಿಗಳಿಗೆ ಮನೆ ಅಕ್ಷರಶಃ ಕುಸಿದಂತಾಗಿ, ಹೊದಿಕೆಯ ಮುಸುಕು ತೆಗೆದು ನೋಡಲಾಗಿ ಅದು ಅಕ್ಷರಶಃ ಕುಸಿದಂತಾದ ಭಾವವು ಅಕ್ಷರಶಃ ನಿಜವಾಗಿತ್ತು!
 
     "ಎಲ್ಲಾ ಸರಿ. ಕ್ಯಾನ್ವಸಿನ ಮೇಲೆ ರೇಖಾಚಿತ್ರದ ಆಕಾರಗಳನ್ನು ಬರೆದು, ಆ ರೇಖಾಚಿತ್ರಗಳ ಮೇಲೆ ಜಲವರ್ಣವನ್ನು ರೆಂಡರ್ ಮಾಡಿದ ನಂತರ, ರೇಖಾಚಿತ್ರವು ಅದರಿಂದ ಬಿಡಿಸಿಕೊಂಡು ಬಂದಂತಾಯಿತು ಇವರ ಸ್ಥಿತಿ. ಆದರೆ ಕ್ಯಾನ್ವಾಸ್ ಮತ್ತು ಬಣ್ಣಗಳ ನಡುವೆ ಸಿಲುಕಿಕೊಂಡ ರೇಖೆಗಳು ಪರಸ್ಪರ ಬೆರೆತಿದ್ದುದನ್ನು ಹೇಗೆ ಬಿಡಿಸಿಕೊಂಡು ಬಂದರು?" ಎಂದು ಅತ್ಯಂತ ಸಂಕೀರ್ಣವಾದ ಲೈಂಗಿಕ ಜೋಕನ್ನು ಕಲಾತ್ಮಕವಾಗಿ ಬಾರಿಸಿದ್ದ ಮಮಾ. ಮಾರೀಷ ಮತ್ತು ಆತನನ್ನು ಹೊಡೆಯಲು ಬರುತ್ತಿದ್ದ ದಂಪತಿಗಳ ನಡುವಣ ನಾಟಕೀಯತೆಯನ್ನು ನೂರು ಶೇಕಡಾವಾರು ದೃಷ್ಟಿಯಿಂದ ಕಣ್ತುಂಬಿಕೊಳ್ಳುತ್ತಿದ್ದರಿಂದ ಮಮಾನ ಜೋಕಿನ ಮರ್ಮ ಅಥವ ಮಾರ್ಮಿಕ ಮಾತಿನೊಳಗಣ ಜೋಕನ್ನು ’ಆಮೇಲೆ ಮೆಲ್ಲುವ’ ಎಂದುಕೊಂಡು ಎಲ್ಲರೂ ಅದನ್ನು ತಮ್ಮ ಅಂಗಿನ ಜೇಬಿನಲ್ಲಿರಿಸಿಕೊಂಡರು.
 
