ನವರಾತ್ರಿ

4.666665

 ಭಾರತದೇಶದಲ್ಲಿ 9 ದಿನಗಳ ಪರ್ಯಂತ ಆಚರಿಸುವ ಕೆಲವು ಹಬ್ಬಗಳಿವೆ. ಯಾರನ್ನು ಉದ್ದೇಶಿಸಿ ಈ ಹಬ್ಬಗಳನ್ನು ಆಚರಿಸಲಾಗುವುದೋ ಅದೇ ಹೆಸರಿನಿಂದ ನವರಾತ್ರಿ ಎಂದು ಕರೆಯಲಾಗುವುದು ಉದಾಹರಣೆಗೆ : ಶ್ರೀರಾಮಚಂದ್ರಪ್ರಭುವು ಅವತರಿಸಿದ ನವಮಿಯ ಮುನ್ನ ಬರುವ 9 ದಿನಗಳನ್ನು ಶ್ರೀರಾಮನವರಾತ್ರಿ ಎಂದು, ಗಂಗೆಯು ಧರೆಗಿಳಿದ ದಿನದ ಮೊದಲ ಒಂಭತ್ತು ದಿನಗಳನ್ನು ಗಂಗಾ ನವರಾತ್ರಿ ಎಂದು, ದುರ್ಗೆಯನ್ನುದ್ದೇಶಿಸಿ ಮಾಡುವ 9 ದಿನಗಳ ಉತ್ಸವವನ್ನು ದುರ್ಗಾ ನವರಾತ್ರಿ ಎಂದು ಕರೆಯುವರು. ಮಾಘ ಮಾಸದ ಶುಕ್ಲಪಕ್ಷದ ನವಮಿಯಂದು ಶ್ರೀಮಧ್ವಾಚಾರ್ಯರು ಬದರಿಕಾಶ್ರಮದಲ್ಲಿ ಅದೃಶ್ಯರಾದ ದಿನವನ್ನು ಮಧ್ವನವಮಿ ಎಂದು ಆಚರಿಸುತ್ತಾರಾದ್ದರಿಂದ ಆ ದಿನದ ಪ್ರಾರಂಭದ ಒಂಧತ್ತು ದಿನಗಳು ಮಧ್ವನವರಾತ್ರಿ ಪ್ರಖ್ಯಾತವಾಗಿವೆ. ಈ ಕೆಲವು ನವರಾತ್ರಿಗಳ ನಂತರ ನಂತರ ಹತ್ತನೆಯ ದಿನ ವಿಜೃಂಭಣೆಯ ಮಂಗಲವೂ ಸೇರಿದರೆ ಅದನ್ನು ದಶಹರ ಅಥವಾ ದಸರಾ ಎಂದು ಹೇಳುವರು. ಈ ಎಲ್ಲ ನವರಾತ್ರಿಯ ಉತ್ಸವಗಳಲ್ಲಿ ಅಶ್ವಯುಜ ಮಾಸದ ಪ್ರಾರಂಭದ ಹತ್ತು ದಿನಗಳಲ್ಲಿ ಆಚರಿಸುವ ನವರಾತ್ರಿಯು ಜಗದ್ವಿಖ್ಯಾತವಾಗಿದೆ. ಚಾಂದ್ರಮಾನ ಪಂಚಾಂಗರೀತ್ಯಾ ಶರದೃತುವಿನ ಮೊದಲ 9 ದಿನಗಳಲ್ಲೇ ಈ ಉತ್ಸವವನ್ನು ಆಚರಿಸಬೇಕಾದ್ದರಿಂದ ಇದಕ್ಕೆಶರನ್ನವರಾತ್ರಿ ಎಂದೂ ಸಹ ಹೆಸರಿದೆ. ಇಷ್ಟೆಲ್ಲ ನವರಾತ್ರಿ ಹಾಗು ದಸರೆಗಳು ಪ್ರಚಲಿತವಾಗಿದ್ದರೂ ಮೇಲೆ ಹೇಳಿದ ದುರ್ಗೆಯ ನವರಾತ್ರಿ ಭಾರತದಾದ್ಯಂತ ವಿಭಿನ್ನ ರೂಪಗಳನ್ನು ತಾಳಿ ಭಾರತೀಯ ಪರ್ವಗಳಲ್ಲೇ ವಿಶಿಷ್ಟ ಸ್ಥಾನವನ್ನು ಸಂಪಾದಿಸಿದೆ. ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನಗಳಲ್ಲೂ ಈ ಉತ್ಸವವನ್ನು ಆಚರಿಸುತ್ತಾರೆ. ಈ ನವದಿನಗಳಲ್ಲಿ ಮಾಡಬೇಕಾದ ಧಾರ್ಮಿಕ ಕಾರ್ಯಗಳ ಬಗ್ಗೆ ಒಂದಿಷ್ಟು ಬೆಳಕು ಹರಿಸುವ ಯತ್ನವೇ ಈ ಲೇಖನ.


