ನಮ್ಮ ವಸಂತಕ್ಕ...

0

ಈಗಷ್ಟೇ ಕೆಲಸಕ್ಕೆ ಹೊರಡುವ ಆತುರದಲ್ಲಿದ್ದಾಗ ಗಾಯತ್ರಿ ಚಿಕ್ಕಮ್ಮನಿಂದ ಫೋನ್ ಬಂದಿತ್ತು. ಕೆಲಸಕ್ಕೆ ಹೋಗುವ ಅವಸರದಲ್ಲಿ ಒಂದು ವಸ್ತು ಸಿಕ್ಕಿದರೆ ಮತ್ತೊಂದು ಸಿಗುವುದಿಲ್ಲ. ಆ ಗಾಬರಿಯಲ್ಲಿದ್ದ ನನ್ನನ್ನು ಈ ಹಾಳಾದ ಮೊಬೈಲ್ ಮತ್ತೆ ಮತ್ತೆ ಕೂಗಿಕೊಂಡು ತೊಂದರೆ ಕೊಟ್ಟು ಕಿರಿ ಕಿರಿ ಉಂಟು ಮಾಡುತ್ತಿತ್ತು. ಗಾಯತ್ರಿ ಚಿಕ್ಕಮ್ಮನಿಗೆ ಮಕ್ಕಳಿಲ್ಲ, ಇರುವ ಒಬ್ಬಳಿಗೆ ತಿಂಗಳಿಗೆ ಎಷ್ಟು ಬೇಕು? ಸರ್ಕಾರವೇ ಒಂದು ರುಪಾಯಿಗೆ ಅಕ್ಕಿ ಬೇಳೆ ಎಲ್ಲವನ್ನೂ ಕೊಡುವ ಈ ಕಾಲದಲ್ಲೂ ಆಕೆ ಮೈ ತುಂಬಾ ಸಾಲ ಮಾಡಿಕೊಂಡಿದ್ದಳು. ಈ ರೀತಿ ಫೋನ್ ಮಾಡಿದಳು ಎಂದರೆ ನನ್ನ ಜೇಬಿಗೆ ಕೊಕ್ಕೆಯಿಡುವ ದುರುದ್ದೇಶವೆಂಬುದು ನನಗೆ ತಿಳಿದಿತ್ತು. ಆದರೆ ಇಂದು ಗಾಯತ್ರಿ ಚಿಕ್ಕಮ್ಮನ ನಂಬರ್ ಜೊತೆಗೆ ನಮ್ಮಣ್ಣನ ನಂಬರ್ ಕೂಡ ಚೀರಿಕೊಳ್ಳುತ್ತಿದ್ದರಿಂದ ಕುತೂಹಲಕ್ಕೆ ಫೋನ್ ರಿಸೀವ್ ಮಾಡಿದ್ದೆ.

ಕುಶಲೋಪರಿಯನ್ನು ವಿಚಾರಿಸಿದ ನಮ್ಮಣ್ಣ – ‘ಗಾಯತ್ರಿ ಚಿಕ್ಕಮ್ಮ ಉದಯರಂಗ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟಿದೆ, ಜೊತೆಗೆ ದೀಪು ಕೂಡ ಇದ್ದಾಳೆ, ಮಾರ್ಕೆಟ್ ಹತ್ರ ಇಳ್ಕೋತಾರೆ, ನೀನೂ ಕೂಡ ಜೊತೆ ಆಗಿ ಅವರನ್ನ ನಿಮ್ಹಾನ್ಸ್ ಗೆ ಕರೆದುಕೊಂಡು ಹೋಗು’ ಎಂದುಬಿಟ್ಟ. ಎದೆ ಒಂದೇ ಸಮನೆ ಕಂಪಿಸಿಹೋಯಿತು. ನಿಮ್ಹಾನ್ಸ್ ಎಂದರೆ ಬರಿ ಹುಚ್ಚರ ಸಂತೆಯಲ್ಲ, ಸಣ್ಣನೆ ತಲೆನೋವಿದ್ದರೂ ಆ ಆಸ್ಪತ್ರೆಯ ಗೋಡೆಯನ್ನು ದಾಟಬಹುದು ಎಂಬುದನ್ನು ಬಲ್ಲೆ, ಆದರೆ ಅಷ್ಟು ದೂರದಿಂದ ನಿಮ್ಹಾನ್ಸ್ ವರೆವಿಗೂ ಬರುವ ಘಟನೆಯಿದು ಎಂದರೆ ಅಲ್ಲೇನೋ ತೊಂದರೆಯಾಗಿದೆ ಎನಿಸಿತ್ತು. ಕೂಡಲೇ ‘ಯಾವ ದೀಪು?’ ಎಂದು ಕೇಳಿದ್ದೆ, ಯಾಕೆಂದರೆ ನಮ್ಮ ಕುಟುಂಬ ಸ್ವಂತದವರಲ್ಲಿ ದೀಪು ಎಂಬ ಹೆಸರಿನ ಮೂವರು ಹೆಣ್ಣು ಮಕ್ಕಳಿದ್ದಾರೆ.

‘ಅದೇ, ವಸಂತಕ್ಕನ ಮಗಳು ಕಣೋ’ ಎಂದೊಡನೆ ನನಗೆ ಮತ್ತೂ ದಿಗಿಲಾಯಿತು. ಯಾಕೆಂದರೆ ಆ ಹುಡುಗಿ ಕಷ್ಟಪಟ್ಟು ಮೈಸೂರಿನಲ್ಲಿ ಓದುತ್ತಿದ್ದ ಹದಿನೆಂಟರ ಪ್ರಾಯದವಳು. ಒಂದು ಕಡೆ ಆಕೆ ಸದ್ಯಕ್ಕೆ ಒಲ್ಲದ ಮದುವೆಯ ತಯಾರಿಯೂ ನಡೆಯುತ್ತಿತ್ತು. ಗಾಬರಿಗೊಂಡ ಧ್ವನಿಯಲ್ಲಿಯೇ ‘ಏನಾಯಿತು?’ ಎಂದೆ.

‘ಅವನು ಲೋಫರ್, ರಾತ್ರಿ ಕುಡಿದು ಹೆಂಡ್ತಿ ಜೊತೆ ಜಗಳ ಆಡೋವಾಗ, ಇವಳು ಜಗಳ ಬಿಡಿಸೋಕೆ ಹೋಗಿದ್ದಾಳೆ, ಮೊದಲೇ ಕುಡಿದ ಮತ್ತಿನಲ್ಲಿದ್ದ ಆತ ಇವಳ ಜುಟ್ಟನ್ನ ಹಿಡಿದು ಗೋಡೆಗೆ ಗುದ್ಸಿದ್ದಾನೆ’ ಎಂದ ಅಣ್ಣ ಮಾತು ಮುಂದುವರಿಸಿದಾದ. ‘ಸೋ, ಮುಂದೇನಾಯ್ತು’ – ಅವಸರದಲ್ಲಿ ನಾನೇ ಕೇಳಿದೆ. ‘ಏನೂ ಇಲ್ಲ, ಗೋಡೆಗೆ ತಲೆ ಗುದ್ದಿಸಿದ ಘಳಿಗೆಯಿಂದ ದೀಪು ವಿಚಿತ್ರವಾಗಿ ಆಡ್ತಾ ಇದ್ದಾಳೆ, ಮಾತಿನ ಮೇಲೆ ನಿಗಾ ನಿಯಂತ್ರಣ ಇಲ್ಲ, ಯಾರ ಮಾತನ್ನೂ ಕೇಳುತ್ತಿಲ್ಲ, ಯಾರಿಗೂ ಬಗ್ಗುತ್ತಿಲ್ಲ’ ಎಂದ ಅಣ್ಣ ತಡವರಿಸಿದ. ‘ಸರಿ, ನಾನು ನೋಡಿಕೊಳ್ಳುತ್ತೇನೆ’ ಎಂದವನೇ ಫೋನಿಟ್ಟಿದ್ದೆ.

ಅದಾಗಲೇ ಬಸ್ಸನ್ನು ಹತ್ತಿ ಹೊರಟಿದ್ದ ಗಾಯತ್ರಿ ಚಿಕ್ಕಮ್ಮನ ನಂಬರಿಗೆ ಫೋನ್ ಮಾಡಿದ ತಕ್ಷಣ ಅತ್ತುಕೊಂಡು ಮಾತನಾಡಿದರು. ಪಕ್ಕದಲ್ಲಿಯೇ ಇದ್ದ ದೀಪುವಿನ ಆರ್ಭಟ ಸ್ಪಷ್ಟವಾಗಿ ನನಗೆ ಕೇಳಿಸುತ್ತಿತ್ತು. ನಾನು ಎಂದರೆ ಗೌರವಿಸುವ, ಭಯ ಬೀಳುವ ಆಕೆ ನನ್ನ ಮಾತನ್ನಾದರೂ ಕೇಳಿ ಮೌನವಾಗಬಹುದೆಂಬ ಹುಸಿ ನಂಬಿಕೆಯಿಂದ ಅವಳಿಗೆ ಮೊಬೈಲ್ ಕೊಡಲು ಗಾಯತ್ರಿ ಚಿಕ್ಕಮ್ಮನಿಗೆ ಹೇಳಿದೆ. ಮೊಬೈಲ್ ತೆಗೆದುಕೊಂಡವಳೇ ‘ರಾಘು ಅಣ್ಣ, ನೀನೇನು ಯೋಚ್ನೆ ಮಾಡ್ಬೇಡ, ನಾನು ಇಂಡಿಯಾನ ಅಮೇರಿಕಾದ ರೀತಿ ಮಾಡ್ತೇನೆ, ಥೂ ಈ ಇಂಡಿಯನ್ಸ್ ಗೆ ಟೈಮನ್ನ ಯಾವ ರೀತಿ ಉಪಯೋಗಿಸ್ಕೋಬೇಕಂತ ಗೊತ್ತಿಲ್ಲ’ ಎಂದು ಏನೇನೋ ಪೇಚಾಡಲು ಶುರುವಿಟ್ಟುಕೊಂಡಳು. ನನಗೆ ಮಾತನಾಡಲು ಬಿಡುವೇ ಸಿಗದಂತೆ ಪಟಪಟನೆ ಮಾತುಗಳು ಹೊರಡುತ್ತಿದ್ದವು. ನಿಜ ಹೇಳಬೇಕೆಂದರೆ ಈ ಹಿಂದೆ ಆಕೆ ಮಾತನಾಡಿದ್ದೇ ಅಪರೂಪ. ಎಲ್ಲರೂ ಮಾತು ಬರದ ಮೂಗಿಯೆಂದೇ ರೇಗಿಸುತ್ತಿದ್ದರು. ಅವಳ ಮಾತಿನ ಮಧ್ಯೆಯೇ ಹೇಗೋ ‘ಏನಾಯ್ತಮ್ಮ’ ಎಂದು ಕೇಳಿದ ಕೂಡಲೇ ‘ಥೂ, ಅವನು ನಮ್ಮಪ್ಪ, ಲೋಫರ್ ನನ್ಮಗ, ಬರೋ ಜುಜುಬಿ ಸಂಬಳದಲ್ಲಿ ಎದುರು ಮನೆಯವಳಿಗೆ ಅರ್ಧ ಸಂಬಳ ಕೊಡ್ತಾನೆ, ನಮ್ಮಮ್ಮ ಹರಿದೋಗಿರೋ ಸೀರೆ ಹಾಕ್ಕೊಂಡಿದ್ರೆ ಅವಳು ಗರತಿ ಸೂಳೆ ರೇಷ್ಮೆ ಸೀರೆ ಹಾಕ್ಕೊಂಡು ಓಡಾಡ್ತಾಳೆ...’ - ಹೀಗೆ ಸಾಗಿದ ಅವಳ ಮಾತು ಏರುಧ್ವನಿಯಲ್ಲಿತ್ತು.

