ದ್ವಂದ್ವ.....

4.333335

ಪಕ್ಕದ ಮನೆ ಕೊಟ್ಟಿಗೆಯಲ್ಲಿ ಯಾಕೋ ಕರುವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿ ತ್ತು . ಏನನ್ನೋ ನೋಡಿ ಅದು ಭಯ ಪಟ್ಟ ಹಾಗಿತ್ತು. ಅಷ್ಟರಲ್ಲಿ ಪಕ್ಕದ್ಮನೆ ಮಾದ ಓಡೋಡಿ ಗೌಡ್ರ ಮನೆಗೆ ಬಂದ. ಗೌಡ್ರೆ ಹುಲಿ ಮತ್ತೆ ಬಂದೈತೆ ಹಟ್ಟಿಗೆ, ಬೇಗ ಕೋವಿ ತಗೊಂಡು ಬನ್ನಿ ಅಂದ. ಗೋಡೆಯಲ್ಲಿ ನೇತು ಹಾಕಿದ್ದ ಕೋವಿ ಎತ್ತಿ ಸರ ಸರನೆ ಮಾದನ ಹಟ್ಟಿಗೆ ಹೊರಟರು ಗೌಡ್ರು. ಹಟ್ಟಿಯೊಳಗೆ ಇಣುಕಿ ನೋಡಿದರೆ ಹುಲಿ ಕರುವಿನ ಕುತ್ತಿಗೆಗೆ ಬಾಯಿ ಹಾಕಿ ಎಳೆಯುತ್ತಾ ಇತ್ತು. ಕರುವನ್ನು ಕಟ್ಟಿ ಹಾಕಿದ್ದರಿಂದ ಅದನ್ನು ಎಳೆದುಕೊಂಡು ಹೋಗೋದು ಹುಲಿಗೆ ಸಾಧ್ಯವಾಗಿರಲಿಲ್ಲ.. ಕೋವಿ ಎತ್ತಿ ಹುಲಿಗೆ ಗುರಿ ಇಟ್ಟರು ಗೌಡ್ರು. ಡಂ ಡಂ ಎಂದು ಸಿಡಿಯಿತು ಗುಂಡು. ಮರುಕ್ಷಣ ಹುಲಿ ಅಲ್ಲಿಂದ ಹಟ್ಟಿ ಗೋಡೆ ಮೇಲೆ ನೆಗೆದು ಓಡಿ ಹೋಯಿತು. ಆದರೆ ಗೌಡ್ರು ಹೊಡೆದ ಒಂದು ಗುಂಡೂ ಕೂಡ ಹುಲಿಗೆ ತಾಗಿರಲಿಲ್ಲ. ಎರಡು ಗುಂಡುಗಳು ಗುರಿ ತಪ್ಪಿ ಗೋಡೆಗೆ ಹೊಡೆದಿದ್ದನ್ನು ಸ್ಪಷ್ಟವಾಗಿ ನೋಡಿದ್ದರು ಗೌಡರು. ಆದರೂ ಹುಲಿ ಓಡಿದ್ದು ಯಾಕೆ ಅಂತ ಗೌಡ್ರು ಯೋಚಿಸುತ್ತ ಇರುವಷ್ಟರಲ್ಲಿ ಗುಂಡಿನ ಸದ್ದು ಕೇಳಿದ ಮಾದ ಹಟ್ಟಿಯೊಳಗೆ ಬಂದ. ಹುಲಿ ಪರಾರಿಯಾಗಿತ್ತು. ಕರುವಿನ ಗಂಟಲಲ್ಲಿ ಹುಲಿಯ ಹಲ್ಲಿನ ಗುರುತು ಬಿಟ್ಟರೆ ಬೇರೆ ಏನು ಜಾಸ್ತಿ ಏಟಾಗಿರಲಿಲ್ಲ. ಕರುವಿನ ಗಂಟಲಿಂದ ಹರಿದ ನೆತ್ತರ ಬಿಂದುಗಳು ಹಟ್ಟಿಯೊಳಗೆ ಅಲ್ಲಲ್ಲಿ ಕಾಣುತ್ತಿತ್ತು. ಅದನ್ನು ನೋಡಿದ ಮಾದ ಅಂತು ಗೌಡ್ರು ಹೊಡೆದ ಗುಂಡುಗಳು ಹುಲಿಗೆ ಸರಿಯಾಗೇ ನಾಟಿವೆ. ಇವತ್ತೋ ನಾಳೆನೋ ಹುಲಿ ಸಾಯೋದು ಗ್ಯಾರಂಟೀ ಅಂತ ಅಕ್ಕ ಪಕ್ಕದ ಮನೆಯವರಿಗೆಲ್ಲ ಹೇಳಿ ಬಿಟ್ಟ. ತಾನು ಹೊಡೆದ ಯಾವ ಗುಂಡೂ ಹುಲಿಗೆ ತಾಗಿಲ್ಲ ಅಂತ ಗೊತ್ತಿದ್ರು ಗೌಡ್ರು ಸುಮ್ನಿದ್ರು. ಬಿಟ್ಟಿ ಪ್ರಚಾರ ಯಾರಿಗೆ ಬೇಡ. ಅಪ್ಪಿ ತಪ್ಪಿ ಮುಂದೆ ಯಾವತ್ತಾದ್ರು ದಾಳಿ ಮಾಡಿದರೆ ಅಮೇಲೆ ನೋಡಿಕೊಳ್ಳೋಣ ಅಂತ ಸುಮ್ನಿದ್ರು ಗೌಡ್ರು. ಮಾರನೇ ದಿನ ಬೆಳಗಾಗೋದ್ರೊಳಗೆ ಗೌಡ್ರು ಹುಲಿ ಕೊಂದ ಸುದ್ದಿ ಊರಿಡೀ ಹರಡಿತು, ಗೌಡ್ರ ಶೌರ್ಯದ ಕತೆ ಊರ ಜನರ ಬಾಯಲ್ಲೆಲ್ಲ. ಗೌಡರಿಗೆ ಮಾತ್ರ ಗುಂಡು ತಗಲದೇ ಹುಲಿ ಓಡಿದ್ಯಾಕೆ ಅನ್ನೋದು ಮಾತ್ರ ಅರ್ಥ ಆಗ್ಲೇ ಇಲ್ಲ.. ಇಷ್ಟಕ್ಕೂ ಗೌಡ್ರು ಅಬ್ಬಬ್ಬಾ ಅಂದ್ರೆ ಒಂದೆರಡು ಸಲ ಕೋವಿ ಚಲಾಯಿಸಿರಬಹುದೇನೋ. ಅವರಿಗದು ದೊರಕಿದ್ದು ಕೂಡ ಆಕಸ್ಮಿಕ. ನಕ್ಸಲ್ ನಿಗ್ರಹ ಪಡೆಯವರು ನಕ್ಸಲ್ ಗುಂಪೊಂದರ ಅಡಗುದಾಣದ ಮೇಲೆ ನಡೆಸಿದ ದಾಳಿಯಲ್ಲಿ ಪೊಲೀಸರಿಗೆ ದೊರಕಿದ್ದ ಕೋವಿ ಅದು. ಸರಕಾರಕ್ಕೆ ಲೆಕ್ಕ ಕೊಡದೆ ಪೋಲಿಸ್ ಪಡೆಯಲ್ಲಿದ್ದ ಸಂಬಂದಿಯೊಬ್ಬ ಅದನ್ನು ಇವರಿಗೆ ಕೊಟ್ಟಿದ್ದ. ಇವರೋ ನಮ್ಮ ತಾತ ಈ ಬಂದೂಕಿಂದ ಅದೆಷ್ಟೋ ಹುಲಿ ಜಿಂಕೆಗಳನ್ನು ಬೇಟೆ ಆಡಿದ್ದರು ಆ ಕಾಲದಲ್ಲಿ ಅಂತ ಬಿಲ್ಡ್ ಅಪ್ ತಗೊಂಡಿದ್ರು. ವಾಸ್ತವದಲ್ಲಿ ಅಟ್ಟಿಸಿಕೊಂಡು ಬಂದರೆ ಒಂದು ನಾಯನ್ನು ಓಡಿಸೋವಷ್ಟು ಎದೆಗಾರಿಕೆ ಇಲ್ದೇ ಇದ್ರೂ ಗೌಡ್ರು ಮುಂಚೆ ಬೇಟೆಗೆ ಹೋಗ್ತಾ ಇದ್ರಂತೆ, ಅದೆಷ್ಟೋ ಹುಲಿ ಚಿರತೆಗಳನ್ನು ಕೊಂದಿದ್ದರಂತೆ ಅಂತ ಗ್ರಾಮಸ್ತರ ಬಾಯಲ್ಲಿ ಫೇಮಸ್ ಆಗಿದ್ದರು. <!--break-->
ಮಾರನೇ ದಿನ ಅದೆಷ್ಟೋ ಜಾನುವಾರುಗಳನ್ನು ಬಲಿ ಪಡೆದು ಅಮಾಯಕ ಗ್ರಾಮಸ್ತರ ನಿದ್ದೆ ಹಾಳು ಮಾಡಿದ ಆ ವ್ಯಾಘ್ರ ವ ಕೊಂದ ಗೌಡರಿಗೆ ಸನ್ಮಾನ ಮಾಡಬೇಕು ಅಂತ ಊರ ಯುವಕ ಸಂಘದಲ್ಲಿ ನಿರ್ದಾರವಾಯ್ತು. ಪಂಚಾಯ್ತಿ ಕಡೆಯಿಂದ ನಡೆಯೋ ಗ್ರಾಮಸಭೆಗೂ ಮುಂಚೆ ಸನ್ಮಾನ ಸಮಾರಂಭವನ್ನು ಊರ ಶಾಲೆಯಲ್ಲಿ ಇಟ್ಟುಕೊಂಡಿದ್ದಾರೆ ಹಾಗು ನೀವು ಬರಬೇಕು ಅಂತ ಗೌಡರಿಗೆ ಸಂದೇಶವು ಬಂತು. ಗೌಡರಿಗಂತು ಖುಶಿಯೋ ಖುಷಿ. ಮುಂದಿನ ಬಾರಿ ಚುನಾವಣೆಗೆ ಸ್ಪರ್ದಿಸಬೇಕು ಅಂದುಕೊಂಡಿದ್ದ ಅವರಿಗೆ ಇದೊಂದು ಸುವರ್ಣಾವಕಾಶವಾಗಿ ಕಂಡು ಕೂಡಲೇ ಒಪ್ಪಿ ಬಿಟ್ಟರು. <!