ನೆನಪಿನ ಚಿತ್ರಕಲಾ ಶಾಲೆ: ಭಾಗ ೨೭ - ಒಂದು ವಿಕ್ಷಿಪ್ತ ಪ್ರೇಮಕಥೆ-೨

0

 (೭೮)

ಸುದೀರ್ಘ ಗುಣವುಳ್ಳ ಪ್ರೇಮಕಥೆಯನ್ನೇ ದಾಂಪತ್ಯವೆನ್ನಬಹುದು. ಚಾರ್ವಾಕಿಯನ್ನು ಕುರಿತಾಗಿ ವೀರಾನಿಗೆ ತನ್ನ ಆಕರ್ಷಣೆ ಎಂತಹದ್ದು ಎಂದು ಅರ್ಥಮಾಡಿಕೊಳ್ಳದಾದ. ಆಕೆಯನ್ನು ಕಂಡಾಗ ಆತನ ಮನಸ್ಸು, ಆತ ತೆಗೆವ ಫೋಟೋಗಳಂತೆ--ಫ್ರೀಜ್ ಆಗಿಬಿಡುತ್ತಿತ್ತು. ಶ್ರುತಿ ಮೆಹತಾ, ಒನಾಮಿ ಕುಟ್ಟಿ ಅಡಿಯಾರ್, ಅನೇಖ-ಈ ಮೂವರೂ ಸಹ ಅದನ್ನು ’ಪ್ರೀತಿ’ ಎನ್ನುವ ಸರಳ ಅರ್ಥಕ್ಕೆ ಇಳಿಸಿಬಿಡಬಾರದು ಎಂದು ವೀರಾನನ್ನು ತಾತ್ವಿಕ ಅಸ್ತ್ರಗಳಿಂದ ಹೆದರಿಸಿದ್ದರು. ವಿಚಿತ್ರವೆಂದರೆ ಬೇರೆಯವರೊಂದಿಗಿರಲಿ, ತನ್ನೊಂದಿಗೇ ತಾನು ಸಂವಹಿಸಿಕೊಳ್ಳುವಾಗಲೂ ಸಹ ವೀರಾ ಆ ಪದವನ್ನು ಬಳಸಿರಲಿಲ್ಲ. ಅಷ್ಟರಮಟ್ಟಿಗೆ ಆತ ಪ್ರೌಢನಾಗಿದ್ದ. ಬದಲಿಗೆ, ಅರ್ಧ ತಮಾಷೆಗೋ (ಅಂದರೆ ಇನ್ನರ್ಧ ಗಂಭೀರವಾಗಿ ಎಂದರ್ಥ) ಎಂಬಂತೆ ’ಗುರುತ್ವಾಕರ್ಷಣೆ’ ಎಂದದನ್ನು ವರ್ಗೀಕರಿಸಿಬಿಟ್ಟಿದ್ದ. ಎಲ್ಲರನ್ನೂ ಲೇವಡಿ ಮಾಡುವವರಿಗೆ ತಮ್ಮ ಬದುಕಿನ ಬಗೆಗಿನ ಗಂಭೀರ ವಿಷಯಗಳನ್ನು ಕುರಿತಂತೆಯೂ ಒಂದು ಲೇವಡಿಯ ಕೋನ ಲಭ್ಯವಿದ್ದು, ಅದರಿಂದಾಗಿಯೇ ಆ ಗಾಂಭೀರ್ಯವನ್ನೇ ಊನಗೊಳಿಸುವ ಮೂಲಕ ಆತ್ಮವಿಶ್ವಾಸಕ್ಕೆ ಧಕ್ಕೆ ತಂದುಕೊಳ್ಳಬಲ್ಲರೇನೋ.

 
 ಹಾಗಿದ್ದಾಗ ಒಮ್ಮೆ ಅಪರೂಪಕ್ಕೆ ವೀರಾನಿಗೆ ಚಾರ್ವಾಕಿಯ ಸಾಮೀಪ್ಯ ದೊರಕಿಬಿಟ್ಟಿತು. ಅದೂ ತಾನು ಆಕೆಯೊಂದಿಗೆ ಏಕಾಂತದಲ್ಲಿ ಎಷ್ಟು ಸಮಯ ಇರಲು ಬಯಸುವೆ ಎಂದಾತ ಸರ್ವಶಕ್ತನನ್ನು ಬೇಡಿಕೊಳ್ಳಬಹುದಾಗಿತ್ತೋ ಅದಕ್ಕಿಂತಲೂ ಹತ್ತಾರು ಪಟ್ಟು ಹೆಚ್ಚು ಕಾಲ, ಏಕಾಂತಕ್ಕೆ ಸುಸೂತ್ರವಾದ ಸಂದರ್ಭದಲ್ಲಿ, ಯಾವುದೇ ಅಡೆತಡೆಯಿಲ್ಲದ ಕಡೆ, ಕಡುಗತ್ತಲಲ್ಲಿ ಆಕೆಯ ಸಾಮೀಪ್ಯ ಸಾಧ್ಯವಾಗಿಬಿಟ್ಟಿತ್ತು. ತನ್ನ ಬದುಕಿನಲ್ಲಿ ಯಾರಿಗಾದರೂ ಅವರ ಬಗ್ಗೆ ತಮಗೆಷ್ಟು ತೀವ್ರವಾದ ಗುರುತ್ವವಿದೆ ಎಂದು ಯಾರಾದರೂ ತಿಳಿಸಬೇಕಿದ್ದಲ್ಲಿ ಇದಕ್ಕಿಂತ ಸೂಕ್ತ ಸಂದರ್ಭ ಸಾಧ್ಯವಾಗಲಾರದು ಎಂಬುದನ್ನು ಅನೇಖನೇ ಒಪ್ಪುವಂತಹ ಸಂದರ್ಭವದಾಗಿತ್ತು. 
(೭೯)
ಬೆಂಗಳೂರಿನ ಎಂ.ಜಿ.ರಸ್ತೆಯ ಪ್ಲಾಝಾ ಥಿಯೇಟರಿನಲ್ಲಿ ಸಿನೆಮ ನೋಡುತ್ತ ಕುಳಿತಿದ್ದಳು ಚಾರ್ವಾಕಿ. ಸಿನೆಮ: ನೈಟ್ ಶ್ಯಾಮಲನ್ ನಿರ್ದೇಶಿಸಿದ್ದ ’ಸಿಕ್ಸ್ತ್ ಸೆನ್ಸ್’. ತಡವಾಗಿ ಆಕೆಯ ಪಕ್ಕಕ್ಕೆ ಆಕಸ್ಮಿಕವಾಗಿ ಬಂದು ಕುಳಿತ ವೀರಾ ತನ್ನ ಪಕ್ಕದಲ್ಲಿ ಯಾರಿದ್ದಾರೆಂಬುದನ್ನು ಗಮನಿಸಿದ ನಂತರ ಇನ್ನೂ ಈ ಭೂಮಿಯ ಮೇಲೆ ಇಲ್ಲದವನಂತಾಗಿ ಹೋದ. ಆಕಸ್ಮಿಕವಾಗಿ ಒಬ್ಬನೇ ಸಿನೆಮಾಕ್ಕೆ ಸ್ವಲ್ಪ ತಡವಾಗಿ ಹೋದಾಗ, ಸೀಟ್ ನಂಬರಿನ ಪ್ರಕಾರ ಕುಳಿತು, ಕತ್ತಲಿನಲ್ಲಿ ಬಲಕ್ಕಿದ್ದ ವ್ಯಕ್ತಿಯನ್ನು ನೋಡಿದಾಗ ಒಬ್ಬಳೇ ಇದ್ದ ಚಾರ್ವಾಕಿ ಗೋಚರಿಸಿದ್ದಳು. ’ಎಂಥಹ ಆಕಸ್ಮಿಕ’ ಎಂದಾತ ಕಂಪನಿ ನಾಟಕದ ಶೈಲಿಯಲ್ಲಿ ತನ್ನೊಳಗೇ ಉದ್ಘರಿಸಿದ, ತನ್ನ ಮಾನಸಿಕ ನಾಟಕೀಯತೆಯನ್ನು ಮನಸಾರೆ ಮೆಚ್ಚುತ್ತ. ’ಹಾಯ್’ ಎಂದು ಈತನೇ ಮಾತನಾಡಿಸಿ ಆಕೆಯ ಪಕ್ಕದಲ್ಲಿ ಕುಳಿತಿದ್ದ. ತನಗಾದ ರೋಮಾಂಚನದ ಜೊತೆ ಸಂಕೋಚವೂ ಸೇರಿ, ಎರಡೂ ಎರಡು ವಿರುದ್ಧ ದಿಕ್ಕಿನೆಡೆ ಆತನನ್ನು ಜಗ್ಗಾಡತೊಡಗಿದವು. ಆತನ ಹೆಣೆಯ ಬೆವರು, ಮುಖದ ಇನ್ನಿತರ ಭಾಗದ ಬೆವರಿನೊಂದೊಡಗೂಡಿ, ಏರ್ ಕಂಡೀಷನ್ನಿನೊಂದಿಗೆ ಘರ್ಷಣೆಗಿಳಿದಿತ್ತು. 
 
ಸಿನೆಮ ನೋಡುವಾಗ ಗಮನವಿಟ್ಟು ನೋಡಬೇಕ ಅಥವ ಅಂತರ್ಮುಖಿಯಾಗಿರಬೇಕ? ಎಂದು ಆಕೆ ಮಾತಿಗೆ ತೊಡಗಿದಳು.
ನೀವು ಕೇಳಿದ ಪ್ರಶ್ನೆಯಲ್ಲೇ ಉತ್ತರವಿದ್ದಂತಿದೆ. ಎರಡೂ ಒಟ್ಟಿಗೆ ಸಾಧ್ಯವೆಂಬುದರ ಜೊತೆ, ಪಕ್ಕದವರೊಂದಿಗೆ ಮಾತನಾಡಲು, ಮಾತನಾಡಿಸಲು ನಿಮಗೆ ಆಬ್ಜೆಕ್ಷನ್ ಇಲ್ಲ ಎಂದಂತಾಯಿತು ಎಂದ ಅನೇಖಮಯವಾಗತೊಡಗಿದ್ದ ವೀರಾ.