ಅಷ್ಟಕ್ಕೆ ಕಂಡಕ್ಟರ್ ‘ನೋಡಮ್ಮ, ಎಲ್ಲಾ ಜನ ಬೈಯ್ತಾ ಇದ್ದಾರೆ, ಅದೂ ನೀವು ಬೆಂಗಳೂರಿನವರೆಗೂ ಬರೋರು, ಹೀಗೆ ಆದ್ರೆ ಇಳುಗಿಸಿಬಿಡ್ತೀನಿ’ ಎಂದ. ಮತ್ತೆ ದೀಪು ತಿರುಗಿಬಿದ್ದಳು – ‘ನೀನ್ಯಾವನೋ ಇಳುಗ್ಸೋಕೆ, ಈ ಬಸ್ಸು ನಿಮ್ಮಪ್ಪಂದ, ನೀನು ಕೂಲಿ ಆಳು ಕಣೋ, ನೋಡ್ಕೋ ನಾನು ಅಮೇರಿಕಾಕ್ಕೆ ಹೋಗ್ತೀನಿ, ಚೆನ್ನಾಗಿ ದುಡ್ಕೊಂಡು ಬಂದು ಈ ದೇಶದ ಪ್ರಧಾನಿ ಆಗಿ ಇಂಡಿಯಾನ ಅಮೇರಿಕಾ ಅಮೇರಿಕಾದ ರೀತಿ ಮಾಡ್ತೀನಿ’ ಎನ್ನುತ್ತಿದ್ದಳು.

ಗಾಯತ್ರಿ ಚಿಕ್ಕಮ್ಮನ ಕಷ್ಟ ಅರಿವಾಯಿತು. ಮಾತು ಮಾತಿಗೂ ತನಗೆ ಹೊಡೆಯುತ್ತಿದ್ದಾಳೆ ಎಂದು ಹೇಳಿದ್ದರು. ನಡುವೆ ಎಲ್ಲಿಯೂ ಅವರನ್ನು ಇಳುಗಿಸದೇ ಇಲ್ಲಿಯವರೆವಿಗೂ ಕರೆದುಕೊಂಡು ಬಂದುಬಿಟ್ಟರೆ ಆ ಬಸ್ಸಿನ ಕಂಡಕ್ಟರ್, ಡ್ರೈವರ್ ಹಾಗೂ ಉಳಿದ ಜನರೇ ಮಾನವೀಯತೆ ಮೆರೆಯುವ ನನ್ನ ದೇವರು ಎಂದುಕೊಂಡೇ ಬಸ್ಟ್ಯಾಂಡಿನಲ್ಲಿ ಕಾಯುತ್ತಿದ್ದ ನನಗೆ ಒಂದು ಆಘಾತ ಕಾದಿತ್ತು. ಅವರನ್ನು ನಡುವೆ ಯಾವುದೋ ಹೆಸರು ತಿಳಿಯದ ಊರಿನಲ್ಲಿ ಇಳುಗಿಸಿಬಿಟ್ಟಿದ್ದರು. ನಾವು ಎಣಿಸಿದಂತೆ ಪ್ರಪಂಚವಿರುವುದಿಲ್ಲವೆಂಬುದಕ್ಕೆ ಇದೊಂದು ನಿದರ್ಶನ. ಮತ್ತೆ ಅತ್ತುಕೊಂಡು ಕರೆ ಮಾಡಿದ್ದ ಚಿಕ್ಕಮ್ಮ ತೀವ್ರ ಸುಸ್ತಾದಂತೆ ಕಂಡುಬಂದರು. ‘ಹೆದರಬೇಡಿ, ಅಲ್ಲೇ ಇರಿ, ಅದಾಗಲೇ ನಾನು ಕಾರು ಮಾಡಿಕೊಂಡು ಹೊರಟಿದ್ದೇನೆ’ ಎಂದು ಧೈರ್ಯ ತುಂಬಿ ಈಗ ಕಾರಿನಲ್ಲಿ ಹೊರಟಿದ್ದೇನೆ.

ಯಾವುದೋ ಹಳ್ಳಿಯಲ್ಲಿ ಅವರು ಸಿಕ್ಕಾಗ ಗಾಯತ್ರಿ ಚಿಕ್ಕಮ್ಮನ ಕಣ್ಣು ನೀರು ತುಂಬಿಕೊಂಡು ತೀವ್ರ ಗದ್ಗದಿತರಾಗಿದ್ದರು. ನಾನು ಬಂದದ್ದೇ ಅವರಿಗೆ ಇಡಿ ಪ್ರಪಂಚವನ್ನೇ ಬೊಗಸೆಗೆ ತುಂಬಿಕೊಂಡಷ್ಟು ಧೈರ್ಯ ಬಂದಿತು. ನನ್ನನ್ನು ಕಂಡದ್ದೇ ದೀಪು ನಾರ್ಮಲ್ಲಾಗೇ ‘ಹೈ ರಾಘಣ್ಣ’ ಎಂದವಳೇ ಕೈ ಕುಲುಕಿದಳು. ‘ಹೈ ಪುಟ್ಟು, ನಿನಗೇನೂ ಆಗಿಲ್ಲ ಕಣೋ’ ಎನ್ನುವಷ್ಟರಲ್ಲಿ ಅವಳೇ ‘ನನಗೇನಾಗಿದೆ ರಾಘಣ್ಣ, ಈ ಗಾಯತ್ರಜ್ಜಿಗೆ ತಲೆ ಕೆಟ್ಟಿರೋದು, ನಿಮ್ಹಾನ್ಸ್ ಗೆ ಕರ್ಕೊಂಡು ಹೋಗ್ತದಂತೆ, ಮೊದ್ಲು ಅವರಿಗೆ ತೋರ್ಸಿ’ ಎಂದಳು. ‘ಆಯ್ತು ಬಾಮ್ಮಾ, ಮೊದಲು ಅಜ್ಜಿಗೇ ತೋರ್ಸೋಣ’ ಎಂದವನೇ ಕಾರು ಹತ್ತಿಸಿಕೊಂಡೆ.

ಕರ್ಚೀಪು ಒದ್ದೆಯಾಗುವಷ್ಟು ಅತ್ತಿದ್ದ ಗಾಯತ್ರಿ ಚಿಕ್ಕಮ್ಮ ಈಗ ಮತ್ತೆ ಬಿಕ್ಕಳಿಸಿದಳು. ಮನಸ್ಸಿನಲ್ಲಿ ಎಷ್ಟೇ ಬೈದುಕೊಂಡರೂ ಗಾಯತ್ರಿ ಚಿಕ್ಕಮ್ಮನಿಗೆ ನಾನು ಮತ್ತು ಅಣ್ಣಂದಿರು ಕೈಲಾದಷ್ಟು ಸಹಾಯ ಮಾಡುತ್ತಲೇ ಬಂದಿದ್ದೇವೆ. ನಮ್ಮ ತಾಯಿಯ ಸ್ವಂತ ತಂಗಿಯಾದ ಚಿಕ್ಕಮ್ಮನಿಗೆ ಮಕ್ಕಳಿಲ್ಲವಾದರೂ ನಮ್ಮ ಜನರಿಗೆಲ್ಲ ಆಕೆ ತಾಯಿಯಿದ್ದಂತೆ. ಯಾವುದೇ ಮದುವೆ ನಾಮಕರಣವಿದ್ದರೂ ಅಲ್ಲಿ ಗಾಯತ್ರಿ ಚಿಕ್ಕಮ್ಮನದೇ ಉಸ್ತುವಾರಿ, ನಮ್ಮವರಲ್ಲಿ ಯಾರಾದರು ಪೋಲಿ ಬಿದ್ದರೆ ಅವರನ್ನು ಹುಡುಕಿಕೊಂಡುಹೋಗಿ ಸರಿದಾರಿಗೆ ತರಲು ಪ್ರಯತ್ನಿಸುವುದು, ಹುಡುಗಿ ಗೊತ್ತು ಮಾಡಿ ಮದುವೆ ಮಾಡುವುದೂ ಚಿಕ್ಕಮ್ಮನೇ. ಜೋಡಿಯಲ್ಲಿ ಹೊಂದಾಣಿಕೆ ಮೂಡದೇ ಪ್ರತಿದಿನ ಜಗಳವಾಡುವಾಗ ನಡುವೆ ನಿಂತು ನ್ಯಾಯ ಮಾಡುವುದೂ ಚಿಕ್ಕಮ್ಮನೇ, ‘ನೀನೇ ತಾನೇ ಬೇಡ ಅಂದ್ರು ಕಟ್ಟಿದ್ದು’ ಎಂದು ಎಲ್ಲರ ಬಾಯಿಯಲ್ಲಿ ಆಡಿಸಿಕೊಳ್ಳುವವಳು ಇವಳೇ. ಎಲ್ಲಾ ಕಡೆಯೂ ಇರುವಂತೆ ನಮ್ಮಲ್ಲಿಯೂ ಒಂದಿಬ್ಬರು ಪೋಲಿಬಿದ್ದು ದಿನಪೂರ್ತಿ ಕುಡಿದು ಹಸಿವಾದಾಗ ಚಿಕ್ಕಮ್ಮನ ಮನೆಯ ಹೊಸ್ತಿಲಿಗೆ ಬರುತ್ತಾರೆ. ಅವರು ಬಂದೊಡನೆ ಹೊಟ್ಟೆ ತುಂಬಾ ಬಡಿಸಿ ತಾಯ್ತನ ಮೆರೆಯುವ ಕರುಣೆ ಇರುವ ಹೆಂಗಸು. ಎಲ್ಲದಕ್ಕಿಂತಲೂ ಹೆಚ್ಚಾಗಿ ಈ ರೀತಿ ಯಾರಾದರೂ ಹುಷಾರು ತಪ್ಪಿದರೆ, ಏಕಾಂತದಲ್ಲಿ ಬಿದ್ದರೆ ಗಾಯತ್ರಿ ಚಿಕ್ಕಮ್ಮನೇ ಊರುಗೋಲು. ದೀಪು ನಮ್ಮ ವಸಂತಕ್ಕನ ಮೊದಲ ಮಗಳು. ವಸಂತಕ್ಕ ನಮ್ಮ ತಾಯಿಯ ಅಕ್ಕನ ಮಗಳು. ಅವಳಿಗೆ ಇಬ್ಬರು ಹೆಣ್ಣು ಮಕ್ಕಳು. ಎರಡನೆಯವಳಿಗೆ ಅದಾಗಲೇ ಬುದ್ಧಿಮಾಂದ್ಯತೆ ಉಂಟಾಗಿ ಎಳೆಯ ಮಗುವಿನಿಂದಲೂ ಹೆಣದಂತೆ ಮನೆಯ ಮೂಲೆಯಲ್ಲಿ ಬಿದ್ದಿದೆ. ಚೆನ್ನಾಗಿ ಓದಿಕೊಂಡಿದ್ದ ಮೊದಲನೆಯವಳಾದ ದೀಪುವಿಗೆ ಸುನಾಮಿಯಂತೆ ಎರಗಿದ ಈ ಗತಿ.

