ನಾನೂ ಒಬ್ಬ ಮನುಷ್ಯ (ಸಣ್ಣ ಕತೆ)

3.333335

ಖಾಸಗಿ ಪದವಿ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಸಂಜೀವಯ್ಯನವರು ತಮ್ಮ ಬೆಳಗಿನ ಉಪಾಹಾರ ಮುಗಿಸಿ  ಮನೆಯಿಂದ ಮೋಟಾರು ಬೈಕಿನಲ್ಲಿ ಕಾಲೇಜಿಗೆ ಹೊರಟರು. ಮುಖ್ಯ ರಸ್ತೆಯ ತಿರುವಿನಲ್ಲೊಂದು ಜನರ ಗುಂಪು ದೂರದಿಂದಲೇ ಕಾಣಿಸಿತು. ಯಾವುದೋ ಅಪಘಾತವಾಗಿರಬೇಕು. ಇತ್ತೀಚೆಗೆ ಇದು ಸಾಮಾನ್ಯವಾಗಿಬಿಟ್ಟಿದೆ. ಭ್ರಮಾಲೋಕದಲ್ಲಿ ಬದುಕುತ್ತಿರುವ ಮನುಷ್ಯರು ಏನನ್ನೊ ಯೋಚಿಸಿಕೊಂಡು ವಾಹನ ಚಾಲನೆ ಮಾಡುತ್ತಾ ರಸ್ತೆಯ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಹತ್ತಿರ ಬಂದು ನೋಡಿದರು. ಸುಮಾರು ಹದಿನೇಳು ಹದಿನೆಂಟು ವಯಸ್ಸಿನ ಹುಡುಗನೊಬ್ಬ ತನ್ನ ಸೈಕಲನ್ನು ಬಿಗಿಯಾಗಿ ಹಿಡಿದು ನಡುಗುತ್ತಾ ನಿಂತುಕೊಂಡಿದ್ದ. ಆತನ ಮುಖದಲ್ಲಿ ತೀವ್ರ ಆತಂಕ ಎದ್ದು ಕಾಣಿಸುತ್ತಿತ್ತು. ಅತನ ಸೈಕಲ್ಲಿನ ಕ್ಯಾರಿಯರ್‍ನಲ್ಲಿ ದೊಡ್ಡದಾದ ಪಾರ್ಸಲಿನ ಬಾಕ್ಸ್ ಇತ್ತು.  ಸೈಕಲ್ಲಿನ ಮುಂದೆ ತಿರುವಿನಲ್ಲಿ ಹೊಚ್ಚ ಹೊಸ ಟೊಯೊಟಾ ಇನ್ನೋವಾ ಕಾರೊಂದು ನಿಂತಿತ್ತು. ಹುಡುಗ ಹಿಡಿದಿದ್ದ ಸೈಕಲಿನ ಹ್ಯಾಂಡಲನ್ನು ಮತ್ತೊಬ್ಬ ವ್ಯಕ್ತಿ ಹಿಡಿದು ನಿಂತಿದ್ದ. ಬಹುಷಃ ಕಾರಿನ ಡ್ರೈವರನಿರಬೇಕು ಎಂದುಕೊಳ್ಳುವಷ್ಟರಲ್ಲಿ ಅವನ ಪಕ್ಕದಲ್ಲಿ ಉತ್ತಮ ದಿರಿಸು ಧರಿಸಿ ದೊಡ್ಡ ಮನುಷ್ಯರಂತೆ ಕಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹುಡುಗನಿಗೆ ಮುಖ ಮೂತಿ ನೋಡದೇ ಬಾರಿಸಿದ್ದನ್ನು ಕಂಡು ಸಂಜೀವಯ್ಯನವರಿಗೆ ಅಯ್ಯೋ ಎನಿಸಿತು. ‘ದಮ್ಮಯ್ಯ ಅಂತೀನಿ, ನೋಡ್ಲಿಲ್ಲ ಸಾರ್.. ಬುಟ್ಬುಡಿ ಸಾರ್..ಕೊರಿಯರ್ ಆಫೀಸಿಗೆ ಹೋಗ್ಬೇಕು.. ಲೇಟಾಗ್ತದೆ.. ಪಾರ್ಸೆಲ್ ಕಳುಸ್ದೇ ಇದ್ರೆ ನಮ್ ಯಜಮಾನ್ರು ಸಿಟ್ಟಾಗ್ತಾರೆ.. ನನ್ ಕೆಲ್ಸ ಹೋಯ್ತದೆ’ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ.