ಅದೇನು ಹೇಳಬೇಕೆಂದಿದ್ದೀಯೋ ಹೇಳಿಬಿಡು ಎಂದ ಆಕೆಯೇ ಮುಂದುವರೆದು, ನೀವು ಆಮೇಲೆ ತಪ್ಪು ತಿಳಿಯಬಾರದು, ನನ್ನೊಂದಿಗೆ ಮಾತು ಬಿಡಬಾರದು ಎಂಬಿತ್ಯಾದಿ ಪೀಠಿಕೆಯ ಅವಶ್ಯಕತೆಯಿಲ್ಲ. ನಿನಗೆ ಇಪ್ಪತ್ತೊಂದು ನನಗೆ ಮುವತ್ತೊಂದು, ನೀನು ಪರಿಷತ್ತಿನ ವಿದ್ಯಾರ್ಥಿ ನಾನು ಬಾಯ್ಸ್ ಕಲಾಶಾಲೆಯ ಉಪನ್ಯಾಸಕಿ. ಮುಂಚಿನ ವಾಕ್ಯವನ್ನು ಉದ್ದರಿಸಲು ಕಾರಣ: ಓದುಗರ ಸ್ಮರಣೆಯು ಚುರುಕುಗೊಳ್ಳಲಿ ಎಂಬುದಷ್ಟೇ. ಆದರೂ ನನ್ನ ಜಾಡಿನ ಛಾಯಾ-ದಾಖಲೆ ಮಾಡಿರುವ ನೀನು, ನಾನು ಕುಳಿತ ವೇಗದ ಆಟೋವನ್ನು ಸೈಕಲ್ಲಿನಲ್ಲಿಯೇ ಪ್ರದರ್ಕ್ಷಿಣೆ ಹಾಕುವ ನೀನು, ವೃತ್ತದೊಳಗಿನ ವೃತ್ತವೋ ಎಂಬಂತೆ ನನ್ನನ್ನು ಹೊರವೃತ್ತದಿಂದ ಸಮೀಪಿಸುತ್ತಿರುವ ನೀನು, ಏನು ಬೇಕು ಅಥವ ಏನಾಗಬೇಕಿದೆ ನಿನಗೆ ನನ್ನಿಂದ? ಎಂದು ನೇರವಾಗಿ ಸಿನೆಮ ಪರದೆಯನ್ನು ನೋಡುತ್ತಲೇ, ವೀರಾನ ಪಕ್ಕದಲ್ಲಿದ್ದ ಚಾರ್ವಾಕಿ ತೀಕ್ಷ್ಣವಾಗಿಯೇ ಕೇಳಿದಳು. ವೀರಾನಿಗೆ ಯಾವುದೋ ವಿಷಯದ ಪುಸ್ತಕವನ್ನು ಓದಲು ಹೋಗಿ ಇಡಿಯ ವಿಶ್ವಕೋಶವನ್ನೇ ಮೈಮೇಲೆ ಎಳೆದುಕೊಂಡಂತಾಯಿತು. ಆ ತೂಕದ ನಡುವೆ ಆತನ ಧ್ವನಿ ಸಿಕ್ಕಿಹಾಕಿಕೊಂಡುಬಿಟ್ಟಿತು. ವೀರಾನ ಮೌನವನ್ನು ಗಮನಿಸಿ, ಸಿನೆಮ ಮುಗಿಯಲು ಇನ್ನೂ ಒಂದೂಕಾಲು ಗಂಟೆ ಸಮಯವಿದೆ. ನಿಧಾನವಾಗಿ ಆದರೆ ಸ್ಪಷ್ಟವಾಗಿ ಬಿಡಿಸಿ ಹೇಳು, ನನ್ನಿಂದ ಏನು ಬೇಕು ನಿನಗೆ? ಎಂದು ಮುಂದುವರೆಸಿದಳು.
(೮೦)
ವಾಚಾಳಿ ವೀರಾನಿಗೆ--ಕಬಡ್ಡಿ ಪಟುಗಳು ಒಬ್ಬಂಟಿ ಎದುರಾಳಿ ಆಟಗಾರನನ್ನು ಒಟ್ಟಾಗಿ ಗಬರಿಹಾಕಿಕೊಂಡಂತೆ--ಚಾರ್ವಾಕಿಯ ಮಾತುಗಳು ಆತನ ಸುತ್ತ ಬೌದ್ಧಿಕ ಹುತ್ತವೊಂದನ್ನು ನಿರ್ಮಿಸಿಬಿಟ್ಟಿತ್ತು. ಆದಿಕಾಲದಿಂದಲೂ ಪ್ರೇಮಿಯೊಬ್ಬ ನಿವೇದಿಸಿಕೊಳ್ಳಬಹುದಾದ ಪ್ರತಿಯೊಂದು ಮಾತುಗಳನ್ನೂ ಚಾರ್ವಾಕಿಯೇ ವೀರಾನ ಪರವಾಗಿ ಉದ್ಘರಿಸಿ, ಅವುಗಳಲ್ಲಿನ ಕ್ಲೀಷೆಯನ್ನು ಸಂಸ್ಕರಿಸಿ ನನ್ನಿಂದ ನಿನಗೇ ನಿರ್ದಿಷ್ಟವಾದುದೇನು ಬೇಕು ಕೇಳು ಎಂದು ವಿಚಾರಿಸಿದಳು. ಜೇನುಗೂಡನ್ನು ಹಿಂಡಿಹಿಪ್ಪೆ ಮಾಡಿದ ಮೇಲೆ ಅದನ್ನು ಬರಿಯ ’ಗೂಡು’ ಎಂದಷ್ಟೇ ಕರೆಯುವಂತಾಯಿತಿದು’ ಎಂದುಕೊಂಡ ವೀರಾ. 
 
ಕೆಲವು ಕ್ಷಣಗಳ ನಂತರ ಆಕೆ ಆತನ ಬಲಗೈಯನ್ನು ತನ್ನ ಎಡ ಅಂಗೈಯಲ್ಲಿರಿಸಿಕೊಂಡಳು ಒತ್ತಿ ಹಿಡಿದಳು. ಇದನ್ನಾತ ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ, ಆದರೆ ಹಾಗೆ ಬಯಸಿದ್ದು ಮಾತ್ರ ಸತ್ಯ. ತನ್ನ ಕೈ ತನ್ನ ದೇಹದಿಂದ ಮತ್ತೊಂದು ಕೈಗೆ ಬದಲಾಗುವ ಆ ಕ್ರಿಯೆಯು ಯುಗಗಟ್ಟಲೆ ನಡೆದಷ್ಟು ನಿಧಾನಗತಿಯದಾಗಿ ಕಂಡಿತು ವೀರಾನಿಗೆ. ’ತನಗಾದ ಈ ಇದು ಬೇರೆಯವರ‍್ಯಾರಿಗಾದರೂ ಆಗಿದ್ದಲ್ಲಿ ’ಸ್ಲೋಮೋಷನ್ ಡವ್ವು’ ಎಂದು ತಾನೇ ಅಂದುಬಿಡುತ್ತಿದ್ದೆ’ ಎಂದಾತ ಅಂತಹ ಕ್ಷಣದಲ್ಲೂ ಅಂದುಕೊಂಡು, ’ಹೀಗೂ ದ್ವಿಪಾತ್ರಾಭಿನಯವೂ ಸಾಧ್ಯವೆ ಮನಸ್ಸಿಗೆ?’ ಎಂದು ತನ್ನ ಮನಸ್ಸಿನ ಮೂರನೇ ವ್ಯಕ್ತಿತ್ವದ ಮುಖೇನ ಯೋಚಿಸತೊಡಗಿದ. ಕ್ಷಣಾರ್ಧದಲ್ಲಿ ಆ ಚಿಂತನೆಯನ್ನು ಬದಿಗಿರಿಸಿ, ತನ್ನ ದೇಹಕ್ಕೆ ಇಂತಹ ಹೆಣ್ಣೊಂದು ಇಷ್ಟು ಹತ್ತಿರವಿರುವ ಬಗ್ಗೆ, ತನ್ನ ದೇಹದ ಅಂಗವೊಂದು ಅಕ್ಷರಶ: ಆಕೆಯ ಕೈವಶವಾಗಿರುವುದರ ಬಗ್ಗೆ ಗಮನ ಹರಿಸಿದ. 
