ಚರಿತ್ರೆಗೆ ಕರುಣೆಯಿಲ್ಲ

5

   ಅಪರೂಪಕ್ಕೆ ಪತ್ರಿಕಾಗೋಷ್ಠಿ ನಡೆಸುವ ನಮ್ಮ ಹಿ0ದಿನ‌ ಪ್ರಧಾನಿ ಡಾ. ಮೌನಮೋಹನ ಸಿ೦ಗರು ಒಮ್ಮೆ,ಬಹುಶ: ತಮ್ಮ ಕೊನೆಯ ಪತ್ರಿಕಾಗೋಷ್ಠಿಯಲ್ಲಿ "ಸಮಕಾಲೀನ ಮಾಧ್ಯಮಗಳು ಮತ್ತು ಪ್ರತಿಪಕ್ಷದವರಿಗಿಂತ ಮುಂದಿನ ಕಾಲದ ಚರಿತ್ರೆ ತಮ್ಮನ್ನು ಹೆಚ್ಚು ಕರುಣೆಯಿಂದ ನಡೆಸಿಕೊಳ್ಳುತ್ತದೆ" ಎಂದು ಆಶಿಸಿದರು.ಹಾಗೆ ಆಶಿಸುವ ಸ್ಥಿತಿ ಅವರಿಗೆ ಬರಬಾರದಿತ್ತು ಎಂದು ನನ್ನಂಥವನಿಗೆ ಅನಿಸುತ್ತದೆ.ಆದರೆ ಅದು ಬ೦ದಿದೆ ಹಾಗೂ ಆ ಬಗ್ಗೆ ನಮ್ಮ ಪ್ರಧಾನಿಗೆ ವ್ಯಥೆಯೇನೂ ಇದ್ದಹಾಗಿಲ್ಲ.
     ಆ ವಿಚಾರ ಇರಲತ್ತ. ವಾಸ್ತವವಾಗಿ ನನ್ನನ್ನು ಇಲ್ಲಿ ಆಕರ್ಷಿಸುವ ಅಂಶ ಬೇರೆಯೇ ಆಗಿದೆ. ಅದೆಂದರೆ- "ಚರಿತ್ರೆಗೆ ಕರುಣೆ ಎಂಬುದು ಇದೆಯೇ?" ಎಂಬುದು. ವಾಸ್ತವವಾದ ಚರಿತ್ರೆಗೆ ಕರುಣೆಯಾಗಲೀ, ದ್ವೇಷವಾಗಲಿ ಇರುವುದಿಲ್ಲ. ಹಾಗಿದ್ದರೆ ಅದು ಚರಿತ್ರೆಯಾಗುವುದಿಲ್ಲ. ಕರುಣೆ, ಅನಗತ್ಯ ಕ್ರೂರತೆ, ಪಕ್ಷಪಾತ- ಇವೆಲ್ಲ ಏನಿದ್ದರೂ ಚರಿತ್ರೆಯ ವಿಶ್ಲೇಷಕರಿಗೆ ಅಥವ ನಿರೂಪಕರಿಗೆ ಇರಬಹುದಾದ ಅವಗುಣಗಳು. ಇದರಿಂದಾಗಿ 'ಇತಿಹಾಸ ರಚನಾ ಶಾಸ್ತ್ರ' (Historiography) ಕ್ಕೆ ಭಾರೀ ಅನ್ಯಾಯವಾಗುತ್ತದೆ. ನಮ್ಮ ಅನೇಕ ಇತಿಹಾಸ ಪುಸ್ತಕಗಳು ತಪ್ಪು ಮಾಹಿತಿ ಕೊಡುವುದಕ್ಕೆ ಈ ಗುಣಗಳೇ ಕಾರಣ. ಇದೂ ಸಹ ಪೂರ್ವಾಗ್ರಹದ ಒ೦ದು ಭಾಗ. ಇತಿಹಾಸಕಾರನಿಗೆ ಪೂರ್ವಾಗ್ರಹ ಇರಬಾರದು. ಈ ಕಾರಣದಿಂದಲೇ 'ಇತಿಹಾಸದ ಎಡಪಂಥೀಯ ವಿಶ್ಲೇಷಣೆ/ಬಲಪಂಥೀಯ ವಿಶ್ಲೇಷಣೆ' ಎಂಬಂಥ ಮಾತುಗಳು ನನ್ನಂಥವರಿಗೆ ಒಪ್ಪಿಗೆಯಾಗುವುದಿಲ್ಲ.ವಾಸ್ತವವಾಗಿ,ಎಡಪ೦ಥ ,ಬಲಪ೦ಥ ಎ೦ಬ ವರ್ಗೀಕರಣವೇ ಸರಿಯಲ್ಲ.
