'ನಾ ಕಂಡಂತೆ ಚೇತನ' - ಈಶ - ೧

To prevent automated spam submissions leave this field empty.
ಮುನ್ನುಡಿ
 
ನಾನು ಜಪ, ತಪ್ಪಸ್ಸನ್ನು ಮಾಡಿದವನಲ್ಲ. ಪೂಜೆ ಪುರಸ್ಕಾರ ಮಾಡಲಂತೂ ಮೊದಲೇ ಬರುವುದಿಲ್ಲ. ಪ್ರಸ್ಥಾನತ್ರಯಗಳನ್ನು ತಿಳಿದವನಲ್ಲ ಮತ್ತು ಅದರಲ್ಲಿ ನುರಿತವನಲ್ಲ. ನಾನು ವಿದ್ವಾಂಸನೂ ಅಲ್ಲ, ದಾರ್ಶನಿಕನೂ ಅಲ್ಲ. ಕಳೆದ ಜನ್ಮ ದಿನದಂದು ಒಂದು ನಿರ್ಣಯ ತೆಗೆದು ಕೊಂಡಿದ್ದೆ. ಜೀವನದಲ್ಲಿ ಏನಾದರು ಸಾದಿಸಬೇಕು. ಆದರೆ ಲಕ್ಶ್ಯವೇ ಹೊಳಿದಿರಲಿಲ್ಲ. ಇಂತಹ ಸಂದರ್ಭದಲ್ಲಿ ನನ್ನ ಕಣ್ಣಿಗೆ ಬಿದ್ದದ್ದು ಇಶೋಪನಿಶತ್ತು. ಇದನ್ನು ಕನ್ನಡದಲ್ಲಿ ಕವನ ರೂಪದಲ್ಲಿ ಬರೆಯಬೇಕೆಂಬ ಬಯಕೆ ಮನಸ್ಸಿನಲ್ಲಿ ಹುಟ್ಟಿ, ಮೊತ್ತ ಮೊದಲಿಗೆ ಶಾಂತಿಪಾಠವನ್ನು ಕನ್ನಡದಲ್ಲಿ ರೂಪಾಂತರಿಸಲು ಪ್ರಯತ್ನ ಪಟ್ಟೆ. ಆದರೆ, ಪೂರ್ಣದ ವೈಶಾಲ್ಯತೆಯನ್ನು ನಾಕಕ್ಷರದಲ್ಲಿ ಬರೆಯುವುದು ಕೇವಲ ಬ್ರಹ್ಮ ಜ್ಞಾನಿಗಳಿಗೆ ಮಾತ್ರ ಸಾದ್ಯ ಎಂದೆನಿಸಿತ್ತು. ನನ್ನ ತಲೆ ಸೋತು ಬುದ್ದಿ ಮಂಕಾಗಿ ಆಧ್ಯಾತ್ಮವು ಕಬ್ಬಿಣದ ಕಡಲೆಯೆಂದು ನನಗೆ ಭಾಸವಾಗ ತೊಡಗಿತು. ಕ್ರಮೇಣ ಅದರ ಆಳ ಹಾಗು ಶ್ರೇಷ್ಟ ವಿಚಾರಗಳು ಜೀವನಕ್ಕೆ ಬಹಳ ಹತ್ತಿರವಿದ್ದಂತೆ ಕಂಡಿತು. ಅದರ ಉತ್ತುಂಗದ ಎದುರು ನಾನೊಬ್ಬ ಸಣ್ಣ ಕ್ರಿಮಿಯೆಂದೆನಿಸಿ ನನ್ನ ಪ್ರಯತ್ನ ಸ್ವಲ್ಪ ಕಾಲ ಕೈಬಿಟ್ಟೆ. ನನ್ನ ಮನೋಸ್ತಿತಿ ಹೀಗಾದಾಗ, ಶೃಂಗೇರಿಗೆ ಹೋಗುವ ಸಂದರ್ಭ ಬಂತು. ಗಣೇಶನನ್ನು