 
’ಏನೇ ಆದರೂ ಭಾರತೀಯ ಸಿನೆಮ ಎನ್ನುವುದು ಪರದೆಗಷ್ಟೇ ಲಾಯಕ್ಕು, ನಿಜ ಜೀವನದಲ್ಲಿ ಅದನ್ನು ಅನುಕರಿಸಲಾಗದು’ ಎಂದುಕೊಂಡು ಇಜಿಪ್ಶಿಯನ್ ಮಮ್ಮಿಯಷ್ಟು ಶೀತಲವಾಗಿ ಕುಳಿತುಬಿಟ್ಟ ವೀರಾ, ತನ್ನ ವಶದಲ್ಲಿದ್ದ ತನ್ನ ಒಂದೇ ಕೈಯನ್ನು ಅದರಿಂದಲೇ ಹಿಂಡುತ್ತ. ಆತನ ದೇಹದೆಲ್ಲೆಡೆಯಿದ್ದ ರೋಮಗಳೂ ಸಹ ರೋಮಾಂಚನಗೊಂಡವು. ಪ್ರೀತಿ ಮಾಡುವುದ? ಕಾಮಿಸುವುದಾ? ಮದುವೆಯಾ? ಸಂಸಾರವಾ? ಲಿವಿಂಗ್ ಟುಗೆದರ್ರ? ಮೆಸ್ಟ್ರೆಸ್ ಆಗಬೇಕೆ? ಸ್ಲೀಪಿಂಗ್ ಪಾರ್ಟ್‌ನರ್‌ಗಳಾಗಿರಬೇಕೆ? ಒಂದೇ ಮನೆಯಲ್ಲಿರುವುದಾ? ಸದಾ ಜೊತೆಯಲ್ಲಿರುವುದು ಬೇಕ? ಎಂದು ಆಕೆ ಕೇಳಿದ್ದಕ್ಕೆಲ್ಲಾ ಆತ ಇಲ್ಲ, ಇಲ್ಲ, ಅಲ್ಲ, ಗೊತ್ತಿಲ್ಲವೆಂಬಂತೆ ತಲೆಯಾಡಿಸಿದ್ದ. ’ಏನು ಬೇಕೆಂಬುದು ಗೊತ್ತಿಲ್ಲದೆ ಯಾವುದರ ಹಿಂದೆಯೋ ತೆವಲಿಗೆ ಬಿದ್ದಂತಾಡುವುದು ಪ್ರೇಮದ ವ್ಯಾಖ್ಯೆಯೆ?’ ಎಂದಾಕೆ ವಿಶ್ಲೇಷಿಸಿದ್ದನ್ನೂ ಅಲ್ಲ, ಅಲ್ಲ ಎಂದು ನಿರಾಕರಿಸುವ ಮೂಲಕ ವೀರಾ ಬೇಕು-ಬೇಡಗಳ ನಡುವಿನ ಅತಿ ಸಣ್ಣ ವ್ಯತ್ಯಾಸವನ್ನೂ ನಿರಾಕರಿಸಿಬಿಟ್ಟಿದ್ದ!
 
ಪ್ರೇತವೊಂದಕ್ಕೆ ತಾನು ಪ್ರೇತವೆಂದು ತಿಳಿಯದೆ ಮನುಷ್ಯ ವ್ಯವಹಾರದಲ್ಲಿ ತೀಕ್ಷ್ಣವಾಗಿ ತೊಡಗಿಸಿಕೊಳ್ಳುವ ಕಥನವೇ ’ಸಿಕ್ತ್ ಸೆನ್ಸ್’ ಸಿನೆಮ. ವೀರಾ ಗಮನಿಸದೆ ಹೋದದ್ದೆಂದರೆ ಆ ಸಿನೆಮದ ಬಗ್ಗೆ ಎಲ್ಲಿಯೂ ಸುದ್ದಿಯಾಗಲಿ, ಜಾಹಿರಾತಾಗಲೀ ಇರಲಿಲ್ಲ, ಅಂದು, ೧೯೮೮ರಲ್ಲಿ. ಅದು ಬಿಡುಗಡೆಯಾಗಲು ಇನ್ನೂ ಹತ್ತಾರು ವರ್ಷಗಳೇ ಬೇಕಿದ್ದವು. ಒಮ್ಮೊಮ್ಮೆ ತನ್ನ ಬಲಗೈಯ್ಯನ್ನು ಬದಿಗೆ ಸರಿಸಿ ಚಾರ್ವಾಕಿಯು ಆಕೆಯ ಬಲಗೈಯಲ್ಲಿದ್ದ ವಾಚಿನಂತಹ ತೆಳು ದುಂಡನೆಯ ಯಂತ್ರವನ್ನು ತನ್ನ ಎಡಗೈಯಿಂದ ಸೂಕ್ಷ್ಮ ಬಟನ್ನುಗಳನ್ನು ಒತ್ತುತ್ತ, ಕಿವಿಯ ಬಳಿ ಆನಿಸುತ್ತ, ಅದರೊಳಕ್ಕೆ ಏನನ್ನೋ ಉಸುರಿಸುತ್ತ, ಪರದೆಯ ಕಡೆ ನೋಡುತ್ತ, ವೀರಾನೊಂದಿಗೆ ಮಾತನಾಡುತ್ತಿದ್ದಳು.
 
ಪ್ರೀತಿ, ಪ್ರಣಯ ಎಂದರೆ ನಿನ್ನ ವಿಶ್ಲೇಷಣೆ ಏನು? ಎಂದು ಕೇಳಿದಳು ’ಆಕೆಯನ್ನು ಈತ ಅನುಕರಿಸುತ್ತಿರುವ, ಅನುಸರಿಸುತ್ತಿರುವ ಪ್ರತಿಯೊಂದು ವಿವರವೆಲ್ಲವನ್ನೂ’ ಆಕೆ ರೆಡ್-ಹ್ಯಾಂಡಾಗಿ ಆತನಿಗೇ ತಿಳಿಸಿದ ಮೇಲೆ.
ಅದೇ, ಜೊತೆಯಲ್ಲಿರುವುದು ಕೊನೆಯವರೆವಿಗೂ ಎಂದ ತಡವರಿಸುತ್ತ. ವಾಸ್ತವಿಕ ವಿಷಯಗಳನ್ನು ಹರಳುಹುರಿದಂತೆ ಮಾತನಾಡಬಲ್ಲ ವೀರಾ ಪ್ರೇಮ-ಪ್ರೀತಿಯೆಂಬ ಅಮೂರ್ತದ ವಿಷಯವನ್ನು ವರ್ಣಿಸಲು ಅಸಹಾಯಕನಾಗಿದ್ದ.
ನಿನಗೆ ನನ್ನಿಂದ ಏನು ಬೇಕು ಎಂದು ನೀನು ಇನ್ನೂ ತಿಳಿಸಿಲ್ಲ. ಪ್ರೇಮಿಯು ತನ್ನನ್ನು ಪ್ರೀತಿಸಿದವರೊಂದಿಗಿರಬೇಕಾ ಅಥವ ತಾನು ಪ್ರೀತಿಸಿದವರೊಂದಿಗಿರಬೇಕ ಎಂದು ಹೇಳು ನೋಡುವ? ಎಂದು ತುಂಟತನದಿಂದ ಕೇಳಿದ ಆಕೆಯ ಕಂಗಳು ಮಾತ್ರ ನೇರ ಸಿನೆಮ ಪರದೆಯ ಮೇಲಿತ್ತು. ವೀರಾ ಕೊಡುವ ಉತ್ತರಗಳಿಗೂ ಪರದೆಯ ಮೇಲೆ ನಡೆಯುತ್ತಿರುವ ಘಟನಾವಳಿಗಳಿಗೂ ಏನೋ ಬಾದ್ಯತೆ ಇದ್ದಂತಿತ್ತು, ಚಾರ್ವಾಕಿಯು ಪರದೆಯ ಮೇಲೆ ಕಣ್ಣನ್ನೂ ವೀರಾನ ಮಾತುಗಳಿಗೆ ಕಿವಿಗಳನ್ನೂ ನೆಟ್ಟ ರೀತಿಯು.
ಮೊದಲನೆಯದ್ದೆ ಸರಿ, ಅಲ್ಲವೆ? ಎಂದನಾತ. 
ಅಲ್ಲವೆ ಎಂದರೆ ನಿನಗೆ ಅದರ ಬಗ್ಗೆ ಅನುಮಾನವೂ ಇದೆ ಎಂದರ್ಥ ಎಂದು ಆಕೆ ಈತನೆಡೆ ತಿರುಗಿ ನೋಡಿ, ತನ್ನ ಬಲಗೈಗೆ ಕಟ್ಟಿದ್ದ ವಾಚ್‌ನಂತಹದ್ದನ್ನು ಮುಟ್ಟಿ ಏನೋ ಸರಿದೂಗಿಸತೊಡಗಿದಳು.
ಸರಿ ಹಾಗಿದ್ದರೆ ಕೇಳಿ ಮೇಡಂ. ಎರಡೂ ತಪ್ಪೆನಿಸುತ್ತದೆ. ತನ್ನನ್ನು ಮತ್ತೊಬ್ಬರು ವಿಪರೀತ ಇಷ್ಟಪಡುವಾಗ ಅವರೊಂದಿಗಿರುವದು ಒಂದು ಭಾಗ್ಯವೇ ಸರಿ. ಅದನ್ನು ಪ್ರೀತಿ ಎನ್ನಬಹುದೇನೋ, ಅಲ್ಲಲ್ಲ ಅನ್ನಬಹುದಾಗಿದೆ ಎಂದು ತನ್ನ ಸಹಪಾಠಿಯಾದರೂ ಗುರುವಿನಂತೆ ಇಂತಹ ಸೂಕ್ಷ್ಮಗಳನ್ನೆಲ್ಲ ಯೋಚಿಸುವುದನ್ನು ಕಲಿಸಿಕೊಟ್ಟ ಅನೇಖನನ್ನು ಮನಸ್ಸಿನಲ್ಲೇ ವಂದಿಸುತ್ತ, ಗುರುವಿನ ಸ್ಥಾನದಲ್ಲಿದ್ದರೂ ಸಹಚಾರಿಣಿಯಂತೆ ಭಾವಿಸಬೇಕೆಂದುಕೊಳ್ಳ ಬಯಸಿದ ಚಾರ್ವಾಕಿಯೊಂದಿಗೆ ಸಂಭಾಷಿಸತೊಡಗಿದ.