ನವರಾತ್ರಿಯನ್ನು ನಾವು 9 ದಿನಗಳ ಉತ್ಸವ,ಹಬ್ಬ ಎಂದು ಆಚರಿಸುತ್ತೇವಾದರೂ ವಾಸ್ತವಿಕವಾಗಿ ನವರಾತ್ರಿ ಎನ್ನುವುದು ಒಂದು ವ್ರತ. ಈ ಬಗ್ಗೆ ಭಗವಂತನೇ ಭವಿಷ್ಯೋತ್ತರ ಪುರಾಣದಲ್ಲಿ ಬರುವ ಆಶ್ವೀಜ ಮಾಸ ಮಹಾತ್ಮೆಯಲ್ಲಿ ನಾರದರಿಗೆ ನವರಾತ್ರಿಯ ಮಹಾತ್ಮೆಯನ್ನು ಹೇಳಿದ್ದಾನೆ. ಆಶ್ವೀಜ ಮಾಸದ ಶುದ್ಧ ಪ್ರತಿಪದದಿಂದ  ಪ್ರಾರಂಭಿಸಿ ದಶಮಿಯವರೆಗಿನ ನವದಿನಗಳಲ್ಲಿ ನವದುರ್ಗೆಯರ ರೂಪದಲ್ಲಿರುವ ಶ್ರೀ ಮಹಾಲಕ್ಷ್ಮಿಯ ತುಷ್ಟಿಗಾಗಿ ಮತ್ತು ಅನುಗ್ರಹಕ್ಕಾಗಿ  ಈ ನವರಾತ್ರಿಯ ವ್ರತವನ್ನು ಆಚರಿಸಬೇಕು. ಶ್ರೀ ಮಹಾಲಕ್ಷ್ಮಿದೇವಿಯು ನವದಿನಗಳಲ್ಲಿ ಜಯಂತೀ,ಮಂಗಲಾ,ಕಾಳಿ,ಸ್ವಧಾ,ಸ್ವಾಹಾ,
ಕಪಾಲಿನೀ,ದುರ್ಗಾ, ಕ್ಷಮಾ,ಶಿವಾ,ಧಾತ್ರೀ ಮುಂತಾದ ರೂಪಗಳಲ್ಲಿ ಭಕ್ತರ ಮನೋಭೀಷ್ಟಗಳನ್ನು ಪೂರೈಸುತ್ತಾಳೆ ಎಂದು ಭವಿಷ್ಯೋತ್ತರ ಪುರಾಣದಲ್ಲಿ ವರ್ಣಿಸಲಾಗಿದೆ. ಹೀಗೆ ನಾನಾ ರೂಪಗಳಲ್ಲಿರುವ ಲಕ್ಷ್ಮೀ ಸ್ವರೂಪಳಾದ ದುರ್ಗೆಯನ್ನು ಉಪಾಸಕನು ಕಾಮ,ಕ್ರೋದಾಧಿಗಳಿಂದ ವರ್ಜಿತನಾಗಿ ಉಪವಾಸ ಮತ್ತು ಇತರ ನೇಮಗಳಿಂದ ಪಾಲಿಸುತ್ತಾ ನವರಾತ್ರಿ ವ್ರತವನ್ನಾಚರಿಸಬೇಕು. ಗಮನಿಸಬೇಕಾದ ವಿಷಯ : ದುರ್ಗೆಯು ಈ ದಿನಗಳ ಪ್ರಧಾನ ದೇವತೆಯಾಗಿದ್ದರೂ ಆಕೆ ಕೇವಲ ಅಧಿಷ್ಠಾನ ಮಾತ್ರಳಾಗಿದ್ದು, ಮುಖ್ಯರೂಪದಿಂದ ಭಗವಂತನೇ ಇಲ್ಲಿ ಈ ಅರ್ಚನೆಯನ್ನು ಸ್ವೀಕರಿಸುತ್ತಾನೆ.