ಪೂಜಿಸಿ, ಶಾರದೆಗೆ ನಮಿಸಿ ಜಗದ್ಗುರುಗಳ ಪಾದಪೂಜೆಗೆ ಹೊರಟಾಗ, ನನ್ನ ಹೆಂಡತಿ 'ಗುರುಗಳಲ್ಲಿ ಏನು ಕೇಳುತ್ತೀರಿ' ಎಂದಳು. ನಾನು ಮನಸ್ಸಿನಲ್ಲೇ ನನ್ನ ಪ್ರಯತ್ನಕ್ಕೆ ಆಶೀರ್ವಾದ ಬೇಡಿಕೊಂಡೆ. ಮಾತಿನಲ್ಲಿ ಕೇಳುವ ದೈರ್ಯ ನನ್ನಲ್ಲಿ ಇರಲಿಲ್ಲ. ಕಾರಣ, ನಾನು ಯಕಶ್ಚಿತ್ ಪಂಡಿತನೂ ಅಲ್ಲ. ಮನಸ್ಸಿನಲ್ಲೇ ಜಗದ್ಗುರುಗಳ ಆಶೀರ್ವಾದ ಬೇಡಿಕೊಂಡಾಗ, ಶ್ರೀಗಳು ಒಂದು ತೆಂಗಿನ ಕಾಯಿ ಇತ್ತು 'ಒಳ್ಳೆಯದಾಗಲಿಎಂದರು. ಆಗ ನನ್ನಾಕೆ, ಜಗದ್ಗುರುಗಳು ಪೂರ್ಣಫಲ ನೀಡಿದ್ದಾರೆ ಎಂದು ಕಿವಿಯಲ್ಲಿ ಮೆಲ್ಲನೆ ಹೇಳಿದಳು. ಆಕೆಗೆ ಸೇಬುವೊಂದನ್ನು ಇತ್ತು ಹರಸಿದರು. ಅಲ್ಲಿಯೇ ಕುಳಿತು ಅವರ ದರ್ಶನವನ್ನು ಮನಸ್ಸಿನಲ್ಲಿ ಆವರಿಸಿಕೊಂಡು ಹೊರಟು ಬಂದದ್ದೆ ತಡ, ಓದುವ ಹುಚ್ಚು ಹೊಟ್ಟೆಯ ಹಸಿವಿನಂತೆ ಮನಸ್ಸನ್ನು ಆವರಿಸಿತ್ತು. ಆಮೇಲೆಯೇ ನನಗೆ ಅರಿವಾದದ್ದು, ಗುರುಕೃಪೆ ಇಲ್ಲದೆ ಏನು ಸಾದಿಸಲು ಆಗುವುದಿಲ್ಲ ಎಂದು. ಹಲವಾರು ಗ್ರಂಥಗಳನ್ನು ಸಂಗ್ರಹಿಸಿ ಓದುತಿದ್ದಾಗ ನನ್ನ ಗಮನಕ್ಕೆ ಬಂದದ್ದು ಭಾರತೀಯ ತತ್ವ ಶಾಸ್ತ್ರಗಳ ಹಿರಿಮೆ. ಜೀವನದ ಗುರಿ ಏನೆಂದು ಉಪನಿಷತ್ತುಗಳು ಸಾರಿ ಸಾರಿ ಹೇಳುತ್ತಿವೆ. ಅದಕ್ಕೆ ಯಾವುದೇ ಜಾತಿಮತ ಭೇದಗಳಿಲ್ಲ. ಇದನ್ನು ಯಾವುದೇ ಭಾಷೆಯಲ್ಲಿ ಬರೆಯಲಿ.... ಶಬ್ದಗಳು ಸಾಕಾಗಲಾರವು. ಕೇವಲ ಅನುಭವದಿಂದ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಬಹುದು ಎಂದು ನನ್ನ ವೈಯುಕ್ತಿಕ ಅಭಿಪ್ರಾಯ.
 