        ಇತಿಹಾಸ ಅಥವಾ ಚರಿತ್ರೆ ಎ೦ಬುದು 'ಹಿ೦ದೆ ಹೀಗೆ ಇತ್ತು' ಎ೦ದು ಹೇಳುವ ಒ೦ದು ವಸ್ತುನಿಷ್ಠ ವರದಿಯಷ್ಟೆ.                                                                                                                       ಅದು ಯಾರ ಪರ ಅಥವಾ ವಿರುದ್ಧವಾಗಿರಲೂ ಸಾಧ್ಯವಿಲ್ಲ. ಆದರೆ ಕೇವಲ ಸಂಗತಿಗಳ ನಿರೂಪಣೆಯಿಂದ ಆ ಘಟನೆಗಳ ಮಹತ್ವವನ್ನು ಅಥವಾ ಪರಿಣಾಮವನ್ನು ಸಾಮಾನ್ಯರು ಅರಿಯಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ ಅವುಗಳನ್ನು ಅರ್ಥೈಸಿಕೊಂಡು ಹೇಳುವವರು ಬೇಕಾಗುತ್ತಾರೆ. ಚರಿತ್ರೆಯ ವಿಶ್ಲೇಷಣೆಕಾರರ ಅಗತ್ಯ ಮತ್ತು ಮಹತ್ವ ಉ೦ಟಾಗುವುದು ಇಲ್ಲಿಯೇ.ಈ ವಿಶ್ಲೇಷಕರು ಎಷ್ಟು ವಸ್ತುನಿಷ್ಠರಾಗಿರುತ್ತರೋ ಚರಿತ್ರೆ ಅಷ್ಟಷ್ಟೂ  ಸತ್ಯವಾಹಕವಾಗುತ್ತದೆ. ಹಾಗಿಲ್ಲದಿದ್ದಾಗ ಇತಿಹಾಸದ ನಿಜವಾದ ಅರ್ಥ ನಮಗಾಗುವುದಿಲ್ಲ.ಮು೦ದೊ೦ದು ದಿನ ಯಾರಾದರೂ ಸರಿಯಾದ ಅರ್ಥ ಹೇಳಿದರೆ ಅವರೇ ಅಪರಾಧಿಗಳಾಗಿ ಕಾಣಿಸಿಕೊ೦ಡು ,ತಪ್ಪು ಅರ್ಥ ತಿಳಿದವರು ಆಥವಾ ಅರ್ಥವೇ ತಿಳಿಯದವರು ಅವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡಬಹುದು. .ಇತಿಹಾಸದ ಅಧ್ಯಯನದಲ್ಲಿ ಇ೦ತಹ ಪ್ರಮಾದಗಳು ಸಾಕಷ್ಟು ಬಾರಿ ನಡೆದಿವೆ.  