ನವರಾತ್ರಿಯಲ್ಲಿ ಮಾಡಬೇಕಾದ ಧರ್ಮಗಳು: ನವರಾತ್ರಿಯಲ್ಲಿ ಮುಖ್ಯವಾಗಿ ಸಚ್ಛಾಸ್ತ್ರಪಾರಾಯಣ ಮಾಡಬೇಕು. ಅದರಲ್ಲೂ ಶ್ರೀ ವೇಂಕಟೇಶ ಮಹಾತ್ಮ್ಯವನ್ನು ಪಠಣ ಯಾ ಶ್ರವಣ ಮಾಡುವುದು ಬಹಳ ಉತ್ತಮ.9ದಿನಗಳೂ ಜಪ,ತಪ, ದುರ್ಗಾಹೋಮಗಳನ್ನು ಮಾಡಬೇಕು ಮತ್ತು ಈ ದಿನಗಳಲ್ಲಿ ಕುಮಾರೀ ಭೋಜನವನ್ನು ಮಾಡಿಸಬೇಕು ಎಂದು  ಭವಿಷ್ಯೋತ್ತರ ಪುರಾಣದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲದೇ 9ದಿನಗಳಲ್ಲಿ ಮಾಡಬೇಕಾದ ದಾನ,ನೇಮಗಳು ಕ್ರಮವಾಗಿ ಹೀಗಿವೆ.ಆಶ್ವೀಜ ಪ್ರತಿಪದದಂದು ಯೋಗ್ಯ ವ್ಯಕ್ತಿಗೆ ಕೇಶ ಸಂಸ್ಕಾರದ ದ್ರವ್ಯಗಳನ್ನು ದಾನ ಮಾಡಬೇಕು. ದ್ವಿತೀಯಾ ದಿನ ರೇಶ್ಮೆ ವಸ್ತ್ರವನ್ನೂ,ತೃತೀಯಾದಂದು ಕನ್ನಡಿ,ಸಿಂಧೂರವನ್ನೂ,ಚತುರ್ಥಿ ದಿನದಂದು ಮಧುಪರ್ಕ,ತಿಲಕ ಪಂಚಮಿ ದಿನ ಶಕ್ತ್ಯಾನುಸಾರ ಅಲಂಕಾರಕ್ಕೆ ಆಭರಣವನ್ನೂ ಕೊಡಬೇಕು. ಷಷ್ಠಿಯಂದು ಬಿಲ್ವವೃಕ್ಷ ಸನ್ನಿಧಿಯಲ್ಲಿ ಸಂಜೆ ಪೂಜಿಸಬೇಕು. ಸಪ್ತಮಿ ಬಿಲ್ವಪತ್ರವನ್ನು ಮನೆಗೆ ತಂದು ದುರ್ಗಾದೇವಿಯನ್ನು ಪೂಜಿಸಬೇಕು. ಅಷ್ಟಮಿ ದಿನ ಉಪವಾಸವಿದ್ದು ತನ್ನ ಸಾಮರ್ಥ್ಯಕ್ಕನುಗುಣವಾಗಿ ವೈಭವದಿಂದ ಪೂಜಿಸಬೇಕು. ನವರಾತ್ರಿಯ ವ್ರತದ ಕೊನೆಯ ದಿನವಾದ ನವಮಿಯಂದು ನವ ದುರ್ಗೆಯ ಪೂಜೆ ನೆರವೇರಿಸಿ ಹೋಮವನ್ನು ಮಾಡಬೇಕು. ಈ ಅಚರಣೆಯಿಂದ ದೇವಿಯನ್ನು ಪ್ರಸನ್ನಗೊಳಿಸುವ ಸಾಧಕನಿಗೆ ನವದುರ್ಗಾದೇವಿಯು ಎಲ್ಲ ಆಪತ್ತುಗಳನ್ನು ಪರಿಹರಿಸಿ ಕಾಯುತ್ತಾಳೆ. ಇವಿಷ್ಟೂ ನವರಾತ್ರಿ ಅಚರಿಸಬೇಕಾದ ಧರ್ಮಗಳು ಎಂದು ಭವಿಷ್ಯೋತ್ತರ ಪುರಾಣವು ಹೇಳುತ್ತದೆ. ಅಲ್ಲದೇ ಕೆಳಕಂಡ ಪೂಜಾದಿಗಳೂ ನೆರವೇರಿಸುವುದು ಕಡ್ಡಾಯ ಎನ್ನುತ್ತವೆ ನಮ್ಮ ಪುರಾಣಗಳು.

೧) ಘಟ ಸ್ಥಾಪನೆ: ಘಟವೆಂದರೆ ಮಡಿಕೆ. ಮಟ್ಟಸವಾದ ಮಡಿಕೆಯೊಂದರಲ್ಲಿ ಶುದ್ಧವಾದ ಮಣ್ಣು ತುಂಬಿ ಅದರಲ್ಲಿ ವಿವಿಧ ಧಾನ್ಯಗಳನ್ನು ಬಿತ್ತಿ, ಅದನ್ನು ದೇವರ ಮನೆಯಲ್ಲಿ ಇಡಬೇಕು. ಇದನ್ನು ಘಟಸ್ಥಾಪನೆ / ಅಂಕುರಾರ್ಪಣವೆಂದು ಕರೆಯುತ್ತಾರೆ. ಮನೆತನದ ಸಂಪ್ರದಾಯಕ್ಕನುಗುಣವಾಗಿ ಘಟ ಸ್ಥಾಪನೆ ಮಾಡಿ, ಅದರ ಪಕ್ಕದಲ್ಲಿ  ತುಪ್ಪ ಮತ್ತು ಎಣ್ಣೆಯ ಎರಡು ಪ್ರತ್ಯೇಕ ನಂದಾದೀಪಗಳನ್ನು ಸ್ಥಾಪಿಸಬೇಕು.9,5,3 ದಿನ ಕ್ರಮವಾಗಿ ನವರಾತ್ರೋತ್ಸವ,ಪಂಚರಾತ್ರೋತ್ಸವ,ತ್ರಿರಾತ್ರೋತ್ಸವ ಅಚರಿಸಬೇಕು. ಹಾಗೂ ಈ ದಿನಗಳಲ್ಲಿ ಶ್ರೀ ವೇಂಕಟೇಶ ಮಹಾತ್ಮ್ಯವನ್ನು ಹೇಳಿಸುವುದು ಮುಖ್ಯವಾಗಿದೆ.