ಈ ಆದ್ಯಾತ್ಮ ವಿದ್ಯೆಯಲ್ಲಿ ನಾನಿನ್ನೂ ಸಣ್ಣವ. ಕಾಡಿನಲ್ಲಿ ನಿಂತು, ಇನ್ನೂ ದಾರಿ ಹುಡುಕುತಿದ್ದೇನೆ. ಹಾಗಾಗಿ ಇಲ್ಲಿ ಬರದದ್ದೆಲ್ಲ ಸಂಪೂರ್ಣ ಸರಿಯೆಂದೇನಿಲ್ಲ. ಕೆಲವು ಶ್ಲೋಕಗಳ ಅರ್ಥದಲ್ಲಿ ಬಿನ್ನ ಮತ ಇದ್ದಲ್ಲಿ, ನನ್ನ ಅಲ್ಪ ಬುದ್ದಿಗೆ ಅರ್ಥವಾದಷ್ಟು, ನನ್ನ ಅಂತರಂಗೆಕ್ಕೆ ಹೊಳೆದ ಪದಗಳನ್ನು ಬಳಸಿ ಪ್ರಸ್ತುತ ಪಡಿಸಿದ್ದೇನೆ. ಶಾಲಾ-ಕಾಲೇಜಿನಲ್ಲಿ ಏನೋ ಬರೆದದ್ದು ಬಿಟ್ಟರೆ, ನನ್ನ ಜೀವನದಲ್ಲಿ ಇದೇ ಚೊಚ್ಚಲ ಪ್ರಯತ್ನ. ನನ್ನಾತ್ಮಕ್ಕೆ ಹಿತವೆನಿಸಿದ್ದನ್ನೇ ಇಲ್ಲಿ ಬರೆದಿದ್ದೇನೆ. ಹಾಗಾಗಿ ಇದರ ಮೇಲೆ ವಾದ ಮಾಡುವಷ್ಟು ಪರಿಪಕ್ವತೆ ಹಾಗು ಪರಿಪೂರ್ಣತೆ ನಾನು ಸಾದಿಸಿಲ್ಲ. ಆದ್ದರಿಂದ ನನ್ನ ಈ ಪ್ರಯತ್ನದಲ್ಲಿ ತಪ್ಪುಗಳಿದ್ದರೆ ಮನ್ನಿಸಿ ಮುಂದೆ ಸಾಗಲು ಅವಕಾಶ ಮಾಡಿ ಕೊಡಿ. ವಯಸ್ಸು, ಬುದ್ಧಿ, ಅನುಭವ ಬೆಳೆದಂತೆ ಮುಂದೆ ಆತ್ಮಾವಲೋಕನ ಮಾಡಿಕೊಂಡಾಗ, ತನ್ನಿಂತಾನೆ ಈ ಕೃತಿಯಲ್ಲಿ ಮಾರ್ಪಾಡು ಮಾಡಲು ಸಾದ್ಯ ಎಂದು ನನ್ನ ಅನಿಸಿಕೆ. ಅಲ್ಲಲ್ಲಿ ಪದಗಳಲ್ಲಿ ದೋಷ ಕಂಡು ಬಂದಲ್ಲಿ, ಗೂಗಲ್ ಕನ್ನಡ ಬೆರಳಚ್ಚು ಉಪಯೋಗಿಸುವಲ್ಲಿ ನನ್ನ ಅನನುಭವವೇ ಕಾರಣ.
 
