ನೆನಪಿನ ಚಿತ್ರಕಲಾ ಶಾಲೆ: ಭಾಗ ೨೮ -- ’ರಿಕ್ಷಾಸವಾರಿ’

5

 

 
 (೮೪)
     ಪ್ಲಾಝಾ ಥಿಯೇಟರಿನಲ್ಲಿ ವೀರಾನಿಗಾದ ಅನುಭವದಿಂದ ಜಗತ್ತು ಮುಳುಗದಿದ್ದರೂ ಆತನ ಪಾಲಿನ ನಿರೀಕ್ಷೆಯೆಂಬ ವಿಶ್ವದ ಬಲೂನಿಗೆ ತೂತು ಬಿದ್ದದ್ದಂತೂ ಗ್ಯಾರಂಟಿ. ಎಂಥಾ ವಿಶ್ವಾಸದ್ರೋಹ! ಆದರೆ ವಿಶ್ವಾಸಕ್ಕೆ, ಶ್ವಾಸಕ್ಕೆ ಮತ್ತು ದ್ರೋಹಕ್ಕೆ ಕಾಲ-(ಸ್ಥಳ)ಅವಕಾಶದ ಕೆಲವು ನಿಯಮಗಳು ಆ ಘಟನೆಯಲ್ಲಿ ಘಾಸಿಗೊಂಡದ್ದನ್ನು ವೀರಾನ ವೀರಾವೇಷದ ಭಾವವು ಗಮನಿಸಲು ಆತನಿಗೆ ಅನುಮತಿ ನೀಡಿರಲಿಲ್ಲ. ಬರಬರುತ್ತ ಆತ ತನ್ನೊಳಗೇ ಕುಸಿಯತೊಡಗಿದ. 
 
     ಎಂದೂ ಯಾರೂ ತಯಾರಿಯಲ್ಲಿದೆ ಎಂದೂ ಕೇಳಿರದಿದ್ದ ’ಸಿಕ್ಸ್ತ್ ಸೆನ್ಸ್’ ಸಿನೆಮದ ಭಾಗಗಳನ್ನು ನೋಡಿದ್ದು, ಅವುಗಳ ಮದ್ಯದಲ್ಲಿ ’ಆಫಿಸರ್ ಅಂಡ್ ಅ ಜಂಟಲ್‌ಮನ್’ ಪರದೆಯ ಮೇಲೆ ಬಂದಾಗಲೂ ವೀಕ್ಷಕರಿಗೆ ಅದು ವಿಚಿತ್ರವೆನಿಸದಿದ್ದದ್ದು, ಚಾರ್ವಾಕಿ ತನ್ನನ್ನು ಎಡಗಡೆ ಸಲಹುತ್ತಲೇ ಬಲಕ್ಕೆ ಅನೇಖನನ್ನು ಸಲಹುತ್ತಿದ್ದ ಸೂಚನೆ, ಆಕೆಯ ಕಂಗಳು ನೈಜ ಹಾಗೂ ಯಂತ್ರಗಳ ಸಮ್ಮಿಶ್ರಣದಂತಿದ್ದದ್ದು, ಆಕೆ ಹೆಣ್ತನದ ಪರಿಧಿಯ ಹೊರಗಿನಿಂದ ಕೇಳಿದ (ತನಗೇ ಸಂಕೋಚವಾಗಬಹುದಾಗಿದ್ದಂತಹ) ಪ್ರೀತಿಪ್ರಣಯವನ್ನು ಕುರಿತು ಬಟಾಬಯಲಾದ ಪ್ರಶ್ನೆಗಳು-ಇವೆಲ್ಲವೂ ಸಾಧಾರಣವಾಗಿ ಒಬ್ಬ ಸೂಕ್ಷ್ಮ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಪ್ರೀತಿಯನ್ನು ಕುರಿತಂತೆ ಕೇಳಿಕೊಳ್ಳಬಹುದಾದ ಒಟ್ಟಾರೆ ಪ್ರಶ್ನೆಯ ಮೊತ್ತದಷ್ಟಿದ್ದು, ಅವುಗಳನ್ನೆಲ್ಲಾ ಕೇವಲ ಒಂದು ಗಂಟೆ ಕಾಲದಲ್ಲಿ ಆತನಿಗೆ ಕೇಳಲಾಗಿತ್ತು! ಅಷ್ಟಿದ್ದರೂ, ಚಾರ್ವಾಕಿ ತನ್ನ ಛಾಯಾಚಿತ್ರಗಳನ್ನು ಹೊಗಳಿದ್ದು ಖುಷಿ ಎನ್ನಿಸಿದರೂ ಆತ ಮಾತ್ರ ಹಳೆಯ ಫೋಟೋಗಳಲ್ಲಿ ಬಣ್ಣಗಳೆಲ್ಲಾ ವರ್ಣರಹಿತವಾಗಿಬಿಡುವಂತೆ ಕ್ರಮೇಣ ಇಮರಿಹೋಗತೊಡಗಿದ್ದ.  

 
     ಪರಿಷತ್ತಿನಲ್ಲಿ ಚಾರ್ವಾಕಿ ವೀರಾನಿಗೆ ಕೈ ಕೊಟ್ಟ ಸುದ್ಧಿ,  ಆಕೆ ’ಕೈ ಕೊಟ್ಟಳು’ ಎಂಬ ಸುದ್ದಿ ಎಲ್ಲೆಡೆ ಹಬ್ಬಿತು. ಅದು ಹಾಗಲ್ಲ ’ಆಕೆ ಅಕ್ಷರಶ: ಕೈಕೊಟ್ಟಿರಬೇಕು’ ಎಂದು ಕೆಲವರು ಅಂದರೆ, ’ಈತ ಆಕೆಯ ಕೈಹಿಡಿಯ ಹೋದಾಗ ಏನ್ ಸಕತ್ತಾಗಿ ನಿರಾಕರಿಸಿದಳಂತೆ ಗೊತ್ತೆ?’ ಎಂದು ಕೆಲವರು ನಿಗೂಢವಾಗಿ ಪ್ರಶ್ನಿಸುತ್ತ ಸ್ವತಃ ಉತ್ತರಿಸಿದ್ದು ಹೀಗೆ, ’ಆತ ಆಕೆಯ ಕೈಹಿಡಿದಾಗ ತನ್ನ ದೇಹಕ್ಕೆ ಸ್ಪರ್ಶವೇ ಇಲ್ಲದಂತೆ ಮಾಡಿಕೊಂಡುಬಿಟ್ಟಳಂತೆ! ಕಣ್ಣಿಗೆ ಕೈ ಹಿಡಿದಿರುವುದು ಕಾಣುತ್ತಿತ್ತಂತೆ ಆದರೆ ಹಿಡಿದ ಸ್ಪರ್ಶ ಮಾತ್ರ ಇರಲಿಲ್ಲವಂತೆ! ಹೋಗಲಿ ಬಿಡಿ, ದೃಷ್ಟಿ-ಸ್ಪರ್ಶವಂತೂ ಆಯಿತಲ್ಲ? ಎಂದು ಅಲ್ಪತೃಪ್ತರು ಸಮಾಧಾನ ಮಾಡಿದರಂತೆ.
 
