ಧೂಮಸ್ನಾನ....!

4

ಸಿಗರೇಟು ಸೇದುವ ಜನ
ಎಡಬಿಡದ ಧೂಮಪಾನ
ಬೇಕಿರಲೀ ಬಿಡಲಿ ಸುತ್ತಣ
ಮಾಡಿಸುತೆ ಧೂಮ ಸ್ನಾನ!

ನಿಜದಲಿವರು ಸಸ್ಯ ರಾಶಿ
ಇಂಗಾಲವ ಕುಡಿವ ಖುಷಿ
ಕೊಡದಿದ್ದರೂ ಆಮ್ಲಜನಕ
ಕೊಡುವರಲ್ಲ ತಳಕಂಬಳಕ!

ಆಗಿದ್ದರೇನು ಯಾವ ರಾಶಿ
ಸೇದಿಕ್ಕುವರು ರಾಶಿ ರಾಶಿ
ಗುಪ್ಪೆ ಗುಪ್ಪೆ ಬೂದಿಯ ರಾಶಿ
ಪೇರಿಸಿಟ್ಟೆ ಹೋಮ ಮಹರ್ಷಿ!

ಬೆಳಗಾಗೆದ್ದು ಮೊದಲೊಂದು
ಕಾಫಿಗಾಚೀಚೆ ಒಂದೊಂದೊಂದು
ಉಗಿಬಂಡಿ ಮಧ್ಯೆ ಊಟಾ ತಿಂಡಿ
ಅರ್ಧ ಗಂಟೆಗೊಂದೊಂದೆ ತಡಿ!

ನೋಡುತಲೆ ಖಾಲಿ ಪ್ಯಾಕೆಟ್ಟು
ಖಯಾಲಿಯವರದೆ ಸಗಟು
ಹಂಚಿ ಕುಡಿವ ಸಮಾಜವಾದ
ಸಿಗರೇಟಿಗಿಲ್ಲ ಯಾವ ಭೇಧ!

ಬೆಳಗಿಂದ ಸಂಜೆ ಉರಿ ನಂಜೆ
ಟೀ ಕಾಫಿ ಜತೆ ಕುಡಿದೆ ಹೆಜ್ಜೆ
ನಿಸರ್ಗಕೂ ಕುಡಿಸಿದ ಪಾನ
ಪುಕ್ಕಟೆಗೆ ಮಾಡಿಸುವ ಸ್ನಾನ!

ಚಂಬೋದರ ಹೇ ಲಂಬೋದರ
ತುಟಿಯಾಗೆಲ್ಲಾ ಏನವತಾರ
ಕಟ್ಟಿಕೊಂಡವಳೆ ಹೆಂಡತಿ ತರ
ಸಿಗರೇಟಿಲ್ಲದೆ ಬಹ ಚಳಿ ಜ್ವರ!