ಕಾರಿನಲ್ಲೂ ಕೂಡ ದೀಪುವಿನ ಆರ್ಭಟ ಜೋರಾಯಿತು. ಅವಳ ಮನಸ್ಸು ಸಮಾಧಾನವಾಗುವವರೆವಿಗೂ ಪೇಚಾಡಿಕೊಳ್ಳಲಿ ಎಂದು ಸುಮ್ಮನಾಗಿಬಿಟ್ಟೆ. ತನ್ನ ತಂದೆಯನ್ನೇ ಮಾತು ಮಾತಿಗೂ ‘ಲೋಫರ್ ನನ್ಮಗ’ ಎನ್ನುತ್ತಿದ್ದಳು. ಮಾತಿನ ಮಧ್ಯೆ ‘ಹುಟ್ಸೋದು ದೊಡ್ಡ ವಿಚಾರವಲ್ಲ, ತಂದು ಹಾಕಬೇಕು’ ಎಂದಳು. ಮಾತನಾಡಿ ಮಾತನಾಡಿ ಬಾಯಿಗೆ ನೋವಾಯಿತೋ ಏನೋ ಮೌನಕ್ಕೆ ಜಾರಿ ಕಿಟಕಿ ಕಡೆ ಒರಗಿದಳು. ಮೆಲುಧ್ವನಿಯಲ್ಲಿ ಚಿಕ್ಕಮನ್ನನ್ನು ‘ಏನಾಯ್ತು ಅಂತ ಕರೆಕ್ಟಾಗಿ ಹೇಳಿ ಚಿಕ್ಕಮ್ಮ’ ಎಂದೆ.

‘ನಿನ್ನೆ ಮಧ್ಯಾಹ್ನ, ಬಾಲು ಭಾವ (ದೀಪುವಿನ ಅಪ್ಪ) ಮುಂದುಗಡೆ ಮನೆಯವಳ ಜೊತೆ ಬೆತ್ತಲೆಯಾಗಿ ಮಲಗಿದ್ನಂತೆ, ಅದನ್ನ ನೋಡ್ಬಿಟ್ಟಿದ್ದಾಳೆ’ ಎಂದರು.

‘ಮತ್ತೆ ತಲೆಗೆ ಪೆಟ್ಟಾದದ್ದು?’

‘ರಕ್ತ ಬರೋ ಗಾಯ ಏನೂ ಆಗಿಲ್ಲ, ಅವನು ಮನೆಗೆ ಬಂದ ತಕ್ಷಣ ಇದನ್ನ ಕೇಳಿದ್ದಾಳೆ, ಅಷ್ಟಕ್ಕೆ ಜುಟ್ಟನ್ನ ಹಿಡಿದುಕೊಂಡು ಗೋಡೆಗೆ ಗುದ್ದಿಸಿದ್ದಾನೆ’

‘ಅವನು ಲೋಫರ್ ಅಲ್ಲದೇ ಮತ್ತೇನಿಗ? ಬರೋ ಪುಡಿಗಾಸು ಸಂಬಳಕ್ಕೆ ಇನ್ನೊಬ್ಬಳು ಬೇಕಾ ಅವನಿಗೆ?’

‘ಯಾರು ಲೋಫರ್ರೋ ಯಾರು ಒಳ್ಳೆಯವರೋ ನನಗಂತೂ ಇವರ ಜೊತೆ ಹೇಗಿ ಹೇಗಿ ಸುಸ್ತಾಗಿದೆ ಕಣೋ ರಾಘು’ – ಚಿಕ್ಕಮ್ಮ ಮತ್ತೆ ಕಣ್ಣೀರೊರೆಸಿಕೊಂಡರು.

ಅಷ್ಟಕ್ಕೆ ಕಾರು ನಿಮ್ಹಾನ್ಸ್ ಅಂಗಳಕ್ಕೆ ನುಗ್ಗಿತು. ನಿಮ್ಹಾನ್ಸ್ ಎಂಬ ಹೆಸರನ್ನು ಕಂಡವಳೇ ತನ್ನನ್ನು ಹುಚ್ಚರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದುಕೊಂಡಳೋ ಏನೋ ಬೆಂಕಿಗೆ ಬಿದ್ದ ಪ್ರಾಣಿಯಂತೆ ಪತರುಗುಟ್ಟಿದಳು. ‘ನನ್ನನ್ನ ಯಾಕೆ ಇಲ್ಲಿಗೆ ಕರ್ಕೊಂಡು ಬಂದದ್ದು, ಮೊದಲು ಇಲ್ಲಿಂದ ಹೊರಗೆ ನಡೀರಿ’ ಎಂದು ಚೀರಾಡಿದಳು, ‘ರಾಘಣ್ಣ, ನೀನು ಅಂದ್ರೆ ನನಗೆ ತುಂಬಾ ಗೌರವ ಇದೆ, ಬೈದುಬಿಡ್ತೀನಿ, ಅದನ್ನ ಹಾಳು ಮಾಡಿಕೊಳ್ಳಬೇಡ, ಸುಮ್ನೆ ಇಲ್ಲಿಂದ ಹೊರಗೆ ಕರ್ಕೊಂಡು ಹೋಗು’ ಎಂದಳು. ‘ನಿನಗೆ ಖುಷಿಯಾಗೋದಾದ್ರೆ ಬಯ್ಯಮ್ಮ, ಜೊತೆಗೆ ನಿನಗೆ ಏನೂ ಆಗಿಲ್ಲ, ಏನೋ ಬೀಪಿಯಲ್ಲಿ ಹೆಚ್ಚುಕಮ್ಮಿಯಾಗಿದಿಯಂತೆ ಅದನ್ನ ಟೆಸ್ಟ್ ಮಾಡ್ತಾರೆ ಅಷ್ಟೆ’ ಎಂದೆ. ‘ನನ್ನನ್ನ ಅಷ್ಟು ದಡ್ಡಿ ಅನ್ಕೋಬೇಡಿ, ಅಮೇರಿಕಾಗೆ ಓದೋಕೆ ಹೋಗೋಳು, ನಾನ್ ಬರಲ್ಲ ಅಷ್ಟೇ’ ಎಂದು ಹಠ ಹಿಡಿದಳು. ಕೈ ಹಿಡಿದವರನ್ನೇ ಜಾಡಿಸಿದಳು, ಗಾಯತ್ರಿ ಚಿಕ್ಕಮ್ಮನಿಗೆ ಒಮ್ಮೆ ಕಚ್ಚಿದಳು ಕೂಡ. ಇಂತಹ ನೂರಾರು ಪ್ರಕರಣಗಳಿಗೆ ಸಾಕ್ಷಿಯಾಗಿರುವ ನಿಮ್ಹಾನ್ಸ್‍ನ ಸೆಕ್ಯೂರಿಟಿಗಳು ಅವಳ ಕೈಕಾಲನ್ನು ಅದುಮಿ ಎಮರ್ಜೆನ್ಸಿ ವಾರ್ಡಿಗೆ ಎಳೆದುಕೊಂಡು ಬಂದು ಬೆಡ್ ಮೇಲೆ ಮಲಗಿಸಿದರು.

ತಡಮಾಡದೇ ಓಡೋಡಿ ಬಂದ ನರ್ಸ್‍ಗಳಿಗೆ ಮೊದಲಿಗೆ ಅವಳ ದೇಹದಿಂದ ರಕ್ತವನ್ನು ಎಳೆಯಬೇಕಾಯಿತು. ಏನೇ ಮಾಡಿದರೂ ಆಕೆ ಸಹಕರಿಸದಿದ್ದಾಗ ಮತ್ತದೇ ಸೆಕ್ಯೂರಿಟಿ ಗಾರ್ಡ್ ಗಳು ಕಾಲು ತಲೆ ಹಿಡಿದರು. ನಾನು ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಅಪೌಷ್ಠಿಕತೆಯಲ್ಲಿ ಬೆಳೆದಾಕೆಗೆ ಐದಾರು ಕಡೆ ಚುಚ್ಚಿದ ನಂತರ ಚೂರು ರಕ್ತ ದೊರಕಿತು. ನರ್ಸ್‍ಗಳನ್ನು ಬಾಯಿಗೆ ಬಂದಂತೆ ಬೈದಳು. ಅಷ್ಟಕ್ಕೆ ಡಾಕ್ಟರ್ ಗಳು ಬಂದು ಅವಳ ಬೀಪಿ, ಕಣ್ಣು ಪರೀಕ್ಷಿಸುವಾಗ ‘ನೀವೆಲ್ಲಾ ಎಂಥಾ ಡಾಕ್ಟರ್‍ಗಳೋ, ದಿನಕ್ಕೆ ಹತ್ತಾರು ಸಾವ್ರ ಲಂಚ ತಿನ್ನೋ ಹೊಟ್ಟೆ ಬಾಕ್ರು, ರಾಘಣ್ಣ ಇವರು ಕೇಳಿದ್ರೆ ಒಂದು ರುಪಾಯಿನೂ ಕೊಡಬೇಡ’ ಎಂದಳು. ಕೋಪಗೊಂಡು ‘ಪುಟ್ಟು...’ ಎನ್ನುತ್ತಿದ್ದಂತೆ ಡಾಕ್ಟರ್‍ಗಳು ಸುಮ್ಮನಿರುವಂತೆ ಸನ್ನೆ ಮಾಡಿದರು. ಕೋಳಿಯಂತೆ ಒದರಾಡುತ್ತಿದ್ದ ಆಕೆಯನ್ನು ಮತ್ತೆ ಅದುಮಿಡಿದು ಮತ್ತೊಂದು ಸೂಜಿ ಚುಚ್ಚಿ ಒಂದು ಗ್ಲೂಕೋಸ್ ಕಟ್ಟಲಾಯಿತು. ಜೊತೆಗೆ ನಿದ್ದೆ ಬರುವ ಔಷಧಿ ಸೇರಿಸಿದರೋ ಏನೋ ಚೀರಾಡಿಕೊಂಡೇ ಮೌನಕ್ಕೆ ಶರಣಾಗಿ ಹಾಗೇ ನಿದ್ದೆಗೆ ಜಾರಿದಳು. ಇವಳ ಅಕ್ಕಪಕ್ಕದಲ್ಲಿ ಮಲಗಿದ್ದ ಅನೇಕ ರೋಗಿಷ್ಟರು ನಿದ್ದೆ ಔಷಧಿಗೆ ಸೋತು ಹೆಣದಂತೆ ಬಿದ್ದಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ಒಂದಷ್ಟು ಜನ ಹೆಂಗಸರು ದೀಪು ಎಂಬ ಪ್ರಾಯದ ಹೆಣ್ಣುಮಗಳ ಈ ಪರಿಯನ್ನು ಕಂಡು ತಮ್ಮ ಸೆರಗಿನಲ್ಲಿ ಬಾಯಿ ಮುಚ್ಚಿಕೊಂಡು ಕಣ್ಣಿನಲ್ಲಿ ನೀರು ತುಂಬಿಕೊಂಡರು.

ಅಷ್ಟಕ್ಕೆ ರಕ್ತಪರೀಕ್ಷೆಯ ಬಿಲ್ಲನ್ನು ಪಾವತಿಸಿ ಬಂದಿದ್ದೆ. ಗಾಯತ್ರಿ ಚಿಕ್ಕಮ್ಮ ದೀಪುವಿನ ಬಗ್ಗೆ ಡಿಟೇಯ್ಲ್ಸ್ ಕೊಡುತ್ತಿದ್ದರು. ಆ ಡಿಟೇಯ್ಲ್ ಜೊತೆಗೆ ನಮ್ಮಿಬ್ಬರನ್ನು ಮತ್ತೊಂದು ಕಟ್ಟಡಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ, ನಮ್ಮಿಬ್ಬರನ್ನು ಕೂರಿಸಿಕೊಂಡ ಡಾಕ್ಟರ್ ಇಬ್ಬರು ಕೂಲಂಕಷವಾಗಿ ಎಲ್ಲವನ್ನೂ ವಿಚಾರಿಸಲು ಶುರುವಿಟ್ಟುಕೊಂಡರು. ಆಕೆಯ ಜೀವನ ಶೈಲಿ, ಆಕೆಯ ಮಲಗುವ ಸಮಯ, ಏಳುವ ಸಮಯ, ಊಟ ಮಾಡುವ ಸಮಯ, ಇತರರೊಂದಿಗೆ ಯಾವ ರೀತಿ ಬೆರೆಯುತ್ತಾಳೆ ಅಥವಾ ಬೆರೆಯುವುದಿಲ್ಲ, ಮುಂಜಾನೆ ಎದ್ದೊಡನೆ ಅಥವಾ ಮಲಗುವಾಗ ಅವಳ ಮನಸ್ಥಿತಿ ಹೇಗಿರುತ್ತದೆ ಎಲ್ಲವನ್ನೂ ಕೇಳಿದರು. ಆಕೆಯ ಬಗ್ಗೆ ಹೆಚ್ಚು ತಿಳಿದ ಚಿಕ್ಕಮ್ಮನೇ ಉತ್ತರಿಸುತ್ತಿದ್ದರು.