(೮೫)
 
     ಪರಿಷತ್ತಿನಲ್ಲಿ ಆಲೌಕಿಕ ಘಟನೆಗಳು ನಡೆಯುವುದಕ್ಕೂ, ನಮ್ಮ ನಿರ್ದಿಷ್ಟ ಬ್ಯಾಚಿನವರೆಲ್ಲ ಅಂತಿಮ ವರ್ಷದ ತೀವ್ರತೆಯ ಕಾವನ್ನು ಅನುಭವಿಸುವುದಕ್ಕೂ ಕಾಕತಾಳೀಯ ಸಂಬಂಧವೇರ್ಪಟ್ಟಿತ್ತು. ರಾತ್ರಿಯೆಲ್ಲಾ ಕೆಲಸ ಮಾಡುತ್ತಿದ್ದ ಹುಡುಗರು ಬೆಳಿಗ್ಗೆಯೆಲ್ಲಾ ಹುಡುಗಿಯರಿಗೆ ರಾತ್ರಿಯ ಕಾರ್ಯಗಳನ್ನು ವರ್ಣರಂಜಿತವಾಗಿ ವಿವರಿಸಿ ಅವರಲ್ಲಿ ಈರ್ಷ್ಯೆಯನ್ನು ಹುಟ್ಟುಹಾಕುತ್ತಿದ್ದರು. ಅಂತಹ ಒಂದು ಘಟನೆ ಪಡೆದುಕೊಂಡ ವಿಸ್ತೃತ ವಿವರ ಇಂತಿದೆ:
ಒಂದು ರಾತ್ರಿ ಸುಮಾರು ಇಪ್ಪತ್ತು ಜನ ಹುಡುಗರು ಬೇಸಿಗೆಯ ಬಿಸಿ ತಾಳಲಾರದೆ ಪ್ರಸ್ತುತ ಗ್ಯಾಲರಿಯನ್ನು ಪ್ರವೇಶಿಸುವ ಪರಿಷತ್ತಿನ ಹಾಲಿನಲ್ಲಿ ಕುಳಿತಿದ್ದರು. ೧೮೮೯ರ ಮಾರ್ಚ್ ತಿಂಗಳ ಸುಮಾರು. ಹಾಸ್ಟೆಲ್ಲಿನಲ್ಲಿದ್ದ ಹುಡುಗಿಯರೆಲ್ಲಾ ಹೊರಟು ಹೋಗಿದ್ದರು, ೯ಗಂಟೆಗೂ ಮುನ್ನವೇ. ಇದ್ದಕ್ಕಿದ್ದಂತೆ ರಾಮಾಯಣ್ಣ ಕಾಣಿಸಿಕೊಂಡ. ಆತ ಪರಿಷತ್ತಿನಲ್ಲಿ ಇಂತಹುದ್ದೇ ಎಂಬ ನಿರ್ದಿಷ್ಟ ಕೆಲಸವಿಲ್ಲದೆ, ಎಲ್ಲರೂ ಹೇಳಿದ ಎಲ್ಲಾ ಕೆಲಸಗಳನ್ನು ಮಾಡುವಂತಹ ನೌಕರಿಯಲ್ಲಿದ್ದ ಹತ್ತೊಂಬತ್ತರ ಹರಯದ, ಹೆಚ್ಚೂ ಕಡಿಮೆ ನಮಗಿಂತಲೂ ಒಂದೆರೆಡು ವರ್ಷ ಚಿಕ್ಕವನೇ ರಾಮಾಯ್ಣ. ಎಲ್ಲಿಂದಲೋ ಸ್ಟೈಲಾಗಿ ಬಂದಾತ ಸೈಕಲ್ಲಿನಿಂದ ಕೆಳಕ್ಕಿಳಿದ ಆಷ್ಟೇ ಸ್ಟೈಲೆಂಬ ಕನ್ಸಿಸ್ಟೆನ್ಸಿಯನ್ನು ಉಳಿಸಿಕೊಂಡೇ. ಅದನ್ನು ಕಂಡದ್ದೇ ತಡ ಮಮಾ ಅವನಿಗೆ ಹೇಳಿದ, ಅಲೆಲೆ. ಏನ್ ಚೆನ್ನಾಗಿ ಇಳ್ದೇ ರಮಾಯ್ಣಾ. ಎಲ್ಲಿ ಇನ್ನೊಂದಪಾ ಇಳೀ ನೋಡಮ. ಏನ್ ಕಂಜಾ ನೀನು, ಓಹೊಹೋ ಎಂದು ಹೊಗಳಿಬಿಟ್ಟ. 
 
     ಮಮಾ ಇದ್ದಬದ್ದ ವಿದ್ಯಾರ್ಥಿಗಳನ್ನೆಲ್ಲಾ, ಇದ್ದಬದ್ದೆದೆಯೆಲ್ಲಾ, ಇದ್ದಬದ್ದ ಸ್ಥಿತಿಯಲ್ಲೇ ಗ್ಯಾಲರಿಯ ಹಜಾರಕ್ಕೆ ಬರುವಂತೆ ಹೇಳಿಕಳಿಸಿದ. ನೋಡ್ರೋ, ರಾಮಾಯ್ಣ ಎಂಗೆ ಸೈಕಲ್ಲಿಂದ ರವಿಚಂದ್ರನ್ ತರಾನೇ ಸ್ಟೈಲಾಗಿ ತುಳೀತಾನೆ ಎಂದದ್ದಕ್ಕೆ ’ಪ್ರೇಮಲೋಕ’ ಸಿನೆಮ ನೋಡಿದ್ದ ರಾಮಾಯ್ಣ ಖುಷಿಗೊಂಡಿದ್ದ. ಎಲ್ಲಾ, ಇನ್ನೊಂದಪಾ ಸೈಕಲ್ ಎಗುರು ಮಾರಾಯ. ಇವ್ನು ಸೈಕಲ್ನ ತಳ್ಳಿಕೊಂಡು ಹೋಗ್ತಲೇ ಎರಡು ಕಾಲ್ಗಳನ್ನ ಗಾಳಿಗೆ ಹಾರಿಸಿ ಸೀಟಿನ ಮೇಲೆ ಕುಂತ್ಕತನೆ ಕಣ್ರೋ. ನೀವೇ ನೋಡ್ರಿ ಬೇಕಿತ್ರೆ ಎಂದು ಮಮಾ ರಾಮಾಯ್ಣನನ್ನು ಉಬ್ಬಿಸಿಬಿಟ್ಟ. ಒಟ್ಟಾಗಿ ರಾಮಾಯ್ಣ ಸೈಕಲ್ಲನ್ನು ಎರಡು ಕಾಲ್ಗಳಿಂದ ಒಮ್ಮೆಲೆ ಎಗರುವುದು, ತುಳಿಯುವ ಒಂದು ಶೈಲಿ ಮತ್ತು ಒಮ್ಮೆಲೆ ಎರಡೂ ಕಾಲ್ಗಳಿಂದ ಇಳಿಯುವುದು-ಈ ಮೂರರಲ್ಲಿ ಯಾವುದೂ ಹೆಚ್ಚಲ್ಲದಂತೆ, ಕಡಿಮೆಯಲ್ಲದಂತೆ ಸಮನಾಗಿ ಆತನ ಎಲ್ಲಾ ಕ್ರಿಯೆಗಳನ್ನೂ ಹೊಗಳಲಾಯಿತು.
 