ಕೊನೆಯದಾಗಿ ಈ ರಚನೆಯನ್ನು ಗುರುಪಾದಗಳಿಗೆ ಅರ್ಪಿಸುತ್ತಿದ್ದೇನೆ. ಏಕೆಂದರೆ, ತಪ್ಪೋ ಒಪ್ಪೋ, ದಾರಿ ತೋರುವವನು ಗುರುವೇ ಆಗಿದ್ದಾನೆ. ಅಲ್ಲದೆ ಏನೊಂದು ತೋಚದೆ ದಿಗ್ಮೂಡನಾದ ಸಂದರ್ಭದಲ್ಲಿ, ಶೀಗುರುಗಳ ಫೋಟೋದ ಮುಂದೆ ನಿಂತು ಎಷ್ಟೋ ಬಾರಿ ಪ್ರಾರ್ಥಿಸಿದ್ದುಂಟು. ಏಕಲವ್ಯನಂತೆ, ಪ್ರಾರ್ಥಿಸಿದಾಗಲೆಲ್ಲ ಮನಸ್ಸಿನಲ್ಲಿ ದಾರಿ ಕಂಡಿದ್ದೂ ಉಂಟು. ಆದ್ದರಿಂದ, ಅರಿವಿಲ್ಲದೆಯೇ ಹೊರಬಂದಂತಹ ಈ ಕೃತಿಯನ್ನು, ನನ್ನ ಹೃದಯಪುಷ್ಪವೆಂದೆಣಿಸಿ, ನನ್ನಂತಹ ಅಲ್ಪರಿಗೆ ದಾರಿದೀಪವಾಗಿ, ಎಲ್ಲರಿಗೂ ಪೂಜ್ಯರಾದಂತಹ ಜಗದ್ಗುರುಗಳ ಪಾದಗಳಲ್ಲಿ ಸಮರ್ಪಿಸಿ, ಅರ್ಚಿಸಿ ಶರಣಾಗಿದ್ದೇನೆ. ಸರಸ್ವತಿಯ ಪ್ರತಿರೂಪವೇ ಆಗಿರುವಂತಹ ಜಗನ್ನಿಯಾಮಿಕೆ ಮೂಕಾಂಬಿಕೆಗೆ ವಂದಿಸುತ್ತಾ, ಈ ರಚನೆಯನ್ನು ತಮ್ಮೆಲ್ಲರ ಮುಂದೆ ತರುವ ಸಾಹಸ ಮಾಡಿದ್ದೇನೆ. ನನ್ನ ಈ ಪ್ರಯತ್ನದಲ್ಲಿ, ಒಂದೇ ಒಂದು ಸಾಲು, ತಮಗೆ ಹಿತವಾದಲ್ಲಿ ನಾನು ಧನ್ಯನು. 
 
ಇಂತಿ ಸಪ್ರೇಮ ಪ್ರಣಾಮಗಳನ್ನು ಅರ್ಪಿಸುವ,
ಸಾಯಿನಾಥ ಬಾಲಕೃಷ್ಣ, ಬೆಂಗಳೂರು.
 
'ನಾ ಕಂಡಂತೆ ಚೇತನ' - ಈಶ -
ಕೃತಿ ರಚನೆ - ಸಾಯಿನಾಥ ಬಾಲಕೃಷ್ಣ, ಬೆಂಗಳೂರು, 31.05.2012
 
ಪೂರ್ಣವದು ಬ್ರಹ್ಮ, ಪೂರ್ಣವಿದು ಜಗತ್ ಚೇತನ
ಅನಂತ ಪೂರ್ಣದಿಂದುಗಮಪಿಹುದೀಪೂರ್ಣ ಜಗತು |
ಪೂರ್ಣದಿ ಪೂರ್ಣವುಕಳೆಯೋಲ್ಪಡೆ
ಪೂರ್ಣವೇ ಆಗಿಹುದು, ಅನಾದಿ ಅನಂತ ಚೈತನ್ಯವದು|
 
ಜಗದೊಡೆಯ ವ್ಯಾಪಿಸಿಹನೆಲ್ಲೆಡೆ ಭುವಿ ಭುವನದಲಿ
ಸಮಾಹಿತನವನು ನಿತ್ಯಾನಿತ್ಯ ಚರಾಚರದಲಿ |
ತನ್ನದಲ್ಲದಿಹ ಪರಧನದ, ಮಿಥ್ಯತೆಯ ಬಯಕೆಯ ನೀ ಬಿಡೆ
ಪರಿತ್ಯಕ್ತತೆಯ ತ್ಯಾಗ ಭಾವದಿ ನೀ ಈಶನ ಪಡೆ | |
 
