ನಾ ಕನ್ನಡಿ...

3.8

ನಾ ಕನ್ನಡಿ, ನಿನ್ನ೦ದವ ನೋಡು ನನ್ನಲ್ಲಿ...

ಮುರಿದಿಲ್ಲ, ಮಾಸಿಲ್ಲ, ಸುಳ್ಳಿಲ್ಲ, ಇದ್ದ೦ತಿಹೆ ನೋಡಿಲ್ಲಿ...


ಪ್ರತಿಫಲಿಸಿದೆ ಪ್ರತಿ ದೃಶ್ಯ, ಪ್ರತಿ ದೃಶ್ಯದಲ್ಲೂ ನಾ ಅದೃಶ್ಯ...

ಬಣ್ಣ ಬಣ್ಣವೂ ಬಿ೦ಬಿಸಿದೆ ನನ್ನಲ್ಲಿ, ನನ್ನ ಬಣ್ಣವೂ ಅಸಹ್ಯ...


ಮುಖವಿತ್ತೊಮ್ಮೆ, ಬಲವಿತ್ತೊಮ್ಮೆ, ಗುರಿಯಿತ್ತೊಮ್ಮೆ, ಆದರೆ ಇನ್ನಿಲ್ಲ...

ಬದುಕಿದೆನೊಮ್ಮೆ, ನಲಿದಿದ್ದೆನೊಮ್ಮೆ, ಪ್ರೀತಿಸಿದೆನೊಮ್ಮೆ, ಆದರೆ ನೀನಿಲ್ಲ...


ನೆನಪಿಲ್ಲ, ಹೇಳಲು ಕಥೆಯಿಲ್ಲ, ಕುಸಿದಿರುವ ನೆಲಕ್ಕೆ ಕೊನೆಯಿಲ್ಲ...

ನೋವಿಲ್ಲ, ಅಳುತ್ತಿದೆ ನರನಾಡಿಯೂ, ಸುರಿದಿದೆ ರಕ್ತ ಆದರೆ ಗಾಯವಿಲ್ಲ...


ಹಾರಾಡುವ ನಿನ್ನನ್ನು ಕ೦ಡಿದೆ ಕಣ್ಣ೦ಚಲ್ಲಿ, ತೇಲಿದೆ ನೀ ಮೋಡದ೦ತೆ...

ವಿಷ ಕಾರಿದ ಸರ್ಪವನ್ನು, ಹೂವೆ೦ದು ಬಣ್ಣಿಸಿದೆ, ಕುರುಡು ಕವಿಯ೦ತೆ...


ನನ್ನನ್ನು ಕದ್ದೊಯ್ದೆ, ಪ್ರತಿ ಸಾಗರದಲ್ಲೂ ಮುಳುಗಿಸಿದೆ...

ಪ್ರತಿಬಾರಿಯೂ ಇತ್ತ೦ತೆ, ಇನ್ನೊ೦ದು ಸಾಗರ ಬಾಕಿ...

ಆಗಸದಲ್ಲಿ ತೇಲಿಸಿದೆ, ಚ೦ದ್ರನೆ೦ದು ನನ್ನ ಬಣ್ಣಿಸಿದೆ...

ಉದುರಿಸಲು ಚುಕ್ಕಿಗಳನ್ನು, ನನ್ನ ಕೈಲಿ ನೀನಾದೆ ತುಪಾಕಿ...


ಸೋಮಾರಿಗೆ ಯುದ್ಧಕ್ಕೊಟ್ಟೆ, ಅಲೆಮಾರಿಗೆ ಗುರಿ ಕೊಟ್ಟೆ...

ಸೋಲುವ ಭಯವೂ ನೀನಾದೆ, ಸೇರುವ ಗುರಿಯೂ ನೀನಾದೆ...


ಅರಳುವ ಹೂಗಳಲ್ಲೂ ನಿನ್ನ ಕ೦ಡೆ, ಹಿಡಿದಿಡಲು ನಿನ್ನ ಬೇರೆ ಹೂಗಳನ್ನು ಬಾಡಿಸಿದೆ...

ಮಿತಿ ದಾಟಿದೆ ಅರಿವಿಲ್ಲದೆ, ಸಿಗದಾಗ ಪದಗಳು ಹೊಗಳಲು ನಾ ಹುಚ್ಚನಾದೆ...


ಇಲ್ಲಿ ಪ್ರತಿ ಜೀವಿಗೂ ನಿನ್ನ ಮೋಹ, ಹಿಡಿದಿಡಲು ನಿನ್ನಿಲ್ಲಿ ಈ ಭೂಮಿಯೂ ಬರಿ ಗಾಳ...

ಸ್ವಾರ್ಥಿ ಭೂಮಿಗೆ ಚ೦ದ್ರನು೦ಟು, ಸ್ವಾರ್ಥಿ ನನಗೆ ನೀನು, ನನ್ನ ಪ್ರೀತಿ ಹಾಲಾಹಲ...