೨) ಸರಸ್ವತೀ ಸ್ಥಾಪನೆ ಮತ್ತು ವಿಸರ್ಜನೆ: ಶಾಸ್ತ್ರದಲ್ಲಿ ಹೇಳಿರುವಂತೆ ಆಶ್ವೀಜ ಶುದ್ಧ್ಹಮಾಸದ ಮೂಲಾ ನಕ್ಷತ್ರ ಇರುವ ದಿನದಲ್ಲಿ ಸಚ್ಛಾಸ್ತ್ರ ಗ್ರಂಥಗಳನ್ನು ಇಟ್ಟು ವೇದವ್ಯಾಸ ದೇವರೂ ಪರಶುರಾಮ ದೇವರನ್ನ ಅಹ್ವಾನಿಸಿ ಪೂಜಿಸಬೇಕು. ಹಾಗೂ ಸರಸ್ವತೀ ದೇವಿಯನ್ನೂ ಆವಾಹನೆ ಮಾಡಿ ವಿಶೇಷವಾಗಿ ಅರ್ಚಿಸಬೇಕು. ಮೂಲಾ ನಕ್ಷತ್ರದಲ್ಲಿ ಅವಾಹನೆ ಮಾಡಿದ ವೇದವ್ಯಾಸ-ಪರಶುರಾಮ-ಸರಸ್ವತೀದೇವಿಯರನ್ನು ಶ್ರವಣಾ ನಕ್ಷತ್ರದಂದು ಉತ್ತರಪೂಜೆಯೊಂದಿಗೆ ವಿಸರ್ಜಿಸಬೇಕು. ಅಂದರೆ ವಿಜಯದಶಮಿಯಂದು ವಿಸರ್ಜಿಸಬೇಕು.

೩) ದುರ್ಗಾಷ್ಟಮಿ : ನವರಾತ್ರಿ ದಿನಗಳಲ್ಲಿ ದುರ್ಗಾಷ್ಟಮಿಗೆ ವಿಶೇಷ ಮಹತ್ವವಿದೆ. ಇದಕ್ಕೊಂದು ಹಿನ್ನೆಲೆಯೂ ಇದೆ. ಹಿಂದೆ ರುದ್ರದೇವರನ್ನು ಅಪಮಾನ ಮಾಡಿದ್ದಕ್ಕಾಗಿ ದಕ್ಷಪ್ರಜಾಪತಿಯ ಯಜ್ಞವನ್ನು ನಾಶಪಡಿಸಿದ ಮಹಾಯೋಗಿನಿಯಾದ ಭದ್ರಕಾಳಿಯು ಕೋಟಿ ಗಣಗಳೊಂದಿಗೆ ಪ್ರಾಧುರ್ಭೂತಳಾಗಿದ್ದು ಈ ಅಷ್ಟಮಿಯಂದೇ. ಈ ಕಾರಣಕ್ಕಾಗಿ ಆಶ್ವೀಜ ಶುದ್ಧ್ಹಮಾಸದ ಅಷ್ಟಮಿಯ ದುರ್ಗಾಷ್ಟಮಿ ಎಂದು ಪ್ರಸಿದ್ಧವಾಗಿದೆ. ಹೀಗಾಗಿ ಈ ದಿನ ದುರ್ಗೆಯನ್ನು ಭಕ್ತಿಯಿಂದ ಪೂಜಿಸಿದವನ ಕುಲವನ್ನು ದುರ್ಗಾದೇವಿ ತನ್ನ ಕೋಟಿಗುಣಗಳಿಂದ ಕಾಯುತ್ತಾಳೆ ಎಂಬುದಾಗಿ ಭವಿಷ್ಯೋತ್ತರ ಪುರಾಣದಲ್ಲಿ ವರ್ಣಿತವಾಗಿದೆ.

೪) ಮಹಾನವಮಿ :  ನವರಾತ್ರಿ ವ್ರತದ ಇನ್ನೊಂದು ಮುಖ್ಯಘಟ್ಟವೆಂದರೆ ಮಹಾನವಮಿ. ಈ ದಿನದಂದು ಅಶ್ವಪೂಜೆ, ಗಜಪೂಜೆ, ದುರ್ಗಾದಿ ದೇವತೆಗಳನ್ನು ಪೂಜಿಸಬೇಕು ಇದರಿಂದ ವಿದ್ಯೆ ಹಾಗೂ ಸಂಪತ್ತು ಅಭಿವೃದ್ದಿಯಾಗುತ್ತದೆ. ಅಲ್ಲದೇ ಇದೇ ದಿನ ಆಯುಧ(ಶಸ್ತ್ರಾಸ್ತ್ರ),ಯಂತ್ರ,ವಾಹನಾದಿಗಳನ್ನು ಸ್ವಚ್ಛಗೊಳಿಸಿ ಅಲಂಕರಿಸಿ ಅದರಲ್ಲಿ ದುರ್ಗಾಂತರ್ಯಾಮಿ  ಭಗವದ್ರೂಪವನ್ನು ಚಿಂತಿಸಿ ಪೂಜಿಸಬೇಕು. ಇದರಿಂದ ನಮ್ಮ ಆಯುಧ,ಯಂತ್ರಗಳ ಬಲ ವೃದ್ಧಿಸುತ್ತದೆ.

