ದಲಿತತ್ವದಿಂದ ಉನ್ನತಿಯೆಡೆಗೆ! - 3

4.857145

     ಸಂತ ಧ್ಯಾನೇಶ್ವರ, ಏಕನಾಥ ಮೊದಲಾದವರು ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ್ದರಿಂದ ಅವರು ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು. ಭಕ್ತಿಪಂಥದ ಕಾಲದಲ್ಲಿ ಮೇಲುಜಾತಿಯ ಅನೇಕ ಸಂತರುಗಳು ಸಾಮಾಜಿಕ ನ್ಯಾಯದ ಪರವಾಗಿದ್ದರು. ಕಿರುಕುಳಕ್ಕೆ ಒಳಗಾದ ಕನಕದಾಸರು ಮತ್ತು ಇತರರಿಗೆ ಕೊನೆಗೆ ಮಾನ್ಯತೆಯೂ ದಕ್ಕಿತ್ತು. ಅಂಬೇಡ್ಕರರ ಪ್ರೇರಣೆಯಿಂದಾಗಿ ದಲಿತರಲ್ಲಿ ಬೌದ್ಧ ಮತದ ಕುರಿತು ಒಲವು ಕಂಡುಬರುತ್ತಿದೆ. ಜಮ್ನಾಲಾಲ್ ಬಜಾಜರು ಅಸ್ಪೃಷ್ಯತೆ ನಿವಾರಣೆಗಾಗಿ ತಮ್ಮದೇ ಆದ ರೀತಿಯಲ್ಲಿ ಹೋರಾಡಿದವರು. ದೇವಸ್ಥಾನಗಳಿಗೆ ಪ್ರವೇಶಕ್ಕಾಗಿ ಜನರನ್ನು ಜಾಗೃತಿಗೊಳಿಸಿದರು. ದಲಿತರಿಗಾಗಿಯೇ ತಮ್ಮ ಜಮೀನು ಮತ್ತು ತೋಟಗಳಲ್ಲಿ ಸಾರ್ವಜನಿಕ ಬಾವಿಗಳನ್ನು ತೋಡಿಸಿದರು. ತಮ್ಮ ಹೆಚ್ಚಿನ ಸಂಪತ್ತನ್ನು ದೀನ ದಲಿತರ ಸಲುವಾಗಿ ವಿನಿಯೋಗಿಸಿದವರು.

