ಟೂ...ಟೂ...ಬೇಡಪ್ಪ, ಓಡಿಬಂದು ನನ್ನ ಸಂಗ ಕಟ್ಟಪ್ಪ

4

 


 


ಪ್ರೇಮಮಯಿ ಚಿತ್ರದ  ಟೂ...ಟೂ...ಬೇಡಪ್ಪ, ಓಡಿಬಂದು ನನ್ನ ಸಂಗ ಕಟ್ಟಪ್ಪ....ಹಾಡು. ಟೂ ಬಿಡೋದು, ಮುಖ ಊದಿಸೋದು, ಮಕ್ಕಳ ಕೋಳಿ ಜಗಳಗಳಿಗೆ ಭಾಷೆ, ದೇಶಗಳ ಪರಿಧಿಯಿಲ್ಲ. ಬಾಲ್ಯ ಅದೆಷ್ಟು ಸುಂದರ ಅಲ್ವಾ. ನೀವೂ ಟೂ ಬಿಟ್ಟಿರ್ತೀರ...ನೆನಪಿನ ಅಂಗಳ ಹೊಕ್ಕಿ ಎಣಿಕೆ ಹಾಕಿ...ತಾರೆ ಎಣಿಸಿ ಮೊತ್ತ ಹೇಳು ಎಂಬಂತೆ.


ಇತ್ತೀಚೆಗೆ ಪ್ರೈಮರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದೆ. ಶಾಲೆ ಬಿಟ್ಟಾಗ ಮಕ್ಕಳೊಂದಿಗೆ ನಾನೂ ಹೊರನಡೆದೆ. ಮಕ್ಕಳ ಬೆನ್ನ ಮೇಲಿನ ಪುಸ್ತಕ ಜೊತೆಗೆ ನೀರಿನ ಬಾಟಲ್, ಛತ್ರಿಯ ಹೊರೆ ಕಂಡು ಅಯ್ಯೋ ಎನಿಸಿತು. ನನ್ನ ಬಾಲ್ಯದ ಬ್ಯಾಗು-ಪುಸ್ತಕ ಹಗುರ-ಕಸ-ಕಡ್ಡಿ ಭಾರ.  ಒಂದು ಪುಸ್ತಕ,  ಒಂದು ಸ್ಲೇಟು, ಒಂದು ಬಳಪ ಮಿಕ್ಕದ್ದು ಬಳೆಚೂರು, ಒಣಗಿದ ಹೂವು, ನವಿಲುಗರಿ, ನುಣ್ಣನೆ ಕಲ್ಲು, ಕದ್ದ ಮಾಲು ಮಾವು, ಹುಣಿಸೆ, ನೆಲ್ಲಿ. ನನ್ನ ಅಕ್ಕ-ಪಕ್ಕವಿದ್ದ ಹುಡುಗರು ಮಣ ಭಾರದ ಬ್ಯಾಗ್ ಹೊತ್ತಿದ್ದರೂ ಒಬ್ಬರಿಗೊಬ್ಬರು ತಳ್ಳಾಡುತ್ತಾ, ಕೈ-ಕೈ ಹಿಡಿದುಕೊಂಡು, ಕಿಸಿ ಕಿಸಿ ನಗುತ್ತಾ ಯಾವುದೇ ಯೋಚನೆ ಇಲ್ಲದೆ ತಮ್ಮದೇ ಪ್ರಪಂಚದಲಿ ನಡೆಯುತ್ತಿದ್ದರು. ಈ ಮಕ್ಕಳ ಬಾಲ್ಯದಾಟವನು ನೋಡುತ್ತಾ ನಾನೂ ಆ ಮೆರವಣಿಗೆಯ ಗಮನಿಸುತ್ತಾ ನಾನೂ ಜೊತೆಗೂಡಿದ್ದೆ. ಎಂಥಾ ಮುದವಿತ್ತಾ...... 


