ಟಿಟ್-ಬಿಟ್ಸ್ !

4.75

ಆಗಿಗೊಮ್ಮೆ ಬರೆದ ತುಣುಕುಗಳ ಸಂಗಮ ಈ ಹನ್ನೆರಡು ಹನಿಗಳು. ಇವುಗಳಲ್ಲಿ ಯಾವುದಾದರೂ ಕೆಲವನ್ನು ಆಗಲೆ ಹಿಂದಿನ ಪ್ರಕಟಣೆಯಲ್ಲಿ ಸೇರಿಸಿದ್ದೇನೊ, ಏನೊ ಸರಿಯಾಗಿ ನೆನಪಿಲ್ಲವಾದರು, ಬಹುತೇಕ ಪ್ರಕಟಿಸದವುಗಳೆ ಆಗಿವೆ. ವಾರದ ಕೊನೆಯ ಸೋಮಾರಿ ನಿದ್ದೆಯಿಂದೆದ್ದ ಹೊತ್ತಲಿ ತುಸು ಪದ ಲಾಸ್ಯದಲಿ ತೊಡಗಿಸುವ ಕಸರತ್ತು ಮಾಡಬಹುದೆನ್ನುವ ಆಶಯದಿಂದ ಇಲ್ಲಿ ಸೇರಿಸುತ್ತಿದ್ದೇನೆ. ಟಿಟ್ ಬಿಟ್ಸ್ ತಿಂದ ಹಾಗೆ ಒಂದೊಂದನ್ನೆ ಚಪ್ಪರಿಸಿ ಸವಿದರೆ ಸ್ವಾದ ಮುದ ಕೊಡಬಹುದು - ಸವಿದು ನೋಡಿ :-)

01. ಉರುಳು
______________

ಮಾಡಿದ ಪಾಪ
ಆಗದಂತೆ 
ಕುತ್ತಿಗೆಗೆ 'ಉರುಳು'
ದೇಗುಲದ ಸುತ್ತ
ಹಾಕುತ್ತಾರೆ
ಒದ್ದೆಯಲೆ 'ಉರುಳು' !

02. ಪಾಪ
___________

ಈಗಂತೂ 
ಎಲ್ಲೆಡೆ ಬರಿ
'ಪಾಪ' ಮಾಡುವ ಜನ;
ಅದಕ್ಕೆ
ನಮ್ಮ ಜನಸಂಖ್ಯೆ
ದಶಕಗಳಲೆ ದ್ವಿಗುಣ !

03. ಮನಸಾ
________________

ಬೇಡದಿರೆ
ವಿರಸ,
ವೈಮನಸ -
ಸ್ವೀಕರಿಸಬೇಕು 
ಮನಸಾ,
ಸಂಗಾತಿಯ 
ಮನಸ !

04. ಸಂಗಾತಿ ಸಂಗತಿ
________________

ಸಂಗಾತಿ
ಇನ್ನೊಬ್ಬಳಿರುವ 
ಸಂಗತಿ,
ಸಂಗಾತಿಗೆ
ಗೊತ್ತಾಗಬಾರದ 
ಸಂಗತಿ !

05. ಅತ್ತರು
______________

ಇನಿಯನೆದೆಗೊರಗಿ
ನಲ್ಲೆ ಗಳಗಳ 'ಅತ್ತರು',
ಜತೆಗವನ ಅಳಿಸಿದ್ದು
ಅವಳು ಹಚ್ಚಿದ್ದ
ಗಮಗಮ 'ಅತ್ತರು' !

06. ಸೂರ್ಯ-ಚಂದ್ರ-ಭೂಮಿ
__________________

ಸೂರ್ಯ 
ಜಗದ ಮೊದಲ
ಮೈಕ್ರೋವೇವ್ ಓವನ್ ;
ಚಂದ್ರ 
ಮೊದಲ ರೆಫ್ರಿಜಿರೇಟರು..
ಭೂಮಿ ?
ಬಡಪಾಯಿ ಗ್ರಾಹಕ ! 

07. ಕುತೂಹಲ
____________

ತುಟಿಗಳ ಬದಲು
ಹಕ್ಕಿ ಕೊಕ್ಕಿರೆ ಜನ,
ಹೇಗಿರುತ್ತಿತ್ತೊ -
ಪ್ರೇಮಿಗಳ ಚುಂಬನ ?

08. ಹೆರಿಗೆ
___________

ಹೊಸತ
ಬರೆಯಲೇನಾದರು
ಹೆಣಗುವ ಕವಿಗೆ
ಅಲ್ಲವೆ
ದಿನ ನಿತ್ಯ
ಚೊಚ್ಚಿಲ ಹೆರಿಗೆ ? 

09. ಗೊಣಗೊಣ
_________________

ನಿತ್ಯ 
ಬಸುರಿ-ಬಾಣಂತಿ
ಕವಿ ಮನ
ಬೇಕಿತ್ತೆ ಕಲ್ಯಾಣ ?
ಮನೆಯಾಕೆ ಗೊಣಗೊಣ !

10. ಪ್ರಸೂತಿ ಪಟು
______________

ಯಾರಿಲ್ಲ
ಕವಿಗಿಂತ ಚತುರ
ಪ್ರಸೂತಿ ಪಟು
ಹಗಲಿರುಳು
ಪ್ರಸವ ವೇದನೆ
ಬರೆವ ಜಿಗುಟು !

