ಘರ್ಜನೆ ನಿಲ್ಲಿಸಿದ ಹುಲಿ

4.333335

 

ಬಾಳಾ ಸಾಹೇಬ್ ಠಾಕ್ರೆ ಹೆಸರು ಕೇಳಿದೊಡನೆ ದೇಶಪ್ರೇಮಿಗಳಲ್ಲೇನೋ ಪುಳಕ, ಆತ ನಿಜವಾದ ಹುಲಿ ಎಂಬ ಉದ್ಗಾರ. ಮಹಾರಾಷ್ಟ್ರ ಕಂಡ ಅದ್ಭುತ ಸಂಘಟನಾ ಚತುರ. ಹಿಂದುಗಳ ಸ್ವಾಭಿಮಾನ ಬಡಿದೆಬ್ಬಿಸಲು ಶ್ರಮಿಸಿದ ನೇತಾರ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ವಿಷಯಾಧಾರಿತ ಪತ್ರಿಕೆಯೊಂದನ್ನು ಸಂಘಟನೆಗಾಗಿ ಬಳಸಿಕೊಂಡ ಪತ್ರಕಾರ. 
ಅತಿಯಾದ ಉಗ್ರ ಮಹಾರಾಷ್ಟ್ರೀಯತೆ, ವ್ಯತಿರಿಕ್ತ ನಿಲುವುಗಳು, ಕರ್ನಾಟಕದ ಬೆಳಗಾವಿ ವಿಷಯದಲ್ಲಿ ಸದಾ ಕಾಲ್ಕೆರೆತ, ಉತ್ತರ ಭಾರತೀಯರ ಜೊತೆ ವೈರುಧ್ಯ, ಹಿಟ್ಲರ್ ಮತ್ತಿತರ ಬಗೆಗಿನ ವಿವಾದಾತ್ಮಕ ಹೇಳಿಕೆಗಳಂತಹ ರಾಜಕೀಯ ಅನಿವಾರ್ಯತೆಯ ಹೊರತಾಗಿಯೂ ನಮಗೆ ಠಾಕ್ರೆ ಇಷ್ಟವಾಗುತ್ತಾರೆ. ಅವರ ನಿಖರ ನಿಲುವು, ಪ್ರಖರ ಭಾಷಣ, ಸಂಘಟನಾ ಚತುರತೆ, ರಾಜಕೀಯ ಚಾಣಾಕ್ಷತನ, ದೇಶಪ್ರೇಮ ಎಂಥವರನ್ನು ಆಕರ್ಷಿಸುತ್ತದೆ.
 
ಸಂಯುಕ್ತ ಮಹಾರಾಷ್ಟ್ರದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವೃತ್ತಿಯಿಂದ ಪತ್ರಕರ್ತರಾಗಿದ್ದ ಕೇಶವ ಸೀತಾರಾಮ್ ಠಾಕ್ರೆಯವರ ಮಗನಾಗಿ ಬಾಳಾ ಜನಿಸಿದ್ದು 1926 ರ ಜನೇವರಿ 23ರಂದು. ಕೇಶವ ಠಾಕ್ರೆ ಅವರು ಬರೆಯುತ್ತಿದ್ದ ಪ್ರಭೋದನ್ ಅಂಕಣದಿಂದ ಪ್ರಬೋಧನ್ ಠಾಕ್ರೆ ಎಂದು ಹೆಸರಾಗಿದ್ದರು. ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಗೆ ವ್ಯಂಗ್ಯಚಿತ್ರಕಾರಾಗಿ ವೃತ್ತಿ ಆರಂಭಿಸಿದ ಬಾಳಾ ಠಾಕ್ರೆ ಮುಂದೆ ತಮ್ಮದೇ ಆದ ಪತ್ರಿಕೆ ಮಾರ್ಮಿಕ್ ನ್ನು ಆರಂಭಿಸಿದರು. ಸಂಡೇ ಟೈಮ್ಸಗೂ ವ್ಯಂಗ್ಯಚಿತ್ರ ಬರೆಯುತ್ತಿದ್ದರು. 1966ರಲ್ಲಿ ಶಿವಸೇನಾ ಸಂಘಟನೆಯನ್ನು ಹುಟ್ಟುಹಾಕಿ ಮಹಾರಾಷ್ಟ ಸಂಪೂರ್ಣ ಮಹಾರಾಷ್ಟ್ರೀಯರದೇ, ಮುಂಬೈ ನಮ್ಮದು ಎಂಬ ಜನಪ್ರೀಯ ವಿಷಯಗಳನ್ನೆತ್ತಿಕೊಂಡು ಸಂಘಟನೆ ಬೆಳೆಸಿದರು. ನಂತರ ಶಿವಸೇನಾವನ್ನು ರಾಜಕೀಯ ಪಕ್ಷವಾಗಿ ಮಾರ್ಪಡಿಸಿದರು. 
 
