ನೆನಪಿನ ಚಿತ್ರಕಲಾ ಶಾಲೆ: ಭಾಗ ೨೪ -- ’ಅಕ್ಷರವಿಲ್ಲದವಳಿಗೆ ಚಿತ್ರವಿಲ್ಲ’

5

                                                                                     (೭೧)

ಸೋಕುಮಾರಿ, ೨೦೧೧:

    

    ಕಾಲವು ಹಿಂದೆ ಸರಿವ ಸಾಧ್ಯತೆಯನ್ನು ಎಷ್ಟೇ ತಾತ್ವಿಕ ತರ್ಕಕ್ಕೊಳಪಡಿಸಿದರೂ ಸಹ, ಪರಿಷತ್ತಿನ ೧೯೮೮ರ ಹುಡುಗರೊಂದಿಗೆ ಫೇಸ್‌ಬುಕ್ಕಿನಲ್ಲಿ ಚಾಟ್ ಮಾಡಲು ಆರಂಭಿಸಿ ತಿಂಗಳುಗಳೇ ಕಳೆದಿದ್ದಾಗ್ಯೂ, ’ಪರಿಷತ್ ಬಾಯ್ಸ್-೧೯೮೮’ ಅನ್ನುವ ಯಾವುದೋ ತರಲೆ ಕಂಪ್ಯೂಟರ್-ಸಾವಿ ಗುಂಪೇ ಈ ಚಾಟ್ ಮೆಸೇಜುಗಳನ್ನು ಈ ಕಾಲದಿಂದಲೇ ಕಳಿಸುತ್ತಿದೆ ಎಂಬ ತರ್ಕವೇ ಹೆಚ್ಚು ಭೌತಿಕವಾದ, ಸತ್ಯ ಮತ್ತು ವಸ್ತುನಿಷ್ಠತೆಗೆ ಹತ್ತಿರವಾದ ಸಾಧ್ಯತೆಯಾಗಿ ಕಾಣತೊಡಗಿದೆ. ಮತ್ತೊಂದೆಡೆ, ಆ ಹುಡುಗರು ನೀಡಿದ ಕೆಲವು ವಿವರಗಳನ್ನು (ಈಗ ಸಧ್ಯಕ್ಕೆ ೧೯೮೮ರಲ್ಲಿ ನಡೆದದ್ದನ್ನು ನೆನ್ನೆಯಷ್ಟೇ ನಡೆದಂತೆ ಇರುವ ವಿವರಗಳು) ಮೇಧಾವಿಯೊಬ್ಬನ ಹೊರತು ಮತ್ತೊಬ್ಬನಿಗೆ ನೆನಪಿಟ್ಟುಕೊಳ್ಳುವುದು ಸಾಧ್ಯವೇ ಇಲ್ಲ. ಅಂದರೆ ಈ ’ಕಾಲದ ಹಿಮ್ಮುಖ ಪಯಣದ ಸಾಧ್ಯತೆ’ಯ ಸಾಧ್ಯತೆಯು ಶೇಖಡ ೫೦ರಷ್ಟಾದರೂ ಸತ್ಯವೆಂದಂತಾಯ್ತು. ಅಸ್ಖಲಿತ, ಏಕಸಂಧಿಗ್ರಾಹಿಯಾದ ನನಗೆ ಮಾತ್ರ ಆಗಿನ ಘಟನೆಗಳ ವಿವರಗಳು ಏನೆಲ್ಲಾ ನೆನಪಿದ್ದವೋ ಅವುಗಳನ್ನೆಲ್ಲಾ ಈ ಹುಡುಗರ ಬರಹಗಳು ಮೂಡಿಸುತ್ತಿವೆ ಎಂದರೆ, ಯಾರೋ ಒಬ್ಬರು ಈ ಕಾಲದಿಂದ ಅಷ್ಟೋಂದು ವಿವರಗಳನ್ನು ಹೆಕ್ಕಿ ತೆಗೆವುದು ಸಾಧ್ಯವೇ ಇರಲಿಲ್ಲ, ನನ್ನನ್ನು ಹೊರತುಪಡಿಸಿ. ಈ ಫಿಫ್ಟಿ-ಫಿಫ್ಟಿ ಆಟವು ಸಧ್ಯದ ನನ್ನ ಆತ್ಮಚರಿತ್ರೆಯ ಪ್ರಮುಖ ಅಧ್ಯಾಯವಾಗಿರಲೂ ಸಾಕು. ಅಥವ ಈ ಮಧ್ಯವಯಸ್ಕರ ಮಾನಸಿಕ ಸ್ಥಿತಿಯಿಂದಾಗಿ ಹೀಗೆಲ್ಲ ಆಗುತ್ತದೆಯೋ ಏನೋ.

    ಇದೊಂದು ಆದಿಭೌತಿಕ ಅನುಭವವಾದಂತಾಗಿದೆ ಏಕೆಂದರೆ ನನ್ನ ಟೆಕ್ನೋ-ಸಾವಿ ವಿದ್ಯಾರ್ಥಿಗಳಿಂದಲೂ ಆ ೮೮-ಹುಡುಗರ ಮೆಸೇಜು ಯಾವ ಐ.ಪಿ ಅಡ್ರೆಸ್ಸಿನಿಂದ ಬರುತ್ತಿದೆಯೆಂಬ ವಿಷಯವನ್ನು ಎರಡು ತಿಂಗಳಿಂದಲೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಯಾವುದೇ ಐಪಿ ಅಡ್ರೆಸ್ ಇಲ್ಲದೆ ಫೇಸ್‌ಬುಕ್ಕಿಗೆ ಮೆಸೇಜು ಕಳಿಸಲು ಸಾಧ್ಯವಾಗುವುದಾದರೂ ಹೇಗೆ? ಎಂಬ ನನ್ನ ಪ್ರಶ್ನೆಯು ಯಾರೋ ಪ್ರೊಫೆಷನಲ್ ಟೆಕ್ನೋ-ಜಂಕಿಂiiದಂತೆನಿಸಿರಬಹುದು ಆ ನನ್ನ ತಾಂತ್ರಿಕ ಸಿದ್ಧಿಯ ಶಿಷ್ಯರುಗಳಿಗೆ. ಕಲಾಇತಿಹಾಸಕ್ಕೆ ಅಗತ್ಯವಾದ ಪವರ್‌ಪಾಯಿಂಟ್ ಪ್ರೆಸೆಂಟೇಷನ್, ವಿಎಲ್‌ಸಿ ಮೀಡಿಯ ಪ್ಲೇಯರಲ್ಲಿ ವಿಡಿಯೋ ಪ್ಲೇ ಮಾಡುವುದು, ಎಂಎಸ್ ವರ್ಡಿನಲ್ಲಿ ಯದ್ವಾತದ್ವಾ ಇಂಗ್ಲಿಷ್ ಹಾಗೂ ಬರಹ ಕನ್ನಡದಲ್ಲಿ ಬರಹವನ್ನು ಬರೆಯುವುದನ್ನು ಬಿಟ್ಟರೆ, ಮಿಕ್ಕುಳಿದಂತೆ ನಾನು ಕಂಪ್ಯೂಟರ್-ಅನಕ್ಷರಸ್ಥೆ.   