ಇಷ್ಟರಲ್ಲಿ ಸುಯ್ಯನೆ ಓಡಿ ಬಂದ ಹುಡುಗಿಯೊಂದು ನನ್ನ ಪಕ್ಕ ಬರುತ್ತಿದ್ದ ಹುಡುಗಿಯತ್ತ ಕೈ ತೋರಿ ಡೊಂಟ್, ಟಾಕ್ ಟು ಮಿ, ಯೂ ಶಿಟ್ ಎಂದೆನ್ನುತ್ತಾ ಮೂತಿಸೊಟ್ಟ ಮಾಡಿ,  ಭುಜ ಕುಣಿಸಿ ಓಡಿದಳು. ನನ್ನ ಪಕ್ಕದ ಹುಡುಗಿಗೆ ಏನೆಂದು ತಿಳಿಯುವಷ್ಟರಲ್ಲಿ ಇದು ನಡೆದು ಹೋಗಿತ್ತು. ಇವಳೂ ತಕ್ಷಣ ತನ್ನ ಮುಂದಿದ್ದ ಎಲ್ಲರನ್ನೊ ದಬ್ಬಿ, ಬೈದ ಹುಡುಗಿಯತ್ತ ಓಡಿ ಯೂ ಡರ್ಟಿ ಪಿಗ್, ಐ ವಿಲ್ ಸೀ ಯೂ ಟುಮಾರೋ ಎಂದು ಚೀನಿಯಲಿ ಪುಕನಿ ಹೌ(ಪ್ರಾಯಶಃ ಟೂ) ಎಂದು ಕೂಗಿ ಮೊದಲು ಅಂದಿದ್ದ ಹುಡುಗಿಯತ್ತ ಮೂತಿ ಸೊಟ್ಟ ಮಾಡಿ ಓಡಿದಳು. ಸಿಂಗಪುರದಲ್ಲಿ ಇಂಥಾ ಅಪರೂಪದ ದೃಶ್ಯ-ಮಕ್ಕಳ ಜಗಳ ಹತ್ತು ವರುಷದಲಿ ನಾ ಮೊದಲ ಬಾರಿ ಕಂಡದ್ದು. ನಗು ಬಂದಿತು. ಆ ಹುಡುಗಿ ತಲೆ ಮೇಲೆ ಮೊಟಕಿದ್ರೆ, ಜಡೆ ಎಳದಿದ್ರೆ ಚೆನ್ನಾಗಿರೋದು ಎಂದು ಅನಿಸಿದ್ದು ಖಂಡಿತ ನಿಜ.  ನನ್ನ ಬಾಲ್ಯಕ್ಕೆ ಗಿರಕಿ ಹೊಡೆದೆ.


"ಆನೆ ಮೇಲೆ-ಒಂಟೆ ಮೇಲೆ, ಕುದುರೆ ಮೇಲೆ, ಕತ್ತೆ ಮೇಲೆ....ನಿನ್ನ ಮೇಲೆ, ನನ್ನ ಮೇಲೆ ಟೂ..ಟೂ" ಅಥವಾ "ಅಟ್ಟಂ ಬಟ್ಟಂ ನಾಗರ ಬಟ್ಟಂ ನಿನ್ ಕೈಗೆ ಟೋಪಿ, ನನ್ ಕೈಗೆ ಪೀಪೀ  ಟೂ ಟೂ... ಎಂದು ಬೆರಳನ್ನು ಮಡಿಸಿ ಕೆನ್ನೆಗೆ ತಗುಲಿಸಿಕೊಂಡು ಹೇಳುತ್ತಿದ್ದ ಮಾತುಗಳು.  ಆ ದಿನಗಳ ಮುನಿಸು ಕ್ಷಣಿಕ. ಹಾದಿಯಲಿ ಸಿಗುತ್ತಿದ್ದ ನೆಲ್ಲಿ, ಮಾವು, ಹುಣಿಸೆ, ಗೋಲಿ ಕಂಡಾಗ ಟೂ ಮರೆತೇ ಹೋಗುತ್ತಿತ್ತು. ಇನ್ನು ಟೂ ಬಿಟ್ಟವರ ಬಳಿ ತಿನಿಸಿದ್ದರಂತೂ ನಾಲಿಗೆಯಲಿ ನೀರು ಇವತ್ತು ಟೂ ಬೇಡ ಕಣೆ ನಾಳೆ ಎಂದದ್ದೂ ಉಂಟು.