ಪ್ರಖರ ಹಿಂದುತ್ವಕ್ಕೆ ತಮ್ಮನ್ನು ಒಗ್ಗಿಸಿಕೊಂಡು ಹಿಂದೂ ಹೃದಯ ಸಾಮ್ರಾಟ್ ಎನ್ನಿಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆದರು. ಮೊದಲು ಮುಂಬೈ ಮಹಾನಗರ ಪಾಲಿಕೆ, ನಂತರ ಮಹಾರಾಷ್ಟ್ರದ ಆಡಳಿತ ಚುಕ್ಕಾಣಿಯನ್ನು ಬಿಜೆಪಿಯೊಂದಿಗೆ ಹಿಡಿದರೂ ಕಿಂಗ್ ಮೇಕರ್ ಆಗಿಯೇ ಉಳಿದರು. ಸರ್ಕಾರದ ರಿಮೋಟ್ ಕಂಟ್ರೋಲ್ ಎಂದು ವಿರೋಧಿಗಳಿಂದ ಜರಿಸಿಕೊಂಡರೂ, ತಮ್ಮ ಸರ್ಕಾರದಿಂದ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಲು ಮಾರ್ಗದರ್ಶನ ಮಾಡಿದರು. ಆ ಅವಧಿಯಲ್ಲಿ ಮುಂಬೈ ನಗರದ ಅನೇಕ ಸ್ಲಂ ಗಳು ಅಭಿವೃದ್ಧಿ ಕಂಡವು. ಮಹಾನಗರ ಒಂದರಲ್ಲೇ ಅನೇಕ  flyಓವರ್ ಗಳು ತಲೆ ಎತ್ತಿದವು. ಬಹು ಬೇಗನೆ ಪುಣೆ ಮುಂಬೈ ಎಕ್ಸ್‍ಪ್ರೆಸ್ ಹೆದ್ದಾರಿ ನಿರ್ಮಾಣವಾಯಿತು. ಯಾವುದೇ ಯೋಜನೆ ಪ್ರಸ್ತಾವ ಬಂದಾಗಲೂ ಅದರಿಂದ ರೈತರಿಗೇನು ಉಪಯೋಗ? ರೈತಪರ ಯೋಜನೆಗಳಿದ್ದರೆ ಹೇಳಿ ಎಂದು ಅನೇಕರ ಮುಖದ ಮೇಲೆ ಹೊಡೆದ ಹಾಗೆ ಹೇಳಿದ್ದೂ ಇದೆ.
ಅವರು ವರ್ಣರಂಜಿತ ವ್ಯಕ್ತಿ. ಈಗಾಗಲೇ ಅವರ ಜೀವನಾಧರಿತ ಎರಡು ಸಿನಿಮಾಗಳು ಬಂದುಹೋಗಿವೆ. ಭಾರತ ಚುಣಾವಣಾ ಆಯೋಗ 1999 ರಿಂದ 2005ರ ವರೆಗೆ ಅವರನ್ನು ಮತದಾನದ ಹಕ್ಕಿಂದ ದೂರವಿರಿಸಿತ್ತು. ರಸ್ತೆ ಅಪಘಾತದಲ್ಲಿ ಹಿರಿಮಗನ ಅಕಾಲಿಕ ಸಾವು, ಪತ್ನಿ ವಿಯೋಗದ ನೋವು ಅವರಲ್ಲಿದ್ದರೂ ಅದನ್ನು ತೋರ್ಪಡಿಸದೇ ತಮ್ಮನ್ನು ನಂಬಿದ ಜನರÀ ಶ್ರೇಯೋಭಿವೃದ್ಧಿಗೆ ಅವರು ಸದಾ ಚಿಂತಿಸುತ್ತಿದ್ದರು. ತಮ್ಮನ ಮಗ ರಾಜ್ ಠಾಕ್ರೆಯೊಂದಿಗಿನ ಭಿನ್ನಾಭಿಪ್ರಾಯ, ಮಗ ಉದ್ಧವನನ್ನು ಮುಂಚೂಣಿಗೆ ತರಲು ನಡೆಸಿದ ಸೆಣೆಸಾಟದ ಅಪಯಶಸಸ್ಸು ಅವರನ್ನು ಹಣ್ಣಗಾಗಿಸಿದ್ದು ಸುಳ್ಳಲ್ಲ.
 