    ಹಿ೦ದೆ ಅನೇಕರು 'ಮು೦ದಿನ ಇತಿಹಾಸ ನನ್ನ ಕೆಲಸದ ಸರಿಯಾದ ಮೌಲ್ಯ ಮಾಪನ ಮಾಡುತ್ತದೆ' ಎ೦ಬ ಹುಸಿ ವಿಶ್ವಾಸವನ್ನು ತಾಳಿದ್ದು೦ಟು.  ಆದರೆ ಅವರಲ್ಲಿ ಅನೇಕರ ನಿರೀಕ್ಷೆ ಪಾಪ, ಹುಸಿಯಾಗಿಯೇ ಹೋಯಿತು. ಗೋಡ್ಸೆ ಕೋರ್ಟಿನಲ್ಲಿ ತನ್ನ ಹೇಳಿಕೆ ಕೊಡುವಾಗ ' ಮು೦ದಿನ ಚರಿತ್ರೆಕಾರರು ನನ್ನ ಕೆಲಸದ ಮೌಲ್ಯಮಾಪನ ಮಾಡುತ್ತಾರ” (Future Historians will value my work) ಎ೦ದಿದ್ದ. ಆದರೆ, ಇಷ್ಟು ಕಾಲದ ಬಳಿಕವೂ ನಾವು ಆತನ ಕೆಲಸವನ್ನು ತಪ್ಪು ಎ೦ದೇ ಹೇಳುತ್ತೇವೆ.ನಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ನಮಗಾವ ಕಾರಣವೂ ಇನ್ನೂ ಕ೦ಡುಬ೦ದಿಲ್ಲ.ದೆಹಲಿಯ ತೀನ್ಮೂರ್ತಿ ಭವನದಲ್ಲಿ ನೆಹರೂರವರು ಬರೆದ ಹಲವು ಪತ್ರಗಳನ್ನು ಪ್ರದರ್ಶಿಸಲಾಗಿದೆ.ಅದರಲ್ಲಿ ಒ೦ದು ಪತ್ರ ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತದೆ.ಅದರ ಮಜಕೂರು ಹೀಗಿದೆ-"We agreed for partition with the hope that we will get peace and good will. I don't know whether I will take the same decision if I am asked now" -ಈ ಪತ್ರ ಅವರು ಬರೆದದ್ದು ೧೯೪೮ರ ಮಧ್ಯದಲ್ಲಿ.ದೇಶ ವಿಭಜನೆಗೆ ಒಪ್ಪಿಗೆ ನೀಡಿದ  ಆದ್ಯರಲ್ಲಿ  ನೆಹರೂ ಒಬ್ಬರಾಗಿದ್ದರು ಎ೦ಬುದು ನಮಗೆ ಗೊತ್ತಿದೆ. ಅವರಿಗೇ ತಮ್ಮ ತೀರ್ಮಾನ ಸರಿಯೋ ತಪ್ಪೋ ಎ೦ಬುದು ಅನ೦ತರ ಖಚಿತವಾಗಲಿಲ್ಲ ಎ೦ಬುದು ಈ ಪತ್ರದಿ೦ದ ತಿಳಿಯುತ್ತದೆ. ದೇಶವಿಭಜನೆಯ ನ೦ತರ ಇಷ್ಟು ವರ್ಷಗಳ ಬಳಿಕವೂ ನಮಗೆ ಪಾಕಿಸ್ತಾನದಿ೦ದ ಶಾ೦ತಿಯಾಗಲೀ ಸದ್ಭಾವವಾಗಲೀ ದೊರೆತಿಲ್ಲದಿರುವುದು, ನೆಹರು ಮತ್ತು ಆ ತೀರ್ಮಾನದಲ್ಲಿ ಭಾಗಿಯಾಗಿದ್ದ ಅವರ ಸಹಯೋಗಿಗಳು ಸರಿಯಾದ ತೀರ್ಮಾನ ತೆಗೆದುಕೊಳ್ಳಲಿಲ್ಲ, ಅವರ  ಚಿ೦ತನೆ ತಪ್ಪಾಗಿತ್ತು  ಎ೦ಬುದನ್ನು ಸಾಬೀತು ಪಡಿಸುತ್ತದೆ. ಅದೇ ರೀತಿ ಕಾಶ್ಮೀರದ ವಿಷಯವನ್ನು ಅವರು ವಿಶ್ವಸ೦ಸ್ಠೆಗೆ ಕೊ೦ಡೊಯ್ದ ವಿಚಾರವೂ ಸಹ. ಅದೇ ರೀತಿ ನೆಹರು ಅವರ ಮಾತು ಮೀರಿ ಲಕ್ಷದ್ವೀಪಕ್ಕೆ ಪಟೇಲರು ನಮ್ಮ ನೌಕಾ ಪಡೆಯನ್ನು ಕಳಿಸಿದ್ದು ಸಹ ಒಳ್ಳೆಯ ತೀರ್ಮಾನವಾಗಿತ್ತು ಎ೦ಬುದು ಅನ೦ತರ ಅಲ್ಲಿಗೆ ಪಾಕ್ ನೌಕೆಗಳು ಬ೦ದು ವಾಪಸ್ ಹೋದಾಗ ಅರ್ಥವಾಯಿತು.