     ಭಾರತದ ಸಂವಿಧಾನವಾಗಲೀ, ಯಾವುದೇ ಕಾನೂನು, ಕಾಯದೆಗಳಾಗಲೀ ದಲಿತರ ವಿರುದ್ಧ ತಾರತಮ್ಯ ತೋರಿಸಿಲ್ಲ, ಅದಕ್ಕೆ ಅವಕಾಶವನ್ನೂ ಕೊಟ್ಟಿಲ್ಲ. ಬದಲಾಗಿ ಅವರ ಅಭಿವೃದ್ಧಿಯ ಸಲುವಾಗಿ ಮೀಸಲಾತಿ ನೀತಿಯನ್ನು ಜಾರಿಗೊಳಿಸಿದೆ, ವಿಶೇಷ ಸವಲತ್ತುಗಳನ್ನು ಅನೇಕ ಯೋಜನೆಗಳ ಮೂಲಕ ಒದಗಿಸುತ್ತಿದೆ. ದಲಿತರ ವಿರುದ್ಧದ ದೌರ್ಜನ್ಯ, ತಾರತಮ್ಯ ಮತ್ತು ಇತರ ಅಪರಾಧಗಳ ತಡೆಗಾಗಿ 1995ರಲ್ಲಿ ಪ.ಜಾ. ಪ.ಪಂ. ದೌರ್ಜನ್ಯ ತಡೆ ಕಾಯದೆ ಜಾರಿಗೆ ಬಂದಿದೆ. ಸರ್ಕಾರಿ ನೇಮಕಾತಿಗಳಲ್ಲಿ, ಶಿಕ್ಷಣ ರಂಗದಲ್ಲಿ, ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ದಲಿತರಿಗೆ ಮೀಸಲಾತಿ ಸೌಲಭ್ಯ ನೀಡಲಾಗಿದೆ. ಮೀಸಲಾತಿ ಪದ್ಧತಿಯನ್ನು ಮೊದಲು ಜಾರಿಗೆ ತಂದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಕೇವಲ 20 ವರ್ಷಗಳಿಗೆ ಮಿತಿಗೊಳಿಸಲು ನಿರ್ಧರಿಸಲಾಗಿತ್ತು. ಇದನ್ನು ಈಗಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ. ವಿಪರ್ಯಾಸವೆಂದರೆ ಇನ್ನೂ ಹತ್ತು ಹಲವು ಜಾತಿಗಳನ್ನು ಈ ವ್ಯಾಪ್ತಿಗೆ ಸೇರಿಸಲು ಒತ್ತಡ ತರಲಾಗುತ್ತಿದೆ. ಒಳಮೀಸಲಾತಿಗೂ ಒತ್ತಾಯಿಸಲಾಗುತ್ತಿದೆ. ಇದರ ಫಲಶೃತಿ ಎಂಬಂತೆ ಹಿಂದುಳಿದ ಇತರ ಜಾತಿಗಳವರಿಗೂ ಮೀಸಲಾತಿ ಸೌಲಭ್ಯ ಕೊಡಲಾಗುತ್ತಿದೆ. ಮುಸಲ್ಮಾನರಿಗೂ ಪ್ರತ್ಯೇಕ ಮೀಸಲಾತಿಗೆ ರಾಜಕೀಯ ಪಕ್ಷಗಳೇ ಆತುರ ತೋರುತ್ತಿವೆ. ಇತ್ತೀಚಿನ ರಾಜ್ಯ ಸರ್ಕಾರ ನಡೆಸಿದ ಜಾತಿಗಣತಿಯ ಸೋರಿಕೆಯಾದ ಅಂಕಿ-ಅಂಶಗಳಂತೆ ಕರ್ನಾಟಕದಲ್ಲಿ ಮುಸ್ಲಿಮರು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಗಳ ಪೈಕಿ ಎರಡನೆಯ ಸ್ಥಾನದಲ್ಲಿದ್ದರೂ, ಅವರು ಅಲ್ಪ ಸಂಖ್ಯಾತರೆಂದು ಕರೆಸಿಕೊಳ್ಳುತ್ತಾರೆ! ಸರ್ವೋಚ್ಛ ನ್ಯಾಯಾಲಯ ಮೀಸಲಾತಿ ಶೇ.50ಕ್ಕೆ ಮೀರಬಾರದೆಂದು ನಿರ್ಬಂಧ ಹೇರಿರದೇ ಇದ್ದಿದ್ದರೆ ಇದು ಎಲ್ಲಿಗೆ ಮುಟ್ಟುತ್ತಿತ್ತೋ ದೇವರೇ ಬಲ್ಲ. ಹಿಂದುಳಿದವರನ್ನು ಮುಂದೆ ತರುವ ಉದ್ದೇಶದ ಮೀಸಲಾತಿಯನ್ನು ದುರ್ಬಳಕೆಗಾಗಿ, ರಾಜಕೀಯ ಕಾರಣಗಳಿಗಾಗಿ ಬಳಸುತ್ತಿರುವ ಕಾರಣದಿಂದ ಪ್ರಬಲ ಜಾತಿಗಳೆನಿಸಿಕೊಂಡವರೂ ಮೀಸಲಾತಿ ಬಯಸಿ ಹಿಂಸಾತ್ಮಕ ಚಳುವಳಿ ನಡೆಸುತ್ತಿರುವದನ್ನು ಕಾಣುತ್ತಿದ್ದೇವೆ. ಇರುವ ನೂರಾರು, ಸಾವಿರಾರು ಜಾತಿ ಉಪಜಾತಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳವರು, ಹಿಂದುಳಿದವರು ಇತ್ಯಾದಿ ಹಣೆಪಟ್ಟಿಗಳಲ್ಲಿ ಜಾತಿಯ ಕಾರಣದಿಂದ ಸೌಲಭ್ಯ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಜಾತಿಯ ಕಾರಣದಿಂದ ಯಾವುದೇ ವಿಶೇಷ ಸೌಲಭ್ಯ ಪಡೆಯದಿರುವ ಜಾತಿಗಳನ್ನು ಬೆರಳೆಣಿಕೆಯಲ್ಲಿ ಎಣಿಸಬಹುದು! ಅಂತಹವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇ. 10ರ ಒಳಗೇ ಬಂದರೂ ಆಶ್ಚರ್ಯವಿಲ್ಲ. ಇವರುಗಳಿಗೆ ಅರ್ಹತೆಯಿದ್ದರೂ ಮೀಸಲಾತಿಯ ನೀತಿಯಿಂದಾಗಿ ಅವಕಾಶಗಳಿಂದ ವಂಚಿತರಾಗಿರುವ ಪ್ರಸಂಗಗಳು ಕಡಿಮೆಯಲ್ಲ. ವಿದೇಶಗಳಿಗೆ ಇಂತಹವರ ಪ್ರತಿಭಾಪಲಾಯನಕ್ಕೂ ಇದು ಎಡೆ ಮಾಡಿರುವುದು ಸುಳ್ಳಲ್ಲ. ಮೀಸಲಾತಿ ನೀತಿಯಿಂದ ಅನುಕೂಲಗಳಿರುವಂತೆ ಅನಾನುಕೂಲಗಳೂ ಇವೆ. ಇದನ್ನು ಅವ್ಶೆಜ್ಞಾನಿಕ ರೀತಿಯಲ್ಲಿ ಜಾರಿಗೆ ತಂದಿರುವುದು ಹಿನ್ನಡೆಗೆ ಕಾರಣವೂ ಆಗಿದೆಯೆಂದರೆ ತಪ್ಪಲ್ಲ. ಇದು ದೊಡ್ಡ ಚರ್ಚೆಯ ವಿಷಯವೆಂಬುದರಲ್ಲಿ ಅನುಮಾನವಿಲ್ಲ.