  ಸಂಜೀವಯ್ಯನವರಿಗೆ ಅವನನ್ನು ಕಂಡು ಹೊಟ್ಟೆ ಉರಿದುಹೊಯಿತು. ಎಲ್ಲಾ ಮನುಷ್ಯರ ಹುಟ್ಟು ಒಂದೇ ತೆರನಾಗಿದ್ದು ಮನುಷ್ಯನ ಬದುಕು ಆತನ ಸಾವಿನೊಂದಿಗೆ ಅಂತ್ಯ ಕಾಣುತ್ತದೆ. ಮೇಲು-ಕೀಳು, ಬಡವ-ಬಲ್ಲಿದನೆಂಬ ಅರ್ಥಹೀನ ಕಲ್ಪನೆಗಳು ಮಾನವನಿರ್ಮಿತವಾದವು ಎಂದು  ತನ್ನ ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರವನ್ನು ಬೋಧಿಸುತ್ತಾ ಸಮಾನತೆಯ ಬಗ್ಗೆ ತಿಳಿಹೇಳುತ್ತಿದ್ದವರಿಗೆ ದೌರ್ಜನ್ಯ ಮತ್ತು ಕ್ರೌರ್ಯದ ಜೀವಂತ ಉದಾಹರಣೆಯೊಂದು ಎದುರಿನಲ್ಲಿ ಕಾಣಿಸಿ ಕಳವಳವಾಗಿ ಗುಂಪಿನ ಹಿಂದಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಏನಾಯಿತೆಂದು ವಿಚಾರಿಸಿದರು. ‘ಆ ಹುಡ್ಗ ರಸ್ತೇಲಿ ಸ್ಪೀಡಾಗಿ ಸೈಕಲ್ ಹೊಡ್ಕಂಡ್ ಬರ್ತಿದ್ದ ಸಾರ್.. ಇನ್ನೋವಾ ಕಾರು ಅವನನ್ನ ಓವರ್‍ಟೇಕ್ ಮಾಡ್ಕಂಡ್ ಪಕ್ಕದ್ ರಸ್ತೆಗೆ ಟರ್ನ್ ಆಯ್ತು.. ಆ ಹುಡ್ಗ ಸೈಕಲ್ ಬ್ರೇಕ್ ಹಾಕ್ದ.. ಕಂಟ್ರೋಲ್ ಮಾಡಕ್ಕಾಗ್‍ಲಿಲ್ವೇನೋ, ಆ ಕಾರಿಗೆ ಗುದ್ದಿ ಸೈಕಲ್ ಪೆಟ್ಲು ಕಾರಿನ ಉದ್ದಕ್ಕೂ ಗೆರೆ ಹೊಡ್ದದೆ.. ಅಲ್ಲೊಂದ್ ಕಡೆ ಸುಮಾರಾಗಿ ತಗ್ಗೋಗದೆ’ ಎಂದು ಆ ವ್ಯಕ್ತಿ ತಿಳಿಸಿದ.