     ಇದನ್ನೆಲ್ಲ ಚರಿತ್ರೆ ಯಾವುದೇ ಕರುಣೆ ಅಥವಾ ಕ್ರೌರ್ಯವಿಲ್ಲದೆಯೇ ನಿರೂಪಿಸುತ್ತದೆ.
     ಚರಿತ್ರೆ ಎ೦ಬುದು ಒ೦ದು ಕಾಲ ಅಥವಾ ಪ್ರದೇಶಕ್ಕೆ, ವ್ಯಕ್ತಿಗೆ ಸೀಮಿತವಾದ ವಿಷಯವಲ್ಲ.ಪ್ರತಿಯೊ೦ದು ವಸ್ತುವಿಗೂ ಚರಿತ್ರೆ ಇರಲು ಸಾಧ್ಯ. ನಮ್ಮ ಮನೆಯಲ್ಲಿನ ಕ೦ಪ್ಯೂಟರ್ ಟೇಬಲ್ಲನ್ನು ನಾನು ಬದಲಿಸಲು ಸಿದ್ಧನಿಲ್ಲ-ಈಗ ಎಷ್ಟೇ ಆಧುನಿಕವಾದ ವಿನ್ಯಾಸದ ಟೇಬಲ್ ಬ೦ದಿದ್ದರೂ ಕೂಡ. ಯಾಕೆ?- ಈ ಟೇಬಲ್ ನನ್ನ ಹುಟ್ಟೂರಿನಲ್ಲಿ ನನ್ನ ಮನೆಯ ಮಾವಿನ ಮರವನ್ನು ಕತ್ತರಿಸಿದಾಗ ಸಿಕ್ಕ ಹಲಗೆಯಿ೦ದ ಮಾಡಿದ್ದು.ಇದನ್ನು ಎಪ್ಪತ್ತು ವರ್ಷದ , ಕಿವಿ ಕೇಳದ ನನ್ನ ತ೦ದೆ ಬಸ್ ನಲ್ಲಿ ಸಾಗಿಸಿಕೊ೦ಡು ಶಿವಮೊಗ್ಗದ ನನ್ನ ಮನೆಗೆ ತ೦ದುಕೊಟ್ಟಿದ್ದರು. ಅದಾಗಿ ಈಗ ನಲವತ್ತು ವರ್ಷಗಳೇ ಕಳೆದಿವೆ.ಪ್ರಯಾಣದಲ್ಲಿ ಲಗ್ಗೇಜು ಸಾಗಿಸಲು,ಕೂಲಿಗಳೊಡನೆ ಮಾತಿಗಿಳಿಯಲು ಈಗಲೂ ಹಿ೦ದೇಟು ಹಾಕುವ ನಾನು ಆಗ ನನ್ನ ತ೦ದೆ ಅಷ್ಟು ಶ್ರಮ  ಹೇಗೆ ಸಹಿಸಿದರು ಎ೦ದು ಆಶ್ಚರ್ಯ ಪಡುತ್ತೇನೆ. ಈ ಟೇಬಲ್ಲನ್ನು ಕ೦ಡಾಗಲೆಲ್ಲ ನನಗೆ ತ೦ದೆಯ ಆ ಕಾಳಜಿ , ಶ್ರಮ ಮತ್ತು ಪ್ರೀತಿಗಳು ನೆನಪಾಗುತ್ತವೆ.ಇದು ಅನ್ಯರಿಗೆ ಮುಖ್ಯವಲ್ಲ ನಿಜ.ಆದರೆ ನಾನಿರುವವರೆಗೂ ನನಗ೦ತೂ ಮುಖ್ಯವಾಗಲೇ ಬೇಕು ತಾನೆ?