-  ನಾಗೇಶ ಮೈಸೂರು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

೨-ಎರಡು ಧೂಮಪಾನಕವನ ... ಬರೀ ಸಿಗರೇಟು ಘಾಟು ಇಲ್ಲಿ ...!! ಏನೋ ಗೀಚಿರುವೆ "ಕೆಲ ಸಿಗರೇಟು ಬಲು ಚೋಟು ಇನ್ಕೆಲವು ಮೋಟು ಏನಾದ್ರೂ ಬಲು ಘಾಟು ಬಿಡೋದು ಹೊಗೆ ನಮ್ಮೇಲೆ ನಮಗೇನ ಹಗೆ .." !! ಅಂದ್ ಹಾಗೆ ನಾವೂ ಒಮ್ಮೆ ಈ ಬಗ್ಗೆ ಒಂದು ಚರ್ಚೆ ನಡೆಸಿದ್ದೆವು (ಸಂಪದ ಸೇರಿದ ಹೊಸತರಲ್ಲಿ) ಇಲ್ಲಿದೆ ಲಿಂಕ್ ಉ..!! http://sampada.net/a... ನಾಗೇಶ್ ಅವರೇ ಇದ್ದಕ್ಕಿದ್ದಂತೆ ೨ ಎರಡು ಧೂಮ ಕವನ ಬರೆಯಲು ಸ್ಪೂರ್ತಿ ಏನು? ಶುಭವಾಗಲಿ \।/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಯವರೆ ನಮಸ್ಕಾರ, ಒಳ್ಳೆ ಪ್ರಶ್ನೆ - ಯಾಕೆ ಇದ್ದಕ್ಕಿದ್ದಂತೆ ಎರಡು ಕವನ ಅಂತ :-) 'ಧೂಮ ಸಾಹಿತ್ಯ'ಕ್ಕೆ ಪ್ರೇರಣೆ : ಮೊನ್ನೆ ಬೆಳಿಗ್ಗೆ ಮಗನನ್ನು ಸ್ಕೂಲು ತಲುಪಿಸಿ ಆಫೀಸಿನತ್ತ ಹೆಜ್ಜೆ ಹಾಕುತ್ತಿದ್ದೆ, ಎಂದಿನ ದಾರಿಯಲ್ಲಿ. ಅಲ್ಲಿ ನನಗೆ ದಿನಾ ಎದುರಾಗುವ ಒಂದು ದೃಶ್ಯ - ಒಂದು ಚೀಣಿ ಯುವ ಜೋಡಿ, ಬಸ್ ಸ್ಟಾಪಿನ ಸ್ವಲ್ಪ ದೂರದಲ್ಲಿ ಸಿಗರೇಟು ಸೇದುತ್ತಾ ನಿಲ್ಲುವ ದೃಶ್ಯ.  ( ಇಲ್ಲಿ ಸ್ಟಾಪಿನಲ್ಲಿ ಸೇದುವಂತಿಲ್ಲ, ಫೈನ್ ಬೀಳುತ್ತೆ). ಆ ಹುಡುಗ ಹುಡುಗಿ ಇಬ್ಬರೂ ಸುಮಾರು 20-25 ರ ವಯಸಿನವರು. ನಾನು ಅಲ್ಲಿ ತಲಪುವ ಹೊತ್ತಿಗೆ ಸರಿಯಾಗಿ, ಸಿಗರೇಟು ಮುಗಿಸಿ ರಸ್ತೆಯ ಆಷ್ ಟ್ರೇಗೆ ತುಂಡನ್ನು ಹೊಸಕಿ ಕೈ ಕೈ ಹಿಡಿದು ಸ್ಟಾಪಿನತ್ತ ನಡೆಯುತ್ತಾರೆ. ಆ ದಿನವೂ ಹಾಗೆ ನೋಡುತ್ತಾ ಇದ್ದಾಗ ಅವರು ಎಸೆದ ತುಂಡು ಒಳಗೆ ಬೀಳದೆ ಹೊರಗೆ ಬಿದ್ದಿದ್ದು ಕಂಡು, ಕಾಲಿನಲ್ಲಿ ಬದಿಗೆ ತಳ್ಳಿದೆ - ಆಗ ತಟ್ಟನೆ ನೆನಪಾಯ್ತು, ಅರೆ! ನಾನು ಸೇದುವುದು ಬಿಟ್ಟು ಆರು ವರ್ಷಕ್ಕೂ ಮೇಲಾಯ್ತಲ್ಲವೆ - ಎಂದು ತಟ್ಟನೆ ನೆನಪಾಗಿ ಆ ಖದರಲ್ಲೆ ಸಾಲುಗಳು ಉರುಳತೊಡಗಿದಾಗ, ಆಫೀಸು ತಲಪುವಷ್ಟರಲ್ಲಿ ಕವನವಾಗಿತ್ತು. ನಂತರ ರಾಮಕುಮಾರರು ಕೊಟ್ಟ ಬೇರೆ ಕವನದ ಲಿಸ್ಟು ನೋಡಿದಾಗ ತಟ್ಟನೆ 'ಧೂಮಸ್ನಾನ'ಕ್ಕೆ ಸ್ಪೂರ್ತಿಯಾಯ್ತು! ಇದೆ ಜೋಡಿ ಕವನದ ಹಿನ್ನಲೆ :-) - ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.