     ’ಮೇಡಮ್ಮಿಗೆ ಯಾಕೆ ಈ ಐಪಿಗಳು ಬೇಕು?’ ಎಂದು ಅವರುಗಳು ತಮ್ಮತಮ್ಮಲ್ಲೇ ಮಾತನಾಡಿಕೊಂಡರೂ (ದೀಪಕ್, ವೆಂಕಟೇಶ್, ಮಂಸೋರೆ ಮುಂತಾದವರು) ನನ್ನನ್ನು ಮಾತ್ರ ಅವರು ನೇರವಾಗಿ ಕೇಳಿಲ್ಲ. ಕೇಳದಿದ್ದಲ್ಲಿ ಬೇಕಿದ್ದೆಲ್ಲವನ್ನೂ ಕಲ್ಪಿಸಿಕೊಳ್ಳಬಹುದೆಂಬ ಕಳ್ಳಹುನ್ನಾರವಿರಬಹುದು. ಜಗತ್ತು ಡಿಜಿಟಲ್ ಆದ ಮೇಲೆ ಜನ ಯೋಚಿಸುವ ರೀತಿಯ ಆತ್ಮವೇ ಬದಲಾಗಿಹೋಗಿದೆ. ಕೇವಲ ಇಪ್ಪತ್ತು ವರ್ಷಗಳಲ್ಲಿ ಎಷ್ಟೆಲ್ಲ ವ್ಯತ್ಯಾಸ! ದಿನಕ್ಕೆ ಮುವತ್ತರಿಂದ ಐವತ್ತು ಸ್ಕೆಚಸ್ ಮಾಡುತ್ತಿದ್ದ ಆ ದಿನಗಳಲ್ಲಿ ಎಲ್ಲ ಸ್ಕೆಚ್‌ಗಳನ್ನೂ ಎದುರಿನ ಜಗತ್ತನ್ನೂ ನೋಡಿಯೇ, ಬಸ್‌ಸ್ಟಾಪುಗಳಲ್ಲಿ, ರೈಲ್ವೇ ಸ್ಟೇಷನ್ನುಗಳಲ್ಲಿ ಚಿತ್ರ ಮೂಡಿಸಬೇಕಿತ್ತು. ಮೊದಲೇ ಮುದ್ರಿತವಾಗಿದ್ದ ಚಿತ್ರಗಳನ್ನು ನೋಡಿ ಚಿತ್ರರಚಿಸಿದ್ದರೆ ನಮ್ಮ ಗುರುಗಳು ಸುಲಭವಾಗಿ ಪತ್ತೆಹಚ್ಚಿ ಬಿಡುತ್ತಿದ್ದರು, ಹಾಗೆ ಕಾಪಿ ಮಾಡಿದ ಪ್ರತಿಯೊಂದು ಚಿತ್ರಕ್ಕೂ ಹತ್ತು ಚಿತ್ರವನ್ನು ರಚಿಸುವ (ನೇರವಾಗಿ ಜಗತ್ತನ್ನು ನೋಡಿ ಮಾಡಲಾದ ಸ್ಕೆಚ್‌ಗಳು) ದಂಡ ವಿಧಿಸುತ್ತಿದ್ದರು. ಈಗ ದಿನಕ್ಕೆ ನೂರಾರು ಚಿತ್ರಗಳನ್ನು, ಫೊಟೋಗಳನ್ನು, ಸ್ಕೆಚ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆಯೇ ವಿನಹ ಕಲಾವಿದ್ಯಾರ್ಥಿಗಳು.

    ಉಮ್ಮಿ ಎಂಬ ನನ್ನ ವಿದ್ಯಾರ್ಥಿಯಂತೂ ಇತ್ತೀಚೆಗೆ ವೈರಸ್-ಫೀವರ್‌ನಿಂದ ಬಳಲುತ್ತಿದ್ದಾನೆ. ಯಾರೋ ತನ್ನನ್ನು ಸ್ಕೈಪ್ ಕ್ಯಾಮರದಿಂದ ನಿರಂತರವಾಗಿ ನೋಡುತ್ತಿದ್ದಾರೆ, ಯಾರೋ ನನ್ನ ಈಮೈಲ್ ಅಕೌಂಟಿಗೆ ಬೇಕೆಂದೇ ಮಿಕೆಲೆಂಜೆಲೋ ಮತ್ತು ವ್ಯಾನ್‌ಗೋ ಎಂಬ ಕಲಾವಿದರುಗಳ ಹೆಸರುಗಳನ್ನುಳ್ಳ ವೈರಸ್ ಅನ್ನು ಬೇಕೆಂದೇ ಅಳವಡಿಸತೊಡಗಿದ್ದರೆ ಎಂದೆಲ್ಲಾ ಭ್ರಮಿಸತೊಡಗಿ ಎಲ್ಲರಿಗೂ ಅಸಂಬದ್ಧ ಈಮೈಲ್‌ಗಳನ್ನೂ ಕಳಿಸುತ್ತಿದ್ದಾನೆ. ’ಸೂಪರ್‌ಮ್ಯಾನ್ ಎರಡ’ರಲ್ಲಿ ಯಂತ್ರಬಾಹುಗಳು ಅದನ್ನು ಸೃಷ್ಟಿಸಿ ಬಳಸಿಕೊಳ್ಳಲು ಪ್ರಯತ್ನಿಸುವ ವಿಜ್ಞಾನಿಯನ್ನೇ ತಮ್ಮ ಆದೇಶದ ಸುಪರ್ದಿಗೆ ತೆಗೆದುಕೊಳ್ಳುತ್ತಾರಲ್ಲ, ಹಾಗಾಯಿತು ಉಮ್ಮಿಯ ಕಥೆ. ಆತ ತನ್ನನ್ನು ಈ ವರ್ಚುಯಲ್ ಜಗತ್ತು ನಿಯಂತ್ರಿಸುತ್ತಿದೆ ಎಂದು ಅದೇ ವರ್ಚ್ಯುಯಲ್ ಜಗದ ಈಮೇಲ್ ಮೂಲಕ ಎಲ್ಲರಿಗೂ ಗೋಳು ಹುಯ್ದುಕೊಳ್ಳುತ್ತಿದ್ದಾನೆ! ಆತ ನಿದ್ರೆಯೂ ಮಾಡದೆ, ಇನ್‌ಸೋಮ್ನಿಯದಿಂದ ನರಳುತ್ತಾ, ಕಂಗಳ ಕೆಳಗೆ ಕಪ್ಪುವೃತ್ತಗಳನ್ನು ಬರಿಸಿಕೊಂಡಿದ್ದಾನೆ. ವಚ್ಯುಯಲ್ ಜಗದ ಮೂಲಗುಣವಾದ ಸಿಮ್ಯುಲೇಷನ್ನಿನಿಂದ ಹುಟ್ಟಿಸಿಕೊಳ್ಳಲಾದ ವೈದ್ಯಕೀಯ ಖಾಯಿಲೆಗಳಿಗೆ ವೈದ್ಯವೃತ್ತಿಯಲ್ಲಿ ನಿವಾರಣೆ ಇಲ್ಲವೆಂದು ಜೀನ್ ಬೋದ್ರಿಯಾರ್ಡ್ ವಾದಿಸಿಲ್ಲವೆ? ಉಮ್ಮಿಯ ಸಮಸ್ಯೆ ಇತ್ತೀಚೆಗೆ ಉಲ್ಭಣಗೊಂಡಿದ್ದು ಆತನಿಗೆ ಪರಿಹಾರ ಸಧ್ಯಕ್ಕೆ ಕಾಣದಾಗಿದೆ.  