     ಅಷ್ಟರಲ್ಲಿ ಆತ ಸುಮಾರು ನಾಲ್ಕು ಸಲ ಸೈಕಲ್ ತಳ್ಳುತಳ್ಳುತ್ತಲೇ ಎರಡು ಕಾಲ್ಗಳನ್ನು ಹಾರಿಸಿ ಸೀಟಿನ ಮೇಲೆ ಕುಳಿತುಬಿಟ್ಟಿದ್ದ. ಈಗ ಎಲ್ಲರೂ ಚಪ್ಪಾಳೆ ತಟ್ಟಲು ಶುರುವಾಗಿ ಆತ ಎಗರೆಗರಿ ಕುಳಿತುಕೊಳ್ಳಲಾಗಿ, ಅರ್ಧ ಗಂಟೆಯಲ್ಲಿ ಸುಮಾರು ಇಪ್ಪತ್ತೆರೆಡು ಬಾರಿ ಹಾರಿ ಕುಳಿತ. ಸಿಳ್ಳೆ, ಸೀಟಿ, ಚಪ್ಪಾಳೆ, ಕ್ಯಾಟ್ ಕಾಲ್ಸ್-ವಿದ್ಯಾರ್ಥಿಗಳ ಈ ಎಲ್ಲಾ ಧ್ವನಿಗಳೂ ಆತನಿಗೆ ಮೆಚ್ಚುಗೆಯಾಗಿ ಕಂಡವು. ’ನಾ ನಿನ್ನ ಮರೆಯಲಾರೆ’ಯ ಅಣ್ಣಾವ್ರು ಕೊನೇ ಸೀನಿನಲ್ಲಿ ರೈಲಿನಲ್ಲಿ ಹೋಗುತ್ತಿರುವ ಲಕ್ಷ್ಮಿಯನ್ನು ಚೇಸ್ ಮಾಡಿದಂತೆ ಸ್ಟೈಲು ರಾಮಾಯ್ಣ ನಿಂದು ಎಂದ ಮಲ್ಲುಮೋಗನನ ಕಾಲಿಗೆ ಧನ್ಯತಾಭಾವದೊಂದಿಗೇ ಬೀಳುವುದೊಂದೇ ಬಾಕಿಯಿತ್ತು ರಾಮಾಯ್ಣನಿಗೆ. ಎಸ್ಸೆಸ್ಸೆಲ್ಸಿ ಫೇಲ್ ಆಗಿ ಪರಿಷತ್ತಿನಲ್ಲಿ ಪರಿಚಾರಕನಾಗಿ ಕೆಲಸಕ್ಕೆ ಸೇರಿದ್ದ ಈತನಿಗೆ ಇಷ್ಟೊಂದು ಹೊಗಳಿಗೆ ಇಷ್ಟು ಶೀಘ್ರವಾಗಿ ಎಂದೂ ಸಿಕ್ಕಿರಲಿಲ್ಲ. ಮುಂದಿನ ಸಾಲಿನಲ್ಲಿ ಕುಳಿತ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಿದ್ದರೆ ಹಿಂದಿನ ಸಾಲಿನವರು ಗ್ಯಾಲರಿಯ ಹಜಾರದಲ್ಲಿ ಹೊಟ್ಟೆ ಹಿಡಿದುಕೊಂಡು ಬಿದ್ದು ಬಿದ್ದು ನಗುತ್ತಿರುವುದು ಆತನಿಗೆ, ಆ ಜೋಶಿನಲ್ಲಿ, ಕಾಣಲಿಲ್ಲ. 
 
     ಲೇಯ್ ತಪರಾಕಿ. ತಲೆಗಿಲೆ ಕೆಟ್ಟಿದ್ಯೇನೋ ನಿಂಗೆ? ಅವ್ರು ಅಷ್ಟು ಸಲ ನಿನ್ನ ಕುರಿಯಾಗಿಸ್ತಿದ್ದಾರೆ, ನೀನು ಅದೇ ಅಳ್ಳಕ್ಕೆ ಐವತ್ಸಲ ಬಿದ್ದಿದ್ದೀಯಲ್ಲ, ತಲ್ಯಾಗೇನು ಜೇಡಿಮಣ್ಣು ತುಂಬ್ಕಂಡಿದ್ಯ ಎಂಗೆ? ಎಂದು ಗದರಿಕೊಂಡ ಆತನ ದೂರದ ಸಂಬಂಧದಲ್ಲಿ ದೊಡ್ಡಪ್ಪನಾಗಬೇಕಿದ್ದ ದೊಡ್ಡಯ್ಯ. ಆಗ ರಾಮಾಯ್ಣನಿಗೆ ಝಝೆನ್ ಬೌದ್ಧರಿಗಾಗುವಂತೆ ಅಚಾನಕ್ ಜ್ಞಾನೋದಯವಾಗಿ, ಈ ಎಲ್ಲಾ ಕೋತಿಚೇಷ್ಟೆಗೆ ಕಾರಣರಾದವರನ್ನು ಕಣ್ಣಂಚಿನಲ್ಲೇ ಹುಡುಕತೊಡಗಿದ. ಅನೇಕ, ಮಮಾ ಮತ್ತು ಬಿಡಾರು ಐವತ್ತಡಿ ದೂರದಲ್ಲಿದ್ದ ಕ್ಯಾಂಟೀನಿನ ಕಗ್ಗತ್ತಲ ನೆರಳುಬೆಳಕಿನಾಟದ ಮರೆಯಲ್ಲಿ ಬಿದ್ದು ಬಿದ್ದು ನಗುತ್ತಿದ್ದರು. ಕೆಲವೊಮ್ಮೆ ನಕ್ಕಿ ನಕ್ಕಿಯೂ ಬಿದ್ದರು. ಅವಮಾನವಾದಂತಾಗಿ ರಾಮಾಯ್ಣ ಮತ್ತೊಮ್ಮೆ ಒಂದೇ ಸಲಕ್ಕೆ ಎರಡೂ ಕಾಲ್ಗಳನ್ನು ಗಾಳಿಗೆ ಹಾರಿಸಿ ಸೀಟಿನ ಮೇಲೆಗರಿ ಕುಳಿತು ಪರಿಷತ್ತಿನ ಮರದ ಗೇಟನ್ನು ದಾಟಿ ಮುಖ್ಯ ರಸ್ತೆಗೆ ಸವಾರಿ ಮಾಡುತ್ತ ಮರೆಯಾಗಿಬಿಟ್ಟ! ಅದಕ್ಕೂ ಸಹ ಗೆಳೆಯರು ಸಿಳ್ಳೆ ಹೊಡೆದುಬಿಟ್ಟರು. ಎಲ್ಲರೂ ಗೇಟಿನ ಕಡೆಗೇ ನೋಡುತ್ತಿದ್ದರು. 
 
