ಕುಪ್ಪಳ್ಳಿಯಲ್ಲಿ ಐದು ದಿನಗಳು

5

ಕುಪ್ಪಳ್ಳಿಯಲ್ಲಿ ಐದು ದಿನಗಳು

ಮೈಸೂರಿನ ಕುಕ್ಕರಳ್ಳಿ ಕೆರೆಯ ನಿಸರ್ಗ ಸಿರಿಯು, ತನ್ನೊಡಲಲ್ಲಿ ನೊಚ್ಚನೆ ಹಿಡಿದಿಟ್ಟುಕೊಂಡ ಕವಿ ಕುವೆಂಪುವಿನ ನೆನಪುಗಳನ್ನು, ತನ್ನ  ನಿತ್ಯ ಸೌಂದರ್ಯದ ಮೂಲಕ ಹೊರಚೆಲ್ಲುತ್ತಿತ್ತು. ಸಮಾನ್ಯರಿಗಿಂತ ಕವಿಯ ಕಾವ್ಯ, ಕಾದಂಬರಿ, ಲೇಖನಗಳ ಪರಿಚಯವಿದ್ದವರಿಗೆ, ಅದರಲ್ಲಿಯೂ ಕವಿಯು ಕುಕ್ಕರಳ್ಳಿಯಲ್ಲಿ ಕಳೆದ ಸಂದರ್ಭಗಳ, ಅದರ ಮೇಲೆ ಅವರು ಬರೆದ ಕವನಗಳ ಪರಿಚಯವಿದ್ದವರಿಗಂತೂ ಇಲ್ಲಿನ ಪ್ರಕೃತಿ ಸೌಂದರ್ಯದ ವಿಶಿಷ್ಟ ಮುಖವೊಂದೇ ಗೋಚರವಾಗುತ್ತದೆ. ನನಗೂ ಅಂತೆಯೇ ಒಮ್ಮೆ ಆ ವಿಶಿಷ್ಟಾನುಭವದ ಅಭಿಗಮನವಾಗಿತ್ತು. ಸಾಮಾನ್ಯವಾಗಿ ಕೆರೆಯನ್ನು ಒಂದು ಸುತ್ತು ಹಾಕುತ್ತಿದ್ದ ನಾನು, ನನಗರಿವಿಲ್ಲದಂತೆ ಅಂದು ಕವಿಕೃತಿಗಳ ಬಗ್ಗೆಯೇ ಯೋಚಿಸುತ್ತ ಎರೆಡು ಸುತ್ತು ಹಾಕಿದ್ದೆ. ಕವಿಲೋಕ ಸಂಚಾರಿಯಾಗಿ, ಮನಸ್ಸು ಕವಿ ಕೃತಿಗಳಲ್ಲಿ ವಿಮಗ್ನವಾಗಿ, ಸಮಯದ ಅರಿವೇ ಇಲ್ಲದೆ, ವಾಸ್ತವ ಪ್ರಪಂಚದ ಪ್ರಜ್ಞೆಯೇ ಇಲ್ಲದೆ, ಒಂದು ಅಪೂರ್ವ ಅಮೂರ್ತ ಮನೋಸ್ಥಿತಿಯನ್ನು ತಲುಪಿ ರಸಾವೇಶದಿಂದ ಆವೃತನಾಗಿಬಿಟ್ಟಿದ್ದೆ. ಇಂತಹ ರಸನಿಮಿಷದಲ್ಲೇ ಕವಿಮನೆ, ಕವಿಶೈಲವಿರುವ ಕುಪ್ಪಳಿಗೆ ಈ ಬಾರಿ ಮತ್ತೆ ಹೋಗುವ, ಸಹ್ಯಾದ್ರಿಯನ್ನು ಕವಿಮುಖವಾಗಿ ಮತ್ತೆ ಅನುಭವಿಸುವ ಹಂಬಲವುಂಟಾಯಿತು. ಕುಕ್ಕರಳ್ಳಿಯಲ್ಲಿ ಕಳೆದ ಈ ಒಂದು ಗಂಟೆಯೇ ಇಷ್ಟು ಉಲ್ಲಾಸದಾಯಕವಾಗಿರಬೇಕಾದರೆ, ಇನ್ನು ಕುಪ್ಪಳ್ಳಿಯ ಸುತ್ತ ಮುತ್ತ ಮಹಾಕವಿ ಕಂಡ ತಾಣಗಳನ್ನು ನೋಡಿದರೆ, ಅದರ ಅನುಭವ ತೀಕ್ಷ್ಣತೆ ಇನ್ನೆಷ್ಟು ರಸೋಲ್ಲಾಸವಾಗಿರಬಾರದು? ಎಂದೆನಿಸಿ, ಫ಼ೆಬ್ರವರಿ ತಿಂಗಳ ಕೊನೆಗೆ ಅಲ್ಲಿಗೆ ಹೊರಡುವುದೆಂದು ತೀರ್ಮಾನಿಸಿ ಬಿಟ್ಟೆ. ಮೂರು ದಿನದ ಭೇಟಿಗಾಗಿ ಯೋಜನೆಯಾಕಿದ್ದ ನಾನು ಕೊನೆಗೆ ಅದನ್ನು ಐದು ದಿನವಾಗಿಸಿಬಿಟ್ಟೆ ....ಎಲ್ಲಾ ಅದೃಷ್ಟದ ಲೀಲೆಯೋ.? ಅಥವಾ ಸಕಲ ಲೋಕಕ್ರಿಯೆಗಳು ಯಾವುದರ ಅಧೀನದಲ್ಲಿ ನಡೆಯುತ್ತಿರುವುದೋ, ಆ ವಿಧಿಯ ಪೂರ್ವನಿರ್ಧಾರವೋ..? ಅಂತೂ ನಾನಂದುಕೊಂಡಂತೆಯೇ ಒಂದು ಮಂಗಳವಾರ ಬೆಂಗಳೂರಿನಿಂದ ಶೃಂಗೇರಿಗೆ ಹೋಗುವ ಬಸ್ಸನ್ನು ಹತ್ತಿದೆ.

        "ಹೋಗುವೆನು ನಾ, ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;

         ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವೆಯ ರೂಢಿಗೆ.

         ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ;

        ಹಸಿರು ಸೊಂಪಿನ, ಬಿಸಿಲು ತಂಪಿನ, ಗಾನದಿಂಪಿನ ಕೂಡಿಗೆ...... ........"   

ಎಂದು ಅಂದು ಕವಿ ತನ್ನ ಸ್ವಂತದೂರಿಗೆ ಹೋಗುವ ಸಂಭ್ರಮದಲ್ಲಿ ಬರೆದ ಕವನವನ್ನು ಮೆಲಕು ಹಾಕುತ್ತ, ನಾನು ಕೂಡ ಕವಿಯ ನಾಡಿಗೆ ಹೋಗಲು ಸಂಭ್ರಮಿತನಾಗಿದ್ದೆ. ಜೊತೆಗೆ "ಮಲೆಗಳಲ್ಲಿ ಮದುಮಗಳು" ಕಾದಂಬರಿಯನ್ನೂ ತೆಗೆದಿರಿಸಿಕೊಂಡಿದ್ದೆ. ಸಮಯ ಸಿಕ್ಕಾಗೆಲ್ಲ ಈ ಕಾದಂಬರಿಯನ್ನು ಓದಿಕೊಳ್ಳಬಹುದೆಂದು. ಮಹಾಕವಿಯೊಬ್ಬರ ಪ್ರತಿಭೆಗೆ ಸ್ಪೂರ್ತಿಶಾಯಿಯಾಗಿ, ಕನ್ನಡ ಸಾರಸ್ವತ ಲೋಕ, ಕನ್ನಡ ಜನಮನ ಎಂದೂ ಮರೆಯದ ಮಹಾಕಾಂದಬರಿಯೊಂದು ಜನ್ಮತಳೆವಂತೆ ಮಾಡಿದ ಮೋಹಕ ಮಲೆನಾಡಿನ ಸಮ್ಮುಖದಲ್ಲಿ, ಈ ಕಾದಂಬರಿಯ ಓದಿ ಸವಿಯಲು ಆಶಿಸಿದ್ದೆ. ಅದರ ಜೊತೆಗೆ ಪೆನ್ನು, ಕೆಲವು ಹಾಳೆಗಳನ್ನೂ ತೆಗೆದುಕೊಂಡಿದ್ದೆ. ಯಾವ ಸಮಯದಲ್ಲಿ ಯಾವ ಕವಿತೆ ಹೊಳೆಯುವುದೋ, ಯಾವ ಚಿಂತನೆ ಮೂಡುವುದೋ ಯಾರು ಬಲ್ಲರೂ. ಅದಕ್ಕೇ ಪ್ರಯಾಣದ ವೇಳೆ ಎನಾದರು ತಲೆಗೆ ಹೊಳೆದರೆ, ಅದನ್ನು ಹಾಗೆ ಗೀಚುಕೊಂಡರಾಯಿತು ಎಂದು ಎಲ್ಲವನ್ನು ಮರೆಯದೆ ನನ್ನ ಬ್ಯಾಗ್‍ನೊಳಗೆ ಸೇರಿಸಿದ್ದೆ. ಮರುದಿನ ಬೆಳಿಗ್ಗೆ ಸುಮಾರು ೬:೩೦ರ ಹೊತ್ತಿಗೆ, ಬಸ್ಸು ಹೆದ್ದಾರಿಗೇ ಸಿಗುವ ಸಂದೇಶ್‍ರವರ ಮನೆಯ ಮುಂದೆಯೇ ನನ್ನನ್ನು ಇಳಿಸಿತು. ಕುಪ್ಪಳ್ಳಿಗೆ ಸಮೀಪವಿರುವ ಹಾರೊಗೊಳಿಗೆ ಗ್ರ್‍ಆಮದಲ್ಲಿ ನಾನು ಉಳಿದುಕೊಳ್ಳುವವನಿದ್ದೆ. ಹೆದ್ದಾರಿಯಾಗಿದ್ದರೂ ಸುತ್ತಲಿನ ಕಾಡು, ಹೊಲ, ಗದ್ದೆ, ಮನೆಯ ಸಮೀಪದಲ್ಲೇ ರಸ್ತೆಗೆ ಅಂಟಿಕೊಂಡತೆಯೇ ಇರುವ ಭಾವಿ, ಮನೆಯ ಮುಂದೆಯಿದ್ದ ಅಡಕೆಯನ್ನು ಒಣಗಿ ಹಾಕಲು ನೆಟ್ಟಿದ್ದ ಕಲ್ಗಂಬಗಳು, ಸುತ್ತಲೂ ಬೆಳಸಿದ್ದ ತೆಂಗು , ಹಲಸಿನ ಮರಗಳು, ಹೂಗಿಡಗಳು ಎಲ್ಲವೂ ನನ್ನ ದೃಷ್ಟಿಗೆ ಅಂಟುಕೊಂಡಿದ್ದ ಪಟ್ಟಣದ ಕೊಳೆಯನ್ನು, ಜಡತನವನ್ನು ತೊಳೆದುಹಾಕಿತ್ತು. 

    ಸಂದೇಶ್ ನನಗೆ ಹೊಸಬರಲ್ಲ. ನನ್ನ ಕುಪ್ಪಳ್ಳಿಯ ಪ್ರತಿ ಭೇಟಿಯಲ್ಲಿಯೂ ನಾನು ಅವರ ಆತಿಥ್ಯವನ್ನು ಸವಿದವನೆ. ಈ ಬಾರಿಯ ಭೇಟಿ ಮುಂಚಿನವವುಗಳಿಗಿಂತ ವಿಶೇಷವಾದುದು. ಏಕೆಂದರೆ ಈ ಸಲದ ಭೇಟಿ ಐದು ದಿನಗಳದ್ದಾಗಿತ್ತು. ಇದಕ್ಕೆ ಹೊಂದುವಂತೆ ಸಂದೇಶ್ ಅವರ ಮನೆಯಲ್ಲಿಯೇ ನನಗೆ ಉಳಿದುಕೊಳ್ಳಲ್ಲು ಅನುಕೂಲ ಮಾಡಿಕೊಟ್ಟಿದ್ದರು. ಸುತ್ತಮುತ್ತಲು ಓಡಾಡುವುದಕ್ಕೆಂದೇ ಅವರ ಬೈಕನ್ನು ಐದು ದಿನಗಳ ಮಟ್ಟಿಗೆ ನನಗೆ ನೀಡಿದ್ದರು. ಮೊದಲು ಮನೆಯವರನ್ನೆಲ್ಲಾ ಭೇಟಿಯಾಗಿ ನಂತರ ಸ್ನಾನ, ತಿಂಡಿ ಕಾಫಿ ಮುಗಿಸಿ, ಅಂದು ನಾನು ನೋಡಬೇಕಾದ ಸ್ಥಳಗಳ ಬಗ್ಗೆ ಸಂದೇಶ್ ಜೊತೆಗೆ ಚರ್ಚಿಸಿದ್ದಾಯಿತು. ಅದರ ಪ್ರಕಾರ ನಾನು ದಿನದ ಮೊದಲರ್ಧದಲ್ಲಿ ಕವಿಮನೆ, ಕುಂವೆಂಪು ಪ್ರತಿಷ್ಠಾನವನ್ನು ನೋಡುವುದು, ನಂತರ ಸಂಜೆ ಕವಿಶೈಲಕ್ಕೆ ಹೋಗಿ ಬರುವುದೆಂದು ನಿಶ್ಚಯವಾಯಿತು. ಅದಲ್ಲದೇ ರಾತ್ರಿ ೯ ಗಂಟೆಗೆ ದೇವಾಂಗಿಯಲ್ಲಿ ಒಂದು ಯಕ್ಷಗಾನ ಪ್ರದರ್ಶನವೂ ಇರುವುದೆಂದು, ಆಯಾಸವಿಲ್ಲದಿದ್ದರೆ ಅದಕ್ಕೂ ಹೋಗಿಬರಬಹುದೆಂದು ಸಂದೇಶ್ ಸೂಚಿಸಿದರು. ಅದರಂತೆಯೇ ನಾನು ಬೈಕ್ ಏರಿ ಕವಿಮನೆಯ ಕಡೆಗೆ ಹೊರಟೆ.

            "ತೆರೆದಿದೆ ಮನ ಓ ಬಾ ಅತಿಥಿ. 

            ಹೊಸ ಬೆಳಕಿನ ಹೊಸ ಗಾಳಿಯ

            ಹೊಸ ಬಾಳನು ತಾ ಅತಿಥಿ

            ಆವ ರೂಪದೊಳು ಬಂದರು ಸರಿಯೆ,

            ಆವ ವೇಷದೊಳು ನಿಂದರೂ ಸರಿಯೆ....

ಎಂದು ಬೈಕನ್ನೇರಿ ಹೊರಟ ನನ್ನ ಮನಸ್ಸನ್ನು, ಮಲೆನಾಡಿನ ಸ್ವಚ್ಚ ವಾತಾವರಣ ಬೀಸುತ್ತಿದ್ದ ನಿರ್ಮಲ ತಂಪು ಗಾಳಿ, ಸುತ್ತಲೂ ಹರಡಿದ್ದ ಹಸಿರು, ಹಕ್ಕಿಗಳ ಚಿಲಿಪಿಲಿ ಕಲರವ ಬಹು ಆದರದಿಂದ ನನ್ನನ್ನು ಸ್ವಾಗತಿಸಿತ್ತು. "ಆಹಾ!! ನನ್ನ ಮನೆ, ಆಫೀಸು, ಮಗಳ ಶಾಲೆ ಇಲ್ಲೆ ಎಲ್ಲಾದರೂ ಹತ್ತಿರದಲ್ಲೇ ಇರಬಾರದೇ? ಈ ಸುಂದರ ಪರಿಸರವನ್ನು ದಿನವೂ ಅನುಭವಿಸುತ್ತ ಆನಂದದಿಂದಿರಬಹುದು" ಎಂದನಿಸಿತು. ಮತ್ತದೇ ಕ್ಷಣದಲ್ಲಿ "ಆಯ್ಯೋ ರಾಮ!!!.. ನನ್ನ ಆಸೆಯ ಹಿಂದೆ ಇಡೀ ಮಲೆನಾಡಿನ ಶುದ್ಧ ಪರಿಸರವನ್ನೇ ಸರ್ವನಾಶಗೊಳಿಸುವ, ನಗರಾಸುರನ ಆಕ್ರಮಣಕಾರಿ ಯೋಚನೆಯಿದೆಯೆಲ್ಲಾ?" ಎಂದೆನಿಸಿ, ನನ್ನ ಹೊಸ ಆಸೆಯನ್ನು ಅಲ್ಲೇ ಬಲವಂತವಾಗಿ ತಳ್ಳಿ ಹಾಕಿದೆ. ಅದೊಂದು  ದಿವಾಸ್ವಪ್ನವೇಷಧಾರಿಯಾದ ದುಷ್ಟ ಸ್ವಪ್ನವೇ ಸರಿ. ಕವಿಮನೆಯನ್ನು ಸೇರುವ ಮೊದಲೇ ಎಡಕ್ಕೆ ಸಿಗುವ ಕುವೆಂಪು ಪ್ರತಿಷ್ಠಾನಕ್ಕೆ ಮೊದಲು ಹೊರಟೆ. ಒಳದಾರಿಯ ಎರೆಡೂ ಬದಿಯಲ್ಲು ಸಾಲು ಮರಗಳಿದ್ದವು. ಅವುಗಳ ನೆರಳಲ್ಲೇ ಕಲ್ಲುಗಳ ಮೇಲೆ ಕೆತ್ತಿದ್ದ ಕವಿಯ ಕವನಗಳು ಬರುವ ಸಹೃದಯರನ್ನು  ಯಾವುದೋ ನೆನಪುಗಳನ್ನು ಹೇಳಿಕೊಳ್ಳುವಂತೆ ಎದಿರುಗೊಂಡಿದ್ದವು. ಕವನಗಳನ್ನು ಒಂದೊಂದೇ ಓದುತ್ತಾ ಮುಂದೆ ಹೋದೆ. ನಗರದ ಮನೆಯಲ್ಲಿ ಪುಸ್ತಕದಲ್ಲಿ ಕವಿಯ ಕವನವನ್ನು ಓದುವದಕ್ಕೂ, ಕವಿಯ್ ಸ್ವಸ್ಥಳದಲ್ಲಿ ನೈಜ ಪ್ರಕೃತಿಯ ವಾತಾವರಣದಲ್ಲಿ, ಕವಿ ಬರೆದ ಪ್ರಕೃತಿ ಕವನಗಳನ್ನು ಓದುವುದಕ್ಕೂ ಬಹಳ ವ್ಯತ್ಯಾಸವಿದೆ. ಆ ವ್ಯತ್ಯಾಸವನ್ನೇ ನಾನು ಅಲ್ಲಿ ಅನುಭವಿಸುತ್ತಿದ್ದೆ. ಮನೆಯೊಳಗಿರುವ ದೇವರ ದೇವರ ದರ್ಶನಾನುಭವಕ್ಕೂ , ಗುಡಿಯಲ್ಲಿ ಗರ್ಭಗುಡಿಯೆದುರು ನಿಂರು ಒಳಗಿನ ದೇವರ ದರ್ಶನಾನುಭವಕ್ಕೂ  ವ್ಯತ್ಯಾಸವಿರುವಂತೆ, ಇಲ್ಲಿ ಕವನ ಕೆತ್ತಿರುವ ನೀಳ್ಗಲ್ಲಿನ ಮುಂದೆ ನಿಂತಾಗ ಕವಿಕಾವ್ಯವು ಮನಸ್ಸಿನೊಳಗೆ ಒಂದು ಸಣ್ಣ ಭಾವೋದ್ವೇಗವನ್ನು ಸೃಷ್ಟಿಸಿತ್ತು. ಮನಸ್ಸಿನಲ್ಲಿ ಹೊಸ ಭಾವಾವೇಶ ಹರಿಯತೊಡಗಿತು.