* *

    ಹೋಗಲಿ ೧೯೮೮ರ ಅನೇಖ, ಮಮಾ, ವಿರಾ, ಕಾಜ್‌ರೋಪಿ, ದಿಗುಮಾಮ್, ನಲ್ಲಸಿವ, ಮಲ್ಲುಮೋಗನ, ಸ್ವತಃ ನನ್ನ ಹೆಸರುಳ್ಳ ಅಥವ ನಾನೇ ಆದ ಸೋಕುಮಾರಿ-೮೮ ಮುಂತಾದವರುಗಳು ನನಗೆ ಬರೆದ ಚಾಟ್ ಸಂದೇಶಗಳನ್ನು ಪ್ರಿಂಟ್‌ಔಟ್ ತೆಗೆದು ಅವುಗಳೊಳಗೇ ಈ ಇಡೀ ಕಾಲ-ಸ್ಥಿತ್ಯಂತರದ ಬಗ್ಗೆ ಸಾಕ್ಷಿ, ಕ್ಲೂಗಳನ್ನು ಹುಡುಕತೊಡಗಿದೆ. ಯೌವ್ವನದ ಪಡ್ಡೆಹುಡುಗರು ಮದ್ಯವಯಸ್ಸಿನ ಹೆಣ್ಣೊಬ್ಬಳ ಬಗ್ಗೆ ಕೇವಲ ಆಕೆಯ ಬರಹದ ಆಧಾರದಿಂದ-ಅದೂ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಮಾಯವಾಗುವ ಬರಹದ ಮಾತಿನ ವಿನ್ಯಾಸದ ಆಧಾರದ ಮೇಲೆ ಏನೆಲ್ಲಾ ಕಲ್ಪಿಸಿಕೊಂಡಿರಬಹುದು. ಆ ಹುಡುಗರಲ್ಲಿ ನನ್ನ ಮಾತುಗಳು ಏನೆಲ್ಲಾ ಫ್ಯಾಂಟಸಿಗಳನ್ನು ಉದ್ದೀಪಿಸಿರಬಹುದು! ’ನೀವು ಮದುವೆ ಯಾಕಾಗಿಲ್ಲ? ನಿಮ್ಮ ’ಅಗತ್ಯಗಳನ್ನೆಲ್ಲಾ’ ಹೇಗೆ ಪೂರೈಸಿಕೊಳ್ಳುತ್ತೀರ’ ಎಂದೆಲ್ಲಾ ಈರಡಬ್ರಿ ಬರೆದಿದ್ದ. ’ನೀವೆಲ್ಲಾ ಹೇಗೋ ಹಾಗೇ ನಾನು. ಆಸೆ ನಿರ್ದಿಷ್ಟ ವಯಸ್ಸಿಗೆ ಹುಟ್ಟುತ್ತದೆಯೇ ಹೊರತು ವಯಸ್ಸಾಗುವುದರೊಂದಿಗೆ ಅದು ನಾಶವಾಗುವುದಿಲ್ಲ’ ಎಂದೆಲ್ಲಾ ಫಿಲಾಸಫಿ ಹೊಡೆದಾಗ ಆತ ಆ ಮಾತುಗಳಿಗೆ ಸರಿದೂಗಿಸುವ ಪದಗಳನ್ನು ಜೋಡಿಸಲಾಗದೆ, ಬಹುಶಃ ಅದೇ ಪ್ರಶ್ನೆಗಳನ್ನು ಪುನರುಚ್ಛರಿಸಲಾಗದಷ್ಟು ಸೂಕ್ಷ್ಮಮತಿಯಾಗಿ, ಸುಮ್ಮನಾಗಿದ್ದ. 

    ಅವರ ಇರುವಿಕೆಯ ಆಯಾಮವನ್ನು ಅವರ ಬರವಣಿಗೆಯ ಸಾಕ್ಷಿ ಆಧಾರದಿಂದಲೇ ಅನ್ವೇಷಿಸುವ ಕೆಲಸವನ್ನೂ ಈ ಎರಡು ತಿಂಗಳಲ್ಲಿ, ಬಾಯ್ಸ್ ಕಲಾಶಾಲೆಯ ಕಲಾಇತಿಹಾಸದ ಬೋಧನೆಯ ಜವಾಬ್ದಾರಿಯ ಜೊತೆಗೇ ಶೋಧಿಸುತ್ತಿದ್ದೇನೆ. ಅಸಲಿ ಜಗತ್ತಿನ ಅಸಲು ಆಯಾಮಕ್ಕೆ ಸೇರಿದವರಲ್ಲ, ೧೯೮೮ರಿಂದ ೨೦೧೧ರಲ್ಲಿರುವ ನನಗೆ ಫೇಸ್‌ಬುಕ್ ಮೆಸೇಜು ಕಳಿಸುತ್ತಿರುವ ಇವರೆಲ್ಲ--ಎಂಬುದು ನನ್ನ ಒಂದು ಪ್ರಮೇಯ. ಆದರೆ ಈ ತಾತ್ವಿಕ ಪ್ರಮೇಯದ ಒಂದು ಮುಖ್ಯ ತೊಡಕು ಎಂದರೆ ೧೯೮೮ರಲ್ಲಿ ಫೇಸ್‌ಬುಕ್ ಎಂಬ ತಾಂತ್ರಿಕ ಸಲಕರಣೆಯು ಅಸ್ತಿತ್ವದಲ್ಲೆ ಇರಲಿಲ್ಲ. ಅದರ ಕತೃ ಅಮೆರಿಕದ ಮಾರ್ಕ್ ಎಲಿಯಟ್ ಝಕರ್‌ಬರ್ಗ್ (೧೯೮೪) ಆಗಿನ್ನೂ ನಾಲ್ಕೈದು ವರ್ಷದ ಹಸುಳೆ. ೨೦೦೪ರಲ್ಲಿ ಆತ ಫೇಸ್‌ಬುಕ್ಕನ್ನು ಆರಂಭಿಸಿದಾಗಿನ ತಾರೀಕನ್ನು ಮನಸ್ಸಿನಲ್ಲಿರಿಸಿಕೊಂಡು ಅದರ ಮಾರನೇವರ್ಷ ಕನ್ನಡದಲ್ಲಿ ಇಂಟರ್‌ನೆಟ್ಟಿನಲ್ಲಿ ಮೂಡಿಬಂದ ’ಲಂಡನ್ ಪ್ರವಾಸಕಥನ’ವನ್ನು (ಸಂಪದದಲ್ಲಿ) ಆಕಸ್ಮಿಕವಾಗಿ ಆಯ್ಕೆ ಮಾಡಿ ಆ ಲಿಂಕನ್ನು ಫೇಸ್‌ಬುಕ್ ಮುಖಾಂತರ ೨೦೧೧ರಲ್ಲಿ ನಾನು ಕಳಿಸಿದ್ದು ೧೯೮೮ರಲ್ಲಿದ್ದೇವೆಂದು ಇನ್ನೂ ಭಾವಿಸುತ್ತಿರುವ ನನ್ನ ಆ ಆಗಿನ ಸಹಪಾಠಿಗಳಾಗಿದ್ದ ಪರಿಷತ್ತಿನ ವಿದ್ಯಾರ್ಥಿಗಳಿಗೆ. ’ಇಲ್ಲಿ ಯಾವುದೂ ಆಕಸ್ಮಿಕವಲ್ಲ’ ಎಂಬುದನ್ನು ನಾನು ನಂಬಲಾರೆನಾದರೂ ಆಕಸ್ಮಿಕಕ್ಕೇ ಒಂದು ವಿನ್ಯಾಸವಿದೆ ಎಂದು ಈಗೀಗ ನನ್ನ ಅರಿವಿಗೆ ಬರುತ್ತಿದೆ.