     ರಾಜಕೀಯವಾಗಿ ದಲಿತರಿಗೂ ಅಧಿಕಾರದ ಸವಿ ಸಿಕ್ಕಿದೆ. ದಲಿತರಿಗಾಗಿಯೇ ಮೀಸಲಾದ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಿದ್ದು ಅನೇಕ ಪ್ರಭಾವಿ ರಾಜಕಾರಣಿಗಳು ಹೊರಹೊಮ್ಮಿದ್ದಾರೆ, ಹೊರಹೊಮ್ಮುತ್ತಿದ್ದಾರೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲೂ ಮೀಸಲಾತಿಯ ಸೌಲಭ್ಯ ಅವರಿಗೆ ಸಿಕ್ಕಿದೆ. ಈ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೂ ಮೀಸಲಾತಿ ಸೌಲಭ್ಯ ವಿಸ್ತರಣೆಯಾಗಿದೆ.  1997ರಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ಶ್ರೀ ಕೆ.ಆರ್. ನಾರಾಯಣನ್ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಉತ್ತರಪ್ರದೇಶದಲ್ಲಂತೂ ದಲಿತರು ಕ್ರಾಂತಿಯನ್ನೇ ಉಂಟುಮಾಡಿದ್ದರು. ದಲಿತರ ನೇತೃತ್ವದ ಬಹುಜನಸಮಾಜ ಪಕ್ಷದ ನೇತಾರೆ ಮಾಯಾವತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ದಾಮೋದರಮ್ ಸಂಜೀವಯ್ಯ 1960-62ರ ಅವಧಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಜಿತನ್ ರಾಮ್ ಮಾಂಜಿಯವರು ಒಂದು ವರ್ಷದ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ತಾವು ಹೇಳಿದಂತೆ ಕೇಳುತ್ತಾರೆಂದು ಭಾವಿಸಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದ ನಿತೀಶಕುಮಾರರು ಮಾಂಜಿ ತಮ್ಮ ಕೈಗೊಂಬೆಯಾಗದಿದ್ದರಿಂದ ಅವರನ್ನು ಕೆಳಗಿಳಿಸಿ ಮತ್ತೆ ತಾವೇ ಮುಖ್ಯಮಂತ್ರಿಯಾದರು. ಬಾಬು ಜಗಜೀವನರಾಮರು ಉಪಪ್ರಧಾನ ಮಂತ್ರಿಯಾಗಿದ್ದರು. ಅವರ ಪುತ್ರಿ ಶ್ರೀಮತಿ ಮೀರಾಕುಮಾರಿ ಲೋಕಸಭೆಯ ಸ್ಪೀಕರ್ ಆಗಿದ್ದರು. ದಲಿತರ ರಾಜಕೀಯ ಪಕ್ಷಗಳಾಗಿ ಬಹುಜನ ಸಮಾಜ ಪಕ್ಷ, ಮಹಾರಾಷ್ಟ್ರದಲ್ಲಿ ರಿಪಬ್ಲಿಕನ್ ಪಾರ್ಟಿ, ತಮಿಳುನಾಡಿನಲ್ಲಿ ವಿದುತಲೈ ಚಿರುತಾಯಿಗಳ್ ಕಚ್ಚಿ, ಅಂಬೇಡ್ಕರರ ಮೊಮ್ಮಗ ಶ್ರೀ ಪ್ರಕಾಶ ಯಶವಂತ್ ಅಂಬೇಡ್ಕರ್ ಸ್ಥಾಪಿಸಿದ ಭಾರಿಪ ಬಹುಜನ ಮಹಾಸಂಘ, ಬಿಹಾರದ ಲೋಕ ಜನಶಕ್ತಿ ಪಾರ್ಟಿಗಳು ಮುಂಚೂಣಿಯಲ್ಲಿವೆ. ಬಂಗಾರು ಲಕ್ಷ್ಮಣ್, ಕಲ್ಯಾಣಸಿಂಗ್(ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದವರು), ರಾಮಚಂದ್ರ ವೀರಪ್ಪ, ಡಾ. ಸೂರಜ್ ಭಾನ್ ಮೊದಲಾದ ದಲಿತ ನಾಯಕರು ಭಾ.ಜ.ಪ.ದ ಹಿರಿಯ ನಾಯಕರುಗಳ ಪಟ್ಟಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆ (ಲೋಕಸಭೆಯ ವಿಪಕ್ಷ ನಾಯಕ), ಪರಮೇಶ್ವರ್ (ಕ.ಕಾಂಗ್ರೆಸ್ ಅಧ್ಯಕ್ಷ, ಗೃಹಮಂತ್ರಿ) ಮೊದಲಾದವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. 