ಇದೆಲ್ಲಾ ಮುಗಿದ ನಂತರದ ಪ್ರಶ್ನೆಗೆ ಚಿಕ್ಕಮ್ಮ ಕೊಟ್ಟ ಉತ್ತರದಲ್ಲಿ ಎಳ್ಳಷ್ಟೂ ನನಗೆ ತಿಳಿದಿರಲಿಲ್ಲ. ಯಾಕೆಂದರೆ ವಸಂತಕ್ಕ ಎಂದರೆ ನನಗೆ ಸರಿಯಾಗಿ ನೆನಪಿಗೇ ಬರುವುದಿಲ್ಲ. ಆಕೆಗೆ ಮದುವೆಯಾಗುವಾಗ ನಾನು ನಾಲ್ಕು ವರ್ಷದ ಹುಡುಗ. ನಂತರದ ದಿನಗಳಲ್ಲಿ ಆಕೆಯನ್ನು ಕಂಡವನೇ ಅಲ್ಲ. ‘ಅವರ ಅಪ್ಪ ಅಮ್ಮನ ಬಗ್ಗೆ ಹೇಳಿ’ ಎಂದು ಡಾಕ್ಟರ್ ಕೇಳಿದೊಡನೆ ಚಿಕ್ಕಮ್ಮ ಒಂದೊಂದೇ ದುರಂತವನ್ನು ವಿವರಿಸತೊಡಗಿದಳು. ಚಿಕ್ಕಮ್ಮ ಹೇಳಿದ್ದು - ಅವರಮ್ಮನ ಹೆಸರು ವಸಂತ, ತಂದೆ ಬಾಲು. ವಸಂತನಿಗೆ ಮದುವೆಯಾಗುವಾಗ ಹದಿಮೂರು ವರ್ಷ. ಮದುವೆಯಾಗಿ ಇಲ್ಲಿಗೆ ಇಪ್ಪತ್ತು ವರ್ಷಗಳಾಗಿವೆ. ನನಗೆ ತಿಳಿದಂತೆ ಮದುವೆಯಾದ ವರ್ಷದಿಂದ ಇವತ್ತಿನವರೆವಿಗೂ ಮನೆಯಲ್ಲಿ ತೀರದ ಜಗಳ. ಆತ ಕುಡಿಯದಿದ್ದ ದಿನವೇ ಇಲ್ಲ. ಆತ ಫಾರೆಸ್ಟ್ ಡಿಪಾರ್ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡಾಗ ಬರುತ್ತಿದ್ದ ಸಂಬಳ ಒಂದು ಸಾವಿರದ ಆರು ನೂರು. ಈಗ ಒಟ್ಟು ಎಂಟು ಸಾವಿರ. ಆ ದಿನದಿಂದ ಇಲ್ಲಿಯವರೆವಿಗೂ ಆ ಕೆಲಸ ಪರ್ಮನೆಂಟ್ ಆಗುತ್ತೆ ಆಗುತ್ತೆ ಎಂದು ಹೇಳಿಕೊಂಡು ಬರುವುದೇ ಆಯಿತು, ಅದು ಆಗಿಲ್ಲ, ಆಗುವುದೂ ಇಲ್ಲವೇನೋ.

ಮದುವೆಯಾದ ವರ್ಷದಿಂದ ಈವರೆವಿಗೂ ಆತ ಆಕೆಯನ್ನು ಎಲ್ಲಿಗೂ ಕಳುಹಿಸಿದ್ದಿಲ್ಲ, ಯಾವ ಕಾರ್ಯಕ್ರಮವನ್ನೂ ಆಕೆ ಕಂಡದ್ದಿಲ್ಲ. ಮದುವೆಗೆ ಮುಂಚೆ ಎಲ್ಲರ ಅಚ್ಚುಮಚ್ಚಿನವಳಾಗಿದ್ದ ವಸಂತ ನಂತರದ ದಿನಗಳಲ್ಲಿ ಎಲ್ಲರಿಂದಲೂ ಮರೆಯಾಗಿಹೋದಳು. ಕೊನೆಗೊಂದು ದಿನ ಅವರಪ್ಪ ತೀರಿಕೊಂಡಾಗ ಉಳಿದ ಮಕ್ಕಳೆಲ್ಲಾ ಬಂದು ವಸಂತನಿಗೋಸ್ಕರ ಕಾಯುವುದೇ ಆಯಿತು. ಈ ಯುಗದಲ್ಲೂ ಆಕೆಯ ಬಳಿ ಒಂದು ಮೋಬೈಲ್ ಇಲ್ಲ ಎನ್ನುವುದಕ್ಕಿಂದ ಆತ ಕೊಡಿಸಿದ್ದಿಲ್ಲ. ಅಂದು ತಂದೆ ತೀರಿಕೊಂಡು ಹೆಣವನ್ನು ಗುಂಡಿಯಲ್ಲಿಟ್ಟು ಮಣ್ಣು ಸುರಿಯುವಾಗ ಬಂದಳು. ಬಂದವಳೇ ಕಣ್ಣಲ್ಲಿ ತೊಟ್ಟು ನೀರು ಸುರಿಸಲಿಲ್ಲ. ಗರ ಬಡಿದವಳಂತೆ ನಿಂತುಬಿಟ್ಟಳು. ತನ್ನ ಉಳಿದ ಅಕ್ಕಂದಿರು ಹಾಗೂ ಇಬ್ಬರು ತಮ್ಮಂದಿರನ್ನು ಗುರುತಿಸುವುದರಲ್ಲೇ ಯಾಕೋ ಎಡವಿದಳು.

ಇನ್ನು ಆತ ಆಕೆಗೆ ಸ್ವಾತಂತ್ರ್ಯ ಕೊಟ್ಟ ದಿನವೇ ಇಲ್ಲ. ಮದುವೆಯ ಪ್ರಾರಂಭದಲ್ಲಿ ಅಂದರೆ ಸುಮಾರು ಹತ್ತು ವರ್ಷಗಳವರೆವಿಗೂ ಕೆಲಸಕ್ಕೆ ಹೋಗುವಾಗ ಮನೆಯ ಬೀಗ ಜಡಿದುಹೋಗುತ್ತಿದ್ದ. ಇದ್ದ ಒಂದು ಕಿಟಕಿಗೂ ತಂತಿ ಸುತ್ತಿ ಒಳಗಿನಿಂದ ಯಾವುದೇ ಕಾರಣಕ್ಕೂ ತೆರೆಯಲಾಗದಂತೆ ಮಾಡಿದ್ದ. ಅಕ್ಕಪಕ್ಕದವರೊಂದಿಗೆ ಮಾತನಾಡಲು ಬಿಟ್ಟವನಲ್ಲ. ದೊಡ್ಡ ಅನುಮಾನ ಪಿಶಾಚಿ. ಹೆಂಗಸರೊಂದಿಗೆ ಮಾತನಾಡುತ್ತಿದ್ದರೂ ಎಲ್ಲರ ಮುಂದೆ ಗದರಿಬಿಡುತ್ತಿದ್ದವ. ಇದೆಲ್ಲದರಿಂದ ಆಕೆ ಮನೆಯೊಳಗೇ ಕೊಳೆಯುವಂತಾಯಿತು. ಎರಡನೇ ಮಗುವಿಗೆ ಮೊದಲೇ ಬುದ್ಧಿಮಾಂದ್ಯ. ನಾನೇ ಸುಮಾರು ಹತ್ತು ವರ್ಷ ತುಂಬುವವರೆವಿಗೂ ಸಾಕಿದೆ. ಈಗಲೂ ಬುದ್ಧಿಮಾಂದ್ಯತೆ ಹಾಗೇ ಇದೆ. ಆತ ಒಂದು ದಿನವೂ ಆ ಹುಡುಗಿಯನ್ನು ಆಸ್ಪತ್ರೆಯ ಮೆಟ್ಟಿಲು ಹತ್ತಿಸಿದವನಲ್ಲ. ಅದೂ ಸುಮಾರು ಆರು ವರ್ಷದಿಂದ ಮನೆಯ ಮೂಲೆಯಲ್ಲಿ ಬಿದ್ದಿದೆ. ಸ್ವಲ್ಪ ಮೈ ಕೈ ಬಲಿತಿರುವ ಹುಡುಗಿ, ಕೆಲವೊಮ್ಮೆ ಯಾರಾದರೂ ಕರೆದರೆ ಸುಮ್ಮನೆ ಹೊರಟುಹೋಗುತ್ತದೆ. ಇದಾವುದರ ಪರಿವೆಯೂ ಇಲ್ಲದೇ ವಸಂತ ಆ ಮನೆಯಲ್ಲಿ ಗರ ಬಡಿದವಳಂತೆ ಇರುತ್ತಾಳೆ. ಮನೆಮುಂದೆ ಒಂದು ಒಂಟಿ ಬಾವಿ ಇದೆ. ಇವರ ತೀರದ ಜಗಳ ಕೆಲವೊಮ್ಮೆ ಅರ್ಧರಾತ್ರಿವರೆವಿಗೂ ಸಾಗಿ ವಸಂತಳನ್ನು ಗಂಡ ಎನಿಸಿಕೊಂಡವನು ಅನಾಮತ್ತಾಗಿ ಹೊತ್ತುಕೊಂಡು ಬಂದು ಬಾವಿಯೊಳಗೆ ಎಸೆಯಲು ನೋಡಿದ್ದಾನೆ. ಇವಳು ‘ತಪ್ಪಾಯಿತು, ಕಾಲು ಹಿಡಿದುಕೊಂಡೆ’ ಎಂದರೆ ಮಾತ್ರ ಮತ್ತೆ ಮನೆಯೊಳಗೆ ಬಿಡುತ್ತಿದ್ದವ.

