ನಮ್ಮ ಪಾಡು, ಜಾಡು..

4.333335

ಎಷ್ಟೊ ಬಾರಿ ಕಣ್ಣ ಮುಂದಿನ ಸರಳ ಸತ್ಯವನ್ನು ಒಪ್ಪಿಕೊಂಡು ಸ್ವೀಕರಿಸಲು ಅದರ ಸರಳತೆಯೆ ಅಡ್ಡಿಯಾಗಿಬಿಡುತ್ತದೆ - ಅಷ್ಟು ಸರಳ ಇರಲಿಕ್ಕೆ ಸಾಧ್ಯವೆ ಇಲ್ಲವೆಂಬ ಹುಂಬ ಅನಿಸಿಕೆಯಲ್ಲಿ. ಸಂಕೀರ್ಣತೆಗಳ ನಡುವೆ ಬದುಕಿ ಜಡ್ಡುಗಟ್ಟಿ ಹೋದ ಮನಸ್ಥಿತಿಗೆ, ನೈಜ ಸತ್ಯಗಳು ಸರಳವಾಗೆ ಸಾಕ್ಷಾತ್ಕರಿಸುತ್ತವೆಂಬ ಸಿದ್ದಾಂತ ನಂಬಲಸಾಧ್ಯವಾಗಿ ಕಾಣುವುದು ಅಚ್ಚರಿಯೇನಲ್ಲ. ಹೀಗಾಗಿ ಇರದ ಸಂಕೀರ್ಣವನ್ನರಸಿ, ಗೋಜು, ಗದ್ದಲ, ಗೊಂದಲಗಳ ಸಿಕ್ಕಿನಡಿ ಹುಡುಕಿ, ತಡಕಾಡಿ ಅದೇನೆಲ್ಲಾ ಸತ್ಯವಿದೆಯೊ ಎಂದು ಅಗೆದಗೆದು ಹೆಣಗಿ ಬಳಲುವುದು ಬದುಕಿನ ಯಾತ್ರೆಯಲ್ಲಿ ಸಹಜವಾಗಿ ಕಾಣುವ ಚಿತ್ರಣ. ಇದರಿಂದಾಗಿಯೆ ದಿನನಿತ್ಯದ ಬದುಕಿನಲ್ಲಿ ಭೂತ ಹಿಡಿದವರಂತೆ, ಏನನ್ನೊ ಬೆನ್ನಟ್ಟಿ ಹೊರಟವರಂತೆ ಅವಸರದ ಧಾವಂತದಲ್ಲಿ ನಡೆದಿರುತ್ತೇವೆ - ಯಾವುದಾವುದರ ಹಿಂದೆಯೊ ಅಲೆಯುತ್ತ. ಹೀಗೆ ಓಡುವ ಓಟದಲ್ಲಿ ದೂರ ದೂರಕ್ಕೆ ಬಂದ ಹಾಗೆಲ್ಲ, ಪಯಣದ ಆಯಾಸವನ್ನು ಅಧಿಗಮಿಸಿ ಯಾವುದೊ ಒಂದು ತುದಿಯತ್ತ ಬಂದು ತಲುಪಿದಾಗ ಅರಿವಾಗುತ್ತದೆ - ತಾವರಸಿ ಹೊರಟಿದ್ದ ಗಮ್ಯ ಅದಾಗಿರಲಿಲ್ಲವೆಂದು. ಆದರೆ, ಆ ಹೊತ್ತಿಗಾಗಲೆ ಬಲು ದೂರ ಬಂದಾಗಿಬಿಟ್ಟಿರುವ ಕಾರಣ ಮತ್ತೆ ಹೊಸತಾಗಿ ಯಾತ್ರೆ ಆರಂಭಿಸುವ ಕಸುವಿನ್ನು ಉಳಿದಿರುವುದಿಲ್ಲ. ಮತ್ತೆ ಗಮ್ಯವನರಸಿ ಹೊರಡುವ ಉತ್ಸಾಹವಾಗಲಿ, ವಯಸಾಗಲಿ ಇರದ ಕಾರಣ ನಿರ್ಲಿಪ್ತತೆಯಿಂದ ಬಂದದ್ದೆಲ್ಲ ಬಂದ ಹಾಗೆ ಸ್ವೀಕರಿಸುವ ಸ್ಮಶಾನ ವೈರಾಗ್ಯ ಭಾವ ಆವರಿಸಿಕೊಳ್ಳುತ್ತದೆ. ತೀರಾ ಅಪರೂಪಕ್ಕೆ ಕೆಲವರು ಮತ್ತೆ ಪಯಣದ ರಣೋತ್ಸಾಹ ತೋರಿದರು, ಅದರಲ್ಲೆಷ್ಟರ ಮಟ್ಟಿಗೆ ಯಶಸ್ವಿಯಾಗುವರೆಂಬುದು ಪ್ರಶ್ನಾರ್ಥಕವೆ.