೫) ವಿಜಯದಶಮಿ :  ವಿಜಯದಶಮಿಯಂದು ವಿಜಯೋತ್ಸವ ಆಚರಿಸುವ ದಿನ. ಅಂದರೆ ವಿಜಯದ ಸಂಕೇತವಾದ ಶಮೀವೃಕ್ಷವನ್ನು ಪೂಜಿಸಿದರೆ ಶತ್ರುಜಯ ಪಾಪಪರಿಹಾರ, ಮುಖ್ಯ ಕಾರ್ಯಗಳಲ್ಲಿ ವಿಜಯ ದೊರೆಯುತ್ತದೆ. ಇದಕ್ಕೊಂದು ಹಿನ್ನೆಲೆ ಇದೆ. ಭರತವರ್ಷದ ಅತಿ ಪ್ರಮುಖ ಘಟನೆಗಳು ನಡೆದದ್ದು ಈ ದಿನದಂದೇ. ಕೌರವರೊಡನೆ ಅಕ್ಷಕ್ರೀಡೆಯಲ್ಲಿ ಸೋತ ಪಾಂಡವರು ಸೋತ ಪಾಂಡವರು 12ವರ್ಷಗಳ ವನವಾಸ ಹಾಗೂ 1 ವರ್ಷದ ಅಜ್ಞಾತವಾಸ ಮುಗಿಸುವ ಸಂದರ್ಭದಲ್ಲಿ ಊರ ಹೊರಗಿನ ಶಮೀವೃಕ್ಷದಲ್ಲಿ ಕಟ್ಟಿಹಾಕಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗೆ ಇಳಿಸಿಕೊಂಡು ತಮ್ಮತಮ್ಮ ಆಯುಧಗಳನ್ನು ಪೂಜಿಸಿ  ತಮ್ಮ ಜಯಕ್ಕೋಸ್ಕರವಾಗಿ ಪ್ರಾರ್ಥಿಸಿದರು. ನಂತರ ಯುದ್ಧದಲ್ಲಿ ಜಯವನ್ನೂ ಗಳಿಸಿದರು. ಮಾತ್ರವಲ್ಲ  ಶ್ರೀರಾಮಚಂದ್ರನು ರಾವಣನನ್ನು ದಮನಿಸಿ ವಿಜಯವಂತನಾದದ್ದು ಸಹ ಈ ದಿನದಂದೇ. ಹೀಗಾಗಿ ನವರಾತ್ರಿ ಈ ದಿನವನ್ನು ವಿಜಯದಶಮಿ ಎಂದು ಕರೆಯುತ್ತಾರೆ. ಆದ್ದರಿಂದ ಆ ದಿನ ಎಲ್ಲರೂ ಅಪರಾಹ್ಣ ಕಾಲದಲ್ಲಿ ಶಮೀ(ಬನ್ನಿ)ವೃಕ್ಷಕ್ಕೆ ಕುಟುಂಬ ಸಮೇತ ಹೋಗಿ  "ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತಸ್ಯ ಚ |  ದುಃಖಪ್ರಣಾಶಿನೀಂ ಧನ್ಯಾಂ ಪ್ರಪದ್ಯೇsಹಂ ಶಮೀಂ ಶುಭಾಮ್ || ಎಂಬ ಮಂತ್ರದಿಂದ ಶ್ರದ್ಧಾಭಕ್ತಿಯಿಂದ  ಪೂಜಿಸಬೇಕು.

ನಂತರ ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ | ಧರಿತ್ರ್ಯರ್ಜುನ-ಬಾಣಾನಾಂ ರಾಮಸ್ಯ ಪ್ರಿಯವಾದಿನೀಂ || ಕರಿಷ್ಯಮಾಣಯಾತ್ರಾಯಾಂ ಯಥಾ ಕಾಲಂ ಸುಖಂ ಮಯಾ | ಶತ್ರು ನಿರ್ವಿಘ್ನ ಕರ್ತೀ  ತ್ವಂ ಭವ ಶ್ರೀ ರಾಮ ಪೂಜಿತೇ || ಮತ್ತು  ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ | ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ || ಎಂಬ ಮಂತ್ರಗಳಿಂದ ಪ್ರಾರ್ಥನೆ ಸಲ್ಲಿಸಿ ಮೊದಲು ಹಿರಿಯರಿಗೆ  ಬನ್ನಿ ಕೊಟ್ಟು ನಂತರ ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು.