  ಸಂಜೀವಯ್ಯನವರ ಮನಸ್ಸಿನಲ್ಲಿ ಅಷ್ಟೇನಾ? ಅಂತಾದ್ದೇನೂ ಆಗಿಲ್ಲವಲ್ಲ.. ಅನಿಸಿತು. ಆದ್ರೂ ಆ  ಹುಡುಗನಿಗೆ ಇವರು ಯಾಕೀಗೆ ಹೊಡೆಯುತ್ತಿದ್ದಾರೆ? ಏನೇ ಆಗಿದ್ದರೂ ಇನ್ನೊಬ್ಬರಿಗೆ ಹೊಡೆಯುವ ಅಧಿಕಾರವನ್ನು ಇವರಿಗೆ ಯಾರು ಕೊಟ್ಟಿದ್ದಾರೆ ಎಂಬುದು ಅರ್ಥ ಆಗದೆ ಆಕ್ರೋಶ ಬಂದಂತಾಯ್ತು. ಆಧುನಿಕ ಯುಗದಲ್ಲಿ ಸ್ವಾತಂತ್ರ್ಯವೆಂದರೆ ನಾವೂ ಬದುಕಿ ಇನ್ನೊಬ್ಬರಿಗೆ ನೆಮ್ಮದಿಯಿಂದ ಬದುಕಲು ನೀಡಬೇಕಾಗಿರುವ  ಸಹಕಾರ ಎನಿಸಿತು. ಆದರೂ ಯಾಕೋ ಏನೋ ತಮ್ಮ ಸಮಾಜಶಾಸ್ತ್ರದ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲು ಮನಸ್ಸು ಅಳುಕಿ ಮೂಕಪ್ರೇಕ್ಷಕರಾಗಿ ನಿಂತರು.

  ಆ ಹುಡುಗ ದಮ್ಮಯ್ಯ ಎಂದು ಬೇಡಿಕೊಳ್ಳುತ್ತಿದ್ದುದನ್ನು ಲೆಕ್ಕಿಸದೆ ದೊಡ್ಡಮನುಷ್ಯರು ‘ನಿನ್ನುನ್ನ ಬುಟ್‍ಬುಟ್ರೆ ರಿಪೇರಿ ಖರ್ಚನ್ನ ನಿಮ್ಮಪ್ಪ ಕೊಡ್ತಾನಾ? ಬೋಳಿಮಗನೇ...ಸರಿಯಾಗಿ ರಸ್ತೇಲಿ ನೋಡ್ಕಂಡ್ ಹೋಗೋಕಾಗಲ್ವಾ..?’ ಅಂತ ಆತನ ತಲೆಯ ಮೇಲೆ ಮತ್ತೆರಡು ಏಟು ಕೊಟ್ಟರು. ಆ ಹುಡುಗ ‘ಸಾರ್ ಸಾರ್ ಹೊಡೀಬೇಡಿ ಸಾರ್.. ಸೈಕಲ್ ನೀವೇ ಇಟ್ಕಳಿ ಪಾರ್ಸೆಲ್ ಕೊರಿಯರ್ ಮಾಡ್ಬೇಕು..ಟೈಮಾದ್ರೆ ನನ್ ಕೆಲ್ಸ ಹೋಯ್ತದೆ’ ಎಂದು ಹೊಡೆತಗಳಿಂದ ತಪ್ಪಿಸಿಕೊಳ್ಳಲು ತನ್ನ ಎರಡೂ ಕೈಗಳನ್ನು ಅಡ್ಡ ಹಿಡಿದು ಮೈಮುದುರಿಕೊಂಡು ಎಷ್ಟೇ ಬೇಡಿಕೊಂಡರೂ ದೊಡ್ಡಮನುಷ್ಯರ ಹೃದಯ ಕರಗಲಿಲ್ಲ. ಮತ್ತೆ ಮತ್ತೆ ಅವಾಚ್ಯ ಶಬ್ದಗಳಿಂದ ಹುಡುಗನನ್ನೂ ಅವನ ಅಪ್ಪ-ಅಮ್ಮಂದಿರನ್ನು ನಿಂದಿಸಿ ‘ನಿನ್ ಸೈಕಲ್ ಗುಜರಿಗಾಕಿದ್ರೂ ನೂರ್ ರೂಪಾಯಿ ಯಾರೂ ಕೊಡಲ್ಲ.. ಇನ್ನೂ ನನ್ ಗಾಡಿ ತಗಂಡ್ ಒಂದು ವಾರಾನೂ ಆಗಿಲ್ಲ.. ನಂಬರ್ ಪ್ಲೇಟೇ ಹಾಕ್ಸಿಲ್ಲ ಅಷ್ಟರಲ್ಲಿ ಹಿಂಗ್ ಮಾಡ್ಬುಟ್ಟಲ್ಲೋ ಸೂಳೆಮಗನೇ.. ನಡಿ ಗಾಡೀಲಿ ಕುತ್ಕೋ, ಸರ್ವೀಸ್ ಸ್ಟೇಷನ್ನಿಗೋಗಿ ಕೇಳಾನ..ಅದಕ್ಕೆ ಎಷ್ಟ್ ಖರ್ಚಾಯ್ತದೋ ಅದನ್ನ ಹೆಂಗೆ ಕೊಡ್ತೀಯೋ ಗೊತ್ತಿಲ್ಲ.. ನಿಮ್ ಯಜಮಾನಂಗೇ ಬೇಕಾದ್ರೆ ಫೋನ್ ಮಾಡು.. ನಂಬರ್ ಹೇಳು ಅವುಂದು..’ ಎಂದು ಏನೇನೋ ಬಡಬಡಿಸತೊಡಗಿದರು.