ಅಷ್ಟಕ್ಕೆ ಡಾಕ್ಟರ್ ‘ಈ ಹುಡುಗಿ ಇವರ ಜೊತೆಯಲ್ಲಿಯೇ ಬೆಳೆದಳೋ, ಇಲ್ಲ ಯಾವುದಾದರೂ ಹಾಸ್ಟೆಲ್ ನೆಂಟರಿಸ್ಟರು?’ ಎಂದು ಕೇಳಿದರು. ಅದಕ್ಕೆ ಚಿಕ್ಕಮ್ಮ – ‘ಇಲ್ಲ, ಈಕೆ ಹುಟ್ಟಿದಾಗಿನಿಂದ ಇಲ್ಲಿಯವವರೆವಿಗೂ ಇವರೊಂದಿಗೇ ಬೆಳೆದದ್ದು, ದಿನ ಈ ಜಗಳ ನೋಡಿ ನೋಡಿಯೇ ರೋಸೆದ್ದು ಹೋಗಿದ್ದಾಳೆ, ವಸಂತನಿಗೆ ಯಾವುದೋ ಸನ್ನಿ ಹಿಡಿದಿದೆ ಎಂದು ಸುತ್ತಲಿನವರು ಕಳೆದ ಹತ್ತದಿನೈದು ವರ್ಷಗಳಿಂದ ಹೇಳುತ್ತಿದ್ದಾರೆ, ಮುಂಜಾನೆ ಬೇಗ ಏಳುವುದಿಲ್ಲ, ಮನೆ ಸ್ವಚ್ಚವಾಗಿಟ್ಟುಕೊಳ್ಳುವುದಿಲ್ಲ, ದೀಪು ತನ್ನ ಹೈಸ್ಕೂಲಿನಿಂದಲೂ ಕನಕಪುರದಲ್ಲಿಯೇ ಓದಬೇಕಾದ ಅನಿವಾರ್ಯತೆ ಬಂತು, ಬೆಳಗ್ಗೆ ಬೇಗ ಎದ್ದು ಆ ಮಗುವಿಗೆ ಈಕೆ ಅಡುಗೆ ಮಾಡಿಕೊಡುತ್ತಿರಲಿಲ್ಲ. ತನ್ನ ಮಗಳು ಹೈಸ್ಕೂಲ್, ನಂತರ ಕಾಲೇಜಿಗೆ ಹೋಗುತ್ತಿದ್ದಾಳೆ ಎಂಬ ಪರಿಜ್ಞಾನವೇ ಆಕೆಗಿರಲಿಲ್ಲವೇನೋ, ಈ ಹುಡುಗಿಯೋ ನೊಂದು ನೊಂದೇ ಹಠದಲ್ಲಿ ಬೆಳೆದವಳು ಆಗಾಗ ನಮ್ಮೂರಿಗೆ ಬಂದಾಗ ನಾವುಗಳು ಕೊಡುತ್ತಿದ್ದ ನೂರು ಇನ್ನೂರು ರೂಗಳನ್ನು ಕೂಡಿಟ್ಟುಕೊಂಡು ಬಸ್ ಚಾರ್ಜ್ ಮಾಡಿಕೊಂಡು ಮುಂಜಾನೆ ಏನೂ ತಿನ್ನದೇ ಮಧ್ಯಾಹ್ನಕ್ಕೆ ಬ್ರೆಡ್ಡು ಬಿಸ್ಕೆಟ್ ತಿಂದು ಬೆಳೆದವಳು.

ಮತ್ತೆ ಡಾಕ್ಟರ್ ಮಾತನಾಡಿದರು – ‘ಯಾಕೆ ಹೀಗೆ, ಆಕೆಗೆ ಮಕ್ಕಳ ಮೇಲೆ ಪ್ರೀತಿ ಇಲ್ಲವೇ?’ ಮಾತನ್ನು ಮುಂದುವರೆಸಿದ ಚಿಕ್ಕಮ್ಮನಿಗೆ ಈ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗಲಿಲ್ಲವೋ ಏನೋ. ಅವರು ಹೇಳಿದರು – ‘ಅದು ಸ್ಪಷ್ಟವಾಗಿ ಗೊತ್ತಿಲ್ಲ ಸಾರ್, ಮಕ್ಕಳನ್ನು ಒಂದು ದಿನವೂ ಬಡಿದವಳಲ್ಲ, ಆದರೆ ಊರವರೆಲ್ಲಾ ಸನ್ನಿ ಹಿಡಿದಿದೆ ಎನ್ನುವರಲ್ಲ ಹಾಗೇ ಸುಮ್ಮನೇ ಮಂಕಾಗಿ ಕುಳಿತಿರುತ್ತಾಳೆ, ನೋಡಿದ್ದನ್ನೇ ನೋಡುತ್ತಿರುತ್ತಾಳೆ, ಮದುವೆಯ ನಂತರ ಆಕೆ ಮಾತನಾಡಿದ್ದು ತೀರ ಕಡಿಮೆ, ಆ ದರಿದ್ರ ಗಂಡಸು ಯಾರೊಂದಿಗಾದರೂ ಮಾತನಾಡಲೂ ಬಿಟ್ಟರೆ ತಾನೇ. ಆತ ಬಂದೊಡನೆ ಊಟ ಬಡಿಸಿಬಿಡಬೇಕು. ಸಂಬಳ ಬಂದ ದಿನ ಅಲ್ಪ ಸ್ವಲ್ಪ ರೇಶನ್ ತಂದು ಹಾಕುತ್ತಾನೆ, ಅದರಲ್ಲೇ ತಿಂಗಳೂಟ. ಆದರೆ, ಮದುವೆಗೆ ಮುಂಚೆ ಹೇಗಿದ್ದಳು ಎನ್ನುವಿರಿ. ಎಲ್ಲರೂ ‘ಜಿಂಕೆಮರಿ’ ಎಂದೇ ಕರೆಯುತ್ತಿದ್ದರು. ನೋಡಲೂ ಜಿಂಕೆಮರಿಯಷ್ಟೇ ಸುಂದರವಾಗಿದ್ದವಳು ಜಿಂಕೆಯಂತೆ ಪುಟಪುಟನೆ ಮನೆಯಿಂದ ಮನೆಗೆ ನೆಗೆಯುತ್ತಿದ್ದಳು. ಆದರೆ ಈಗ ಎಂದವರೇ ಬಿಕ್ಕಳಿಸಿದರು.

ಇದನ್ನೆಲ್ಲಾ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ಮತ್ತೊಬ್ಬ ಡಾಕ್ಟರ್ ಕೇಳಿದರು – ‘ದೀಪುವಿಗೆ ಬಂದಿರುವಂತಹ ತೊಂದರೆ ನಿಮ್ಮ ಮನೆಗಳಲ್ಲಿ ಮತ್ತಾರಿಗಾದರೂ ಇದೆಯೇ?
ಈ ಪ್ರಶ್ನೆಗೆ ನಾನೇ ಉತ್ತರಿಸಿದೆ ‘ಹೌದು ಸರ್, ನಮ್ಮ ಭಾವ ಬಾಲು (ದೀಪುವಿನ ಅಪ್ಪ)ವಿಗೆ ಈ ತೊಂದರೆ ಇತ್ತೆಂದು ನಮ್ಮಣ್ಣ ಹೇಳಿದ್ದ, ಜೊತೆಗೆ ಬಾಲು ಭಾವನ ತಮ್ಮನಿಗೂ ಇದೇ ತರಹನಾದ ನಡವಳಿಕೆ ಇತ್ತಂತೆ’ ಎಂದೊಡನೆ ಚಿಕ್ಕಮ್ಮ ‘ಹೌದು, ಅದು ಸತ್ಯ, ಆದರೆ ವಸಂತ ಕೊನೆಯವಳು, ಇವಳಿಗಿಂತ ಮುಂಚಿನ ಆರು ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದರಲ್ಲಿ ನಾವೆಲ್ಲಾ ಹೈರಾಣಾಗಿ ಹೋಗಿದ್ದವು, ಯಾರಾದರೂ ಗಂಡುಜಾತಿ ಸಿಗಲಿ ಎನ್ನುವ ಸಮಯಕ್ಕೆ ಸರಿಯಾಗಿ ಈತ ಸಿಕ್ಕಿದ, ಈತನ ತೊಂದರೆಯ ಅರಿವು ನಮಗಿದ್ದರೂ ಈಗದರ ಲವಲೇಷವೂ ಇಲ್ಲ, ಮಾತ್ರೆ ಮಾತುಕತೆ ಮೂಲಕ ಎಲ್ಲಾ ಗುಣವಾಗಿದೆ ಎಂದರು, ಮದುವೆ ಮಾಡಿಕೊಟ್ಟುಬಿಟ್ಟೆವು. ಆದರೆ... ಚಿಕ್ಕಮ್ಮ ಮಾತು ಮುಂದುವರೆಸದಾದರು. ಈ ರೀತಿಯಾಗಿ ಅವಸರಕ್ಕೆ ಬೀಳುವ ಕಾರಣದಿಂದಲೇ ಗಾಯತ್ರಿ ಚಿಕ್ಕಮ್ಮ ಅನೇಕರ ದೂಷಣೆಗೆ ಒಳಗಾಗುವುದು.

ಕೊನೆಯ ಪ್ರಶ್ನೆ ಎಂದು ಹೇಳಿದವರು ‘ನಿನ್ನೆ ಏನಾಯಿತು ಹೇಳಿ’ ಎಂದರು. ಗಾಯತ್ರಿ ಚಿಕ್ಕಮ್ಮ ತಾನು ಕಂಡಿಲ್ಲವೆಂಬಂತೆಯೇ ಮಾತನಾಡಿದರು – ಈಗ್ಗೆ ಒಂದು ವರ್ಷದಿಂದ ಎದುರು ಮನೆಯಲ್ಲಿರುವ ಬಿನ್ನಾಣಗಿತ್ತಿಯೊಬ್ಬಳೊಡನೆ ಸಂಬಂಧ ಬೆಳೆಸಿರುವನಂತೆ, ಆಕೆ ಬರುವ ಸಂಬಳದಲ್ಲಿ ಬಹುಪಾಲು ಮುರಿದುಕೊಳ್ಳುತ್ತಾಳೆ, ಉಳಿದದ್ದು ಕೊಟ್ಟರೆ ವಸಂತಳ ಮನೆಗೆ. ಈ ವಿಚಾರವಾಗಿ ದೀಪುವಿಗೆ ಗುಮಾನಿಯಿತ್ತು. ನಿನ್ನೆ ಮಧ್ಯಾಹ್ನ ಮುಂದಿನ ಮನೆಯವಳನ್ನು ಪ್ರಶ್ನೆ ಮಾಡಲೆಂದೇ ಹೋದವಳು ಇಬ್ಬರೂ ಬೆತ್ತಲೆ ಸ್ಥಿತಿಯಲ್ಲಿದ್ದು ನೋಡಿ ಬೆಚ್ಚಿದ್ದಾಳಂತೆ ಎಂದರು.

ಇಷ್ಟೆಲ್ಲಾ ಕೇಳಿಕೊಂಡ ಡಾಕ್ಟರ್‍ಗಳು ನಾವು ಒಂದು ತಿಂಗಳಿಗಾಗುವಷ್ಟು ಮಾತ್ರೆ ಬರೆದುಕೊಡುತ್ತೇವೆ. ಇದೇನು ಹೇಳಿಕೊಳ್ಳುವಷ್ಟು ದೊಡ್ಡ ತೊಂದರೆಯಲ್ಲ. ಒಂದು ತಿಂಗಳು ಕಳೆದು ಬನ್ನಿ, ಬರುವಾಗ ಆ ಹುಡುಗಿಯ ತಂದೆ ತಾಯಿಯನ್ನೂ ಕರೆದುಕೊಂಡು ಬನ್ನಿ ಎಂದು ಹೇಳಿ ಹೊರಡಲು ಅನುವಾದಳು. ಅಷ್ಟಕ್ಕೇ ನಾನೇ ‘ಡಾಕ್ಟರ್’ ಎಂದೆ. ಅಷ್ಟೇ ಸಾವಧಾನವಾಗಿ ಅವರು ‘ಹೇಳಿ’ ಎಂದರು. ‘ಆಕೆ ಮಾತು ಮಾತಿಗೂ ‘ಅಮೇರಿಕಾ ಅಮೇರಿಕಾ’ ಎಂದು ಹೇಳುವ ಹಿಂದಿನ ಉದ್ದೇಶವಾದರೂ ಏನು’ ಎಂದು ಕೇಳಿದೆ. ತುಸು ನಕ್ಕ ಡಾಕ್ಟರ್‍ಗಳು ‘ಆ ಹುಡುಗಿ ಇನ್ನೂ ಡಿಗ್ರಿ ಓದುತ್ತಿದೆ, ತಮ್ಮ ತಮ್ಮಲ್ಲೇ ಗೆಳೆಯ ಗೆಳತಿಯರು ಡಿಗ್ರಿ ಮುಗಿದ ನಂತರ ಅಮೇರಿಕಾಗೆ ಹೋದರೆ ರಾತ್ರೋ ರಾತ್ರಿ ಶ್ರೀಮಂತರಾಗಿಬಿಡಬಹುದು, ಈ ದೇಶವನ್ನೇ ಆಳಬಹುದು ಎಂಬ ಕನಸ್ಸು ಅಥವಾ ಭ್ರಮೆಯನ್ನು ಕಂಡಿರುತ್ತಾರೆ, ಈ ರೀತಿಯ ವಿಷಮ ಸ್ಥಿತಿಯಲ್ಲ ಅದು ಸುಮ್ಮನೇ ಬರುತ್ತದೆ, ಜೊತೆಗೆ ತನ್ನ ತಾಯಿ ಹರಿದ ಸೀರೆ ಉಟ್ಟುಕೊಂಡು ಓಡಾಡುವಾಗ ಮತ್ತೊಬ್ಬಳು ತನ್ನ ತಂದೆಯ ದುಡ್ಡಿನಲ್ಲೇ ರೇಷ್ಮೆ ಸೀರೆ ಉಟ್ಟು ಓಡಾಡಿದಾಗ ಮನಸ್ಸು ತೀವ್ರ ವಿಚಲಿತಗೊಂಡು ಅದು ಕೋಪವಾಗಿ ಸಿಡಿಯುತ್ತದೆ’ ಎಂದರು.