     ಅರ್ಧ ನಿಮಿಷದ ನಂತರ ನಿಧಾನವಾಗಿ ಸೈಕಲ್ ಚಕ್ರವೊಂದರ ಅರ್ಧ ಭಾಗವು ಕಾಂಪೌಂಡಿನ ಫ್ರೇಮಿನೊಳಕ್ಕೆ ಪ್ರವೇಶಿಸಿತು. ಕ್ರಮೇಣ ಅದು ಪೂರ್ಣ ಚಕ್ರವಾಯಿತು. ತದನಂತರ ಮನುಷ್ಯನ ಪಾದವೊಂದು ಕಂಡು, ಅದು ಎರಡಾಯಿತು. ಅದು ಹೊತ್ತುಕೊಂಡು ಬಂದ ದೇಹವೂ ಗೋಚರವಾಗಿ ಕ್ರಮೇಣ ಮುಂಡದ ಮೇಲಿನ ರುಂಡವೂ ಗೋಚರಿಸಿತು. ಅದನ್ನು ನೋಡಿದ್ದೇ ತಡ ಮತ್ತೆ ಸಹಪಾಠಿಗಳೆಲ್ಲ ಸಿಳ್ಳೆಚಪ್ಪಾಳೆ ತಟ್ಟತೊಡಗಿದರು. ಮತ್ತೂ ಸಂಕೋಚ, ಸಿಟ್ಟು, ಸೆಡವುಗಳೊಂದಿಗೆ ರಾಮಾಯ್ಣ ಅಲ್ಲಿಂದ ಸೈಕಲ್ಲಿನಲ್ಲಿಯೇ ಎಲ್ಲಿಗೋ ಓಟಕಿತ್ತ!
(೮೬)
 
 
     ರಾತ್ರಿ ಸುಮಾರು ಹನ್ನೊಂದೂವರೆವರೆಗೂ ಕಾದರೂ ರಾಮಾಯ್ಣ ಅಥವ ಶೇಮ್ ಶೇಮ್ ಅನ್ನಿಸಿಕೊಂಡ ರಾಮಾಯ್ಣ ಬರಲೇ ಇಲ್ಲ. ಕುತೂಹಲದಿಂದಿದ್ದವರ ಮುಖಗಳಲ್ಲಿ ಸ್ವಲ್ಪ ಗಾಭರಿ ಕಂಡುಬಂದಿತು. ಹತ್ತೊಂಬತ್ತು ವಯಸ್ಸಿನ ಬಚ್ಚಾ ರಾಮಾಯ್ಣ ಇಷ್ಟೊತ್ತಿನಲ್ಲಿ ಎಲ್ಲಿ ಹೋದ, ಆತನ ಸೈಕಲ್ಲಿಗೆ ಡೈನಮೋ ಕೂಡ ಇಲ್ಲ, ಪೋಲೀಸರು ಹಿಡಿದರೆ ಕೊಡಲು ದಂಡದ ಮೊತ್ತವಾದ ಹತ್ತು ರೂಪಾಯಿ ಕೂಡ ಆತನ ಬಳಿ ಇಲ್ಲ, ರಾತ್ರಿಯೆಲ್ಲಾ ಆತ ಹೊರಗಿರುವವನೂ ಅಲ್ಲ. ಅಷ್ಟರಲ್ಲಿ ಹೊಚ್ಚ ಹೊಸ ಆಟೋವೊಂದು ಪರಿಷತ್ತಿನ ಕಾಂಪೌಂಡನ್ನು ನಾಟಕೀಯವಾಗಿ ಪ್ರವೇಶಿಸಿತು. ಅದರೊಳಗಿನಿಂದ ಇಳಿದವ ರಾಮಾಯ್ಣನ ಸ್ನೇಹಿತ. ಹೊಸ ಆಟೋವನ್ನು ನೋಡಿದ ಕೂಡಲೆ ವೀರಾ ಮತ್ತು ಮಮಾನಿಗೆ ಅದನ್ನು ಸವಾರಿ ಮಾಡಬೇಕೆಂಬ ಆಸೆ ಹುಟ್ಟಿಬಿಟ್ಟಿತು. ಸವಾರಿ ಎಂದರೆ ಡ್ರೈವ್ ಮಾಡಬೇಕೆಂಬ ಸವಾರಿ, ಗಿರಾಕಿಗಳಾಗಿ ಅಲ್ಲ. ರವಿಚಂದ್ರನ ಪ್ರೇಮಲೋಕದ ಮೊಟಾರುಬೈಕನ್ನು ಓಡಿಸಬೇಕೆಂಬ ಆಸೆಯನ್ನು ಹೀಗಾದರೂ ತೀರಿಸಿಕೊಳ್ಳಬೇಕೆಂಬ ಆಸೆ ಮಮಾನದಾದರೆ, ಚಾರ್ವಾಕಿ ಕೈಹಿಡಿದ ಸ್ವಲ್ಪ ಹೊತ್ತಿನಲ್ಲೇ ಕೈಕೊಟ್ಟ ಕ್ರಿಯೆಗೆ ಸೇಡು ತೀರಿಸಿಕೊಳ್ಳುವಂತೆ ಆಟೋ ಓಡಿಸಬೇಕೆಂಬ ಆಸೆ ವೀರಾನದ್ದು!
 
