ದಲಿತತ್ವದಿಂದ ಉನ್ನತಿಯೆಡೆಗೆ! - 4

5

     2014ರ ವರದಿಯೊಂದರ ಪ್ರಕಾರ ಸುಮಾರು ಶೇ.44.8ರಷ್ಟು ಪ.ಪಂ. ಮತ್ತು ಶೇ.33.8ರಷ್ಟು ಪ.ಜಾ.ಗಳವರು ಬಡತನದ ರೇಖೆಗಿಂತ ಕೆಳಗಿರುವವರಾಗಿದ್ದರು. ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸದ ಮಕ್ಕಳ ಪೈಕಿ ಶೇ.48ರಷ್ಟು ಮಕ್ಕಳು ದಲಿತವರ್ಗದವರು. ಬಿಸಿಯೂಟ ತಯಾರಿಸುವವರು ದಲಿತರಾಗಿದ್ದರೆ ದಲಿತರಲ್ಲದ ಮಕ್ಕಳು ಪೋಷಕರ ಸೂಚನೆಯಂತೆ ಊಟವನ್ನು ಸ್ವೀಕರಿಸಲು ನಿರಾಕರಿಸಿದ ಪ್ರಸಂಗಗಳೂ ಇವೆ. ದಲಿತರು ಮತ್ತು ದಲಿತೇತರರ ನಡುವಣ ಸಂಘರ್ಷಗಳು ನಡೆಯುತ್ತಿರುತ್ತವೆ. ಇದಕ್ಕೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ, ಜಮೀನು ವ್ಯಾಜ್ಯ, ಇತ್ಯಾದಿಗಳು ಕಾರಣವಾಗಿದ್ದು ಕೆಲವರ ಚಿತಾವಣೆಯಿಂದ ಎರಡೂ ಸಮುದಾಯಗಳಲ್ಲಿ ದ್ವೇಷ ಹೆಚ್ಚುವ ಪ್ರಸಂಗಗಳಿಗೆ ಕೊರತೆಯಿಲ್ಲ. ಪ.ಜಾ., ಪ.ಪಂ.ಗಳ ದೌರ್ಜನ್ಯ ತಡೆ ಕಾಯದೆಯ ದುರ್ಬಳಕೆಗಳ ಪ್ರಸಂಗಗಳೂ ವೈಷಮ್ಯ ಹೆಚ್ಚಳಕ್ಕೆ ಕಾರಣವಾದದ್ದೂ ಇದೆ. ಈ ಕಾಯದೆಯನ್ನು ಅರ್ಹ ಪ್ರಕರಣಗಳಲ್ಲೂ ಸಮರ್ಪಕವಾಗಿ ಬಳಸದಿರುವುದೂ ಸಹ ಇದೆ. ದಲಿತರಿಗೆ ಬಹಿಷ್ಕಾರ ವಿಧಿಸಿದ ಪ್ರಸಂಗಗಳೂ ಕಾಣಸಿಗುತ್ತಿರುತ್ತವೆ. ನಗರ ಪ್ರದೇಶಗಳಲ್ಲಿ ಅಷ್ಟಾಗಿ ಕಾಣಬರದಿದ್ದರೂ ಗ್ರಾಮೀಣ ಭಾಗಗಳಲ್ಲಿ ಜಾತಿಯ ಕಾರಣದಿಂದ ಭೇದಭಾವ ಮಾಡುತ್ತಿರುವುದು ಕಂಡುಬರುತ್ತದೆ. ಹೋಟೆಲ್ಲುಗಳು, ಶಾಲೆಗಳು, ದೇವಸ್ಥಾನಗಳು, ಸಾಂಪ್ರದಾಯಿಕ ಆಚರಣೆಗಳು, ಸಾರ್ವಜನಿಕ ನೀರಿನ ಮೂಲಗಳು, ಇತ್ಯಾದಿಗಳು ಜಾತಿ ಕಾರಣದಿಂದ ದಲಿತರಿಗೆ ಪ್ರವೇಶಕ್ಕೆ ಕಿರಿಕಿರಿ ಉಂಟುಮಾಡುವ ತಾಣಗಳಾಗಿವೆಯೆನ್ನಬಹುದು. ಅಂತರ್ಜಾತೀಯ ಪ್ರೇಮ ಪ್ರಕರಣಗಳೂ ದಲಿತರ ಮತ್ತು ಇತರರ ನಡುವಣ ಸಂಘರ್ಷಗಳಿಗೆ ಕಾರಣವಾಗಿವೆ. ಕೆಲವು ದಶಕಗಳ ಹಿಂದೆ ಇದ್ದ ಅಸ್ಪೃಷ್ಯತೆಯ ಆಚರಣೆಯ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದ್ದರೂ ಪೂರ್ಣ ನಿಂತಿಲ್ಲದಿರುವ ಉದಾಹರಣೆಗಳು ಕಾಣಸಿಗುತ್ತವೆ. ಆದರೂ ಅಸ್ಪೃಷ್ಯತೆ ಆಚರಣೆ ವಿರುದ್ಧದ ಜಾಗೃತಿ ಮೂಡುತ್ತಿರುವುದಂತೂ ಒಳ್ಳೆಯ ಬೆಳವಣಿಗೆಯೆನ್ನಬಹುದು.