ಇನ್ನೊಂದು ತಿಂಗಳ ನಂತರ ಬರುವುದಾಗಲಿ ಎಂದುಕೊಂಡವರೇ ದೀಪುವಿನ ಬಳಿ ಬಂದಾಗ ಆಕೆ ಇನ್ನೂ ನಿದ್ದೆಯಿಂದ ಎಚ್ಚೆತ್ತಿರಲಿಲ್ಲ. ಕಷ್ಟಪಟ್ಟು ಎಬ್ಬಿಸಿಕೊಂಡೆ. ಕೈಗೆ ಹೆಗಲು ಕೊಟ್ಟು ಕಾರಿನಲ್ಲಿ ಮಲಗಿಸಿ ಮಾತ್ರೆ ತರಲು ಹೋದೆ. ಅಲ್ಲೋ ನೂರಾರು ಜನರ ಸಾಲು. ಒಬ್ಬರ ಮುಖದಲ್ಲೂ ನಗುವಿರಲಿಲ್ಲ. ಆಧುನಿಕತೆಯೆಂಬುದು ಗಾಡಿಯ ಜಾಗದಲ್ಲಿ ಬೈಕ್, ಬಸ್ಸು, ರೈಲು, ಏರೋಪ್ಲೇನ್ ತಂದಿರಬಹುದು, ಪೆನ್ನು ಪುಸ್ತಕದ ಜಾಗದಲ್ಲಿ ಕ್ಯಾಲ್ಕ್ಯೂಲೇಟರ್, ಕಂಪ್ಯೂಟರ್ ತಂದಿರಬಹುದು, ಹತ್ತಾರು ದಿನಗಳ ನಂತರ ಮುಟ್ಟುತ್ತಿದ್ದ ಮಾತನ್ನು ಮೊಬೈಲ್ ಮೂಲಕ ಆ ಕ್ಷಣದಲ್ಲಿ ಮುಟ್ಟಿಸುವಂತೆ ಮಾಡಿರಬಹುದು, ಆದರೆ ನೆಮ್ಮದಿಯಾಗಿದ್ದ ಎಷ್ಟೋ ಮನಸ್ಸುಗಳನ್ನು ಮತ್ತೂ ಕ್ಷೀಣಿಸುತ್ತಿದೆ ಎಂಬುದಕ್ಕೆ ಈ ಸಾಲೇ ಸಾಕ್ಷಿ. ಹೇಗೋ ಮಾತ್ರೆ ತೆಗೆದುಕೊಂಡು ಕಾರನ್ನು ಹತ್ತಿಕೊಂಡು ಊರಿನ ಕಡೆ ಹೊರಟೆವು.

ಈಯೆಲ್ಲಾ ಘಟನೆಗಳ ನಂತರ ನನಗೆ ದೀಪುವಿಗಿಂತಲೂ ಹೆಚ್ಚಾಗಿ ನಮ್ಮ ವಸಂತಕ್ಕನ ಬಗ್ಗೆ ಚಿಂತೆ ಹೆಚ್ಚಾಯಿತು. ಮೊದಲು ಆಕೆಯನ್ನು ಮಾನಸಿಕ ತಜ್ಞರ ಬಳಿ ತೋರಿಸಬೇಕಾಗಿತ್ತೇನೋ ಎನಿಸಿತು. ಅಬ್ಬಾ! ಒಬ್ಬಳು ಹೆಂಗಸು ಮಾತುಕತೆಯಿಲ್ಲದೇ ಹತ್ತಾರು ವರ್ಷ ಕೇವಲ ಬೆಳಕಿಲ್ಲದ ಕೋಣೆಯಲ್ಲಿಯೇ ಕೂಡಿಹೋಗುವುದೆಂದರೆ? ಆಕೆ ನಿಜಕ್ಕೂ ಭಾಷೆಯನ್ನು ಮರೆತಿದ್ದಾಳೆ, ನಾಲಗೆ ಹೊರಳುವುದನ್ನು ಮರೆತಿದೆ ಎನಿಸಿತು. ಮಾನಸಿಕ ರೋಗಕ್ಕೆ ತುತ್ತಾಗಿದ್ದ ಭಾವನ ರೋಗ ಮತ್ತೆ ಉಲ್ಬಣಿಸಿ ಯಾರೂ ತೋರಿಸದೇ ಅದು ಹಾಗೇ ಉಳಿದುಹೋಯಿತೇನೋ ಎಂಬ ಮತ್ತೊಂದು ಚಿಂತೆ ಕಾಡಿತು. ಆತ ಆ ರೀತಿಯವನಾಗಿದ್ದರೆ ಇನ್ನೊಬ್ಬಳು ಹೆಂಗಸನ್ನು ಅನುಭವಿಸಿ ಖುಷಿಯಾಗುತ್ತಿರಲಿಲ್ಲವೆನಿಸಿತ್ತು. ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಡಾಕ್ಟರ್‍ಗಳಿಗೆ ದೀಪುವಿನ ಮೂಲಕ ವಸಂತಕ್ಕ ಚಿಕಿತ್ಸೆಗೆ ಇನ್ನೂ ಹತ್ತಿರವಾದಳೇ ಎನಿಸಿತು. ನಾನು ವಸಂತಕ್ಕನ ಜೊತೆ ಎಳೆ ವಯಸ್ಸಿನಲ್ಲಿ ಕುಂಟಾಬಿಲ್ಲೆ ಆಡಿದ್ದು ನೆನಪಿದೆ. ಎಷ್ಟು ಲವಲವಿಕೆಯ ನಮ್ಮ ವಸಂತಕ್ಕ ನಂತರದ ದಿನಗಳಲ್ಲಿ ನಮ್ಮಿಂದ ಮಿಂಚಿನಷ್ಟೇ ವೇಗವಾಗಿ ದೂರಾಗಿ ಹೋದಳು. ಆಕೆ ತನ್ನ ತಂದೆಯ ಶವಸಂಸ್ಕಾರಕ್ಕೆ ಬಂದಿದ್ದಾಗಲೂ ನೋಡಿದ್ದೆ. ಹೀಗೆ ಗಂಡನೊಂದಿಗೆ ಬಂದಳು ಹಾಗೇ ಹಿಂದಿರುಗಿಬಿಟ್ಟಳು. ನಮ್ಮ ವಸಂತಕ್ಕನಲ್ಲಿ ತೀವ್ರಗತಿಯ ಬದಲಾವಣೆಗಳಾಗಿದ್ದವು.

ಅಷ್ಟಕ್ಕೆ ನಾವುಳಿದುಕೊಂಡಿರುವ ಕನಕಪುರ ಬಂದಿತು. ದೀಪುವಿಗೆ ಇನ್ನೂ ಎಚ್ಚರವಾಗಿರಲಿಲ್ಲ. ಮಾನಸಿಕ ರೋಗದ ಔಷಧಿಗಳೆಂದರೆ ಕಾಂಬಿನೇಷನ್ ಆಫ್ ಟ್ರೀಟ್‍ಮೆಂಟ್ ಅಂಡ್ ಸ್ಲೀಪ್ ಎಂದು ನನ್ನ ಗೆಳೆಯ ಹೇಳುತ್ತಿದ್ದ. ಹೇಗೋ ಆಕೆಯನ್ನು ಎಚ್ಚರಿಸಿದಾಗ ಅದಾಗಲೇ ಸ್ವಲ್ಪ ಹತೋಟಿಗೆ ಬಂದಿದ್ದಾಳೆ ಎನಿಸಿತು. ಸ್ವಲ್ಪ ಏನೋ ತಿಂದಳು. ರಾತ್ರಿ ನುಂಗಬೇಕಾಗ ಮೂರು ಮಾತ್ರೆಗಳನ್ನು ನುಂಗಿಸಿದ್ದಾಯಿತು. ಮತ್ತೆ ಹಾಗೇ ಹಾಸಿಗೆ ಮೇಲೆ ಹೊರಳಿಕೊಂಡಳು.

ಇಷ್ಟಾದರೂ ವಸಂತಕ್ಕ ಮತ್ತು ಬಾಲು ಭಾವನಿಂದ ಒಂದೇ ಒಂದು ಮೊಬೈಲ್ ಕರೆಯೂ ಬರಲಿಲ್ಲವೆಂಬುದು ಆಶ್ಚರ್ಯ ಮತ್ತು ದುರಂತ. ಸಂಜೆಯಾದಂತೆ ಎಲ್ಲರೂ ಗಾಯತ್ರಿ ಚಿಕ್ಕಮ್ಮನ ಮನೆಗೆ ಕಾಗಕ್ಕ ಗೂಬಕ್ಕನ ಕಥೆ ಕೇಳುವವರಂತೆ ಸೇರಿಕೊಂಡರು. ಒಬ್ಬೊಬ್ಬರಿಗೂ ಎಲ್ಲವನ್ನೂ ವಿವರಿಸುವುದರೊಳಗೆ ಮೊದಲೇ ಸುಸ್ತಾಗಿದ್ದ ಗಾಯತ್ರಿ ಚಿಕ್ಕಮ್ಮ ಮತ್ತೂ ಹೈರಾಣಾದರು.

ಮುಂಜಾನೆ ಎದ್ದವನೇ ಮತ್ತೆ ನಿಮ್ಹಾನ್ಸ್ ಗೆ ಹೋಗಬೇಕಾದ ತೇದಿಯನ್ನು ಚಿಕ್ಕಮ್ಮನಿಗೆ ಗೊತ್ತು ಮಾಡಿಸಿ ವಸಂತಕ್ಕ ಮತ್ತು ಬಾಲು ಭಾವನನ್ನು ಮರೆಯದೇ ಕರೆದುಕೊಂಡು ಹೋಗು, ಮುಂದಿನ ಬಾರಿ ನನಗೆ ಬರಲು ಸಾಧ್ಯವಿಲ್ಲ, ಉಪಯೋಗವೂ ಇಲ್ಲ ಎಂದು ಹೇಳಿ ಕೈಗೊಂದಷ್ಟು ದುಡ್ಡು ತುರುಕಿ ಬೆಂಗಳೂರಿಗೆ ಹೊರಟುಬಿಟ್ಟೆ.