 ಈ ಭಾವ ಸ್ಥಿತ್ಯಂತರದಲ್ಲಿ ಕಳೆದುಹೋಗಿದ್ದ ನನ್ನನ್ನು ಎಚ್ಚರಿಸಿದ್ದು, ಅಲ್ಲೇ ಕೆಲಸ ಮಾಡುತ್ತಿದ್ದವರಲ್ಲಿ ಓರ್ವ ವ್ಯಕ್ತಿ, ನನ್ನ ಊರು, ಕೆಲಸ, ಅಲ್ಲಿ ಉಳಿದುಕೊಂಡಿದ್ದ ಸ್ಥಳಗಳ ಬಗ್ಗೆ ವಿಚಾರಿಸತೊಡಗಿದಾಗಲೇ. ಹಾಗೆಯೆ ಸ್ವಲ್ಪ ದಿನಗಳ ಹಿಂದೆ ಅದೇ ಸಭಾಂಗಣದಲ್ಲಿ, ಕುವೆಂಪುರವರ ಬಗ್ಗೆ ನಡೆದ ಯಾವುದೋ ಸಂವಾದದ ಬಗ್ಗೆಯು ಕೂಡ ಏನನ್ನೋ ತಿಳಿಸಿದರು. ಆದರೆ ಈಗ ಅದು ನನ್ನ ಜ್ಞಾಪಕಕ್ಕೆ ಬರುತ್ತಿಲ್ಲ. ಅವರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ ಮೇಲೆ, ಅಲ್ಲೇ ಮುಂದೆ ಕಾಣುತ್ತಿದ್ದ ಇನ್ನೊಂದು ವಿಶಾಲ ಕಟ್ಟಡದ ಸನಿಹಕ್ಕೆ ಹೊರಟೆ. 

    ಆ ಕಟ್ಟದ ಮುಂದೆ ಎರೆಡು ಪ್ರತಿಮೆಗಳನ್ನು ನಿಲ್ಲಿಸಿದ್ದರು(ಬಹುಶಃ ಕಂಚಿನಿಂದ ಮಾಡಿದ್ದುದರಿರಬೇಕು). ಕುವೆಂಪುರವರ ಊರಿಗೆ ಬಂದು, ಎಲ್ಲ ಕುವೆಂಪುಮಯವಾಗಿರಬೇಕಾದರೆ, ಆ ಪ್ರತಿಮೆಗಳಲ್ಲೂ ಕೂಡ ನಾನು ಕುವೆಂಪುರವರ ಛಾಯೆಯನ್ನು ನೋಡಲೆತ್ನಿಸುತ್ತಿದ್ದೆ. ಆದರೆ ಹತ್ತಿರ ಬಂದು ನೋಡಿದ ಮೇಲೆ ತಿಳಿಯಿತು, ಅವು ಅವರದ್ದಾಗಿರಲಿಲ್ಲ. ಇನ್ನೂ ಹತ್ತಿರಕ್ಕೆ ಬಂದು ನಿಂತ ಮೇಲೆ ನನಗೆ ಅವುಗಳ ಸಂಪೂರ್ಣ ಪರಿಚಯವಾಯಿತು. ಆ ಪ್ರತಿಮೆಗಳು  ಪೂಜ್ಯ ಗುರುಗಳದ್ದೋ, ಸನ್ಮಾನ್ಯ ಮಂತ್ರಿಗಳದ್ದೋ, ಸಾಧಕ ವರ್ಗವರೇಣ್ಯರದ್ದೋ ಅಥವಾ ಇನ್ನಾವುದೋ ವಿಶೇಷ ವ್ಯಕ್ತಿಗಳದ್ದಾಗಿರಲಿಲ್ಲ; ಬದಲಾಗಿ ಒಬ್ಬ ಸಾಮಾನ್ಯ ಓದುಗನ ಸಮಸ್ತ ಪಾರಾಯಣಗಳಲ್ಲಿ, ಅವನು ಕಂಡ ನೂರಾರು ಕಥಾಪ್ರಪಂಚಗಳಲ್ಲಿ, ಅಲ್ಲಿ ಸಿಗುವ ಸಾವಿರಾರು ವ್ಯಕ್ತಿ ಪಾತ್ರ ವಿಭಿನ್ನತೆಗಳಲ್ಲಿ, ಒಂದು ಅತಿ ಸಾಮಾನ್ಯ, ಅನಿಷ್ಕೃಷ್ಟ  ಜೀವನವನ್ನು ಬಾಳಿ, ಬದುಕಿನ ಕೇವಲತೆಯ ದಿವ್ಯತೆಯನ್ನು ಪ್ರಬಲವಾಗಿಯೂ ಪರಿಣಾಮಕಾರಿಯಾಗಿಯೂ ಮನಸ್ಸಿನ ಅನುಭಕ್ಕೆ ತಂದುಕೊಟ್ಟ "ಸುಬ್ಬಮ್ಮ" ಹಾಗು "ನಾಯಿಗುತ್ತಿ"ಗಳ ಪಾತ್ರಗಳದ್ದಾಗಿತ್ತು!!. ಹೌದು "ಕಾನೂರು ಸುಬ್ಬಮ್ಮ ಹೆಗ್ಗಡತಿ"ಯ ಸುಬ್ಬಮ್ಮನ ಹಾಗು "ಮಲೆಗಳಲ್ಲಿ ಮದುಮಗಳು" ಕಾದಂಬರಿಯ ನಾಯಿಗುತ್ತಿಯ ಪ್ರತಿಸೃಷ್ಟಿಯು ಎದುರಿಗೆ ನಿಂತಿತ್ತು. ಸುಬ್ಬಮ್ಮನ ಸಂಪೂರ್ಣ ಪರಿಚಯ ನನಗಿದ್ದರೂ, ನಾಯಿಗುತ್ತಿಯ ಪರಿಚಯ ಅಷ್ಟಾಗಿ ಇರಲಿಲ್ಲ. ಏಕೆಂದರೆ ಮಲೆಗಳಲ್ಲಿ ಮದುಮಗಳನ್ನು ಇನ್ನೂ ಆಗತಾನೆ ಓದಲು ಪ್ರಾರಂಭಿಸಿದ್ದೆ. ಅದನ್ನು ಓದಲು ಇಲ್ಲಿಗೂ ತಂದಿದ್ದೆ. ಹೆಗಲಿಗೇರಿಸಿದ್ದ ಬ್ಯಾಗ್‍ನಲ್ಲಿ ಆ ಪುಸ್ತಕವನ್ನು ಒಮ್ಮೆ ತಡಕಿನೋಡಿ, ಒಮ್ಮೆ ಅವನ ಪ್ರತಿಮೆಯನ್ನೂ ಅಪಾದಮಸ್ತಕವಾಗಿ ನೋಡಿದೆ. ಆ ಪುಸ್ತಕದಲ್ಲಿ ಬರುವ ಮುಖ್ಯಪಾತ್ರ ನನ್ನದೇ ಎಂದು ಆ ಪ್ರತಿಮೆ ಮೌನವಾಗಿ ನನ್ನ ಬುದ್ಧಿಗೆ ಸೂಚಿಸುತ್ತಿತ್ತು. ನಂತರ ನಾನು ಕಟ್ಟಡದ ಒಳಗೆ ಹೋಗಲು, ಅಲ್ಲಿ ಅನೇಕ ವರ್ಣ ಚಿತ್ರಗಳನ್ನು ಗೋಡೆಯಲ್ಲಿರಿಸಿದ್ದರು. ಆವುಗಳೆಲ್ಲಾ ಕುವೆಂಪು ಬರೆದ ಕಥೆ, ಕಾವ್ಯ, ಕಾದಂಬರಿಗಳಲ್ಲಿ ಬರುವ ಸನ್ನಿವೇಶಗಳದ್ದಾಗಿದ್ದವು. ಆ ಕಟ್ಟಡದ ಒಳ ವಿನ್ಯಾಸವು ಸಾಧಾರಣವಾಗಿರದೆ ಆಕರ್ಷಣೀಯವಾಗಿತ್ತು. ಮಲೆನಾಡ ಮನೆಗಳಲ್ಲಿ ಕಂಡುಬರುವ ಮಾಡುಗಳಂತೆ, ಅಲ್ಲೂ  ಮಾಡು ಕಟ್ಟಿದ್ದರು. ಮಾಡು ಹತ್ತಿ ನೋಡಿದರೆ ಅಲ್ಲೂ ಅನೇಕ ವರ್ಣಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಅಲ್ಲಿಂದ ಮತ್ತೆ ಹೋಗಿದ್ದು, ಪಕ್ಕದಲ್ಲಿ ಇದ್ದ ಇನ್ನೊಂದು ಕಟ್ಟಡಕ್ಕೆ. ಅಲ್ಲಿ ವಿಶಾಲವಾದ ಒಳಾವರಣದಲ್ಲಿ ಪೂರ್ಣಚಂದ್ರತೇಜಸ್ವಿಯವರು ಅರಣ್ಯಗಳಲ್ಲಿ ತೆಗೆದ ಅನೇಕ ಸುಂದರ ಪಕ್ಷಿಗಳ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ನನ್ನನ್ನು ಮುಖ್ಯವಾಗಿ ಸೆಳದಿದ್ದು "ಕಾಜಾಣ" ಪಕ್ಷಿಯ ಚಿತ್ರ. ಸೆಳದಿದ್ದು ಚಿತ್ರದ ಸೌಂದರ್ಯವಲ್ಲ ಅಥವಾ ಫೊಟೊಗ್ರಫಿಯ ಚಾತುರ್ಯವಲ್ಲ; ಬದಲಾಗಿ ಕುವೆಂಪುವಿನ ಕಾವ್ಯವನದಲ್ಲಿ ಸ್ವಛಂದವಾಗಿ ಹಾರಾಡಿಕೊಂಡಿದ್ದರ ಪರಿಣಾಮವಾಗಿ; ಸುಕೋಮಲವಾಗಿ ಕವಿತೆಯ ಪಚ್ಚಸಿರಿನ ಹಿಂದೆ ಕುಳಿತು ಕೂಗಿದ್ದಕ್ಕಾಗಿ. ತದನಂತರ ಮಿಕ್ಕ ಚಿತ್ರಗಳನ್ನೆಲ್ಲಾ ನೋಡಿ ಹೊರಗೆ ಬಂದು ಕವಿಮನೆಗೆ ಹೊರಡಲು ಸಿದ್ದನಾದೆ. ಆದರೆ ಇನ್ನೂ ಮಧ್ಯಾಹ್ನವಾಗಿತ್ತು. ಇಷ್ಟು ಬೇಗ ಅಲ್ಲಿಗೆ ಹೋದರೆ ಕವಿಶೈಲದಲ್ಲಿ ಸೂರ್ಯಾಸ್ಥ ಸಮಯಕ್ಕೆ ಬಹಳ ಸಮಯ ಉಳಿದುಬಿಡುತ್ತದೆ ಎಂದೆನಿಸಿ, ಅಲ್ಲೇ ಮರದ ಕೆಳಗೆ ಕುಳಿತು ಸ್ವಲ್ಪ ಕಾಲ ಎಕಾಂತವನ್ನು ಅನುಭವಿಸುವುದು ಎಂದು ನಿರ್ಧರಿಸಿದೆ. ಹಾಗೆ ಸ್ವಲ್ಪ ಕಾಲದ ನಂತರ ಕಾದಂಬರಿಯನ್ನು ಹೊರತೆಗೆದು ಓದಲು ಪ್ರ್‍ಆರಂಭಿಸಿದೆ. ಹೊರಜಗತ್ತಿನಿಂದ ಕಥಾಪ್ರಪಂಚಕೆ ನಿಧಾನವಾಗಿ ಇಳಿಯತೊಡಗಿದೆ, ಸಾಯಂಕಾಲ ನಾಲ್ಕು ಘಂಟೆಯ ಹೊತ್ತಿಗೆ ಓದುವುದನ್ನು ನಿಲ್ಲಿಸಿ ಆನಂತರ ಕವಿಮನೆಯ ಕಡೆಗೆ ಹೊರಟೆ. 

        ಮನೇ ಮನೇ ನನ್ನ ಮನೇ,

        ಮನೇ ಮನೇ ಮುದ್ದು ಮನೇ.

            ನನ್ನ ತಾಯಿಯೊಲಿದ ಮನೆ,

            ನನ್ನ ತಂದೆ ಬಳೆದ ಮನೆ.

        ನನ್ನ ಗೆಳೆಯರೊಡನೆ ಕೂಡಿ,

        ಮುದ್ದು ಮಾತುಗಳನು ಆಡಿ,

        ಮಕ್ಕಳಾಟಗಳನು ಹೂಡಿ,

        ನಾನು ನಲಿದ ನನ್ನ ಮನೆ!.

..ಎಂದು ಮನೆಯೊಳಗೆ ಕವಿತೆಯ ರಾಗಸಂಯೋಜಿತ ಹಾಡು ಕೇಳಿಸುತ್ತಿತ್ತು. ಮೊದಲೇ ಎರೆಡು ಬಾರಿ ಮನೆಯನ್ನೆಲ್ಲಾ ನೋಡಿದ್ದರಿಂದ, ಈ ಬಾರಿ ಬೇಗ ಬೇಗನೆ ಮನೆಯನ್ನೆಲ್ಲಾ ನೋಡಿಬಿಟ್ಟೆ. ಆದರೂ ನನಗೆ ಪ್ರಿಯವಾದ ಸ್ಥಳಗಳಲ್ಲಿ ಸ್ವಲ್ಪ ಹೆಚ್ಚು ಹೊತ್ತು ಕಳೆದೆ. ಆಡುಗೆ ಮನೆಯ ಮೊಸರು ಕಡೆಯುವ ಸ್ಥಳ ಮುಂಚಿನಿಗಿಂತ ಈ ಬಾರಿ ಹೆಚ್ಚು ಪರಿಚಿತವಾಗಿತ್ತು; ಕಾರಣ, ಈಸಲ "ಕಾನೂರು ಸುಬ್ಬಮ್ಮ ಹೆಗ್ಗಡತಿ" ನನ್ನ ಜೊತೆಗಿದ್ದು, ಅಡುಗೆಯ ಮನೆಯನ್ನು, ಅಲ್ಲಿ ನಡೆದ ಘಟನಾವಳಿಗಳನ್ನು, ಸವಿವರವಾಗಿ ತೋರಿಸಿದರು. ಮತ್ತೆ ಮೊದಲನೆ ಮಹಡಿಯ ಕುವೆಂಪುವಿನ ಕೋಣೆಯು ಆಪ್ತವಾಗಿತ್ತು. ಪ್ರಜ್ಞಾಪೂರ್ವಕವಾಗಿಯೆ, ಆ ಕೋಣೆಯ ಕಿಟಕಿಯನ್ನು ಅದರಿಂದಾಚೆ ಕಾಣುವ ವಿಶಾಲ ಗಗನವನ್ನು, ಗಂಭೀರ್‍ಅ ಕಾನನವನ್ನು ಗಮನಿಸಿದೆ. ಅದಕ್ಕೆ ಕಾರ್‍ಅಣ ಕವಿ ಬರೆದ "ಕಿಟಕಿ-ಕಣ್ಣು" ಹಾಗು "ಕಾಜಾಣ" ಕವಿತೆಗಳು ನನ್ನ ಜ್ಞಾಪಕಕ್ಕೆ ಬಂದಿದ್ದು.

        ಇದಾದನಂತರ ಕೊನೆಗೆ ಮನೆಯ ಪುಸ್ತಕ ವಿಭಾಗಕ್ಕೆ ಬಂದೆ. ನನ್ನ ಬಳಿ ಕವಿ ಕೃತಿಯ ಎಲ್ಲಾ ಪುಸ್ತಕಗಳೂ ಇದ್ದುದದರಿಂದ ಇಲ್ಲಿ ಏನೂ ಖರೀದಿಸುವ ಅಗತ್ಯವಿಲ್ಲವೆಂದುಕೊಂಡಿದ್ದೆ; ಆದರೆ ಅದನ್ನು ಸುಳ್ಳು ಮಾಡಿದ್ದು "ಶ್ರೀ ರಾಮಾಯಣ ದರ್ಶನಂ"ನ ಸ್ವರಮಾಲೆಯ ಡಿ.ವಿ.ಡಿ. ಅಬ್ಬಾ ನನ್ನ ಆನಂದಕ್ಕೇ ಪಾರವೇ ಇರಲಿಲ್ಲ. ಕೇವಲ ಮನೆಯಲ್ಲಲ್ಲದೇ , ಬಸ್ಸಿನಲ್ಲಿ ಒಡಾಡುವಾಗ, ಕಾರ್‍ಇನಲ್ಲಿ ಕುಳಿತಾಗಲೂ ಕವಿಯ ಕೃತಿಯ ರಸಾನುಭೂತಿ ಪಡೆಯಬಹುದಲ್ಲಾ ಎಂದೆಲ್ಲಾ ಕಲ್ಪಿಸಿ, ಅದನ್ನು ಖರೀದಿಸಿದೆ. ಪುಸ್ತಕ ವಿಭಾಗದ ಮೇಲ್ವಿಚಾರಕನ ಮನೆ ಸಂದೇಶ್ ಮನೆಯ ಬಳಿಯೆ ಇದ್ದುದರಿಂದ , ನಾನು ನನ್ನ ಪರಿಚಯವನ್ನು ಮಾಡಿಕೊಂಡೆ. ಅದಲ್ಲದೇ ಕುವೆಂಪುವಿನ ಅಪೂರ್ವ ಸಮಗ್ರ ಕಾವ್ಯ ಗ್ರಂಥವು, ನನಗೆ ಎಲ್ಲೂ ಸಿಗದೆ ಪರಿತಪಿಸಿ, ಕೊನೆಗೆ ಕುಪ್ಪಳ್ಳಿಯ ಮನೆಯಲ್ಲೇ ಅದನ್ನು ಕಳೆದ ಬಾರಿ ಖರೀದಿಸುವ ಭಾಗ್ಯವೊದಗಿತು ಎಂದು ಹಳೆಯ ನೆನಪೊಂದನ್ನು ಹೇಳಿಕೊಂಡೆ. ಅಷ್ಟರಲ್ಲೇ ಸಾಯಂಕಾಲವಾಗತೊಡಗಿತು. ಕವಿಶೈಲ ಎಂದಿನಂತೆ ಮತ್ತೊಬ್ಬ ಸಹೃದಯಿಯನ್ನು, ಕುವೆಂಪುವಿನ ಕಾವ್ಯಾಭಿಮಾನಿಯನ್ನು, ತನ್ನ ಅನಿರ್ವಚನೀಯ ಆನುಪೂರ್ವಿ ಗುರುತ್ವದಿಂದ ತನ್ನೆಡೆಗೆ ಸೆಳೆಯತೊಡಗಿತು. ಕವಿಮನೆಯ ಹೊರಗೆ ಬಂದು ಮೆಟ್ಟಿಲನ್ನು ಹತ್ತಿ ಗುಡ್ಡವನ್ನು ಏರತೊಡಗಿದೆ. ಅಲ್ಲಿ ಬೆಳೆದ ಮರಗಿಡಗಳ ಕೊಂಬೆಗಳಲ್ಲಿ ಕವಿಕಾವ್ಯಗಳಲ್ಲಿ ಸ್ವಚ್ಚಂದವಾಗಿ ಹಾರಾಡಿ ಹಾಡಿರುವ ಕಾಜಾಣ ಹಕ್ಕಿಯು ನೋಡಸಿಗುವುದೇನು ಎಂದು ಕಣ್ಣಾಡಿಸಿದೆ. ಆದರೆ ಅದರ ಸುಳಿವು ಎತ್ತ ಕಡೆಯೂ ಸಿಗಲಿಲ್ಲ. ಕವಿ ತನ್ನ ಪ್ರಿಯಸಖ "ಕವಿಶೈಲ"ದ ಮೇಲೆ ಬರೆದ ಕೆಲವು ಕವನಗಳನ್ನು ಅಲ್ಲಿ ಕಲ್ಲಿನಲ್ಲಿ ಕೆತ್ತಿ ನಿಲ್ಲಿಸಿದ್ದರು. 