     ಅಷ್ಟರಲ್ಲಿ ರಾಮಾಯ್ಣ ಎಲ್ಲೆಲ್ಲೋ ಅಲೆದಾಡಿ ಅಲ್ಲೆಲ್ಲೆಡೆಯಿಂದ ಪರಿಷತ್ತಿನೊಳಕ್ಕೆ ಪ್ರವೇಶಿಸಿ, ಗೆಳೆಯನನ್ನು ವಿಚಾರಿಸಿಕೊಳ್ಳತೊಡಗಿದ. ಆಟೋವನ್ನು ಗ್ಯಾಲರಿಯ ಸಮೀಪ ಬಿಟ್ಟು ಇಬ್ಬರೂ ಗಣಪತಿ ದೇವಾಲಯದ ಪಕ್ಕದ ಕಲ್ಲುಹಾಸಿನ ಮೇಲೆ ಕುಳಿತು ಮಾತನಾಡತೊಡಗಿದರು. ಮಮಾ ಆಟೋ ಹತ್ತಿ ಡ್ರೈವರ್ ಸೀಟಿನಲ್ಲಿ ಕುಳಿತೇ ಬಿಟ್ಟ. ಅದನ್ನು ಸ್ಟಾರ್ಟ್ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಅದರಲ್ಲಿ ಕೀ ಇರಲಿಲ್ಲ. ವೀರಾನನ್ನು ಕರೆದು ಲೋ, ಸ್ವಲ್ಪ ಮುಂದಕ್ಕೆ ದೂಡು, ಶುರುವಾಗಬಹುದು ಎಂದ. ವೀರಾ ಜೋರಾಗಿ ತಳ್ಳಲು ಅದು ಶುರುವಾಗಿಬಿಟ್ಟಿತು, ಕುದುರೆ ಕೆನೆದು ಗ್ಯಾಲಪ್ ಮಾಡಿದಂತೆ ಆಟೋ ಸಹ ಕೆನೆದು ಮುಂದೆ ಸಾಗಿ ಆಮೇಲೆ ಸರಾಗವಾಗಿ ಹೋಯಿತು, ಮಾಮೂಲು ಆಟೋಗಳು ಸಾಗುವಂತೆ. ಗೇಟಿನವರೆಗೂ ಹೋದಾತ ತಿರುಗಿಸಿಕೊಂಡು ಮೊದಲಿದ್ದ ಜಾಗಕ್ಕೆ ಬಂದಾಗ ಅದು ನಿಂತುಬಿಟ್ಟುತು. ಅದನ್ನು ನೋಡಿದ್ದ ರಾಮಾಯ್ಣನ ಗೆಳೆಯ ’ಹೋಗ್ಲಿ ಬಿಡು ಒಂದು ರವಂಡು’ ಎಂದಾತನಿಗೆ ಹೇಳಿ ಸುಮ್ಮನಿದ್ದ. ಆಟೋ ಕೀಯನ್ನು ತನ್ನ ಜೇಬಿನಲ್ಲಿರಿಸಿಕೊಂಡು ಬಂದಿರುವುದನ್ನು ಮರೆತುಬಿಟ್ಟಿದ್ದ. ವೀರಾ ಮತ್ತೆ ತಳ್ಳು ಎಂದು ಮಮಾ ಕೂಗಿದಾಗ ವೀರಾ ಇನ್ನೂ ರಭಸವಾಗಿ ತಳ್ಳತೊಡಗಿದ. ಈ ಸಲ ಆಟೋ ಆರಂಭವಾದ ರಭಸಕ್ಕೆ, ಮಮಾ ಮೊದಲ ಗೇರ್ ಹಾಕಿಬಿಟ್ಟ, ಅದು ಆಯತಪ್ಪಿ ಪರಿಷತ್ತಿನೊಳಗಿನ ರಸ್ತೆಯ ಮೇಲೆ ಹೋಗುವ ಬದಲಿಗೆ-- ಮತ್ತೆ ಮಾಮೂಲು ಆಟೋ ಪ್ರಯಾಣದಂತೆಯೇ--ಹೊರಕ್ಕೆ ಹೋಗುವ ರಸ್ತೆಯ ಬಲಬದಿಗಿದ್ದ ಹೂಕುಂಡಗಳ ಮೇಲೆ ಹರಿದು, ಹಳ್ಳಕ್ಕೆ ಇಳಿಯುವುದರ ಮೂಲಕ ಹಳ್ಳ ಹತ್ತಿ, ಮತ್ತೆ ಹಳ್ಳವನ್ನು ಅಕ್ಷರಶಃ ಹತ್ತಿ, ಸೀದ ಪರಿಷತ್ತಿನ ಮುಖ್ಯ ಕಟ್ಟಡದ ಎದುರಿಗೆ ಹಳ್ಳದ ಬಳಿ ಇದ್ದ ಕ್ಯಾಂಟೀನಿನ ಬಳಿಗೆ ಓಡತೊಡಗಿತು. ಏಯ್, ವೀರಾ, ಹಿಡಿದು ನಿಲ್ಸೋ ಎಂಬ ಧ್ವನಿ ಕೇಳಿ ತಳ್ಳುತ್ತಿದ್ದ ವೀರಾ ಆಟೋದ ಹಿಂದಿನ ಭಾಗದ ಮಡ್‌ಗಾರ್ಡನ್ನು ಬಿಟ್ಟು ಯಾರು ಹಾಗೆ ಹೇಳುತ್ತಿರುವವರು ಎಂದು ಸುತ್ತೆಲ್ಲಾ ನೋಡತೊಡಗಿದ. ಅದರೊಳಗಿದ್ದ ಮಮಾನೆ ಹಾಗೆ ಹೇಳಿದ್ದು ಎಂಬ ಅರಿವು ಬರುವಷ್ಟರಲ್ಲಿ ಪುಷ್ಪಕವಿಮಾನ ಹಾರಿ ಕ್ಯಾಂಟೀನಿದ್ದ ಹಳ್ಳದ ಸಮೀಪ ಸಾಗುತ್ತಿತ್ತು. ಸಮತಟ್ಟಾದ ನೆಲದ ಇಪ್ಪತ್ತಡಿ ದಾಟಿದ್ದ ಆಟೋ, ಅದರಾಚೆಗೆ ಐದಡಿ ಘಟ್ಟದ ಕೆಳ ಸ್ಥರದಲ್ಲಿದ್ದ ಕ್ಯಾಂಟೀನಿನ ಕಡೆ ಮುಖ ಮಾಡಿತ್ತು. ಬಿದ್ದೆನೋ ಕೆಟ್ಟೆನೋ ಎಂದು ವೀರಾ ಆಟೋ ಕಡೆ ಓಡತೊಡಗಿದ. ಎಲ್ಲಾ ಸಿನೆಮಗಳ ಕ್ಲೈಮಾಕ್ಸುಗಳಲ್ಲಾಗುವಂತೆ ಇಲ್ಲೂ ಸಹ ಆಟೋದ ಮುಂದಿನ ಚಕ್ರವು ಮೇಲಿನ ಘಟ್ಟ ದಾಟಿ ಕೆಳಗಿನ ಘಟ್ಟದ ಇಳಿಜಾರಿನಲ್ಲಿ ನಿಂತೇ ತಿರುಗುತ್ತಿತ್ತು, ಹಿಂದಿನ ಎರಡು ಚಕ್ರಗಳು ಮೇಲಿನ ಘಟ್ಟವನ್ನು ಅಷ್ಟೇನೋ ಇಷ್ಟಪಡದ ಕಾರಣದಿಂದಲೋ ಏನೋ, ಆಟೋದ ಪೃಷ್ಟವನ್ನೇ ನೆಲದಿಂದ ನಾಲ್ಕಡಿ ಮೇಲಕ್ಕೆತ್ತಿಬಿಟ್ಟಿತ್ತು. ಲೀನಿಂಗ್ ಅಥವ ವಾಲಿಂಗ್ ಟವರ್ ಆಫ್ ಪೀಸಕ್ಕೆ ಪರ್ಯಾಯವಾಗಿ ಬೆಂಗಳೂರಿನ ಸಂಚಾರಿ ನಿಗಮದವರು ಸ್ಮಾರಕವೊಂದನ್ನು ಕಟ್ಟಲು ಹೇಳಿ ಮಾಡಿಸಿದ ದೃಶ್ಯವದಾಗಿತ್ತು. ಕಂಬದ ತುದಿಯಲ್ಲೊಂದು ಐಸಾ ಪೈಸಾ ಆಡುತ್ತಿರುವ ಆಟೋರಿಕ್ಷಾ. ಅಥವ ಕಂಬದ ತುದಿಯಲ್ಲೊಂದು ಐಸಾ ಪೈಸಾ ಆಡುತ್ತಿರುವ, ಎಂಟ್ರೊಪಿಗೆ ಬದ್ಧವಾಗಿರುವ ಆಟೋರಿಕ್ಷಾ. ಎಂಟ್ರೋಪಿ ಎಂದರೆ ವಿನಾಶದೆಡೆ ಕಾಲದ ಏಕಮುಖಿ ಪಯಣ.  
 