    ಮತ್ತೊಂದು ತೊಡಕೆಂದರೆ, ೧೯೮೮ರಲ್ಲಿ ಪತ್ರದಲ್ಲಿ ಬರೆದ ಅಕ್ಷರಗಳು ೨೦೧೧ರಲ್ಲಿ ಇಂಟರ್‌ನೆಟ್ ನೆಟ್‌ವರ್ಕ್ ಆದ ಫೇಸ್‌ಬುಕ್ಕಿನ ಸಂದೇಶವಾಗಿ ಮೂಡಿಬರುವಾಗ ಪಠ್ಯ (ಟೆಕ್ಸ್ಟ್) ಪಠ್ಯಾತೀತವಾಗುತ್ತದೆ. ಅಂದರೆ ನಾಲ್ಕು ಎಂಎಂ ಅಳತೆಯ ಅಕ್ಷರವನ್ನು ಇನ್‌ಲ್ಯಾಂಡ್ ಕಾಗದದ ಮೇಲೆ ಬರೆದಲ್ಲಿ ಅದು ಅಳಿಸಿಹೋಗುವವರೆಗೂ, ನೂರಾರು ವರ್ಷಕಾಲ, ಅದೇ ಅಳತೆಯಲ್ಲಿರುವುದು ವಿಧಿನಿಯಮ. ಆದರೆ ಕೇವಲ ಇಪ್ಪತ್ತೊಂದು ವರ್ಷ ವ್ಯತ್ಯಾಸದಲ್ಲಿ ಅದು ಹೈಪರ್‌ಟೆಕ್ಸ್‌ಟ್ (ಪಠ್ಯಾತೀತ) ಆಗಿ ಬರುವುದು ನಮಗೆ ಗೊತ್ತಿರುವ ಮೂರು ಆಯಾಮಗಳನ್ನು ಒಡೆದು ಬರುವುದು ಎಂದೇ ಅರ್ಥ. ೮೮ರಲ್ಲಿ ನಿಶ್ಚಿತವಾಗಿದ್ದ ಅಕ್ಷರವು ೨೦೧೧ಕ್ಕೆ ಬರುವುದೆಂದರೇನು, ೨೦೧೧ಕ್ಕೇ ಬರುವುದೆಂದರೇನು, ಹಾಗೆ ಬಂದಾಗ ತನ್ನ ಅಸಲಿ ಅಳತೆಯನ್ನು ಹಾಗೂ ಅಳತೆಯ ಅಸಲಿತನವನ್ನು ಬಿಡಿಸಿಕೊಂಡು ಬರುವುದೆಂದರೇನು-ಇವೆಲ್ಲವುಗಳ ಹಿಂದೆ ಒಂದು ನಿಗೂಢವಿದೆಯೆಂದು ಭಾವಿಸೋಣವೆಂದರೆ, ಅದಕ್ಕೆ ಚಿತ್ತಾಲ ಹಾಗೂ ತೇಜಸ್ವಿಯವರ ಕಥನಗಳ ಅನುಕರಣೆಯ ಗುಣವು ಬಂದುಬಿಡುತ್ತದೆ ಎಂದುಕೊಳ್ಳುತ್ತ, ಎಲಾ ಸೋಕುಮಾರಿ, ಏನು ನಿನ್ನ ಧಿಮಾಕು. ಅವರುಗಳ ಪ್ರಭಾವವೂ ಸಹ ನಿನ್ನ ಬರಹದ ಬಗ್ಗೆ ನಿನಗಿರುವ ಕಟ್ಟೆಚ್ಚರವು ತೀರ ’ಅಸಲಿ’ಯಾಗಿರಬೇಕೆಂಬ ಸ್ವಾರ್ಥದಿಂದ ಹುಟ್ಟಿದ್ದಲ್ಲವೆ? ಕೇವಲ ಪತ್ತೇಧಾರಿ ಹಂದರವು ನಿನ್ನ ಚಿಂತನಾಲಹರಿಯೊಳಕ್ಕೆ ಬಂದೀತೆಂಬ ಕಾರಣಕ್ಕೆ, ಚಿತ್ತಾಲ-ತೇಜಸ್ವಿಯವರ ಪ್ರಭಾವವನ್ನು ನಿನಗೆ ನೀನೇ ಆರೋಪಿಸಿಕೊಂಡು ತಪ್ಪಿಸಿಕೊಳ್ಳಲು ನೋಡುತ್ತೀಯಲ್ಲ. ನೀನು ಬಳಸುವ ಪ್ರತಿಯೊಂದು ಪದವೂ ನಿನಗೆ ಎಲ್ಲಿಂದಲೋ, ಎಲ್ಲೋ ಒಂದೆಡೆಯಿಂದ, ಎಲ್ಲೆಲ್ಲಿಂದಲೋ ಎರವಲು ಬಂದಿದ್ದೇ ಅಲ್ಲವೆ? ಎಂದು ನನಗೆ ನಾನೇ ಕೇಳಿಕೊಂಡು, ವಾದಪ್ರತಿವಾದಗಳ ನಡುವೆ ಅನೇಕ ವಿಚಾರಗಳನ್ನು ಸುಟ್ಟುಹಾಕಿಬಿಟ್ಟೆ, ಸಿಗರೇಟಿನ ಸಹಾಯದಿಂದ. ಸಧ್ಯದ ದ್ವಂದ್ವಯುದ್ಧವು ಆ ಕಾಲ ಮತ್ತು ಈ ಕಾಲಗಳ ನಡುವೆಯೋ ಅಥವ ನಿಶ್ಚಿತ ನೈಜ ವಿನ್ಯಾಸವುಳ್ಳ ಮತ್ತು ನಿರಂತರವಾಗಿ ವ್ಯತ್ಯಾಸಗೊಳ್ಳುವ ಪದಗಳ ನಡುವೆಯೋ ಎಂದು ಯೋಚಿಸುತ್ತಿದ್ದಾಗ, ಡೆರಿಡನ ವಾದ ನೆನಪಿಗೆ ಬಂತು. ಮುದ್ರಿತವಿರಬಹುದು, ಕಂಪ್ಯೂಟರಿನಲ್ಲಿ ಟೈಪಿತ ಪದಗಳಿರಬಹುದು, ಕಣ್ಣಿಗೆ ಕಂಡ ಅಕ್ಷರಗಳೂ ಸಹ ಬರಹವೆನಿಸದು. ಮುದ್ರಿತ ಅಥವ ಟೈಪಿತ ಪದಗಳೆಂದರೆ ಮನಸ್ಸಿನಲ್ಲೇ ಮೊದಲೇ ಆಗಿರುವ ಬರವಣಿಗೆಯ ಪ್ರಕಟಿತ, ನಿರೂಪಿತ ರೂಪವಷ್ಟೇ. ಸ್ವತಃ ಪ್ರಕಟಿತ/ಟೈಪಿತ ಪದಗಳು ತಾತ್ವಿಕವಾಗಿ ಪದಗಳಲ್ಲ!