   ‘ಸಾರ್ ನಮ್ ಯಜಮಾನ್ರಿಗೆ ಹೇಳುದ್ರೆ ಕೆಲ್ಸದಿಂದ ತೆಗೆದಾಕ್ತಾರೆ ಸಾರ್..’ ಎಂದು ಎಷ್ಟೇಷ್ಟೋ ಅಂಗಲಾಚುತ್ತಿದ್ದ ಹುಡುಗನನ್ನು ಕಂಡು ಸಂಜೀವಯ್ಯನವರಿಗೆ ಸಂಕಟ ಆಗತೊಡಗಿತು. ‘ಈ ಹುಡ್ಗಂದೇ ತಪ್ಪು.. ಇಲ್ಲ ಕಾರು ಅವುನನ್ನ ಓವರ್ ಟೇಕ್ ಮಾಡಿದ್ದು ತಪ್ಪು’ ಅಂತ ಹಿಂದೆ ನಿಂತುಕೊಂಡಿದ್ದ ಜನ ಮಾತನಾಡಿಕೊಂಡರೇ ಹೊರತು ಯಾರೂ ಅವನ ಸಹಾಯಕ್ಕೆ ಹೋಗುವಂತೆ ಕಾಣಿಸಲಿಲ್ಲ. ರಸ್ತೆಯಲ್ಲಿ ಯಾರೂ ಪೋಲೀಸರೂ ಕಣ್ಣಿಗೆ ಬೀಳುತ್ತಿಲ್ಲವಲ್ಲ ಎಂದು ಸಂಜೀವಯ್ಯನವರು ಚಡಪಡಿಸತೊಡಗಿದರು. ಅಷ್ಟರಲ್ಲಿ ಮತ್ತೆ ಆ ದೊಡ್ಡಮನುಷ್ಯರು ತಮ್ಮ ಕಾರನ್ನೊಮ್ಮೆ ನೋಡಿ ಹುಡುಗನನ್ನು ಬಯ್ಯತ್ತಾ ಆತನ ತಲೆಯ ಮೇಲೆ ಮತ್ತೆರಡು ಏಟು ಕೊಟ್ಟಾಗ ಸಂಜೀವಯ್ಯನವರ ತಾಳ್ಮೆ ಕರಗಿಹೋಯ್ತು. ತಮ್ಮ ಬೈಕನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಗುಂಪಿನಲ್ಲಿ ದಾರಿ ಮಾಡಿಕೊಂಡು ಮುಂದೆ ಹೋಗಿ ‘ಸ್ವಾಮಿ, ಅವನಿಗೆ ಯಾಕಂಗೆ ಹೊಡೀತಿದೀರಿ..ಮೊದ್ಲು ಹೊಡೆಯೋದ್ ನಿಲ್ಸಿ..’ ಎಂದರು. ಇವರು ಧೈರ್ಯವಾಗಿ ಪ್ರಶ್ನಿಸಿದ್ದನ್ನು ಕಂಡು ಸ್ವಲ್ಪ ಅಪ್ರತಿಭರಾದಂತೆ ಕಂಡ ದೊಡ್ಡಮನುಷ್ಯರು ‘ನೀವ್ಯಾರ್ರೀ ಕೇಳೋದಿಕ್ಕೆ..? ನೀವ್ ಕೊಡ್ತೀರೇನ್ರೀ ರಿಪೇರಿ ಖರ್ಚನ್ನಾ..? ಏನೋ ಬಂದುಬುಟ್ರು.. ನಾನ್ಯಾರು ಅಂತ ಗೊತ್ತಾ..?’ ಎಂದು ಸಿಟ್ಟಿನಿಂದ ರೇಗಾಡತೊಡಗಿದರು. ಸಂಜೀವಯ್ಯನವರು ಅದನ್ನು ಲೆಕ್ಕಿಸದೆ ಹುಡುಗನನ್ನೂ ಮತ್ತು ಅವನ ಸೈಕಲನ್ನೂ ಪಕ್ಕಕ್ಕೆ ಎಳೆದು ಸರಿಸಿ ಮಧ್ಯದಲ್ಲಿ ನಿಂತುಕೊಂಡರು. ಅಲ್ಲಿದ್ದ ನಾಲ್ಕಾರು ಜನಕ್ಕೆ ಧೈರ್ಯ ಬಂದು ‘ ಮರೀ ನೀನು ಈ ಕಡೆ ಬಾರೋ..ಈ ಕಡೆ ಬಾರೋ..’ ಎಂದು ಕೂಗಿ ಅ ಹುಡುಗನನ್ನು ಸುತ್ತುವರಿದು ಅತ್ತ ಕರೆದೊಯ್ದರು.