 
ವಾಹ್. ಸ್ಮಾರ್ಟ್ ಉತ್ತರ. ನಾನು ಇನ್ನೊಬ್ಬರಿಗೆ ಇಷ್ಟವಾಗುವಾಗ ಅವರೊಂದಿಗಿರುವುದನ್ನು ಪ್ರೀತಿ ಅನ್ನೋದಾದರೆ ಇಬ್ಬರ ನಡುವಣ ಕೆಮಿಸ್ಟ್ರಿ ಸರಿ ಇದೆ ಅಂದಂತಾಯ್ತು. ಆದರೆ ನಿನಗೂ ನನಗೂ ನಡುವಣ ಈ ಬಗೆಹರಿಯದ ಸಂಬಂಧದ ಸ್ವರೂಪದ ಹಿನ್ನೆಲೆಯಲ್ಲಿ ಈ ಉತ್ತರ ಮಸ್ತ್ ಮಸ್ತ್. ಈಗ ನೀನು ನನಗೆ ಇಷ್ಟವಾಗಲು ಅವಶ್ಯಕವಾದಂತಹದ್ದೇನೂ ಘಟಿಸಿಲ್ಲ. ನಾನು ನಿನಗೆ ಇಷ್ಟವಾಗಿರುವುದರ ಹಿಂದೆ ಎಂದೂ ಕಂಡಿರದ ಒಂದು ಹೆಣ್ಣಿನ ದೇಹದ ಬಗೆಗಿರುವ ಆರಂಭಶೂರತನದ ಅಬ್ಸೆಷನ್, ತೆವಲು ಮಾತ್ರ ಅತಿಯಾಗಿದೆ ಅನಿಸುತ್ತದೆ. ಅದನ್ನು ನಾನು ಪ್ರೀತಿ ಎಂದು ನಂಬಿಕೊಳ್ಳಲಾರೆ. ಆದ್ದರಿಂದ ನಿನ್ನ ದೃಷ್ಟಿಕೋನದಿಂದ ನಾನೂ ನಿನಗೆ ಪ್ರೇಮಿಯಾಗಲಾರೆ, ಅಲ್ಲವೆ?
ಹೌದು
ಮತ್ತೆ?
ಮತ್ತೆ ಏನು, ಏನೂ ಇಲ್ಲ. ಅಂತಹದ್ದೇನನ್ನೋ ಸಾಧಿಸಲೇ ನಾನು ನಿಮ್ಮ ಜಾಡಿನ, ನೀವು ಕುಡಿದಿಟ್ಟ ಕಪ್ಪುಸಾಸರ್‌ಗಳನ್ನ, ಮುಟ್ಟಿದ ಎಲೆಗಿಡಬಳ್ಳಿಗಳನ್ನ ಛಾಯಾಚಿತ್ರಗೊಳಿಸುತ್ತಿದ್ದುದು, ಈವರೆಗೂ ಎಂದು ಧೈರ್ಯ ತಂದುಕೊಂಡು ಪ್ರತಿಕ್ರಿಯಿಸಿದ. ಪ್ರೀತಿಯನ್ನು ’ಅದನ್ನು’ ಎಂದು ಹೇಳುವ ಬದಲು ’ಅಂತಹದ್ದೇನನ್ನೋ’ ಎಂದು ವರ್ಗೀಕರಣವಲ್ಲದ ರೀತಿ ವಿಭಾಗಿಸುವ, ಕೂದಲನ್ನು ಸೀಳುವ ಯೋಚನಾ ಕ್ರಮಕ್ಕೆ ಆತನನ್ನು ಪರಿಚಯಿಸಿದ್ದ ಅನೇಖ ಅಲ್ಲಿದ್ದಿದ್ದರೆ ’ವಾಹ್’ ವಾಹ್’ ಎನ್ನುತ್ತಿದ್ದ ತನ್ನ ಈ ಮಾತುಗಳಿಗೆ ಎಂದು ವೀರಾನೇ ಸ್ವತಃ ಭಾವಿಸಿಬಿಟ್ಟಿದ್ದ. 
ಪ್ರೀತಿಯಂತಹದ್ದೇನೋ’ ಎಂದರೇನು? ನಿರ್ದಿಷ್ಟವಾಗಿ, ಖಡಕ್ಕಾಗಿ ನೀನು ಕ್ಯಾಮರಾಗಳ ಮಾತನಾಡುತ್ತೀಯಲ್ಲ, ಹಾಗೆ ವಿವರಿಸಲಾರೆಯ ಪ್ರೀತಿಯನ್ನ? ಎಂದ ಚಾರ್ವಾಕಿಯ ಮಾತಿಗೆ ಒಂದು ಔನ್ಸ್ ಮಮತೆಯ ಸ್ಪರ್ಷವಿದ್ದಂತೆನಿಸಿ, ವೀರಾನಿಗೆ ಕಸಿವಿಸಿಯಾಯಿತು.
ನಿಮ್ಮ ಸುತ್ತಲೂ ಒಂದು ನಿಗೂಢ ಚಿಪ್ಪು ಅಥವ ನಿಮ್ಮ ವ್ಯಕ್ತಿತ್ವಕ್ಕೇ ಒಂದು ನಿರಂತರ ಕುತೂಹಲ ಇರುವುದನ್ನು ನೀವು ಗಮನಿಸದೇ ಇರಲಾರಿರಿ. ಇಂದಿಗೂ ನಿಮ್ಮ ಮನೆಯನ್ನು ಕಂಡವರಿಲ್ಲ, ನಿಮ್ಮ ವಯಸ್ಸನ್ನು ತಿಳಿದವರಿಲ್ಲ. ’ನನ್ನ ಗೆಳತಿ ಚಾರ್ವಾಕಿಗೆ ಮುವತ್ತೊಂದು ವಯಸ್ಸು’ ಎಂದು ಕೆ.ಕೃತಿ ಅಥವ ಸೋಕುಮಾರಿ ೨೦೧೧ರಿಂದ ಬರೆದ ಪತ್ರದಲ್ಲಿ ಒಮ್ಮೆ ಪ್ರಸ್ತಾಪಿಸಿದ್ದನ್ನು ನಾನು ಮರೆತಿಲ್ಲ. ಒಬ್ಬಳೇ ವ್ಯಕ್ತಿ, ಒಂದೇ ವಯಸ್ಸಿನವಳಾಗಿ, ಬೇರೆ ಬೇರೆ ಕಾಲಗಳಲ್ಲಿ ಇರುವ ನಿಮ್ಮ ಅಸ್ತಿತ್ವ ಮೀರಿದ ಆಕರ್ಷಣೆಯೊಂದಿದೆ ನಿಮಗೆ ಎಂದಾತ ಹೇಳಿದಾಗ ಚಾರ್ವಾಕಿಯ ಮುಖದಲ್ಲಿ ಒಂದು ಸಂತೃಪ್ತಿಯ ಜಲಕು ಹಾಯ್ದುಹೋದದ್ದನ್ನು ಆತ ಗಮನಿಸದಿರಲಿಲ್ಲ.
ನನ್ನ ಮೂಲ ಹುಡುಕುವ ಅವಶ್ಯಕತೆ ಇಲ್ಲ. ಆದರೂ ಕುತೂಹಲಕ್ಕೆ ಕೇಳುತ್ತಿದ್ದೇನೆ. ಕಾಲವು ಹಿಂದುಮುಂದಾಗಿ ಪತ್ರೋತ್ತರ ನಡೆಯುತ್ತಿರುವ ಈ ವೈಜ್ಞಾನಿಕ ಅಚ್ಚರಿಗಳಾಚೆಗೂ ನನ್ನಲ್ಲೊಂದು ಸೆಳೆತವಿದೆ ಎನ್ನುವೆಯಲ್ಲ. ಪ್ರೀತಿಯನ್ನು ಕುರಿತ ಇಲ್ಲಿಯವರೆಗಿನ ಎಲ್ಲ ಪರಿಕಲ್ಪನೆಗಳನ್ನೂ ನಿರಾಕರಿಸುತ್ತಿರುವೆಯಲ್ಲ. ನಿನ್ನದೇ ಒಂದು ವ್ಯಾಖ್ಯೆ ಇರಬೇಕಲ್ಲವೆ ಪ್ರೀತಿಯನ್ನು ಕುರಿತು?
ಇದೆ
ಏನದು?
ವ್ಯಾಖ್ಯೆಯ ಬಂದಕ್ಕೆ ಸಿಲುಕಲಾರದ್ದು ಪ್ರೀತಿ ಎಂಬ ದ್ವಂದ್ವ ನೀತಿಯ ವ್ಯಾಖ್ಯೆಯೇ ಪ್ರೀತಿ ಎಂಬುದಕ್ಕೆ ಅತ್ಯಂತ ಹತ್ತಿರವಾದ ಅರ್ಥೈಸುವಿಕೆ.
ಆಯ್ತು. ಒಂದು ಬೌದ್ಧಿಕ ಒಪ್ಪಂದಕ್ಕೆ ಬಂದಂತಾಯ್ತು. ನನ್ನಿಂದ ಏನನ್ನು ನಿರೀಕ್ಷಿಸುತ್ತಿರುವೆ ನೀನು ಎನ್ನುವುದನ್ನು ಮಾತ್ರ ಹೇಳಲಿಲ್ಲ? ಎಂದ ಚಾರ್ವಾಕಿ, ಆ ಪ್ರಶ್ನೆಯನ್ನು ಕೇಳಿದ ರೀತಿಯಿಂದಲೇ ಏನಾದರೂ ಬೇಕೆಂದು ಕೇಳಲೇಬೇಕು ಎಂಬ, ಆಕೆಯ ಗಾಂಭೀರ್ಯ-ನಿಗೂಢತೆಗೆ ಹೊಂದದ ಬೇಡಿಕೆಯಿತ್ತು. ಆಕೆ ಮತ್ತೂ ಮುಂದುವರೆದು, ನೀನು ಪ್ರೀತಿಯಲ್ಲಿ ಅಥವ ನೀನೇ ಹೇಳುವಂತೆ ಗುರುತ್ವಾಕರ್ಷಣೆಯಲ್ಲಿ ಬಿದ್ದಿರುವುದು ಅಥವ ಸಿಲುಕಿರುವುದು ನನ್ನಲ್ಲಲ್ಲ, ಈ ಭೌತಿಕ ಜಗತ್ತನ್ನು ನಾನು ಸ್ಪರ್ಷಿಸಿರುವ ಗುರ್ತುಗಳಲ್ಲಿ. ಸ್ಥಳವೆಂಬ ಅವಕಾಶದ ದಾಖಲೆಯಿಂದ ನಿರ್ದಿಷ್ಟ ಕಾಲವೆಂಬುದನ್ನು ಹಿಡಿದಿರಿಸುವ ಪ್ರಯತ್ನ ನಿನ್ನ ಫೋಟೋಗಳು. ಅದಕ್ಕೆ ಸಕಾರಣವೂ ಇದೆ, ಎಂದು ಸುಲಭಕ್ಕೆ ಅರ್ಥವಾಗದ, ಆದರೆ ಅರ್ಥಹೀನವಲ್ಲದ ಮಾತುಗಳನ್ನಾಡಿ ವೀರಾನನ್ನು ಗೊಂದಲಕ್ಕೆ ದೂಡಿಬಿಟ್ಟಳು. ಸಂಕೀರ್ಣತೆಯನ್ನು ಕುರಿತಾದ ಅನೇಖನ ಪಾಠ ವೀರಾನಿಗೆ ಈಗ ಸಹಾಯಕ್ಕೆ ಬರಲಾರದಂತಾಗಿಬಿಟ್ಟಿತ್ತು.  
