ಜಲಚಕ್ರ...

0

ಜಲ ಚಕ್ರ ಈ ಜಗದ ಜೀವಾಳ - ಲೋಕದ ಬಂಡವಾಳವನೆಲ್ಲ ಸಮತೋಲನದಲಿಡುವ ಜಲಚಕ್ರ, ಪ್ರಕೃತಿಯ ಸ್ವಯಂ ರಕ್ಷಣೆಗೆ ನಿಸರ್ಗ ಹೂಡುವ ಹಲವಾರು ಅವತಾರ, ಆಟಗಳ ಒಂದು ಪ್ರವರ. ಬಿಸಿಲ ಬೇಗೆಯಿಂದೆದ್ದ ಹಬೆ ಹಗುರಾಗುತ ಆಗಸ ಸೇರಿ, ತಂಪಾಗಿ ಭಾರದ ಮೊತ್ತಕ್ಕೆ ಜಗ್ಗಿ ಮಳೆಯಾಗಿ ಮತ್ತೆ ಇಳೆ ಸೇರಿ ಮರಗಿಡ ಜೀವ ಜಾಲಕೆಲ್ಲ ಮತ್ತೆ ಜೀವನ ಚಕ್ರ ಸುಗಮದಿ ನಡೆಸಲು ಅನುವು ಮಾಡಿಕೊಟ್ಟು ಮತ್ತದೆ ಪುನರಾವರ್ತಿಸುವ ಸಹಚರ. ಅದನ್ನು ಪದಗಳಲಿಡಿಯುವ ಯತ್ನ ಈ ಜೋಡಿ ಕವನಗಳದು - ತುಸು ಭಾವ ರೂಪದಲಿ, ತುಸು ವಿಜ್ಞಾನದ ಹೊದಿಕೆಯಲ್ಲಿ.

ಮೊದಲಿನ ಕವನ 'ಜಲಚಕ್ರ  ಜಲಯೋಗ ' ಉನ್ನತ ಸ್ತರದಲಿ ಜಲಚಕ್ರದ, ದ್ಯುತಿ ಸಂಶ್ಲೇಷಣ ಕ್ರಿಯೆಯ ಚಿತ್ರಣ ಬಿಡಿಸಿಟ್ಟರೆ, ಎರಡನೆ ಕವನ 'ಜಲಚಕ್ರ - ಅಷ್ಟಾವಕ್ರ' ತುಸು ಆಳಕ್ಕೆ ಹೊಕ್ಕು ವಿವರಣೆಯ ಮಟ್ಟದಲ್ಲಿ ಇಣುಕಿ ನೋಡುತ್ತದೆ - ಒಳಿತು, ಕೆಡುಕುಗಳೆರಡರತ್ತ ಸಮದೃಷ್ಟಿ ಹರಿಸಲೆತ್ನಿಸುತ್ತ.

1. ಜಲಚಕ್ರ ಜಲಯೋಗ !
______________________

ಪ್ರತ್ಯೂಷ ಕಾಲ ಪ್ರಥಮತಃ ಚುಂಬಿತ 
ಆದಿತ್ಯ ಕಿರಣ ಗಗನದುಂಬಿ ರವಿ ರಥ
ಚೆಲ್ಲಾಡಿ ಚಕ್ಷು ಗಮನ ಹರಿತ ಸುಪರ್ಣ 
ಮೊಗೆದ್ಹೂಡಿ ಕುಡಿವ ದ್ಯುತಿಸಂಶ್ಲೇಷಣ!

ಜಲಸಿರಿ ತೊಟ್ಟು ತೊಟ್ಟಾಗಿ ನೆಕ್ಕುತಲಿ 
ಮೈ ದುಂಬಿದ ಪಾಪ ವರೆಸುವ ನಕಲಿ
ಇಳೆ ಬೆವರೊಡೆದಂತೆ ಬಿಸಿಯಾಗಿ ಆವಿ
ಮೇಲೇರಿ ಚಳಿಗೆ ಶೀತಲ ಮೋಡ ಕವಿ!

ಮೇಘಮಲ್ಹಾರರಾಗ ಆಗಸ ಮುಟ್ಟಿದಾಗ
ಜಗವೆಲ್ಲ ಜಲಯೋಗ ಕರಗೆ ಅಮೋಘ
ಹನಿಹನಿ ಜಲಭಾರ ಮೋಡಕೆಲ್ಲಿ ಹಗುರ 
ತಡೆಯದ ಭಾರಕೆ ಪ್ರಸವ ಮಳೆವುತ್ಸವ!

2. ಜಲಚಕ್ರ ಅಷ್ಟಾವಕ್ರ !
_______________________

ಹಬೆಯಾಗಿಸಿದ ಸಾಗರ ಭುವಿಗಿಡಮರ 
ಜಲದೇಹಗಳ ಹೊಟ್ಟೆ ಮರುದುಂಬಿಸ್ವರ 
ಹುಡುಕಿ ನೀರಡಿಕೆಗೆ ಆಪೋಶನ ಪ್ರವರ 
ಮಳೆಯಾಗುವುದೆ ತಡ ಕಟ್ಟೆ ಕೆರೆ ಪೂರ!

ಕೆರೆಯ ನೀರ್ಚೆಲ್ಲೆ ಕೆರೆಯ ಭುವಿ ಶೇಖರ 
ಮತ್ತೆ ಜಲಚಕ್ರ ಆವರ್ತನಕೆ ಅನುಸಾರ 
ಮಳೆ ಜತೆ ಹಿಣಕಲ್ಲು ಬಿದ್ದರೇ ಸಿನುಕಲು 
ಹಿಮದುಂಡೆಯಾದರೆ ಮೈಮುಚ್ಚಿದ್ಹರಳು!

ನಿರಂತರ ಚಲನಚಕ್ರ ಜೀವಾಯು ಚಾಕರ 
ಹಗಲಿರುಳಿನ ದುಡಿಮೆ ಉಸಿರಾಟ ಭಾರ 
ವಿನಿಮಯಾನಿಲಗಳ ನಿಲದಾ ಸಂಚಾರ
ಜಲ ವ್ಯವಸಾಯದಲೆ ಸತ್ಯಸಾಕ್ಷಾತ್ಕಾರ!

ಸಮೃದ್ಧ ಹಬೆ ಹವೆ ಭಾಷ್ಪೀಕರಣ ಕವೆ
ಬಿಸಿ ತಂಪು ಶಾಖ ಲಾಭನಷ್ಟದ ಅರಿವೆ
ಬಿಸಿ ಧೂಪದಷ್ಟೆ ಮಳೆ ಬಹುರೂಪ ಶಿವೆ
ರೊಚ್ಚೋ ಕೆಚ್ಚೋ ಜಲ ಚಕ್ರ ಬವಣೆ ನವೆ!

------------------------------------------------------------------
ನಾಗೇಶ ಮೈಸೂರು
-------------------------------------------------------------------

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕವನಗಳೆರಡೂ ಚೆನ್ನಾಗಿ ಮೂಡಿಬಂದಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಪ್ರೇಮಾಶ್ರೀಯವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.