     ಈ ತರ್ಕದಿಂದ ನಾನು ಯೋಚಿಸತೊಡಗಿದ್ದೇನೆಂದರೆ, ನಿಶ್ಚಿತ ಭೌತಿಕ ರೂಪ/ಆಕಾರ/ಅಳತೆಯುಳ್ಳ ಪದಗಳು ೧೯೮೮ರಿಂದ ಭೌತಿಕತೆಯನ್ನು ಕಳೆದುಕೊಂಡ ೨೦೧೧ರ ಸಿಮ್ಯುಲೇಟೆಡ್ ಪದಗಳಾಗಿ ಪರಿವರ್ತಿತವಾದಾಗ, ಮತ್ತದು ತಿರುವು ಮರವೂ ಆದಾಗ, ಪದಗಳು, ಅಕ್ಷರಗಳು, ವಾಕ್ಯಗಳು ’ದೇಹ ಕಳೆದುಕೊಂಡ ಪ್ರೇತ’ಗಳಾಗಿ ಕಾಲದಲ್ಲಿ ಮುಮ್ಮುಖವಾಗಿ ಚಲಿಸಿ, ಅದೇ ೨೦೧೧ರಿಂದ ೮೮ಕ್ಕೆ ಹಿಂದಿರುಗಿದ ’ಪದಗಳ ಪ್ರೇತಾತ್ಮವು ಭೌತಿಕ ಮಾನವ ದೇಹವನ್ನು ಪುನರ್‌ಸಂಪಾದಿಸಿಕೊಂಡಂತಾಗುವ’ ವ್ಯವಹಾರದಲ್ಲಿ ಕಾಲದ ಅರ್ಥವನ್ನೇ ಸೀಳುಂಟು ಮಾಡುವ ಪ್ರಕ್ರಿಯೆ ನಡೆದಂತೆನಿಸಿತು. ಕಾಲ ಮುಮ್ಮುಖವಾದಾಗ ಭೌತಿಕತೆಯ ನಾಶ, ಹಿಮ್ಮುಖವಾದಾಗ ಅದರ ಪುನರ್‌ಸಂಪಾದನೆ-ಇದು ಈ ಫೇಸ್‌ಬುಕ್ ಚಾಟಿನ ಮುಖಾಂತರ ನನಗೆ ದಕ್ಕಿದ ಒಳನೋಟ.      