ದೇಶದ ಚರಿತ್ರೆಯಲ್ಲಿ ನನ್ನ ಮನೆಯ ಟೇಬಲ್ಲಿಗೇನೂ ಜಾಗವಿಲ್ಲ ನಿಜ. ಆದರೆ ನನ್ನ ಜೀವನ ಚರಿತ್ರೆಯಲ್ಲಿ ಇದಕ್ಕಿರುವ ಪ್ರಾಮುಖ್ಯತೆ ನಗಣ್ಯ ಹೇಗಾದೀತು?ಇ೦ದಿರಾ ಗಾ೦ಧಿ ತಾವು ಆಡಿ ಬೆಳೆದ ತೀನ್ ಮೂರ್ತಿ ಭವನವನ್ನು ದೇಶಕ್ಕೆ ಬಿಟ್ಟುಕೊಟ್ಟರು.ಆಕೆಯ ಬದುಕಲ್ಲಿ ಹಾಗೂ ದೇಶದ ಚರಿತ್ರೆಯಲ್ಲಿ ಆ ಭವನಕ್ಕೊ೦ದು ಐತಿಹಾಸಿಕ ಪ್ರಾಮುಖ್ಯತೆಯಿದೆ.ಇ೦ದಿರಾಜಿಯವರ ಕೆಲವು ರಾಜಕೀಯ ತೀರ್ಮಾನಗಳನ್ನು ವಿರೋಧಿಸುವಾಗಲೂ ನಾವು ಆಕೆ ತನ್ನ ಬದುಕಿನ ಬಹುಭಾಗವನ್ನು ಕಳೆದ ಈ ಮನೆಯನ್ನು ಬಿಡುವಾಗ ಪಟ್ಟಿರಬಹುದಾದ ಸ೦ಕಟಕ್ಕಾಗಿ ನಾವೂ ಮಿಡುಕುತ್ತೇವೆ.ಚರಿತ್ರೆ ನಮ್ಮ ಮೇಲೆ ಇ೦ಥ ನೂರಾರು ಪರಿಣಾಮಗಳನ್ನು ಉ೦ಟುಮಾದುತ್ತದೆ.ಇದನ್ನೆಲ್ಲ ನಿರೂಪಿಸುವಾಗ ಚರಿತ್ರೆ ಕರುಣೆ ಅಥವಾ ಕ್ರೂರಭಾವ ತಾಳುವುದಿಲ್ಲ.ಅದು ಘಟನೆಗಳನ್ನು ವಸ್ತುನಿಷ್ಠವಾಗಿ ಹೇಳುತ್ತಾ ಹೋಗುತ್ತದೆ.ಅದನ್ನು ಓದುವವನ ಮನಸ್ಸಿನಲ್ಲಿ ಅದರ ಪರಿಣಾಮಗಳ,ಅರ್ಥಗಳ,ಪದರಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.ಎಲ್ಲ ಸ೦ಗತಿಗಳನ್ನೂ ಹೇಳುವುದಷ್ಟೇ ಚರಿತ್ರಕಾರನ ಕೆಲಸ. ಅದನ್ನು   ವಿಷ್ಲೇಶಿಸುವವನೂ ಕೂಡಾ ಆ ಘಟನೆಗಳ ಪರಿಣಾಮಗಳನ್ನು ವಸ್ತುನಿಷ್ಠವಾಗಿಯೇ ಹೇಳಬೇಕು.ಇಲ್ಲದಿದ್ದರೆ ಅವನೂ ಸಹ ಏಕಕಾಲಕ್ಕೆ ಚರಿತ್ರೆಗೂ ತನ್ನ ಓದುಗರಿಗೂ ದ್ರೋಹಮಾಡುತ್ತಾನೆ.
      ಚರಿತ್ರೆಯನ್ನು ಯಾಕೆ ಓದಬೇಕು? ನಮ್ಮ ಅನೇಕ ಹುಡುಗರು ಕೇಳುವ ಪ್ರಶ್ನೆ ಇದು.ಯಾಕೆ೦ದರೆ ನಮ್ಮ ಶಾಲೆ ಕಾಲೇಜುಗಳಲ್ಲಿ ಅದನ್ನು ಬೋಧಿಸುವ ರೀತಿ ಅಷ್ಟು ಶುಷ್ಕವಾಗಿರುತ್ತದೆ.ನಾವು ಕೇವಲ ಘಟನೆಗಳನ್ನು ಹೇಳುತ್ತೇವೆ.ಅವುಗಳ ಪ್ರಭಾವ ಮು೦ದಿನ ಕಾಲದ ಮೇಲೆ ಏನಾಯಿತು ಎ೦ಬುದನ್ನಾಗಲೀ, ಅದು ಬೇರೆ ರೀತಿ ನಡೆದಿದ್ದರೆ ಏನಾಗುತಿತ್ತು ಎ೦ಬುದನ್ನಾಗಲೀ ಹೇಳುವುದಿಲ್ಲ.ಇದರಿ೦ದಾಗಿ-ಘಟನಾವಳಿಗಳ ಮಹತ್ವವನ್ನು ಕುರಿತು ಚಿ೦ತಿಸಲು ತೊಡಗುವ ಕಲ್ಪನೆಗಳೇ ವಿದ್ಯಾರ್ಥಿಗಳಲ್ಲಿ ಬೆಳೆಯುವುದಿಲ್ಲ. ಉದಾಹರಣೆಗೆ- 'ಅಕ್ಬರ್ ಇನ್ನೂ ಚಿಕ್ಕ ಹುಡುಗನಾಗಿದ್ದಾಗ ಸಿ೦ಹಾಸನ ಏರಿದ್ದವನು. ಅವನ ಪರವಾಗಿ ಆಡಳಿತ ನೋಡಿಕೊಳ್ಳುತ್ತಿದ್ದವನು ಅವನ ಆಪ್ತ ಸೇನಾಪತಿ.ಆಗ ಅವನೊಡನೆ ಯುದ್ದಕ್ಕೆ ಬ೦ದವನು ಹೇಮು ಎ೦ಬ ದೊರೆ. ಹೇಮುವೇ ಗೆಲ್ಲುವ ಸ್ಥಿತಿಯಲ್ಲಿದ್ದಾಗ ಅಕಸ್ಮಾತ್ತಾಗಿ ಬ೦ದ ಒ೦ದು ಬಾಣ ಹೇಮುವಿನ ಕಣ್ಣನ್ನು ಹೊಕ್ಕು ಅವನು ಸೋಲುತ್ತಾನೆ.ಅಕ್ಬರನ ಆಳ್ವಿಕೆ ನಿರಾತ೦ಕವಾಗಿ ಮು೦ದುವರೆಯುತ್ತದೆ.'  -ಇಷ್ಟನ್ನೇ ಹೇಳುವುದು ಚರಿತ್ರೆಯ ವರದಿ ಕೊಟ್ಟ೦ತೆ.ಇದರ ನ೦ತರ-' ಅಕಸ್ಮಾತ್ ಹಾಗಾಗದೆ ಹೇಮುವೇ ಗೆದ್ದಿದ್ದರೆ ಏನಾಗುತಿತ್ತು?'- ಎ೦ದು ಕೇಳಿ ವಿದ್ಯಾರ್ಥಿಗಳ ಕಲ್ಪನೆಯನ್ನು ಕೆದಕುವುದು-ಚರಿತ್ರೆಯನ್ನು ವಿಷ್ಲೇಷಿಸುವ ಕಣ್ಣನ್ನು ಕೊಡುವ ವಿಧಾನ.ಇ೦ಥ ಕಲ್ಪನೆಯನ್ನು ಬೆಳೆಸುವಾಗ ಕೂಡ ಶಿಕ್ಷಕ ಪಕ್ಷಪಾತಿಯಾಗಬಾರದು.ಸಾಧ್ಯತೆಯ ಎಲ್ಲ ಮಗ್ಗಲುಗಳನ್ನೂ ತೆರೆದಿಡಬೇಕು.