ಸಿಹಿಮಾಡಿದೆ ವಿಷವನ್ನು, ಉಣಬಡಿಸಿದೆ ಸುಳ್ಳನ್ನು...

ಠ ಮಾಡದೆ ನ೦ಬಲು ನೀ, ಪ್ರೇಮವೆ೦ದು ಕೊ೦ಡಾಡಿದೆ ಹುಚ್ಹನ್ನು...


ಏಳೆದೊಯ್ದೆ ನಿನ್ನ ನನ್ನ ಸೆರೆಮನೆಗೆ, ಮಾಡಲು ನಿನ್ನ ಜೋಪಾನ...

ಮೋಡದ೦ತಿಹ ನಿನಗೆ ಸಿಡಿಲಾದೆ, ಆಗಬೇಕ್ಕಿತ್ತು ನಾ ಹೂಬಾಣ...


ತಬ್ಬಿ ಕೊ೦ದೆನು ನಿನ್ನ, ಬಿಗಿದಪ್ಪಿ ಮುರಿದೆನು ನಿನ್ನ ನಾನು...

ನನ್ನ ಪಶ್ಚತ್ತಾಪಕ್ಕೆ ನಾನೇ ಸೆರೆಯಾಳು...

ಯುದ್ಧವಿಲ್ಲ ನಾನೀಗ ಸೋಮಾರಿ, ಗುರಿಯಿಲ್ಲ ನಾನೀಗ ಅಲೆಮಾರಿ...

ಹೆಚ್ಹು ಪ್ರೀತಿಗೆ, ಪಾಲಾಗಿದೆ, ಈ ಹುಚ್ಹು ಬಾಳು...


ನೀನಿದ್ದೆ ನಿನಿಲ್ಲ, ನಾನಿದ್ದೆ ನಾನಿಲ್ಲ, ಕ೦ಡದನ್ನು ತೋರಿಸಿಲ್ಲ ಈ ಕನ್ನಡಿ...

ಎತ್ತಕ್ಕೆ ಮುಖ ಮಾಡಿದೆನೋ, ಏನನ್ನು ಹಿ೦ದಿಕ್ಕಿಹೆನೋ, ಇನ್ನು ಪ್ರತಿಫಲಿಸುವೆ ಇದ್ದದನ್ನು ಇದ್ದ೦ತೆ ನಾ ಕನ್ನಡಿ...

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

"ಏಳೆದೊಯ್ದೆ ನಿನ್ನ ನನ್ನ ಸೆರೆಮನೆಗೆ, ಮಾಡಲು ನಿನ್ನ ಜೋಪಾನ... ಮೋಡದ೦ತಿಹ ನಿನಗೆ ಸಿಡಿಲಾದೆ, ಆಗಬೇಕ್ಕಿತ್ತು ನಾ ಹೂಬಾಣ..." ಅಬ್ಬ ....! ಇದ್ನ ಓದಿ ಒಂದು ಕ್ಛಣ ಸ್ತಬ್ಧನಾದೆ.. ಪ್ರತಿಕ್ರಿಯೆಯೂ ಕಸ್ಟ ಆಗುತ್ತಿದೆ... ಒಂದಂತೂ ನಿಜ... ಕನ್ನಡಿ ಸತ್ಯವನ್ನೆ ನುಡಿವದು‍‍/ ಸತ್ಯ ದರ್ಶನ ಮಾಡಿಸುವುದು... ಒಳಿತಾಗ್ಲಿ.. \|/

ಧನ್ಯವಾದಗಳು ಸಪ್ತಗಿರಿವಾಸಿಯವರೆ... ನಿಮ್ಮ ಪ್ರತಿಕ್ರಿಯೆ ಒದಿ ಸ೦ತಸವಾಯಿತು... :)

ನಿತಿನ್...ಎಂಚಿನ ಮಾರ್ರೆ? ಏನ್ರೀ ಇಷ್ಟು ದಿವಸ ಎಲ್ಲಿದ್ರಿ? ದಾದ ಮಾಲ್ತೋಂಡುಲ್ಲಾರ್?...ಪ್ರಾಜೆಕ್ಟ್ ರಿಲೀಸಿ ಇತ್ತಾ ಹೇಗೆ? ಕವನ ತುಂಬಾ ಚೆನ್ನಾಗಿದೆ. ಪ್ರೀತಿ, ಪ್ರೇಮ, ಸ್ನೇಹ, ಆಲಸ್ಯ, ಮೌಲ್ಯ, ನೀತಿ, ಔದಾರ್ಯದ ಸತ್ಯ ದರ್ಶನ ಮಾಡಿಸಿದ್ದೀರ. ಬರೆದು ವಿನಿಮಯ ಮಾಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಕವನದ ಕೊನೆಯಲ್ಲಿ ಆಟೋ ಲೈನ್ ಗಾಗಿ ಹುಡುಕಾಡುವ ಚಾಳಿ ಇನ್ನ ಮರೆತಿಲ್ಲ...