    ಓ ನನ್ನ ಪ್ರಿಯತಮ ಶಿಖರ ಸುಂದರನೆ, ನನ್ನ

    ಜೀವನಾನಂದ ನಿಧಿ ಕವಿತಾ ಮನೋಹರಿಯ

    ಪ್ರಥಮೋತ್ತಮಪ್ರಣಯಿ, ವನದೇವಿಯ್ಯೆಸಿರಿಯ

    ಪೀಠ ಚೂಡಾಮಣಿಯೆ, ಓ ಕವಿಶೈಲ, ನಿನ್ನ

    ಸಂಪದವೆನಿತು ಬಣ್ಣಿಸಲಳವು ಕವನದಲಿ? ...........

ಎಂದು ಬರೆದಿದ್ದ ಶಿಲಾಸ್ಮಾರಕದ ಬಳಿ ಬಂದು ನಿಂತೆ. ಎಷ್ಟೋ ಬಾರಿ "ಕೃತ್ತಿಕೆ" ಕವನ ಸಂಕಲನದಲ್ಲಿ ಈ ಕವಿತೆಯನ್ನು ಓದಿದ್ದರೂ, ಮತ್ತೊಮ್ಮೆ ಇಲ್ಲಿ ಸಂಪೂರ್ಣವಾಗಿ ಓದಿದೆ. ಬಹುಶಃ ಕವಿ ಸಮಾಧಿಯ ಸಾಮಿಪ್ಯದಲ್ಲಿ ಅದನ್ನು ಓದಿದ್ದುದರಿಂದಿರಬೇಕು, ಮನಸ್ಸು ಭಾವುಕವಾಗತೊಡಗಿತು. ಗಿರಿಶೃಂಗವೊಂದು ಕವಿಚೇತನವೊಂದಕ್ಕೆ ನಿಸರ್ಗಾನುಭೂತಿಯ ಭಾಗ್ಯವನ್ನು ದಯಪಾಲಿಸಿದುದಕ್ಕೆ, ಹಾಗು ಆ ಕವಿಚಿತ್ತವು ತನ್ನ ಶಿಖರಸಖನ ಸ್ನೇಹಕ್ಕೆ ಬಹು ಆಪ್ತತೆಯಿಂದ ಕವನವೊಂದನ್ನು ನಿವೇದಿಸಿದುದಕ್ಕೆ ಸಾಕ್ಷೀಭೂತವಾಗಿ ಈ ಶಿಲಾಸ್ಮಾರಕವು ನಿಂತಿತ್ತು. ಮೌನಕ್ಕೆ ಮಾತ್ರ ಅಲ್ಲಿ ಅವಕಾಶವಿತ್ತು. ಆ ಮೌನವನ್ನೇ ಅನುಸರಿಸಿ ಕವಿಸಮಾಧಿಯ ಕಡೆಗೆ ಹೆಜ್ಜೆ ಹಾಕಿದೆ. ಅಲ್ಲಿ ಮೇಲೆ ಮಲೆನಾಡ ಮಹಾರ್‍ಅಣ್ಯಾವೃತ ಶಿಖರಶೃಂಗವು, ರಸಋಷಿಯ ನಿರ್ಮಲ ನಿಶ್ಚಲ ಸಮಾಧಿಯನ್ನು ತನ್ನೊಡಲಿನೊಳಗೆ ಅನನ್ಯ ವಾತ್ಸಲ್ಯದಿಂದ ಅಪ್ಪಿಕೊಂಡಿತ್ತು. ಯಾವ ಸಹಸ್ರ ಸೂರ್ಯೋದಯ-ಸೂರ್ಯಾಸ್ಥಗಳು ವ್ಯೋಮ ವೈಶಾಲ್ಯದಲ್ಲಿ ವಿಜೃಂಬಿಸುತ್ತ, ಯಾವ ಸಹಸ್ರಾರು ಪಕ್ಷಿ ಪರಿಷನ್ಮಂಡಲವು ತಮ್ಮಿಂಚರಗಾನಗೈಯ್ಯುತ್ತ, ಯಾವ ನದಿ ಸರೋವರ ಝರಿ ಜಲಪಾತಗಳು ನಿಮ್ನೋತ್ತುಂಗಗಳಲ್ಲಿ ಬೋರ್ಗರೆದುಕ್ಕಿ ಹರಿಯುತ್ತ, ಕವಿಯ ಜ್ಞಾನೇಂದ್ರಿಯಗಳನ್ನು ಪ್ರವೇಶಿಸಿ, ಅವನ ಮನೋಭೂಮಿಕೆಯಲ್ಲಿ ವಿಶ್ವಶಕ್ತಿಯ ವಿರಾಡ್ರೂಪವನ್ನು ಪ್ರದರ್ಶಿಸಿ ಕಾವ್ಯ ಪ್ರತಿಭೆಯನ್ನು ಪುಳಕಿಸಿದವೋ, ಅದೇ ಪ್ರಕೃತಿಯ ಪ್ರಸನ್ನವದನಗರ್ಭದಲ್ಲಿಂದು ಆ ಮಹಾಚೇತನವು ಚಿರಪ್ರಶಾಂತತೆಯಲ್ಲಿ ಮಲಗಿಹುದು. ಶ್ರೇಷ್ಟ ಚೇತನವೊಂದು ತಾನು ಉದಯಿಸಿಬಂದ ಸಹ್ಯಾದ್ರಿಯ ಶಿಖರಶೃಂಗದಲ್ಲೇ ಅಸ್ತಂಗತವಾಗಿಹುದು. ಅಂತಹ ಮಹಾನ್ ಚೇತನದ ಸಮಾಧಿಯ ಮುಂದೆ ಬಂದು ಭಾವುಕನಾಗಿ ಕುಳಿತುಬಿಟ್ಟೆ. ಹೀಗೆ ಕವಿಸಮಾಧಿಯ ಮುಂದೆ ಬಂದು ಭಾವುಕವಾಗಲೂ ಪೂರ್ಣಕಾರಣವಿರಬೇಕು. ಹೇಗೆ ಗುಡಿಯ ಗಂಟೆಯ ನಿರಂತರ ನಾದ, ಮಂಗಳಾರತಿಯ ಸಮಯದಲ್ಲಿ ಭಕ್ತನೊಬ್ಬನ ಮೈನಮನಗಳನ್ನು ಕಂಪಿಸುವುದೋ, ಹಾಗೆಯೇ ಕವಿಸಮಾಧಿಯ ಮುಂದೆ ಬಂದು ವಿಶಿಷ್ಟಾನುಭವವನ್ನು ಪಡೆಯಲು ಕವಿ ಕೃತಿಗಳ ಪರಿಚಯವಿರ ಬೇಕಾಗುತ್ತದೆ. ಅದರಲ್ಲಿರುವ ತತ್ವಸಾರ, ಸಂದೇಶ, ಉದ್ದೇಷಗಳ ಮೂಲಕ ಕವಿಯನ್ನು ಸ್ವಲ್ಪಮಟ್ಟಿಗಾದರೂ ಅರಿತಿರಬೇಕಾಗಿರುತ್ತದೆ. ಇಲ್ಲವಾದರೆ ಬರಿಯ ಸಂಸ್ಕೃತಿ ಸಹಜವಾದ ಪೂಜ್ಯ ಭಾವನೆ, ಹಿರಿಯರಿಗೆ ಕೊಡುವ ಗೌರವಗಳಿಗಷ್ಟೇ ಸೀಮಿತವಾಗುತ್ತದೆ ನಮ್ಮ ಭಾವಸ್ಪಂದನ.

 

 

 ನನ್ನ ಪಾಲಿಗೆ ದಕ್ಕಿದ ಮತ್ತೊಂದು ಅದೃಷ್ಟವೆಂದರೆ ಕವಿಶೈಲದಲ್ಲಿ ದೊರೆತ ಅನಿರೀಕ್ಷಿತ ಎಕಾಂತ. ಅಂದು ವಾರಾಂತ್ಯವಲ್ಲದ ಕಾರ್‍ಅಣ ಜನದಟ್ಟನೆ ಬಹಳ ಕಡಿಮೆಯಿತ್ತು. ಅಲ್ಲೆ ಒಂದು ಕಲ್ಗಂಬದ ಬಳಿ ಕುಳಿತು ಹೊರಗಿನ ಸೂರ್ಯಾಸ್ಥವನ್ನೂ, ಕವಿಸಮಾಧಿಯನ್ನೂ ನೋಡುತ್ತಾ ಕುಳಿತೆ. ಸೂರ್ಯ ಅಸ್ತಂಗತವಾಗುತ್ತ ಕವಿಸಮಾಧಿಯೊಳಗೆ ಇಳಿಯುತ್ತಿರುವನಂತೆ ಕಂಡ. ಹೊರಗಿನ ವನ ಪ್ರಶಾಂತತೆ, ಸಂಜೆಯ ತಂಪುಗಾಳಿ, ಎದುರಿಗಿರುವ ಮಹಾಸಮಾಧಿ, ಶ್ರ್‍ಏಷ್ಟಕವಿಯು ನಡೆಸಿದ ಬೃಹದ್ ಜೀವನ, ಎಲ್ಲವೂ ಮನದೊಳಗೆ ಸಂಸರ್ಗಿಸಿ ಭಾವೋದ್ದೀಪನವಾಗತೊಡಗಿತು. ಹೊಸ ಭಾವಗಳ ಒಳಹರಿವು ಮೊದಲು ಸಣ್ಣ ಸೆಲೆಯಾಗಿ ಪ್ರಾರಂಭವಾಗಿ, ಬರು ಬರುತ್ತ ದೊಡ್ಡ ತೊರೆಯಾಗಿ, ಹೊನಲಾಗಿ, ಉಕ್ಕಿ ಹರಿದು ಕಾವ್ಯಾಂಕುರವಾಗತೊಡಗಿತು. ದೃಷ್ಟಿಗೋಚರವಾಗುತ್ತಿದ್ದ ಹೊರಗಿನ ಸೂರ್ಯಾಸ್ತದ ಸುಮಂಗಳ ಸೌಂದರ್ಯ, ಒಳಗಿನ ಕಾವ್ಯಪ್ರತಿಭೆಯನ್ನು ಮಥಿಸಿ ನವ ಕವನ ಸೃಷ್ಟಿಯನ್ನು ಪುಷ್ಟಿಸುವಲ್ಲಿ ಸಹಾಯವಾಗಿತ್ತು. ಅದರ ಪರಿಣಾಮವೇ ಕವಿಶೈಲ ಹಾಗು ಕವಿಯ ಮೇಲೆ ನಾನು ಬರೆದ ಒಂದು ಸಣ್ಣ ಕವನ. ಶ್ರ್‍ಈಕುವೆಂಪುರವರ ಆತ್ಮ ಅವರ ಸಮಾಧಿಯನ್ನು, ಕವಿಶೈಲವನ್ನು ನೋಡಲು ಬಂದ ಸಹೃದಯರನ್ನು ಕಂಡು, ನುಡಿಯಬಹುದಾದ ಮನದ ಮಾತೊಂದು ನನ್ನೊಳಗೆ ಪ್ರತಿಮಾರೂಪಗೊಂಡು, ಈ ಚಿಕ್ಕ ಕವನವಾಗಿದೆ. ಕವಿಯು ತನ್ನ ಸಹೃದಯರಲ್ಲಿ ಮತ್ತೆ ತನ್ನ ಕೃತಿಗಳ ಛಾಯೆಯನ್ನು ಕಂಡು, ಕವಿಶೈಲದ ಜೊತೆಗೆ ಹಂಚಿಕೊಂಡ ಭಾವ ಇಲ್ಲಿದೆ. 

 

|| ಕವಿಶೈಲ ||

ಓ ಕವಿಶೈಲ! ನೋಡಿಲ್ಲಿ  ಪ್ರಿಯ ಬಂಧು 

ಬಂದಿಹರು ಜನರು ನಮ್ಮ ನೋಡಲೆಂದು.

ಶಿಖರಶಿಲ್ಪಿಯು ಕಡೆದ ರಸಕವಿಯ ಮೂರ್ತಿಯನು,

ಕಣ್ತುಂಬಿ ಮನತುಂಬಿ ಕಾಣಲೆಂದು.

ನನ್ನ ಮುನ್ನಿನ ಬಾಳು, ಭಾವಗಳೊಡಗೂಡಿ

ಸಹೃದಯ ತೇರಿನಲಿ ಬಂದಿಹುದು ಮರಳಿ.

ಕಾವ್ಯಯಾತ್ರೆಯ ಮುಗಿಸಿ ರಸನಿಮಿಷವನುಭವಿಸಿ

ಶೈಲಶಯನದಲಿಹ ಕವಿಯ ನೋಡಲಿಲ್ಲಿ.

ನನ್ನ ಕಥೆ, ಕಾದಂಬರಿಯ ಭಾವ, ಪಾತ್ರಗಳು,

ತಾತ್ವಿಕ ತರ್ಕಗಳು, ಹೃದಯ ಮಂಥನಗಳು,

ನಾ ಬರೆದ ಕಾವ್ಯಗಳ ಅಂತರ್ದೃಷ್ಟಿಗಳು, 

ವಿಶ್ವದಲಿ ನಾ ಕಂಡ ದರ್ಶನ, ವಿಭೂತಿಗಳು,

ಹೃದಯಾವಿರ್ಭೂತ ದಿವ್ಯ ಋತ ಸತ್ಯಗಳು,

ಪಡೆದಿಹವು ಮರುಜನ್ಮ ಸಹೃದಯ ಗರ್ಭದಲಿ.

ಬಂದಿಹವು ನಾವಿರುವ ಸಹ್ಯಾದ್ರಿಗೆ ಮರಳಿ.

ವ್ಯಕ್ತವಾಗಿಹುದಿಲ್ಲಿ ಸಹೃದಯ ಸಂಪ್ರೀತಿ,

ಕವಿಯ ಪ್ರ್‍ಎಮಿಸಿಹರು ಅವಿನಾಭಾವವರಳಿ.

ವ್ಯಕ್ತವಾಗಿಹುದಿಲ್ಲಿ ಸಂಮೋಹ ಸಂಧಾನ

ಕವಿಯಾತ್ಮ ಮೋಹಿಸಿಹರು ಅನುಭಾವವರಳಿ.

ಹಾಗೆ ಕವನದ ರೂಪರೇಷೆಗಳನ್ನು ಮನನ ಮಾಡುತ್ತ ಸೂರ್ಯಾಸ್ತ ಸಂಪೂರ್ಣ ಮುಗಿಯುವವರೆಗೂ ಕುಳಿತಿದ್ದೆ. ನಂತರ ಅಲ್ಲಿಂದ ಕೆಳಗಿಳಿದು ಕವಿಮನೆಯ ಪಕ್ಕದಲ್ಲೇ ಇರುವ ಟೀ ಅಂಗಡಿಗೆ ಹೋಗಿ ಮಲೆನಾಡಿನ ಕಶಾಯವನ್ನು ಗಂಟಳೊಳಗಿಳಿಸಿದೆ. ಅಲ್ಲಿ ಇನ್ನೂ ಅನೇಕ ಸಾಹಿತ್ಯಾಸಕ್ತರು/ಪ್ರವಾಸಿಗರು ತಾವು ಟೀ ರುಚಿಸಲು ಅಲ್ಲಿಗೆ ಬಂದಿದ್ದರು. ಮಿಕ್ಕ ಹೋಟೆಲ್‍ಗಳಲ್ಲಿ ಮಾತನಾಡುವಂತೆ ಲೋಕಾರೂಢಿ ವಿಷಯಗಳನನು ಬಿಟ್ಟು, ಅಲ್ಲಿನ ಚರ್ಚೆಗಳು ಸಾಹಿತ್ಯವಲಯದೊಳಗೆ ಹರಿದಾಡುತ್ತಿತ್ತು. ಆಗತಾನೆ ಜ್ಞಾನಪೀಠ ಪುರಸ್ಕೃತಗೊಂಡ ಕಂಬಾರರ ಬಗ್ಗೆ, ಕುವೆಂಪುವಿನ ಅಂತ್ಯಸಂಸ್ಕಾರದ ದಿನ ನಡೆದ ಘಟನೆಗಳ ಬಗ್ಗೆ, ಪೂರ್ಣಚಂದ್ರತೇಜಸ್ವಿಯವರು ಆಗಾಗ್ಗೆ ಅಲ್ಲಿ ಬಂದು ಹೋಗುತ್ತಿದ್ದುದರ ಬಗ್ಗೆ, ಹೀಗೆ ಹಲವು ಸಾಹಿತಿಗಳ ಮತ್ತು ಕರ್ನಾಟಕದಲ್ಲಿ ಹಿಂದೆ ನಡೆದ ಅನೇಕ ಸಾಹಿತ್ಯಿಕ ಘಟನೆಗಳ ಬಗ್ಗೆ ಮಾತುಗಳು ನಡೆದವು. ಜೊತೆಗಿದ್ದ ಕಶಾಯ, ಬಜ್ಜಿ, ನಡೆಯುತ್ತಿದ್ದ ಚರ್ಚೆಗಳ ರುಚಿಯನ್ನು ಮತ್ತಷ್ಟು ಏರಿಸಿತ್ತು. 

