ತಿಳುವಳಿಕೆ

5

ನಾನಾರು ಅವನಾರು ಇರುವುದೆಲ್ಲವೂ ಏನು? ನಾನೇಕೆ ಬಂದೆನೀ ವಿಷಮದೊಳಗೆ?
ಪ್ರತಿ ನಗುವಿನಾ ಹಿಂದೆ ಅಡಗಿಹುದು ಕಹಿ ಛಾಯೆ, ಬೇವಿನೊಡಲಿನ ಜೇನು ತುಪ್ಪದಂತೆ
 
ಅರಿಯುವುದು ಬಹಳವಿದೆ ಅರಿತರೇನಾದೀತು? ಬಿಡುಗಡೆಯ ಬಾಗಿಲಿನ ಸುಳಿವಿಲ್ಲದೆ
ಹಿರಿದೆ ತರ್ಕವ ಮಾಡಿ, ಬರಿದೆ ಬಾಳನು ದೂಡಿ, ಊರನರಿಯದೆ ನಿಂತ ಹೆಳವನಂತೆ
 
ಹೊಸಹೊಸತು ಭಾವಗಳು ಮನ ತಟ್ಟಿ ಕೆಣಕುವುವು, ಮತ್ತೆ ತಿಳಿವುದು ಎಲ್ಲ ಸವಕಲೆಂದು
ಹೊಸ ನೋಟ ಹೊಸ ಪಾಠ ಹೊಸತು ಜನಗಳ ಕೂಟ, ಹೊಸ ತಂಬಿಗೆಯ ಹಳೆಯ ನೀರು ಎಂದು
 
ಕರ್ಮ ಜ್ಞಾನದ ಗಹನ ತಿಳಿಹುಗಳು ಬಹಳವಿವೆ, ತಿಳಿದು ಅರಿಯದೆ ಹೋದೆ ತಿಮಿರದೊಳಗೆ
ಭಕುತಿಯ ಬುತ್ತಿಯಲಿ ನವರಸದ ತಿನಿಸುಗಳು, ತಿನ್ನಬಲ್ಲೆನೆ ನಾನು? ತುತ್ತು ಹಿರಿದು
 
ಬಲ್ಲವನೇ ಬೇಕಿನ್ನು ಎಲ್ಲ ಕಂಡವನವನು, ಒಲ್ಲೆ ನಾ ಅರೆಬೆಂದ ಗ್ರಹಿಕೆಗಳನು
ಕಲಿತದ್ದು ತಿಳಿದದ್ದು ಎಲ್ಲವನು ಒಗೆಯತ್ತ, ತಿಳಿಯ ಮನದಲಿ ಕೇಳು ಏನು ಎತ್ತ?
 
ಆನಂದದೊಡಲಿನಲಿ ಇರುವ ಬಿಂದುವು ನೀನು, ಸಿಂಧು ಬಿಂದುವ ಬಂಧು ಅಲ್ಲವೇನು?
ಸಿಂಧು ಸೇರುವ ತವಕ ಬಿಂದುಮಾತ್ರಕೆ ಇಹುದು, ಅದುವೆಯೇ ತಳಮಳವು ತಿಳಿಯಿತೇನು?
 
ನೀನೇ ಬೇಕೆಂದು ಬೇಡು ಬಂಧುವ ನೀನು, “ನಿನ್ನದೇನೂ” ಬೇಡ ನಿಜದೊಳೆನ್ನು
ಇಂದೇ ಬರುವನು, ಮುಂದೆ ಎಂದೆಂದಿಗೂ ಇಹನು, ಹೋಳಿಗೆಯ ಹೂರಣದ ತೆರದಿ ಎಂದೂ
 
ಅದುವೆ ಹಿಂದಿನ ಕೆಲಸ ಅದುವೇ ಉಂಬಳ ಸರಸ, ಅಂತ್ಯ ಕಾಣದೆ ಸವಿವೆ ಆನಂದವಾ
ಪರದೆಯಾಚಿನ ಕಥೆಯ ಹೇಳಿದಾ ಗೆಳೆಯನಿಗೆ, ಏನ ಕೊಡುವೆಯೋ ನೀನು ಹುಲುಮಾನವಾ?
ಆನಂದ ಶರ್ಮ
 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.