ಆದರೆ ಕೆಲವು ಅದೃಷ್ಟವಂತರ ವಿಷಯ ಹಾಗಲ್ಲ. ಅವರೇನು ಅಪ್ರತಿಮ ಬುದ್ದಿವಂತರೊ, ಜ್ಞಾನಿಗಳೊ ಆಗಿರಬೇಕೆಂದೇನೂ ಇಲ್ಲ. ಆದರೆ ಯಾವುದೊ ಒಂದು ನಂಬಿಕೆಯ ಬೆನ್ನು ಹಿಡಿದು ಸರಿಯೊ, ತಪ್ಪೊ ದೈವೇಚ್ಛೆಯೆಂಬ ಭಾವದಲ್ಲಿ ಅದನ್ನನುಸರಿಸಿ ನಡೆದಿರುತ್ತಾರೆ. ಅದು ಸಂಪ್ರದಾಯದ ನಡುವಳಿಕೆಯೊ, ಗಹನವನ್ನರಿಯಲಾಗದ ಸರಳತೆಯಿಂದ ಸಾಕ್ಷಾತ್ಕಾರವಾದ ಸರಳ ಸತ್ಯವೊ, ಜನ್ಮಾಂತರದ ಪುಣ್ಯವೊ ಅಥವಾ ಏನೂ ಅಲ್ಲದ ಬರಿಯ ನಿಖರವಾಗಿ ಖುಲಾಯಿಸಿದ ಅದೃಷ್ಟವೊ - ಒಟ್ಟಾರೆ ಅವರರಿವಿಲ್ಲದೆಯೆ ಹಿಡಿದ ಸರಳ ಹಾದಿ ಒಂದೊ ಗಮ್ಯದತ್ತ ನಡೆಸಿರುತ್ತದೆ ಅಥವಾ ಯಾವುದೆ ಗೊಂದಲ, ಸಿಕ್ಕುಗಳಿಲ್ಲದ ಆರಾಮ ಜೀವನ ನಡೆಸಲು ಕಾರಣೀಭೂತವಾಗಿರುತ್ತದೆ. ಆ ಪುಣ್ಯ ಎಲ್ಲರ ಪಾಲಿನದಲ್ಲ ಎನ್ನುವುದು ವಿಧಿಯಾಡುವ ಛೋದ್ಯವೇನೊ?!

ಒಟ್ಟಾರೆ ಕರ್ಮ ಸಿದ್ದಾಂತದ ಮೊರೆ ಹೊಕ್ಕು ನಡೆದರೆ ಎಲ್ಲಕ್ಕು ಸರಳ ಸಿದ್ದ ವಿವರಣೆ ಸಿಕ್ಕಿಬಿಡುತ್ತದೆ. ಏನಿಲ್ಲವೆಂದರೂ ಪೊದೆಯಲ್ಲಿರುವ ಎರಡು ಹಕ್ಕಿಗಿಂತ ಕೈಯಲ್ಲಿರುವ ಒಂದು ಹಕ್ಕಿಯೆ ವಾಸಿಯೆಂಬ ಸತ್ಯವನ್ನಾದರು ಮನಗಾಣಲು ಅನುವು ಮಾಡಿಕೊಡುತ್ತದೆ. ಆ ಸರಳತೆಯಿರಬಹುದಾದ ಬಗೆಯ 'ಸಾರ ಸಿದ್ದಾಂತ' - ಈ ಪುಟ್ಟ ಕವನ :-)

ಕರ್ಮ ಸಿದ್ದಾಂತ..
__________________

ನಿನ ಕರ್ಮ ನೀ ಮಾಡು 
ಮಿಕ್ಕಿದ್ದ ನನಗೆ ಬಿಡು
ಎಂದನಾ ಪರಮಾತ್ಮ
ಕೇಳಬೇಕಲ್ಲಾ ಜೀವಾತ್ಮ ! ||

ವಂದಿಮಾಗಧರಿಲ್ಲ 
ಕೊಂಬು ಕಹಳೆಗಳಿಲ್ಲ
ಮಿಥ್ಯ ಜಗವೆಂಬ ಸತ್ಯ
ಅರುಹಿಯೂ ಅರಿಯಲಿಲ್ಲ ||

ಭಗವದ್ಗೀತೆಯ ಭೋದೆ
ಧರ್ಮಗ್ರಂಥಗಳದದೆ ಶ್ರದ್ದೆ
ಯಾಕೊ ಬೆಳಗಲಿಲ್ಲ ಪ್ರಖರ
ತೊಳೆದಂಧಶ್ರದ್ದೆಯ ತಿಮಿರ ||