* * *

 ಈಗಲೂ ೧೯೮೮ರಲ್ಲಿ ಜೀವಿಸಿರುವ (’ಜೀವಿಸುತ್ತಿರುವ’ ಎಂದೇನಲ್ಲ) ನನ್ನ ಇಪ್ಪತ್ತಮೂರು ವರ್ಷದ ಹಿಂದಿನ ಸಹಪಾಠಿಗಳು ಅವರೇನಾ ಅಥವ ಪ್ಲೇಟೋ ಹೇಳುವಂತೆ ’ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ’ ಎಂಬ ನಾಣ್ಣುಡಿಯಂತೆ ಅವರ ಅಸಲಿ ರೂಪಗಳ ಸಿಮ್ಯುಲೇಟೆಡ್ ರೂಪಗಳೇ? ನೈಜತೆಗೂ ಸಿಮ್ಯುಲೇಟೆಡ್‌ಗೂ ಇರುವ ವ್ಯತ್ಯಾಸವೆಂದರೆ ’ಪ್ರತಿಕೃತಿ’ಗೆ ಸಂಬಂಧಿಸಿದ್ದು. ರಮಾನಾಥ್ ಬರೆದ ಮೆಸೇಜಿನಲ್ಲಿ ಕ್ಯಾಂಟೀನಿನ ಬಳಿ ಹಸಿವೆ ತಡೆಯಲಾಗದೆ ಎಲ್ಲರೂ ಎಲ್ಲವನ್ನೂ ಕದ್ದು ತಿಂದ ಪ್ರಸಂಗದ ಸಮಯದಲ್ಲಿ ಕಲೆಯನ್ನು ಕುರಿತಂತೆ ವಿಕ್ಷಿಪತ ಹಾಗೂ ನಲ್ಲಸಿವರೊಂದಿಗೆ ಜೋರು ಜೋರು ನೈಜತೆಯನ್ನು ಕುರಿತಂತೆಯೇ ಅಥವ ನೈಜತೆಯನ್ನು ಕುರಿತಂತೆ ಜೋರು ಜೋರು ವಾದವಿವಾದಗಳು ನಡೆದುವಂತೆ. ರಮಾನಾಥನಿಗೂ ಸಿಮ್ಯುಲೆಷನ್ ಎಂದರೇನೆಂದು ವಿವರಿಸಿ ಹೇಳುವಷ್ಟರಲ್ಲಿ ನಾನು ಸುಸ್ತಾದೆ. ಯಾವುದನ್ನು ಪ್ರತಿಕೃತಿ ತೆಗೆಯಬಹುದೋ, ಎಲ್ಲಿ ಅಸಲು-ನಕಲು ಸಾಧ್ಯತೆ ಇರುತ್ತದೆಯೋ ಅದು ನೈಜತೆ ಎನ್ನಿಸಿಕೊಳ್ಳುತ್ತದೆ. ಇದಕ್ಕೆ ವಿರುದ್ಧವಾದುದು ಅಂದರೆ ಯಾವುದನ್ನು ನಕಲು ಮಾಡಲಾಗದೋ, ಎಲ್ಲಿ ಅದರ ಪ್ರತಿ-ರೂಪವೂ ಒಂದೇ ಬಾರಿಗೆ ಅಸಲು ಮತ್ತು ನಕಲು ಎರಡೂ ಆಗಿರುತ್ತದೋ ಅದನ್ನು ಸಿಮ್ಯುಲೇಷನ್ ಎನ್ನುತ್ತೇವೆ. ಕಂಕುಳ ಕೆಳಗೆ ಈರುಳ್ಳಿ ಇರಿಸಿಕೊಂಡು ಬರಿಸಿಕೊಂಡ ಸಿಮ್ಯುಲೇಟೆಡ್ ಜ್ವರಕ್ಕೆ ಅಸಲು ವೈದ್ಯಕೀಯ ರಂಗದಲ್ಲೇ ಮದ್ದಿಲ್ಲ! ಅದಕ್ಕೆ ರಮಾನಾಥ ಚುರುಕು ಪ್ರಶ್ನೆಯೊಂದನ್ನು ಕೇಳಿದ್ದ, ಪ್ರತಿ ಅಸಲಿ ಚಿತ್ರವೂ ಮನಸ್ಸಿನಿಂದ ಪ್ರತಿ ತೆಗೆದದ್ದಾದರೆ, ಒಂದೇ ಮನಸ್ಸಿನ ಯೋಚನೆಯು ಅನೇಖ ವಿಧವಾಗಿ, ಭಂಗಿಯಾಗಿ ಚಿತ್ರವಾದಾಗ, ಹಾಗೆ ಒಂದೇ ಭಾವದಲ್ಲಿ ಮೂಡಿಬಂದ ದೇವರು ಮತ್ತು ದೆವ್ವವೆರೆಡರ ಚಿತ್ರಗಳ ಸಾರವು ಒಂದೇ ಆಗಬಲ್ಲದೆ? ಎಂದು ಮತ್ತೂ ಮುಂದುವರೆದು ಹೇಳಿದ್ದ, ಅದಕ್ಕೆ ತದ್ವಿರುದ್ಧವಾದ ಉದಾಹರಣೆಯೊಂದನ್ನು ಕೇಳಿ. ನೀವು ಇಷ್ಟರಲ್ಲೇ ಬರಲಿರುವ ಸೆಮಿನಾರಿನಲ್ಲಿ ಮಂಡಿಸಲಿರುವ ಸಂಶೋಧನಾ ಪೇಪರ್ ಆರ್.ಎಂ.ಹಡಪದರ ಸಮೂಹ ಶಿಲ್ಪದ ಬಗ್ಗೆಯಲ್ಲವೆ. ಅಲ್ಲಿ ನನ್ನ ಪ್ರಶ್ನೆಯು ತಿರುವುದು ಮರುವು ಆಗಿಬಿಡುತ್ತದಲ್ಲ. ಹಲವು ಮನಸ್ಸುಗಳು (ಇಪ್ಪತ್ತೆಂಟು ಮಂದಿ ಕಲಾವಿದರು, ಕೃತಿಯೊಂದಿಗೆ ಮುದ್ರಿಸಲಾದ ಕೆಟಲಾಗನ್ನು ಆಧರಿಸಿ ಹೇಳುವುದಾದರೆ) ಸೇರಿ ಒಂದೇ ಕೃತಿಸಮೂಹವನ್ನು ಸೃಷ್ಟಿಸಿದಾಗ, ’ಒಂದೇ ಕೃತಿಯಾದ್ದರಿಂದ ಒಂದೇ ಚಿಂತನೆ’ ಎಂಬ ವಾದವೂ ಒಡೆದುಹೋಗುವುದಿಲ್ಲವೆ. ಅಥವ ನನ್ನ ಸರಳ ತರ್ಕವನ್ನು ಮೀರಿದ ಒಳನೋಟವೇನಾದರೂ ಇದೆಯಾ.

     ಮತ್ತೆ ನನ್ನ ಎರಡು ಪ್ರಶ್ನೆಗಳನ್ನು ಪುನರಾವರ್ತಿಸುತ್ತೇನೆ ಕೇಳಿ: ಒಂದೇ ಮನಸ್ಸಿನ-ಭಾವನೆಯಡಿಯಲ್ಲಿ ಸೃಷ್ಟಿಗೊಂಡ ಎರಡು ವಿಭಿನ್ನವಾಗಿ ಕಾಣುವ ಕೃತಿಗಳು, ಹಲವು ಮನಸ್ಸುಗಳು ಸೇರಿ ಮೂಡಿಸಿದ ಒಂದೇ ಭಾವದ ಕೃತಿಗೂ ವ್ಯತ್ಯಾಸವೇನು? ಎಂದು. ಮೊದಲನೆಯದಕ್ಕೆ ಉದಾಹರಣೆ ಎಂದರೆ ಒಂದೇ ಶೈಲಿಗೆ ಬದ್ಧರಾಗಿ ದಶಕಗಟ್ಟಲೆ ಕೃತಿರಚಿಸುವ ಆಧುನಿಕ ಕಲಾವಿದರು. ಎರಡನೆಯದಕ್ಕೆ ಉದಾಹರಣೆ, ಅನಾಮಿಕರು ಸೃಷ್ಟಿಸಿದ ದೃಶ್ಯಾವಳಿ ಅಥವ ಇಂದು ನಾವು ಸಾಂಪ್ರದಾಯಿಕ ಅಥವ/ಮತ್ತು ಜಾನಪದವೆಂದು ಗುರ್ತಿಸುವ ಜನಜನಿಕ ದೃಶ್ಯಾವಳಿಗಳು.  ಕೆ.ಜಿ.ಸುಬ್ರಹ್ಮಣ್ಯನ್‌ರ ’ಜೀವಚಿತ ಸಂಪ್ರದಾಯ’ (ಲಿವಿಂಗ್ ಟ್ರೆಡಿಷನ್) ತರ್ಕವು ಎರಡನೆಯದನ್ನು ಶ್ರೇಷ್ಠವೆಂದು ಭಾವಿಸುವುದಾಗಿದೆ.