     ಅನೇಕ ರೀತಿಯ ವೈವಿಧ್ಯಗಳಿಂದ, ವ್ಶೆರುದ್ಧ್ಯಗಳಿಂದ ಕೂಡಿದ ಹಿಂದೂ ಧರ್ಮದ ವಿಶಿಷ್ಟತೆಯಿಂದಾಗಿ ದಲಿತರ ತಾವು ಹಿಂದೂಗಳೋ, ಹಿಂದೂಯೇತರರೋ ಎಂಬ ಚರ್ಚೆ ಮುಂದುವರೆದೇ ಇದೆ. ಹಿಂದೂಗಳಲ್ಲಿ ದೇವರನ್ನು ನಂಬುವವರು, ನಂಬದವರು, ವಿವಿಧ ರೀತಿಯ ಆಚರಣೆಗಳು, ಸಂಪ್ರದಾಯಗಳನ್ನು ಆಚರಿಸುವವರು, ತಮ್ಮ ಆಚರಣೆ, ಸಂಪ್ರದಾಯಗಳೇ ಶ್ರೇಷ್ಠವೆನ್ನುವವರು, ಎಲ್ಲರೂ ಸಮಾನರು, ಎಲ್ಲರೂ ಒಂದೇ ತಾಯಿಯ ಮಕ್ಕಳು ಎನ್ನುವವರು, ಸಂಪ್ರದಾಯಗಳನ್ನು ಧಿಕ್ಕರಿಸುವವರು, ಹೀಗೆ ವಿವಿಧ ಮನೋಭಾವದವರೆಲ್ಲರೂ ಕಾಣಸಿಗುವುದು ವಿಶೇಷವಾಗಿದೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿರುವ ದಲಿತರಲ್ಲಿಯೇ 900ಕ್ಕೂ ಹೆಚ್ಚು ಉಪಜಾತಿಗಳಿದ್ದು ಭಿನ್ನ ಆಚರಣೆಗಳನ್ನು ಹೊಂದಿವೆ. ಪರಸ್ಪರರಲ್ಲಿ ವೈಮನಸ್ಯಗಳು ಸಹ ಕಾಣಬರುತ್ತವೆ. ಸಿಕ್ಖರಾಗಿ ಪರಿವರ್ತಿತ ಹೆಚ್ಚಿನ ದಲಿತರು ತಾವು ಇತರ ದಲಿತರಿಗಿಂತ ಮೇಲೆಂದು ಭಾವಿಸುವುದಲ್ಲದೆ ಪರಸ್ಪರರಲ್ಲಿ ವಿವಾಹ ಸಂಬಂಧ ಬೆಳೆಸಲು ಇಚ್ಛಿಸುವುದಿಲ್ಲ. ಒಬ್ಬ ಹಿರಿಯ ನಾಯಕರು ದಲಿತರನ್ನು ಜಾತಿಪದ್ಧತಿ ವಿರುದ್ಧ ಒಗ್ಗೂಡಿಸುವುದಕ್ಕಿಂತ ಜಾತಿ ಆಧಾರದಲ್ಲಿ ಸಂಘಟಿಸುವುದು ಸುಲಭವೆಂದು ಹೇಳಿದುದರಲ್ಲಿ ಸತ್ಯಾಂಶವಿದೆ.