--break-->
ಆದರೆ ಸಂಜೆಯ ವೇಳೆಗೆ ಮಾದ ತಂದ ಸುದ್ದಿ ಗೌಡ್ರ ನೆಮ್ಮದಿಯನ್ನೇ ಹಾಳು ಮಾಡಿತ್ತು. ಘಾಟಿಯ ಬಳಿಯಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ನಿಂದ ಕೊಂಚ ದೂರದಲ್ಲಿ ಹುಲಿಯೊಂದು ಸತ್ತಿದೆ. ಅದರ ಮೈಮೇಲೆ ಗುಂಡಿನ ಏಟುಗಳಿವೆ. ಅದು ನೀವು ಗುಂಡು ಹೊಡೆದ ಹುಲಿನೇ, ಸಂಶಯವೇ ಇಲ್ಲ. ನಾನು ಈಗ ತಾನೇ ನೋಡಿ ಬಂದೆ ಅಂದಿದ್ದ ಮಾದ. ಈಗ ಗೌಡ್ರ ಮನಸ್ಸು ಗೊಂದಲದ ಗೂಡಾಗಿತ್ತು. ನನ್ನ ಕೋವಿಯ ಗುಂಡು ಹುಲಿಗೆ ತಾಗೆ ಇಲ್ಲ ಇನ್ನು ಸಾಯೊದು ಹೇಗೆ? ಬಹುಶ ಆ ಹುಲಿನೇ ಬೇರೆ ಈ ಹುಲಿನೇ ಬೇರೆ. ಆದರೂ ಗುಂಡೇ ತಾಗದೆ ಹುಲಿ ಹಟ್ಟಿಯಿಂದ ಓಡಿದ್ದಾದರು ಯಾಕೆ? ಇಲ್ಲಿ ಬರೋ ಮುಂಚೆನೇ ಏನಾದರು ಅದಕ್ಕೆ ಗುಂಡು ತಗುಲಿತ್ತೋ ಏನೋ . ಪ್ರಾಯಶ ಅದಕ್ಕೆ ಇರಬಹುದು ಅದಕ್ಕೆ ಕರುವನ್ನು ಎಳೆದು ಕೊಂಡು ಹೋಗೋಕ್ಕೆ ಸಾಧ್ಯವಾಗಿಲ್ಲ. ಅದಕ್ಕೆಮತ್ತೆ ನಾನು ಗುಂಡು ಹಾರಿಸಿದಾಗ ಗುಂಡಿನ ಶಬ್ದ ಕೇಳಿ ಭಯಪಟ್ಟು ಓಡಿರಬಹುದು. ಈಗ ಅರಣ್ಯ ಇಲಾಖೆಯ ಅಧಿಕಾರಿಗಳೇನಾದ್ರು ಹುಲಿಯ ಸಾವಿನ ತನಿಖೆ ಆರಂಬಿಸಿದರೆ ನನಗೆ ಆಪತ್ತು. ನಮ್ಮ ಗೌಡರೇ ಹುಲೀನ ಕೊಂದಿದ್ದು ಅಂತ ಹೆಮ್ಮೆಯಿಂದ ಗ್ರಾಮಸ್ತರು ಹೇಳಿಕೊಳ್ಳುತ್ತಾರೆ. ಕಾನೂನಿನಲ್ಲಿ ನರಬಕ್ಷಕ ಹುಲಿಯನ್ನು ಕೊಲ್ಲಬಹುದು ಅದೂ ಕೂಡ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಾತ್ರ. ಆದರೆ ನಮ್ಮ ಊರಿನಲ್ಲಿ ಕಾಣಿಸಿಕೊಂಡ ಹುಲಿ ಅಪ್ಪಿ ತಪ್ಪಿಯೂ ಗ್ರಾಮಸ್ತರ ಮೇಲೆ ಹಲ್ಲೆ ಮಾಡಿರಲಿಲ್ಲ. ಅದಕ್ಕೆಗ್ರಾಮಸ್ತರು ಪದೇ ಪದೇ ಹುಲಿಯ ಕಾಟದ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಅಪ್ಪಿ ತಪ್ಪಿ ಅರಣ್ಯಾಧಿಕಾರಿಗಳ ಕೈಗೆನಾದ್ರು ನನ್ನ ಹೆಸರು ಸಿಕ್ಕಿಹಾಕಿಕೊಂಡರೆ ಆ ದೇವರೇ ಗತಿ. ವರ್ಷಗಟ್ಟಲೆ ಕೋರ್ಟು ಕಚೇರಿ ಸಹವಾಸ ಖಚಿತ. ಅದೂ ಕೂಡ ನಾನು ಮಾಡದೇ ಇರೋ ತಪ್ಪಿಗೋಸ್ಕರ. ಹಾಗಂತ ನಾನು ಹುಲೀನ ಹೊಡೆದಿಲ್ಲ, ನಾನು ಹೊಡೆದ ಗುಂಡು ಹುಲಿಗೆ ತಾಕಿಲ್ಲ ಅಂದ್ರೆ ಗ್ರಾಮಸ್ತರು ನನ್ನನ್ನು ಕೀಳಾಗಿ ಕಾಣಬಹುದು. ಇವನೊಬ್ಬ ಹೇಡಿ ಸುಳ್ಳುಗಾರ ಅಂತಾನು ಅಂದುಕೊಳ್ಳಬಹುದು. ಇಷ್ಟು ವರ್ಷ ಕಾಯ್ದುಕೊಂಡ ಮಾನ ಮರ್ಯಾದೆ ಎಲ್ಲ ಹೋಗುತ್ತೆ. ಚುನಾವಣೆಯಲ್ಲಿ ಇವರ ಓಟು ಪಡೆದು ಗೆಲ್ಲೋದು ಕನಸಿನ ಮಾತೇ ಸರಿ. ಗೌರವ, ಸನ್ಮಾನ ರಾಜಕೀಯ ಅವಕಾಶ ಒಂದು ಕಡೆ, ಕೋರ್ಟು ಕಚೇರಿ ಇನ್ನೊಂದೆಡೆ. ತಕ್ಕಡಿಯಲ್ಲಿ ತೂಗೋದು ಕಷ್ಟವಾಯ್ತು ಗೌಡರಿಗೆ. ಅದಕ್ಕೆ ಮನೆಯ ಜಗಲಿಯಲ್ಲಿ ಶತ ಪಥ ತಿರುಗಾಡ್ತಾ ಇದ್ದರು. ಅಪ್ಪಿ ತಪ್ಪಿ ಏನಾದ್ರು ಕೋರ್ಟು ಕಚೇರಿ ಅಂತ ಬಂದ್ರೆ ಇನ್ನು ಒಳ್ಳೇದೆ ಆಯ್ತು ಸಹಾನುಭೂತಿ ಜಾಸ್ತಿ ಆಗಿ ಇನ್ನು ಒಂದಷ್ಟು ಓಟು ಗಳು ಜಾಸ್ತಿನೇ ಬೀಳ್ತಾವೆ ಅಂದುಕೊಂಡ ಗೌಡ್ರ ಮುಖದಲ್ಲಿ ಮುಗುಳ್ನಗೆ ಬಂತು. ಹಾಗೆ ಜಗಲಿಯಿಂದ ಒಳನಡೆದ ಗೌಡರು ಹಾಸಿಗೆಗೊರಗಿದರು. ಯೋಚನೆ ಮಾಡಿ ಸುಸ್ತಾಗಿದ್ದ ಗೌಡ್ರನ್ನು ನಿದ್ರಾದೇವಿ ಆವರಿಸಿಕೊಂಡಳು. ಗೌಡರ ಕನಸಲ್ಲಿ ಹುಲಿಯೊಂದು ಬಂದು ಗಹ ಗಹಿಸಿ ನಕ್ಕಂತಾಯ್ತು, ಅದರ ಮೂತಿ ಮಾತ್ರ ಮಾದನ ಹಟ್ಟಿಯಲ್ಲಿ ಕಂಡಿದ್ದ ಹುಲಿಯನ್ನೇ ಹೋಲುತ್ತಿತ್ತು !!!!!!!!!!!!!!!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

:) ಗೌಡರ ತುಮುಲ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.