ಕಾಯಕವ ಕೈಕೊಂಬುದೇಶ್ರೇಯ ಮನುಜಗೆ,
ಶತಕಾಲ ಬಾಳ್ವಾಸೆಗೆ, ಜೀವನದ ಪೂರ್ಣತೆಗೆ |
ಉಳಿದುದೊಂದೇಪಥ, ಕರ್ಮ ಜೀವನದವ್ರತ,
ಕರ್ಮವಂಟದಿಹ ಹಾದಿ ತೋರು ಜಗದ್ಗುರುವೆ | |
 
ಅಸುರರಿಹ ಲೋಕದಂತೆ, ಅಜ್ಞಾನ ಮಾಯಾವ್ರತ ಮನ
ಕಗ್ಗತ್ತಲಿನ ಕೂಪವದು ನರಕದಂತೆ, ಅರಿವಿರದ ಜೀವನ |
ನಡೆಸೆ ವಿಷಯವಾಸನ ಜೀವನ, ಗೈವೆ ತನ್ನಾತ್ಮ ಹನನ
ಅಧಃಪತನದಿ ಕೈಕೊಂಬೆ ಯೋನಿ ಪಯಣ ನೀಪುನಃ ಪುನಃ | |
 
ಸ್ತಿರಚೈತನ್ಯವದೊಂದೇಮೊದಲದುಮನೋಗತಿಯಮೀರಿದದು
ಅನಾದಿಯಿದು, ದೈವಗಳ, ಇಂದ್ರಿಯಗಳಕೈಕಣ್ಗೆಮಿಟುಕದಿದು|
ನಿಂತೆಡೆಮುಂದೋಡಿಇತರಮೀರಿಪಸರ್ವವ್ಯಾಪ್ತವದು
ಇದುವೇಉಸಿರಮೀರಿದುಸಿರುಪ್ರಾಣದೊಸರೆಯದು  | |
 
ಚಲಿಸುತಿಹುದು ಅದು ನಿಂತಿಹುದು
ದೂರದಲ್ಲಿಹುದಾದರೂ ಹತ್ತಿರದಲ್ಲಿಹುದದು|  
ಇಹುದು ಎಲ್ಲದರೊಳಗದು ಹೊರಗೂ ವ್ಯಾಪಿಸಿಹ ಜಗತ್ ಚೇತನವದು
ನಾನಿದನ ಒಳಹೊರಗೆಂತು ಕಾಣ್ ಕೊಂಬುದುಗುರುದೇವಾ ಶ್ರೀಭಾರತಿ ತೀರ್ಥ| |
 
ಜಗದ ಚರಾಚರವೆಲ್ಲ ತನ್ನೊಳು ಇಹುದೆಂದು ಬಲ್ಲವನು
ಎಲ್ಲದರೊಳಗು ತಾನಿಹನೆಂದು ಅರಿತವನು |
ಚೇತನದೊಳು ಚೇತನದ ಅನುಬಿಂಬವ ಕಂಡವನು
ಇಹ ಬಂಧನ ತೊಡೆದ ಸಾದಕನವನು, ಭೇದವ ಕಲ್ಪಿಸನು | |
 
 
ಜಡಜೀವದೊಳಿಹ ಚೇತನವು ತಾನೆಂದು ತಿಳಿದವನು
ಎಲ್ಲದರೋಳಿಹ ಅನಾದಿ ಚೈತನ್ಯವೊಂದೇ ಎಂದರಿತವನು |
ಅಂತರಂಗದಿ ಏಕತೆಯರಿತ ಸಿದ್ಧಪುರುಷಗೆ,
ಯಾವ ಮೋಹ ? ಯಾವ ಶೋಕ ? ಅಭೇದ ಚೇತನದರಿವ ಪಡೆದವಗೆ | |
 