    ಅಲ್ಲಿಂದ ಮತ್ತೆ ಮನೆಯ ಕಡೆಗೆ ಬೈಕ್ ಹತ್ತಿ ಹೊರಟೆ. ತಣ್ಣಗೆ ಸಂಜೆಯ ಗಾಳಿ ಬೀಸುತ್ತಿತ್ತು. ಹಸಿರಿನ ಆರ್ದತೆ ಮೋಹಕವಾಗಿತ್ತು . ಮನಸ್ಸಿನಲ್ಲಿ ಹೊಸ ಲವಲವಿಕೆ ಮೂಡುತ್ತಿತ್ತು. ಮನೆ,ಬಸ್ಸು, ಟ್ರಾಫಿಕ್, ಕೆಲಸದಲ್ಲಿ ಒತ್ತಡ, ಎ.ಟಿ.ಎಮ್, ಎ.ಎಮ್.ಐ ಸಾಲ, ಕೆಲಸದೊತ್ತಡ, ಮುಂದಿನ ಜೀವನದ ಬಗೆಗಿನ ಯೋಚನೆ, ಅದಕ್ಕೆ ಮಾಡಬೇಕಾದ ಯೋಜನೆ, ಇನ್ನು ಹತ್ತುಹಲವು ಗೊಂದಲಗಳಲ್ಲಿ ಯಾಂತ್ರಿಕವಾಗಿ ಸಾಗುತ್ತಿದ್ದ ನನ್ನ ನಗರಜೀವನಕ್ಕೆ ಈ ಪಶ್ಚಿಮಘಟ್ಟದ ಮೃದುಗಾಳಿ ಉಲ್ಲಾಸವನ್ನು ತಂದಿತ್ತು. ಕವಿತೆ, ವಿಮರ್ಶೆ, ಮಹಾಕಾವ್ಯ, ರಸಾನುಭೂತಿ, ಕಥೆ, ಕಾದಂಬರಿ, ಅನುಭಾವ, ಸೃಜನಶೀಲತೆ, ಪ್ರಕೃತಿ, ಪುರುಷ, ಕಾಡು, ನದಿ, ಝರಿ, ವನ್ಯಪ್ರಾಣಿಗಳು, ಪಕ್ಷಿಪ್ರಪಂಚ, ಹಳ್ಳಿ, ಸರಳತೆ ಇವುಗಳೆಲ್ಲವೂ ಸೂರ್ಯೋದಯದಂತೆ ನಿಧಾನವಾಗಿ ಮನೋಕ್ಷಿತಿಜದಲ್ಲಿ ಹೊಸಬೆಳಕನ್ನು ಹರಿಸತೊಡಗಿತು. ಮಿಕ್ಕೆಲ್ಲ ಗೊಂದಲಗಳ ಕತ್ತಲೆಯನ್ನು ಹೊರದೂರತೊಡಗಿತು. ಮನಸ್ಸು ಅನುಭವ ರೋಮಾಂಚನದಲ್ಲಿ ತೇಲಲಾರಂಭಿಸಿತು. ಬುದ್ಧಿ ಹಗುರವಾಯಿತು. ಚಿಂತನೆ ತಿಳಿಯಾಗತೊಡಗಿತು. ಕುಪ್ಪಳ್ಳಿಯಿಂದ ಹಾರೊಗೊಳಿಗೆ ಮನೆಗೆ ಬರುವಷ್ಟರಲ್ಲಿ ಸಂಜೆ ೭:೩೦. ಸ್ವಲ್ಪ ಕಾಫಿ ತೆಗೆದುಕೊಂಡು ನನ್ನ ಅಂದಿನ ತಿರುಗಾಟವನ್ನೆಲ್ಲಾ ಮನೆಯವರಿಗೆಲ್ಲಾ ವಿವರವಾಗಿ ಹೇಳಿದೆ. ಆದರೆ ನನ್ನ ಆ ವಿವರಣೆಯಲ್ಲಿ ಸಾಮಾನ್ಯ ಪ್ರವಾಸಿಗನಿದ್ದ, ಸಾಹಿತ್ಯಾಭಿಲಾಶಿಯಾಗಲಿ ಸಹೃದಯನಾಗಲಿ ಇರಲಿಲ್ಲ. ಅಲ್ಲಿ ಕಾರಣ ಇಬ್ಬರ ನಡುವೆ ಇದ್ದ ಸಮಾನಾಸಕ್ತಿಯ ಕೊರತೆ. ನಾನು ನನ್ನ ಮನೆಯವರಿಗೆ ಎಷ್ಟು ವಿವರಣೆ ಕೊಡಬೇಕೊ ಅಷ್ಟೇ ವಿವರಣೆಯನ್ನು ಅಲ್ಲಿಯೂ ಕೊಟ್ಟಿದ್ದೆ. ಸಂದೇಶ್‍ನ ಪುಟಾಣಿ ಮಕ್ಕಳಿಬ್ಬರು ನನಗಲ್ಲಿ ಹೊಸ ಗೆಳಯರಾದರು. ಆವರ ಆಟಗಳಲ್ಲಿ, ಬಾಲ್ಯಸಹಜ ಕುತೂಹಲಗಳಲ್ಲಿ ನಾನು ಒಬ್ಬ ಜೊತೆಗಾರನಾಗಿ ಬಿಟ್ಟೆ. ಮೊದಲ ಮಗುವಿನ ಹೆಸರು "ಅವಿಸ್ಮಯಿ" , ಕಿರಿಯವಳ ಹೆಸರು "ಅಚಿಂತ್ಯ". ಎರೆಡೂ ಹೆಸರು ಸೊಗಸಾದವೆ. ಯಾರೋ ಸಾಹಿತಿಗಳೆ ಹೆಸರು ಸೂಚಿಸಿರಬೇಕೆಂದು ಎಂದು ನಾನು ಸಂದೇಶ್ ಅವರನು ಕೇಳಿಯೆಬಿಟ್ಟೆ. ಅದಕ್ಕವರು ಇಲ್ಲ ತಾವೆ ಹೆಸರನ್ನು ಹುಡಿಕಿ ಇಟ್ಟಿದ್ದು ಎಂದು ಹೇಳಿದರು. ಆಗ ನಾನು "ಯಾಕೋ ನನ್ನ ಸಾಹಿತ್ಯದ ಗೀಳು, ಜಾಸ್ತಿಯೆ ಆಗಿರಬೇಕು" ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ.  ಊಟದ ಸಮಯ ಹತ್ತಿರವಾಗತೊಡಗಿತು. ಅಷ್ಟರಲ್ಲಿ ಸಂದೇಶ್ ದೇವಂಗಿಯಲ್ಲಿ ಅಂದು ರಾತ್ರಿ  ನಡೆಯಲಿರುವ ಒಂದು "ಯಕ್ಷಗಾನ" ಪ್ರದರ್ಶನದ ಬಗ್ಗೆ ಹೇಳಿದರು. ನಾನು ಅದಕ್ಕೆ ಹೋಗಲು ಉತ್ಸುಕನಾದೆ. "ನಿಮ್ಮ ಕೈಲಿ ಸಂಪೂರ್ಣ ನೋಡಲಾಗುತ್ತದೆಯೆ? ಅದು ರಾತ್ರಿಯೆಲ್ಲಾ ನಡೆಯುತ್ತದೆ, ಬೆಳಿಗ್ಗೆ ೬ರವರೆಗೂ ಇರುತ್ತೇ" ಎಂದು ಸಂದೇಶ್ ಅನುಮಾನಸ್ಪದವಾಗಿ ನನ್ನ ಕಡೆ ನೋಡಿದರು. ನಾನು "ಇಲ್ಲ ನನ್ನ ಕೈಲಿ ಆಗುತ್ತೆ. ರ್‍ಆತ್ರಿಯೆಲ್ಲ ಎದ್ದಿರುವುದು ನನಗೇನು ಹೊಸದಲ್ಲ. ಏಷ್ಟೋ ಬಾರಿ ಕೆಲಸದ ವೇಳೆ ಜಾಗರಣೆ ಮಾಡಿ ಅನುಭವವಿದೆ" ಎಂದು ನನ್ನ ತೀರ್ಮಾನಕ್ಕೆ ಮತ್ತಷ್ಟು ಬೆಂಬಲ ಕೊಟ್ಟೆ. ಅದಲ್ಲದೇ ಮಲೆನಾಡಿನಲ್ಲಿ ಯಕ್ಷಗಾನ ವೀಕ್ಷಣೆಯ ಸುಸಂಧರ್ಭವನ್ನು ಕಳೆದುಕೊಳ್ಳುವುದಾದರು ಹೇಗೆ? ಅದಕ್ಕೆ ನಾನು ಬಯಲಾಟವನ್ನು ಅನುಭವಿಸಿಯೇ ತೀರುತ್ತೇನೆಂದು ಸಣ್ಣ ಹಟ ಹಿಡಿದೆ. ಅದಕ್ಕೆ ಸಂದೇಶ್ ಸಮ್ಮತಿಸಿದರು. ಆದರೂ ನಿದ್ದೆ ಬಂದರೆ ಮನೆಗೆ ಯಾವ ಸಮಯದಲ್ಲಿ ಬೇಕಾದರು ವಾಪಸ್ ಬರಬಹುದೆಂದು ಅಭಯ ನೀಡಿದರು. ಅದರ ಪ್ರಕಾರ ನನ್ನ ಅಂದಿನ ಯಾತ್ರೆ ಬರಿಯ ಊಟಕ್ಕೇ ನಿಲ್ಲದೆ, ಬಯಲಾಟದೊಳಗೂ ನುಗ್ಗಿತು. ಬೈಕ್ ಏರಿದ ನನ್ನ ಸವಾರಿ ದೇವಂಗಿಯ ಕಡೆ ಸಾಗಿತು. 

    ಬೇಸಿಗೆಯಾದ್ದರಿಂದ ಬೀಸುತ್ತಿದ್ದ ಚಳಿಗಾಳಿ ದೇಹಕ್ಕೆ ಮನಸ್ಸಿಗೆ ಮುದವಾಗಿತ್ತು. ಮತ್ತೆ ಮನಸ್ಸು ಕವನಸೃಷ್ಟಿಗೆ ಕೈ ಹಾಕಿತ್ತು. ಮಲೆನಾಡ ರಾತ್ರಿಯಲಿ ಕಾರಿರುಳಿನಲಿ ಬೈಕಿನ ಮೇಲೆ ಕುಳಿತು ಒಬ್ಬನೇ ಸವಾರಿ ಮಾಡುತ್ತ ಕವಿತೆಯೊಂದನ್ನು ಕಟ್ಟುತ್ತಿದ್ದೆ. ಸಮಯಕ್ಕೆ ಸರಿಯಾಗಿ ಅಂದರೆ ರಾತ್ರಿ ೯ ಗಂಟೆಗೆ ದೇವಂಗಿ ಸರ್ಕಲ್‍ಗೆ ಬಂದೆ. "ಧರ್ಮಸ್ಥಳ ಮಹಾತ್ಮೆ" ಯಕ್ಷಗಾನದ ಹೆಸರು. ಈಗಾಗಲೆ ಎರೆಡು ಯಕ್ಷಗಾನಗಳನ್ನು ಮೊದಲೇ ನೋಡಿದ್ದೆ. ಆದರೆ ಇದೇ ಮೊದಲ ಬಾರಿ ಇಷ್ಟು ಸುಧೀರ್ಘವಾದ ಬಯಲಾಟವನ್ನು ನೋಡುತ್ತಿದ್ದುದು. ಈ ಬಯಲಾಟಗಳನ್ನು ಮನೆಯವರು ಹೊತ್ತ ಹರಕೆ ಪೂರ್ಣವಾಗಲೆಂದು ನಡೆಸುತ್ತಾರೆ. ಇದೇ ಮೊದಲು ನನಗೆ ಇದರ ಬಗ್ಗೆ ತಿಳಿದಿದ್ದು. ದೇವಂಗಿ ಸರ್ಕಲ್‍ನಿಂದ ಒಂದು ಫರ್ಲಾಂಗ್ ದೂರದಲ್ಲಿ, ಗದ್ದೆಬಯಲಿನಲ್ಲಿ ಯಕ್ಷಗಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಊರಿನ ಜನರೆಲ್ಲಾ ಬಂದಿದ್ದರು. ಡೇರೆ ಹಾಕಲಾಗಿತ್ತು. ಸುತ್ತಲೂ ತಿಂಡಿ ತೀರ್ಥಗಳನ್ನು ಮಾರುವ ತಾತ್ಕಾಲಿಕ ಗಾಡಿ ಮೇಲಿನ ಅಂಗಡಿಗಳು ತೆರೆದುಕೊಂಡಿದ್ದವು. ಸ್ಥಳಕ್ಕೆ ಹೋಗುವ ದಾರಿಯ ಮಗ್ಗುಲುಗಳಲ್ಲಾಗಲೇ ಹೆಂಡದ ಸಣ್ಣ ಶೀಶೆಗಳು ಬಿದ್ದಿದ್ದವು. ಅದನ್ನು ಕಂಡು ನನಗೆ ಜ್ಞಾಪಕಕ್ಕೆ ಬಂದಿದ್ದು ಕುವೆಂಪು ಕಾದಂಬರಿಗಳ "ಕಳ್ಳು". ಬಹುಶ: ಕುವೆಂಪುರವರು ತಮ್ಮ ಕಾದಂಬರಿಯ ಕಾಲಘಟ್ಟವನ್ನು ಭಾರತದ ಸ್ವಾತಂತ್ರ್ಯಪೂರ್ವಕ್ಕೆ ದೂಡಿ ಬರೆದಿದ್ದರೆ, ಈ ಶೀಶೆಗಳಿಗೂ ಕಾದಂಬರಿಯನ್ನು ಸೇರುವ ಪುಣ್ಯವಿರುತ್ತಿತ್ತೋ ಏನೊ ಅಂದುಕೊಂಡೆ. ಆಗಲೇ ಹಾಡು ಕುಣಿತಗಳು ರಂಗಪ್ರವೇಶ ಮಾಡಿದ್ದವು. ನಾನು ಕಥೆಯ ಕಡೆ ಗಮನ ಹರಿಸುವ ಬದಲು ಅಲ್ಲಿಯ ವಾತಾವರಣದ ಕಡೆ ಮೊದಲು ಕಣ್ಣಾಡಿಸಿದೆ. ಮೊದಲಿಗೆ ನನಗೆ ಆಶ್ಚರ್ಯವನ್ನು ತಂದಿದ್ದು  ಇಲ್ಲಿಯ ಜನರ ತಾಳ್ಮೆ ಹಾಗು ಆಸಕ್ತಿ. ಬೆಳಗಿನ ಜಾವದ ತನಕ ನೋಡುವ ತಾಳ್ಮೆ ಹಾಗು ಕಥೆಯನ್ನು ಕೇಳುವ ಆಸಕ್ತಿ. ಅಲ್ಲಿ ನೆರದಿದ್ದ ಅರ್ಧಪಾಲು ಜನರಲ್ಲಿ ಸಕುಟುಂಬ ಸಮೇತರಾಗಿ ಬಂದಿದ್ದವರೇ ಹೆಚ್ಚು. ಮಿಕ್ಕವರು ಪಡ್ಡೆ ಹುಡುಗರ ಗುಂಪು, ಗಂಡಸರ ಗುಂಪು, ಮುದುಕರ ಗುಂಪು ಹೀಗೆ ಹಲವಾರು ಗುಂಪುಗಳು. ನನ್ನಂತಹ ಒಬ್ಬಂಟಿಗಳು ಬಹಳ ಕಮ್ಮಿ. ಮುಂದಿನ ಸಾಲಿನಲ್ಲಿ ಕೂತಿರುವವರದ್ದೇ ಹೆಚ್ಚಿನ ಶ್ರದ್ದೆಯ ವೀಕ್ಷಣೆ. ಹಿಂದೆದ್ದವರೆಲ್ಲಿ ಯಕ್ಷಗಾನದ ಕಡೆ ಅಷ್ಟು ಗಮನವಿರಲಿಲ್ಲ ಬದಲಗಿ ಸ್ವಂತ ಹರಟೆ, ಮಾತುಗಳಲ್ಲಿ ಕಾಲ ಕಳೆಯುತ್ತಿದ್ದರು. ನಾನು ಆ ಸ್ಥಳವನ್ನು ಒಂದು ದೊಡ್ಡು ಸುತ್ತು ಹಾಕಿಬಂದು, ಅಲ್ಲಿನ ವ್ಯವಸ್ಥೆ, ಜನರ ಮಾತುಕತೆ, ಅವರ ಆಸಕ್ತಿ, ಎಲ್ಲವನ್ನು ಗಮನಿಸುತ್ತಿದ್ದೆ. ನಮ್ಮ ಬೆಂಗಳೂರಿನಲ್ಲಿ ಗಣೇಶೋತ್ಸವಗಳಲ್ಲಿ ಇಂತಹ "ಬಯಲಾಟ"ಗಳು ಬಂದರೆ ಚೆನ್ನಾಗಿರುತ್ತೆ ಎಂದೆನಿಸಿತು. ಅಂತೂ ಯಕ್ಷಗಾನ ಮುಗಿದಾಗ ಬೆಳಿಗ್ಗೆ ೬ ಗಂಟೆ. 

    ಇನ್ನೂ ಆಗತಾನೆ ಬೆಳಕರಿಯುತ್ತಿದ್ದರಿಂದ ನನ ಬುದ್ದಿಗೆ ತತ್‍ಕ್ಷಣ ಹೊಳೆದಿದ್ದು "ನವಿಲು ಕಲ್ಲು". ಹೌದು ಅಲ್ಲಿನ ಸೂರ್ಯೋದಯ ದರ್ಶನದ ಬಗ್ಗೆ ಕುವೆಂಪು ಬರಹಗಳಲ್ಲಿ ಓದಿ ಅನುಭವಿಸಿದ್ದೆ. ಅದರಲ್ಲೂ "ಬಾ ಫಾಲ್ಗುಣ ರವಿ ದರ್ಶನಕ್ಕೆ" ನನ್ನ ಅಚ್ಚುಮೆಚ್ಚಿನ ಕವನಗಳಲ್ಲಿ ಒಂದು. ರಸಋಷಿಯ ಭಾವಭೂಮಿಕೆಯಲ್ಲಿ ಅತ್ಯಂತ ಮನೋಜ್ಞವಾಗಿ ಮೂಡಿಬಂದ ಕವನ ಸೃಷ್ಟಿಯ ಸ್ಫೂರ್ತಿಯನ್ನು( ಸೂರ್‍ಯೋದಯ), ಸ್ವತಃ ನಾನೂ ಅನುಭವಿಸುವ ಸಲುವಾಗಿ ತಡಮಾಡದೆ ಹೊರಡಲನುವಾದೆ. ಈಗಾಗಲೇ ಎರೆಡು ಬಾರಿ ನವಿಲುಕಲ್ಲಿಗೆ ಬಂದಾಗಲೂ ಮೋಡ ಕವಿದಿದ್ದರಿಂದ, ಸೂರ್‍ಯೋದಯವನ್ನು ನೋಡಲಾಗಿರಲಿಲ್ಲ. ಇಂದಾದರು ಇಲ್ಲಿ ನಿಂತು ಆ ನಯನಮನೋಹರ ದೃಶ್ಯವನ್ನು ನೋಡುವ ಅದೃಷ್ಟವಿರಬಾರದೆ ಎಂದು ಮನಸ್ಸು ತಲ್ಲಣಿಸುತ್ತಿತ್ತು. ಕತ್ತಲೆಯಲ್ಲೇ ಬೈಕನ್ನು ಓಡಿಸಿಕೊಂಡು ನವಿಲುಕಲ್ಲು ತಲುಪಿದೆ. ಬೆಟ್ಟದ ತುದಿಯಲ್ಲಿ ಪ್ರಾಜ್ಞ್ಮುಖನಾಗಿ ನಿಂತು ಉದಯರವಿಯ ಬರುವಿಕೆಗಾಗಿ ಕಾಯುತ್ತಿದ್ದೆ. ನಿಶಾದೇವಿ ದಿಗಂತದಣತೆಯಲ್ಲಿ ಜಗಜ್ಯೋತಿಯನ್ನು ಯಾವಾಗ ಹಚ್ಚುವಳೋ ಎಂದು ದಿಗಂತವೀಕ್ಷನಾಗಿ ಕಾಯುತ್ತಿದ್ದೆ. ಆದರೆ ಈ ಬಾರಿಯು ನನಗೆ ಸೂರ್ಯೋದಯವನ್ನು ನೋಡುವ ಅದೃಷ್ಟವಿರಲಿಲ್ಲ. ಇಡೀ ಮಲೆನಾಡಿನ ಪೂರ್ವದಿಕ್ಕಿನ ವಿಶಾಲ ವಿಸ್ತಾರವನ್ನೇಲ್ಲಾ ಮಂಜಿನ ರಾಶಿ ಸಂಪೂರ್ಣವಾಗಿ ನುಂಗಿತ್ತು. ಗಿರಿ, ಕಣಿವೆ, ಕಾನನ ಸಮಸ್ತವನ್ನೆಲ್ಲಾ ಹಿಮಪ್ರವಾಹ ಮುಚ್ಚಿತ್ತು. ಮೂರನೆಯ ಬಾರಿಯು ನಾನು ಭಾರ ಹೃದಯದಿಂದ ಹಿಂತಿರುಗಬೇಕಾಯಿತು. ಹಿಂದಿರುಗುವಾಗ ಮನಸ್ಸಿನ್ನ ಮೂಲೆಯಲ್ಲಿ ಇನ್ನೂ ಕಿಂಚಿತ್ ಆಸೆಯ ಚೂರು ಉಳಿದಿತ್ತು ಅನಿಸುತ್ತೆ. ಅದಕ್ಕೇ ಆಗಾಗ್ಗ ಎಲ್ಲಿಯಾದರು ಮಂಜು ಕರಗಿ ಆರಕ್ತ ದಿಕ್ತಟದ ದರ್ಶನ ಸಿಗಬಹುದೇ ಎಂದು ಹಿಂದೆ ತಿರುಗಿ ತಿರುಗಿ ನೋಡುತ್ತಿದ್ದೆ. ಆದರೆ ಮಂಜು ಕರಗಲಿಲ್ಲ, ಬದಲಾಗಿ ನನ್ನ ಕೊನೆಯ ಆಸೆಯ ಚೂರು ಮಂಜಿನಂತೆ ಕರಗಿ ಹೋಯಿತು. ಮನೆಗೆ ಹಿಂತಿರುಗಿದ್ದಾಗ ಸಮಯ ಬೆಳಿಗ್ಗೆ ೮. ತಿಂಡಿ ತಿಂದು ಮಲಗಿಬಿಟ್ಟೆ. 