ವೈಷ್ಣವರಿಗೆ ಇದು ಮತ್ತಷ್ಟು ಮುದನೀಡುವ ದಿನ. ಯಾಕೆಂದರೆ ವಿಷ್ಣುವಿನ ಪ್ರಸಿದ್ಧವಾದ ದಶಾವತಾರಗಳಲ್ಲಿ ಒಂದಾದ ಬುದ್ಧನ ಅವತಾರವಾದದ್ದು, ದೇವಾನುದೇವತೆಗಳು ಶ್ರೀಶ್ರೀನಿವಾಸದೇವರು ಹಾಗು ಪದ್ಮಾವತಿಯರ ಪರಿಣಯವನ್ನು ಮಾಡಿಸಿದ್ದು ಹಾಗು ವಿಷ್ಣುಸರ್ವೋತ್ತಮತ್ವವನ್ನು ಪ್ರತಿಪಾದಿಸಿದ ಜಗದ್ಗುರು ಶ್ರೀಮಧ್ವಾಚಾರ್ಯರು ಅವತರಿಸಿದ್ದು ಇದೇ ದಿನ! ಮಂತ್ರಾಲಯದಲ್ಲಿ ನವರಾತ್ರಿಯ ಮೊದಲದಿನದಿಂದ ಶ್ರೀಮಠದಲ್ಲಿ ಶ್ರೀನಿವಾಸಕಲ್ಯಾಣದ ಪ್ರವಚನವು ಪ್ರಾರಂಭವಾಗಿ ವಿಜಯದಶಮಿಯಂದು ಮುಕ್ತಾಯವಾಗುತ್ತದೆ. ಮಂತ್ರಾಲಯದಲ್ಲಿ ಶ್ರೀರಾಘವೇಂದ್ರಗುರುಸಾರ್ವಭೌಮರು ಪ್ರತಿಷ್ಠಾಪನೆ ಮಾಡಿದ  ಶ್ರೀಶ್ರೀನಿವಾಸದೇವರ ಸನ್ನಿಧಿಯಲ್ಲಿ ಶ್ರೀಶ್ರೀನಿವಾಸಕಲ್ಯಾಣವನ್ನು ನೆರವೇರಿಸಿ, ರಥೋತ್ಸವವನ್ನು ಆಚರಿಸಲಾಗುವುದು. ಸಂಜೆ ಶ್ರೀಪಾದಂಗಳವರು ಶ್ರೀಮಠದ ಆವಾರದಲ್ಲಿಯೇ ಇರುವ ಶಮೀವೃಕ್ಷದ ಬಳಿಗೆ ತೆರಳಿ ವಿಶೇಷ ಅರ್ಚನೆ ಮಾಡಿ, ಪ್ರಾರ್ಥಿಸಿ ಶಮೀಪತ್ರೆಯನ್ನು ಶ್ರೀರಾಮದೇವರಿಗೆ ಅರ್ಪಿಸುತ್ತಾರೆ. ನಂತರ ಮಂತ್ರಾಲಯದ ಜನತೆ, ಆಗಮಿಸಿರುವ ಎಲ್ಲ ಭಕ್ತರು ಸಹ ತಮ್ಮ ಶಕ್ತ್ಯನುಸಾರ ಶಮೀಪೂಜೆಯನ್ನು ಮಾಡಿ, ಶ್ರೀಗಳವರಿಗೆ ಶಮಿಯನ್ನು ಕೊಟ್ಟು, ಅವರಿಂದ ತಾವು ಪಡೆದುಕೊಂಡು ನಂತರ ಇತರರೊಂದಿಗೆ ವಿನಿಮಯಮಾಡಿಕೊಳ್ಳುತ್ತಾರೆ.

ಉಡುಪಿಭಾಗದಲ್ಲಿ ಈ ಶಮೀವೃಕ್ಷದ ಪೂಜೆ ಹಾಗು ವಿನಿಮಯದ ಕಾರ್ಯಕ್ರಮ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲದಿದ್ದರೂ ಇನ್ನಿತರ ಪೂಜೆಗಳು ಸಾಂಗವಾಗಿಯೇ ನೆರವೇರುತ್ತವೆ. ತಮಿಳುನಾಡಿನ ಮಾಧ್ವರು ಘಟ್ಟದ ಮೇಲಿನ ಮಠಗಳ ಶಿಷ್ಯತ್ವವನ್ನು ಹೊಂದಿ ಆ ಮಠಗಳ ಪೂಜಾ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿದ್ದರೂ ಶಮೀವೃಕ್ಷದ ಪೂಜೆಯ ಬಗ್ಗೆ ತಿಳಿದಿರುವವರು ಬಹಳ ಕಮ್ಮಿ. ಶೇಕಡಾ 90ರಷ್ಟು ಜನರಿಗೆ ಶಮೀಪೂಜೆ ಅಥವಾ ಬನ್ನಿ ಮರದ ಪೂಜೆ ಎಂದು ಕೇಳಿದರೆ ಪಿಳಿಪಿಳಿ ಕಣ್ಣು ಬಿಡುತ್ತಾರೆ. ಇದು ಉತ್ತಮ ಬೆಳವಣಿಗೆಯಲ್ಲ. ತಮ್ಮ ಮಠದ ಗುರುಗಳು ಸಹ ಈ ಪೂಜಾಕ್ರಮವನ್ನು ಅನುಸರಿಸುತ್ತಾರೆ ಆದ ಕಾರಣ ತಿಳಿದೋ ತಿಳಿಯದೆಯೋ ಬಿಟ್ಟು ಹೋಗಿರುವ ಈ ಪೂಜಾವಿಧಿಯನ್ನು ಪುನಃ ರೂಢಿಸಿಕೊಳ್ಳುವುದು ಒಳ್ಳೆಯದು.