ಎಲ್ಲದರಲು ಹಬ್ಬಿಬೆಳಕಿನಂತೆ ವ್ಯಾಪಿಸಿಹನು
ದೇಹ ಬಾದೆ, ಕರ್ಮಕಲ್ಮಶವಿರದೀ ಶುದ್ಧ ಅಶರೀರನು |
ಎಲ್ಲವ ಕಂಡರಿತು ಜಗವಾಳ್ವ, ತನ್ನಿಂತಾನೆ ವ್ಯಕ್ತ ಅನಾದಿ ಚೈತನ್ಯ ಇವನು
ಕಾಲಚಕ್ರದೊಳು ಸ್ರಷ್ಟಿಸ್ತಿತಿಲಯ ಕಾರ್ಯ ಕರ್ಮಾಂತರ ನಿಯಾಮಕನಿವನು |   |
 
ಅಜ್ಞಾನದ ಮಡುವದು, ಲೌಕಿಕ ಫಲವಾಂಛಿತ ನಿಮಿತ್ತ ವಿದ್ಯೆ
ಪಯಣಿಸಿಹರು ಅವಿದ್ಯೋಪಾಸಕರು ಇಹ ಬಂಧನದ ತಿಮಿರ ಲೋಕಕೆ |
ಅಭಿಮಾನಿ ಪಂಡಿತರು ವಿಚಾರ ಮೆರೆದವರು ಆಚಾರ ಬಿಟ್ಟಿಹರು
ಅತಿಘೋರಾಂದಕಾರ ಲೋಕಕೆಅವರು ನಡೆದಿಹರು | |
 
ಚೇತನವನರಿವ ತಿಳಿವು ನೀಡುವುದೊಂದು ಅನ್ಯ ಫಲ
ಅದನರಿತ ಜೀವ ಪಡೆವುದು ಮುಕುತಿಯಫಲ|
ಸಂಚಿತ ಕರ್ಮ ಗಳಿಸುವುದು ಮಗದೊಂದು ಜನ್ಮಾಂತರ ಫಲ
ಇಂತೆಂದು ನುಡಿದಿಹರು ಪಂಡಿತರು ಸುಜ್ಞಾನಸುಕರ್ಮಗಳ ಫಲ| ೧೦ |
 
ಪರಮಾರ್ಥ ವ್ಯವಹಾರಿಕಯೆರಡನು ಬಲ್ಲ ಸಮದರ್ಶಿಯಾಗೆ 
ಕರ್ಮೋಪಾಸನದಿ ಲಂಘಿಸುವೆ ಭವಸಾಗರವ
ನಿಷ್ಕಾಮ ಕರ್ಮದಿ ಬದುಕ ನಡೆಸೆ, ಪಡೆವೆ ಅಮೃತತ್ವವ
ಪಾಮರ ನಾ ಇಬ್ಬಗೆಯಲಿ ಸಿಳುಕಿಹೆ, ಕರುಣಿಸು ಜಗದ್ಗುರುಎನಗೆಶುದ್ದಚಿತ್ತವ | ೧೧ |  
 
ಸೃಷ್ಟಿಕಾರಣಮಾಯೆಯ ಅರಿವಿರದೆ ಭಜಿಸೆ
ಬದುಕು ವ್ಯರ್ಥವದು ಇರುಳ ಹೊಕ್ಕಂತೆ |
ರೂಪಗುಣವಿಶೇಷಣಗಳ ಮೆರೆದು ಪೂಜಿಸೆ
ಇರುಳ ಬಸಿರ ಪೋಕ್ಕಂತೆ | ೧೨ |
 
ಸಗುಣತೇಜವ ಭಜಿಸೆ ಗಳಿಸುವೆ ಉನ್ನತಿಯ ಸೋಪಾನ
ಪಡೆವೆ ಅಷ್ಟಸಿದ್ದಿಗಳ ವರದಾನ |
ಪ್ರಕೃತಿಲಯ ಮೂಲವಪೂಜಿಸೆ ಗೈವೆ ಮಗದೊಂದು ನೆಲೆಗೆ ಪ್ರಸ್ಥಾನ
ಕ್ಲೇಷಗಳ ಸೊಂಕಿಲ್ಲದ ಸುನಿದ್ರೆಯ ಚಿರಸ್ಥಾನ | ೧೩ |
 