ಇಬ್ಬರೂ ಆ ಘನೀಕರಿಸಿದ ಮೌನದಲ್ಲಿ ಸಿನೆಮ ನೋಡುತ್ತಿದ್ದರು. ವೀರಾನಿಗೆ ಅಷ್ಟಾವಧಾನದ ಸರ್ಕಸ್ ಮಾಡುವ ಪ್ರಮೇಯ ಬಂದಿತ್ತು. ಆಕೆ ಕನ್ನಡ ಮಾತನಾಡುತ್ತಿದ್ದರೂ, ಘನೀಕೃತ ಅಥವ ಕಾನ್ಸನ್‌ಟ್ರೇಟೆಡ್ ಜ್ಯೂಸ್ ಕುಡಿದಂತಾಗಿತ್ತು. ನೀರು ಬೆರೆಸಿ ತೆಳುಗೊಳಿಸುವ ಅವಶ್ಯಕತೆ ಇರುವಂತೆ, ಆಕೆ ಕೆಲವೇ ಸೆಕೆಂಡುಗಳಲ್ಲಿ ಪಟಪಟನೆ ಹೇಳಿದ್ದನ್ನು ಆತ ನಾಲ್ಕಾರು ನಿಮಿಷ ಯೋಚಿಸಿ ಅರ್ಥಮಾಡಿಕೊಳ್ಳಬೇಕಾಗಿತ್ತು. ಅನೇಖನೂ ಒಮ್ಮೊಮ್ಮೆ ಹೀಗೆ ಮಾತನಾಡಿದರೂ ಅಂತಹ ಪದಗಳ ಅರ್ಥಗಳನ್ನು ಕೇಳಿ ತಿಳಿದುಕೊಳ್ಳದೆ ವೀರಾ ಲೇವಡಿ ಮಾಡಿಹಾಕುತ್ತಿದ್ದನೇ ಹೊರತು ಅರ್ಥೈಸಲು ಹೋಗುತ್ತಿರಲಿಲ್ಲ. ಆದರೆ ಚಾರ್ವಾಕಿ ಹೇಳಿದ್ದರ ಹಿಂದೆ ಒಂದು ಸವಾಲಿದೆ. ಭೌತಿಕವಾಗಿ ತನ್ನ ದೇಹವನ್ನು ಮುಟ್ಟಿದಷ್ಟು ಸರಾಗವಾಗಿ ಮಾನಸಿಕವಾಗಿ, ಬೌಧ್ಧಿಕವಾಗಿ ಸ್ಪರ್ಶಿಸಲು ಸಾಧ್ಯವೆ; ಮತ್ತು ಅದನ್ನು ಉಳಿಸಿಕೊಳ್ಳಲು ಸಾಧ್ಯವೆ ಎಂದಾಕೆ ಒಂದು ಪಂಥಾಹ್ವಾನ ನೀಡಿರುವುದು ಸ್ಪಷ್ಟವಾಗಿದೆ. ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡದೆ ಬಿಟ್ಟರೆ, ತಾನು ಜೊಳ್ಳು, ಆಕೆಯ ಸಾಹಚರ್ಯಕ್ಕೆ ಲಾಯಕ್ಕಲ್ಲ ಎಂದು ನೇರವಾಗಿ ಒಪ್ಪಿಕೊಂಡಂತೆಯೂ ಆಗುತ್ತದೆ!
’ಸತ್ತವರು ನನಗೆ ಕಾಣುತ್ತಾರೆ. ನಿನ್ನ ಪಕ್ಕದಲ್ಲಿ ತೀರಿಕೊಂಡಿರುವ ನಿನ್ನಮ್ಮ ನಿಂತಿದ್ದಾಳೆ’ ಎಂದು ಕಾರಿನೊಳಗೆ ಕುಳಿತಿರುವ ಅಮ್ಮನಿಗೆ ಮಗ ಹೇಳುತ್ತಿರುವ ದೃಶ್ಯವು ಪರದೆಯ ಮೇಲೆ ಓಡುತ್ತಿತ್ತು. ಚಾರ್ವಾಕಿ ಆಗಾಗ ಎಡಕ್ಕೆ ತಿರುಗಿ ವೀರಾನ ಬಲಗೈಯನ್ನು ಸಹಜವಾಗಿಯೋ ಎಂಬಂತೆ ಸವರಿ ಒಂದು ಸ್ಮೈಲ್ ಕೊಟ್ಟು ಮತ್ತೆ ಪರದೆಗೆ ದೃಷ್ಟಿಯನ್ನು ಹರಿಸುತ್ತಿದ್ದಳು. ಆಕೆ ತನ್ನೆಡೆ ನೋಡಿದಾಗಲೆಲ್ಲಾ ಅದನ್ನು ಕ್ಯಾಮರಾ ಕಣ್ಣಿಂದ ದಾಖಲಿಸುವಂತೆ ತನ್ನ ಮನಸ್ಸಿನಲ್ಲಿ ಹಿಡಿದಿರಿಸುತ್ತಿದ್ದ. ಸುಮಾರು ಹತ್ತಿಂಚು ದೂರದಿಂದ ಕಂಡ ಆ ಕಂಗಳು ತಾನು ಈವರೆಗೂ ಕಂಡ ಯಾವ ಕಂಗಳಂತೆಯೂ ಇರಲಿಲ್ಲ. ಆಕೆಯ ಒಂದು ಕಣ್ಣು ರವಿವರ್ಮ ಪ್ರಣೀತ ರೋಮ್ಯಾಂಟಿಕ್ ಆಕಾರದ್ದಾದರೆ ಮತ್ತೊಂದು ಯಾವುದೋ ಸೈನ್ಸ್-ಫಿಕ್ಷನ್ ಕಥನದ ಯಂತ್ರದಂತಿತ್ತು. ಈ ವಿವರವೂ ಸಹ ತಾನು ನೋಡುತ್ತಿರುವುದೋ ಅಥವ ಭ್ರಮಿಸುತ್ತಿರುವುದೋ ಎಂಬುದರ ಬಗ್ಗೆಯೇ ಅನುಮಾನಗೊಂಡ ವೀರಾ. ಆಕೆ ಈತನ ಕಡೆ ತಿರುಗಿದಾಗಲೆಲ್ಲಾ ಆಗಷ್ಟೇ ಪರದೆಯ ಮೇಲೆ ನಡೆದ ಘಟನೆಯ ಬಗ್ಗೆ ಏನೋ ಒಂದು ಪ್ರತಿಕ್ರಿಯೆಯನ್ನು ಆಕೆ ಆತನಿಂದ ನಿರೀಕ್ಷಿಸುತ್ತಿರುವಂತಿತ್ತು. ಇಡೀ ಸಿನೆಮ ಕಾಲ ಮತ್ತು ಅವಕಾಶದ ನಡುವಣ ಸಾಮರಸ್ಯವನ್ನು ಕದಡುವ ಪ್ರಕ್ರಿಯೆಯು ಮಾನವ ದುಃಖಕ್ಕೆ ಮೂಲವನ್ನಾಗಿಸುವಂತೆ ಹೆಣೆಯಲಾಗಿತ್ತು.
(೮೧)
ಆಕಸ್ಮಿಕವಾಗಿ ಚಾರ್ವಾಕಿಯ ಪಕ್ಕದಲ್ಲಿ ಕುಳಿತುಕೊಳ್ಳುವ ಅವಕಾಶ ದೊರೆತದ್ದು, ಆಕೆ ವಾಚಿನಂತಿದ್ದ ಯಂತ್ರವನ್ನು ಆಗಾಗ ಚಾಲನೆ ಮಾಡುತ್ತ ಅದರೊಳಕ್ಕೆ ಏನನ್ನೋ ಉಸುರಿಸುತ್ತ, ಪ್ರೀತಿ-ಪ್ರೇಮ-ಪ್ರಣಯಗಳನ್ನು ಕುರಿತಂತೆ ಮನುಷ್ಯನಾದವನು ಕೇಳಬಹುದಾದ ಎಲ್ಲಾ ಪ್ರಶ್ನೆಗಳನ್ನೂ ಯಾವುದೇ ಸಂಕೋಚವಿಲ್ಲದೆ ಆಕೆ ಕೇಳಿದ್ದು, ಆ ಕಾಲಕ್ಕೆ ಅಸಂಗತವೆನಿಸುವಂತಹ ಭಾಷೆಯುಳ್ಳ ಸಿನೆಮವೊಂದು ಪರದೆಯ ಮೇಲೆ ನಡೆಯುತ್ತಿದ್ದುದು, ಅಲ್ಲಿ ನಡೆಯುತ್ತಿದ್ದ ಘಟನೆಗಳಿಗೂ ತಮ್ಮಿಬ್ಬರ ನಡುವೆ ನಡೆಯುತ್ತಿರುವ ಮಾತುಕಥೆಗೂ ನೇರಸಂಬಂಧವಿರುವಂತೆ ಚಾರ್ವಾಕಿ ಒಡನಾಡುತ್ತಿದ್ದುದು, ಎಲ್ಲಕ್ಕಿಂತಲೂ ಹೆಚ್ಚಾಗಿ ಅತ್ಯಂತ ಸಹಜವೋ ಎಂಬಂತೆ ತನ್ನ ಕೈಯನ್ನು ಆಗಾಗ ಹಿಂಡಿ, ಸವರುತ್ತಿದ್ದುದು-ಇವೆಲ್ಲವನ್ನೂ ಸರಳೀಕರಿಸಿ ಗ್ರಹಿಸಿಬಿಡಲು ವೀರಾ ತಯಾರಿರಲಿಲ್ಲ. ಆಗೊಮ್ಮೆ ಸಿನೆಮ ನೋಡುತ್ತಲೇ ಚಾರ್ವಾಕಿಯ ಎಡಗೈಯನ್ನು ತನ್ನ ಮುಷ್ಟಿಯಲ್ಲಿ ಹಿಡಿಯಲು ಪ್ರಯತ್ನಿಸಿದ. ಸಿಗಲಿಲ್ಲ. ಪರದೆಯಿಂದ ನೋಟವನ್ನು ಕಿತ್ತು ಬಲಕ್ಕೆ ತಿರುಗಿ ಆಕೆಯ ಕೈಯನ್ನು ತನ್ನ ಅಂಗೈಗೆ ತೆಗೆದುಕೊಂಡ -ಅತಿ ಸಹಜವೋ ಎಂಬಂತೆ, ಆಕೆ ತನ್ನ ಕೈಹಿಡಿದ ಕ್ರಿಯೆಗೆ ಸಹಜ ಪ್ರತಿಕ್ರಿಯೆಯೋ ಎಂಬಂತೆ. ವಿಶೇಷವೇನೂ ಅನ್ನಿಸಲಿಲ್ಲ. 