     ದಿ. ಇ.ವಿ.ರಾಮಸ್ವಾಮಿ ಪೆರಿಯಾರರ ಪ್ರಭಾವ ತಮಿಳುನಾಡಿನಲ್ಲಿ ಇಂದಿಗೂ ಕಾಣಬರುತ್ತದೆ. ಸಾಮಾಜಿಕ ಹೋರಾಟಗಾರರಾಗಿದ್ದ ಇವರು ಸ್ವಾಭಿಮಾನ ಆಂದೋಳನದ ಹರಿಕಾರರಾಗಿ ದ್ರಾವಿಡ ಚಳುವಳಿ ಉತ್ತೇಜಿಸಿದವರು. ದಕ್ಷಿಣ ಭಾರತವನ್ನೊಳಗೊಂಡ ಸ್ವತಂತ್ರ ದ್ರಾವಿಡಸ್ಥಾನದ ಕನಸು ಕಂಡವರು. ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ದ್ರಾವಿಡ ಕಳಗಂ ಸ್ಥಾಪಕರು. ತಮಿಳುನಾಡಿನ ಇಂದಿನ ಅನೇಕ ರಾಜಕೀಯ ಪಕ್ಷಗಳು ದ್ರಾವಿಡ ಕಳಗಂನಿಂದ ವಿಭಜನೆಗೊಂಡಿದ್ದರೂ ಇವರ ವಿಚಾರದ ಆಧಾರದಲ್ಲಿ ಅಧಿಕಾರದ ರುಚಿ ಅನುಭವಿಸುತ್ತಿವೆ.

(ಮುಂದುವರೆಯುವುದು)

-ಕ.ವೆಂ.ನಾಗರಾಜ್.

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category):