     ಮಮಾ ಈಚೆಗೆ ಧುಮುಕು ಎಂದು ಕಿರುಚತೊಡಗಿದ ವೀರಾ. ನೋಡುತ್ತಿದ್ದವರೆಲ್ಲಾ ಇದ್ದಲ್ಲಿಂದಲೇ ಅದರೆಡೆ, ಆಟೋ ಅಥವ ಮಮಾನನ್ನು ರಕ್ಷಿಸಲು ಓಡತೊಡಗಿದರು ಮಾನಸಿಕವಾಗಿ. ಈಗಲೋ ಆಗಲೋ ರಿಕ್ಷಾ ಕೆಳಗಿನ ಘಟ್ಟಕ್ಕೆ ಇಳಿಯುವ ಸಾಧ್ಯತೆ ಇತ್ತು. ನ್ಯೂಟ್ರಲ್ಲಿನಲ್ಲೇ ಎಕ್ಸಲೇಟರ್ ನೀಡುತ್ತಿದ್ದ ಮಮಾ, ಹಾಗೇಕೆ ಮಾಡಿದ ಎಂದು ಇಂದಿಗೂ ವಿವರಿಸಲಾರದವನಾಗಿದ್ದಾನೆ. ಸ್ಕೂಟರನ್ನು ರಾಕೆಟ್ಟಿನಂತೆ ಓಡಿಸುವ ಪರಿಣಿತಿಯ ವೀರಾ, ಮಮಾ ಎಕ್ಸಲೇಟರ್ ಕಡಿಮೆ ಮಾಡು ಎಂದು ಕೂಗುತ್ತ ಆಟೋಕ್ಕೆ ಐದಡಿ ಸಮೀಪ ಬಂದುಬಿಟ್ಟಿದ್ದ. ಅಯ್ತು, ಇಗೋ, ಕಡಿಮೆ ಮಾಡಿದೆ ಎಂದ ಮಮಾ ಧಡಕ್ಕನೆ ಅದರಿಂದ ಹೊರಕ್ಕೆ ಜಂಪ್ ಮಾಡಿ, ಮೇಲಿನ ಘಟ್ಟದ ನೆಲದ ಮೇಲೇ ಬಿದ್ದ. ಆಕ್ಸಲೇಟರ್ ಕಡಿಮೆ ಮಾಡುವ ಬದಲಿಗೆ ಹ್ಯಾಂಡಲ್ಲನ್ನು ಮೊದಲ ಗೇರಿಗೆ ಹಾಕಿ, ಅದು ಇನ್ನೂ ಮುಂದಕ್ಕೆ ಜಗ್ಗತೊಡಗಿದಾಗ ಹೊರಕ್ಕೆ ನೆಗೆದುಕೊಂಡುಬಿಟ್ಟಿದ್ದ ಮಮಾ. ರಿಕ್ಷಾ ಘಟ್ಟ ಇಳಿದು ಸೀದಾ ಕ್ಯಾಂಟೀನಿನ ಬಾಗಿಲಿಗೆ ಮುತ್ತಿಟ್ಟದ್ದು ಸ್ಲೋಮೋಷನ್ನಿನಲ್ಲಾದರೆ, ವೀರಾ ಓಡಿಬಂದು ಅದರ ಮೇಲೆ ಹಾರಿದ್ದು ಮತ್ತು ಮಮಾ ಮೇಲಿನ ಘಟ್ಟದಲ್ಲಿ ಪಲ್ಟಿ ಹೊಡೆದದ್ದು ಫಾಸ್ಟ್ ಮೋಷನ್ನಿನಲ್ಲಿ-’ನಾಗರಹಾವು’ ಸಿನೆಮದ ’ಬಾರೆ ಬಾರೆ ಚಂದದ ಚೆಲುವಿನ ತಾರೆಯಲ್ಲಾದಂತೆ, ಎರಡು ಮೋಷನ್ನುಗಳೂ ಒಂದೇ ಫ್ರೇಮಿನಲ್ಲಿ ಒಂದಾಗಿದ್ದವು!
 
     ಕ್ಯಾಂಟೀನಿನ ಗೋಡೆಯ ತಡೆಯಾಜ್ಞೆಯ ಆದೇಶವನ್ನು ಪಾಲಿಸುತ್ತ ನಿಂತ ಹೊಚ್ಚಹೊಸ ಆಟೋರಿಕ್ಷಾದ ಫಳಫಳನೆ ಹೊಳೆವ ಕನ್ನಡಿಯಲ್ಲಿ ರಾಮಾಯ್ಣ ಮತ್ತು ಆತನ ಹೊಚ್ಚ ಹೊಸ ವಾಹನದೊಡೆಯ ಹಾಗೂ ಹಳೆಯ ಗೆಳೆಯ’ ಓಡಿಬರುತ್ತಿದ್ದುದರ ಪ್ರತಿಫಲನವನ್ನು ಯಾರೂ ನೋಡದಿದ್ದರೂ ಪ್ರಸಾರವಾಗುತ್ತಿತ್ತು. ಧೂಳು ಕೊಡವಿಕೊಂಡು ಮೇಲೆದ್ದ ಮಮಾ, ಅಬ್ಬಾ ಬಚಾವು ಎಂದ. ರಾಮಾಯ್ಣನ ಗೆಳೆಯ, ’ಏನ್ರೀ ಗಾಡೀದು ಮುಖಾಮೂತಿಯೆಲ್ಲಾ ಜಜ್ಜೋಗಿದೆ, ಏನ್ರೀ ಬಚಾವಾಗಿದ್ದು! ಎಂದು ಕಿರುಚಾಡತೊಡಗಿದ. ಅಯ್ಯೋ ಅಂಗ್ಯಾಕೇಳ್ತೀರ, ಬಚಾವಾಗಿದ್ದು ನಾನು. ಗಾಡಿ ಓದ್ರೆ ಇನ್ನೊಂದ್ ತರ್ಬೋದು, ಬಾಡಿ ತರಕಾಗತ್ತ, ಹೇಳಿ, ಎಂದುಬಿಟ್ಟ. ಮುಖಮುಚ್ಚಿಕೊಂಡು ಮುಸಿಮುಸಿ ನಗುತ್ತಿದ್ದ ವೀರಾ, ನಗು ತಡೆಯಲಾಗದೆ ಮೇಲಿನ ಘಟ್ಟದ ಲಾನಿನ ಮೇಲೆಯೇ ಅಂಗಾತ ಮಲಗಿಬಿಟ್ಟ. 
 