     ತೆವಳಿಕೊಂಡು ಹೊರಬಂದ ವಾಚ್‌ಮನ್ ಸಂಸಾರದ ಇಬ್ಬರೂ ಸದಸ್ಯರು ದೂರ ನಿಂತು ಕಂಡದ್ದೇನು? ಹಳ್ಳದೊಳಗಿನಿಂದ ಹುಟ್ಟಿನಿಂತಿದ್ದ ತಮ್ಮ ಅರಮನೆಯ ಗೋಪುರವು ಮಕ್ಕರಿಯ ಕಸದ ಕುಸಿತದಿಂದ ಇನ್‌ಸೈಡ್-ಔಟ್ (ಒಳಹೊರ) ಆಗಿದೆ. ಅದರ ಮೇಲುಭಾಗದಲ್ಲಿ, ಅಂದರ ನೆಲದ ಮಟ್ಟದಲ್ಲಿ ಕುಂಟಾಕಾರವೊಂದು ಮಕ್ಕರಿಯನ್ನು ಕಾಲಿನ ಬಳಿ ಇರಿಸಿಕೊಂಡು ಅರಮನೆಯ ಮೇಲ್ಛಾವಣೆಯ ಮೇಲೆ ಯಾವ, ಯಾರ ಹಂಗೂ ಇಲ್ಲದೆ ಲೋಕಾಭಿರಾಮವಾಗಿ ಮೂತ್ರವಿಸರ್ಜನೆ ಮಾಡುತ್ತಿದೆ. ಸಿಟ್ಟಾದ ಅವರುಗಳು ಹಳ್ಳಹತ್ತಿ ಆ ವ್ಯಕ್ತಿಯ ಕಡೆ ಕೈಗೆ ಸಿಕ್ಕ ಕಲ್ಲುಗಳನ್ನು ಬೀಸತೊಡಗಿದಾಗ, ಗಾಭರಿಯಾದ ಆ ವ್ಯಕ್ತಿಯು ಮಕ್ಕರಿಯನ್ನಲ್ಲೇ ಬಿಟ್ಟು ಪರಿಷತ್ತನ್ನು ಪ್ರವೇಶಿಸಿದೆ. ಕಲ್ಲುಬೀಸುವ ತಮ್ಮ ಉಪಾಯವನ್ನು ಬದಲಿಸಿ ಅವರುಗಳೂ ಆ ಆಕಾರವನ್ನು ಒಡಿಸಿಕೊಂಡು ಮಕ್ಕರಿಯೆಂಬ ಸಾಕ್ಷಿ ಸಮೇತ ತಾವೂ ಪರಿಷತ್ತನ್ನು ಪ್ರವೇಶಿಸಿದ್ದಾರೆ!
 
(೯೨)
 
     ಎಲ್ಲವೂ ಸುಖಾಂತದಲ್ಲಿ ಮುಗಿದ ಮೇಲೆ ಬೆಳಗಿನ ಜಾವದ ಮೂರುಗಂಟೆಗೆ ವೀರಾ ಮಾರೀಷನನ್ನು ಗ್ರಾಫಿಕ್ ವಿಭಾಗದಲ್ಲಿ ಚಹಾ ಕುಡಿಯುತ್ತ ಕೇಳಿದ್ದ, "ನನಗೇನೋ ಅನುಮಾನ ಮಾರೀಷ್. ಅವರಿಗೆ ಅಷ್ಟು ಸಿಟ್ಟು ಬರಿಸುವಂತಹುದ್ದೇನು ಮಾಡಿದೆ ನೀನು?" ಅದಕ್ಕೆ ಸಿಡಿಮಿಡಿಗೊಂಡ ನಲ್ಲಸಿವ ಹೇಳಿದ, "ಆಗಲೇ ಜೇಬಿಗಿಳೀಸಿಕೊಂಡೆವಲ್ಲ ಮಮಾನ ಮಾರ್ಮಿಕ ಜೋಕು ಅಥವ ಜೋಕಿನೊಳಗಣ ಮರ್ಮ. ಅದೇ ಕಾರಣ."
"’ಏನದು?"
"ಅದೇ. ಅವನು ಹೇಳಿದನಲ್ಲ, ’ಕ್ಯಾನ್ವಸಿನ ಮೇಲೆ ರೇಖಾಚಿತ್ರದ ಆಕಾರಗಳನ್ನು ಬರೆದು, ಆ ರೇಖಾಚಿತ್ರಗಳ ಮೇಲೆ ಜಲವರ್ಣವನ್ನು ರೆಂಡರ್ ಮಾಡಿದ ನಂತರ, ರೇಖಾಚಿತ್ರವು ಅದರಿಂದ ಬಿಡಿಸಿಕೊಂಡು ಬಂದಂತಾಯಿತು ಇವರ ಸ್ಥಿತಿ. ಆದರೆ ಕ್ಯಾನ್ವಾಸ್ ಮತ್ತು ಬಣ್ಣಗಳ ನಡುವೆ ಸಿಲುಕಿಕೊಂಡ ರೇಖೆಗಳು ಪರಸ್ಪರ ಬೆರೆತಿದ್ದುದನ್ನು ಹೇಗೆ ಬಿಡಿಸಿಕೊಂಡು ಬಂದರು?’ ಇನ್ನೂ ಅರ್ಥವಾಗಲಿಲ್ಲವೆ?" ಎಂದಾಗ ಎಲ್ಲರೂ ನಗತೊಡಗಿದರು. ಕೆಲವರು ಮಾತ್ರ ಆ ನಗುವಿನ ಸರಿಯಾದ ಕಾರಣವನ್ನೂ ಅರಿತುಕೊಂಡಿದ್ದರು.
 