 

ಎರೆಡೆನೆಯ ದಿನ:

ರಾತ್ರಿಯೆಲ್ಲಾ ಎದ್ದಿದ್ದುರದಿಂದ ನಿದ್ದೆ ಬೇಗನೆ ಬಂದಿತ್ತು. ಮತ್ತೆ ಎದ್ದಾಗ ಮಧ್ಯಾಹ್ನ ಊಟದ ಸಮಯ. ಇವತ್ತು ಎರೆಡನೆಯ ದಿನ ಏನು ನೋಡಬಹುದೆಂದು ಸಾನು ಸಂದೇಶ್ ಲೆಕ್ಕ ಹಾಕುತ್ತಿದ್ದೆವು. ಆಗಲೇ ಮಧ್ಯಾಹ್ನವಾದ್ದರಿಂದ ದೂರ ಎಲ್ಲೂ ಹೋಗುವುದಕ್ಕೆ ಆಗುತ್ತಿರಲಿಲ್ಲ. ಆದ್ದರಿಂದ ಸಿಬ್ಬಲಗುಡ್ಡಕ್ಕೆ ಹೋಗಿ ಬರಬಹುದೆಂದು ತೀರ್ಮಾನವಾಯಿತು. ಊಟದ ನಂತರ ಸಿಬ್ಬಲಗುಡ್ಡಕ್ಕೆ ಹೊರಟೆ. ಅರ್ಧ ಗಂಟೆಯಲ್ಲಿ ಸಿಬ್ಬಲುಗುಡ್ಡವನ್ನು ಸೇರಿದ್ದೆ. ನಗರದ ದಟ್ಟನೆಯಲ್ಲಿ ಗಾಡಿ ಓಡಿಸಿ ಓಡಿಸಿ ಬೇಜಾರಾಗಿದ್ದ ನನಗೆ, ಈ ಹಳ್ಳಿಗಳಲ್ಲಿ ಅದರಲ್ಲೂ ಮಲೆನಾಡಿನಲ್ಲಿ ಗಾಡಿ ಓಡಿಸುವಾಗ ಆದ ಆನಂದ ಅಷ್ಟಿಷ್ಟಲ್ಲ. ಬೈಕಿನ ನನ್ನ ಎಲ್ಲಾ ಓಡಾಟಗಳ ಪರಿಣಾಮವಾಗಿ ಸೃಷ್ಟಿಸಿದ ಎರೆಡು ಕವನಗಳಿವೆ. ಒಂದು ಸಂಜೆಯ ಸೌಂದರ್ಯವನ್ನು ಬಣ್ಣಿಸುತ್ತದೆ......

ಬೈಗಿನಲಿ ಬೈಕಿನಲಿ

-------------------

ಪಶ್ಚಿಮದ ಘಟ್ಟದಲಿ ಏರಿಳಿವ ದಾರಿಯಲಿ

ಬೈಗಿನ ಬೆಳಕಿನಲಿ ಸಾಗಿತ್ತು ಪಯಣ.

ಬೀಸುತಿಹ ಗಾಳಿಗೆ ಮರದೊಳಗೆ ಮರ್ಮರವು,

ಮತ್ತಲ್ಲೇ ನುಡಿದಿತ್ತು ಪಕ್ಷಿಗಳ ನಿಸ್ವನ.

 

ಬಾನಿನಲಿ ಕೆಮ್ಮೋಡ ಕಲೆಯಂತೆ ತೇಲಿತ್ತು

ಹಸಿರೆಲೆಗೆ ಕೊಳದಲೆಗೆ ಕೆಂಬಣ್ಣ ಮೆತ್ತಿತ್ತು.

ಬೆಟ್ಟದ ತಡಿಯಲ್ಲಿ ಮನೆಯೆದುರ ತುಳಸಿಯಲಿ

ಬೀಸು ಗಾಳಿಗೆ ದೀಪ ನರ್ತಿಸುತ ಬೆಳಗಿತ್ತು.

 

ಮಲಯ ಮಲರಿನಲಿ ಮಲೆತಂತ ಕಂಪೆಲರು

ಪವನ ಪ್ರಸರದಲಿ ತೇಲುತ್ತ ಹರಡಿತ್ತು.

ಸವಿಗಂಪ ಹೀರುತ್ತ, ಸಿರಿ ಸೊಬಗ ಸವಿಯುತ್ತ,

ಬಂದ ಊರಿನ ನೆನಪು ಮನ ಪೂರ್ಣ ಮರೆತಿತ್ತು.

 

ಕವಿಮನಕೆ ಜಾರುತ್ತ ಕವಿಸಮಯವರಸುತ್ತ,

ಮಲೆಯ ಮಾರ್ಮಿಕದಿ ಮನ ಮಿಂದು ತಣಿಯುತ್ತ,

ಬೈಕಿನಲಿ ಬೈಗಿನಲಿ ಮೈಮನವು ಚಲಿಸಿತ್ತು.

 

ಪೇಟೆಯ ಪ್ರೇತಸ್ಮೃತಿ ಪ್ರಕೃತಿಯ ಪ್ರಣವಕ್ಕೆ

ಅಳುಕುತ್ತ ದಿಕ್ಕೆಟ್ಟು ಮನಬಿಟ್ಟು ಒಡಿತ್ತು.

ಭವ್ಯ ಭಾಸುರ ನೋಟ, ರಮ್ಯ ನೇಸರದಾಟ,

ದಿವ್ಯತೆಯ ಮಾಯೆಯಲಿ ಮನಸೂರೆಗೊಂಡಿತ್ತು.

 

ಅನುಭವವು ಹರಿಯುತ್ತ ಸೌಂದರ್ಯವೀಂಟುತ್ತ,

ಆನಂದದೆತ್ತರದಿ ದುಮ್ಮಿಕ್ಕಿ ಸುರಿಯುತ್ತ,

ರಸವಶದ ಝೇಂಕೃತಿಯ ರವ ಮೊಳಗಿಸಿತ್ತು.

 

ತನುವೆಲ್ಲಾ ಇಳೆಯಾಗಿ ಭಾವ ಮೃಣ್ಮಯವಾಗಿ,

ಪ್ರಕೃತಿಯೆ ಮಳೆಯಾಗಿ ತೊಯ್ದಿತ್ತು ಮನವ.

ಬೈಗಿನಲಿ ಬೈಕಿನಲಿ ಸಾಗುತಿಹ ಎನ್ನಾತ್ಮ,

ಅನುಸಂಧಾನದಲಿ ತಬ್ಬಿತ್ತು ಜಗವ.

 

ಇನ್ನೊಂದು ರಾತ್ರಿಯಲ್ಲಿ ಆದ ಭಾವಾನುಭವನ್ನು ವರ್ಣಿಸುತ್ತದೆ...

 

ಬೈಕಿನಲಿ ರಾತ್ರಿಯಲಿ

--------------------

ಜಗವು ಬಿಮ್ಮನಿಹುದು ನಿಶಾನೀರವತೆಯಲಿ.

ನಾನೊಬ್ಬ ಒಂಟಿ ಯಾತ್ರಿ ಬೈಕಿನಲಿ ರಾತ್ರಿಯಲಿ.

ನಕ್ಷತ್ರಗಳಲ್ಲಲ್ಲಿ ಜ್ಯೋತಿರ್ಲುಪ್ತ ಗಗನದಲಿ.

ಮರೆಯಾಗಿಹನು ಶಶಿ ಸುಧೀರ್ಘ ನಿರ್ಲಿಪ್ತತೆಯಲಿ

ಭುವಿಗೆ ಬೆನ್ನು ಮಾಡಿ ನಿಂತಿಹನು ಕೃಷ್ಣಪಕ್ಷದಲಿ.

ಪಕ್ಷಿಯಿಂಚರವಿಲ್ಲ, ಮೃಗಚಲನೆಯಿನಿತಿಲ್ಲ,

ವರ್ಣವೈವಿಧ್ಯವಿಲ್ಲ, ದಿಗಂತ ದರ್ಶನವಿಲ್ಲ.

ಸ್ವರ, ಸೌಂದರ್ಯ, ಸೌಸವಗಳು ಮರ್ತ್ಯದಲೇ ಇಲ್ಲ.

ಕತ್ತಲೆಯ ಏಕತಾನ ಸರ್ವವನಾವರಿಸಿರುವುದಲ್ಲ?

ನಾ ನಿಶಾಸಂಚಾರಿ ಅಲೆಯುತಿರುವೆ ಕಾಡಿನೊಳು,

ಕತ್ತಲೊಳಗೆ ಬೆರೆತು ಕತ್ತಲಾಗಿ, ನಿರಾಕಾರವಾಗಿ.

ತಂಗಾಳಿ ಬೀಸುತಿದೆ ಜಗದಿರುವಿಕೆಯ ದೂತನಾಗಿ.

    ಪಿಸುಗುಟ್ಟಿದೆ ಧನಿಯೊಂದು ಕಿವಿಯ ಬಳಿ ಬಂದು,

"ತಮಸೋಮ ಜ್ಯೋತಿರ್ಗಮಯ" ಎಂಬ ನುಡಿ ತಂದು.

ಕಂಪಿಸಿದೆ ತನುಮನವು ಧ್ವನಿಯ ಮೆಲುನುಡಿಗೆ, 

ಅಲ್ಲಾ!! ಅದರಂತಸತ್ವದ ದಿವ್ಯಾರ್ಥತೆಯ ಬಗೆಗೆ.

ಪಿಸುಗುಟ್ಟ ಧ್ವನಿಯು  ಕತ್ತಲೊಳಗವಿತ ಮಾಯೆಯೊ?

ಅಥವಾ ಘೋರ್‍ಆಂಧಕಾರಕೆ ಸ್ಪಂದಿಸಿಹ ಎದೆಯ ನುಡಿಯೊ?

ಬಹಿರ್ನಿಶಾಂಧತೆಯ ಕಂಡು ಅಂತರಂಗ ಸಂಕೇತಿಸಿದೆನಗೆ,

"ಒಳಗೆಲ್ಲೋ ಕತ್ತಲೆಯಿದೆ ದೂಡದನು ಬೇಗ ಹೊರಗೆ"!!

ಪಿಸುನುಡಿಯು ಮರಳಿ ಮರಳಿ ನುಡಿಯುತಿದೆ ಕಿವಿಯಲ್ಲಿ.

ಬೈಕಿನ ಮುಂಬೆಳಕೊಂದೇ ಕತ್ತಲೆಯ ಕೊರೆಯುತಿದೆ ಕಾಡಲ್ಲಿ.

ಸಿಬ್ಬಲುಗುಡ್ಡೆಯಲ್ಲಿ ಗುಡಿಯ ಗನೇಶನ ದರ್ಶನವನ್ನು ಪಡೆದು ಹೊಳೆಯ ಹತ್ತಿರ ಬಂದೆ. ಅಲ್ಲಿ ಕುವೆಂಪುರವರ ಇನ್ನೊಂದು ಕವನ ನೆನಪಿಗೆ ಬಂತು. ಈ ಕವನವೂ ನನಗೆ ಬಹಳ ಅಚ್ಚುಮೆಚ್ಚು. ಆ ಕವನವನ್ನು ನೆನೆಯುತ್ತ ಅಲ್ಲೇ ಬೆಂಚಿನಲ್ಲಿ ಕುಳಿತೆ. ತೃಪ್ತಿಯಾಗುವಷ್ಟು ನದಿಯನ್ನು, ಸುತ್ತಲಿನ ಚೆಲುವನ್ನು ನೋಡುತಲಿದ್ದೆ. ನಂತರ ಜೊತೆಗೆ ತಂದಿದ್ದ "ಮಲೆಗಳ ಮದುಮಗಳು" ಕಾದಂಬರಿಯನ್ನು ಓದಲು ಶುರುಮಾಡಿದೆ. ಆ ಸುಂದರ ಪ್ರಕೃತಿಯಲ್ಲಿ, ಹೊಳೆಯ ಮಂಜುಳ ಗಾನವನ್ನು ಕೇಳುತ್ತ, ಹಕ್ಕಿಗಳ ಚಿಲಿಪಿಲಿಗಳ ನಡುವೆ ಕಾದಂಬರಿಯನ್ನು ಅದರಲ್ಲೂ ಮಲೆನಾಡಿನ ತಪ್ಪಲಲ್ಲಿ ನಡೆದ ಕಥೆಯನ್ನು ಓದುವುದೆಂದರೆ ಅಮೂಲ್ಯ ಅಪೂರ್ವ ಅನುಭವ. ಈ ಅನುಭವ ನನ್ನ ಮನದಲ್ಲಿ ಇನ್ನೆಂದು ಚಿರಸ್ಥಾಯಿ. ಮುಸ್ಸಂಜೆಯವರೆಗೂ ಅಲ್ಲೇ ಓದುತ್ತ ಕುಳಿತಿದ್ದೆ. ಅವತ್ತಿನಷ್ಟು ತೃಪ್ತಿಕರವಾದ ಓದು ಇನ್ನೆಂದಿಗೂ ಬಾರದೇನೊ ?

ಸಂಜೆ ಮನೆಗೆ ವಾಪಾಸಾದೆ. ಸಂದೇಶ್ ಮನೆಯ ಓಟದ ರುಚಿ ಬಲ್ಲವನ್ನೇ ಬಲ್ಲ. ತಿಂಡಿಯಾಗಲಿ, ಊಟವಾಗಲಿ ಎಲ್ಲಾ ತಿನಿಸುಗಳು ಅದ್ಭುತ. ಮೊದಲೇ ಮಲೆನಾಡ ಭೋಜನಗಳು, ಅದಕ್ಕೂ ಮೀರಿ ನೀರೂರಿಸುವ ರುಚಿ ಬೇರೆ.  ನನ್ನ ಊಟದ ಮಿತಿಯನ್ನು ಸಾಮನ್ಯಕ್ಕಿಂತಲೂ ಜಾಸ್ತಿ ಮಾಡಿತ್ತು. ಅಕ್ಕಿ ರೊಟ್ಟಿಯಾಗಲಿ, ದೋಸೆಯಾಗಲಿ, ಕಡುಬಾಗಲಿ ಎಲ್ಲವೂ ಒಂದು ಕೈ ಜಾಸ್ತಿಯೇ ತಿಂದೆ.  ರಾತ್ರಿ ಊಟವಾದ ಮೇಲೆ ಅಲ್ಲೇ ಮನೆಯ ಹತ್ತಿರ ನಾನು ಸಂದೇಶ್ ವಾಕಿಂಗ್ ಹೊರೆಟೆವು. ರಾತ್ರಿಯ ಜೀರುಂಡೆಗಳ ಝೇಂಕೃತಿಗೆ ಪಂದ್ಯ ಕಟ್ಟಿತ್ತು ನಮ್ಮ ಮಾತಿನ ಧಾಟಿ. ಮಾತಿನ ಗಾಡಿಗೆ ಗುರಿಯೆ ಇಲ್ಲದೆ, ಎಲ್ಲೆಂದರಲ್ಲಿ ಓಡಾಡುತ್ತ ದೇಶ, ಕಾಲ, ಸಾಹಿತ್ಯ, ಬಾಲ್ಯ, ನಂಬಿಕೆ, ದೇವರು, ವಿಜ್ಞಾನ ಎಲ್ಲಾ ಸ್ಥಳಗಳನ್ನು ಸುತ್ತಿತ್ತು. ಬೆಂಗಳೂರಿನ ಕಣ್ಣಿಗೆ ಕಾಣದ ಅನೇಕ ನಕ್ಷತ್ರಗಳನ್ನು ನೋಡುತ್ತ ರಾತ್ರಿ ಮಲಗಿದಾಗ ಗಂಟೆ ೧೧:೩೦ ಆಗಿತ್ತು.