   ‘ಈಗ ಹೇಳಿ ಸ್ವಾಮಿ’ ಎಂದರು ಸಂಜೀವಯ್ಯನವರು. ಕೋಪದಿಂದ ಕುದಿಯುತ್ತಿದ್ದ ದೊಡ್ಡಮನುಷ್ಯರು ‘ನಿಮ್ಗೇನ್ ಗೊತ್ತಾಗ್ ಬೇಕ್ರಿ ನನಗಾಗ್ತಿರೋ ಹೊಟ್ಟೆ ಉರಿ.. ಹನ್ನೆರಡು ಲಕ್ಷ ಬಂಡವಾಳ ಹಾಕಿ ತಗೊಂಡಿರೋ ಗಾಡಿ.. ಇನ್ನೂ ಒಂದ್ ವಾರಾನೂ ಆಗಿಲ್ಲ..’ ಎಂದು ಕಣ್ಣು ಕೆಂಪಗೆ ಮಾಡಿಕೊಂಡು ಸಂಜೀವಯ್ಯನವರನ್ನೇ ದುರುಗುಟ್ಟಿಕೊಂಡು ನೋಡತೊಡಗಿದರು. ಅಷ್ಟರಲ್ಲಿ ಸುತ್ತಲಿದ್ದ ಜನರೆಲ್ಲಾ ಹೇಗೋ ಮಾಡಿ ಆ ಹುಡುಗನನ್ನು ಅಲ್ಲಿಂದ ಕಳುಹಿಸಿ ಮಾಯ ಮಾಡಿದ್ದರು. ‘ಅಲ್ಲಾ ಸ್ವಾಮಿ.. ನೀವು ಹಾಕಿರೋ ಬಂಡವಾಳ ಹನ್ನೆರಡು ಲಕ್ಷವೇ ಇರ್ಬೋದು.. ಒಬ್ಬ ಮನುಷ್ಯನ ಬೆಲೆ ಎಷ್ಟೆಂದು ತಿಳಿದಿದ್ದೀರಿ..? ಅವನ ಮೇಲೆ ಕೈ ಮಾಡುವ ಅಧಿಕಾರ ಯಾರು ಕೊಟ್ಟಿದ್ದು ನಿಮಗೆ..? ಎಲ್ಲದಕ್ಕೂ ಕಾನೂನಿದೆ.. ನಿಮಗೆ ಆ ಹುಡುಗ ಮಾಡಿದ್ದು ತಪ್ಪು ಎನಿಸಿದರೆ ಆತನನ್ನು ಕರೆದುಕೊಂಡು ಹೋಗಿ ಪೋಲೀಸು ಠಾಣೆಯಲ್ಲಿ ಕಂಪ್ಲೇಂಟ್ ಕೊಡಬಹುದಿತ್ತಲ್ಲ.. ಅವನು ನಿಮ್ಮ ಮಗನೇ ಆಗಿದ್ದು ಬೇರೆ ಯಾರಾದರೂ ನಿಮ್ಮಂತೆ ನಡೆದುಕೊಂಡಿದ್ದರೆ ನೀವು ಸುಮ್ಮನಿರುತ್ತಿದ್ದಿರಾ..? ನೀವು ಇವತ್ತು ಆತನ ಮೇಲೆ ಕೈ ಮಾಡಿದ್ದು ಬೆಳೆಯುವ ಹುಡುಗನ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರಬಹುದು ಅಂತ ಯೋಚ್ನೇ ಮಾಡಿದೀರಾ? ಮುಂದೆ ಅದೇ ಸೇಡನ್ನು ಮನಸ್ಸಿನಲ್ಲಿ ತುಂಬಿಕೊಂಡು ಬೇರೆಯವರ ಮೇಲೆ ನಿಮ್ಮಂತೆ ಅವನು ಕೈ ಮಾಡಲು ಶುರು ಮಾಡಿ ಹಿಂಸಾಪ್ರವೃತ್ತಿಯನ್ನು ಬೆಳೆಸಿಕೊಂಡರೆ ಸಮಾಜದ ಮೇಲೆ ಎಂತಹ ದುಷ್ಪರಿಣಾಮ ಉಂಟಾಗುತ್ತದೆ ಎಂಬುದನ್ನು ಯೋಚಿಸಿದ್ದೀರಾ..?’ ಸಂಜೀವಯ್ಯನವರು ಅವರಿಗರಿವಿಲ್ಲದಂತೆ ಆವೇಶಭರಿತರಾಗಿ ಮಾತನಾಡುತ್ತಿದ್ದರು.