(೯೩)
 
     ಪರಿಷತ್ತಿನೆದುರಿನ ಕಟ್ಟಡದ ಎಡಭಾಗಕ್ಕಿದ್ದ ಹಳ್ಳತೋಡಲಾದ ಖಾಲಿ ಸೈಟಿನ ಅತ್ಯಂತ ಹತ್ತಿರದ ಮೂಲೆಗೆ ಅನೇಕ ಹೆಸರು ಬಂದುಬಿಟ್ಟಿತು. ಕೆಲವರು ಅದನ್ನು ’ಗರ್ಭ’ಗೃಹ ಎಂದರು. ಕೆಲವರು ಭಾವಿ, ಮನಸ್ಸಿನಾಳ, ಪಂಡೋರ ಪೆಟ್ಟಿಗೆ, ಒಳಕಲ್ಲ ತೀರ್ಥ, ಸೀತೆ ಭೂಮಿಯೊಳಗೊಂದಾದ ತಾಣ, ಬಾಯಿ-ಭಗ ಇತ್ಯಾದಿ ಹತ್ತಾರು ಅರ್ಥಗಳನ್ನು ಆ ಸೈಟಿನ ಈ ಮೂಲೆಗೆ ಕೊಟ್ಟದ್ದಕ್ಕೆ ಕಾರಣ ಪರಿಷತ್ತಿನ ಹುಡುಗರಲ್ಲಿ ಸಹಜವಾಗಿ ಮನೆಮಾಡುತ್ತ, ಮೊದಲ ಹಾಗೂ ಎರಡನೇ ಫ್ಲೋರಿಗೆ ಬೆಳೆಯತೊಡಗುತ್ತಿದ್ದ ಬೇಸರಿಕೆ. ಆ ಹಳ್ಳಕ್ಕೆ ಎಲ್ಲರೂ ಕಾಸು ಎಸೆದು, ಹಾಗೆ ಮಾಡುವಾಗ ತಮ್ಮ ಮನದ ಬಯಕೆಯನ್ನು ಪಿಸುಗುಡುತ್ತಿದ್ದರು. ಬಹುಪಾಲು ನಾಸ್ತಿಕರ ಹರಕೆಯ-ಹಳ್ಳವಾಗಿ ಹೋಗಿತ್ತು ಅದು, ಪರಿಷತ್ತಿನ ಹಾಗೂ ಬಾಯ್ಸ್ ಕಲಾಶಾಲೆಯ ವಿದ್ಯಾರ್ಥಿ ಸಮುದಾಯಕ್ಕೆ.
 