ಅಳಿವಿರದ ಚೇತನವದು ನಿರ್ಗುಣ ಸ್ವರೂಪ
ಇಹಪರ ನಿಮಿತ್ತ ಚೇತನವದು ಸಗುಣರೂಪ|
ಸಾದಿಸೆ ಸಮನ್ವಯ, ತೊರೆವೆ ಜರಾಜನ್ಮ ಕೂಪ
ದಾಟಿದೊಡೆ ಭವಸಾಗರವ, ದರ್ಶಿಸುವೆ ನಿಜ ಚೈತನ್ಯ ಸ್ವರೂಪ | ೧೪ |
 
ನೇಸರ ಮಂಡಲದಿ ಮಾಚಿಹುದು ಪರಮ ಪುರುಷನ ಬಿಂಬವು
ಅಡಗಿಹುದು ಪ್ರತ್ಯಕ್ಷ ಚೇತನದೊಳವನ ನಿಜ ಚೈತನ್ಯವು |
ಸಾದಕ ಯೆನ್` ಕಣ್ ಪೊರೆಯ, ತೆರೆಮರೆಯ ತೆಗೆ ನೀ ರವಿಯೇ
ನಿಜ ದರುಶನಕೆ ಅಣಿಗೊಳಿಸೇಮ್ಮನು ಕರುಣಾಳು ಜಗದ್ಗುರುವೆ | ೧೫ |
 
ಹೇ ಜೀವಸಂಕುಲ ನಾಡಿ, ಏಕಸಂಚಾರಿ, ನಿಯಮಾಧಿಕಾರಿ, ಮಂಡಲಾಧಿಕಾರಿ
ಮರೆಮಾಚು ಸುಡುವ ಕಿರಣಗಳ ಒಕ್ಕೂಡಿಸಿ ಹಿಂಪಡೆದು, ಕೃಪೆಗೈದು ನೀಡು ದರುಶನವ
ತಿಮಿರ ಸಂಹರಿಪ , ನಿನ್ನಯ ಮಂಗಳಕರ ರೂಪವ
ಪ್ರಭೆಯ ಹಿಂದಡಗಿ ಜಗ ಚೈತನ್ಯವಾಗಿಹ ಪರಮಪುರುಷ ನೀನು, ಅವನೇ ನಾನಾಗಿಹೇನು | ೧೬ |
 
ಐಕ್ಯವಾಗಲಿಹುದೀ ಪ್ರಾಣ ಅಮ್ರತತ್ವ ಚೇತನದಲಿ
ಭಸ್ಮವಾಗಲಿಹುದೀ ಮೃತ್ಯ ಪಂಚ ಭೂತಗಳ ಗೂಡು ಮತ್ತದರಲಿ|
ಓಂ... ನೆನೆ ಓ ಮನವೇ ಸುಕೃತ ಕರ್ಮಗಳ, ಓ ಮನವೇ ನೆನೆ ಸುಕೃತ ಕರ್ಮಗಳ
ಮೃತ್ಯುಕಾಲದಿ ಲೀನ ಭಾವವ ಪಡೆಯೆ ದಾರಿ ತೋರು ಜಗದ್ಗುರುವೆ | ೧೭ |
 
ಹೇ ಅಗ್ನಿದೇವನೆ, ಸದ್ಗತಿಯ ಉತ್ತರ ಮಾರ್ಗದಿ ನಡೆಸೆಮ್ಮನು
ನಮ್ಮೆಲ್ಲ ಕರ್ಮ ಫಲಾಫಲಗಳ ಬಲ್ಲ ಜ್ಞಾನಿ ನೀನು |
ಕೃತ್ರಿಮ ಪಾಪಗಳ ಅಡೆತೆಡೆಗಳ ದಹಿಸಿ ಶುದ್ದಿಸೆನ್ನಾತ್ಮವನು
ಬೇರೇನೂಕೂಡದಿರೆ, ಅಂತ್ಯವಚನದಿಪರಿಪರಿನಮಸ್ಕರಿಸುವೆನು | ೧೮|
 
 
'ನಾ ಕಂಡಂತೆ ಚೇತನ' - © ಸಾಯಿನಾಥ ಬಾಲಕೃಷ್ಣ.
Extracts  of 'ನಾ ಕಂಡಂತೆ ಚೇತನ' - © ಸಾಯಿನಾಥಬಾಲಕೃಷ್ಣ.
 