ಮೂರನೆಯ ದಿನ:  

ಇವತ್ತು ಬೆಳಿಗ್ಗೆ ಕವಲೆದುರ್ಗ ಹಾಗು ಸಂಜೆ ಸೂರ್ಯಾಸ್ತಕ್ಕೆ ಕೊಡಚಾದ್ರಿಗೆ ಹೋಗುವುದು ಎಂದು ತೀರ್ಮಾನಿಸಿದೆ. ಆದರೆ ನಾನು ಬೆಂಗಳೂರಿಗೆ ವಾಪಸ್ ಆಗಲು ಇನ್ನು ಮೂರು ದಿನಗಳ ಸುದೀರ್ಘ ಸುಂದರ ದಿನಗಳು ಬಾಕಿ ಇದ್ದವು. ಆದ್ದರಿಂದ ಈ ಎರೆಡು ಸ್ಥಳಗಳನ್ನು ನೋಡುವ ಕಾರ್ಯಕ್ರಮವನ್ನು ಮಾರನೆಯ ದಿನಕ್ಕೆ ಇಟ್ಟುಕೊಂಡೆ. ಇವತ್ತು ಏನು ಮಾಡುವುದು, ಎಲ್ಲಿಗೆ ಹೋಗುವುದು ಎಂದು ತಿಳಿಯದೆ ಸಂದೇಶ್ ಅವರನ್ನೇ ಕೇಳಿದೆ.  ಕುವೆಂಪು ಸಾಹಿತ್ಯ ಕೇಂದ್ರದಲ್ಲೂ ಯಾವುದೆ ಕಾರ್ಯಕ್ರಮವಿರಲಿಲ್ಲ, ಅದಕ್ಕೆ ಸಂದೇಶ್ "ನನ್ನ ಜೊತೆಗೆ ಇರಿ, ನನ್ನ ವ್ಯವಸಾಯದ ಕೆಲಸಗಳನ್ನೆಲ್ಲಾ ನೋಡಬಹುದು" ಎಂದು ಹೇಳಿದರು. ಅದರ ಜೊತೆಗೆ ಸಾಯಂಕಾಲ ಅವರ ಸಂಭಂಧದವರ ಹಳೆಯ ಮನೆಯೊಂದನ್ನೂ ನೋಡುವುದಕ್ಕೆ ಹೋಗೋಣವೆಂದರು. ನನಗೂ ಅದು ಹಿಡಿಸಿತು. ಅದರ ಪ್ರಕಾರ ಬೆಳಿಗ್ಗೆ ಸಂದೇಶ್ ಅವರ ಅಡಕೆಯ ತೋಟಕ್ಕೆ ಹೊರಟೆವು. ಅಲ್ಲಿ ತೋಟಕ್ಕೆ ಗೊಬ್ಬರ ಹೊಡೆಸುತ್ತಿದ್ದರು. ಅಲ್ಲಿ ಅವರ ತೋಟಗಳ ಉಸ್ತುವಾರಿಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದವರನ್ನು  "ಇವರೆ ನಮ್ಮ ಸೇರೆಗಾರು"  ಅಂತ ಹೇಳಿ ಪರಿಚಯಿಸಿದರು. "ಈಗಿನ ಕಾಲದಲ್ಲಿ ಸೇರೆಗಾರರು ಸಿಗುವುದೇ ಕಷ್ಟ, ಅಂತಹದರಲ್ಲಿ ಇವರು ಸಿಕ್ಕಿರುವುದೇ ಹೆಚ್ಚು" ಎಂದು ಹೇಳಿ ತಮ್ಮ ಅಡಕೆ ತೋಟದ ಒಳಗೆ ಕರೆದು ಕೊಂಡು ಹೋದರು. ನಾನು ಮುಂದೆ ನಡೆದನಾದರು ನನ್ನ ಸಕಲ ಬುದ್ಧಿಯೂ ಸೇರೆಗಾರರನ್ನು ಹಿಂದೆ ತಿರುಗಿ ತಿರುಗಿ ನೋಡತೊಡಗಿತು. ಅದಕ್ಕೆ ಕಾರ್‍ಅಣ, ಕುವೆಂಪು ಕಾದಂಬರಿಗಳಲ್ಲಿ ಓದುವಾಗ ನನ್ನ ಮನಸ್ಸು ಹೇಗೆ ಅಲ್ಲಿಯ ಸೇರೆಗಾರರ ಪಾತ್ರಗಳ ರೂಪಪಲಕ್ಷಣಗಳನ್ನು, ತನ್ನ ಪ್ರತಿಭಾ ಕೌಶಲ್ಯದಿಂದ ಕ್ರಿಯಾಶೀಲತೆಯಿಂದ ಚಿತ್ರಿಸಿತ್ತೋ, ಆ ರೂಪಕ್ಕೆ ಹೊಂದುವಂತೆ ಈ ಸೇರ್‍ಎಗಾರರು ಕಾಣಿಸುವರೆ ಎಂಬುದನ್ನು  ಪರೀಕ್ಷಿಸುವುದಕ್ಕಾಗಿ. ಈ ಕಲ್ಪನೆಯ ಪಾತ್ರಕ್ಕೂ , ನಿಜ ಜೀವನದ ವ್ಯಕ್ತಿಗೂ ಭೀಮ, ಸಹದೇವನ ಅಂತರವಿತ್ತು. ಇಲ್ಲಿ ಕಂಡ ಸೇರೇಗಾರರು  ಒಂದು ಚೂರು  ಕಾದಂಬರಿಯಲ್ಲಿ ಕಂಡುಬರುವ ಸೇರೆಗಾರರಿಗೆ ಯಾವರೀತಿಯಲ್ಲೂ ಸರಿಹೊಂದುತ್ತಿರಲಿಲ್ಲ. ಅಲ್ಲಿ ಬರುವ ಸೇರೆಗಾರರ ಚಿಂತನೆಗಳು, ಸಂಭಾಷಣೆ ಮತ್ತು ರಹಸ್ಯ ತಂತ್ರಗಳು, ವಾಸ್ತವ ಸೇರೆಗಾರರ ಧ್ವನಿ, ದೇಹ, ವರ್ಚಸ್ಸಿನಿಂದ ಬಹುದೂರ ನಿಂತಿದ್ದವು.  ನಾನು ಈ ಇಬ್ಬರು ಸೇರೆಗಾರರನ್ನು ತೂಗುಹಾಕಿ ನೋಡುವುದು ಬಿಟ್ಟು,  ಅಲ್ಲೇ ಹಾಗೆ ತೋಟವನ್ನೇಲ್ಲಾ ಅಡ್ಡಾಡುತ್ತ, ತೋಟದ ಹಿಂದೆ ಹರಿಯುತ್ತಿದ್ದ ಹೊಳೆಯಕಡೆ ನಡೆದೆ. ಹೊಳೆಯಲ್ಲಿ ನೀರಿನ ಹರಿವು ಅಷ್ಟಿರಲಿಲ್ಲವಾದ್ದರಿಂದ, ನಾನು ಹತ್ತಿರ ಹೋಗುವವರೆಗೂ ಹರಿವಿನ ಸದ್ದು ಕೇಳಿಸಲೇ ಇಲ್ಲ. ಹೊಳೆಯ ಎರೆಡೂ ಬದಿಯೂ ಬಳುಕುತ್ತಿದ್ದ ಅಡಿಕೆಯ ತೋಟ, ತೋಟಕ್ಕೆ ಅಂಟುಕೊಂಡಿದ್ದ ಕಿರು ಕಾಡು, ಕಾಡಿನ ನೇಪಥ್ಯದಿಂದ ಹೊಮ್ಮುತ್ತಿದ್ದ ಹಕ್ಕಿಗಳ ಸಣ್ಣ ಚಿಲಿಪಿಲಿ ನಾದ, ಹುಳಹುಪ್ಪಟೆಗಳ ಜೀಗುಡುವ ಸದ್ದು, ಪ್ರಕೃತಿಯು ಹೊಸ ನಾಟಕವೊಂದಕ್ಕೆ ಸಜ್ಜುಗೊಳ್ಳುವಂತಿತ್ತು. ಒಮ್ಮೊಮ್ಮೆ ನಾಟಕ ನೋಡುವುದಕ್ಕಿಂತ ಅದರ ಸಿದ್ಧತೆಯನ್ನು ನೋಡುವುದೇ ರಂಜನೀಯವಾಗಿರುತ್ತದೆ. ಹಾಗೆಯೇ ನಾನು ಕೂಡ ಇಲ್ಲಿ ತೀರದ ತುದಿಯ ಮರದ ನೆರಳಲ್ಲಿ ನಿಂತು ರಂಗವೀಕ್ಷಕನಾಗದೆ, ಅದರ ಹಿಂದಿನ ನೇಪಥ್ಯವೀಕ್ಷಕನಾಗಿದ್ದೆ. ಈ ಶಾಂತವೀಕ್ಷಣೆಯ ಮಧ್ಯೆ ಒಂದು ಸಲ ಬೆಂಗಳೂರು ನಗರದ ಕಿಕ್ಕಿರಿದ ರಸ್ತೆಗಳು, ವಾಹನ ದಟ್ಟನೆಯ ಹೊಗೆ, ಕಣ್ಣ ಮುಂದೆ ಮಿಂಚಿನಂತೆ ಬಂದು ಬೆಚ್ಚಿಬೀಳಿಸಿ ಹೋಯಿತು. ಅದನ್ನು ಮರೆಯಲು ನನಗೆ ಶುಭ್ರಗಾಳಿಯ ಒಂದೆರೆಡು ದೀರ್ಘ ಉಚ್ಛ್ವಾಸವೇ ಬೇಕಾಯಿತು.

    ಮತ್ತೆ ಮಧ್ಯಾಹ್ನ ಮನಗೆ ಬಂದು ಸ್ವಲ್ಪ ವಿಶ್ರಾಂತಿಯನ್ನು ಪಡೆದದ್ದಾಯಿತು. ಕಾದಂಬರಿ ಓದುತ್ತ ಒಂದು ಸುತ್ತು ನಿದ್ದೆಯೂ ಮಾಡಿಯಾಗಿತ್ತು. ಸಂದೇಶ್ ನಾನು ಇಲ್ಲಿಗೆ ಬಂದಾಗಿನಿಂದ ಅವರ ಒಬ್ಬರ ನೆಂಟರ ಪುರಾತನ ಮನೆಯೊಂದನ್ನು ನನಗೆ ತೋರ್‍ಇಸುತ್ತೇನೆ ಅಂತ ಹೇಳುತ್ತಿದ್ದರು. ಅದಕ್ಕೆ ಇಂದು ಮಹೂರ್ತ ಕೂಡಿಬಂದು ಸುಮಾರು ೪ ಗಂಟೆಗೆ "ಬಿಳುಮನೆ" ಗೆ ಬೈಕಿನಲ್ಲಿ ಹೊರೆಟೆವು. ಹಾರೊಗೊಳಿಗೆಯನ್ನು ಬಿಟ್ಟು ಮಾಲಾವತಿ ನದಿಯನ್ನು ದಾಟಿಕೊಂಡು ತೀರ್ಥಹಳ್ಳಿ- ಆಗುಂಬೆ ಹೆದ್ದಾರಿಯನ್ನು ಸೇರಿದೆವು. ದಾರಿಯಲ್ಲಿ  ಲಕ್ಕುಂದ , ಮೇಘರವಳ್ಳಿ ಎಲ್ಲವನ್ನು ಕಂಡೆ.( 'ಮಲೆಗಳಲ್ಲಿ ಮದುಮಗಳ' ಕಾದಂಬರಿಯಲ್ಲಿ ಬರುವ ಸ್ಥಳಗಳು). ಆದರೆ ನೋಡುವ ನೋಟವನ್ನೆಲ್ಲಾ ಹೆದ್ದಾರಿಯ ವಿಶಾಲ ರಸ್ತೆಯೆ ಆಕ್ರಮಿಸಿಕೊಂಡು, ಕಾದಂಬರಿಯಲ್ಲಿ ಸಿಗುತ್ತಿದ್ದ ಸ್ಥಳಾನುಭವಕ್ಕೂ , ಇಲ್ಲಿ ನಾನು ನೋಡುತ್ತಿದ್ದ ನೋಟಕ್ಕೂ ಯಾವುದೇ ರೀತಿಯ ಸಾಮ್ಯವಿರಲಿಲ್ಲ. ಯಾವುದೋ ಸಾಮಾನ್ಯ ಪಟ್ಟಣಗಳಂತೆ ಸುಮ್ಮನೆ ಕಣ್ಣ ಮುಂದೆ ನಿರ್ವಿಶೇಷತೆಯಿಂದ ಹಾದುಹೋದವು. ಆಗುಂಬೆಗೆ ೫ ಕಿ.ಮೀ ಮುಂಚೆಯೇ ಹೆದ್ದಾರಿಯ ಬಲಬಾಗಕ್ಕೆ ಸಿಗುವ ಚಿಕ್ಕ ರಸ್ತೆ, ನಮ್ಮನ್ನು ಬಿಳುಮನೆಯ ಕಡೆಗೆ ಕರೆದುಕೊಂಡು ಹೋಯಿತು. ಸುತ್ತಲಿನ ಕಾಡು ಕುಪ್ಪಳ್ಳಿ, ಹಾರೊಗೊಳಿಗೆಗಳಿಗಿಂತ ದಟ್ಟವಾಗಿತ್ತು. ಒಂದರೆಡು ಕಿ.ಮೀ ಸಾಗಿದ ನಂತರ ದೂರ್‍ಅದಲ್ಲಿ ಬೃಹತ್ ಮನೆಯೊಂದು ಅರಣ್ಯದ ಮಧ್ಯದಲ್ಲಿ ಗುಮ್ಮನೆ ಕೆಂಪು ಹಾಗು ಬಿಳಿಯ ಬಣ್ಣದಲ್ಲಿ ವಿಶಾಲವಾಗಿ ಹರಡಿ ನಿಂತಿತ್ತು. ಮನೆಯ ಅಂಗಳಕ್ಕೆ ಬಂದೊಡನೆ, ಮನೆಯವರ ಪರಿಚಯವಾಯಿತು. "ಬೆಂಗಳೂರಿನಿಂದ ಹಳೆಯ ಮನೆಯನ್ನು ನೋಡುವುದಕ್ಕೆ ಬಂದಿದ್ದೇನೆ" ಎಂದು ನಾನು ಬಂದ ಕಾರ್‍ಅಣವನ್ನು ತಿಳಿಸಿದೆ. ಈಗಾಗಲೆ ನನ್ನಂತಹ ಅನೇಕರನ್ನು ಈ ಮನೆ ಸ್ವಾಗತಿಸಿತ್ತು. ತನ್ನ ಭವ್ಯತೆಯನ್ನು, ಹಿರಿತನವನ್ನು ಸಿರಿಸೊಬಗನ್ನು ಅತಿಥಿಗಳಿಗೆ ಬಹುಕಾಲದಿಂದಲೂ ಉಣಬಡಿಸುತ್ತಿತ್ತು.  ಮನೆಯ ವಾರಸುದಾರರೊಬ್ಬರು ಮನೆಯ ಹೊರಗಿನ, ಒಳಗಿನ ಸಂಪೂರ್ಣ ಪರಿಚಯ ಮಾಡಿಕೊಟ್ಟರು. ಪಾಚಿ ಮೆತ್ತಿದ ಕೆಂಪು ಹೆಂಚಿನ ಮನೆ, ವಿಶಾಲ ಪ್ರಾಂಗಣ, ಮನೆಯ ಬಾಗಿಲಿನ ಎದುರಿಗೆ ಭಕ್ತಿಸೂಚಕವಾಗಿ ನಿಂತಿದ್ದ ತುಳಿಸಿಯ ಕಟ್ಟೆ, ತಲೆ ಬಗ್ಗಿಸಿ ಹಾದು ಹೋಗಬೇಕಾದ ಬಾಗಿಲುಗಳು, ಅದರಲ್ಲಿ ಅರಳಿದ್ದ ಸುಂದರ ಕಲಾಕೃತಿಯ ಕೆತ್ತನೆ, ಕೆಳಗೆ ಹೊಳೆಯುತ್ತಿದ್ದ ಕೆಂಪು ನೆಲ, ಗೋಡೆಯ ಪಕ್ಕದಲ್ಲೇ ಹಾದುಹೋಗಿದ್ದ ರಂಗೋಲಿಯ ಸಮಾನಾಂತರ ರೇಖೆಗಳು, ಒಳಗೆ ಸಾಲಾಗಿ ನಿಂತಿದ್ದ ಮರದ ಕಂಬಗಳು, ಕೋಣೆಗಳಲ್ಲಿ ಹಾಗು ಅಡುಗೆ ಮನೆಯಲ್ಲಿದ್ದ ನಾಗಂದಿಗೆಗಳು( ಅಟ್ಟ), ಹೊಗೆಗೆ ಕಪ್ಪು ಹಿಡಿದಿದ್ದ ಮರದ ಮೆಲ್ಚಾವಣಿ, ಎಲ್ಲವೂ ಪ್ರಾಚೀನತೆಯನ್ನು ಭೂತಕಾಲದ ಗರ್ಭದಿಂದ ಸುರಂಗವನ್ನು ತೋಡಿ ವರ್ತಮಾನಕ್ಕೆ ತಂದು ಸುರಿದಿತ್ತು. ಆ ಪುರಾತನ ರಾಶಿಯು ನಮ್ಮ ಮನಸ್ಸು ಬುದ್ಧಿಯನ್ನೆಲ್ಲಾ ಹಿಂದಿನ ಕಾಲಕ್ಕೆ ಕರೆದೊಯ್ದಿತ್ತು. ಸಂದೇಶ್ ಈ ಮನೆಯಲ್ಲಿ ಸದ್ಯ ವಾಸಿಸುತ್ತಿರುವವರ, ಅದಕ್ಕೆ ಹಿಂದಿನವರ ಮತ್ತೂ ಅದಕ್ಕೂ ಮುಂಚಿನ ಪೀಳಿಗೆಗಳ ವಿವವರಣೆ ನೀಡಿದರು. ಮನೆಯವರೆಲ್ಲ ಈ ಮನೆಯನ್ನು ಮೊದಲು ಕಟ್ಟಿದ ಅವರ ಮುತ್ತಾತನ ತಂದೆಯನ್ನು ನೆನೆಸಿಕೊಂಡರು. ಮನೆಯ ಚರಿತ್ರೆಯು, ಈ ಹಿಂದೆ ಲೆಕ್ಕವಿಲ್ಲದಷ್ಟು ಸಲ ಅಲ್ಲಿಗೆ ಬಂದು ಹೋಗುತ್ತಿದ್ದ ಎಷ್ಟೋ ಜನರ ಮನಗಳಲ್ಲಿ ಚಿತ್ರಿಸಿದಂತೆ, ಇಂದು ನಮ್ಮ ಮನಸ್ಸುಗಳಲ್ಲಿಯೂ ಹಳೆಯ ನೆನಪುಗಳ ಒಂದು ಸುಂದರ ಚಿತ್ರವನ್ನು ಬರೆದಿತ್ತು. ಒಂದು ಸುತ್ತು ಕಾಫಿ ಕುಡಿದು, ಮನೆಯ ಹಿಂದೆ ಸೂರ್ಯಾಸ್ಥವನ್ನು ನೋಡಲೊರೆಟೆವು. ತುಂಗಾ ನದಿಯ ಹಿನ್ನೀರು ಮನೆಯ ಹಿಂಬಾಗದಲ್ಲೇ ಅಡಿಕೆ ತೋಟ, ಗದ್ದೆ, ಕಾಡನ್ನು ಬಳಿಸಿಕೊಂಡು ನಿಂತಿದ್ದ ದೃಶ್ಯ ನಯನಮನೋಹರವಾಗಿತ್ತು. ಬೆಟ್ಟಗಳ ಹಿಂದೆ ಜಾರುತ್ತಿದ್ದ ಸೂರ್ಯನ ಫೋಟೊಗಳನ್ನು ತೆಗೆದು, ಗದ್ದೆ, ತೋಟಗಳಲ್ಲಿ ಅಡ್ಡಾದಿ ಮನೆಗೆ ಮರಳುವ ಹೊತ್ತಿಗೆ ಕತ್ತಲೆಯಾಗಿತ್ತು. ನಾನು ಸಂದೇಶ್ ಮತ್ತೆ ಬೈಕಿನಲ್ಲಿ ನಸುಕಿನಲ್ಲೇ ಮತ್ತೆ ಹಾರೊಗೊಳಿಗೆಗೆ ಪ್ರಯಾಣ ಬೆಳೆಸಿದೆವು.