     ಚಾರ್ವಾಕಿ ತನ್ನ ಕಲಾಇತಿಹಾಸದ ತರಗತಿಗಳಲ್ಲಿ ಆ ಹಳ್ಳದ ತಾತ್ವಿಕತೆಯನ್ನು ಅರ್ಥೈಸುತ್ತ, ಬರಲಿರುವ ಇಪ್ಪತ್ತೊಂದನೇ ಶತಮಾನದಲ್ಲಿ ಪೃಥ್ವಿಯ ಜೀವಿಗಳು ಅನುಭವಿಸಬಹುದಾದ ಅತ್ಯಂತ ಅಪಾಯಕಾರಿ ರೋಗವಾದ ’ಬೋರ್‌ಡಂ’ಗೆ ಅತ್ಯುತ್ತಮ ಹಾಗೂ ಸೂಕ್ತ ರೂಪಕವಾಗಿ ಆ ಹಳ್ಳದ ಮೂಲೆಯನ್ನು ವಿವರಿಸಿದ್ದರು. ಪ್ಲಾಝಾ ಥಿಯೇಟರಿನಲ್ಲಿ ವೀರಾನಿಗೂ ಆಕೆಗೂ ನಡೆದ ವಿಕ್ಷಿಪ್ತ ಪ್ರೀತಿ-ಪ್ರೇಮದ ಮಾತುಕತೆ ಅದೆಷ್ಟನೆಯ ಆವೃತ್ತಿಯೋ ಎಂಬಂತೆ ದಿನೇ ದಿನೇ ಬಣ್ಣ ಪಡೆದುಕೊಳ್ಳುತ್ತಿತ್ತು. ವೀರಾನೂ ಸಹ ಗುಟ್ಟಾಗಿ ತನ್ನ ತಾತನ ಕಾಲದ, ತಾತನಿಗೇ ಸೇರಿದ ಸಣ್ಣ ಅಳತೆಯ ತಾಮ್ರದ ನಾಣ್ಯವೊಂದನ್ನು ಆ ಮೂಲೆಯ ಟೆಂಟಿನ ಮೇಲಕ್ಕೆ ಸಂಜೆ ಹೊತ್ತು ಎಸೆದು ತನ್ನ ಮನೋಭಿಲಾಷೆಯನ್ನು ಪಿಸುಗುಟ್ಟಿಕೊಂಡ. ಅದೆಲ್ಲಿಂದಲೋ ಎಂಬಂತೆ ಅಚಾನಕ್ಕಾಗಿ ಹಿಂದಿನಿಂದ ಬಂದು ಆತನ ಭುಜದ ಮೇಲೆ ಕೈ ಹಾಕಿದ ಅನೇಖ, "ಏನು ಬೇಡಿಕೊಂಡೆ ಗುರೂ. ಈಗ ನನಗೆ ಮಾತ್ರ ಹೇಳುತ್ತಿಯೋ ಅಥವ ನೀನು ಹೇಳದಿದ್ದರೂ ಅದನ್ನೇ ನಾಳೆ ಪರಿಷತ್ತು ಹಾಗೂ ಬಾಯ್ಸ್‌ನಲ್ಲಿ ಟಾಮ್ ಟಾಮ್ ಮಾಡಿಬಿಡಲೆ?" ಎಂದು ಅದೇ ಉಸಿರಿನಲ್ಲಿ, "ನಿನಗೊಂದು ಪತ್ರ ಇದೆ ನೋಡು, ಭವಿಷ್ಯದಿಂದ ಎನ್ನುತ್ತ ಆತನ ಕೈಗೆ ಲಕೋಟೆಯೊಂದನ್ನಿತ್ತ. ಅದರಲ್ಲಿ ’ಲಂಡನ್ ಪ್ರವಾಸಕಥನ’ದ ಭಾಗ ೧೨, ೧೩, ೧೪ ಹಾಗೂ ೧೫ ಇದ್ದಿತು. (ಓದಿ: hಣಣಠಿ://sಚಿmಠಿಚಿಜಚಿ.ಟಿeಣ/ಚಿಡಿಣiಛಿಟe/೧೦೧೫೪
hಣಣಠಿ://sಚಿmಠಿಚಿಜಚಿ.ಟಿeಣ/ಚಿಡಿಣiಛಿಟe/೧೦೮೩೦
hಣಣಠಿ://sಚಿmಠಿಚಿಜಚಿ.ಟಿeಣ/ಚಿಡಿಣiಛಿಟe/೧೦೯೬೮
<hಣಣಠಿ://sಚಿmಠಿಚಿಜಚಿ.ಟಿeಣ/ಚಿಡಿಣiಛಿಟe/೧೧೪೮೧>)
 