ಇತ್ತ ಬೆಂಗಳೂರಿನಲ್ಲಿ ನೆಮ್ಮದಿಯಾಗಿದ್ದ ನನ್ನನ್ನು ಕೆಣಕಿದ ವಿಚಾರವೆಂದರೆ ಮುಂದಿನ ಬಾರಿ ಆಸ್ಪತ್ರೆಗೆ ಹೋಗುವಾಗ ಬಾಲು ಭಾವ ಬರಲು ತಿರಸ್ಕರಿಸಿದ ಎಂದು ಚಿಕ್ಕಮ್ಮನಿಂದ ತಿಳಿದಾಗ. ‘ವಸಂತಕ್ಕ ಏನಂದಳು?’ ಎಂದಾಗ ‘ಆತ ಅವಳಿಗೆ ಮೊಬೈಲ್ ಕೊಡೋದೇ ಇಲ್ಲ’ ಎಂದಳು. ಇದೊಳ್ಳೆ ಪಿಕಲಾಟವಾಯಿತಲ್ಲ ಎಂದುಕೊಂಡ ನನಗೆ ಕೋಪ ನೆತ್ತಿಗೇರಿತು ‘ಆ ದರಿದ್ರದವರು ಇಷ್ಟು ದಿನದಲ್ಲಿ ಒಂದು ದಿನವಾದ್ರೂ ಮಗಳನ್ನ ನೋಡೋಕೆ ಬಂದ್ರಾ? ಇಲ್ಲ ಅವಳು ಹೇಗಿದ್ದಾಳೆ ಅಂತ ಒಂದು ಫೋನ್ ಮಾಡುದ್ರಾ? ಹಾಳಾಗಿ ಹೋಗ್ಲಿ ಬಿಡು, ನಾಳೆ ನಾನೇ ಬರ್ತೇನೆ, ಅವರ ಹಳ್ಳಿಗೆ ಇಬ್ಬರೂ ಹೋಗಿ ಮಾತಾಡಣ, ಈಗ ದೀಪು ಹೇಗಿದ್ದಾಳೆ?’ ಎಂದಾಗ ಅವರಿಂದ ಬಂದ ಮಾತು ‘ಕಿರುಚಾಟ, ಅರುಚಾಟವಿಲ್ಲ, ಯಾವಾಗಲೂ ಮಂಕಾಗಿರುತ್ತಾಳೆ’.

ಈ ಮಾತಾದ ನಾಳೆ ಕೆಲಸಕ್ಕೆ ಒಂದೆರಡು ದಿನ ರಜೆ ಹಾಕಿ ಊರಿಗೆ ಹೊರಟೇಬಿಟ್ಟೆ. ಗಾಯತ್ರಿ ಚಿಕ್ಕಮ್ಮ ಮತ್ತು ಅಣ್ಣನನ್ನು ಜೊತೆ ಮಾಡಿಕೊಂಡು ಕಲ್ಲು ಮುಳ್ಳು ಹಾದಿಯ ವಸಂತಕ್ಕ ಇರುವ ಹಲಗೂರಿಗೆ ಬಂದಾಗ ಆಶ್ಚರ್ಯವಾಯಿತು. ವಸಂತಕ್ಕನ ಮನೆಗೆ ಯಾವ ಮನೆಯ ಜನವೂ ಕಾಣದಂತೆ ಸುತ್ತ ಕಂಬ ಏರಿಸಿ ಚಪ್ಪರ ಕಟ್ಟಲಾಗಿದೆ. ಮೇಲ್ನೋಟಕ್ಕೆ ಅದು ಬಿಸಿಲಿಗೆ ಅಡ್ಡವಾಗಿ ನಿಂತಂತೆ ಕಾಣುತ್ತಿದೆ ಅಷ್ಟೆ. ಒಳಕ್ಕೆ ಹೋದವರಿಗೆ ಮೊದಲು ಎದುರಾದದ್ದೇ ನಮ್ಮ ಬಾಲು ಭಾವ. ‘ಚೆನ್ನಾಗಿದ್ದೀರಾ?’ ಎಂದವನು ನಗು ನಗುತ್ತಲೇ ಮಾತನಾಡಿಸಿದ. ಆತನ ನಡವಳಿಕೆಯಲ್ಲಿ ಮೇಲ್ನೋಟಕ್ಕೆ ಯಾವುದೇ ಹುಚ್ಚುತನವಾಗಲಿ, ಪಶ್ಚಾತ್ತಾಪವಾಗಲಿ ಕಾಣಲಿಲ್ಲ. ಹಾಗೆಂದು ಆತ ಹೊರಗೆ ಹೋದದ್ದೇ ನಮ್ಮನ್ನು ಮಾತನಾಡಿಸುವವರು ಯಾರೂ ಇರಲಿಲ್ಲ. ಮನೆ ಮುಂದಿನ ಪಡಸಾಲೆಯಲ್ಲಿ ಬಾಲುವಿನ ತಾಯಿ, ಇವತ್ತೋ ನಾಳೆಯೋ ಸಾಯುವ ವಯಸ್ಸಿನ ಅಜ್ಜಿ ಕಂಬಳಿ ಹೊದ್ದುಕೊಂಡು ಕಲ್ಲಿನಂತೆ ಅಲುಗಾಡದೇ ಮಲಗಿತ್ತು. ನಾವೇ ಒಳಗೆ ಹೋದವು. ಮನೆಯೆಲ್ಲಾ ಕತ್ತಲು. ಯಾರೂ ಇರದಂತಹ ನೀರವತೆ. ಅಷ್ಟಕ್ಕೆ ಗಾಯತ್ರಿ ಚಿಕ್ಕಮ್ಮ ‘ವಸಂತ’ ಎಂದು ಕೂಗಿದ್ದೇ ತಡ ಅಡುಗೆ ಮನೆಯಿಂದ ಯಾರೋ ಬಂದರು. ಹೌದು ನಮ್ಮ ವಸಂತಕ್ಕ. ತುಂಬಾ ಕೃಶಳಾಗಿಹೋಗಿದ್ದ ಆಕೆ ಗಾಯತ್ರಿ ಚಿಕ್ಕಮ್ಮನನ್ನು ಮಾತ್ರ ಗುರುತಿಸಿದಳು. ನಾವೆಂದರೆ ಆ ಸಮಯದಲ್ಲಿ ತಮ್ಮಂದಿರು ಎಂದು ಅಷ್ಟೇ ಇಷ್ಟ ಪಡುತ್ತಿದ್ದಳಂತೆ. ಆದರೂ ಆಕೆಯ ನೆನಪಿಗೆ ನಾವು ದಕ್ಕಲೇ ಇಲ್ಲ.

ನೆನಪಿಗೆ ದಕ್ಕದಿರುವುದು ನನಗೆ ನೋವಿನ ಸಂಗತಿಯಾಗಲಿಲ್ಲ, ಇವರು ಯಾರು ಎಂದು ಕೇಳಲು ಆಕೆಗೆ ನಾಲಗೆ ಹೊರಳಲಿಲ್ಲ. ಕ್ಷಣ ಕ್ಷಣ ಕಾಡಿದ ಅಗಾಧ ಮೌನ ಅವಳ ಭಾಷೆಯನ್ನು ನುಂಗಿಕೊಂಡಿತ್ತು. ‘ನಾನು ವಸಂತಕ್ಕ, ರಾಘು, ಗೊತ್ತಾಗ್ಲಿಲ್ವಾ? ಇವನು ನಮ್ಮಣ್ಣ ಸಂತು’ ಎಂದೊಡನೆ ‘ಓಹ್... ಊ ಗೊತ್ತಾಯ್ತು ಗೊತ್ತಾಯ್ತು’ ಎಂಬಂತೆ ತಲೆಯಾಡಿಸಿದಳು. ಗಾಯತ್ರಿ ಚಿಕ್ಕಮ್ಮನೇ ಮನೆಯ ಬಲ್ಬಿನ ಸ್ವಿಚ್ಚನ್ನು ಅದುಮಿದಾಗ ಆ ಬೆಳಕಿನಲ್ಲಿ ನಮಗೆ ಕಂಡದ್ದು ವಸಂತಕ್ಕನ ಎರಡನೇ ಮಗಳು. ಬಟ್ಟೆಯೆಲ್ಲಾ ಅಸ್ತವ್ಯಸ್ತವಾಗಿ ಮೈಮೇಲೆ ನಿಗಾ ಇಲ್ಲದೇ ಆ ದೇಹ ಬಿದ್ದಿತು. ‘ಮೈಮೇಲೆ ಒಂದು ಬೆಡ್ ಶೀಟ್ ಹೊದಿಸ್ಬಾರ್ದೇನೆ?’ ಎಂದು ಬೈದ ಚಿಕ್ಕಮ್ಮನೇ ಒಂದು ಬೆಡ್ ಶೀಟ್ ಹೊದಿಸಿದರು. ಅದು ಪೆದ್ದು ಪೆದ್ದಂಗೆ ಏನೇನೋ ಪೇಚಾಡಲು ಶುರು ಮಾಡಿಕೊಂಡಿತು.

ವಸಂತಕ್ಕ ನಮ್ಮನ್ನು ಕುಳಿತುಕೊಳ್ಳಿ, ಟೀ ಕುಡಿಯಿರಿ, ಊಟ ಮಾಡಿ ಎಂಬ ಔಪಚಾರಿಕವಾದ ಒಂದು ಮಾತನ್ನೂ ಕೇಳಲಿಲ್ಲ. ನಾವು ಏನಾದರೂ ಮಾತನಾಡುವುದೇನೋ ಎಂದು ಕಾಯುತ್ತಿದ್ದಾರೆ ಆಕೆ ನಮ್ಮೊಡನೆ ಗರ ಬಡಿದವಳಂತೆ ನಿಂತುಕೊಂಡಳು. ಒಂದು ರೀತಿಯ ಬೇಸರ ಯಾಕೋ ನನ್ನನ್ನು ಹಠಾತ್ತನೇ ಆವರಿಸಿಕೊಂಡಿತ್ತು. ಆ ಮನೆಯೋ ಕತ್ತಲು ತುಂಬಿದ ದೆವ್ವದ ಮನೆಯಂತೆ, ಭಾವನೆಗಳೇ ಇಲ್ಲದ ಸತ್ತ ಹೃದಯದಂತೆ ಕಂಡಿತು. ಪಡಸಾಲೆಯಲ್ಲಿ ಕುಳಿತರೆ ಮುಂದಿನ ಮನೆ, ಮರ ಏನೂ ಕಾಣದಂತೆ ಚಪ್ಪರಕ್ಕೆ ಗಿಡಗಳನ್ನು ಇಳಿ ಬಿಡಲಾಗಿದೆ. ಅಷ್ಟಕ್ಕೆ ಗಾಯತ್ರಿ ಚಿಕ್ಕಮ್ಮ ‘ಅವಳೇ ನೋಡು ಆ ಗುಡ್ಸಟ್ಟಿ’ ಎಂದು ಎದುರು ಮನೆಯವಳನ್ನು ತೋರಿಸಿದಳು. ನಿಜಕ್ಕೂ ಆಕೆ ಬಣ್ಣದ ಸೀರೆಯುಟ್ಟು ಮಾರಾಟಕ್ಕಿಟ್ಟ ಬೊಂಬೆಯಂತೆ ಕಾಣುತ್ತಿದ್ದಳು. ನನ್ನ ಭಾವನಂತಹವರು ಅನೇಕ ಜನ ಆಕೆಗೆ ಘಂಟೆಗೊಬ್ಬರಂತೆ ಸಿಲುಕಿಕೊಂಡಿದ್ದಾರೆ ಎಂಬುದು ತಿಳಿಯುತ್ತಿತ್ತು. ಇತ್ತ ವಸಂತಕ್ಕ ಯಾವುದೋ ಹಳೆಯ ಅಜ್ಜಿ ಸೀರೆಯನ್ನೇ ತೊಟ್ಟುಕೊಂಡು ನಿಂತಿದ್ದಳು.