   

ನಾಲ್ಕನೆಯ ದಿನ:

ಇಂದು ಎಲ್ಲಿಗೆ ಹೋಗುವುದು, ಏನು ಮಾಡುವುದೆಂದು ತಿಳಿದಿರಲಿಲ್ಲ. ನಾನು ಇವತ್ತೂ ಕೂಡ ಕವಿಮನೆಯ ಕಡೆಗೋ, ಅಥವಾ ಸಿಬ್ಬಲಗುಡ್ಡದ ಕಡೆಗೋ ಹೋಗಿ, ಅಲ್ಲೇ ಎಲ್ಲಾದರೂ ಕುಳಿತುಕೊಂಡು ಕಾದಂಬರಿಯನ್ನು ಓದಿಕೊಂಡರಾಯಿತು ಎಂದು ಅಂದುಕೊಂಡಿದ್ದೆ. ಆದರೂ ಇಂದಿನ ಕಾರ್ಯಕ್ರಮವನ್ನು ಹೇಗಿದ್ದರೆ ಚೆನ್ನಾಗಿರುತ್ತೆ ಎಂದು ನಾನು ಸಂದೇಶ್ ವಿಚಾರಮಾಡುತ್ತಲೇ ತಿಂಡಿ ಕಾಫಿ ಮುಗಿಸಿದ್ದೆವು.  ಹೀಗೆ ಅದೂ ಇದೂ ಮಾತಾಡಬೇಕಾದರೆ, ಸಂದೇಶ್ ಮನಸ್ಸಿನಲ್ಲಿ ಅಡಗಿದ್ದ ಹಳೆಯ ಯೋಜನೆಯೊಂದು ಮಾತಿನ ಮಧ್ಯೆದಲ್ಲಿ ಧಿಡೀರನೆ ಆಚೆಗೆ ಬಂತು. ಅದೇನೆಂದರೆ ಅಚಿಂತ್ಯಳಿಗೆ ಶೃಂಗೇರಿಯ ಸರಸ್ವತಿಯ ಸಾನಿಧ್ಯದಲ್ಲಿ "ಅಕ್ಷರಭ್ಯಾಸ" ಮಾಡಿಸುವುದು. ಆಯ್ತು ಅಲ್ಲಿಗೆ ಹೋಗುವುದೆಂದು ನಿರ್ಧಾರವಾಯಿತು. ಸಂದೇಶರಗಿ ತಮ್ಮ ತೋಟದಲ್ಲಿ ಸ್ವಲ್ಪ ಕೆಲಸವಿದ್ದುದದರಿಂದ, ಅದನ್ನು ಮುಗಿಸು ಮನೆ ಬಿಡುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡಾಗಿತ್ತು. ನಾವು ಶೃಂಗೇರಿ ತಲುಪವಷ್ಟರಲ್ಲಿ ೨ ಗಂಟೆಯಾಗಿಹೋಗಿತ್ತು. ಇನ್ನೇನು ದೇವಸ್ಥಾನದ ಬಾಗಿಲು ಮುಚ್ಚಬೇಕು ಅಷ್ಟರೊಳಗೆ ಒಳಗೆ ಹೋಗಿ ಶಾರದೆಯ ದರ್ಶನ ಪಡೆದೆವು. ಆದರೆ  "ಅಕ್ಷರಭ್ಯಾಸ" ದ ವಿಭಾಗ ನಾವು ಹೋಗುವಷ್ಟರಲ್ಲಿ ಮುಚ್ಚಿತ್ತು. ನಿರಾಸೆಯಾದರು, ಅಷ್ಟು ದೂರದಿಂದ ಬಂದಿದ್ದ ನಮಗೆ ದೇವರ ದರ್ಶನವಾದರೂ ಸಿಕ್ಕಿತಲ್ಲ ಎಂಬುದು ಸಮಾಧಾನಕರವಾಗಿತ್ತು. ಸಂದೇಶ್ "ಮತ್ತೊಮ್ಮೆ ಮುಂದಿನ ತಿಂಗಳು ಇಲ್ಲಿಗೆ ಬಂದು ಅಕ್ಷರಭ್ಯಾಸವನ್ನು ಮಾಡಿದರಾಯಿತು" ಎಂದು ಎಲ್ಲರಿಗೂ ಸಮಾಧಾನದ ಮಾತನಾಡಿದರು. ನಂತರ ಅಲ್ಲಿಂದ ಮನೆಗೆ ಹಿಂದಿರುಗಿ ಹೊರೆಟೆವು. ಮಾರ್ಗ ಮಧ್ಯದಲ್ಲಿ ಸಂದೇಶ್ ರವರ ನೆಂಟರೊಬ್ಬರ ಮನೆಯಲ್ಲಿಯೇ ಊಟ ಮುಗಿಸಿದೆವು. ಅಲ್ಲಿಂದ ಮತ್ತೆ ಹೊರಟು ಸ್ವಂತ ಗೂಡಿಗೆ ಸೇರಿದಾಗ ಮಧ್ಯರಾತ್ರಿಯಾಗಿತ್ತು. ರಾತ್ರಿ ಮಲಗಿ ಕೊಂಡಾಗ ನನ್ನ ಮನಸ್ಸು ಆಗಲೇ ಕಳೆದ ನಾಲ್ಕು ಅದ್ಭುತ ದಿನಗಳನ್ನು ಮೆಲಕು ಹಾಕುತ್ತಿತ್ತು. ಸುಂದರ ಅನುಭವಗಳನ್ನು ಮತ್ತೊಮ್ಮೆ ಮಗದೊಮ್ಮೆ ಪುನರಾವರ್ತಿಸಿ ಆನಂದಿಸುತ್ತಿತ್ತು. ಇನ್ನೇನು "ಬೆಂಗಳೂರಿಗೆ ಹೊರಡಲೂ ಇನ್ನೊಂದೇ ದಿನ ಉಳಿದಿದೆ" ಎಂದು ಕಳವಳಿಸುತ್ತಿತ್ತು. ಎಲ್ಲ ಅನುಭವಗಳನ್ನು, ಮುಂದೆ ಎಂದಾದರು ಇವು ಮನಸ್ಸಿಗೆ ಮುದ ಕೊಡಬಹುದೆಂಬ ಕಾಳಜಿಯಿಂದ ನೆನಪಿನ ಪೆಟ್ಟಿಗೆಯಲ್ಲಿ ಶೇಖರಿಸುತ್ತಿತ್ತು. 

ಐದನೆಯ ದಿನ:

  ಈ ನಾಲ್ಕು ದಿನಕ್ಕಾಗಲೇ ನನಗೆ ತೀರ್ಥಹಳ್ಳಿ, ಕುಪ್ಪಳ್ಳಿ, ದೇವಂಗಿ, ಸಿಬ್ಬಲುಗುಡ್ಡೆ, ನವಿಲುಕಲ್ಲು, ಮೇಣಿಗೆ, ಕೊಪ್ಪ, ಹಾರೊಗೊಳಿಗೆ, ಕಡಿದಾಳ್, ಮೇಘರವಳ್ಳಿ, ಆಗುಂಬೆ ಈ ಎಲ್ಲಾ ಕಡೆಗಳಿಗೆ ಹೋಗುವ ದಾರಿಗಳು, ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಹಾದಿಗಳು ಸುಮಾರಾಗಿ ನನ್ನ ಬುದ್ಧಿಯಲ್ಲಿ ಮುದ್ರಿತವಾಗಿತ್ತು. ಈ ಇಲ್ಲಾ ದಾರಿಗಳ ನಕಾಶೆಗೆ ಹಾರೊಗೊಳಿಗೆಯೆ ಕೇಂದ್ರಬಿಂದು. ಆದರೆ ಇವತ್ತು ಹೋಗಬೇಕಾದ ಕವಲೆದುರ್ಗ ಇವೆಲ್ಲವುಗಳಿಂದ ದೂರದಲ್ಲಿದ್ದುದರಿಂದ, ಬೆಳಿಗ್ಗೆ ಸಂದೇಶ್ ಅವರ ಬಳಿ ಅಲ್ಲಿಗೆ ಹೋಗುವ ದಾರಿಯನ್ನು ಕೇಳಿಕೊಂಡೆ. ಇವತ್ತು ನನ್ನ ಪ್ರವಾಸದ ಕೊನೆಯ ದಿನವಾದ್ದರಿಂದ ಮನಸ್ಸು ಭಾವುಕತೆಯಲ್ಲಿ ನೆಂದು ಹೃದಯಭಾರವನ್ನು ಹೆಚ್ಚಿಸಿತ್ತು.  ಹಳ್ಳಿಯ ಮುಂಜಾನೆಯ ಸಂಭ್ರಮ, ಅಲ್ಲಿಯ ತಿಂಡಿ, ಕಾಫಿ, ಮಂಜುಕವಿದ ಗದ್ದೆ, ತೋಟ, ದಾರಿಗಳು,  ಎಲ್ಲವೂ ಇಂದು ಹೆಚ್ಚಿನ ಸಂತಸ ತಂದಿತ್ತು. "ಮಾರೆನೆಯ ದಿನದ ಸೂರ್ಯೋದಯ, ಬೆಳಗಿನ ತಿಂಡಿ, ಕಾಫಿಗಳೆಲ್ಲಾ ಭಾರತ ದೇಶದ ಸಿಲಿಕಾನ್ ಕಣಿವೆಯಯಾದ ಬೆಂಗಳೂರಿನಲ್ಲಲ್ಲವೇ" ಎಂದು ನೆನದು ಮನಸ್ಸಿನಲ್ಲೀ ಏನೋ ಹೇಳಲಾಗದ ತಳಮಳ; ಹಸಿರನ್ನೆಲ್ಲಾ ಬಿಟ್ಟು ಗಿಜಿಗುಡುವ ನಗರಕ್ಕೆ ಮತ್ತೆ ಮರಳುವ ಬೇಸರವಿಲ್ಲದ ಬೇಸರ. ಬೈಕಿನಲ್ಲಿ ಕವಲೆದುರ್ಗದ ದಾರಿಹಿಡಿದು ಹೋಗುವಾಗ ಅನುಭವಿಸುತ್ತಿದ್ದ  ಶುಭ್ರಗಾಳಿ, ನನಗೆ ಮಲೆಯನಾಡು ವಿದಾಯಸೂಚಿಸಿದಂತೆ ತೋರುತ್ತಿತ್ತು. ಬೆಟ್ಟ, ಹಕ್ಕಿ, ಕೆರೆ, ಜನಗಳ ಮಾತು, ಮನೆಗಳ ವಿನ್ಯಾಸ, ಎಲ್ಲವನ್ನೂ ಮನಸ್ಸು ಎಂದಿಗಿಂತಲೂ ಹತ್ತಿರವಾಗಿ ಸಂವೀಕ್ಷಿಸುತ್ತಿತ್ತು. ಅವುಗಳ ಸೌಂದರ್ಯವನ್ನು, ಸರಳತೆಯನ್ನು ಆಪ್ತತೆಯಿಂದ, ಆದರದಿಂದ ಮನಸ್ಸು ತನ್ನೊಳಗೆ ತುಂಬಿಸಿಕೊಂಡಿತ್ತು. ಎದೆಯು ಭಾವುಕವಾಗಿ ಉಬ್ಬಿಹೋಗಿತ್ತು. 

    ಕವಲೆದುರ್ಗಕ್ಕೆ ಬಂದಾಗ ಅಲ್ಲಿ ಮತ್ತೆ ನನಗೆ ಎಕಾಂತವು ಸ್ವಾಗತನೀಡಿತು. ಬೈಕನ್ನು ಬೆಟ್ಟದ ಕೆಳಗೆ ನಿಲ್ಲಿಸಿ ಗದ್ದೆಯನ್ನು ದಾಟಿ ಬೆಟ್ಟ ಹತ್ತಲು ಶುರು ಮಾಡಿದೆ. ಈ ದಟ್ಟ ಅರಣ್ಯಗಳ ಮಧ್ಯೆ, ಈ ಕಡಿದಾದ ಬೆಟ್ಟದಲ್ಲಿ ಈ ಕೋಟೆಯನ್ನು, ಕಲ್ಲಿನ ಮೇಟ್ಟಿಲುಗಳನ್ನು ಹೇಗಪ್ಪಾ ಕಟ್ಟಿದರು ?, ಬೆಟ್ಟದ ತುದಿಗೆ ನೀರು, ಅಹಾರ ಧಾನ್ಯಗಳು, ಮತ್ತಿತರ ಗೃಹಬಳಕೆ ಸಾಮಾಗ್ರಿಗಳನ್ನು ಹೇಗೆ ಸಾಗಿಸುತ್ತಿದ್ದರು? ಕಾಡಿನ ಪ್ರಾಣಿಗಳಿಂದ, ಶತ್ರು ಸೈನ್ಯಗಳಿಂದ ಹೇಗೆ ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದರು? ಹೀಗೆ ಹಲವಾರು ಅಚ್ಚರಿಗಳು ನನ್ನ ಮನಸ್ಸನ್ನು ಸುತ್ತುತ್ತಿದ್ದವು. ಕೋಟೆಯ ೩ ಬಾಗಿಲನ್ನು ದಾಟಿ ತುದಿಯ ದೇವಸ್ಥಾನಕ್ಕೆ ಬಂದೆ. ದೇವಸ್ಥಾನ ಬಾಗಿಲಾಕಿತ್ತು. ನಾನು ಹೊರಬಂದು ಪ್ರಾಂಗಣದ ಗೇಡೆಯ ಮೇಲೆ ನೆರಳಿನಲ್ಲಿ ಕುಳಿತೆ.  ಎಕಾಂತವು ಮತ್ತಷ್ಟು ಆಳವಾಗಿ ವಾತಾವರಣದಲ್ಲಿ ಮಿಶ್ರಣಗೊಂಡಿತ್ತು. ಕೆತ್ತನೆಗಳನ್ನು ಹೊತ್ತು ನಿಂತಿದ್ದ ಗುಡಿಯ ಬಾಗಿಲುಗಳು, ಪಾಚಿಯಿಂದ ಕಪ್ಪಿಡಿದ ಕಲ್ಲಿನ ಗೋಡೆಗಳು, ಪ್ರಾಂಗಣದಲ್ಲಿ ನಿಂತಿದ್ದ ಬೃಹತ್  ಗರುಡಗಂಬದ್ವಯಗಳು, ಎದುರಿನ ಹೆಬ್ಬಂಡೆಯ ತುದಿಯಲ್ಲಿ ಪ್ರಾಙ್ಮುಖವಾಗಿ ನಿಂತಿದ್ದ ಸಣ್ಣ ಗುಡಿ, ದೂರದಲ್ಲಿ ಅರಮನೆಯ ಅವಶೇಷಗಳು ಎಲ್ಲವೂ ಗತಕಾಲದ ಪುರಾತನ ಚರಿತ್ರೆಯನ್ನು ಮನಷ್ಯಪ್ರ್‍ಆಣಿಯ(ನನ್ನ) ನೂತನ ಬುದ್ಧಿಗ್ರಾಹ್ಯಕ್ಕೆ ಪ್ರತಿಬಿಂಬಿಸಲೆತ್ನಿಸುತ್ತಿದ್ದವು. ಅಲ್ಲೇ ಪಕ್ಕದಲ್ಲಿದ್ದ ಬಂಡೆಯನ್ನು ಹತ್ತಿ, ಮರದ ಕೆಳಗೆ ಕುಳಿತು ಸುಂದರ ವಾತಾವರಣವನ್ನು ಕಣ್ಣು ಮುಚ್ಚಿ ಅನುಭವಿಸತೊಡಗಿದೆ. ಹೀಗೆ ಸುಮಾರು ೧೫ ನಿಮಿಷಗಳು ಕಳೆಯಿತು. ಎದುರಿಗಿದ್ದ ವಿಶಾಲ ಮಲೆಗಳ ಅಲೆಗಳು, ಆಗಸದ ಶುಭ್ರ ನೀಲಿ, ಭವ್ಯ ಅರಣ್ಯ ವೈಭವವೆಲ್ಲವೂ ಒಳಮನಸ್ಸನ್ನು ಹೊಕ್ಕಿ "ಈ ಸುಂದರ ರಸನಿಮಿಷಗಳನ್ನು ಅನುಭವಿಸುತ್ತಿರುವ ನೀನೇ ಅದೃಷ್ಟವಂತ. ಬೇರಾವ ಗ್ರಹಗಳಲ್ಲೂ ಇಂತಹ ಅನುಭವ ನಿನಗೆ ಕಾಣಸಿಗುವುದಿಲ್ಲ" ಎಂದು ಪಿಸುನುಡಿದಂತಾಯಿತು. ಕುವೆಂಪುರವರು ಈ ಸುಂದರ ತಾಣದ ಮೇಲೆ ಏಕೆ ಯಾವ ಕವನವನ್ನೂ ಬರೆದಿಲ್ಲಾ ? ಎಂದು ಚಿಂತಿಸುತ್ತಿದ್ದೆ. ನೆನಪಿನ ದೋಣಿಯಲ್ಲಿ ಕವಲೆದುರ್ಗದ ಉಲ್ಲೇಖವಿದ್ದರೂ, ಎಲ್ಲೂ ಇದರ ಕಾವ್ಯಮಯ ನಿರೂಪಣೆಯಾಗಲೀ, ಕವನವಾಗಲಿ ಇರುವುದು ನನ್ನ ಗಮನಕ್ಕೆ ಇದುವರೆಗೂ ಬಂದಿರಲಿಲ್ಲ. ನಂತರ ಅಲ್ಲಿಂದ ನನಗೆ ಬೇಕೆಂದ ಕಡೆಯಲ್ಲೆಲ್ಲಾ ಹೋಗಿ ಫೋಟೊಗಳನ್ನು ಕ್ಲಿಕ್ಕಿಸಿ, ಬೆಟ್ಟದಿಂದ ಕೆಳಗಿಳಿದು ಬಂದೆ. ಅಷ್ಟರಲ್ಲಲ್ಲೇ ಮಧ್ಯಾಹ್ನವಾಗಿತ್ತು. ಹೊಟ್ಟೆ ಹಸಿದು ಕರೆಗಂಟೆ ಒತ್ತಿತ್ತು. ಬೆಟ್ಟದ ಬುಡವನ್ನು ಬಿಟ್ಟು ಸುಮಾರು ದೂರ ಬಂದ ಮೇಲೆ, ಒಂದು ಚಿಕ್ಕ ಹೋಟೆಲ್ಲಿನಲ್ಲಿ ಊಟವನ್ನೂ ಮುಗಿಸಿಬಿಟ್ಟೆ. ತುಂಬಿದ ಹೊಟ್ಟೆ, ತಂಪಾದ ಗಾಳಿ, ಆಲಸ್ಯವನ್ನು ದೇಹಕ್ಕೂ, ನಿದ್ದೆಯನ್ನು ಕಣ್ಣಿಗೂ ತೀಡುತ್ತಿತ್ತು. ಆದರೆ ಮಲಗುವುದೆಲ್ಲಿ, ಇನ್ನು ನನ್ನ ದ್ವಿಚಕ್ರರಥವನ್ನು ಕುಂದಾದ್ರಿಯ ಕಡೆಗೆ ಬೇರೆ ತೆಗೆದುಕೊಂಡು ಹೋಗಬೇಕಿತ್ತು. ಏನು ಹೊಳೆಯದೆ ಹಾಗೆ ಕುಂದಾದ್ರಿಯ ಕಡೆಗೆ ಗಾಡಿ ಓಡಿಸತೊಡಗಿದೆ. 