11. ಮಧು ಚಂದ್ರ ?
_______________

ಕವಿಯ ಜತೆ
ಮನೋಹರ
ಮೊದಲ ಮಧುಚಂದ್ರ
ಬರಿ ಕನಸು..
ನಿರ್ಲಜ್ಜ ಕವಿತೆ ಜತೆ
ಲಲ್ಲೆಗೀಗಾಗಲೆ 
ಮನೆ ತುಂಬಾ
ಕಾವ್ಯದ ಕೂಸು !

12. ಮಾತು-ಮಾತೆ
____________

ಹೆತ್ತವಳ ಮಾತೆ
ವೇದ-ವಾಕ್ಯ
ಅನಿಸಿತ್ತೆ ..
ಕಟ್ಟಿಕೊಂಡವಳ 'ಮಾತೆ' 
ಆಗುವ ತನಕ
ನಮ್ಮತ್ತೆ !

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕುಟುಕುವ, ಚಿಗುಟುವ, ಮಿಟುಕುವ, ಮಿಡುಕುವ ಚುಟುಕುಗಳು! ಅಭಿನಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಚಿಟುಕಿ ಹೊಡೆದಂತೆ ಚುಟುಕಾದ ಮತ್ತು ಚುರುಕಾದ ಪ್ರತಿಕ್ರಿಯೆಗೆ ಧನ್ಯವಾದಗಳು ಕವಿಗಳೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಾಗೇಶ ಮೈಸೂರು ರವರಿಗೆ ವಂದನೆಗಳು
ಚುಟುಕುಗಳು ಸೊಗಸಾಗಿ ಮೂಡಿ ಬಂದಿವೆ ಬೆರಗುಗೊಳಿಸುವ ಇವು ಗೂಡಾರ್ಥವನೂ ಹೊಂದಿವೆ ಓದಿ ಸಂತಸವಾಯಿತು, ನನಗೆ ನೆನಪಿದ್ದಂತೆ ಹಿಂದೆ ಯಾವಾಗಲೂ ಈ ಚುಟುಕು ಗಳನ್ನು ಓದಿಲ್ಲ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ಈ ಚೋಟು ಮೆಣಸಿನ ಕಾಯಿಗಳು ಕೆಲವೊಮ್ಮೆ ಸಿಡಿಯುವ ಚಿನಕುರುಳಿಯಾದರೆ ಮತ್ತೆ ಕೆಲವೊಮ್ಮೆ 'ಠುಸ್' ಪಟಾಕಿಗಳಾಗಿಬಿಡುತ್ತವೆ. ಹೀಗಾಗಿ ಎಷ್ಟೊ ಬಾರಿ ಬರೆದರು, ಕೆಲವನ್ನು ಮಾತ್ರ ಪ್ರಕಟಿಸುವ ಪರಿಪಾಠ; ಆದರೆ ಅದನ್ನು ಸರಿಯಾದ ಕ್ರಮದಲ್ಲಿ ದಾಖಲೆಯಿಡದ ಕಾರಣ ಕೆಲವೊಮ್ಮೆ ಸಂದೇಹ ಬಂದುಬಿಡುತ್ತದೆ - ಪ್ರಕಟಿಸಿದ್ದೆನ, ಇಲ್ಲವಾ ಅಂತ. ನೀವು ಓದಿಲ್ಲ ಅಂದ ಮೇಲೆ ಖಂಡಿತ ಪ್ರಕಟಿಸಿರಲಿಕ್ಕಿಲ್ಲ ಬಿಡಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

"ತುಟಿಗಳ ಬದಲು
ಹಕ್ಕಿ ಕೊಕ್ಕಿರೆ ಜನ,
ಹೇಗಿರುತ್ತಿತ್ತೊ -
ಪ್ರೇಮಿಗಳ ಚುಂಬನ ?"
:())))
http://bit.ly/1HqYfjq
ಸೂಪರ್ರೋ ಸೂಪರ್ರು ....!! ನೂರಾಕ್ಷರ ಹೇಳೋದು ಮೂರಕ್ಷರ ಹೇಳೋದು ನಿಜ......ನಕ್ಕು ನಗಿಸಿದವು .. ನನ್ನಿ
ಶುಭವಾಗಲಿ...
\\\|||///

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸಪ್ತಗಿರಿಗಳೆ ನಮಸ್ಕಾರ.. ಈ ಚುಟುಕಗಳಿಗಿಂತ ನೀವು ಕೊಟ್ಟಿರುವ ಚಿತ್ರದ ಲಿಂಕಿದೆಯಲ್ಲ - ಅದು ಸೂಪರಲ್ಲಿ ಸೂಪರು ! ಎಷ್ಟು ಚೆನ್ನಾಗಿ ಹೊಂದಿಕೆಯಾಗುವ ಚಿತ್ರ ಹುಡುಕಿದ್ದೀರಾ ಅಂದರೆ - ಅದನ್ನು ನೋಡಿಯೆ ಚುಟುಕಬರೆದ ಹಾಗಿದೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.