 
ಸ್ಥಳವೆಂಬ ಅವಕಾಶದ ದಾಖಲೆಯಿಂದ ನಿರ್ದಿಷ್ಟ ಕಾಲವೆಂಬುದನ್ನು ಹಿಡಿದಿರಿಸುವ ಪ್ರಯತ್ನ ನಿನ್ನ ಫೋಟೋಗಳು.. .. ಇಡೀ ಸಿನೆಮ ಕಾಲ ಮತ್ತು ಅವಕಾಶದ ನಡುವಣ ಸಾಮರಸ್ಯವನ್ನು ಕದಡುವ ಪ್ರಕ್ರಿಯೆಯು ಮಾನವ ದುಃಖಕ್ಕೆ ಮೂಲವನ್ನಾಗಿಸುವಂತೆ ಹೆಣೆಯಲಾಗಿತ್ತು.
 
ಈ ಮೇಲಿನೆರೆಡು ವಾಕ್ಯಗಳು ವೀರಾನ ಸ್ಮೃತಿಯಲ್ಲಿ ಮರುಕಳಿಸತೊಡಗಿತ್ತು. ಮೊದಲನೆಯ ವಾಕ್ಯವೇನೋ ಚಾರ್ವಾಕಿಯೇ ತನಗೆ ಹೇಳಿದ್ದು. ಅದರೆ ಎರಡನೆಯದ್ದು ಹೇಗೆ ಹುಟ್ಟಿಕೊಂಡಿತು ಎಂಬುದು ಆತನಗೇ ತಿಳಿಯದಾಯಿತು. ಸಿನೆಮ ನೋಡುತ್ತ, ಚಾರ್ವಾಕಿಯ ಮಾತುಕತೆಗಳೊಂದಿಗೆ ಉಂಟಾದ ಅಸಹಜತೆಯ ಪರಿಣಾಮವಿರಬೇಕು ಆ ವಾಕ್ಯ ಎನ್ನಿಸಿ ಸುಮ್ಮನಾದ. ಅಷ್ಟರಲ್ಲಿ ಒಂದಂಶ ಆತನ ಗಮನಕ್ಕೆ ಬಂದಿತ್ತು. ಆಕೆಯ ಕೈಹಿಡಿದು ಮೂರು ನಿಮಿಷಗಳೇ ಕಳೆದಿದ್ದರೂ ಸಹ ಅದರ ಸ್ಪರ್ಶ ಇನ್ನೂ ದಕ್ಕಿರಲಿಲ್ಲ ಆತನಿಗೆ. ಈ ಸ್ಪರ್ಶರಾಹಿತ್ಯತೆಯು ಆಕೆಯಿಂದುಂಟಾಗಬೇಕಾದ ಸ್ಪರ್ಶವೋ ಇಲ್ಲ ಆಕೆಯನ್ನು ಮುಟ್ಟುವುದರಿಂದ ತನ್ನಲ್ಲುಂಟಾಗಬಹುದಾದ ಸ್ಪರ್ಶವೋ ಎಂದು ಆತ ಗೊಂದಲದಲ್ಲಿ ಬಿದ್ದ. ಮೊನ್ನೆ ಮೊನ್ನೆ ಪರಿಷತ್ತಿನ ಕ್ಯಾಂಟೀನಿನಲ್ಲಿ ರಾತ್ರಿ ಹೊತ್ತು ಕೇರಳ ಚಿಪ್ಸನ್ನು ಗುಡಿಸಲು ಹೋಗಿ, ಒಳಗೆ ಸಿಕ್ಕಿಹಾಕಿಕೊಂಡಾಗಲೂ ಇಂತಹದ್ದೇ ವಿಕ್ಷಿಪ್ತ ಅನುಭವ ಉಂಟಾಗಿತ್ತು ಆತನಿಗೆ. ಅತ್ಯಂತ ತುರ್ತಿನದ್ದು ಏನೋ ತನ್ನೆದುರಿಗೆ ಘಟಿಸುತ್ತಿರುವಾಗ ಅದು ಮುಂದೊಮ್ಮೆ ಸ್ಮೃತಿಯಲ್ಲಿ ದೊರಕಿಸಿಕೊಡಬಹುದಾದ ಭಿನ್ನ ಕೋನವೊಂದು ಘಟನೆಯ ಅನಾವರಣದ ಕಾಲಕ್ಕೇ ಒಡಮೂಡಿಬಿಡುತ್ತಿತ್ತು. ಕಲಾಕೃತಿ ರಚನೆಯಾಗುವ ಮುನ್ನವೇ ಅದರ ವಿಮರ್ಶೆಯು ಹುಟ್ಟಿಕೊಳ್ಳತೊಡಗಿದಂತಿದು. 
(೮೨)
ಆ ಕೈ ಮುಟ್ಟಿದಾಗ ಆಗುವ ಅನುಭವವು ಸ್ಪರ್ಶವೋ ಅಥವ ಅದನ್ನು ಮುಟ್ಟಿದಾಗ ತನ್ನಲ್ಲುಂಟಾಗುವ ಭಾವವು ಸ್ಪರ್ಶವೋ ಎಂಬ ನಿಗೂಢ ಹುಟ್ಟಿಕೊಳ್ಳಲು ಆರನೇ ಇಂದ್ರೀಯ ಎಂಬರ್ಥದ ಎದುರಿಗೆ ನಡೆಯುತ್ತಿರುವ ’ಸಿಕ್ಸ್ತ್ ಸೆನ್ಸ್’ ಸಿನೆಮವೇ ಕಾರಣ ಎನ್ನಿಸಿತು ವೀರಾನಿಗೆ. ಕ್ಯಾಂಟೀನಿನಿಂದ ತುರ್ತಾಗಿ ತಪ್ಪಿಸಿಕೊಳ್ಳಲು ಮಾಡಬೇಕಾದ ತುರ್ತು ಕ್ರಿಯೆಗಳ ನಡುವೆ ಉಂಟಾದ ಆದಿಭೌತಿಕ ಗೊಂದಲ.. .. ಅದೇನೆಂದೂ ಮರೆತಿದ್ದ.. .. ಆತನಿಗೆ ಖುಷಿ ಕೊಡುವ ಸಂಗತಿಯೇ ಆಗಿತ್ತು. ಏಕೆಂದರೆ ಅನೇಖ ’ಅದು ಬೆಳೆಯುತ್ತಿರುವ ನಿನ್ನ ಪ್ರೌಢಿಮೆಯ ಪ್ರತೀಖ’ ಎಂದ ’ಖಾ’ತರಿಗೊಳಿಸಿದ್ದ. ತನ್ನ ಫೋಟೋಗಳು ’(ಸ್ಥಳ)ಅವಕಾಶದಿಂದ ಕಾಲವನ್ನು ಅಳೆಯುತ್ತವೆ’ ಎಂದ ಚಾರ್ವಾಕಿಯ ಮಾತಿನಿಂದ ಕಾಲ-ದೇಶ (ಸ್ಪೇಸ್)ದ ವೈಪರೀತ್ಯದಿಂದ ಮನುಷ್ಯನ ಸಹಜ ಸಾಮರಸ್ಯಕ್ಕೆ ಭಂಗ ಎಂದು ತನಗನಿಸಿದ್ದು ಗಮನಿಸಿ ವೀರಾನಿಗೆ ರೋಮಾಂಚನವಾಯಿತು. ಅನೇಖ ತನಗೆ ಓದಲು ಕೊಟ್ಟಿದ್ದ ಚಿತ್ತಾಲ, ಅನಂತಮೂರ್ತಿ, ತೇಜಸ್ವಿ ಮುಂತಾದವರ ಬರವಣಿಗೆಯ ವಾಕ್ಯಗಳ ಭಾಷೆಯು ಅಸಲಿಯಾಗಿ ತನ್ನಿಂದಲೂ ಅಸಲಿಯಾಗಿ ಉದಿಸುತ್ತಿರುವುದನ್ನು ಗಮನಿಸಿ ಗಂಭೀರನಾದ. ಜೊತೆಗೆ ಆಕೆಯ ಕೈ ತನ್ನ ಮುಷ್ಟಿಯಲ್ಲಿ. ಆದರೂ ಅದರ ಸ್ಪರ್ಶವಿಲ್ಲ! ಬದಲಿಗೆ ಸ್ಪರ್ಶದ ವ್ಯಾಖ್ಯೆಯನ್ನು ಕುರಿತಂತೆಯೇ ಒಂದು ದೃಶ್ಯವು ಉಪಮೆಯಾಗಿ ಆತನ ಕಲ್ಪನೆಗೆ ಸಿಕ್ಕಿಕೊಂಡಿತು. ವ್ಯಕ್ತಿಯೊಬ್ಬ ಎರಡು ಬೆಟ್ಟಗಳ ನಡುವೆ ಹಾರುವಾಗ ಆತ ಮೊದಲ ಬೆಟ್ಟವನ್ನು ಬಿಟ್ಟ ಕ್ರಿಯೆಯನ್ನು ’ಸ್ಪರ್ಶದಾರಂಭ’ ಎನ್ನಬೇಕೋ ಅಥವ ಎರಡನೇ ಬೆಟ್ಟವನ್ನು ಬಂದು ಮುಟ್ಟಿದಾಗ ಅದನ್ನು ’ಸ್ಪರ್ಶ ಪೂರೈಸಿತು’ ಎನ್ನಬೇಕೋ ಎಂಬ ಯೋಚನೆ ಆತನ ತಲೆಗೆ ಬಂದಿತು. ಎರಡೂ ಅಲ್ಲ, ಮನುಷ್ಯ ಅಲ್ಲಿಂದ ಇಲ್ಲಿಗೆ ಜಿಗಿದಾಗ, ಆಕೆಯ ಕೈ ಈಗ ತನ್ನ ಮುಷ್ಠಿಯಲ್ಲಿರುವಂತೆ, ಎರಡೂ ಬಂಡೆಗಳು ಒಂದಾಗಿ ನಡುವೆ ಸಿಲುಕಿಕೊಂಡ ವ್ಯಕ್ತಿ ಮಟಾಷ್ ಆದಂತಾಯಿತು ತನ್ನ ಸ್ಪರ್ಶರಹಿತ ಸ್ಥಿತಿ ಎಂದುಕೊಂಡ. ಸ್ಪರ್ಶ ಇಲ್ಲದ್ದನ್ನು ಸ್ಪರ್ಶರಹಿತತೆ ಎನ್ನುವ ಬದಲಿಗೆ ಸ್ಪರ್ಶ ಉಂಟಾಗಿ ನಂತರ ನಾಶವಾಗುವುದನ್ನು ’ಸ್ಪರ್ಶರಹಿತತೆ’ ಎನ್ನಬಹುದಾಗಿದೆ ಎಂಬ ಹೊಸ ಅರಿವು ಆತನಲ್ಲಿ ಉಂಟಾಯಿತು. ತನ್ನ ಕೈ ಜೋಮು ಹತ್ತಿರುವುದರಿಂದಲೇ ಆಕೆಯ ಸ್ಪರ್ಶ ತನಗೆ ಸೋಕುತ್ತಿಲ್ಲವೆಂದು ಭಾವಿಸುವಷ್ಟರಲ್ಲಿ ದೀಪ ಹತ್ತಿಕೊಂಡಿತು. ಇಂಟರ‍್ವಲ್ ಅಲ್ಲದೆ ಥಿಯೇಟರಿನ ಬೆಳಕು ಉಂಟಾದ್ದರಿಂದ ರೀಲ್ ಕಟ್ಟಾಗಿದೆ ಎಂದುಕೊಂಡ.    
ಅಷ್ಟರಲ್ಲಿ ಅವಸರವೋ ಎಂಬಂತೆ ಚಾರ್ವಾಕಿ ನುಡಿದಳು, ಇಫ್ ಯು ಡೋಂಟ್ ಮೈಂಡ್, ವೀರಾ ಓಡಿಹೋಗಿ ಕಾಫಿ ತರ್ತೀಯ, ಕರೆಂಟು ಬರುವ ಮುನ್ನ?
ಓಕೆ ಎಂದಾತ ಉತ್ಸಾಹದಿಂದ ತನ್ನ ಕೈಚೀಲವನ್ನು ಸೀಟಿನಲ್ಲಿಯೇ ಇರಿಸಿ ಎದ್ದು ನಿಂತ ಇತ್ತ ತಿರುಗಿದಾಗ ಆಕೆ, ಕಾಸು ನಾನು ಕೊಡ್ತೇನೆ ಅಂದ್ರೆ ನೀನು ತೆಗೆದುಕೊಳ್ಳಲಾರೆ ಎಂಬುದೂ ನನಗೆ ಗೊತ್ತು. ಎರಡು ಕಾಫಿ ತನ್ನಿ ಎಂದದ್ದು ಕೇಳಿ ಆತ ಹಿಂದಿರುಗಿ ನಸುನಕ್ಕ. 
ಅಂದ ಹಾಗೆ ಸಿಮ್ಯುಲೇಷನ್ ಎಂಬ ಪದ ಕೇಳಿದ್ದೀಯ? ಎಂದಳು ಅಚಾನಕ್ಕಾಗಿ. ಅದೇ, ನಿಜವಲ್ಲದ್ದು, ಆದರೆ ತನ್ನದೇ ನೈಜತೆಯನ್ನು ಕಟ್ಟಿಕೊಡುವಂತಹದ್ದು, ಅಸಲಿ ಇಲ್ಲದ್ದು ಆದ್ದರಿಂದಲೇ ನಕಲಿ ಮಾಡಲಾಗದ್ದು, ಆದರೆ ಅನೇಕ ಪ್ರತಿಕೃತಿಗಳಿದ್ದು ಪ್ರತಿಯೊಂದೂ ಅಸಲಿಯಾಗಿರುವುದು॒ ಇತ್ಯಾದಿ ಇತ್ಯಾದಿ ಆತ ಹೇಳತೊಡಗಿದಂತೆ ಆಕೆ ತಡೆದು, ಬೇಜಾನ್ ಅರ್ಥ ಆಗಿಹೋಯಿತು. ಇಂದು ಅದರ ಅನುಭವ ನಿನಗೆ ಆಗಲಿದೆ ಎಂದಳು.
ಆತ ನಕ್ಕು, ಥ್ಯಾಂಕ್ಯೂ ಮೇಡಂ ಎಂದು ದಢದಢನೆ ಹೊರಗೋಡಿದ.
(೮೩)
ತನ್ನ ಪ್ರೇಮನಿವೇದನೆ ಅಥವ ’ಗುರುತ್ವಾಕರ್ಷಣದ’ ನಿವೇದನೆಯಿಂದಲೇ ಥ್ರಿಲ್‌ಗೊಂಡಿದ್ದ ವೀರಾ, ಕಾಫಿ ಕೊಳ್ಳುವುದು ತಡವಾದರೂ ತಾಳ್ಮೆ ಕಳೆದುಕೊಳ್ಳದೆ, ಎರಡು ಪೊಟ್ಟಣ ಪಾಪ್‌ಕಾರ್ನ್ ಕೂಡ ಕೊಂಡುಕೊಂಡ. ತಾನು ಅಂತೂ ಇಂತೂ ಪ್ರೊಪೋಸ್ ಮಾಡಿದ್ದಾಗಿದೆ, ಅದು ಸಪಲವೋ ವಿಪಲವೋ ಎಂಬುದಕ್ಕಿಂತ ಅದನ್ನು ಎಂಥಾ ಸೊಫಿಸ್ಟಿಕೇಶನ್ನಿನೊಂದಿಗೆ ಪ್ರಸ್ತುತ ಪಡಿಸಿದೆ ಎಂದು ಹೆಮ್ಮೆಯಿಂದ ಬೀಗಿದ. ಚಾರ್ವಾಕಿ ಮೇಡಂ ಅಲ್ಲದೆ ಬೇರೆ ಯಾರಾದರೂ ತನ್ನ ವಯಸ್ಸಿನ ಸರಳ ಹುಡುಗಿಯರಾಗಿದ್ದರೆ ಇಷ್ಟೊತ್ತಿಗೆ ತನ್ನ ನಿವೇದನೆಯ ತೀವ್ರತೆಗೆ ಅವರುಗಳು ಇಷ್ಟರಲ್ಲೇ, ಇಷ್ಟಕ್ಕೇ ಮನಸ್ಪೂರ್ವಕವಾಗಿ ತನ್ನವರಾಗಿಬಿಡುತ್ತಿದ್ದರು ಎಂದರಿತವನಂತೆ ಖುಷಿಗೊಂಡ. ಥಿಯೇಟರಿನ ಒಳಗೆ ಇಲ್ಲಿಯವರೆಗೂ ನಡೆದುದನ್ನೆಲ್ಲ ಶೀಘ್ರವಾಗಿ ಪುನರಾವಲೋಕನ ಮಾಡುತ್ತ, ಪೇಪರ್ ಕಪ್ಪುಗಳಲ್ಲಿ ಕಾಫಿ ಹಿಡಿದು, ಜೊತೆಗೆ ಪಾಪ್‌ಕಾರ್ನ್ ಪೊಟ್ಟಣಗಳನ್ನು ಹಿಡಿದು ನಿಧಾನಗತಿಯಲ್ಲಿ ಒಳಹೋಗುತ್ತಿದ್ದವನಿಗೆ ಅಲ್ಲಲ್ಲೇ ಅಂಟಿಸಲಾಗಿದ್ದ, ಒಳಗೆ ನಡೆಯುತ್ತಿದ್ದ ಸಿನೆಮದ ಪೋಸ್ಟರನ್ನು ಗಮನಿಸಲಾಗಲಿಲ್ಲ. ಅಲ್ಲಿ ಭಿತ್ತರಗೊಳಿಸಲಾಗಿದ್ದ ಸಿನೆಮದ ಹೆಸರು ’ಆಫೀಸರ್ ಅಂಡ್ ಅ ಜಂಟಲ್iನ್’! 
