ದಿವಂಗತ ಡಾ|| ಕೆ. ಪುಟ್ಟಸ್ವಾಮಯ್ಯನವರಿಗೆ ವೃತ್ತಗೀತ ನಮನ

5

ದಿವಂಗತ ಡಾ|| ಕೆ. ಪುಟ್ಟಸ್ವಾಮಯ್ಯನವರಿಗೆ ವೃತ್ತಗೀತ ನಮನ

ಕರವಂ ಜೋಡಿಸಿ ಬೇಡಿಕೊಂಡು ಗಣಪಂ ನೀಡಲ್ಕೆ ನಿರ್ವಿಘ್ನವಂ |
ಕರೆಯಂ ಮನ್ನಿಸಿ ಬಂದು ಸೇರಿದವರಂ ಗಣ್ಯಾತಿಗಣ್ಯರ್ಗಳಂ |
ಶಿರವಂ ಬಾಗಿಸಿ ವೇಂಕಟಾಚಲರನುಂ ಶ್ರೀ ಎಲ್ಟಿಹೆಗ್ಡೇರನುಂ |
ಹಿರಿಯಾಚಾರ್ಯರಿಗೊಂದಿಪೆಂ ಹರಸಲೆಂದೆಲ್ಲರ್ಗೆ ಸುಸ್ವಾಗತಂ ||1||

ಕರಿಶೈಲಪ್ಪರು ತಂದೆ ಮಾತೆಯಹ ಕೋನಮ್ಮಂಗೆ ಪುತ್ರಾಶಯಂ |
ದೊರೆತಂತಿರ್ದರು ಬಾಲ್ಯದೊಳ್ಅಗಲುತಂತಾನಾಥರಾಗಿರ್ದರೂ |
ಸಿರಿಯೆಂದಾರಿಸಿಕೊಂಡು ವಿದ್ಯೆ ಪಡೆವೊಲ್ಸಾಧ್ಯಂಗಳಂ ತೋರುತಂ |
ದೊರೆಯಂತಾದುದು ಸತ್ಯ ತನ್ಮಯತೆಯೊಳ್ ತಾಪಸ್ಯದಿಂ ಸಿದ್ಧಿಯೊಲ್ ||2||

ಪದದಿಂ ವರ್ಣಿಸಲಾಗದಂತವರು ಪುಟ್ಸ್ವಾಮಯ್ಯ ಸತ್ಕಾರ್ಯದೊಳ್ |
ಹದವೇನೆಂಬುದ ಬಲ್ಲ ಶಾಸ್ತ್ರಚತುರರ್ ಕೌಶಲ್ಯಸುಪ್ರೇರಕರ್ |
ಚದುರರ್ ದೂರದ ದೃಷ್ಟಿಯಿಂ ಬೆಳೆಸುತಾರೈದಿರ್ಪ ಕಾರ್ಖಾನೆಗಳ್ |
ಬದಲಾದಂತಹ ಕಾಲ ದೇಶಕನುವಾಗಿತ್ತಂತ ಸಾಕ್ಷಿಂಗಳೊಳ್ ||3||

ಮಲೆನಾಡಂ ತಿಳಿದಂದು ಕೊಟ್ಟ ಕಿರುನೀರ್ ಅಂದಾದ ಕಾಲ್ಸಂಕವಂ |
ಛಲದೊಳ್ ನಿರ್ಮಿಸಿಕೊಟ್ಟು ಕೌಶಲದೊಳುಂ ಶ್ರೀಗಂಧಸಂಕೀರ್ಣವಂ |
ನೆಲೆ ನೂರಾರು ಕುಟುಂಬ ಜೀವನಕದಂ ಬಾಳಲ್ಕೆ ವಿಶ್ವಾಸದಿಂ |
ಬಲವಾದಂತಹ ಕಾರಣಂ ಮನದೊಳಂ ಲಕ್ಷ್ಮೀನೃಸಿಂಹಾರ್ಪಣಂ ||4||
( - ಮತ್ತೇಭವಿಕ್ರೀಡಿತ ವೃತ್ತ )

ಶ್ರೀಯಾತ್ಮಾನ್ವಿತರಾಗಿ ನಮ್ಮನಗಲೀ ಹೊತ್ತೆಮ್ಮೊಳೆಲ್ಲಾರನುಂ |
ಕಾರ್ಯಾಕಾರ್ಯಗಳೆಂಬ ಬೋಧಪಥದೊಳ್ ಜೀವಂತ ಸಂದೇಶದಿಂ |
ದಾಯಾ ಕಾಲದೊಳಾದ ದಾಖಲೆಗಳಿಂದೆಪ್ಪತ್ತು ಗ್ರಂಥಂಗಳಿಂ |
ದಾಯೋಗಂಗಳ ಸೂತ್ರಧಾರಿಯೆನಿಸಿರ್ದಂದಿತ್ತ ಸತ್ಕಾರ್ಯದಿಂ ||5||

ಭಾಷಾಶಾಸ್ತ್ರದ ಕಲ್ಕೆಯಿಂ ಪದವಿಯಿಂ ಮೇಲೇರಿದಷ್ಟೆತ್ತರಂ |
ಭೇಷೆಂದಿತ್ತಿರುವಂತ ಗೆದ್ದ ಪದಕಂ ಚಾಣಕ್ಯಶಾಸ್ತ್ರತ್ವದಿಂ |
ಶಾಸ್ತ್ರಾಶಾಸ್ತ್ರದೊಳರ್ಥಶಾಸ್ತ್ರ ವಿಷಯಂ ವಿದ್ಯಾಗ್ರಗಣ್ಯತ್ವದಿಂ |
ವಿಶ್ವಾದ್ಯಂತ ವಿಚಾರ ಯೋಜನೆಗಳಂ ರೂಪಿತ್ತ ದಕ್ಷತ್ವದಿಂ ||6||

ಮುಂದಾಗಿರ್ಪವರಾಗಿ ತೋರಿ ಗುರಿಯಂ ಬೆಂಗಾಯ್ವಡೇ ಸದ್ಗುರುಂ |
ಎಂದೆಂದೂ ಬೆಳಕಾಗಿ ಮುಂದೆ ನಡೆಸಲ್ ಚೈತನ್ಯವಂ ಕೋರುತಂ |
ಇಂದೀಗಿತ್ತಿಹ ಗೌರವಾರ್ಥ ಸಭೆಯಿಂದೀಗ್ರಂಥಲೋಕಾರ್ಪಣಂ |
ನೊಂದಾತ್ಮೀಯರ ಭಾವದಾಳ ಮಿಡಿತಂ ದುಃಖಾರ್ತರೀ ವಂದನಂ ||7||
( - ಶಾರ್ದೂಲವಿಕ್ರೀಡಿತ ವೃತ್ತ )

- ಸದಾನಂದ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.