    ಗಾಡಿ ಓಡಿಸಿದೆನಾದರೂ, "ಇಷ್ಟು ಬೇಗ ಕುಂದಾದ್ರಿಗೆ ತಲುಪಿ ಅಲ್ಲಿ ಮಾಡುವುದಾದರೂ ಏನು?" ಎಂದು ಯೋಚಿಸತೊಡಗಿದೆ. ಬೇರೆ ಎಲ್ಲಿಗೆ ಹೋಗಬಹುದು ಎಂದೂ ಲೆಕ್ಕ ಹಾಕಿ ನೋಡಿದೆ. ಯಾವುದೇ ದಾರಿ ತೋಚಲಿಲ್ಲ. ಕೊನೆಗೆ ಮತ್ತೆ ನನ್ನ ಸಹಾಯಕ್ಕೆ ಬಂದಿದ್ದು ಜೊತೆಯಲ್ಲೇ ತಂದಿದ್ದ ಮಲೆಗಳಲ್ಲಿ ಮದುಮಗಳು ಕಾದಂಬರಿ. ಆದರೆ ಓದುವುದೆಲ್ಲಿ? ಅಗೋ ಇಲ್ಲಿ, ಎಂದು ಕಣ್ಣುಗಳು ಬುದ್ದಿಗೆ ಸಂಜ್ಞೆ ಕೊಟ್ಟಿತು.!!! ಸುತ್ತಲೂ ದೊಡ್ಡ ದೊಡ್ಡ ಮರಗಳಿದ್ದು, ಮನೆಮಠಗಳಿಲ್ಲದ ದಾರಿಯಲ್ಲಿ, ಯಾವ ಜನಗುಂಗಳಿಯೂ ಇಲ್ಲದೆ, ಏಕಾಂತವನ್ನೇ ಹೊದ್ದು ಮಲಗಿದ್ದ ಬಸ್‍ನಿಲ್ದಾಣ, ನನ್ನನ್ನು ದೂರದಿಂದಲೇ ಆಕರ್ಶಿಸಿತ್ತು. ಕೆಂಪು ಗೋಡೆ, ಕೆಂಪು ಬೆಂಚು, ಬಿಳಿಯ ಶೀಟ್ ಹೆಂಚು, ಒಂದು ಸಣ್ಣ ಕಿಟಕಿ, ದನಕರುಗಳು ಒಳಗೆ ನುಗ್ಗದಂತೆ ಬಾಗಿಲಲ್ಲೇ ಇರಿಸಿದ್ದ ಎರೆಡು ಕಲ್ಲಿನ ಸಣ್ಣ ಕಂಬಗಳು, ಇವೇ ಅಲ್ಲಿದ್ದ ಬಸ್ ನಿಲ್ದಾಣದ ಅಂಗೋಂಪಾಂಗಗಳು. ಬೆಂಚಿನ ಮೇಲೆ ಮಲಗಿ, ಬ್ಯಾಗನ್ನೇ ತಲೆದಿಂಬನ್ನಾಗಿರಿಸಿ, ಪುಸ್ತಕವನ್ನು ಎದೆಯ ಮೇಲಿರಿಸಿ ಓದತೊಡಗಿದೆ. ಪದಗಳು, ಸಾಲಾಗಿ, ಸಾಲುಗಳು ಪಂಕ್ತಿಗಳಾಗಿ, ಪಂಕ್ತಿಗಳು ಕಥೆಯಾಗತೊಡಗಿದವು. ಓದುತ್ತಾ ಓದುತ್ತಾ ಒಂದು, ಎರೆಡು, ಮೂರು , ನಾಲ್ಕು ಪುಟಗಳಾದವು. ಸುಬ್ಬಣ್ಣ ಗೌಡರು, ನಾಯಿಗುತ್ತಿ, ಕಾವೇರಿ, ಕೀಲಿಸ್ತರ ಫಾದರ್, ಮಂಜಣ್ಣಗೌಡ, ಇನ್ನೂ ಅನೇಕ ಪಾತ್ರವರ್ಗಗಳು  ನಿಧಾನವಾಗಿ ನನ್ನ ಮನೋಕ್ಷೇತ್ರದೊಳಗೆ ಬರತೊಡಗಿದರು. ಅವರ ಮಾತುಗಳಿಗೆ, ಭಾವಗಳಿಗೆ, ವಿಚಾರ ವಿನಿಮಯಗಳಿಗೆ ನನ್ನ ಪ್ರಜ್ಞೆಯು ಪ್ರತಿಸ್ಪಂದಿಸತೊಡಗಿತು. ಬಸ್‍ನಿಲ್ದಾಣದ ಸುತ್ತಲೂ ಇದ್ದ ಮರಗಿಡಗಳ ಮರ್ಮರ ಶಬ್ಧ, ಅವುಗಳಿಂದ ಬೀಸುತ್ತಿದ್ದ ತಂಗಾಳಿ, ಎಲ್ಲಿಂದಲೋ ಹಾರಿಬರುತ್ತಿದ್ದ ಹಕ್ಕಿಗಳ ಚಿಲಿಪಿಲಿ ಸದ್ದುಗಳು, ದೂರದ ಮರಗಳಲ್ಲಿ ಜೀಗುಡುತಿದ್ದ ಜೀರುಂಡೆಗಳ ಶಬ್ಧ, ಕಾದಂಬರಿಯ ಕಥೆಯಲ್ಲಿ ವರ್ಣಿಸಿದ್ದ ಸಮೃದ್ದ ಮಲೆನಾಡ ನಿಸರ್ಗವನ್ನೇ, ನನ್ನ ಸುತ್ತಲೂ ಸೂಕ್ಷ್ಮವಾಗಿ ಪ್ರತಿಸೃಷ್ಟಿಸಿತ್ತು. ಇಡೀ ಕಥೆಯೆ ನನ್ನೊಳಗೋ, ಅಥವಾ ನಾನೇ ಕಥೆಯ ಕಾಲದೊಳೊಗೋ ಹೊಕ್ಕಿರುವಂತೆ ಕಾದಂಬರಿಯ ಗುರುತ್ವ, ನನ್ನ ಮನೋಭೂಮಿಯನ್ನು ತನ್ನತ್ತ ಸೆಳೆದು ಹಿಡಿದಿತ್ತು. ನನ್ನ ಪೂರ್ವಜ್ಞಾನವೆಲ್ಲಾ ಆವಿಯಾಗಿ ಕಾದಂಬರಿಯ ಯುಗದಲ್ಲಿ ಪುನರ್ಜನ್ಮ ಪಡೆದಿದ್ದೆ. ಎರೆಡು ಎರೆಡೂವರೆ ಗಂಟೆಯ ಅವಧಿ, ಹೇಗೆ ಕಳೆಯಿತೆಂಬುದೇ ತಿಳಿದಿರಲಿಲ್ಲ. ಓದುತ್ತಾ ಮಲಗಿದ್ದವನು ಎದ್ದು ಮತ್ತೆ ವಾಸ್ತವ ಪ್ರಪಂಚಕ್ಕೆ ಪ್ರವೇಶಪಡೆಯಬೇಕಾದರೆ ಸುಮಾರು ಕ್ಷಣಗಳೇ ಹಿಡಿದವು. ದೂರದಿಂದ ಯಾವುದೋ ಊರಿನಿಂದ ಬಂದು, ಪರಸ್ಥಳದಲ್ಲಿ ಕಾಡಿನ ಮಧ್ಯದಲ್ಲಿರುವ ದಾರಿಯಲ್ಲಿ, ಅಗಣ್ಯ ಬಸ್ ನಿಲ್ದಾಣವೊಂದರಲ್ಲಿ ಮೈಮರೆತು ಓದುವ ಅನುಭವ, ಅನುಭವಿಸಿದಾಗಲೇ ತಿಳಿಯುವುದು. ಇಂತಹ ಒಂದು ವಿಶಿಷ್ಟಾನುಭವ ಪಡೆಯಲೆಂದೇ ನಾನು ಕಾದಂಬರಿಯನ್ನೂ ಜೊತೆಯಲ್ಲೇ ತಂದಿಂದ್ದು. ಅದರಲ್ಲೂ ಮಲೆಗಳಲ್ಲಿ ಮದುಮಗಳನ್ನು ಮಲೆನಾಡಿನಲ್ಲೇ ಓದುವ ಪೂರ್ವಯೋಜನೆಯ ಫಲವಾಗಿ. ಇಲ್ಲಿ ಮಾಡಿದ ಹಾಗೆ ನಾನು ಬೆಂಗಳೂರಿನ ಬಸ್ಟಾಂಡಿನಲ್ಲಿ ಮೈಮರೆತು ಮಲಗಿ ಓದಿದರೆ, ನೋಡಿದವರು ಹುಚ್ಚ ಎಂದುಕೊಂಡಾರು ಅಥವ ಪೋಲಿಸ್ ಬಂದು ಒದ್ದು ಓಡಿಸುವನು. ಅಷ್ಟರಲ್ಲಾಗಲೇ ಸುಮಾರು ನಾಲ್ಕು ಗಂಟೆಯಾದ್ದರಿಂದ, ಕುಂದಾದ್ರಿಗೆ ಹೊರಡಲು ಸೂಕ್ತ ಸಮಯವಾಗಿತ್ತು. ಗಾಡಿ ಹತ್ತಿ ಮತ್ತೆ ಆಗುಂಬೆಯ ದಾರಿ ಹಿಡಿದು, ಮೇಘರವಳ್ಳಿಯನ್ನು ದಾಟಿ ಕುಂದಾದ್ರಿಗೆ ಬಂದು ಸೇರಿದೆ. ತಲೆಯಲ್ಲೀ ಇನ್ನೂ ಕಾದಂಬರಿಯ ಸನ್ನಿವೇಶಗಳು, ವಿನೋದ, ವಿಚಾರಗಳು ಹಾದುಹೋಗುತ್ತಲೇ ಇದ್ದುವು. 

        ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ತುದಿಗೆ ಬಂದು ನಿಂತೆ. ಬೆಟ್ಟದ ಮೇಲಿನ ಗುಡಿಯುಳಗಿರುವ ಮಹಾವೀರನ ದರ್ಶನವನ್ನು ಪಡೆದೆ. ಚಾವುಂಡರಾಯ ಪುರಾಣ, ಹಾಗು ಪಂಪನ ಆದಿಪುರಾಣ ಕಾವ್ಯಗಳು ಜ್ಞಾಪಕಕ್ಕೆ ಬಂದವು. ಅದನ್ನೆಲ್ಲಾ ಯಾವಾಗ ಓದುವುದೋ? ಎಂದು ಮನಸ್ಸಿನಲ್ಲೇ ವಿಚಾರ ಮಾಡತೊಡಗಿದೆ. ಆ ಮಹಾಕಾವ್ಯದ ಓದಿಗೆ ಸಹಾಯವಾಗಬಹುದೆಂದು ಗುಡಿಯ ಸ್ವಾಮಿಗಳೊಡನೆ,  ಜೈನರ ಬಗ್ಗೆ, ಮಹಾವೀರನ ಬಗ್ಗೆ, ಗೊಮ್ಮಟೇಶ್ವರನ ಬಗ್ಗೆ ಸ್ವಲ್ಪಹೊತ್ತು ಚರ್ಚೆಯೂ ನಡೆಸಿದೆ. ಅಷ್ಟರಲ್ಲಿ ಸೂರ್ಯಾಸ್ತದ ಸಮಯವಾದ್ದರಿಂದ, ಗುಡಿಯಿಂದ ಹೊರಬಂದು ಶಿಖರದ ತುದಿಗೆ ನಿಂತು ಸೂರ್ಯಾಸ್ತದ ಹಲವು ಫೋಟೋಗಳನ್ನು ತೆಗೆದೆ. ದೃಷ್ಟಿಸಮಸ್ತವೂ ಆರಕ್ತವಾಗಿತ್ತು. ಇಲ್ಲಿ ಕಾಣುವ ದೃಶ್ಯವನ್ನು ನೋಡಿಯೇ ಅನುಭವಿಸಬೇಕು, ವರ್ಣಿಸಲಸಾಧ್ಯ. ಶಿಖರ ತುದಿಗೆ ( ಎಚ್ಚರವಾಗಿ) ಬಂದು ನಿಂತಾಗ, ಬೆಟ್ಟದ ಮೇಲೆ ಬೀಸಿ ತಳ್ಳುವ ಗಾಳಿ, ಕೆಳಗೆಲ್ಲೂ ದೂರದಲ್ಲಿ ಬಯಲಿನಲ್ಲೆಲ್ಲೋ ಮೇಯುತ್ತಿದ್ದ ದನ, ಬೆಟ್ಟದ ಔನ್ನತ್ಯವನ್ನು ನೋಡುಗನಿಗೆ ಹೇಳುತ್ತಿತ್ತು. ಎದುರಿಗೆ ಕಾಣುವ ಚಿಕ್ಕ ಹಳ್ಳಿ, ದಟ್ಟ ಕಾಡು, ತಿರುವುಗಳ ರಸ್ತೆ, ಗುಡಿಯ ಗೋಪುರ, ವಿಶಾಲ ಆಗಸ, ವರ್ಣವೈವಿದ್ಯಮಯ ಮೋಡಗಳ ಸಮೂಹ, ನೀಲಿ ಪರ್ವತ ಶ್ರೇಣಿ, ಮುಳುಗುತ್ತಿದ್ದ ಸೂರ್ಯ, ಕರಗುತ್ತಿದ್ದ ಹೊಂಬೆಳಕು, ಉದಯಿಸುತ್ತಿದ್ದ ಚಂದ್ರ ಎಲ್ಲವೂ ಒಟ್ಟಿಗೆ ನಮ್ಮ ಪುಟ್ಟ ಕಣ್ಣುಗಳನ್ನು ಹೊಕ್ಕಿ, ಬುದ್ದಿಯ ಭಾವ ಕೇಂದ್ರದಲ್ಲಿ ಸಣ್ಣ ಕಂಪನವನ್ನು ಸೃಷ್ಟಿಸಿತ್ತು. ಇಂತಹ ಅಮೂಲ್ಯ ಕಂಪನವೊಂದಕ್ಕೆ ಭಾವೋದ್ವೇಗವು ಸ್ಫುರಿಸಿ, ಎದೆಯಲ್ಲಿ ರಸಾನಂದವನ್ನು ತರುವುದೇ ಇರುವುದಿಲ್ಲ. ಇಂತಹ ರಸಾನಂದದಭೂತಿಯಾದ ಕವಿ ಕಾವ್ಯವೊಂದನ್ನು ಬರೆಯದೆ ಇರುವುದಿಲ್ಲ. ಆ ಕ್ಷಣಕ್ಕೆ ನನಗೆ ಕುವೆಂಪುವಿನ "ಬಾ ಫಾಲ್ಘುಣ ರವಿ ದರ್ಶನಕೆ" ಕವನ ಮತ್ತೆ ಜ್ಞಾಪಕಕ್ಕೆ ಬಂದು, ಈ ಸಾಲುಗಳು ಮರಳಿ ಮರಳಿ ಕಿವಿಯೊಳಗೆ ಅನುರಣಿಸುತ್ತಲೇ ಇತ್ತು....

   ....... ......

       ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು;

       ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು;

       ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‍ನೀರ್ ನೀಡುವನು;

       ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು.... ....

ನಾನು ಭಾವಪರವಶವನಾಗಿ ಕೆಲ ಕಾಲ ಅಲ್ಲೇ ನಿಂತಿದ್ದೆ. ಈ ಸೃಷ್ಟಿಸೌಂದರ್ಯವನ್ನು ನೋಡುತ್ತಿದ್ದ ನನ್ನ ಬುದ್ಧಿಯಲ್ಲಿ ಎಂದಿನಂತೆ ಅನೇಕ ಕುತೂಹಲ ವಿಚಾರಗಳು ಮೂಡುತ್ತಿದ್ದವು. ನಾವಿರುವ ಮನೆಗಳು, ಸಮಾಜ, ವ್ಯವಹಾರ, ಸಂಸ್ಕೃತಿ ಎಲ್ಲವೂ ಈ ಸೃಷ್ಟಿಬೀಷಣದ ಮುಂದೆ ಅಗಣ್ಯ ಅಪ್ರಧಾನವಲ್ಲವೇ? ಇಲ್ಲಿ ಈ ಶಿಖರ ಶೃಂಗದಲ್ಲಿ ಅಗಣಿತ ಋಷಿಗಳು, ಯೋಗಿಗಳು, ಕವಿಗಳು, ವಿಜ್ಞಾನಿಗಳು, ತತ್ವಜ್ಞಾನಿಗಳು ಇಂತಹದೇ ಅತ್ಯಮೋಘ ಅಗಣಿತ ಸೂರ್ಯಾಸ್ತಗಳನ್ನು ನೋಡಿ, ತಮ್ಮ ಕುತೂಹಲ, ಆಸಕ್ತಿ, ಜ್ಞಾನಕ್ಕಣುಗುಣವಾಗಿ ಎಷ್ಟೋ ವಿಚಾರಗಳನ್ನು, ವಿಭಿನ್ನ ವಿಚಿತ್ರ ದಿಕ್ಕುಗಳಲ್ಲಿ ಚಿಂತಿಸಿರಬಹುದಲ್ಲವೇ? ಇತರ ಪಕ್ಷಿ, ಪ್ರಾಣಿ ಸಂಕುಲಗಳೂ ನಮ್ಮಂತೆಯೇ ಈ ಮನೋಹರ ದೃಶ್ಯಕಾವ್ಯಕ್ಕೆ ರೋಮಾಂಚಿತಗೊಳ್ಳಬಹುದೆ? ಹೀಗೆ ಇನ್ನೂ ಅನೇಕ ವಿಚಾರಗಳನ್ನು ಯೋಚಿಸುತ್ತಿದ್ದೆ. ಸುತ್ತಲೂ ಕತ್ತಲು ನಿಧಾನವಾಗಿ ಇಳಿಯತೊಡಗಿತು. ಕತ್ತಲಾಗುತ್ತಿದ್ದರಿಂದ ಮನೆಗೆ ಹಿಂದಿರುಗಲು ನಾನು ಬೆಟ್ಟದಿಂದ ಕೆಳಗೆ ಇಳಿಯತೊಡಗಿದೆ. ಅಲ್ಲಿಗೆ ನನ್ನ ಕುಪ್ಪಳ್ಳಿಯ ಐದು ದಿನಗಳ ಪ್ರವಾಸ ಮುಕ್ತಾಯಹಂತಕ್ಕೆ ಬಂದಿತ್ತು. ಮತ್ತೆ ನಗರ ಜೀವನಕ್ಕೆ ಹೊಂದಿಕೊಳ್ಳಲ್ಲು ಬುದ್ಧಿಯ ಸಶಸ್ತ್ರ ಪಡೆ ನನ್ನ ತನು,ಮನಗಳನ್ನೆಲ್ಲಾ ಎಚ್ಚರಿಸತೊಡಗಿದವು. ಅಲ್ಲಿಂದ ಬಿಟ್ಟು ನೇರ ಸಂದೇಶ್ ಮನಗೆ ಬಂದಾಗ ಸಂಜೆ ಏಳಾಗಿತ್ತು. ನನ್ನ ಬಸ್ ರಾತ್ರಿ ೯:೩೦ಗೆ ತೀರ್ಥಹಳ್ಳಿಯಿಂದ. ಊಟ ಮಾಡಿ ಸಮಯಕ್ಕೆ ಸರಿಯಾಗಿ ಸಂದೇಶ್ ನನ್ನನ್ನು ಬಸ್ಟಾಂಡಿಗೆ ತಂದು ಬಿಟ್ಟರು. ಎಲ್ಲ ನೆನಪುಗಳನ್ನು ನಾನು ನನ್ನ ಹೃದಯದಲ್ಲಿ ಗಂಟು ಕಟ್ಟಿ ಇಟ್ಟುಕೊಂಡು, ಬೆಂಗಳೂರಿಗೆ ಬಸ್ ಹತ್ತಿದೆ. ನಾನು ಇದ್ದಷ್ಟು ದಿನವು ಮನೆಯವರಿಗಿಂತ ಹೆಚ್ಚಾಗಿ ನನ್ನ ನೋಡಿಕೊಂಡ ಸಂದೇಶ್ ಅವರಿಗೆ ನನ್ನ ಕೃತಜ್ಞೆತೆಯನ್ನೂ ಎಷ್ಟು ಸಲ್ಲಿಸಿದರೂ ಸಾಲದು. ನಾನು ಹೋಟೆಲ್ ನಲ್ಲೋ, ಅಥವಾ ಇನ್ನಾವುದಾದರೂ ಹೋಮ್‍ಸ್ಟೇನಲ್ಲೋ ಉಳಿದುಕೊಂಡಿದ್ದರೆ, ಈ ಮಲೆನಾಡಿನ ಅನುಭವ ಇಷ್ಟೊಂದು ಸಹಜವಾಗುತ್ತಿರಲಿಲ್ಲ; ಇಷ್ಟು ನಿರುಪಾಧಿಕವಾಗಿರುತ್ತಿರಲಿಲ್ಲ. ಬದಲಾಗಿ ಪ್ರವಾಸತಾಣಕ್ಕೆ ಬಂದ ಅತಿಥಿಯಂತೆ ಕೃತಕ ರೂಪವನ್ನು ಪಡೆಯಬಹುದಾಗಿತ್ತು. ಇಲ್ಲಿನ ಜನಜೀವನ, ವ್ಯವಸಾಯ, ವ್ಯವಹಾರಗಳನ್ನು ಅನುಭವಿಸಲತ್ನಿಸುತ್ತಿದ್ದ ನನ್ನ ಪ್ರಯತ್ನ ಕೃತಕೃತ್ಯವಾಗುತ್ತಿರಲಿಲ್ಲ.  

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸುಂದರ ಭಾವಯಾನ! ಅಭಿನಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.