      ನನ್ನ ವಾದವಿಷ್ಟೇ. ಅಸಲಿಯೊಂದಿದ್ದರೇನೇ ನಕಲಿ ಎಂಬುದು ಇದೆಯೆಂದಾದರೆ, ಅನೇಕ ಅಸಲುಗಳು ಸೇರಿಯೂ ಒಂದೇ ನಕಲನ್ನು ಮೂಡಿಸುವುದಾದರೆ ಇವೆರಡೂ ಪ್ರಮೇಯಗಳ ನಡುವಣ ಸಂಬಂಧವೇ ಒಂದು ಪ್ಯಾರಡಾಕ್ಸ್, ವೈರುಧ್ಯವಿದ್ದಂತೆ. ಇದರ ಸಂಕೀರ್ಣತೆಯನ್ನು ಅರಗಿಸಿಕೊಳ್ಳಬಹುದಾದರೆ, ಈ ಕಾಲನ ದಿಕ್ಕು ಏಕಮುಖಿಯಾಗಿರುವ ಬದಲಿಗೆ ಎರಡೂ ದಿಕ್ಕಿಗೆ ತಿರುಗಿದ್ದಕ್ಕೆ ಒಂದು ತಾರ್ಕಿಕ ವಿವರಣೆ ದೊರಕಿದಂತಾಗುತ್ತದೆ, ಎಂದಿದ್ದ ರಮಾನಾಥ್. ಆತನ ಈ ಫೇಸ್‌ಬುಕ್ ಮೆಸೇಜನ್ನು ಎಂ.ಎಸ್.ವರ್ಡಿನ ಫೈಲೊಂದರಲ್ಲಿ ’ಸೇವಿ’ಸಿ ಅಸಲಿ ರಮಾನಥನ-ನಕಲಿ ಪುರಾಣಂ ಎಂಬ ಹೆಸರು ನೀಡಿದ್ದೆ. ಆದ್ದರಿಂದ, ಈ ಕಳೆದೆರೆಡು ತಿಂಗಳುಗಳ ಪತ್ರೋತ್ತರದಿಂದ ಪರಿಷತ್ತಿನ ಹುಡುಗರ ನಡೆಸಿದ(ದ್ದ) ಭಾನಾಗಡಿಗಳ ಸಮ್ಯಕ್ ದರ್ಶನವೇನೋ ಆಗಿದೆ ನನಗೆ. ಆದರೆ ಈ ಕಾಲ-ಆಯಾಮ ವ್ಯತ್ಯಾಸದ ನಿಗೂಢತೆ ಹಾಗೇ ಉಳಿದುಬಿಟ್ಟಿದೆ. ’ಬದುಕಿನಿಂದ ನಕಲು ಮಾಡಿರುವುದರಿಂದ ಅಸಲು ಕಲಾಕೃತಿ ಎಂಬುದೂ ಸಹ ವಿಮರ್ಶೆಯೇ ಅಲ್ಲವೆ’ ಎಂಬ ಗ್ರೆಗರಿ ಅಲ್ಮರನ ವಾದದ ಮುಖವಾಡಿ ತೊಟ್ಟ ಅನೇಖನ ವಾದದೊಂದಿಗೆ, ರಮಾನಾಥ್ ಅಥವ ರಮಾನಾಥೆಸ್ಸೆಮ್ಮೆಸ್‌ನ  ಚಿಂತನೆಯನ್ನು ಒಟ್ಟಾಗಿಸಿ, ಹೋಲಿಸಿ ಮನನ ಮಾಡಿಕೊಳ್ಳತೊಡಗಿದೆ.  

* * *

    ಒಮ್ಮೊಮ್ಮೆ ಆ ೮೮ರ ಘಟನೆಗಳ ಅಸಲಿ ಭಾವವು ದೊರಕಲಿ ಎಂಬ ಸಲುವಾಗಿ, ಅದಕ್ಕೂ ಹೆಚ್ಚಾಗಿ ಅದು ನನ್ನಲ್ಲಿ ಹುಟ್ಟಿಹಾಕಿರುವ ಪ್ಯಾರಡಾಕ್ಸ್ (ವೈರುಧ್ಯಮಯತೆ) ಅನ್ನು ಅರ್ಥೈಸಿಕೊಳ್ಳಲು, ಪರಿಷತ್ತಿನ ಆವರಣದೊಳಕ್ಕೆ ಹೋಗಿ, ಮೊದಲಿಗೆ ಸಿಗುವ ಗ್ಯಾಲರಿ-ಮ್ಯೂಸಿಯಂ ಸಂಗ್ರಹಾಲಯದ ಮೆಟ್ಟಿಲುಗಳ ಎದುರಿಗಿರುವ ಮರದ ಬಳಿ ನಿಲ್ಲುತ್ತೇನೆ. ಅಲ್ಲಿ ೧೯೮೮ರಲ್ಲಿದ್ದು ಈಗಿಲ್ಲದಿರುವುದು ಅಂಚೆ ಪೆಟ್ಟಿಗೆ. ೧೯೮೮ ಒಂದು ವಿಶೇಷ ವರ್ಷ. ಕಲಾವಿದ ಸ್ವೆಟಸ್ಲಾವ್ ರೋರಿಕರಿಗೆ ಕೆಂದ್ರ ಲಲಿತಕಲಾ ಅಕಾಡೆಮಿ ಫೆಲೋಷಿಪ್ ದೊರೆತ ವರ್ಷ, ರಸ್ತೆ ಅಪಘಾತದಿಂದಾಗಿ ಮತ್ತೊಬ್ಬ ಕಲಾವಿದ ರುಮಾಲೆ ಚಿನ್ನಬಸಪ್ಪ ತೀರಿಕೊಂದ ವರ್ಷ. ಪ್ರಾಯಶಃ ಸಾರ್ಕ್ ಸಮ್ಮೇಳನದ ನೆಪದಲ್ಲಿ ಪರಿಷತ್ತಿನಲ್ಲಿ ಅಂತರರಾಷ್ಟ್ರೀಯ ಕಲಾಶಿಬಿರವೊಂದು ನಡೆದು ಎರಡು ವರ್ಷವಾಗಿತ್ತು. ರಾಜ್ಕುಮಾರ್ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸುವ ಮೂಲಕ ಕನ್ನಡಕ್ಕೆ ಜನಪ್ರಿಯತೆಯ ಆಯಾಮ ದೊರಕಿಸಿಕೊಟ್ಟು, ಇಂದಿರಾಗಾಂಧಿಯ ಕೊಲೆಯಾಗಿ ನಾಲ್ಕಾರು ವರ್ಷಗಳೇ ಆಗಿದ್ದವು. ಭಾರತವು ಆರ್ಥಿಕ ದೀವಾಳಿತನದ ಅಂಚಿಗೆ ಬಂದು ಫ್ರೀ ಮಾರ್ಕೆಟ್ ಪಾಲಿಸಿಯಿಂದಾಗಿ ತನ್ನ ಸ್ವರೂಪವನ್ನೇ ಬದಲಿಸಿಕೊಳ್ಳುವುದನ್ನು ಆರಂಭಿಸಲು ಇನ್ನು ಮೂರ್ನಾಲ್ಕು ವರ್ಷಗಳಿದ್ದವು. ಈ ಘಟನೆಗಳ ಪರಿಣಾಮದ ಪರಿವೆಯೂ ಇಲ್ಲದೆ ಅಣ್ಣಾವ್ರ ಭಕ್ತನಾಗಿದ್ದು, ಕೋಟು-ಚೆಡ್ಡಿ-ಕುಂಕುಮಧಾರಿಯಾಗಿದ್ದ ಈರಡಬ್ರಿ ತಂದುಕೊಡುತ್ತಿದ್ದ ’ಮೊದಲ ದಿನದ ಮೊದಲ ಶೋ’ನಲ್ಲಿ ಅಣ್ಣಾವ್ರನ್ನ ಗೀತಾಂಜಲಿ ಥಿಯೇಟರಿನಲ್ಲಿ ನೋಡುವ ಟಿಕೆಟ್ಟನ್ನು ಸೂಕ್ತವಾಗಿ ಬಳಸಿಕೊಳ್ಳುವ ಅಭಿಮಾನಿ ಗ್ಯಾಂಗ್ ಆಗಿತ್ತು ಪರಿಷತ್ತಿನ ನನ್ನ ಸಹಪಾಠಿಗಳ ಗುಂಪು. 