ಶಮೀವೃಕ್ಷದ ಬಗ್ಗೆ ಒಂದಿಷ್ಟು (ಅ)ಸಾಮಾನ್ಯ ಮಾಹಿತಿ.
ಸಂಸ್ಕೃತ-ಒರಿಯಾ-ಗುಜರಾತಿ ಭಾಷೆಗಳಲ್ಲಿ ಶಮೀವೃಕ್ಷ ಎಂದೇ ಕರೆಸಿಕೊಳ್ಳುವ ಈ ಮರಕ್ಕೆ ಕನ್ನಡದಲ್ಲಿ ಬನ್ನೀಮರ, ತೆಲುಗಿನಲ್ಲಿ ಜಮ್ಮಿಚಟ್ಟು , ಹಿಂದಿಯಲ್ಲಿ ಝಾಂಡ್/ಖೇಜರೀ ಎಂದು ಕರೆಯುತ್ತಾರೆ. Prosopis Cineraria ಎಂಬುದು ಇದರ ಸಸ್ಯಶಾಸ್ತ್ರೀಯ ಹಾಗು ಆಂಗ್ಲಭಾಷೆಯ ಹೆಸರು. ಸಸ್ಯ ಕುಟುಂಬಗಳ ವರ್ಗೀಕರಣದಲ್ಲಿ ಇದನ್ನು Fabaceae ಕುಟುಂಬಕ್ಕೆ ಸೇರಿಸುವುದೋ ಅಥವಾ Acacia ಎನ್ನುವ ಸಸ್ಯಕುಟುಂಬಕ್ಕೆ ಸೇರಿಸಬೇಕೋ ಎನ್ನುವುದರಲ್ಲಿ ಇನ್ನೂ ಸಸ್ಯವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಅಂತೂ ಇದೊಂದು ಮುಳ್ಳುಗಳನ್ನು ಹೊಂದಿದ ಮರಗಳ ಜಾತಿಗೆ ಸೇರಿದ ನಿತ್ಯ ಹಸಿರಿನ ಮರ ಎನ್ನುವುದರಲ್ಲಿ ಸಂದೇಹವಿಲ್ಲ.

ಹುಣಸೆ ಹಾಗು ಜಾಲಿ ಮರದ ಎಲೆಗಳಂತೆ ಬನ್ನಿಯ ಎಲೆಯು ದ್ವಿಮುಖ ಸಂಯೋಜನೆಯನ್ನು ಹೊಂದಿವೆ, ಆದರೆ ಬಣ್ಣದಲ್ಲಿ ಬನ್ನಿಯು ಆ ಎರಡು ಮರಗಳಿಗಿಂತ ಸ್ವಲ ಲಘು ಹಸಿರು ಬಣ್ಣದ್ದಾಗಿದೆ. ಮಧ್ಯಮಗಾತ್ರದ ಕಾಂಡದೊಂದಿಗೆ ಸರಾಸರಿ ೨೫ ಅಡಿಗಳವರೆಗೆ ಉದ್ದವಾಗಿ ಬೆಳೆದು ಮೇಲ್ಭಾಗದಲ್ಲಿ ಚತ್ರಿಯಾಕಾರದಲ್ಲಿ ಶಾಖೆಗಳನ್ನು ಹೊಂದಿರುತ್ತದೆ. ಇದರ ಮುಳ್ಳು ಕೋನಾಕೃತಿಯಾಗಿದ್ದು ಜಾಲಿ ಮುಳ್ಳಿಗಿಂತಲೂ ಚಿಕ್ಕ ಗಾತ್ರದವು. ಮಾರ್ಚ್ ಹಾಗು ಮೇ ತಿಂಗಳ ಮಧ್ಯದಲ್ಲಿ ತಿಳಿಹಳದಿ ಬಣ್ಣದ, ಮೃದುವಾದ , ಚಿಕ್ಕ ಚಿಕ್ಕ ಹೂವುಗಳನ್ನು ಬಿಡುತ್ತದೆ. ಇದರ ಹೂವು, ತೊಗಟೆ ಹಾಗು ಬೇರು ಔಷಧೀಯವಾಗಿ ಬಳಕೆಯಾದರೆ, ಒಟ್ಟಾರೆಯಾಗಿ ಮರವು ಮಣ್ಣಿನ ಸತ್ವವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ.

ಭಾರತದೆಲ್ಲೆಡೆ ಸಹಜವಾಗಿಯೇ ಬೆಳೆಯುವುದಾದರೂ ರಾಜಸ್ಥಾನ ಹಾಗು ಪಾಕಿಸ್ತಾನದಲ್ಲಿ ಹರಡಿರುವ ಥಾರ್ ಮರುಭೂಮಿಯಂತರ ಕಡಿಮೆ ಮಳೆಬೀಳುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುದು.