‘ಅಲ್ಲಾ ಕಣೇ, ಆ ಮಗೂಗೇ ಹುಷಾರಿಲ್ಲ, ಒಬ್ಬರಾದ್ರೂ ಬಂದು ಏನಾಯ್ತು ಏನು ಅಂತ ನೋಡುದ್ರಾ? ನಾವೂ ಇಲ್ದೇ ಹೋಗಿದ್ರೆ ಬೀದಿ ಬೀದಿ ಅಲೆಯೋ ಹುಚ್ಚಿ ಆಗೋಗ್ತಾ ಇದ್ಲು ಅಷ್ಟೇ’ – ಎಂದು ಗಾಯತ್ರಿ ಚಿಕ್ಕಮ್ಮ ಬೈದಾಗ ನಮ್ಮ ಜಿಂಕೆಮರಿ ವಸಂತಕ್ಕ ಅಲುಗಾಡಲೇ ನಿಂತಲ್ಲೇ ನಿಂತಿದ್ದಳು. ಪಾಪ! ಅವಳ ಮನಸ್ಸಿನಲ್ಲೇನಿದೆಯೋ ಮಾತಾಗಿ ಬರಗೊಡದು. ಅಷ್ಟಕ್ಕೆ ಭಾವ ಎದುರು ಮನೆಯೊಳಗೆ ನುಗ್ಗುವುದನ್ನು ಗಾಯತ್ರಿ ಚಿಕ್ಕಮ್ಮ ನೋಡಿದವಳೇ ಅಣ್ಣನನ್ನು ನಡೆ ಅವನನ್ನು ಅಲ್ಲಿಯೇ ವಿಚಾರಿಸೋಣ ಎಂದು ಕರೆದುಕೊಂಡಳು. ನಾನು ಪಡಸಾಲೆಯಲ್ಲಿಯೇ ಕುಳಿತೆ. ವಸಂತಕ್ಕ ಮತ್ತೆ ಅಲುಗಾಡಲಿಲ್ಲ. ಒಳಕ್ಕೆ ಹೊರಟುಹೋದಳು.

ಅಣ್ಣ ಚಿಕ್ಕಮ್ಮ ಅತ್ತ ಧಾವಿಸಿದ್ದೇ ಮಲಗಿದ್ದ ಅಜ್ಜಿ ಕೆಮ್ಮಿಕೊಂಡು ನಿಧಾನವಾಗಿ ಮೇಲೆದ್ದಿತು. ‘ಯಾರೂ...?’ ಎಂದು ಕೆಮ್ಮಿಕೊಂಡೇ ಕೇಳಿತು. ನಾನು ರತ್ನವ್ವನ ಕೊನೆ ಮಗ ಎನ್ನುವಷ್ಟರಲ್ಲೇ ಆ ಅಜ್ಜಿ ನನ್ನ ಗುರುತು ಹಿಡಿದುದಲ್ಲದೇ ನಮ್ಮ ಸ್ವಂತದವರಾದ ಎಷ್ಟೋ ಜನರ ಬಗ್ಗೆ ಕೇಳಿಕೊಂಡಿತು. ಈ ಅಜ್ಜಿಯಲ್ಲಿರುವ ಕಿರು ಉತ್ಸಾಹವೂ ನಮ್ಮ ವಸಂತಕ್ಕನ ಬಳಿ ಇಲ್ಲವೆಂಬು ಸಹಿಸಿಕೊಳ್ಳಲಾಗದ ಸತ್ಯ. ಕೊನೆಗೆ ‘ಎಲೆಯಡಿಕೆಗೆ ಹತ್ತು ರುಪಾಯಿ ಕೊಡಪ್ಪ, ನಿನ್ನ ಕಾಲು ಕಟ್ಕೋತೀನಿ’ ಎಂದಿತು. ಹತ್ತರ ಬದಲು ಇಪ್ಪತ್ತು ಕೊಟ್ಟು ಕೇಳಿದೆ – ‘ಅಜ್ಜಿ, ಈ ಮನೆಯಲ್ಲಿ ನಿನ್ನಂತೆ ಇನ್ನೂ ಅನೇಕ ಹೆಣ್ಣು ಜೀವಗಳಿಗೆ ಗೊತ್ತೇ?’

‘ಗೊತ್ತಪ್ಪ, ವಸಂತ ಒಳ್ಳೇ ಹುಡುಗಿ ದಿನ ನಂಗೆ ಟೇಮಿಗೆ ಸರಿಯಾಗಿ ಉಣ್ಣೋಕಿಕ್ತಾಳೆ ಕಣಪ್ಪಾ, ಇಲ್ದಿದ್ರೆ ಅವನು ಒದ್ದೇ ಬುಡ್ತಾನೆ’ ಅಂದ್ರು.

ಅಜ್ಜಿಯ ಕೈ ಹಿಡಿದು ‘ಅಜ್ಜಿ, ನಮ್ಮ ವಸಂತಕ್ಕ ಆಗ ಜಿಂಕೆಮರಿ ರೀತಿ ಓಡಾಡ್ಕೊಂಡು ಇದ್ದೋಳು, ಈಗ ನಮ್ಮನ್ನ ಗುರುತು ಹಿಡಿಯೋಕಾಗ್ದೇ ಇರೋಷ್ಟು ಮಂಕಾಗಿದ್ದಾಳೆ, ಇದಕ್ಕೆಲ್ಲಾ ಕಾರಣ ನಿಮ್ಮ ಮಗ, ಅದಲ್ದೇ ಮಗಳು ಬೆಳೆದು ನಿಂತಿರೋ ಸಮಯದಲ್ಲಿ ಇನ್ನೊಬ್ಬಳೊಂದಿಗೆ ಸಂಬಂಧ, ಛೇ’ ಎಂದೊಡನೆ ಅಜ್ಜಿ ಕೈ ಕೊಡವಿಕೊಂಡಿತು.

‘ನಿನಗಿಂತ ನಾಲ್ಕುಪಟ್ಟು ವಯಸ್ಸಾಗೈತೆ ನಂಗೆ ಕೂಸೇ, ನಿನಗೇನು ಗೊತ್ತು ನನ್ನ ಮಗನ ಬಗ್ಗೆ, ಮದ್ವೆ ಆದಾಗ ಬಂಗಾರಕ್ಕಿಂತಲೂ ಹೆಚ್ಚಾಗಿ ನನ್ನ ಸೊಸೆನ ಅವನು ನೋಡ್ಕೋತಾ ಇದ್ದ, ಅವಳತ್ರ ಒಂದು ಲೋಟ ಕೂಡ ಬೆಳಗಿಸ್ತಿರ್ಲಿಲ್ಲ, ಆದ್ರೆ ಆದ್ರೆ...’

‘ಏನಾಯ್ತು ಹೇಳಿ ಅಜ್ಜಿ’ – ಕುತೂಹಲಕ್ಕೆ ಬಿದ್ದೆ.

‘ಆದ್ರೆ ಇವಳು ಒಂದು ದಿನ ನಿಮ್ಮ ಮಾವನ ದೊಡ್ಡ ಮಗ ನಾರಾಯಣಪ್ಪನ ಜೊತೆ ಬೆತ್ತಲೆ ಮಲಗಿದ್ದು ನೋಡ್ಬಿಟ್ಟ, ಜುಟ್ಟಿಡಿದು ಕೇಳ್ದಾಗ ಮದ್ವೆಗಿಂತ ಮುಂಚೆ ಇಂದಲೂ ಆ ಸಂಬಂಧ ಇತ್ತು ಅಂದ್ಲು, ಆವತ್ತಿಂದ...’

‘ಸಾಕು ಅಜ್ಜಿ, ನನಗೆ ಎಲ್ಲಾ ಗೊತ್ತಾಯ್ತು’ ಎಂದವನೇ ಮೇಲೆದ್ದುಬಿಟ್ಟೆ.
'ಈಗ ಆತ ಮಾಡುತ್ತಿರುವುದೇನು? ನೀವು ತಿಳುವಳಿಕೆ ಇರೋರು ಹೇಳೋದಲ್ಲವೇ?' ಎಂದು ನಾನೇ ಕೇಳಿದೆ
ಅಜ್ಜಿ ಮೌನಕ್ಕೆ ಶರಣಾದರು. ಸುಮ್ಮನೆ ಕಣ್ಣೀರು ಸುರಿಸಿದರು. ಕುಳಿತ ಜಾಗದಿಂದ ಏಳಲಾಗದ ಈ ಅಜ್ಜಿ ಮಾತಿಗೆ ಆತ ಬಗ್ಗುವನೇ?

ಎದುರು ಮನೆಯಿಂದ ಅಣ್ಣನನ್ನು ಚಿಕ್ಕಮ್ಮ ಹೊರಗಡೆಗೆ ಎಳೆದುಕೊಂಡು ಬರುತ್ತಿದ್ದಳು.

ಹತ್ತಿರ ಬಂದ ಗಾಯತ್ರಿ ಚಿಕ್ಕಮ್ಮ ‘ಇವರಾರೂ ಬರಲ್ಲ ಕಣೋ, ಅವನು ನೋಡು ಆ ಮನೆಯಿಂದ ಹೊರಗೆ ಬರ್ತಿಲ್ಲ’ ಎಂದರು. ಅಣ್ಣನನ್ನು ಸಮಾಧಾನ ಮಾಡಿದೆ. ಇವರ ಸಹಾಯ ನಮಗೆ ಬೇಕಾಗಿಲ್ಲ, ದೀಪುವನ್ನು ನಾವೇ ನೋಡಿಕೊಳ್ಳೋಣವೆಂಬ ನಿರ್ಧಾರದೊಂದಿಗೆ ಬಸ್ಸನ್ನು ಹತ್ತಿದೆವು.

ಬಸ್ಸಿನಲ್ಲಿ ಅಣ್ಣನಿಗೆ ಈ ವಿಚಾರ ಮುಟ್ಟಿಸಿದೆ. ಆತ ಮೊದಲೇ ನನಗೆ ತಿಳಿದಿತ್ತು ಎಂದುಬಿಟ್ಟ. ಚಿಕ್ಕಮ್ಮನ ಕಡೆಗೆ ತಿರುಗಿದೊಡನೆ ಅದು ಅವಳು ಮಾಡಿದ ದೊಡ್ಡ ತಪ್ಪು ಎಂದರು. ಇಲ್ಲಿ ತಪ್ಪು ಮಾಡಿದವರು ಯಾರು ಎಂದು ಯೋಚಿಸುವಷ್ಟು ತಾಳ್ಮೆ ನನ್ನಲ್ಲಿರಲಿಲ್ಲ. ಗೊಂದಲ ಎದೆಗೂಡಿತು. ಕಿಟಕಿ ತೆರೆದೆ ತಣ್ಣನೇ ಗಾಳಿ ಬೀಸಿತು. ಅವಳ ಮದುವೆಯ ದಿನಗಳು ಹೇಗಿದ್ದವೋ ಎಂದು ಯೋಚಿಸುತ್ತ ಮಲಗಿಬಿಟ್ಟೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಮನ ಕಲಕುವ ಕಥೆ, ವ್ಯಥೆ. ಎರಡು ಕಂತುಗಳಲ್ಲಿ ಪ್ರಕಟಿಸಬಹುದಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಓದಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು ಸರ್. ನೀವು ಹೇಳಿದಂತೆ ಮಾಡಿದ್ದರೆ ಚಂದವಿತ್ತು. ಆದರೆ ಕಾಲ ಮೀರೊದೆ. :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.