ನಿನ್ನೆ ನಾಳೆಗಳ ನಡುವೆ

4

ನಿನ್ನೆಯ ನೆನಪು ಅಚಲ
ಯಾರೋ ಕಟ್ಟಿ ಬಿಟ್ಟು ಹೋದ
ಕೋಟೆಯಂತೆ
ಚಂಡಮಾರುತಗಳಿಗೂ ಜಗ್ಗದ
ಬಂಡೆಕಲ್ಲಿನಂತೆ

ನಾಳೆಯ ಕನಸು ಮಧುರ
ಎಲ್ಲಿಂದಲೋ‌ ಪರಿಮಳ ಸೂಸುವ
ಸೂಜಿಮಲ್ಲೆಯಂತೆ
ಜೀವನೋತ್ಸಾಹ ತುಂಬಿ ತರುವ
ಭರವಸೆಯ ಬೆಳಕಂತೆ

ಆದರೇನು
ನೆನಪು ನೂರು ಕಾಡಲು
ಸಮಯ ಮರಳಿ ಬರುವುದೇ?
ಕನಸು ನೂರು ಕೂಡಲು
ಬಾಳ ಕೀಲಿ ಸಿಗುವುದೇ?

ನಿನ್ನೆಗಳ ಸಾಗರದೊಳಗೆ ಮುಳುಗಿ
ನಾಳೆಯ ದಡ ಸೇರುವ ಅಪೇಕ್ಷೆ
ನಿನ್ನೆಯ ಸಂಕೋಲೆಗಳೊಳಗೆ
ನಾಳೆಯ ಸ್ವಾತಂತ್ರ್ಯದ ನಿರೀಕ್ಷೆ

ಬದುಕು ಸಾಗುವುದು
ಕಳೆದು ಹೋದ ನಿನ್ನೆಯಲ್ಲೂ‌ ಅಲ್ಲ
ಮುಂಬರುವ ನಾಳೆಯಲ್ಲೂ‌ ಅಲ್ಲ
ನಿನ್ನೆ ನಾಳೆಗಳ ನಡುವ ಕೊಂಡಿಯಲ್ಲಿ
ಇಂದಿನ ದಿನದ ಬೆಚ್ಚಗಿನ ಗೂಡಿನಲ್ಲಿ

ನಿನ್ನೆಯ ಸೆರಗು ಸರಿಸಿ ಅರಳಿದ
ಇಂದಿನ ಸುಮವಿದು ಕಂಪ ಬೀರಲಿ
ನಿನ್ನೆಯ ಬುನಾದಿಯ ಮೇಲೆ
ನಾಳೆಯ ಮಹಲು ಕಟ್ಟುವ
ಇಂದಿನ ಕೆಲಸ ಕೈಗೂಡಲಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

< ಆದರೇನು ನೆನಪು ನೂರು ಕಾಡಲು ಸಮಯ ಮರಳಿ ಬರುವುದೇ? ಕನಸು ನೂರು ಕೂಡಲು ಬಾಳ ಕೀಲಿ ಸಿಗುವುದೇ? /> ಸಾಲುಗಳು ತುಂಬಾ ಚೆನ್ನಾಗಿವೆ . ಕವನ ಹಿಡಿಸಿತು ಕಾಮತ್ ಕುಂಬ್ಳೆ

ನನ್ನನ್ನು ಒಂದರೆ ಗಳಿಗೆ ಮೌನಿಯಾಗಿಸಿ, ಮತ್ತೆ ಮತ್ತೆ ಓದಿಸಿಕೊಂಡಿತು. ತಮ್ಮ ಅತ್ಯುತ್ತಮ ಕವನಗಳಲ್ಲೊಂದು. ಖುಷಿ ಆಯ್ತು. :) - ಆಸು ಹೆಗ್ಡೆ

ಭೂತ , ಭವಿಷ್ಯ ಮತ್ತು ವರ್ತಮಾನವನ್ನು ಚೆನ್ನಾಗಿ ಬಿಂಬಿಸಿದ್ದೀರ - ಇವೆಲ್ಲವುಗಳ ಜೊತೆ ಬದುಕನ್ನು ಬೆರೆಸಿದ ಕವನ ಚೆನ್ನಾಗಿ ಮೂಡಿದೆ.

>>ಬದುಕು ಸಾಗುವುದು ಕಳೆದು ಹೋದ ನಿನ್ನೆಯಲ್ಲೂ‌ ಅಲ್ಲ ಮುಂಬರುವ ನಾಳೆಯಲ್ಲೂ‌ ಅಲ್ಲ ನಿನ್ನೆ ನಾಳೆಗಳ ನಡುವ ಕೊಂಡಿಯಲ್ಲಿ ಇಂದಿನ ದಿನದ ಬೆಚ್ಚಗಿನ ಗೂಡಿನಲ್ಲಿ ನಿನ್ನೆಯ ಸೆರಗು ಸರಿಸಿ ಅರಳಿದ ಇಂದಿನ ಸುಮವಿದು ಕಂಪ ಬೀರಲಿ ನಿನ್ನೆಯ ಬುನಾದಿಯ ಮೇಲೆ ನಾಳೆಯ ಮಹಲು ಕಟ್ಟುವ ಇಂದಿನ ಕೆಲಸ ಕೈಗೂಡಲಿ>> ಇ೦ದು,ಸು೦ದರ ಕವನ.ಖುಷಿ ಕೊಟ್ಟಿತು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಇಂದು ಅವರೇ, ನಿಮ್ಮ ಮತ್ತಷ್ಟು ಕವನಗಳು ಇಂದು ಬರುತ್ತೆ, ನಾಳೆ ಬರುತ್ತೆ ಅಂತ ಕಾದಿದ್ದಾಯ್ತು. ಎಲ್ಲಿದ್ದೀರಿ? ತಮ್ಮ ಕವನಗಳನ್ನು ದಯವಿಟ್ಟು ಹಂಚಿಕೊಳ್ಳಿ.