     ಅಲ್ರೀ, ನಮ್ ಕಂಡಕ್ಟರ್ರು ಸರಿಯಾಗಿ ಸೂಚನೆಗಳನ್ನ ಕೊಡಲಿಲ್ಲ ಎಂದು ಮಮಾ ವೀರಾನ ಮೇಲೆ ಎತ್ತಾಕಿಬಿಟ್ಟ. ನೀನು ಹಿಡಿಯೋ ಅಂದಾಗ ನಾನು ಆಟೋದೊಳಗಿಂದ ಮಮಾ ಕೂಗುತ್ತಿರುವುದು ಅಂತ ಹೇಳಬೇಕಿತ್ತಲ್ಲ ಗುರುವೆ ಎಂದು ಆರೋಪವೆಂಬ ಚೆಂಡನ್ನು ಮತ್ತೆ ಮಮಾನೆಡೆಗೇ ಎಸೆದುಬಿಟ್ಟ ವೀರಾ. ವೀರಾ, ಬಾಡಿ ಮುಖ್ಯಾನಾ ಗಾಡಿ ಮುಖ್ಯಾನ ನೀನೇ ಹೇಳೋ ಎಂದ ಮಮಾ. ಗಾಡಿ ಕ್ಯಾಂಟೀನಿನ ಒಳಕ್ಕೆ ಪ್ರವೇಶಿಸಿಲ್ಲವಲ್ಲ, ಸಧ್ಯ. ಅಂಗೇನಾದ್ರೂ ಆಗಿದ್ದಿದ್ರೆ ಚಾರ್ವಾಕೀನೇ ಬರ್ಬೇಕಾಗಿತ್ತು ಅದನ್ನ ಹೊರಕ್ಕೆ ತರೋಕೆ ಎಂದು ತನ್ನ ಹಿಂದಿನ ಅನುಭವಗಳನ್ನು ಮೆಲುಕು ಹಾಕತೊಡಗಿದ.     
 
(೮೭)
 