"ಇದರಲ್ಲಿ ಒಂದು ವಿಶೇಷವಿದೆ ವೀರಾ."
"ಏನು?"
"ಇದೇ ಕೊನೆಯ ಕಂತು. ಚಾರ್ವಾಕಿ ಕೊಟ್ಟಳು ನಿನಗೆ ಕೊಡುವಂತೆ ಹೇಳಿ."
"ಅದೇನು ಲಂಡನ್ ಪ್ರವಾಸಕಥನವು ಅರ್ಧ ಸೋಕುಮಾರಿಯಿಂದ ಮತ್ತರ್ಧ ಚಾರ್ವಾಕಿಯಿಂದ ಬಂದಂತಾಯಿತಲ್ಲವೆ?"
"ಅವೆರಡೂ ಅಲ್ಲ. ಇದು ಕೊನೆಯ ಕಂತಾದರೂ ಅದರೊಳಗಿನ ಕಥೆ ಇಲ್ಲಿಗೇ ಮುಗಿಯಲಿಲ್ಲ. ಅಂದ ಹಾಗೆ ನಾನು ಮರೆತು ಹೋಗುವ ಮುನ್ನ ತಿಳಿಸಿಬಿಡು, ನೀನು ಆ ’ಬ್ಲಾಕ್ ಹೋಲಿನಲ್ಲಿ’ ಕಾಸು ಎಸೆದು ಏನೆಂದು ಬೇಡಿಕೊಂಡೆ?" ಎಂದು ಒತ್ತಾಯಿಸಿದ ಅನೇಖ.
"ಮತ್ತೇನು ಕೇಳಿಕೊಂಡಿರುತ್ತಾನೆ. ವಯಸ್ಸಿನ ಹುಡುಗ. ಯಾವುದರೊಳಗೆ ನೀನು ಕಾಸು ಎಸೆದೆಯೋ ಅದರ ಸಂಕ್ಷಿಪ್ತ ರೂಪವೊಂದು ಸ್ವಂತಕ್ಕೆ ಸಿಗಲಿ ಎಂದುಕೊಂಡಿರುತ್ತಾನೆ. ಹ್ಞಾಂ, ಶಿಷ್ಟಾಚಾರದ ಸಂಕೋಚದ ಅವಶ್ಯಕತೆ ಬೇಡ. ಬಾಯಿ ಬಿಟ್ಟು ಸುಳ್ಳು ಹೇಳುವುದಕ್ಕಿಂತಲೂ ಬಾಯ್ಮುಚ್ಚಿಕೊಂಡು ಅನ್ನಿಸಿದ್ದನ್ನು ಹೇಳುಬಿಡುವ ನನ್ನ ಬುದ್ಧಿ ಸ್ವಲ್ಪವಾದರೂ ನಿನಗೆ ಬರುವಂತಾಗಲಿ ಎಂದು ಮತ್ತೊಂದು ನಾಲ್ಕಾಣೆಯನ್ನು ಬ್ಲಾಕ್ ಹೋಲಿಗೆ ಎಸೆದು ಪ್ರಾರ್ಥಿಸು, ನಾಸ್ತಿಕನೆ," ಎಂದ ಮಮಾ, ತನ್ನ ಕನ್ನಡದ ಉಚ್ಛಾರಣೆಯ ಸ್ಪಷ್ಟತೆಯ ಬಗ್ಗೆ ಸಂತುಷ್ಟನಾಗುತ್ತ ಮುಂದೊಮ್ಮೆ ಕನ್ನಡ ಸಿನೆಮ ನಟನಾಗುವ ಕನಸಿನ ಬೀಜವನ್ನು ತನ್ನೊಳಗೆ ತಾನೇ ಬಿತ್ತುಕೊಂಡ. 
"ಏಯ್ ಮಮಾ. ನಿನ್ನ ಸಿನೆಮಗಳಲ್ಲಿ ನಿನ್ನ ಡಯಲಾಗುಗಳನ್ನ ನೀನೇ ಹೇಳುವಂತವನಾಗಲಿ ಎಂದು ಬ್ಲಾಕ್ ಹೋಲಿನಲ್ಲಿ ಕಾಸೆಸೆದು ಬೇಡುಕೊಳ್ಳುವೆ ಬಿಡೋ," ಎಂದ ವೀರಾ. 
 
     ಆತನಿಗೆ ಚಾರ್ವಾಕಿ ತನ್ನ ಹತ್ತಿರ ಬರುವ ಮುನ್ನವೇ ದೂರವಾಗಲು ಮಮಾನದ್ದೂ ಏನೋ ಪಾತ್ರವಿದೆ ಎಂಬ ಆದಿಭೌತಿಕ ಅನುಮಾನವೊಂದು ಸಣ್ಣದಾಗಿ ಕಾಡತೊಡಗಿತ್ತು!// 
 
 
 
 
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):