ಆಧಾರ ಗ್ರಂಥಗಳು :
೧. ಇಶಾವಾಸ್ಯೋಪನಿಶದ್ಭಾಶ್ಯಂ - ಶ್ರೀ ಮದ್ಚಂಕರ ಭಗವತ್ಪೂಜ್ಯಪಾದೌ ವಿರಚಿತಂ – ಸಂಸ್ಕ್ರತ.
(The works of Sri Sankaracharya - Volume 4 - Sri Vani Vilas Press, Srirangam).
. ಉಪನಿಷತ್ತುಗಳಸಂದೇಶ - ಸ್ವಾಮಿರಂಗನಾಥಾನಂದ - ಕನ್ನಡಅನುವಾದ - ಪ್ರಭುಶಂಕರ - ಪ್ರಸಾರಾಂಗ, ಮೈಸೂರುವಿಶ್ವವಿದ್ಯಾನಿಲಯ, ೧೯೭೪.
. ಇಷಾವಾಸ್ಯೋಪನ್ಯಾಸಮಂಜರಿ - ಶ್ರೀಶ್ರೀಸಚ್ಚಿದಾನಂದೆಂದ್ರಸರಸ್ವತಿಸ್ವಾಮಿಗಳವರು- ಆಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ - ೨೦೦೧.
. ಇಷಾವಾಸ್ಯೋಪನಿಶತ್ತು - ಶ್ರೀಶ್ರೀಸಚ್ಚಿದಾನಂದೆಂದ್ರಸರಸ್ವತಿಸ್ವಾಮಿಗಳವರು- ಆಧ್ಯಾತ್ಮಪ್ರಕಾಶಕಾರ್ಯಾಲಯ, ಹೊಳೆನರಸೀಪುರ - ೧೯೯೭.
೫. ಉಪನಿಷತ್ ಭಾವಧಾರೆ - ಸೋಮನಾಥಾನಂದ - ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು - ೫೭೦ ೦೨೦.
೬. ಉಪನಿಷತ್ ಭಾವಧಾರೆ - ಸೋಮನಾಥಾನಂದ - ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು - ೫೭೦ ೦೨೦.
೭. ಇಷಾವಾಸ್ಯೋಪನಿಷತ್ - ಗೀತಾಪ್ರೇಸ್, ಗೋರಖ್ ಪುರ.
೮. ಇಶವಾಸ್ಯೋಪನಿಷತ್ (ಕನ್ನಡ ಅವತರಣಿಕೆ) - ಲೇಖಕರು - ಸಂಸ್ಕ್ರತ ಸಂಶೋದನ ಸಂಸತ್ತಿನ ಸಂಶೋದಕರು,
ಸಂಸ್ಕ್ರತ ಸಂಶೋದನ ಸಂಸತ್, ಮೇಲುಕೋಟೆ – ೫೭೧೪೩೧.
. The Isa, Kena & Madunka Upanishads and Sri Sankara’s Commentary- Translated by S.Sitarama Sastry, B.A.,  First Volume Published by V.C.Sheshacharri, B.A., B.L., Vakil, High Court of Madras, Printers – G.A.Natesan & Co., Pinters & Publishers., Esplande – 1905.                
 ೧೦. ಕನ್ನಡ ಹಾಗು ಆಂಗ್ಲಭಾಷೆಯಲ್ಲಿ ಅನೇಕ ವಿದ್ವಾಂಸರು ರಚಿಸಿದಂತಹ ಅನೇಕ ಗ್ರಂಥಗಳು.     
 
 
 
 
ಲೇಖನ ವರ್ಗ (Category):