     ಸಿಕ್ಖರು ಜಾತಿಪದ್ಧತಿಯನ್ನು ಒಪ್ಪುವುದಿಲ್ಲವಾದರೂ ಸಾಮಾನ್ಯವಾಗಿ ಜಾತಿ ಮೀರಿ ವಿವಾಹ ಸಂಬಂಧಗಳನ್ನು ಮಾಡುವುದಿಲ್ಲ. ಸಿಕ್ಖರಾಗಿರುವ ದಲಿತರನ್ನು ಸಿಕ್ಖರಲ್ಲಿನ ಒಂದು ವರ್ಗವೆಂದು ಗುರುತಿಸಲಾಗುತ್ತಿದೆ. ಬಹುಜನ ಸಮಾಜ ಪಕ್ಷದ ಸ್ಥಾಪಕ ಶ್ರೀ ಕಾನ್ಶೀರಾಮರು ಸಿಖ್ ಮೂಲದವರಾಗಿದ್ದರೂ ಬೌದ್ಧದರ್ಮವನ್ನು ಸ್ವೀಕರಿಸಿರದಿದ್ದರೂ ಅದನ್ನು ಪಾಲಿಸುತ್ತಿದ್ದರು. 70 ವರ್ಷಗಳ ಹಿಂದೆ ಸ್ಥಾಪಿತವಾದ ದೇರಾ ಸಚ್ ಖಂಡ್‌ನ ಈಗಿನ ಮುಖ್ಯಸ್ಥ ಸಂತ ನಿರಂಜನ ದಾಸರಾಗಿದ್ದು ಈ ಸಂಸ್ಥೆಗೆ ದಲಿತಸಿಕ್ಖರು ಲಕ್ಷಾಂತರ ಸಂಖ್ಯೆಯಲ್ಲಿ ಅನುಯಾಯಿಗಳಾಗಿದ್ದಾರೆ. ದಲಿತ ಸಿಕ್ಖರು ಮತ್ತು ದಲಿತೇತರ ಸಿಕ್ಖರಲ್ಲಿಯೂ ಸಹ ಕೆಲವೆಡೆ ಸಂಘರ್ಷಗಳಾದ ಉದಾಹರಣೆಗಳಿವೆ. ದೇರಾ ಸಚ್ ಖಂಡ್ ನಾಯಕ ರಮಾನಂದ ದಾಸರ  ಕೊಲೆ (24.5.2009) ಇಂತಹ ಸಂಘರ್ಷದ ಪರಿಣಾಮವಾಗಿತ್ತು.

     ಕ್ರಿಶ್ಚಿಯನರಲ್ಲೂ ಸಹ ಜಾತಿ ಪದ್ಧತಿ ದಕ್ಷಿಣ ಭಾರತದಲ್ಲಿ ಜಾರಿಯಲ್ಲಿದೆ. ದಲಿತ ಕ್ರಿಶ್ಚಿಯನರಿಗೆ ತಾರತಮ್ಯ ನೀತಿಯ ಬಿಸಿ ತಟ್ಟದೇ ಇಲ್ಲ. 1992ರಲ್ಲಿನ ಒಂದು ಅಧ್ಯಯನದಲ್ಲಿ ತಮಿಳುನಾಡಿನಲ್ಲಿ ಅವರಿಗೆ ಪ್ರತ್ಯೇಕ ಚರ್ಚುಗಳು, ಪ್ರತ್ಯೇಕ ಸ್ಮಶಾನಗಳಿದ್ದು ಅವರು ಪ್ರತ್ಯೇಕವಾಗಿ ಆಚರಣೆಗಳನ್ನು ಆಚರಿಸಬೇಕಾಗಿದ್ದ ಬಗ್ಗೆ ಹೇಳಲಾಗಿದೆ. ಆಕರ್ಷಣೆ ಮತ್ತು ಸವಲತ್ತುಗಳ ಆಮಿಷ ಒಡ್ಡಿ ದಲಿತರ ಬಡತನ ಮತ್ತು ಶಿಕ್ಷಣದ ಕೊರತೆಯನ್ನು ಬಂಡವಾಳ ಮಾಡಿಕೊಂಡು ಕ್ರಿಶ್ಚಿಯನರಾಗಿ ಮತಾಂತರ ಮಾಡಲಾಗುತ್ತಿದೆಯೆಂಬ ಆರೋಪವೂ ಕೇಳಿಬರುತ್ತಿದೆ.