ಅನುಮಾನಗಳು ನೂರು
ಮಾಯೆಯದೆ ತಕರಾರು
ನಿಜ ಹೇಳುವ ಸಖರಾರು
ಕನ್ನಡಿ ಬಿಂಬವೆ ಹುಡುಕಿದರು ||

ನೀನಿಟ್ಟೆ ಸರಳಾ ಸತ್ಯ
ಕರ್ಮ ಸಿದ್ದಾಂತ ಸಾಂಗತ್ಯ
ಕೈಲಿಟ್ಟ ಹಕ್ಕಿಯ ಮರೆತು
ಪೊದೆಯೆರಡಕೆ ಗುರಿಯಿತ್ತು ||

------------------------------------------------------------------------------------
ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
-------------------------------------------------------------------------------------

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನೀವನ್ನುವುದು ನಿಜ ನಾಗೇಶರೇ. ಸರಳವಾಗಿ ಹೇಳಿದರೆ ಮೂಗು ಮುರಿಯುತ್ತಾರೆ. ಅರ್ಥವಾಗದಂತೆ ಶಬ್ದಾಡಂಬರ ಮಾಡಿ ಅಲ್ಲಿ ಇಲ್ಲಿ ಸುತ್ತಾಡಿಸಿ ಏನೂ ಅರ್ಥವಾಗದಂತೆ ಗಂಟೆಗಟ್ಟಲೆ ಮಾತನಾಡಿದರೆ 'ಆಹಾ, ಎಂತಹ ವಿದ್ವಾಂಸ' ಅನ್ನುತ್ತಾರೆ!! ಸತ್ಯ ಸರಳವಾಗಿರುತ್ತದೆ, ಮೃದುವಾಗಿ ಕಂಡರೂ ಕಠಿಣವಾಗಿರುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ. ಸರಳತೆಯೆನ್ನುವುದು ಹೆಚ್ಚು ಸದ್ದು ಮಾಡುವುದಿಲ್ಲ . ಹೀಗಾಗಿ ಅದರ ಮುಖೇನ ಉಂಟಾಗುವ ದಿಗ್ವಿಜಯಗಳೂ ಕೂಡ ಯಾರೂ ಗುರುತಿಸದ ಸಾಮಾನ್ಯ ಪ್ರಕ್ರಿಯೆಗಳಾಗಿಬಿಡುತ್ತವೆ. ಹೆಚ್ಚು ಸದ್ದು ಮಾಡಿ ತಮ್ಮ ನಗಾರಿ ತಾವೆ ಬಾರಿಸಿಕೊಳ್ಳುವ ಸಂಕೀರ್ಣಗಳ ವಿಜಯದ ಪರಿ ಎಷ್ಟು ಸಂಕೀರ್ಣವಿರುತ್ತದೆಯೆಂದರೆ, ಅದರಲ್ಲಿ ನೈಜವೆಷ್ಟು, ಬರಿ ಅನಿಸಿಕೆಯೆಷ್ಟು ಎಂದು ಬೇರ್ಪಡಿಸಲಾಗದ ರೀತಿಯಲ್ಲಿ ಕಲಸಿ ಹೋಗಿರುತ್ತವೆ. ಜತೆಗೆ ಅಂತಿಮ ಗಮ್ಯ ತಲುಪುವ ಹಾದಿಯ ಸಂಕೀರ್ಣತೆ ಅಲ್ಲಿ ಎದ್ದು ಕಾಣುವುದಿಲ್ಲ. ಗಾಂಧಿಯಂತಹ ವ್ಯಕ್ತಿತ್ವ ಸರಳ ಜೀವನ ಸಾಗಿಸಿದ ನಿದರ್ಶನವೆ ಕಣ್ಣ ಮುಂದಿದ್ದರೂ, ನಾವೆಲ್ಲಾ ಬಯಸುವುದು ಐಷಾರಾಮಿ ಬದುಕನ್ನೆ ಎನ್ನುವುದು ಆ ಆಕರ್ಷಣೆ ಎಷ್ಟು ಬಲವಾತ್ತಾದುದೆನ್ನುವುದಕ್ಕೆ ಉದಾಹರಣೆ. ಒಟ್ಟಾರೆ ಸರಳತೆಯನ್ನು ಸರಳವಾಗಿ ಗ್ರಹಿಸಬಿಡದ ಮನಸ್ಥಿತಿಯೂ ಒಂದು ಬಗೆಯ ಮಾಯೆಯ ಪರಿಯೇನೊ? :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.