ಅನೇಕ ವೈಪರೀತ್ಯಗಳ ನಡುವೆಯೂ, ಹುಲಿ ಹುಲಿಯೇ. ದೇಶಾಭಿಮಾನದ ವಿಷಯದಲ್ಲಿ ಘರ್ಜಿಸುತ್ತಿದ್ದ ಹುಲಿ ಘರ್ಜನೆ ನಿಲ್ಲಿಸಿದ್ದು ಕೋಟ್ಯಾಂತರ ಅಭಿಮಾನಿಗಳಿಗೆ ಶೂನ್ಯ ಆವರಿಸಿದಂತಾಗಿದೆ. ರಾಜಕೀಯ ಅನಿವಾರ್ಯತೆಗಳ ಹೊರತಾಗಿಯೂ ಅವರಲ್ಲಿಯ ಒಳ್ಳೆಯ ಗುಣಗಳು, ಒಳ್ಳೆಯ ಧ್ಯೇಯಗಳು ಮುಂದಿನವರಿಗೆ ಮಾದರಿಯಾಗಲಿ. ನಮಗೆ ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಹೃದಯ ವೈಶಾಲ್ಯಕ್ಕೆ ಹೆಸರಾದ ಕನ್ನಡಿಗರಾದ ನಾವು ಅವರಿಗಾಗಿ ಆಶೃತರ್ಪಣ ಸಲ್ಲಿಸೋಣ.
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆತ್ಮೀಯರೇ, ಸಕಾಲಿಕವಾಗಿ ನಿಮ್ಮ ಲೇಖನ ಬಂದಿದೆ. ಬಾಳಾ ಠಾಕ್ರೆ ಅವರ ಸಂದರ್ಶನವೊಂದರಲ್ಲಿ ಅವರುಗಳು ನೀಡಿದ ಉತ್ತರ ಅತ್ಯಂತ ಮೊನಚಾಗಿತ್ತು. ಅವರಿಗಿದ್ದ ಸಾಮಾಜಿಕ ಕಳಕಳಿ ಅವರ ಮಾತುಗಳಲ್ಲಿ ಬಿಂಬಿತವಾಗಿತ್ತು. ಬಾಳಾ ಅವರ ಅಂತ್ಯ ಸಂಸ್ಕಾರಕ್ಕೆ ನೆರದಿದ್ದ ಜನ ಸಾಗರ ಅವರ ಜನಪ್ರಿಯತೆಯನ್ನು ಸಾರುತ್ತದೆ. ನಿಮ್ಮ ಲೇಖನ ಚನ್ನಾಗಿ ಮೂಡಿ ಬಂದಿದೆ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.