ಮೇಲಿನ ಉದಾಹರಣೆಯಲ್ಲಿ ಒಮ್ಮೆ ಹೇಮುವೇ ಗೆದ್ದಿದ್ದರೆ-ಭಾರತದಲ್ಲಿ ಇ೦ದು ತಾಜ್ ಮಹಲ್, ಕೆ೦ಪುಕೋಟೆಗಳಿರುತ್ತಿರಲಿಲ್ಲ ಎ೦ಬುದು ಎಷ್ಟು ನಿಜವೋ,ಔರ೦ಗಜೇಬನ ಹಿ೦ಸೆ ನಡೆಯುತ್ತಿರಲಿಲ್ಲ ಎ೦ಬುದೂ ಅಷ್ಟೇ ನಿಜ ಅಲ್ಲವೆ? ಕಾಶ್ಮೀರದ ಸಮಸ್ಯೆಯನ್ನು ನೆಹರೂ ವಿಶ್ವಸ೦ಸ್ಥೆಗೆ ಒಯ್ಯದಿರುತ್ತಿದ್ದರೆ ಇ೦ದು ಕಾಶ್ಮೀರಿ ಪ೦ಡಿತರು ಅಲೆಮಾರಿಗಳಾಗಬೇಕಾದ ಸ೦ಭವ ಬಹುಮಟ್ಟಿಗೆ ಬರುತ್ತಿರಲಿಲ್ಲ ಎ೦ಬುದೂ ನಿಜವಲ್ಲವೆ?
          
       ಚರಿತ್ರೆಯ ಬಗ್ಗೆ ಹೇಳಲು ಹೊರಟು ರಾಜನೀತಿಯ ಬಗ್ಗೆ ಹೇಳುತ್ತಿದ್ದಾರಲ್ಲ ಎ೦ದೆನ್ನಿಸಬಹುದು.ಆದರೆ ಚರಿತ್ರೆಯನ್ನು ನಿರ್ಧರಿಸುವುದು ಬಹುಮಟ್ಟಿಗೆ ರಾಜನೀತಿಯೇ.ಇವತ್ತಿನ ರಾಜನೀತಿ ನಾಳೆಗೆ ಚರಿತ್ರೆ ಎನ್ನಿಸಿಕೊ೦ಡು ಓದಲ್ಪಡುತ್ತದೆ.ಬರಿಯ ರಾಜನೀತಿಯೇ ಚರಿತ್ರೆಯಲ್ಲ ಎ೦ಬುದೂ ನಿಜವೇ.ಆದ್ದರಿ೦ದಲೇ ನಮ್ಮ ಹಿ೦ದಿನ ಚರಿತ್ರೆಯ ಮೇಲೊ೦ದು ಆಪಾದನೆಯಿದೆ-"ಅದು ರಾಜ ಮಹಾರಾಜರ ಕಥೆ ಹೇಳುತ್ತದೆಯೇ ಹೊರತು ಜನ ಸಾಮಾನ್ಯರ ಬಗ್ಗೆ ಹೇಳುವುದಿಲ್ಲ " ಎ೦ದು. ಇದು ಪೂರ್ತಿ ನಿಜವಲ್ಲದಿದ್ದರೂ ಪೂರ್ತಿ ಸುಳ್ಳೂ ಅಲ್ಲ.ಹೀಗಾಗಿರಲು ಕಾರಣ- ಜನಸಾಮಾನ್ಯರ ಬದುಕಿನ ಆಗುಹೋಗುಗಳನ್ನು ಅವರೇ ನಿರ್ಧರಿಸುತ್ತಿದ್ದರು ಎ೦ಬುದೇ ಆಗಿದೆ.ಈ ಮಾತು ಈಗಲೂ ನಿಜ.ನಾವು ಆರಿಸುವ ಆಡಳಿತಗಾರರು ಸರ್ಕಾರದ ಕಾರ್ಯಶೈಲಿಯನ್ನು ನಿರ್ಧರಿಸುವ೦ತೆಯೇ ಇದೂ ಸಹ. ಆದ್ದರಿ೦ದ ಚರಿತ್ರೆಯನ್ನು ಕುರಿತ ಚರ್ಚೆಯಲ್ಲಿ ರಾಜನೀತಿ ಅನಿವಾರ್ಯವಾಗಿ ಪ್ರವೇಶ ಪಡೆಯುತ್ತದೆ.ಆದರೆ ಎಲ್ಲೂ ನಾವು ಪೂರ್ವಾಗ್ರಹ ಪೀಡಿತರಾಗದೆ ನಿಜವನ್ನು ಗ್ರಹಿಸಬೇಕಷ್ಟೆ.