   ಸ್ವಲ್ಪ ಹೊತ್ತು ಸುಮ್ಮನಾದ ದೊಡ್ಡಮನುಷ್ಯರು ‘ಇಷ್ಟೆಲ್ಲಾ ಮಾತಾಡ್ತಾ ಇದೀರಲ್ಲಾ, ನೀವ್ಯಾರು?’ ಎಂದು ಮತ್ತೆ ಗುಡುಗಿದರು. ಸಂಜೀವಯ್ಯನವರ ಆವೇಶ ಇಳಿದಿತ್ತು. ಸಮಾಧಾನವಾಗಿ ‘ನಾನೂ ಒಬ್ಬ ಮನುಷ್ಯ’ ಎಂದಷ್ಟೇ ಉತ್ತರಿಸಿದರು. ದೊಡ್ಡಮನುಷ್ಯರಿಗೆ ಏನನ್ನಿಸಿತೋ ಪಕ್ಕದಲ್ಲಿ ನಿಂತಿದ್ದ ಡ್ರೈವರನಿಗೆ ಸಂಜ್ಞೆ ಮಾಡಿ ಕಾರನ್ನತ್ತಿಕೊಂಡು ಹೊರಟುಹೋದರು.

                                     *************

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ‌ ತಿಮ್ಮಪ್ಪನವರೆ, ವಾಸ್ತವವಾಗಿ ನಡೆಯುತ್ತಿರುವ‌ ವಿಚಾರವನ್ನು ಸು0ದರವಾಗಿ ನಿರೂಪಿಸಿದ್ದೀರಿ. ಉತ್ತಮ‌ ಪ್ರಸ್ತುತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಆತ್ಮೀಯ‌ ಪ್ರಕಾಶ್ ರವರೇ ಇವತ್ತು ಮಾನವ‌ ಹಕ್ಕುಗಳ‌ ದಿನ‌.. ಎಲ್ಲರಿಗೂ ಶುಭವಾಗಲಿ ತಮ್ಮ‌ ಪ್ರತಿಕ್ರಿಯೆಗೆ ತುಂಬು ಹೃದಯದ‌ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

‘ನಾನೂ ಒಬ್ಬ ಮನುಷ್ಯ’ +1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರೇಮಾಶ್ರೀಯವರಿಗೆ ಹೃತ್ಪೂರ್ವಕ‌ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.