     ಓಟ್ ಬ್ಯಾಂಕ್ ರಾಜಕಾರಣಗಳಿಗೆ ದಲಿತರು ದಾಳವಾಗಿ ಬಳಸಲ್ಪಡುತ್ತಿದ್ದಾರೆ ಎಂಬುದು ಬಹಳವಾಗಿ ಕೇಳಿಬರುವ ಮಾತು. ವಿಶೇಷವಾಗಿ ಕಾಂಗ್ರೆಸ್ ಕುರಿತು ಈ ಮಾತು ಕೇಳಿಬರುತ್ತಿದ್ದು, ಇದೀಗ ಭಾ.ಜ.ಪ. ಸಹ ಹಿಂದೆ ಬಿದ್ದಿಲ್ಲ. 2014ರ ಸಮೀಕ್ಷೆಯಂತೆ ಶೇ. 24ರಷ್ಟು ದಲಿತರು ಭಾಜಪವನ್ನು ಬೆಂಬಲಿಸಿದ್ದರು (2009ರಲ್ಲಿ ಈ ಪ್ರಮಾಣ ಶೇ.12ರಷ್ಟಿತ್ತು) ಮತ್ತು ಕಾಂಗ್ರೆಸ್ ಪಕ್ಷ ಹಿಂದೆ ಬಿದ್ದು ಶೇ. 19ರಷ್ಟು ಬೆಂಬಲ ಗಳಿಸಿತ್ತು. ಬಹುಜನಸಮಾಜ ಪಕ್ಷ ಶೇ. 14ರಷ್ಟು ಬೆಂಬಲ ಗಳಿಸಿದ್ದರೆ, ಪಂಜಾಬಿನಲ್ಲಿ ಶೇ. 21ರಷ್ಟು ಮತ್ತು ದೆಹಲಿಯಲ್ಲಿ ಶೇ.40ಕ್ಕೂ ಹೆಚ್ಚು ದಲಿತರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿದ್ದರು. ದಲಿತ ಮತದಾರರನ್ನು ಯಾವ ಪಕ್ಷವೂ ಕಡೆಗಣಿಸುವಂತಿಲ್ಲವೆಂದು ಈ ಸಮೀಕ್ಷೆ ತೋರಿಸಿದೆ.

     ವಚನ ಸಾಹಿತ್ಯದ ಪಿತಾಮಹನೆಂದು ಕೆಲವು ವಿದ್ವಾಂಸರು ಪರಿಗಣಿಸಿರುವ ಮಾದರ ಚನ್ನಯ್ಯ ಮೊದಲ ದಲಿತ ಸಾಹಿತಿಗಳಲ್ಲಿ ಒಬ್ಬರಾಗಿದ್ದು, 11ನೆಯ ಶತಮಾನದ ಚಾಲುಕ್ಯರ ಆಡಳಿತ ಕಾಲದಲ್ಲಿದ್ದವರು. ಡೋಹರ ಕಕ್ಕಯ್ಯನ ರಚನೆಗಳೂ ಗಮನ ಸೆಳೆಯುತ್ತವೆ. 1984ರಲ್ಲಿ ಬಾಬು ಜಗಜೀವನರಾಮರು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದರು. ಮಹಾತ್ಮ ಫುಲೆ ಮತ್ತು ಬಾಬಾಸಾಹೇಬ ಅಂಬೇಡ್ಕರರ ದಲಿತರ ಸ್ಥಾನಮಾನಗಳು, ಸಮಸ್ಯೆಗಳು, ಪರಿಹಾರಗಳ ಕುರಿತ ಅನೇಕ ಬರಹಗಳು, ಗ್ರಂಥಗಳು ಅನೇಕ ಭಾಷೆಗಳಲ್ಲಿ ಅನುವಾದಿತಗೊಂಡು ಮಹತ್ವ ಪಡೆದಿವೆ. ಇವರುಗಳಿಂದ ಪ್ರೇರಣೆಗೊಂಡ ಅನೇಕ ಸಾಹಿತಿಗಳು ದಲಿತ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ.

(ಮುಂದುವರೆಯುವುದು)

-ಕ.ವೆಂ.ನಾಗರಾಜ್.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):