    ಮೊನ್ನೆ ಒಂದು ದಿನ ಕ್ಯಾಂಟೀನಿನಿಂದ ಚಹಾ ಸೇವಿಸುತ್ತ ಆ ಮರದ ಬಳಿ ನಿಂತಿದ್ದಾಗ, ಅಲ್ಲಿನ ವಿದ್ಯಾರ್ಥಿಗಳೂ ನನ್ನನ್ನು --ಮತ್ತು ಕಲಾವಿಮರ್ಶಕಿಯಾದ ನನ್ನ ಪ್ರತಿಭೆ ಹಾಗೂ ಪ್ರಸಿದ್ದಿಯನ್ನು ಬಲ್ಲವರು--ಸುತ್ತುವರಿದಿದ್ದರು. ಈ ೮೮-ಪರಿಷತ್ತಿನ ಹುಡುಗರಿಂದ ೨೦೧೧ರ ಫೇಸ್‌ಬುಕ್ಕಿಗೆ ಒದಗಿಬಂದ ಮಾತುಕಥೆಯು ಅದೆಷ್ಟು ನನ್ನ ಆಳಕ್ಕೆ ಇಳಿದಿದೆಯೆಂದರೆ, ಈ ಮರದ ಬಳಿ ಇರುವುದರಿಂದ ನಾನು ೧೯೮೮ರಲ್ಲಿದ್ದೇನೋ ೨೦೧೧ರಲ್ಲೋ ಎಂಬ ಭ್ರಮೆ ಉಂಟಾಗುತ್ತಿತ್ತು. ೮೮ರ ಹುಡುಗರೊಂದಿಗಿನ  ತಮ್ಮ ಬಾಲ್ಯವನ್ನು ಕಳೆದ ಊರಿನಲ್ಲೇ ವಯಸ್ಕರು ನೆಲೆಸಿದ್ದರೆ ಆಗಾಗ, ಅಲ್ಲಲ್ಲಿ ಇಂತಹ ಕಾಲದ-ಜಾರುವಿಕೆ ಎಲ್ಲರಿಗೂ ಸಹಜ!    

    ಎಲ್ಲರಿಂದಲೂ ಬಿಡಿಸಿಕೊಂಡು ಒಮ್ಮೆ ಸಾಧ್ಯಂತವಾಗಿ ಆದ ಘಟನೆಗಳನ್ನು ಪುನರಾವಲೋಖನಕ್ಕೆ ತೊಡಗಿದೆ: ನಾನು ಕಲಾವಿಮರ್ಶೆಯನ್ನು ಬರೆಯಲು ಆರಂಭಿಸಿ ಅದಾಗಲೇ ಎರಡು ದಶಕಗಳಾಗಿವೆ. ಕಲಾವಿದೆಯಾಗಬೇಕಿದ್ದ ನಾನು ಕಲೆಯ ಬಗ್ಗೆ ಬರೆಯಲು ಆರಂಭಿಸಿದ್ದು ಆಕಸ್ಮಿಕವಾಗಿಯಷ್ಟೇ. ದೃಶ್ಯಕ್ಕೆ ಪದಗಳ ಸಾಹಚರ್ಯ ಎಂತಹ ಮೋಡಿ ಮಾಡಿಬಿಡುತ್ತದೆ. ’ಅಕ್ಷರವಿಲ್ಲದವರಿಗೆ ಚಿತ್ರವಿಲ್ಲ’ ಎಂದದಾರೋ ಬರೆದದ್ದನ್ನು ಮತ್ತದಾರೋ ಬರಹಗಾರ ಅದೆಷ್ಟು ಸರಳವಾಗಿ ಭಾವಿಸಿದರೆಂದರೆ ಆ ಅಸಲಿ ಹೇಳಿಕೆಯು ’ದೃಶ್ಯಾಕ್ಷರದ ಅರಿವಿಲ್ಲದವರಿಗೆ ಚಿತ್ರವಿಲ್ಲ’ ಎಂಬರ್ಥವನ್ನು ಆ ವ್ಯಕ್ತಿಯು ಸರಳತೆಯ ಶೂಲಕ್ಕೆ ಸಿಕ್ಕಿಸಿಬಿಟ್ಟಿತ್ತು. ಲಿಖಿತ, ಮುದ್ರಿತ ಅಕ್ಷರಗಳ ಸಾಹಚರ್ಯವಿಲ್ಲದ ದೃಶ್ಯವು ದೃಶ್ಯಕಲೆಯಾಗಲಾರದೆಂಬ ಅಂಶವೇ ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯ ಪ್ರಣೀತ ’ಸಾಹಿತ್ಯ ಇತಿಹಾಸ’ವಾಗಿ ಹೋಗಿದೆ. ಕನ್ನಡ ಸಾಹಿತ್ಯವು ಈ ನಿಟ್ಟಿನಿಂದ ಅಂದ ಹಾಗೂ ವಸಾಹತುಶಾಹಿ. ಅದು ದೃಶ್ಯಭಾಷೆಯೆಂಬುದನ್ನು, ಅದರ ಬಗ್ಗೆ ಅಪಾರವಾದ ಕುರುಡನ್ನು ರೂಢಿಸಿಕೊಳ್ಳುವ ಮೂಲಕ, ವಸಾಹತೀಕರಣಕ್ಕೊಳಗಾಗಿಸಿದೆ ಎಂದು ಕನ್ನಡ ಸಾಹಿತಿಗೆ ಹೇಳುವುದು ಎಂಥಾ ಪೆದ್ದುತನ, ಎಂದು ಕನ್ನಡದ ಖ್ಯಾತ ಸಾಹಿತಿಯೊಬ್ಬರಿಗೆ ಹೇಳಿ ಅವರಿಂದ ಸುದೀರ್ಘವಾದ, ಮೌನದಿಂದ ಕೂಡಿದ್ದ ಕುರುಡು ದೃಷ್ಟಿಯೊಂದನ್ನು ಎದುರಿಸಿದ್ದೆ ಇತ್ತೀಚೆಗೆ!//    

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):