 
ವೀರಾ ಥಿಯೇಟರನ್ನು ಹೊಕ್ಕಾಗ ಸಿನೆಮ ಮುಂದುವರೆಯತೊಡಗಿತ್ತು. ಚಾರ್ವಾಕಿಯ ಎಡದಿಂದ ಎದ್ದು ಹೋದವನು ಈಗ ಬಲದಿಂದ, ಹಿಂದಿನಿಂದ ಆ ಸಾಲಿಗೆ ಬರತೊಡಗಿದ. ತನ್ನ ಸಾಲು ಕತ್ತಲಿನಲ್ಲಿ ತಪ್ಪಿದಂತಾಗಿ ಗೋಡೆಯ ಆಸರೆಯಲ್ಲೇ ಮತ್ತೂ ಮುಂದಕ್ಕೆ ಹೋಗಿ ಮತ್ತೆ ಹಿಂದುಮುಂದು ನೋಡತೊಡಗಿದ. ಎಲ್ಲೋ ಒಂದುಕಡೆ ನಿಂತು ನೋಡಿದ. ಆ ಸಾಲಿನ ಮದ್ಯಭಾಗದ ತುದಿಯಲ್ಲಿದ್ದಳು ಚಾರ್ವಾಕಿ. ಮತ್ತೂ ಗಮನಿಸಿ ನೋಡಿದ ವೀರಾ ಗೊಂದಲಕ್ಕೊಳಗಾದ. 
ಚಾರ್ವಾಕಿಯ ಬಲಕ್ಕೆ ಕುಳಿತಿದ್ದ ಅನೇಖ. ಆಕೆಯ ಬಲಗೈ ಈತನ ಎಡಗೈ ಹಾವುಗಳು ಸುತ್ತಿಕೊಂಡಂತೆ ಸುತ್ತಿಕೊಂಡು ನುಲಿಯುತ್ತಿದ್ದವು. ಇಬ್ಬರ ಮೇಲೂ ಆಕೆಯ ಬಲಗೈಲಿದ್ದ ಕೈಗಡಿಯಾರದಂತಹ ಯಂತ್ರದಿಂದ ಹೊಮ್ಮುತ್ತಿದ್ದ ತೆಳು ನೀಲಿ ಬಣ್ಣದ ಬೆಳಕು ಚೆಲ್ಲಿತ್ತು. ವೀರಾನ ಗಮನ ಆಕಸ್ಮಿಕವಾಗಿ ಬಲಕ್ಕೆ ಪರದೆಯ ಮೇಲಕ್ಕೆ ಹೋದಾಗ ಗಮನಿಸಿ ನೋಡಿದ. ಈಗಾಗಲೇ ತಾನು ನೋಡಿದ್ದ ’ಆಫೀಸರ್ ಅಂಡ್ ಅ ಜಂಟಲ್‌ಮನ್’ ಸಿನೆಮ ನಡೆಯುತ್ತಿತ್ತು!
ಒಂದು ಮಾಮೂಲು ಸಿನೆಮದಷ್ಟು ಸಮಯವೂ ಸಾಗದ ತನ್ನ ಗುರುತ್ವಾಕರ್ಷಣದ ಸಾಫಲ್ಯದ ಕಥನ, ಅಥವ ಮುಂದೊಂದು ದಿನ ವೀರಾನ ಗೆಳೆಯರು ವರ್ಗೀಕರಿಸಿದಂತೆ, ’ವೀರಾನ ಒಂದೂವರ್ ಹವರ್ ಲವ್ ಸ್ಟೋರಿ’ ಅಥವ ’ಟೀಚರ್ ಅಂಡ್ ಅ ಭಗ್ನಪ್ರೇಮಿ’ ಅಲ್ಲಿಗೆ ಔಪಚಾರಿಕವಾಗಿ ಕೊನೆಗೊಂಡಂತಾಯ್ತು. ಮತ್ತೆ ಆ ತುದಿಯಿಂದ ವೀರಾ ಹೇಗೋ ತನ್ನನ್ನು ಸಂಭಾಳಿಸಿಕೊಂಡು ಚಾರ್ವಾಕಿಯ ಪಕ್ಕಕ್ಕೆ ಬಂದ. ತನ್ನ ಕೈಚೀಲ ತೆಗೆದುಕೊಳ್ಳಲು ಬಂದಾತನನ್ನು ಚಾರ್ವಾಕಿ ಅದೇ ಮುತುವರ್ಜಿಯಿಂದ ಕಾಫಿ ಮತ್ತು ಪಾಪ್‌ಕಾರ್ನ್ ಅನ್ನು ಪಡೆದುಕೊಂಡು, ವೀರಾನನ್ನು ಬಲವಂತದಿಂದ ಎಂಬಂತೆ ಕುಳ್ಳಿರಿಸಿದಳು. ಪಡೆದುಕೊಂಡ ಎರಡೂ ಕಪ್ ಕಾಫಿಯಲ್ಲಿ ಒಂದೂ ತನಗೆ ಬರಲಿಲ್ಲ. ನಿನ್ನ ಕಾಫಿ ಅಲ್ಲೇ ಆಗಿರಬೇಕಲ್ಲ ಎಂದು ಸಹಜವಾಗಿ ನುಡಿದಳು ಚಾರ್ವಾಕಿ. ಅತ್ತ ಅನೇಖನಿದ್ದದ್ದು ಕಾಣುತ್ತಿದ್ದರೂ ಆತ ಹಾಯ್ ಎಂದು ಕೂಡ ಹೇಳಿರಲಿಲ್ಲ ತನ್ನ ಗೆಳೆಯ ವೀರಾನಿಗೆ. ನನಗೇನೋ ಇರಿಸುಮುರಿಸು ಆಗುತ್ತಿದೆ, ನಾನು ಹೋಗುತ್ತೇನೆ ಎಂದು ಎದ್ದ ವೀರಾ, ತನಗೆ ತಾನೇ ಎಂಬಂತೆ ಚಾರ್ವಾಕಿಗೆ ಕೇಳಿಸುವಂತೆ ನುಡಿದ. 
ಓಕೆ. ಈ ಸಿನೆಮ ಸ್ವಲ್ಪ ಹಾಗೇ. ಎಲ್ಲರಿಗೂ ಜೀರ್ಣಿಸಿಕೊಳ್ಳಲಾಗದು. ಸಿಮ್ಯುಲೇಷನ್ನಿಗೆ ಒಳ್ಳೆ ಸೌಂದರ್ಯಶಾಸ್ತ್ರೀಯ ಉದಾಹರಣೆ. ಮತ್ತೆ ಸಿಗುವ ’ಸಮೂಹ ಶಿಲ್ಪ’ವನ್ನು ಕುರಿತಾದ ಸೆಮಿನಾರಿನಲ್ಲಿ," ಎಂದಳು ಪರದೆಯಿಂದ ಕಣ್ಣು ಕೀಳದ ಚಾರ್ವಾಕಿ. ಜೊತೆಗೆ ದಪ್ಪನೆಯ ಕವರೊಂದನ್ನು ವೀರಾನ ಕೈಗೆ ಬಲವಂತವಾಗಿ ತುರುಕಿದಳು,"ಈ ಓದು ಇಂದು ಇಲ್ಲಿ ನಡೆದುದನ್ನು ಅರ್ಥೈಸಿಕೊಳ್ಳಲು ಒಳ್ಳೆಯ ಪ್ರವೇಶಿಕೆಯಾಗಬಲ್ಲದು. ಓದು" ಎಂದಳು.
 
ಕನ್ನಡ ಸಾಹಿತ್ಯವು ’ಭಾರವಾದ ಹೆಜ್ಜೆಗಳನ್ನಿಡುತ್ತ’ ಎಂದು ಮಾನಸಿಕ ಕಸಿವಿಸಿಯನ್ನು ವರ್ಣಿಸುತ್ತವಲ್ಲ, ಅದೇ ಶೈಲಿಯಲ್ಲಿ ವೀರಾ ಎದ್ದು ಹೊರಬರತೊಡಗಿದ. ಅದೇ ಕನ್ನಡ ಸಿನೆಮಗಳ ಕ್ಲೈಮಾಕ್ಸುಗಳಂತೆ ಬಾಗಿಲಿನ ಬಳಿನಿಂತು ಹಿಂದಿರುಗಿ ಚಾರ್ವಾಕಿ ಕುಳಿತಿದ್ದೆದೆ ಕಣ್ಣು ಹಾಯಿಸಿದ. ಅಲ್ಲಿ ಚಾರ್ವಾಕಿ ಒಬ್ಬಳೇ ತನ್ನ ಕೈಯಲ್ಲಿದ್ದ ಯಂತ್ರ-ಗಡಿಯಾರದ ಬಳಿ ಮುಖ ಇರಿಸಿದ್ದಳು. ಅದರೊಳಗಿಂದ ಪ್ರಖರವಾದ ತೆಳುನೀಲಿ ವರ್ಣ ಆಕೆಯ ಮುಖದ ಮೇಲೆ ಬೀಳುತ್ತಿತ್ತು. ಆಕೆಯ ಪಕ್ಕದ ಸೀಟು ಖಾಲಿಯಿತ್ತು, ಅನೇಖ ಅಲ್ಲಿರಲಿಲ್ಲ. ಮತ್ತು ಪರದೆಯ ಮೇಲೆ ಬ್ರೂಸ್‌ವಿಲ್ಲಿಯ ಮ್ಲಾನವಾದ ಮುಖಭಾವವು ಕ್ಲೋಸಪ್ಪಿನಲ್ಲಿ ಕ್ರಮೇಣ ಫೇಡ್ ಆಗತೊಡಗಿತ್ತು!
     ಆ ಒತ್ತಡದಲ್ಲೂ ಚಾರ್ವಾಕಿ ನೀಡಿದ ಪಾಕೆಟನ್ನು ಥಿಯೇಟರಿನ ಹೊರಗೆ ಬಂದ ಕೂಡಲೆ ಒಡೆದು ನೋಡಿದ. ಅದರಲ್ಲಿ ’ಲಂಡನ್ ಪ್ರವಾಸಕಥನ’ದ ಭಾಗ ೮, ೯, ೧೦ ಹಾಗೂ ೧೧ ಇದ್ದಿತು
(ಓದಿ: 
//
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):