ಬಾಲ್ಯದ ಕೋಪ-ತಾಪಕ್ಕೆ ಬಲಿಯಾಗುತ್ತಿದ್ದವರು  ಅಣ್ಣ, ಅಕ್ಕಂದಿರಿ, ಗಳಸ್ಯ-ಕಂಠಸ್ಯದ ಸ್ನೇಹಿತರು. "ಅಟ್ಟೆ, ಮಟ್ಟೆ, ಕೋಳಿ ಮೊಟ್ಟೇ" ಎಂದು ತಲೆಯ ಮೇಲೆ ತದಕಿ, ಸ್ನಾನದ ಮನೆಯಲ್ಲಿ ಕಣ್ಣಿಗೆ ಸೋಪು ಹಾಕಿದ್ದು, ಒಂದೇ ತಟ್ಟೆಯಲಿ ತಿಂದದ್ದು. ಒಂಥರಾ ಕಾಯಿ ಸಿಗೋದು, ಅದನ್ನು ಉಜ್ಜಿ ತೊಡೆ ಮೇಲೆ ಚುರ್ ಅನಿಸೋದು. ಇಷ್ಟೇ ಅಲ್ಲ ಸೂರ್ಯನ ಮೇಲೆ ದೂರು. ಆ ನೆನಪುಗಳ ಮೆರವಣಿಗೆ ಸುಂದರ...ಸುಂದರ. ಈಗ ಹೆತ್ಕೋಳೋದು ಒಂದು, ಅದಕ್ಕೋ ಪೂರ ಅಟೆನ್‍ಷನ್. ಠೂ ಬಿಡೋದು-ಜಗಳ ಆಡೋದು-ಕಾಗೆ ಎಂಜಲು ತಿನ್ನೋದು ಎಲ್ಲಿಂದ ಕಲೀಬೇಕು ಹೇಳಿ.ಈಗಿನ ಕಾಲ- ಮಕ್ಕಳ ತಪ್ಪಲ್ಲ ಬಿಡಿ!


ಬಾಲ್ಯದಲಿ ಮನಸ್ತಾಪ ಬಂದಾಗ ಮಾತು ಬಿಟ್ಟು ಮತ್ತೆ ಮಾತನ್ನು ಆರಂಭಿಸುವ ಪ್ರವೃತ್ತಿ ಬಾಲ್ಯಕ್ಕೇ ಸೀಮಿತ.  ಇದೊಂದು ತರಹ ಅಹಿಂಸಾತ್ಮಕ ಅಸ್ತ್ರ.  ಇದೇ ಅಸ್ತ್ರ ದೊಡ್ಡವರಾದಾಗ ಉಪಯೋಗಿಸಿದಲಿ ಮಾನಸಿಕ ಹಿಂಸೆ, ಹೇಳಲೂ ಆಗದೆ-ಅನುಭವಿಸುವ ಮಾನಸಿಕ ಶಿಕ್ಷೆ ನೀಡುವ ಬ್ರಹ್ಮಾಸ್ತ್ರ. ಅಪರೂಪವಾಗಿ ಭೇಟಿ ಆಗುವವರು ಟೂ ಬಿಟ್ಟರೆ ಅಷ್ಟೋಂದು ಪರಿಣಾಮಕಾರಿ ಆಗುವಿದಿಲ್ಲ. ಆದರೆ ಒಂದೇ ಮನೆಯಲ್ಲಿದ್ದು ಟೂ ಬಿಟ್ಟರೆ ಯೋಚಿಸಿ ನೋಡಿ...ಆ ಪರಿಸ್ಥಿತಿ ಗೋವಿಂದಾ..ಗೋವಿಂದ.


 


 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ವಾಣಿ, ಈಗ ಯಾರೂ ಟೂ ನೂ ಬಿಡ್ತಾ ಇಲ್ಲ, ತ್ರೀ ನೂ ಬಿಡ್ತಾ ಇಲ್ಲ. ಈಗ ಕಿರುಬೆರಳನ್ನು ತೋರಿಸಿ "ಕಟ್ಟಿ" ಎನ್ನುತ್ತಾರೆ. ಕಟ್ಟಿ ಶಮನವಾದ ನಂತರ "ದೋಸ್ತಿ" ಎಂದು ಹೆಬ್ಬೆರಳು ತೋರಿಸುತ್ತಾರೆ. ಆಗ ಚಿಕ್ಕವನಿದ್ದಾಗ ಬಿಡ್ತಾ ಇದ್ದೆ, ಈಗ ಬಿಡೋಕ್ಕೆ ಆಗ್ತಾ ಇಲ್ಲ ಒತ್ತಕ್ಷರದ "ಟೂ" ವನ್ನು, ಗೂಗ್ಲ್ ಒಪ್ತಾ ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವಂದನೆಗಳು. ಈಗಿನ ಟೂ ಬಗ್ಗೆ ಗೊತ್ತಿರಲಿಲ್ಲ. ಟೂ ಅಂತೂ ಬಿಡ್ತಾರಲ್ಲ ಬಿಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸುಂದರ ನೆನಪುಗಳು! ನಿಜಕ್ಕೂ ಅದು ಸುಂದರ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಬಾಲ್ಯ, ಮುಗ್ಧತೆ ಮತ್ತೆ ಮರುಕಳಿಸಬಾರದೇ ಎನಿಸುತ್ತೆ ಅಲ್ವಾ. ನೆನಪುಗಳ ಮೆರವಣಿಗೆ ಸದಾ ಸುಂದರ. ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.