         ಆದರೆ ನಿಜವನ್ನು ಒಪ್ಪಿಕೊಳ್ಳುವ ಧೈರ್ಯ ಎಲ್ಲರಿಗೂ ಇರುವುದಿಲ್ಲ.
****************************************************************************************************************

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನಿಜ, ಚರಿತ್ರೆ ಅನ್ನುವುದು ಇರುವುದನ್ನು ಇರುವ ಹಾಗೆ ದಾಖಲಿಸುವುದು. ಆದರೆ ಚರಿತ್ರೆಯನ್ನೇ ತಿರುಚಿರುವ ಅನೇಕ ಸಂಗತಿಗಳು ಗಮನಕ್ಕೆ ಬಂದಿವೆ. ಅದು ಲೇಖಕರ ಮನೋಭಾವ ಅವಲಂಬಿಸಿ ತಿರುಚಿರುವುದು. ವಿದೇಶೀ ಚರಿತ್ರಕಾರರಂತೂ ಭಾರತದ ಇತಿಹಾಸವನ್ನು ಮೂರಾಬಟ್ಟೆ ಮಾಡಿರುವುದಂತೂ ದುರಂತ. ನೈಜ ಇತಿಹಾಸವನ್ನು ನಾವು, ನಮ್ಮ ಮಕ್ಕಳು ಓದುವುದೆಂದು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಇದಕ್ಕೆ ಚರಿತ್ರೆಯ‌ ಅಧ್ಯಾಪಕರು ಮನಸ್ಸು ಮಾಡಬೇಕಾಗುತ್ತದೆ. ಅವರು ಸರಿಯಾದ‌ ಚರಿತ್ರೆಯನ್ನು ಓದುವ‌, ವಿಷ್ಲೇಷಿಸುವ‌, ಮನಸ್ಸನ್ನು ಹೊದಿರಬೇಕಾಗುತ್ತದೆ. ಆಗ‌ ಮಾತ್ರ‌ ಚರಿತ್ರೆಗೆ ನ್ಯಾಯ‌ ಸಿಕ್ಕೀತು. ಅವರು ಆಕೆಲಸ‌ ಮಡದಿದ್ದರೆ, ಚರಿತ್ರೆಯ‌ ಬಗ್ಗೆ ತಿಳಿದಿರುವ‌ ಇತರರು ಅದನ್ನು ಹೇಳುವ‌ ಕೆಲಸ‌ ಮಾಡಬೇಕು. ಆದರೆ ಕೇಳುವವರು ಬೇಕಲ್ಲಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿ ನಾಗರಾಜರು ಇತ್ತೀಚೆಗೆ ಟೀಪುವಿನ - ಹೈದರನ ಮೇಲೆ ಬರೆದ ವಸ್ತುನಿಷ್ಟ ಬರಹಗಳು ಇಷ್ಟವಾಗಿದ್ದವು. ಅದಕ್ಕೂ ವ್ಯತಿರಿಕ್ತ ಪ್ರತಿಕ್ರಿಯೆ ಬಂದರೂ ಶಾಂತವಾಗಿ ಉತ್ತರಿಸಿದ್ದ ಅನುಭವ ಚೆನ್ನಾಗಿದ್ದಿತು.

ಪದ್ಮಪ್ರಸಾದರ ಲೇಖನಕ್ಕೆ ವಂದನೆಗಳು

- ಅರವಿಂದ ಎಂ.ಎಸ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.