ಚಿತ್ರ ಕೃಪೆಃ kajasudhakarababu

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತಿಳಿಯದ ಎಷ್ಟೋ ವಿಷಯಗಳನ್ನು ತಿಳಿಸಿದ ನಿಮಗೆ ಧನ್ಯವಾದಗಳು. ದಸರಾ ಹಬ್ಬದ ಹಾರ್ಧಿಕ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ತು0ಬಾ ಸು0ದರವಾದ ಲೇಖನ ಸ್ರ್. ಹೊಸ ವಿಷಯಗಳನ್ನ ತಿಳಿಸಿದುದಕ್ಕೆ ಧಾನ್ಯವಾದಗಳು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮಗೂ ಕೂಡಾ ದಸರಾ ಹಬ್ಬದ ಹಾರ್ಧಿಕ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಹಳ ಅತ್ಯುತ್ತಮ ಮಾಹಿತಿಯನ್ನು ಒದಗಿಸಿದ್ದೀರಾ, ಅದಕ್ಕಾಗಿ ನಿಮಗೆ ಧನ್ಯವಾದಗಳು. ನವರಾತ್ರಿಯ ನಿಮ್ಮ ಪಟ್ಟಿಗೆ ಇಲ್ಲಿ ಹೈದರಾಬಾದಿನಲ್ಲಿ ಗಣಪತಿಗೂ ನವರಾತ್ರಿ ಉತ್ಸವ ಏರ್ಪಡಿಸುವ ಸ0ಪ್ರದಾಯವಿದೆ. ಬನ್ನಿ ಗಿಡದ ಬಗ್ಗೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಔಷದೀಯ ಗುಣಗಳ ಬಗ್ಗೆ ಹೇಳುತ್ತಿದ್ದೇನೆ. ಚೇಳು ಕಡಿದವರಿಗೆ ಬನ್ನಿಯ ತಪ್ಪಲು (ಎಲೆಯನ್ನು) ಮಜ್ಜಿಗೆಯಲ್ಲಿ ಅರಿದು ಹಚ್ಚಿದರೆ ಉರಿ ಕಡಿಮೆಯಾಗುತ್ತದೆ. (ಈಗ ಚೇಳುಗಳು ಕಡಿಮೆಯಾಗಿವೆ ಅದು ಬೇರೆ ವಿಷಯ).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎಲ್ಲರಿಗೂ ದಸರೆಯ ಹಬ್ಬಕ್ಕೆ ನಲ್ಬಯಕೆಗಳು ಇಂದಿನ ದಸರೆಯಿಂದ ಮುಂದಿನ ದಸರೆಯವರೆಗೆ ನೀವು ನಡೆಸುವ ಪ್ರತಿಯೊಂದು ಸತ್ಕಾರ್ಯವೂ ಜಯಪ್ರದವಾಗಿ ನೆರವೇರಲಿ! ಸುಖ, ಆರೋಗ್ಯ, ನೆಮ್ಮದಿ, ಸಂಪತ್ತು ನಿಮ್ಮ ಬಾಳಲ್ಲಿ ತುಂಬಿರಲಿ! ಪ್ರಿಯ ಲಕ್ಷ್ಮೀಕಾಂತರೇ, ನವರಾತ್ರಿಯನ್ನು ಕುರಿತು ಸೊಗಸಾದ ಪ್ರಬಂಧವನ್ನು ನೀಡಿದ್ದೀರಿ. ಧನ್ಯವಾದಗಳು. ಮೈಸೂರಿನಷ್ಟೇ ಮಡಿಕೇರಿಯಲ್ಲೂ ದಸರಾ ಮೆರವಣಿಗೆ ಸಂಭ್ರಮದಿಂದಲೂ ಶೋಭಾಯಮಾನವಾಗಿಯೂ ಇರುತ್ತದೆ. ಮೈಸೂರಿನಲ್ಲಿ ದರ್ಶನ ಮುಗಿಸಿ ಮಡಿಕೇರಿಗೆ ಎಷ್ಟೋ ಮಂದಿ ಹೋಗಿ ನೋಡಿಕೊಂಡು ಹಿಂತೆರಳುತ್ತಾರೆ. ಕೊಡವರು ಸೆಪ್ಟೆಂಬರ್ ಮೂರರಂದು (ಸೌರ ಸಿಂಹ ಮಾಸದ ೧೮ರಂದು) ತಮ್ಮ ಪಾಲಿನ ಆಯುಧಪೂಜೆಯನ್ನು ‘ಕೈಲ್ ಮುಹೂರ್ತ’ ಹಬ್ಬವೆಂದು ಮಾಡಿ ಮುಗಿಸುತ್ತಾರೆ. (ಕುತೂಹಲಿಗಳು http://kn.wikipedia.... ಗೆ ಹೋಗಿ ‘ಕೈಲ್ ಪೊಳ್ದ್’ನ್ನು search ಮಾಡ‌ಬಹುದು)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದಪ ಪಟವಾರಿ, ಭಾಳ ಛೊಲೋ ಬರ್ದೀಯಪ. ಆರ್ಟಿಕಲ್ಲು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.