     ರಾತ್ರಿ ಸುಮಾರು ಹನ್ನೆರೆಡೂವರೆಯಾಗಿತ್ತು. ಹೊಸಾ ಆಟೋರಿಕ್ಷಾದ ಹಳೆಯ ಗೆಳೆಯ ಬಿಡುವುದಿಲ್ಲ, ಮಮಾ ಕೊಡುವುದಿಲ್ಲ ಎಂಬಂತೆ ವಾದವಿವಾದಗಳು ನಡೆಯುತ್ತಿದ್ದವು. 
ಗಾಡಿ ರಿಪೇರಿ ಮಾಡಿಸಿಕೊಡ್ರೀ ಎಂದ ರಾಮಾಯ್ಣನ ಚೆಡ್ಡಿದೋಸ್ತ.
ಯೋವ್ ಗಾಡೀಲೇ ಪ್ರಾಬ್ಲಂ ಇದೆ ಕಣಯ್ಯ ಎಂದ ಮಮಾ, ನಗುತ್ತಲೇ. ಜೇಬಿನಲ್ಲಿ ಟೀ ಕುಡಿಯಲೂ ಕಾಸಿಲ್ಲದಿದ್ದ ಕಾಲಕ್ಕೆ ತನ್ನಿಂದ ಅತ ಏನು (ಕಾಸು) ತಾನೇ ಕಿತ್ತುಕೊಳ್ಳಬಲ್ಲ ಎಂಬುದೇ ಆತನ ವಿಶ್ವಾಸ ಅವನ ಉತ್ತರದಲ್ಲಿ ಅಡಕವಾಗಿತ್ತು.
ಅದೆಲ್ಲಾ ಗೊತ್ತಿಲ್ಲ. ಗಾಡಿ ಇಲ್ಲೇ ಬಿಟ್ಟೋಗ್ತೀನಿ. ರಿಪೇರಿ ಮಾಡಿಸಿಕೊಡಿ
ಓಗು ಓಗು. ನಾಳೆ ಮೇಷ್ಟ್ರು ಬರ್ತಲೇ ಅದನ್ನು ಹೈಗ್ರೌಂಡ್ ಪೋಲೀಸ್ ಸ್ಟೇಷನ್ನಿಗೆ ಕಳಿಸ್ತೀವಿ, ಪೋಲಿಸ್ ಕಂಪ್ಲೇಂಟ್ ಮಾಡ್ತೀವಿ. ಸ್ಟೇಷನ್ನಿನಲ್ಲೇ ಇರುತ್ತೆ ಆಟೊ, ಕೇಸ್ ಮುಗಿಯೋ ತನಕ. ಒಂದು ದಿನ ರಾತ್ರಿ ಗಾಡಿ ಸ್ಟೇಷನ್ನಿನ ಕಾಂಪೌಂಡಿನಲ್ಲಿ ಇರೋದು ಅಂದ್ರೆ ಅರ್ಥ ಗೊತ್ತಾ ನಿಂಗೆ? ಎಂದರು ಮಮಾ, ಬಿಡಾ ಮುಂತಾದವರು ಒಕ್ಕೋರಲಿನಿಂದ.
ಏನು? ಎಂದು ಮುಗ್ಧವಾಗಿ ಕೇಳಿದ್ದ ಮುಖಾಮೂತಿ ನುಜ್ಜುಗುಜ್ಜಾಗಿದ್ದ ಹೊಸ ಗಾಡಿಯ ಒಡೆಯ ಮತ್ತು ರಾಮಾಯ್ಣನ ಚೆಡ್ಡಿ ದೋಸ್ತ್.
ಪರಿಷತ್ತಿನಲ್ಲಿ  ಒಂದು ರಾತ್ರಿ ಇರುವುದಕ್ಕಿಂತಲೂ ಖರಾಬು. ಅದ್ರ ಇಂಜಿನ್ ಎಲ್ಲಾ ತೆಗ್ದು ಹೊಸ ಗಾಡಿಗೆ ಹಾಕ್ಕೊಂಡು ಪೋಲೀಸ್ನೋರೇ ಓಡಿಸ್ತಾರೆ. ಗಾಡಿಯ ಬಾಡಿಯ ಸ್ಪೇರ್ ಪಾರ್ಟ್ಸ್‌ಗಳನ್ನು ಶಿವಾಜಿನಗರ, ಶ್ರೀರಾಂಪುರ, ಕಾಕ್ಸ್ ಟೌನ್ ಮತ್ತು ಬೂಬ್ಸಂದ್ರದಲ್ಲಿ ಗುಜರಿಗಳಿಗೆ ಮಾರಿಬಿಡ್ತಾರೆ, ಎಂದ ಮಮಾ.
ಔದೇನೋ ಎಂಬಂತೆ ಹಳೆಯ ಗೆಳೆಯ ತನ್ನ ಗೆಳೆಯನನ್ನು ಕೇಳಿದ್ದ.
’ಔದು ಕನಾ. ಮಿನಿಟ್ರುಗಳೆಲ್ಲಾ ಇಲ್ಲಿಗೆ ಬತ್ತಾ ಇರ್ತಾರೆ, ನಮ್ ಮೇಟ್ರಿಗೆ ಪ್ರೆಂಡ್ಸು ಅವ್ರೆಲ್ಲಾ. ಸುಮ್ಕೆ ಇದ್ದಂಗೇ ಎತ್ಕಂಡೋ ಬಿಟ್ಕಂಡೋ ತಗಂಡೋಗ್ಬಿಡು ಕಂಜಾ. ಒನ್ನೊಂದಪಾ ಮೇಟ್ರು ಮದ್ಯರಾತ್ರೀಲು ಇಲ್ಲಿಗ್ ಬಂದ್ವಿಡ್ತಾರೆ, ಎಂದು ರಾಮಾಯ್ಣ ಆತನನ್ನು ಸಮಾಧಾನ ಮಾಡಲು ಸುಮಾರು ಸಮಯ ತೆಗೆದುಕೊಂಡ. ಎಲ್ಲರೂ ಹೊಸದಾದ, ಹೊಸದಾಗಿ ಮುಖಭಂಗಕ್ಕೊಳಗಾಗಿದ್ದ ಆಟೋವನ್ನು ಕೆಳಗಿನ ಘಟ್ಟದಿಂದ ಮೇಲಿನ ಘಟ್ಟಕ್ಕೆ ತಂದು, ತಳ್ಳಿ ತಳ್ಳಿ ಹಾಗೂ ಹೀಗೂ ಅದನ್ನು ಸ್ಟಾರ್ಟ್ ಮಾಡಿಸಿ ಕಳಿಸಿಕೊಟ್ಟಿದ್ದರು. ಆದರೆ ಅದು ಹೋಗುವಾಗ ಮತ್ತೆ ಸೊಟ್ಟಕ್ಕೆ ಹೋಗತೊಡಗಿ, ಗೇಟಿನ ಬಳಿ ನಿಂತುಕೊಂಡಿದು, ಗಾಡಿ ಸ್ಟಾರ್ಟಿನಲ್ಲಿದ್ದರೂ ಸಹ. ಮಮಾ ಓಡಿಹೋಗಿ ಆತನಿಗೆ ಏನೋ ಹೇಳಿ, ಆಟೋವನ್ನು ಒಂದು ನಾಲ್ಕಡಿ ಹಿಂದಕ್ಕೆ ಎಳೆದು ಮುಂದಕ್ಕೆ ದೂಡಿದ. ಆಗ ನೇರವಾಗಿ ಗೇಟಿನಿಂದ ಹೊರಕ್ಕೋದ ಗಾಡಿ ಬಲಕ್ಕೆ ತಿರುಗಿ ಶಿವಾನಂದ ಸರ್ಕಲ್ಲಿನ ಕಡೆ ಇಮರಿಹೋಗುವ ಸದ್ದಿನೊಂದಿಗೆ ಕಣ್ಣಿಂದಲ್ಲದೆ, ಶ್ರವ್ಯದಿಂದಲೂ ಮರೆಯಾಯಿತು. ಆದರೆ ಮನಸ್ಸಿನಲ್ಲೇ ಉಳಿದುಹೋಯಿತು. 
ಏನ್ ಮಮಾ ಸಮಾಚಾರ್. ಏನಾಗಿತ್ತು ಎಂದು ಎಲ್ಲರೂ ಮಮಾನನ್ನು ವಿಚಾರಿಸಿದರು.
ಏನಿಲ್ಲ. ಗಾಡಿ ಸೊಟ್ಟಕ್ಕೋಗ್ತಿತ್ತಲ್ಲ. ಅಲ್ಲಿ ಹೋಗಿ ನೊಡಿದ್ರೆ ಹ್ಯಾಂಡಲ್ಲು ಹದಿನೈದು ಡಿಗ್ರಿ ಎಡಕ್ಕೆ ತಿರುಗಿಬಿಟ್ಟಿತ್ತು. ಅದನ್ನ ಅವ್ನು ಸೊಟ್ಟ ಅಂದುಕೊಂಡು ನೆಟ್ಟಗೆ ಮಾಡಿದಾಗ ಗಾಡಿ ಬಲಕ್ಕೆ ಹದಿನೈದು ಡಿಗ್ರಿ ಹೋಗುತ್ತಿತ್ತು. ’ನೇರವಾಗಿ ಓಡಿಸಬೇಕಿದ್ರೆ ಹ್ಯಾಂಡ್ಲನ್ನ ಹದಿನೈದು ಡಿಗ್ರಿ ಎಡಕ್ಕೆ ಇಡ್ಕ, ನೇರ ಓಯ್ತದೆ ಮತ್ತು ಶಂಕರ್‌ನಾಗ್ ಆಟೋನ ಅಂಬ್ರೀಸಣ್ಣ ಓಡಿಸ್ದಂಗಿರ್ತದೆ’ ಅಂತ ಹೇಳಿದ್ದೆ ತಡ ಆ ಬಡ್ಡೇತದ್ದು ಖುಸಿಯಾಗಿ ಓಡಿಸ್ಕಂಡೊಯ್ತು ಬಿಡು ಕನಾ ಎಂದು ಮೆಳ್ಳಗೆ ರಾಮಾಯ್ಣನ ಮುಖ ನೋಡಿದ. ಆತನಿಗೆ ಕೈಬಿಟ್ಟು ಹೋದ ತನ್ನ ಕೆಲಸ ಉಳಿಸಿದ ಪರಮಾತ್ಮನಂತೆ ಕಾಣುತ್ತಿದ್ದ ಮಮಾ!// 
 
 
 
 
 
 
 
 
 
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):